Quantcast

ಆಗಲೇ ಎಂಟ್ರಿ ಕೊಟ್ಟಿದು, ನಮ್ಮ ಹೀರೋ..

ಸಂಗೀತಗಾರರ ಮಕ್ಕಳೆಲ್ಲಾ ಸಂಗೀತಗಾರರಾಗೋದಿಲ್ಲ ಅಥವಾ ಪೊಲೀಸ್ ನವರ ಮಕ್ಕಳೆಲ್ಲಾ ಪೊಲೀಸ್ ಆಗೋದಿಲ್ಲ. ನಾನು ಸಂಗೀತ ವಾತಾವರಣದಲ್ಲಿ ಹುಟ್ಟಿಬೆಳೆದವಳು, ನನ್ನ ಜೀವ, ಉಸಿರು ಸಂಗೀತ. ನನ್ನ ತಂದೆ ಸಂಗೀತಗಾರ, ನನ್ನ ಅಜ್ಜಿ ಕಮಲಮ್ಮ, ಸಂಗೀತಗಾರ್ತಿ, ನನ್ನ ಮುತ್ತಜ್ಜ ಚಿಕ್ಕರಾಮರಾಯರು ಸಂಗೀತಗಾರ, ಅವರ ತಂದೆ ಪೊಲೀಸು. ಬಹುಷಃ ಚಿಕ್ಕರಾಮರಾಯರಿಗೆ ಅವರ ತಾಯಿ ಕಡೆಯಿಂದ ಸಂಗೀತ ಬಂದಿರಬೇಕು.

mysore-anantaswamy-column-sunitha-anantaswamy1ಚಿಕ್ಕರಾಮರಾಯರು ೫ ವರುಷದ ಬಾಲಕನಾಗಿದ್ದಾಗ ಅವರ ತಾಯಿ ಮಡಿಲಲ್ಲಿ ಕೂತು ಅರಮನೆ ಹೆಬ್ಬಾಗಿಲಲ್ಲಿರುವ ಆಂಜನೇಯನ ಗುಡಿಯ ಮುಂದೆ ಹಾಡುವವರಂತೆ.

ಇದನ್ನು ಕಂಡ  ನಾಲ್ವಡಿ ಕೃಷ್ಣರಾಜ ವೊಡೆಯರ್ ಇವರನ್ನು ೫ ವರುಷದ ಬಾಲಕನಾಗಿದ್ದಾಗಲೇ ಅರಮನೆಗೆ ಕರೆತಂದು ಹಾಡಿಸುತ್ತಿದ್ದರಂತೆ. ಚಿಕ್ಕರಾಮರಾಯರು ಒಬ್ಬ ಅದ್ಭುತ ಸಂಗೀತಗಾರರಷ್ಟೇ ಅಲ್ಲ, ಒಳ್ಳೆ ನಾಟಕಕಾರರೂ ಕೂಡ ಆಗಿದ್ದರು.

ಶಾಕುಂತಲೆ ನಾಟಕದಲ್ಲಿ, ದುಷ್ಯಂತನ ಪಾತ್ರ ಅದ್ಭುತವಾಗಿ ನಟಿಸುತ್ತಿದ್ದರಂತೆ. ಮೈಸೂರು ಜಗನ್ಮೋಹನ್ ಪ್ಯಾಲೇಸ್ ನಲ್ಲಿ ನಡೆಯುತ್ತಿದ್ದ ರಾತ್ರಿ ೯.೩೦ ಶೋ ಗೆ ಮಹಾರಾಜರು ಬಂದು ನೋಡುತ್ತಿದ್ದರಂತೆ.

ನಾಟಕದ ಓಪನಿಂಗ್ ಸೀನ್ ನಲ್ಲಿ ದುಷ್ಯಂತ ಜಿಂಕೆಯನ್ನು ಅಟ್ಟಿಸಿಕೊಂಡು ಬರುವ ದೃಶ್ಯ ; ಕೆಲವೊಮ್ಮೆ ಈ ದೃಶ್ಯದಿಂದ ನಾಟಕ ಮುಂದೆ ಹೋಗುತ್ತಲೇ ಇರಲಿಲ್ಲವಂತೆ. ಯಾಕೆಂದರೆ, ಚಿಕ್ಕರಾಮರಾಯರು ಆ ಹಾಡನ್ನು ಎಷ್ಟು ಚೆನ್ನಾಗಿ ಹಾಡುತ್ತಿದ್ದರೆಂದರೆ, ಮಹಾರಾಜರು ಅದನ್ನು ಮತ್ತೆ ಮತ್ತೆ ಹಾಡಿಸುತ್ತಿದ್ದರಂತೆ.

ಚಿಕ್ಕರಾಮರಾಯರ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಖ ಲಕ್ಷಣಗಳು ಭಿನ್ನವಾಗಿದ್ದರೂ, ಅವರ ಎತ್ತರ, ಮೈಕಟ್ಟು ತುಂಬಾ ಹೋಲುತ್ತಿತ್ತಂತೆ. ಇವರು ರಾಜ ದುಷ್ಯಂತನ ಪಾತ್ರವಹಿಸಿದಾಗ ಮಹಾರಾಜರನ್ನು ಬಹಳ ಹೋಲುತ್ತಿದ್ದರಂತೆ. ಆ ಕಾರಣಕ್ಕೆ ಮಹಾರಾಜರು ಅವರಿಗೆ, ‘ನೀನು ರಾತ್ರಿ ರಾಜ, ನಾನು ಹಗಲಿನ ರಾಜ’ ಎಂದು ಪರಿಹಾಸ ಮಾಡುತ್ತಿದ್ದರಂತೆ.

ಒಂದೇ ಹೋಲಿಕೆ ಇದ್ದ ಚಿಕ್ಕರಾಮ ರಾವ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ೪

ಒಂದೇ ಹೋಲಿಕೆ ಇದ್ದ ಚಿಕ್ಕರಾಮ ರಾವ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ೪

ತಾಳ ಬ್ರಹ್ಮ

ನಮ್ಮ ಮುತ್ತಾತ ಚಿಕ್ಕರಾಮರಾಯರ ಬಗ್ಗೆ ಇನ್ನೂ ಸ್ವಲ್ಪ ಹೇಳುವುದಿದೆ, ಹೇಳಲೇ ಬೇಕು, ಯಾಕೆಂದ್ರೆ  ನನ್ನಲ್ಲಿರುವ  ಸಂಗೀತದ  ವಂಶವಾಹಿಗೆ ಇವರೇ ಹುಟ್ಟುಹಾಕಿದವರು, “ದಿ ಮ್ಯಾನ್ ಹೂ ಸ್ಟಾರ್ಟೆಡ್ ಇಟ್ ಆಲ್”

ಮೊದಮೊದಲು, ಅಣ್ಣಂಗೆ  ನಾವೆಲ್ಲಾ  ಸಂಗೀತ  ಕ್ಷೇತ್ರಕ್ಕೆ ಬರೋದು ಇಷ್ಟ ಆಗ್ತಿರಲಿಲ್ಲ, ಡಾಕ್ಟ್ರೋ, ಎಂಜನೀಯರ್ ಗಳೋ  ಆಗಿ ಅಂತ ಹೇಳೋರು. ಆದ್ರೆ ನಮ್ಮ ಮುತ್ತಾತನ ‘genes’ , ಸದಾ ಸಂಗೀತದ ವಾತಾವರಣ, ಅಮ್ಮನಲ್ಲಿ ದ್ದ ಸಂಗೀತದ ಮೇಲಿನ ಅಪಾರ ಒಲವು, ಇವೆಲ್ಲಾ ಸೇರಿ ಸಂಗೀತ, ಅದರಲ್ಲೂ ಸುಗಮ ಸಂಗೀತ, ನಮಗೆ ಒಂದು ‘way of life’ ಆಗ್ಹೋಯ್ತು.

ಚಿಕ್ಕರಾಮರಾಯರು ಮೈಸೂರು ಶ್ರೀ ಕರಗಿರಿ ರಾವ್ ಅವರಲ್ಲಿ  ಸಂಗೀತಾಭ್ಯಾಸ ಮಾಡಿದರು. ಕನ್ನಡ ಹಾಗು ಸಂಸ್ಕೃತ ಭಾಷೆಗಳಲ್ಲಿ ಮತ್ತು ವೀಣೆ, ಜಲತರಂಗದಲ್ಲಿ ಪ್ರವೀಣರಾಗಿದ್ದರು. ಪಾಶ್ಚ್ಯಾತ ಸಂಗೀತವನ್ನೂ ಕೂಡ ಚೆನ್ನಾಗಿ ಅರಿತು ಕೊಂಡಿದ್ದರಂತೆ.

ಇಲ್ಲಿ, ನಮ್ಮ ಅಜ್ಜಿ ಕಮಲಮ್ಮ,  ಅವರ ತಂದೆಯ ಬಗ್ಗೆ ಮಳೆ ಬಂದಾಗಲೆಲ್ಲಾ ಹೇಳುತ್ತಿದ್ದ ಒಂದು ಘಟನೆ ಜ್ಞಾಪಕಕ್ಕೆ ಬರುತ್ತೆ. ಅವರು ಚಿಕ್ಕ ಹುಡುಗಿಯಾಗಿದ್ದಾಗ ಒಮ್ಮೆ ಜೋರಾಗಿ ಮಳೆ ಸುರೀತಿತ್ತಂತೆ. ಅಂಗಳದಲ್ಲಿ ಇದ್ದ ಚಾಪೆ ಮಳೆಯಲ್ಲಿ ನೆನೆಯುತ್ತಿತ್ತಂತೆ. ಅದನ್ನು ಕಂಡ ಚಿಕ್ಕರಾಮರಾಯರು,  “ಚಾಪೆ ಮಳೇಲಿ ನೆನಿತಾಯಿದೆ”  ಅಂತ ಹೇಳೋದರ ಬದಲಾಗಿ  ರಾಗವಾಗಿ ಹೀಗೆ ಹಾಡಕ್ಕೆ  ಶುರು ಮಾಡಿದ್ರಂತೆ:

“ಚಾಪೆ ನೆನಿಬೇಕ್ ಚಾಪೆ, ಚಾಪೆ ನೆನಿಬೇಕ್ ಚಾಪೆ”

ಅದರ ಸ್ವರ ಪ್ರಸ್ಥಾವನೆ ಹೀಗೆ:

svara

ಈ ಚಾಪೆ ಹಾಡನ್ನ ಕೇಳಿದಾಗೆಲ್ಲ ನಂಗೆ,  ಬಹುಶ ಚಿಕ್ಕರಾಮರಾಯರ  ತಲೆಯಲ್ಲಿ, ಯಾವುದೋ ಇಂಗ್ಲಿಷ್ ಟ್ಯೂನ್ ಓಡ್ತಿತ್ತೇನೋ ಅಂತ ಅನಿಸ್ತಿತ್ತು.  ಈ ಕಥೇನ ಅಜ್ಜಿ ಸುಮಾರು ಸಲ ಹೇಳೋರು. ಹೇಳೋವಾಗ್ಲೆಲ್ಲ ಜೋರಾಗಿ ನಗೋರು.  ನಮಗೆ ನಗೋಕ್ಕೆ ಆಸ್ಪದ ಕೊಡುತ್ತಿರಲಿಲ್ಲ, ನಾವು ನಕ್ಕಿದ್ರೂ ಅದನ್ನ ಅಷ್ಟು ಗಮನಿಸುತ್ತಿರಲಿಲ್ಲ. ಯಾಕೆಂದ್ರೆ ಅವರು ಅದನ್ನ ನಮಗೆ ಹೇಳೋದಿಕ್ಕಿಂತ ಹೆಚ್ಚಾಗಿ ಆ ಕ್ಷಣಗಳನ್ನು ಜ್ಞಾಪಿಸಿಕೊಳ್ತಾ ಇದ್ರು.

ಅರಮನೆಯಲ್ಲಿ ಇಬ್ಬರು ರಾಮರಾವ್ ಗಳಿದ್ದರಂತೆ. ಇಬ್ಬರಲ್ಲಿ ಇವರು ಸ್ವಲ್ಪ ಚಿಕ್ಕದಾಗಿದ್ದರಿಂದ ಇವರಿಗೆ ಚಿಕ್ಕರಾಮರಾಯರು ಅಂತ ಹೆಸರು ಬಂತಂತೆ. ನಾನು ಮೊದಲೇ ಹೇಳಿದ ಹಾಗೆ ಚಿಕ್ಕರಾಮರಾಯರು ಅತಿ ಪ್ರತಿಭೆಯುಳ್ಳ ವ್ಯಕ್ತಿ ಆಗಿದ್ದರು. ಇವರು ವೀಣೆ ನುಡಿಸಿಕೊಂಡು ಬಹಳ ಚೆನ್ನಾಗಿ ಹಾಡುತ್ತಿದ್ದನ್ನು, ಕಂಡ “ರಾಜ ಮಾತಾ”, ಮಹಾರಾಜರ ಗಮನಕ್ಕೆ ತಂದಾಗ, ೧೯೧೪ ರಲ್ಲಿ ಮಹಾರಾಜರು ಇವರನ್ನು ಆಸ್ಥಾನ ವಿದ್ವಾಂಸರಾಗಿ ನೇಮಿಸಿದರಂತೆ. ಮುಂದೆ ಮಹಾರಾಜರಿಂದ  ‘ಸಂಗೀತ ರತ್ನ’ ಹಾಗು ಹಿಂದೂಸ್ತಾನಿ ಮಹಾ ಪಂಡಿತರಾದ , ಅಬ್ದುಲ್ ಕರೀಂ ಖಾನ್ ಹಾಗು ಭಾಸ್ಕರ್ ಬುವಾ ಅವರುಗಳಿಂದ ‘ಪಂಡಿತ್’ ಎಂಬ ಪದವಿಯನ್ನು ಪಡೆದರು.

ನನಗೆ ಅನ್ನಿಸೋದು ಅವರು ಪಡೆದ ಎಲ್ಲಾ ಬಿರುದುಗಳಲ್ಲಿ ಅತಂತ್ಯ ಉನ್ನತವಾದ ಬಿರುದು ಎಂದರೆ “ತಾಳ ಬ್ರಹ್”. ಇವರಿಗೆ ಮಿತಿ ಮೀರಿದ ಪ್ರಚಂಡ ತಾಳ ಜ್ಞಾನವಿತ್ತು ಎಂದು ಕೇಳಿದ್ದೀನಿ. ಅವರು ತಾಳದಲ್ಲಿ ಹಾಕುತ್ತಿದ್ದ ಲೆಕ್ಕಾಚಾರ ಕೆಲವರಿಗೆ ಮಾತ್ರ ಅರ್ಥವಾಗುತ್ತಿತ್ತಂತೆ.

ಒಮ್ಮೆ ಮದರಾಸಿನಲ್ಲಿ ಇವರ ಕಚೇರಿ ನಡೆದಾಗ ಘಟಂನವರಿಗೆ ಇವರ ತಾಳದ ಲೆಕ್ಕಾಚಾರ ಅರ್ಥವಾಗದೆ ನುಡಿಸುವುದನ್ನು ನಿಲ್ಲಿಸಿಯೇ ಬಿಟ್ಟರಂತೆ. ಇದನ್ನು ಕೇಳಿದ ಮಹಾರಾಜರು ಇವರಿಗೆ “ತಾಳ ಬ್ರಹ್ಮ” ಎಂಬ ಬಿರುದನ್ನು ಕೊಟ್ಟರು. ಇವರು ಹಲವಾರು ಕೃತಿಗಳನ್ನು, ರಾಗಮಾಲಿಕೆಗಳನ್ನು ಹಾಗು ತಿಲ್ಲಾನಗಳನ್ನು, ಕನ್ನಡ, ಸಂಸ್ಕೃತ ಹಾಗು ತೆಲುಗು ಭಾಷೆಗಳಲ್ಲಿ ರಚಿಸಿದ್ದಾರೆ. ಚಾಮುಂಡಿಕೆ ಪರಿಪಾಲಿಸಲಿ ಮತ್ತು ಕಾಮಿತಾ  ಸದನ ಇವುಗಲ್ಲಿ ಎರಡು ರಚನೆಗಳು.

ಚಿಕ್ಕ ರಾಮರಾಯರು ವಾಸವಾಗಿದ್ದ ಮನೆ ಈಗಿನ ಮೈಸೂರಿನ ಪ್ರಭಾ ಟಾಕೀಸ್. ಆ ಸ್ಕ್ರೀನ್ ಇರುವ ಜಾಗ, ಇವರು ಕೂತು ಹಾಡುತ್ತಿದ್ದ ಜಾಗವಾಗಿತ್ತು. ಅಷ್ಟೇ ಅಲ್ಲ, ಹಲವಾರು ದೊಡ್ಡ ದೊಡ್ಡ ಸಂಗೀತಗಾರರು ಕೂಡ ಅಲ್ಲಿ ಕೂತು ಸಂಗೀತ ಧಾರೆಯನ್ನು ಹರಿಸಿದ್ದಾರೆ.

ಪ್ರತಿ ಗುರುವಾರ ಚಿಕ್ಕ ರಾಮರಾಯರ  ಮನೆಯಲ್ಲಿ ಸಂಜೆ ಭಜನೆ ನಡೆಯುವುದು.  ಟೈಮ್- ಮಷೀನ್ ಇದ್ದಿದ್ದರೆ ನಾನೀಗ ಪ್ರತಿ ಗುರುವಾರದ ಸಂಜೆ ಸಮಯದಲ್ಲಿ ಅಲ್ಲಿರುತ್ತಿದ್ದೆ- ಆಗ ಕಾಣಬಹುದಿತ್ತು, ಮೈಸೂರು ವಾಸುದೇವಾಚಾರ್ ಅವರು, ಚೌಡಯ್ಯನವರು, ವೀಣೆ ಶೇಷಣ್ಣನವರು – ನನಗಿಲ್ಲದ ಭಾಗ್ಯ. ಇಂತಹ ಮಹಾನ್ ಕಲಾವಿದರು ಅಲ್ಲಿ ಸೇರುತ್ತಿದ್ದರಂತೆ.

music notes2ಒಮ್ಮೆ ಚಿಕ್ಕ ರಾಮರಾಯರ ಕಚೇರಿ ಶುರು ಆಗಬೇಕಿತ್ತು ಆದರೆ ಎಷ್ಟು ಹೊತ್ತಾದರೂ  ಮೃದಂಗದವರ ಸುಳಿವೇ ಇಲ್ಲ.  ಇದರಿಂದ ಅವರು ಬಹಳ ತಳಮಳಗೊಂಡಿದ್ದರು. ಸ್ವಲ್ಪ ಸಮಯದ ನಂತರ ಅವರು ಹುಷಾರಿಲ್ಲದ ಕಾರಣ ಬರುವುದಿಲ್ಲವೆಂದು ತಿಳಿದುಬಂತು. ಮತ್ತೆ ಈಗ ಏನ್ ಮಾಡೋದು? ಜನರೆಲ್ಲಾ ಸೇರಿದ್ದಾರೆ… ಪಕ್ಕವಾದ್ಯದವರಿಲ್ಲ…

ಆಗಲೇ ಎಂಟ್ರಿ ಕೊಟ್ಟಿದು, ನಮ್ಮ ಹೀರೋ, ಒಂಬತ್ತು ವರುಷದ ಬಾಲಕ, ಮೈಸೂರು ಅನಂತಸ್ವಾಮಿ. ಒಂದು ಖಂಜಿರ ಹಿಡಿದು, ಧೈರ್ಯವಾಗಿ, ನಾನೇ ನುಡಿಸ್ತೀನಿ ತಾತ ಅಂತ, ಪೂರಾ ಕಚೇರಿ ಮುಗಿಯುವ ತನಕ ತಾತನಿಗೆ ಸಾಥಿ ನೀಡಿದ್ದಾರೆ. ಆಹಾ! ತಾತನಿಗೆ, ಎಷ್ಟು  ಹೆಮ್ಮೆ ಆಗಿರಬೇಕಲ್ಲವೇ?

ಇದಾಗಿ ಮಾರನೆಯ ದಿನದಿಂದಲೇ ಅಣ್ಣನಿಗೆ ಅವರ ಶಿಷ್ಯರಾದ ಶ್ರೀ ಕೃಷ್ಣಮೂರ್ತಿ ಅವರಿಂದ ಸಂಗೀತ ಪಾಠ ಶುರುವಾಯ್ತು. ಕೊಳಲು ಮತ್ತು  ಗಾಯನದ ಪಾಠ ಕರ್ನಾಟಕ  ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಅಭ್ಯಾಸ ಮಾಡಿದರು.

ಅಣ್ಣ ಒಂದು ದಿನ ಅವರ ತಾತನ ಬ್ಲಾಕ್ ಅಂಡ್ ವೈಟ್ ಫೋಟೋ  ತೆಗೆದುಕೊಂಡುಹೋಗಿ ಕಲರ್ ಪೇಂಟಿಂಗ್ ಮಾಡಿಸಿಕೊಂಡು ಬಂದರು. ಅವರ ಕೈಯ್ಯಲ್ಲಿ ಚಿನ್ನದ ಪದಕದ ಬಳೆ ಇರುವ ಹಾಗೆ ಪೇಯಿಂಟ್ ಮಾಡಿಸಿದ್ದರು. ಅವರಿಗೆ ಸಿಕ್ಕ ಸಂಗೀತ ರತ್ನ ಪದವಿಯ ಪದಕದ ಹಾಗೆ. ಮಾರನೇ ದಿನ ಫೋಟೋ ಗೋಡೆ ಮೇಲೆ ತಗಲಿಹಾಕಿಸುವುದಕ್ಕೆ ಯಾರೋ ಒಬ್ಬನ್ನ ಕರೆಸಿದ್ರು . ಹಾಗೆ ಫೋಟೋ ನೋಡ್ತಾ ನಕ್ಕೊಂಡು ಹೇಳಿದ್ರು, “ಕೈಯಲ್ಲಿ ಆ ಪದಕ ನೋಡಿ, ಈಗ ನನ್ನ ಬಂಧು ಬಳಗದವರೆಲ್ಲ, ಆ ಪದಕ ಎಲ್ಲಿ ಅಂತ ಕೇಳದಿದ್ರೆ ಸಾಕು” ಅಂತ.

ಅಣ್ಣನಿಗೆ ಅವರ ತಾತನ ಮೇಲೆ ಅಪಾರವಾದ ಗೌರವವಿತ್ತು. ತಾವು ಶಾಸ್ತ್ರೀಯ ಸಂಗೀತವನ್ನು ಮುಂದುವರೆಸಲಿಲ್ಲ ಅನ್ನೋ ವಿಷಯದಲ್ಲಿ ಸ್ವಲ್ಪ ಬೇಸರವಿತ್ತು. ಇವರ ಹಿರಿಯರಾದ ಶ್ರೀ ಕಾಳಿಂಗ ರಾಯರು ನಿಂತು ಹಾಡುತ್ತಿದ್ದರು.  ಆದರೆ ಅಣ್ಣ, ಸುಗಮ ಸಂಗೀತಕ್ಕೂ ಶಾಸ್ತ್ರೀಯ ಸಂಗೀತದ ಘನತೆ ಇರಬೇಕು ಅಂತ ಹೇಳಿ  ಕೂತು ಹಾಡೋರು.

ಒಂದು ಆಶ್ಚರ್ಯಕರವಾದ ವಿಷಯವೆಂದರೆ,  ಅಣ್ಣ ಮತ್ತು ಅವರ ತಾತ ತೀರಿಕೊಂಡಿದ್ದು ಒಂದೇ ತಾರೀಖು

ಜನವರಿ ಒಂಬತ್ತು!!

8 Comments

 1. Brinda Rao
  November 5, 2016
  • Anonymous
   November 7, 2016
 2. Anonymous
  November 5, 2016
  • Anonymous
   November 7, 2016
 3. sriprakash
  November 4, 2016
  • Anonymous
   November 7, 2016
 4. ಪುರುಷೋತ್ತಮ
  November 4, 2016
  • Prasanna Rao
   November 5, 2016

Add Comment

Leave a Reply