Quantcast

ಇವರು ಕೆ ಟಿ ಗಟ್ಟಿ..

ಕೆ.ಟಿ. ಗಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಈ ಸಂದರ್ಭದಲ್ಲಿ ಅವರನ್ನು ಹತ್ತಿರದಿಂದ ಕಂಡ ಶಮ ನಂದಿಬೆಟ್ಟ ಕಟ್ಟಿಕೊಟ್ಟ ಆತ್ಮೀಯ ನೋಟ ಇಲ್ಲಿದೆ

ನಾ ಕಂಡ ಕೆ.ಟಿ. ಗಟ್ಟಿ

shama nandibetta

ಶಮ ನಂದಿಬೆಟ್ಟ

“ಸರ್ ನಮಸ್ತೇ, ನಾನು ಶಮ,

“ಓಹ್ ನೀವಾ ? ಹೇಳಿ, ಹೇಗಿದೀರಿ ? ಮಕ್ಕಳು ಆರಾಮಿದ್ದಾರಾ ?”

“ರಾಜ್ಯೋತ್ಸವ ಪ್ರಶಸ್ತಿ ಬಂತಲ್ಲ ಅಭಿನಂದನೆಗಳು ಸರ್”

ನೀವು ಅಭಿನಂದನೆ ಹೇಳಿದ್ರಿ. ನಾನೊಂದು ಧನ್ಯವಾದ ಹೇಳ್ತೇನೆ. ನಿಮ್ಗೆ ಖುಷಿಯಾಗಿದೆ, ಅದರಲ್ಲಿ ನಂಗೊಂದು ಸಣ್ಣ ಪಾಲು ಕೊಡಿ ಸಾಕು”

fill-in1

ಹೀಗೆ ಸಾಗುತ್ತದೆ ನಮ್ಮ ಸಂಭಾಷಣೆ. ಸಿಕ್ಕಿದ ಸಮ್ಮಾನದ ಬಗ್ಗೆ ಸಂತಸ, ಪ್ರಶಸ್ತಿಯ ಮೇಲೆ ಗೌರವ ಎರಡೂ ಇದೆ, ಆದರೆ ಅಹಂಕಾರವಿಲ್ಲ. ರಾಜ್ಯೋತ್ಸವ ಪ್ರಶಸ್ತಿಗಾಗಿ ತಿಪ್ಪರಲಾಗ ಹಾಕಿ ಲಾಬಿ ಮಾಡುವ ಈ ಕಾಲಘಟ್ಟದಲ್ಲಿ ತಾನಾಗಿ ಹೊಸಿಲಿಗೆ ಹುಡುಕಿಕೊಂಡು ಬಂದ ಪ್ರಶಸ್ತಿಯನ್ನು ಇಷ್ಟು ನಿರ್ಲಿಪ್ತ ಮನೋಭಾವದಿಂದ ಸ್ವೀಕರಿಸುವವರಿದ್ದರೆ ಅವರ ಹೆಸರು ಕೆ.ಟಿ.ಗಟ್ಟಿ.

ತಮ್ಮ ಕಾದಂಬರಿಗಳಷ್ಟೇ ಸರಳವಾದ ಇವರದು ಹೆಸರಿನಂತೆಯೇ ಗಟ್ಟಿ ವ್ಯಕ್ತಿತ್ವ. ಮಾತು, ನಡೆ, ನುಡಿ ಎಲ್ಲವೂ ದಿಟ್ಟ, ನೇರ. ಹೆಸರಿನಿಂದಷ್ಟೇ ಅಲ್ಲದೆ ಬದುಕಿನ ಕುಲುಮೆಯಲ್ಲಿ ಸಾಕಷ್ಟು ಬೆಂದು ಗಟ್ಟಿಯಾದ ಇವರದು ವಿಶಿಷ್ಟವಾದ ಮನೋಧರ್ಮ. ಇವರ ಸಾಮಾಜಿಕ ನಿಲುವುಗಳೂ ಅಷ್ಟೇ ಭಿನ್ನ. ಅವರ ಸಾಹಿತ್ಯ ಕೃಷಿಯ ಬಗ್ಗೆ ಸಾಕಷ್ಟು ಚರ್ಚೆ, ಬರಹ, ವಿಮರ್ಶೆಗಳು ಇರಬಹುದು. ಇವರ ಸಾಹಿತ್ಯದ ಮೇಲೆಯೇ ಪಿ.ಹೆಚ್.ಡಿ ಕೂಡಾ ಮಾಡಿದವರಿದ್ದಾರೆ. ಗೊತ್ತಿಲ್ಲದಿರುವದು ಮತ್ತು ನಾನು ಹೇಳಹೊರಟಿರುವುದು ಬರಹದಾಚೆಗಿನ ವ್ಯಕ್ತಿತ್ವದ ಬಗ್ಗೆ.

k-t-gatti-familyಎಲೆ ಮರೆಯ ಕಾಯಿಯಾಗಿ ಪ್ರಚಾರದಿಂದ ದೂರವುಳಿದು, ಕೀರ್ತಿಶನಿ ತೊಲಗಾಚೆ ಎಂದ ಇವರ ಯೋಚನಾ ಲಹರಿಯೇ ವಿಶೇಷವಾದ್ದು. ಜಗತ್ತಿನ ಬಹಳಷ್ಟು ಮಂದಿ ಧ್ಯಾನವೆಂದರೆ ಮೈ ಮರೆವ ಸ್ಥಿತಿ ಎನ್ನುವುದು ಸಾಮಾನ್ಯ. ಗಟ್ಟಿಯವರು ಹಾಗಲ್ಲ, “ಧ್ಯಾನವೆಂದರೆ ಮೈ ಮನಸ್ಸು ಎರಡೂ ಬಹಳ ಜಾಗೃತವಾಗಿರುವ ಸ್ಥಿತಿ. ಯಾವುದರಲ್ಲೇ ಆಗಲಿ ಮನುಷ್ಯ ತನ್ನನ್ನು ತೀವ್ರವಾಗಿ, ತುಂಬ ಪ್ರೀತಿಯಿಂದ ತೊಡಗಿಸಿಕೊಳ್ಳುವ ಪ್ರಕ್ರಿಯೆಯೇ ಧ್ಯಾನ. ಅಲ್ಲಿ ತನ್ಮಯತೆ ಮಾತ್ರ ಮುಖ್ಯ ಆಗುತ್ತೆ. ಬರಹಗಾರನಿಗೆ ಬರವಣಿಗೆ, ಗಾಯಕರಿಗೆ ಹಾಡುವ ಘಳಿಗೆ, ಶಿಕ್ಷಕನಿಗೆ ಪಾಠ ಮಾಡುವ ಕ್ಷಣ ಇದೆಯಲ್ಲ ಅದೊಂದು ಧ್ಯಾನದಂತೆ. ಆದ್ದರಿಂದಲೇ ಅದು ಮೈಮರೆವ ಪ್ರಕ್ರಿಯೆಯಲ್ಲ, ಬಹಳ ಜಾಗೃತ ಮನೋಸ್ಥಿತಿ” ಹೀಗೆ ಹೇಳುತ್ತಿದ್ದರೆ ಎಂಥವರಿಗಾದರೂ ಅರೇ ಹೌದಲ್ಲ ಅನ್ನಿಸದಿರದು.

ಜಾತೀಯತೆ ಇವರನ್ನು ಆಳ ಚಿಂತನೆಗೆ ಹಚ್ಚಿದ ಸಾಮಾಜಿಕ ಪಿಡುಗು. ತಮ್ಮ ಸಾಕಷ್ಟು ಬರಹಗಳಲ್ಲೂ ಇದನ್ನವರು ಬಿಂಬಿಸಿದ್ದಾರೆ. ಮನುಷ್ಯರ ನಡುವೆ ಅಂತರ, ಅಸಮಾನತೆ ಬಹಳಷ್ಟು ಸಲ ಅಸಹಾಯಕತೆ ಕೂಡ ತಂದಿಡುವುದು ಈ ಜಾತೀಯತೆ ಎನ್ನುತ್ತಾರಿವರು.

ಒಬ್ಬ ವ್ಯಕ್ತಿಯನ್ನು ಗುರುತಿಸಿಕೊಳ್ಳಬೇಕಾದ್ದು ಮತ್ತು ಆತನ ಜತೆ ತನ್ನನ್ನು ಗುರುತಿಸಿಕೊಳ್ಳುವುದು ಆತನ ಗುಣದ ಕಾರಣದಿಂದ ಆಗಬೇಕೇ ಹೊರತು ಆತ ಯಾವ ಜಾತಿಯವನು, ಯಾವ ಮತದವನು ಎನ್ನುವ ಕಾರಣದಿಂದ ಅಲ್ಲ. ಭಾಷೆಯೋ, ನಡವಳಿಕೆಯೋ, ಉಡುಪೋ, ಹಣೆಯ ಮೇಲೆ ಅಥವಾ ದೇಹದ ಮೇಲೆ ಅಂಟಿಸಿಕೊಂಡ  ಲಾಂಛನವೋ ಅದನ್ನು ಹೇಳಬಹುದು. ಅದಿದ್ದರೂ ಕೂಡ ವ್ಯಕ್ತಿತ್ವದ ಹೊರತಾಗಿ ಆತನ ಜಾತಿ ಅಥವಾ ಮತ ನನ್ನ ಮನಸ್ಸಿನಲ್ಲಿ ದಾಖಲಾಗುವುದಿಲ್ಲ. ಈ ಗುಣ ನನ್ನ ಪಾತ್ರಗಳಿಗೂ ಇರುತ್ತದೆ” (ಏಳು ಜನ್ಮವ ದಾಟಿ ಮುನ್ನುಡಿಯಿಂದ) – ಇದು ಇವರ ಸ್ಪಷ್ಟ ನಿಲುವು.

ಬರಹದಲ್ಲಿ ಒಂದು, ಬದುಕುವ ಕ್ರಮ ಇನ್ನೊಂದು, ಭಾಷಣಕ್ಕೆ ಮತ್ತೊಂದು ಇರುವ ಈ ಹೊತ್ತಿನಲ್ಲೂ ಇವರು ಮಾತ್ರ ಬರೆದಂತೆ ಬದುಕಿದ್ದಾರೆ. ಜಾತಿ ಮತದ ಲೇಪವಿರುವ ಯಾವುದೂ ಮಾನವೀಯವೂ ಸುಂದರವೂ ಅಲ್ಲವೆಂಬ ಸಮಷ್ಟಿ ಪ್ರಜ್ಞೆ ಇವರನ್ನು ಸಂತೆಯೊಳಗೂ ಸಂತನನ್ನಾಗಿಸಿದೆ.

ಅದೇ ಥರ ಲಿಂಗಾಧಾರಿತ ವ್ಯವಸ್ಥೆ, ಹೆಣ್ಣನ್ನು ಬರಿಯ ಸರಕಿನಂತೆ ನೋಡುವ ಮನೋಧರ್ಮದ ಬಗ್ಗೆ ಕೂಡ ಅಧಿಕೃತವಾಗಿ ಇವರು ಆಡುವ ಮಾತುಗಳು ಕೇಳುಗರನ್ನು ಗಂಭೀರ ಚಿಂತನೆಗೆ ಹಚ್ಚಬಲ್ಲವು. ಹೆಣ್ಣನ್ನು ಬರಿಯ ವ್ಯಕ್ತಿಯಾಗಲ್ಲದೇ ಶಕ್ತಿಯೂ ಹೌದೆಂಬ ತಮ್ಮ ನಿಲುವನ್ನು ತಮ್ಮ ಬಹಳಷ್ಟು ಕಾದಂಬರಿಗಳಲ್ಲಿ ಬಿಂಬಿಸಿದ್ದಾರೆ. “ಬದುಕಲ್ಲೂ ಇದನ್ನು ಅಳವಡಿಸಿಕೊಂಡು ಹೆಣ್ಣಿಗೆ ಸಮಾನತೆಯ ಗೌರವ ನೀಡಿದ್ದಾರೆ” ಎನ್ನುವುದು ಅವರ ಶ್ರೀಮತಿ ಯಶೋದಾ ಅವರ ಮನದಾಳದ ಮಾತು.

ಶಿಕ್ಷಣ ಕ್ರಮದ ಬಗ್ಗೆ ತಮ್ಮದೇ ಆದ ದೃಷ್ಟಿಕೋನ ಹೊಂದಿರುವ ಇವರು ಪ್ರಕೃತಿಯ ಒಡನಾಟದಲ್ಲಿ ಮಕ್ಕಳು ಸಹಜವಾಗಿ ಕಲಿವುದಕ್ಕಿಂತ ಹೆಚ್ಚು ಪರಿಣಾಮಕಾರಿ ಕಲಿಕೆ ನಾಲ್ಕು ಗೋಡೆಯ ನಡುವಿನ ಪಾಠಕ್ಕಿಲ್ಲ ಎನ್ನುತ್ತ ಒಂದು ಹುಲ್ಲನ್ನೋ, ಕೋಲಿನ
ತುಂಡನ್ನೋ, ಎಲೆಯನ್ನೋ ಕೈಯಲ್ಲಿ ಹಿಡಿದುಕೊಂಡು ಅದರ ಮೂಲಕವೇ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವ ಶಾಸ್ತ್ರ ಹೇಳಿ ಕೊಡಬಹುದಾದ ಸಾಧ್ಯತೆಗಳ ಬಗ್ಗೆ ವಿವರಿಸುತ್ತಿದ್ದರೆ ಎದುರಿಗಿದ್ದ ನಾನು ಮೈ ಮರೆತಿದ್ದೆ.

“ನಮ್ಮ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಲ್ಲಿ ಪ್ರಶ್ನಾ ಮನೋಭಾವವನ್ನೇ ಹುಟ್ಟು ಹಾಕುತ್ತಿಲ್ಲ. ಇಥಿಯೋಪಿಯಾದಲ್ಲಿದ್ದಾಗ ವಿದ್ಯಾರ್ಥಿಗಳು ಪೇಟೆಯಲ್ಲೋ ದಾರಿಯಲ್ಲೋ ಸಿಕ್ಕರೆ ಕೂಡಾ ತಮಗೆ ಅರ್ಥವಾಗದ್ದನ್ನು ಕೇಳುತ್ತಿದ್ದರು. ಇಲ್ಲಿ ವಾರದ ಹಿಂದೆ ಒಂದಿಡೀ ಗಂಟೆ ಮಾತಾಡಿದ ನಂತರ ನನ್ನ ಒತ್ತಾಯಕ್ಕೂ ವಿದ್ಯಾರ್ಥಿಗಳು ಪ್ರಶ್ನೆ ಕೇಳಲಿಲ್ಲ” ಎನ್ನುತ್ತ ಅಲವತ್ತುಗೊಂಡರು. ಯಾವತ್ತಿನಿಂದಲೂ ಶಾಲೆಯೊಂದನ್ನು ತೆರೆವ ಕನಸಿರುವ ನನಗೆ ಇವರ ಮಾರ್ಗದರ್ಶನ ನಮ್ಮಂಥವರಿಗೆ ಸಿಗೋ ಹಾಗಿದ್ದರೆ ಎಂಬಾಸೆ ಸುಳಿದಿತ್ತು.

k-t-gatti3

ಇಷ್ಟೆಲ್ಲ ವಿಶಿಷ್ಟತೆಗಳ ನಡುವೆಯೂ ಅವರ ಸರಳತೆ ಮಾತ್ರ ನಂಬಲಸಾಧ್ಯ ಎಂದರೆ ಅತಿಶಯೋಕ್ತಿಯಲ್ಲ. ಯಾವತ್ತೋ ಅವರ ಮನೆಗೆ ಹೋಗಿದ್ದಾಗ ಕಂಡ ಪುಸ್ತಕವೊಂದು ಓದಿಗೆ ಬೇಕಿತ್ತು. ಎತ್ತಿಟ್ಟಿದ್ದರೂ ಹೊರಡುವ ಹೊತ್ತಿಗೆ ಮರೆತು ಬಂದಿದ್ದೆ. ಮತ್ತೊಮ್ಮೆ ಹೋದಾಗ ಹುಡುಕಿದರೂ ಪುಸ್ತಕ ಸಿಗದು, ಹೆಸರೂ ನೆನಪಿಗೆ ಬಾರದು. ಮುಖ ಸಣ್ಣದಾಗಿದ್ದು ಅವರು ನೋಟ್ ಮಾಡಿಕೊಂಡಿದ್ದರೇನೋ, ನಂಗೆ ಗೊತ್ತಾಗಲಿಲ್ಲ. ಎರಡು ದಿನ ಕಳೆದ ನಂತರ ಫೋನ್ ಮಾಡಿ ಈಗ ಹೆಸರು ನೆನಪಿಗೆ ಬಂತು ಅನ್ನುವುದರ ಜತೆಗೆ ಎಲ್ಲೆಲ್ಲಿ ಸಿಗುತ್ತದೆ ವಿವರ ಕೂಡಾ ಕೊಟ್ಟಿದ್ದರು. ಒಂದೆರಡು ಚಿಕ್ಕ ಪುಟ್ಟ ಲೇಖನಗಳು ಪ್ರಕಟವಾದ ಮಾತ್ರಕ್ಕೇ ಖ್ಯಾತ ಬರಹಗಾರನಂತೆ ಪೋಸ್ ಕೊಡುವ, ಓದೋದಕ್ಕಾಗಿ ಲಿಂಕ್ ಕೇಳಿದರೆ ಗತ್ತಿನ ಉತ್ತರ ಕೊಡುವವರ ನಡುವೆ ಬದುಕುತ್ತಿರುವ ನಾನು ಒಂದು ಕ್ಷಣ ಈ ಸರಳತೆಗೆ ಸ್ತಬ್ಧಳಾಗಿದ್ದೆ.

ಬೇಸರದ ವಿಷಯವೆಂದರೆ ತನ್ನ ವಯಸ್ಸಿಗಿಂತಲೂ ಹೆಚ್ಚು ಕಥೆ, ಕಾದಂಬರಿ, ನಾಟಕಗಳ ಕತೃವಾದರೂ ಇವರ ಚಿತ್ರಗಳ ಹೊರತು ವಿಕಿಪಿಡಿಯಾ, ಗೂಗಲ್ ಸೇರಿದಂತೆ ಎಲ್ಲೂ ಯಾವುದೇ ಮಾಹಿತಿ ಸಿಗುವುದಿಲ್ಲ. ಕನಿಷ್ಟ ಒಂದು ವಿಕಿ ಪೇಜ್ ಕೂಡ ಮಾಡಲಾಗದ್ದಕ್ಕೆ, ನೀಡಬೇಕಾದ ಗೌರವ ಕೊಡದಿದ್ದಕ್ಕೆ ನಾಚಿಕೆ ಪಡುವುದು ಅನಿವಾರ್ಯ!!

15 Comments

 1. Anonymous
  November 11, 2016
 2. Santosh Dharmraj
  November 9, 2016
 3. Samyuktha
  November 4, 2016
 4. Athradi Suresh Hegde
  November 4, 2016
  • Anonymous
   November 4, 2016
 5. ಗಾಣಧಾಳು ಶ್ರೀಕಂಠ
  November 4, 2016
  • Anonymous
   November 4, 2016
 6. Anonymous
  November 4, 2016
  • Anonymous
   November 4, 2016
 7. Anonymous
  November 4, 2016
  • Anonymous
   November 4, 2016
 8. anuradha
  November 4, 2016
  • Anonymous
   November 4, 2016
 9. mm shaik
  November 4, 2016
  • Anonymous
   November 4, 2016

Add Comment

Leave a Reply