Quantcast

ನಿಮ್ಮ ಚಪ್ಪಾಳೆ ಬೇಕು..

manjunath_kamath

ಮಂಜುನಾಥ್ ಕಾಮತ್

13 ವರುಷದ ಹುಡುಗ. ಗುರು ಕಿರಣ್ ಆಚಾರ್ಯ. ಸಿದ್ದಾಪುರ ವೆಂಕಟರಮಣ ದೇವಸ್ಥಾನದ ಪೂಜೆಯ ಭಟ್ರ ಮಗ.

ದೊಡ್ಡವನಾದ ಮೇಲೆ ಆತ ಪೊಲೀಸ್ ಆಗ್ತಾನಂತೆ‌. ಟೆರರಿಸ್ಟ್ ಮತ್ತು ಕಳ್ಳರನ್ನು ಹಿಡಿದು ಭಾರತವನ್ನು ಚಂದದ ದೇಶ ಮಾಡ್ತಾನಂತೆ. ಆತನ ಕನಸುಗಳನ್ನು ಕೇಳುತ್ತಾ ಖುಷಿಯಾಯ್ತು. ಚಂದದ ಲೋಕಕ್ಕೆ ಆ ಕ್ಷಣ ಜಾರಿದ್ದೆ. ಆದರೆ ವಾಸ್ತವ ಮಾತ್ರ ಬೇರೆಯೇ.

ಈ ಹುಡುಗನಿಗೆ ನಡೆಯುವುದು ಬಿಡಿ, ಸ್ವಂತ ಎದ್ದು ಕೂರುವುದೂ ಸಾಧ್ಯವಿಲ್ಲ. ಹೆಚ್ಚೆಂದರೆ ಮಡೆಸ್ನಾನ ಹಾಕುವವರು ಉರುಳುತ್ತಾರಲ್ವ. ಹಾಗೆ ಒಂದೆರಡು ಸುತ್ತು ಉರುಳಾಡುತ್ತಾನಷ್ಟೆ. ಅದು ಬಿಟ್ಟರೆ ತಂದೆಯೇ ಹೊತ್ತುಕೊಂಡು ಹೋಗಬೇಕು.

ತಾಯಿಗೆ ಬೆನ್ನು ಹುರಿಯ ಶಸ್ತ ಚಿಕಿತ್ಸೆಯಾಗಿದೆ. ಕೊಂಚ ಭಾರವನ್ನೂ ಅವರು ಎತ್ತುವಂತಿಲ್ಲ. ಹುಡುಗ ಆರನೇ ತರಗತಿ ಇದ್ದಾಗ ಅಮ್ಮ ಆಸ್ಪತ್ರೆ ಸೇರಿದ್ದರು. ಇನ್ಮುಂದೆ ಮಗನಿಗೆ ಶಾಲೆ ಬೇಡವೆಂದು ನಿರ್ಧರಿಸಿದಾಗ ಓದಿಗಾಗಿ ಅತ್ತು ಕೂತವನು ಈ ಗುರುಚರಣ.

stars“ಕ್ಲಾಸಲ್ಲಿ ಸುಮ್ಮನೆ ನನ್ನನ್ನು ಕೂರಿಸಿ ಬಂದು ಬಿಡಿ. ಇದ್ದಲ್ಲೇ ಕಲಿಯುತ್ತೇನೆ. ದಯವಿಟ್ಟು ಶಾಲೆಗೆ ಕಳಿಸಿ” ಎಂದಾಗ ತಂದೆ ತಾಯಿಗೆ ಬೇರೆ ದಿಕ್ಕಿರಲಿಲ್ಲ. ಅದೇ ಹೊತ್ತಿಗೆ ಜಿ.ಎಸ್.ಬಿ ಹಿತರಕ್ಷಣಾ ವೇದಿಕೆಯ ಸಂಪರ್ಕ ಈ ಕುಟುಂಬಕ್ಕಾಯಿತು. ಅದರ ಸಂಚಾಲಕ Vivekananda Shenoy ಆಸ್ಪತ್ರೆ, ಶಿಕ್ಷಣ, ಕುಟುಂಬ ಚೈತನ್ಯ ನಿಧಿ ನೀಡುವ ಭರವಸೆ ನೀಡಿದ ಮೇಲೆ ಮತ್ತೆ ಶಾಲೆಗೆ ಕಳುಹಿಸಿದರು.

ಶಾಲೆಗೇನೋ ಕಳುಹಿಸಿದರು. ಆಟೋದಲ್ಲಿ ಹೋಗಿ ಬರುವುದೂ ಕಷ್ಟವೇನಲ್ಲ. ಆದರೆ ನಡುವೆ ಮಲ ಮೂತ್ರಗಳಿಗೆ ಹೊತ್ತೊಯ್ಯುವವರು ಯಾರು?

ಗುರರುಚರಣನೇ ಒಂದು ದಾರಿ ಕಂಡು ಹಿಡಿದಿದ್ದಾನೆ. ಅದು ಬೇರೇನೂ ಅಲ್ಲ. ಸ್ವ ನಿಯಂತ್ರಣ. 9 ಗಂಟೆಯಿಂದ ಮದ್ಯಾಹ್ನ ಮೂರೂವರೆಗೆ ಮನೆ ತಲುಪುವ ವರೆಗೂ ಮಲ ಮೂತ್ರವನ್ನು ಆತ ನಿಯಂತ್ರಿಸಿಕೊಳ್ಳುತ್ತಾನೆ. ಬೇರೆಯವರಿಗೆ ಹೊರೆಯಾಗ ಬಾರದೆಂಬ ಹಠ ಅವನದು.

ಊಟವನ್ನು ಗೆಳೆಯರು ಮಾಡಿಸುತ್ತಾರೆ. ತಟ್ಟೆಯನ್ನೂ ತೊಳೆದು ತರುತ್ತಾರೆ. ಆದರೆ ಶೌಚಾಲಯಕ್ಕೆ ಹೊತ್ತೊಯ್ಯಲು ಯಾರಿಗಾದರೂ ಕಷ್ಟವೇ‌. ತಂದೆಯೇ ಆತನನ್ನು ಹೊತ್ತೊಯ್ಯುವಾಗ ಹಲವು ಬಾರಿ ಬಿದ್ದಿದ್ದಾರಂತೆ.ಇನ್ನು ಬೇರೆಯವರಿಗೆ ಸುಲಭವೇ?

ದಸರಾ ರಜೆ, ಬೇಸಿಗೆ ರಜೆ ಎಂದೆಲ್ಲಾ ಮಕ್ಕಳು ಖುಷಿ ಪಡುವ ತಿಂಗಳುಗಳಲ್ಲಿ ಈ ಗುರು ಚರಣ ಆಸ್ಪತ್ರೆಯ ಹಾಸಿಗೆಯಲ್ಲಿರುತ್ತಾನೆ. ನರ ದೌರ್ಬಲ್ಯವಂತೆ. ಬೆಳೆಯುತ್ತಾ ಬೆಳೆಯುತ್ತಾ ಸರಿಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರಂತೆ. ವಿವಿಧ ಚಿಕಿತ್ಸೆಗಳ ಫಲವಾಗಿ ಹಿಂದಿಗಿಂತ ಈ ಪುಟಾಣಿ ಈಗ ಗೆಲುವಾಗಿದ್ದಾನೆ. ಎರಡು ಕಾಲೂ ನೆಲಕ್ಕೆ ಊರುವ ದಿನಗಳಿಗಾಗಿ ಈತ ಕಾಯುತ್ತಿದ್ದಾನೆ.
*****
ನಮಗೆಲ್ಲ ಅತ್ಯಂತ ಸುಲಭವಾಗಿ ಸಿಗೋ ಶಿಕ್ಷಣವನ್ನು ಕೆಲವರು ಹೋರಾಡಿ ಪಡೆಯುತ್ತಾರೆ. ಅಂಥವರಲ್ಲಿ ಓರ್ವ ಈ ಹುಡುಗ. ತನ್ನನ್ನು ತಾನೇ ಗೆಲ್ಲಲು ಪ್ರಯತ್ನಿಸುತ್ತಿರುವ ಸಾಹಸಿ ವಿದ್ಯಾರ್ಥಿಯ ಕುರಿತು ಕಿರು ಸಾಕ್ಷ್ಯಚಿತ್ರ ಮಾಡಿದ್ದೇನೆ. ಸ್ವಲ್ಪ ಸಮಯದ ನಂತರ ಇಲ್ಲಿ ಅಪ್ಲೋಡ್ ಮಾಡುತ್ತೇನೆ.

ನಿಟ್ಟೆಯ ಪ್ರಜ್ವಲ್ ಪ್ರತೀಕ್ಷಾರ ಓದಿನ ಹಸಿವನ್ನು ತಣಿಸಲು ಪ್ರೋತ್ಸಾಹ ನೀಡಿದಂತೆ ಸಿದ್ದಾಪುರದ ಗುರುಚರಣನಿಗೂ ನಿಮ್ಮ ಚಪ್ಪಾಳೆ ಬೇಕು. ಆ ಸದ್ದಿಗೆ ಆತ ಎರಡೂ ಪಾದಗಳನ್ನು ನೆಲಕ್ಕಿಟ್ಟು ಹೆಜ್ಜೆ ಇಡುವುದನ್ನು ನಾವೆಲ್ಲರೂ ಕಾಣಬೇಕು. ಆತ ಮುಂದೆ ಪೊಲೀಸ್ ಆಗಬೇಕು. ಭಾರತವನ್ನು ಕಾಡುತ್ತಿರುವ ಭಯೋತ್ಪಾದನೆಯನ್ನು ತಡೆಯಬೇಕು.

One Response

  1. Anonymous
    November 4, 2016

Add Comment

Leave a Reply