Quantcast

ಪ್ರಿಯ ಪೈ ಮಾಮ್..

ಮೂಢನಂಬಿಕೆ ವಿರುದ್ಧ ಜಾಗೃತಿ ಆಂದೋಲನ ನಡೆಸುತ್ತಿರುವ ನರೇಂದ್ರ ನಾಯಕ್ ಇಲ್ಲಿ

ಟಿ ವಿ ಮೋಹನ್ ದಾಸ್ ಪೈ ಗೆ ಪ್ರಶ್ನೆ ಕೇಳಿದ್ದಾರೆ

ಇದು ಜುಗಾರಿ ಕ್ರಾಸ್ 

ನೀವೂ ಚರ್ಚೆಯಲ್ಲಿ ಭಾಗವಹಿಸಿ 

narendra-nayak1

ಪ್ರಿಯ ಪೈ ಮಾಮ್,

ನಮಸ್ಕಾರ್. ನಾನು ಜಿಎಸ್‌ಬಿ ಕುಟುಂಬದಲ್ಲೆ ಜನಿಸಿದವನು.

ಆದರೆ ನಾಸ್ತಿಕನಾಗಿರುವ ಕಾರಣ ಸಮುದಾಯದಲ್ಲಿ ತುಂಬಾ ಮಹತ್ವ ಪಡೆದುಕೊಂಡಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುತ್ತಿಲ್ಲ. ಹೀಗಾಗಿ ನಾನು ತುಂಬಾ ಸಮಾಜ ಬಾಂಧವ ಎಂದು ಹೇಳಿಕೊಳ್ಳುವ ಹಾಗಿಲ್ಲ. ಅದೇನೆ ಇರಲಿ, ನೀವು ಕೊಂಕಣಿ ಭಾಷಿಕರಿಗೆ ಅದರಲ್ಲೂ ವಿಶೇಷವಾಗಿ ಗೌಡ ಸಾರಸ್ವತ ಬ್ರಾಹ್ಮಣರಿಗೆ ಇತಿಹಾಸದಲ್ಲಿ ಆಗಿ ಹೋದ ಅನ್ಯಾಯಗಳನ್ನು ಸರಿಪಡಿಸಲಿಕ್ಕೆ ಹೊರಟಿದ್ದೀರಿ ಎಂದು ತಿಳಿದು ನನಗೆ ಸಂತೋಷವಾಗಿದೆ.

mohan-das-pai2ನೀವು ಟಿಪ್ಪು ಸುಲ್ತಾನ್ ಸಾವಿರಾರು ಕೊಂಕಣಿ ಮಾತನಾಡುವ ಜನರನ್ನು ಕೊಂದಿರುವುದನ್ನು ವಿರೋಧಿಸಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ನಿಮ್ಮ ಪತ್ರಿಕಾ ಹೇಳಿಕೆಗಳ ಮೂಲಕ ನನಗೆ ತಿಳಿಯಿತು. ಬಹುಶಃ ನೀವು ಇಲ್ಲಿ ಕೊಂಕಣಿ ಭಾಷಿಕರು ಎಂದರೆ ಜಿಎಸ್‌ಬಿಗಳು ಮತ್ತು ಮಂಗಳೂರಿನ ರೋಮನ್ ಕೆಥೊಲಿಕರ ಬಗ್ಗೆ ಹೇಳುತ್ತಿದ್ದಿರಿ ಎಂದು ನಾನು ಭಾವಿಸಿದ್ದೇನೆ.

ಅಂದ ಹಾಗೆ ಪೈಗಳೆ, ನೀವು ಇತಿಹಾಸದಲ್ಲಿ ಸ್ವಲ್ಪ ಹಿಂದಕ್ಕೆ ಅಂದರೆ ಮಾರ್ಚ್ 2016ಕ್ಕೆ ಬಂದರೆ (ತುಂಬಾ ಹಿಂದೇನಲ್ಲ) ಒಂದು ಮುಖ್ಯವಾದ ವಿಷಯ ನಿಮ್ಮ ಗಮನಕ್ಕೆ ಬರುತ್ತದೆ. ಆ ತಿಂಗಳು ಓರ್ವ ಕೊಂಕಣಿ ಮಾತನಾಡುವ ಜಿಎಸ್‌ಬಿ, ವೆಂಕಟರಮಣನ ಪರಮ ಭಕ್ತ, ಕಾಶಿ ಮಠದ ಶಿಷ್ಯ ವಿನಾಯಕ ಬಾಳಿಗಾ ಎಂಬವರನ್ನು ಕೊಲೆ ಮಾಡಲಾಯಿತು. ದೇವಸ್ಥಾನದ ಅವ್ಯವಹಾರಗಳನ್ನ ಪ್ರಶ್ನಿಸಿದ್ದಕ್ಕಾಗಿ ಈ ಕೊಲೆ ನಡೆದಿತ್ತು. ಆದರೆ ಇಲ್ಲಿಯ ತನಕ ನೀವಾಗಲಿ ಅಥವಾ ಸಮುದಾಯದ ಇತರರಾಗಲಿ ಈ ವಿಷಯದ ಮೇಲೆ ಏನನ್ನೂ ಹೇಳಿದ್ದ ನಾನು ಕೇಳಿಲ್ಲ. ನಿಮ್ಮ ಮೌನ ಮುರಿಯಲು ಈಗಲೂ ಸಮಯ ಮೀರಿಲ್ಲ. ಬಹುಶಃ ಆರೋಪಿಗಳು ನೀವೀಗ ಟಿಪ್ಪುವಿನ ಹೆಸರಿನ ಜೊತೆಗೆ ಉಲ್ಲೇಖಿಸುವ ಸಮುದಾಯಕ್ಕೆ ಸೇರಿರುವುದೇ ನಿಮ್ಮ ಮೌನಕ್ಕೆ ಕಾರಣವಿರಬೇಕು, ಅಲ್ಲವೆ?

ನೀವು ಇತಿಹಾಸದಲ್ಲಿ ಇನ್ನಷ್ಟು ಹಿಂದೆ ಹೋದರೆ, ಅಂದರೆ ಸುಮಾರು ಒಂದು ದಶಕದಷ್ಟು ಹಿಂದೆ, ನೀವು ಈಗ ಯಾವ ಜಿಎಸ್‌ಬಿಗಳ ಜೊತೆ ಸಂಬಂಧ ಹೊಂದಿರುವಿರೊ ಅದೇ ಜಿಎಸ್‌ಬಿಗಳು ಸಾವಿರಾರು ಜನರು ಠೇವಣಿ ಇಟ್ಟ ಸಾವಿರಾರು ಕೋಟಿ ರೂಪಾಯಿಗಳನ್ನು ನುಂಗಿ ನೀರು ಕುಡಿದಿದ್ದಾರೆ. ಹೀಗೆ ಠೇವಣಿ ಇಟ್ಟ ಹೆಚ್ಚಿನವರು ‘ಅಮ್ಚಿಗೆಲಿ’ (ಕೊಂಕಣಿಯಲ್ಲಿ ನಮ್ಮ ಜಾತಿ ಎನ್ನಲಿಕ್ಕೆ ಬಳಸುವ ಪದ) ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ನೀವು ಜಿಎಸ್‌ಬಿ ಸಮುದಾಯದ ಕೊಂಕಣಿ ಭಾಷಿಕ ಮಂದಿಗೆ ಆದ ಅನ್ಯಾಯ ಲೆಕ್ಕಿಸದೆ ಅನ್ಯಾಯ ಮಾಡಿರುವವರ ಜೊತೆ ತುಂಬಾ ಸಂಭ್ರಮಾಚರಣೆ ಮಾಡುತ್ತಿರುತ್ತೀರಿ.

ನಿಮ್ಮ ಹೃದಯ ಕೊಂಕಣಿ ಭಾಷಿಕ ಜನರಿಗಾಗಿ ತುಂಬಾ ಮಿಡಿಯುತ್ತಿದೆ ಮತ್ತು ಸಾರ್ವಜನಿಕ ಹಣವನ್ನು ವಿನಿಯೋಗಿಸಿ ಟಿಪ್ಪು ಜಯಂತಿ ಆಚರಣೆ ಮಾಡಬಾರದೆಂದು ನೀವು ಹೇಳಿದ್ದೀರಿ. ನೀವು ಹೇಳುತ್ತಿರುವುದು ಸರಿಯಾಗಿದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಧಾರ್ಮಿಕ ಆಚರಣೆಗಳಂತಹ ಕಾರ್ಯಕ್ರಮಗಳಿಗೆ ಸರ್ಕಾರದ ಹಣ ವಿನಿಯೋಗ ಮಾಡಬಾರದು ಎಂಬುದು ನಿಮ್ಮ ನಿಲುವಾದರೆ ನೀವು ಮೈಸೂರು ದಸರಾ, ನದಿಗಳಿಗೆ ಬಾಗಿನ ಕೊಡುವುದು ಮುಂತಾದ ಪೂಜೆ ಮಾಡುವುದನ್ನು ಸಹ ವಿರೋಧಿಸಿದರೆ ನಿಮ್ಮ ನಿಲುವನ್ನು ಬೆಂಬಲಿಸಬಹುದು. ನಾನು ಸಹ ಟಿಪ್ಪುವಿನ ಅಭಿಮಾನಿ ಅಲ್ಲ. ನಮ್ಮದು ಜಾತ್ಯತೀತ ವ್ಯವಸ್ಥೆಯಾಗಿರುವ ಕಾರಣ ಸರ್ಕಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ನಾನು ಸಹ ವಿರೋಧಿಸುತ್ತೇನೆ.

ಅದಿರಲಿ, ಈಗ ಮತ್ತೆ ವಿಷಯಕ್ಕೆ ಬರೋಣ. ಕೊಂಕಣಿಗರು ಟಿಪ್ಪುವಿನಿಂದ ತೊಂದರೆಗೊಳಗಾದರು ಎಂದು ನೀವು ಹೇಳುತ್ತಿದ್ದೀರಿ. ನೀವು ಇತಿಹಾಸದಲ್ಲಿ ಮತ್ತಷ್ಟು ಹಿಂದಕ್ಕೆ ಹೋದರೆ ಕೊಂಕಣಿಗರೆಲ್ಲ ಗೋವಾದಿಂದ ಕರಾವಳಿಗೆ ವಲಸೆ ಬಂದವರು. ಅದಕ್ಕೆ ಕಾರಣವಾಗಿದ್ದು ಪೋರ್ಚುಗೀಸರ ದಾಳಿ ಮತ್ತು ರೋಮನ್ ಕೆಥೊಲಿಕರ ದಬ್ಬಾಳಿಕೆ. ನಮ್ಮ ಪೂರ್ವಜರಿಗೆ ಅವರು ಹೇಗೆ ಹಿಂಸೆ ಕೊಟ್ಟರು, ಹೇಗೆ ನಮ್ಮ ದೇವಸ್ಥಾನಗಳನ್ನು ಧ್ವಂಸಗೊಳಿಸಿದರು, ಮೂರ್ತಿಗಳನ್ನು ನಾಶ ಮಾಡಿದರು ಎಂಬುದನ್ನು ನೀವು ಕೇಳಿರಬಹುದು. ಆಗಿನ ಜಿಎಸ್‌ಬಿಗಳನ್ನು ಜಾತಿ ಭ್ರಷ್ಟರನ್ನಾಗಿ ಮಾಡಲಿಕ್ಕೆ ಅವರಿಗೆ ಗೋಮಾಂಸವನ್ನು ಕೂಡ ಒತ್ತಾಯದಿಂದ ತಿನ್ನಿಸಲಾಗಿತ್ತಂತೆ.

ಮೋಹನದಾಸ ಪೈಗಳೆ, ನೀವು ಬಿಜೆಪಿ ಕುರಿತು ಒಲವನ್ನು ಹೊಂದಿದ್ದೀರಿ ಮತ್ತು ಅವರ ಪೊಲಿಟ್‌ಬ್ಯೂರೊದಲ್ಲಿ ಸ್ಥಾನ ಗಿಟ್ಟಿಸಲು ಹಾತೊರೆಯುತ್ತಿದ್ದೀರಿ. ಹೀಗಾಗಿ ಗೋವಾದಲ್ಲಿರುವ ಬಿಜೆಪಿ ಸರ್ಕಾರದಿಂದ ನೀವು ಇವುಗಳನ್ನು ಮಾಡಿಸಬೇಕೆಂದು ನಾನು ನಿಮಗೆ ಸಲಹೆ ನೀಡುತ್ತಿದ್ದೇನೆ.

1. ನಾಶಗೊಳಿಸಿದ ಎಲ್ಲ ದೇವಾಲಯಗಳನ್ನು ಪುನರ್ ನಿರ್ಮಿಸಲಿ
2. ಮತಾಂತರಗೊಂಡ ಎಲ್ಲರಿಗೂ ಘರ್ ವಾಪ್ಸಿ ಮಾಡಲಿ
3. ಅಂದಿನ ದಾಳಿಕೋರರು ಜಿಎಸ್‌ಬಿಗಳನ್ನು ಅಪವಿತ್ರಗೊಳಿಸಿ ಜಾತಿಭ್ರಷ್ಟರನ್ನಾಗಿ ಮಾಡಲು ಗೋಮಾಂಸ ತಿನ್ನಿಸುತ್ತಿದ್ದ ಕಾರಣ ಈಗ ಗೋವಾದಲ್ಲಿ ಗೋವನ್ನು ವಧಿಸುವುದು, ಅದರ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಿ.
4. ಇದೆಲ್ಲದರ ಮುಖ್ಯ ಕುರುಹಾಗಿ ನಮಗೆ ಈಗ ಮೊದಲಿಗೆ ಕಾಣಸಿಗುವುದು ಫ್ರಾನ್ಸಿಸ್ ಕ್ಸೇವಿಯರ್. ಇವರಿಗೆ ಸಂತ ಪದವಿಯನ್ನೂ ನೀಡಲಾಗಿದೆ. ಪ್ರತಿ ವರ್ಷ ಅವರ ಹೆಸರಿನಲ್ಲಿ ಉತ್ಸವ ನಡೆಯುತ್ತದೆ ಮತ್ತು ಹತ್ತು ವರ್ಷಗಳಿಗೊಮ್ಮೆ ಅವರ ಮೃತದೇಹವನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಇದಕ್ಕೆ ಗೋವಾ ಸರ್ಕಾರ ನೀಡುವ ಎಲ್ಲ ನೆರವನ್ನೂ ನಿಲ್ಲಿಸಬೇಕೆಂದು ನೀವು ಕೇಳಬೇಕು. ಈ ಬಾರಿ ಅದು ಡಿಸೆಂಬರ್ 3ಕ್ಕೆ ಇರುವ ಕಾರಣ ಅದನ್ನು ಮಾಡಲು ಇನ್ನೂ ಸಾಕಷ್ಟು ಸಮಯವಿದೆ.
5. ಗೋವಾ ಕಾರ್ನಿವಲ್ ಎಂಬ ಪ್ರಸಿದ್ಧ ಕಾರ್ಯಕ್ರಮ ಕೂಡ ಧಾರ್ಮಿಕ ಹಬ್ಬವಾಗಿದೆ. ಅದನ್ನೂ ಕೂಡ ನಿಲ್ಲಿಸಿಬಿಡಿ.

tippuಅಷ್ಟೆ ಅಲ್ಲ, ನೀವು ಲಿಸ್ಬನ್‌ಗೆ (ಪ್ರೋರ್ಚುಗಲ್ ರಾಜಧಾನಿ) ಒಂದು ದಂಡಯಾತ್ರೆ ನಡೆಸಿ ನಮ್ಮ ಪೂರ್ವಜರಿಂದ ಲೂಟಿ ಮಾಡಿಕೊಂಡು ಹೋದ ಎಲ್ಲ ಸೊತ್ತುಗಳನ್ನು ಮರಳಿ ತರಿಸಿಕೊಳ್ಳಬೇಕೆಂದು ನಾನು ಸಲಹೆ ನೀಡುತ್ತಿದ್ದೇನೆ. ಇದಕ್ಕಾಗಿ ಬೇಕಾದರೆ ಒಂದು ಸಹಿ ಸಂಗ್ರಹ ಅಭಿಯಾನ ಕೂಡ ಮಾಡಬಹುದು. ಈಗಿನ ರಕ್ಷಣಾ ಸಚಿವರು ‘ಆಮ್ಚಿಗೆಲೊ’ ಆಗಿರುವ ಕಾರಣ ಅದೇನು ಕಷ್ಟ ಆಗಲಿಕ್ಕಿಲ್ಲ. ಮಾತ್ರವಲ್ಲ ರೈಲ್ವೇ ಸಚಿವರು ಕೂಡ ಜಿಎಸ್‌ಬಿ ಆಗಿರುವ ಕಾರಣ ಇವರು ಜನರು ಮತ್ತು ಸರಕುಗಳ ತ್ವರಿತ ಸಾಗಾಣಿಕೆಗೆ ವ್ಯವಸ್ಥೆ ಮಾಡಬಲ್ಲರು.

ಅಂದ ಹಾಗೆ ಟಿಪ್ಪು ಜಯಂತಿಗೆ ಬೆಂಬಲ ನೀಡಿರುವ ಕರ್ನಾಟಕ ಸರ್ಕಾರದಲ್ಲಿ ದೇಶಪಾಂಡೆ ಎಂಬ ಜಿಎಸ್‌ಬಿ ಸಚಿವರಿದ್ದಾರೆ. ಹೀಗಾಗಿ ಅವರನ್ನು ತಕ್ಷಣದಿಂದ ಜಾರಿಗೆ ಬರುವತೆ ಜಾತಿಭ್ರಷ್ಟನನ್ನಾಗಿ ಮಾಡಬೇಕು.

ಈ ನಡುವೆ ನಾನು ಇನ್ನೊಬ್ಬ ಪ್ರಸಿದ್ಧ ಜಿಎಸ್‌ಬಿ- ನಿಮ್ಮ ಖಾಸಾ ಗೆಳೆಯ- ವಿಜಯ ಮಲ್ಯರನ್ನ ಉಲ್ಲೇಖಿಸದಿದ್ದರೆ ಈ ಪತ್ರ ಅಪೂರ್ಣ ಅನಿಸಬಹುದು. ಅವರು ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ನಾಮ ಇಟ್ಟು ಇಂಗ್ಲಂಡಿಗೆ ಹೋದರೇನಂತೆ? ನೀವಂತೂ ಅವರನ್ನು ಸಮರ್ಥಿಸಿಕೊಳ್ಳುತ್ತಲೆ ಇದ್ದಿರಿ.

ಅದರಲ್ಲಿ ಸ್ವಲ್ಪ ದುಡ್ಡನ್ನ ಮಲ್ಯ ಮಾಮ್ ಒಳ್ಳೆಯ ಉದ್ದೇಶಕ್ಕೂ ಬಳಕೆ ಮಾಡಿದ್ದಾರೆ. ಮಲ್ಯರು ಟಿಪ್ಪುವಿನ ಖಡ್ಗವನ್ನು ಖರೀದಿಸಿ ಅದನ್ನ ತೆಂಡ್ಲೆ ಉಪ್ಕರಿ (ತೊಂಡೆಕಾಯಿ ಪಲ್ಯ) ಮತ್ತು ಮೊಗ್ಗೆಂ ಕೊದ್ದೆಲ್ (ಸೌತೆಕಾಯಿಯ ಒಂದು ಅಡುಗೆ) ಮಾಡಲಿಕ್ಕೆ ತರಕಾರಿ ಕತ್ತರಿಸಲು ಆ ಖಡ್ಗವನ್ನ ಬಳಸಿ ಟಿಪ್ಪುವಿನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಸಾವಿರಾರು ಸಮಾಜ ಬಾಂಧವರನ್ನು ಹತ್ಯೆ ಮಾಡಲು ಟಿಪ್ಪು ಬಳಸಿರಬಹುದಾದ ಆ ಖಡ್ಗವನ್ನ ತರಕಾರಿ ಕತ್ತರಿಸಲಿಕ್ಕೆ ಮಲ್ಯರು ಬಳಸುತ್ತಿರುವುದಂತೂ ಟಿಪ್ಪುವಿಗೆ ಮಾಡಿದ ಘೋರ ಅವಮಾನವೇ ಸರಿ!

ಸಪ್ರೇಮ ನಮಸ್ಕಾರ!
ನಿಮ್ಮ ಕೊಂಕಣಿ ಭಾಷಿಕ ಬಂಧು
-ನರೇಂದ್ರ ನಾಯಕ್

2 Comments

  1. mm shaik
    November 5, 2016
  2. shrikant prabhu
    November 5, 2016

Add Comment

Leave a Reply