Quantcast

ಸಾವನ್ನು ಸಂಭ್ರಮಿಸುವ ಸಮಾಜದಲ್ಲಿ ಎನ್ಕೌಂಟರ್

VIEW POINT

naa-divakarನಾ ದಿವಾಕರ

cartoon: ಸತೀಶ್ ಆಚಾರ್ಯ

ಯಾವುದೇ ಪೊಲೀಸ್ ಕಾರ್ಯಾಚರಣೆಯಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಂದ ಹತನಾದರೆ ಭಾರತೀಯ ಕಾನೂನಿನಲ್ಲಿ ಅಂತಹ ಪ್ರಕರಣವನ್ನು ವಿಭಿನ್ನವಾಗಿ ಪರಿಗಣಿಸಲಾಗುತ್ತದೆ.

ನ್ಯಾಯಮೂರ್ತಿ ಎ.ಎಸ್.ಆನಂದ್ ಅವರು ಹೇಳುವಂತೆ ಪೊಲೀಸರಿಗೆ ಯಾವುದೇ ವ್ಯಕ್ತಿಯ ಜೀವ ತೆಗೆಯುವ ಅಧಿಕಾರ ಇರುವುದಿಲ್ಲ. ಯಾವುದೇ ಪೊಲೀಸ್ ಅಧಿಕಾರಿ ವ್ಯಕ್ತಿಯೋರ್ವನನ್ನು ಹತ್ಯೆಮಾಡಿದಲ್ಲಿ ಅದು ಕಾನೂನಿನನ್ವಯ ದಂಡನೀಯ ನರಹತ್ಯೆ (Culpable Homicide) ಎಂದೇ ಪರಿಗಣಿಸಲ್ಪಡುತ್ತದೆ. ಒಂದು ವೇಳೆ ಈ ರೀತಿಯ ಪ್ರಕರಣವನ್ನು ಅನ್ಯರೀತಿಯಲ್ಲಿ ಪರಿಗಣಿಸಬೇಕಾದರೆ ಪೊಲೀಸರು ಆತ್ಮರಕ್ಷಣೆಗಾಗಿ ಹತ್ಯೆಗೈದಿರುವುದನ್ನು ನಿರೂಪಿಸಬೇಕಾಗುತ್ತದೆ. ಹಾಗಾಗದೆ ಇದ್ದಲ್ಲಿ ಯಾವುದೇ ಎನ್ಕೌಂಟರ್ ಹತ್ಯೆಯನ್ನು ದಂಡನೀಯ ನರಹತ್ಯೆ ಎಂದೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಆನಂದ್ ಹೇಳುತ್ತಾರೆ.

bhopal-encounter-satish-acharya3ಕಾನೂನಿನ ಈ ಅಂಶವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಆಗಾಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೆನಪಿಸುತ್ತಲೇ ಇರುವ ಕಾರಣವೆಂದರೆ ಅನೇಕ ಸಂದರ್ಭಗಳಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಮತ್ತು ಸೇನಾ ಕಾರ್ಯಾಚರಣೆಯಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಶಂಕಿತ ಪಾತಕಿಗಳ-ಭಯೋತ್ಪಾದಕರ ಎನ್ಕೌಂಟರ್ ನಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಹಲವು ವೇಳೆ ಹತ್ಯೆಗೊಳಗಾಗದವರು ಗುರುತು ಹಿಡಿಯುವಲ್ಲೂ ಪೊಲೀಸರು ವಿಫಲವಾಗಿರುವುದುಂಟು.

2002ರಲ್ಲಿ ದೆಹಲಿಯ ಅನ್ಸಾಲ್ ಪ್ಲಾಝಾದಲ್ಲಿ ನಡೆದ ಎನ್ಕೌಂಟರ್ ಪ್ರಕರಣ ಈ ನಿಟ್ಟಿನಲ್ಲಿ ಉತ್ತಮ ನಿದರ್ಶನ. ಪೊಲೀಸರಿಗೆ ಎನ್ಕೌಂಟರ್ ಪ್ರಕರಣಗಳಲ್ಲಿ ನ್ಯಾಯಾಂಗ ರಕ್ಷಣೆ ದೊರೆಯುವುದಾದರೂ, ಇತ್ತೀಚಿನ ದಿನಗಳಲ್ಲಿ ಈ ರೀತಿಯ ನಕಲಿ ಎನ್ಕೌಂಟರ್ ಹೆಚ್ಚಾಗುತ್ತಿರುವುದು ದೇಶದ ನ್ಯಾಯವ್ಯವಸ್ಥೆಗೇ ಗಂಭೀರ ಸವಾಲಾಗಿ ಪರಿಣಮಿಸಿದೆ. ಗುಜರಾತ್ ನ ಸೊಹರಾಬುದ್ದಿನ್, ಕೌಸರ್ಬಿ, ಇಶ್ರತ್ ಜಹಾನ್ ಪ್ರಕರಣ ಮತ್ತು 2000ನೇ ಇಸ್ವಿಯಲ್ಲಿ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಐವರು ಕಾಶ್ಮೀರಿಗಳನ್ನು ಶಂಕಿತ ಉಗ್ರರೆಂದು ಹತ್ಯೆಗೈದಿದ್ದು, ಮಾವೊವಾದಿಗಳ ನಿತ್ಯ ಮಾರಣ ಹೋಮ ಇವೆಲ್ಲವೂ ಸ್ಪಷ್ಟ ನಿದರ್ಶನಗಳಷ್ಟೆ. ಇತ್ತೀಚಿನ ಭೂಪಾಲ್ ಪ್ರಕರಣ ಒಂದು ಹೊಸ ಸೇರ್ಪಡೆ.

ಎನ್ಕೌಂಟರ್ ಪ್ರಕರಣ ಸಮರ್ಥನೀಯವೇ ಅಥವಾ ಅಲ್ಲವೇ ಎಂದು ನಿರ್ಧರಿಸುವವರಾರು? ಯಾವುದೇ ನಾಗರಿಕ ಸಮಾಜದಲ್ಲಿ ಈ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಅಪರಾಧ ಮಾಡಿದವರಿಗೇ ನೀಡಲಾಗುವುದಿಲ್ಲ. ಮಾನವ ಹಕ್ಕುಗಳ ಆಯೋಗದ ನಿಯಮದನ್ವಯ ಪೊಲೀಸ್ ಕಾರ್ಯಾಚರಣೆಯಲ್ಲಿ ಹತ್ಯೆಗೊಳಗಾಗುವ ಎಲ್ಲ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ಮಡಿದವರ ಹತ್ತಿರದ ಸಂಬಂಧಿಗಳನ್ನು ತನಿಖೆಯಲ್ಲಿ ಒಳಗೊಳ್ಳಬೇಕು 2009ರ ತೀರ್ಪೊಂದರಲ್ಲಿ ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯವು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಪ್ರತಿಯೊಂದು ಎನ್ಕೌಂಟರ್ ಪ್ರಕರಣದಲ್ಲೂ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು (ಎಫ್.ಐ.ಆರ್) ದಾಖಲಿಸಲು ಸೂಚಿಸಿದೆ. ಪ್ರಸ್ತುತ ಈ ಆದೇಶಕ್ಕೆ ಸವೋಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.

ಆದರೆ ಮಾನವ ಹಕ್ಕು ಆಯೋಗದ ನಿಯಮಗಳನ್ನು ಅನೇಕ ರಾಜ್ಯಗಳು ಪಾಲಿಸುವುದಿಲ್ಲ ಮತ್ತು ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಇರುವುದಿಲ್ಲ. ಎರಡನೆಯದಾಗಿ ಈ ತನಿಖೆಯನ್ನು ನ್ಯಾಯಾಂಗ ದಂಡಾಧಿಕಾರಿಗಳು ವಹಿಸಿಕೊಳ್ಳಬೇಕೇ ಅಥವಾ ಕಾರ್ಯನಿರ್ವಾಹಕ ದಂಡಾಧಿಕಾರಿ ವಹಿಸಿಕೊಳ್ಳಬೇಕೇ ಎಂದು ಸ್ಪಷ್ಟವಾಗಿ ಸೂಚಿಸಲಾಗಿಲ್ಲ. ಸ್ವಾಭಾವಿಕ ನ್ಯಾಯದ ಪರಿಧಿಯಲ್ಲಿ ಪೊಲೀಸರಿಂದ ಸ್ವತಂತ್ರವಾಗಿರುವ ಸಂಸ್ಥೆಯೇ ತನಿಖೆ ನಡೆಸುವುದು ಸೂಕ್ತ ಎಂದು ಹೇಳಲಾಗುವುದರಿಂದ ಆಯೋಗವು ಈ ಕುರಿತು ಸ್ಪಷ್ಟ ಆದೇಶ ನೀಡಿಲ್ಲ. ಆದರೆ ಅಧಿಕಾರದಲ್ಲಿರುವವರು ಕಾನೂನು ಉಲ್ಲಂಘನೆ ಮಾಡುವುದು ಸರ್ವೇ ಸಾಮಾನ್ಯವಾಗಿರುವ ಸನ್ನಿವೇಶದಲ್ಲಿ ಈ ಸ್ವಾಭಾವಿಕ ನಿಯಮವನ್ನು ಪಾಲಿಸುವುದು ದುಸ್ಸಾಧ್ಯವೇ ಸರಿ.

ಪೊಲೀಸರ ತನಿಖೆ ಮತ್ತು ದಂಡಾಧಿಕಾರಿಗಳ ತನಿಖೆ ಪ್ರತ್ಯೇಕವಾಗಿಯೇ ನಡೆದರೂ ಒಟ್ಟಿಗೇ ನಡೆಯುವುದು ಕಾನೂನು ರೀತ್ಯಾ ಸಮರ್ಥನೀಯವೆನಿಸಿಕೊಳ್ಳುತ್ತದೆ. ಸಿ.ಆರ್.ಪಿ.ಸಿ ಸೆಕ್ಷನ್ 174ರ ಪ್ರಕಾರ ಪ್ರತಿಯೊಂದು ಅಸ್ವಾಭಾವಿಕ ಸಾವಿನ ಪ್ರಕರಣದಲ್ಲೂ ಪಂಚನಾಮೆ, ಮಹಜರು ನಡೆಸುವ ಮೂಲಕ ಸಾವಿಗೆ ನಿಜವಾದ ಕಾರಣವನ್ನು ಕಂಡುಹಿಡಿಯುವುದು ಕಡ್ಡಾಯವಾಗಿರುತ್ತದೆ. ಯಾವುದೇ ನಿಷ್ಪಕ್ಷಪಾತ ಪಂಚನಾಮೆಯಲ್ಲಿ ಸಾವಿಗೆ ಕಾರಣವನ್ನು ಸ್ಪಷ್ಟವಾಗಿ ದಾಖಲಿಸಲಾಗುತ್ತದೆ. ನ್ಯಾಯಾಂಗ ತನಿಖೆಯ ಹೊರತಾಗಿ ಪೊಲೀಸ್ ತನಿಖೆಯನ್ನೂ ಕೈಗೊಳ್ಳಬೇಕೆಂದು ಸಿ.ಆರ್.ಪಿ.ಸಿ ನಿರ್ದೇಶಿಸುತ್ತದೆ. ಹಾಗಾಗಿ ನ್ಯಾಯಾಂಗದ ದೃಷ್ಟಿಯಲ್ಲಿ ಪ್ರತಿಯೊಂದು ಎನ್ಕೌಂಟರ್ ಹತ್ಯೆಯೂ ನರಹತ್ಯೆಯೇ ಆಗಿರುತ್ತದೆ. ಆದರೆ ಸಾಮಾನ್ಯ ಜನತೆಗೆ ಆತ್ಮರಕ್ಷಣೆಗಾಗಿ ನೀಡಲಾಗುವ ಅಧಿಕಾರಕ್ಕಿಂತಲೂ ಹೆಚ್ಚಿನ ಅಧಿಕಾರವನ್ನು ಪೊಲೀಸರಿಗೆ, ಸೇನೆಗೆ ನೀಡಲಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಅನೇಕ ಎನ್ಕೌಂಟರ್ ಪ್ರಕರಣಗಳು ಪ್ರಶ್ನಾರ್ಹವಾಗಿದ್ದು ನ್ಯಾಯಾಂಗದ ಪರಾಮರ್ಶೆಗೊಳಗಾಗಬೇಕಾಗಿದೆ.

ಆರಕ್ಷಕರ ರಕ್ಷಣೆ- ಅತ್ತ ದರಿ ಇತ್ತ ಪುಲಿ

ಸಮಾಜದಲ್ಲಿ ಸಮಾಜಘಾತುಕ ಶಕ್ತಿಗಳು, ಹಿಂಸಾತ್ಮಕ ಪ್ರವೃತ್ತಿಗಳು ಹೆಚ್ಚುತ್ತಿರುವಾಗ ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ ಪೊಲೀಸರ ಮೇಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಜಾಸತ್ತಾತ್ಮಕ ಹೋರಾಟಗಳೂ ಸಹ ಸರ್ಕಾರದ ನಿರ್ಲಕ್ಷ್ಯದಿಂದ ಹಿಂಸಾತ್ಮಕ ಸ್ವರೂಪ ತಾಳುವುದು ಸಾಮಾನ್ಯವಾಗಿದೆ. ಕೋಮು ಸಂಘರ್ಷಗಳು, ಭಯೋತ್ಪಾದಕ ಕೃತ್ಯಗಳು, ಅಲ್ಪಸಂಖ್ಯಾತರ ಮೇಲಿನ ದಾಳಿ, ಜಾತಿ ಸಂಘರ್ಷಗಳು ಹೀಗೆ ಹತ್ತು ಹಲವಾರು ಸ್ವರೂಪದಲ್ಲಿ ಹಿಂಸೆ ತಾಂಡವಾಡುತ್ತಿದೆ. ಪ್ರತಿಯೊಂದು ಸಂದರ್ಭದಲ್ಲೂ ಪೊಲೀಸರ ಪಾತ್ರ ಮಹತ್ವ ವಹಿಸುತ್ತದೆ.

ಹಲವಾರು ಪ್ರಕರಣಗಳಲ್ಲಿ ನಾಗರಿಕರು ಪೊಲೀಸರ ಮೇಲೆ ಕಲ್ಲು ತೂರುವುದು ಮತ್ತು ಹಲ್ಲೆ ಮಾಡುವುದೂ ಉಂಟು. ಇಂತಹ ಸನ್ನಿವೇಶಗಳಲ್ಲಿ ಪೊಲೀಸ್ ಅಧಿಕಾರಿಗಳು ಎಷ್ಟೇ ಸಂಯಮ ತೋರಿದರೂ, ಸಹನೆಯ ಕಟ್ಟೆ ಒಡೆದು, ಲಾಠಿ ಪ್ರಹಾರ, ಗೋಲಿಬಾರ್ ಗೆ ತೊಡಗುವುದುಂಟು. ಈ ಸನ್ನಿವೇಶಗಳಲ್ಲಿ ಆಳುವ ರಾಜಕೀಯ ಪಕ್ಷಗಳೂ ತಮ್ಮ ಪಕ್ಷ ರಾಜಕಾರಣವನ್ನು ಉಪಯೋಗಿಸುವುದುಂಟು. ಹಾಗಾಗಿ ಪೊಲೀಸ್ ಅಧಿಕಾರಿಗಳು ಆಳ್ವಿಕರ, ರಾಜಕಾರಣಿಗಳ ಕೈಗೊಂಬೆಗಳಾಗಿ ವರ್ತಿಸಬೇಕಾಗುತ್ತದೆ.

ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಅನೇಕ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಆಳ್ವಿಕರ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ.ಆದರೂ ಯಾವುದೇ ನಾಗರಿಕನ ಹತ್ಯೆ ಮಾಡುವ ಅಧಿಕಾರ ಕಾನೂನಿಗಾಗಲೀ, ಸರ್ಕಾರಗಳಿಗಾಗಲೀ ಇರುವುದಿಲ್ಲ. ಅಂತಾರಾಷ್ಟ್ರೀಯ ಸಂಹಿತೆಗಳ ಪ್ರಕಾರ ಮರಣದಂಡನೆ ವಿಧಿಸುವುದೂ ಅಪರಾಧವೇ ಆಗುತ್ತದೆ. ಆದರೆ ಭಾರತದಲ್ಲಿ ಮರಣದಂಡನೆಯನ್ನು ಇನ್ನೂ ಒಂದು ಶಿಕ್ಷೆ ಎಂದೇ ಪರಿಗಣಿಸಲಾಗುತ್ತದೆ. ಎಂತಹ ಪಾತಕಿಯೇ ಆದರೂ ಕಾನೂನಿನನ್ವಯ ವಿಚಾರಣೆ ನಡೆಸಿ, ಶಿಕ್ಷೆ ವಿಧಿಸಬೇಕೆಂದೇ ಅಂತಾರಾಷ್ಟ್ರೀಯ ನ್ಯಾಯಸಂಹಿತೆ ಸೂಚಿಸುತ್ತದೆ.

ಎಲ್ಲ ಸಂದರ್ಭಗಳಲ್ಲೂ ಪೊಲೀಸ್ ಅಧಿಕಾರಿಗಳು ಸಂಯಮದಿಂದ ವರ್ತಿಸಿ, ಅಪರಾಧಿಗಳ ಪ್ರಾಣಹಾನಿ ಮಾಡದೆ, ಬಂಧಿಸಬೇಕೆಂದು ಬಯಸುವುದೂ ಅವಾಸ್ತವಿಕವಾಗುತ್ತದೆ. ಎನ್ಕೌಂಟರ್ ಕೊಲೆಗಳು ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಎನ್ಕೌಂಟರ್ ಸುತ್ತಲಿನ ವಿದ್ಯಮಾನಗಳನ್ನು ವಸ್ತುನಿಷ್ಠವಾಗಿ ತನಿಖೆ ನಡೆಸುವ ಹೊಣೆಗಾರಿಕೆ ಸರ್ಕಾರದ ಮೇಲಿರುತ್ತದೆ. ಸರ್ಕಾರ ಸಂವಿಧಾನ ಬದ್ಧವಾಗಿದ್ದಲ್ಲಿ ಮಾತ್ರವೇ ಇಂತಹ ತನಿಖೆ ಸಾಧ್ಯ. ಕೆಲವು ಪ್ರಕ್ಷುಬ್ಧ ಸಾಮಾಜಿಕ ವಾತಾವರಣದಲ್ಲಿ ಪೊಲೀಸರ ಕಾರ್ಯಾಚರಣೆ ಕ್ಲಿಷ್ಟವಾಗಿರುತ್ತದೆ.

ಸರ್ಕಾರಗಳು ಜನತೆಯ ಬೇಡಿಕೆಗಳಿಗೆ, ಆಗ್ರಹಗಳಿಗೆ, ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸದೆ ಹೋದಲ್ಲಿ ಸಂಘಟಿತ ಹೋರಾಟಕ್ಕೆ ತೊಡಗುವ ಸಾಮಾನ್ಯ ಜನತೆ ಹಿಂಸಾತ್ಮಕ ಪ್ರವೃತ್ತಿ ಅನುಸರಿಸುವುದು ಸ್ವಾಭಾವಿಕ. ಇಂತಹ ಸನ್ನಿವೇಶದಲ್ಲಿ ಪೊಲೀಸರ ಸಂಯಮ ಅವಶ್ಯಕವಾಗಿರುತ್ತದೆ. ಆದರೆ ವಿವಿಧ ರೀತಿಯ ಒತ್ತಡಗಳಿಗೆ ಬಲಿಯಾಗುವ ಪೊಲೀಸ್ ಅಧಿಕಾರಿಗಳು ತಮ್ಮ ಇಚ್ಚೆಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗುತ್ತದೆ. ಒಂದು ರೀತಿಯಲ್ಲಿ ಪೊಲೀಸ್ ಅಧಿಕಾರಿಗಳು ತ್ರಿಶಂಕು ಸ್ಥಿತಿಯನ್ನೇ ಅನುಭವಿಸುತ್ತಾರೆಂದು ಹೇಳಬಹುದು. ಎನ್ಕೌಂಟರ್ ಪ್ರಕರಣಗಳಲ್ಲೂ ಇದೇ ಪ್ರವೃತ್ತಿಯನ್ನು ಕಾಣಬಹುದು. ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸಲು ತಮ್ಮ ಜೀವವನ್ನೇ ಪಣಕ್ಕಿಡುವ ಆರಕ್ಷಕ ಪಡೆಗಳನ್ನು ರಕ್ಷಿಸುವವರಾರು ಎಂಬ ಸೂಕ್ಷ್ಮ ಪ್ರಶ್ನೆಗೆ ಉತ್ತರ ಹೇಳುವುದು ಸುಲಭ ಸಾಧ್ಯವಲ್ಲ.

ಸಾವನ್ನು ಸಂಭ್ರಮಿಸುವ ವಿಕೃತಿ ಏಕೆ ?

ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವಂತೆಯೇ ಸ್ಥಾಪಿತ ವ್ಯವಸ್ಥೆಯನ್ನು ಆರಾಧಿಸುವ ಶಕ್ತಿಗಳ ವಿಕೃತಿಯೂ ಪರಾಕಾಷ್ಠೆ ತಲುಪುತ್ತಿದೆ. ಇಲ್ಲಿ ಸಾವು ಮಾನವ ಸಂವೇದನೆಯನ್ನು ವಿಚಲಿತಗೊಳಿಸುವುದಿಲ್ಲ. ಬದಲಾಗಿ ಪ್ರತಿಯೊಂದು ಸಾವು ತನ್ನದೇ ಆದ ಅಸ್ಮಿತೆಯನ್ನು ಪಡೆದುಕೊಳ್ಳುತ್ತದೆ. ಇಹಲೋಕ ತ್ಯಜಿಸುವವರಿಗೆ ಸಾವಿನ ಅರ್ಹತಾ ಪತ್ರವನ್ನು ಅಧಿಕೃತವಾಗಿಯೇ ಸಿದ್ಧಪಡಿಸಲಾಗಿರುತ್ತದೆ.

ಈ ಸಾವಿನ ಅರ್ಹತಾ ಪ್ರಮಾಣ ಪತ್ರ ಪಡೆದಿರುವವರು ದಾರುಣ ಹತ್ಯೆಗೊಳಗಾದರೂ ಸಂಭ್ರಮದ ಸರಕಾಗುತ್ತಾರೆ. ಇಂಥವರ ಹತ್ಯೆಯಾಗಲೀ, ಸಹಜ ಸಾವು ಆಗಲಿ ಸಂಭ್ರಮದ ಕ್ಷಣವಾಗುತ್ತದೆ. ನ್ಯಾಯ ವ್ಯವಸ್ಥೆಯ ನಿಯಮಗಳ ಉಲ್ಲಂಘನೆಯೂ ಸಹ ದೇಶಭಕ್ತಿ ಅಥವಾ ದೇಶದ ಹೆಮ್ಮೆಯ ವಿಷಯವಾಗುವುದನ್ನು ಇಂತಹ ಸಂದರ್ಭಗಳಲ್ಲಿ ಕಾಣಬಹುದು. ಭೂಪಾಲ್ ಘಟನೆಯಲ್ಲೂ ಇದೇ ಉನ್ಮಾದದ ಛಾಯೆಯನ್ನು ಕಾಣಬಹುದು.

ಪೊಲೀಸ್ ಎನ್ಕೌಂಟರ್ನಲ್ಲಿ ಹತರಾದ ಮಾತ್ರಕ್ಕೆ ನಿರಪರಾಧಿಗಳು ಅಥವಾ ವಿಚಾರಣಾಧೀನ ಖೈದಿಗಳು ಅಪರಾಧಿಗಳಾಗಿಬಿಡುವುದಿಲ್ಲ. ಸಿಮಿ ಸಂಘಟನೆಯ ಕಾರ್ಯಕರ್ತರು ಅಪರಾಧಿಗಳೇ ಆಗಿದ್ದಲ್ಲಿ ನ್ಯಾಯದ ಕಟಕಟೆಯಲ್ಲಿ ನಿರ್ಧಾರವಾಗಬೇಕೇ ಹೊರತು, ಪೊಲೀಸರ ಕಾರ್ಯಾಚರಣೆಯಲ್ಲಿ ಅಲ್ಲ. ಜೈಲಿನಿಂದ ಪರಾರಿಯಾಗಿದ್ದ ಸಿಮಿ ಕಾರ್ಯಕರ್ತರನ್ನು ಭಯೋತ್ಪಾದನೆಯ ಆರೋಪದ ಮೇಲೆ ಬಂಧಿಸಿರಲಿಲ್ಲ. ಅಥವಾ ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ ಆರೋಪಿಗಳ ಕೈಯ್ಯಲ್ಲಿ ಶಸ್ತ್ರಾಸ್ತ್ರಗಳಿರಲಿಲ್ಲ.

bhopal-encounter-satish-acharya2ಗುಂಡಿನ ಚಕಮಕಿ ನಡೆದಿಲ್ಲ. ಹಾಗಾದಲ್ಲಿ ಎನ್ಕೌಂಟರ್ ನಡೆದದ್ದಾದರೂ ಏಕೆ? ಬಂದೂಕಿನ ನಳಿಗೆಯ ಮೂಲಕ ನ್ಯಾಯ ತೀರ್ಮಾನ ಮಾಡುವ ಬ್ರಿಟಿಷರ ಕ್ರೂರ ಪದ್ಧತಿ 70 ವರ್ಷಗಳ ಪ್ರಜಾತಂತ್ರದಲ್ಲೂ ಜಾರಿಯಲ್ಲಿರಬೇಕೇ? ದೇಶದ ಆಂತರಿಕ ವ್ಯವಸ್ಥೆಗೆ ಧಕ್ಕೆ ಉಂಟಾಗುವಂತಹ ಸಂದರ್ಭದಲ್ಲಿ, ಆರೋಪಿಗಳು ಶಸ್ತ್ರಾಸ್ತ್ರಗಳಿಂದ ಕಾನೂನು ಪಾಲಕರ ವಿರುದ್ಧ ಹೋರಾಡಿದ್ದಲ್ಲಿ ಎನ್ಕೌಂಟರ್ ಒಂದು ಅನಿವಾರ್ಯ ಕ್ರಮವಾಗಬಹುದು. ಅದು ರಣಾಂಗಣ ನ್ಯಾಯಕ್ಕೆ ಒಳಪಡುವ ಒಂದು ವಿದ್ಯಮಾನ. ಆದರೆ ಭೂಪಾಲ್ ಪ್ರಕರಣದಂತಹ ಹಲವಾರು ಪ್ರಕರಣಗಳಲ್ಲಿ ಇಂತಹುದೇ ರಣಾಂಗಣ ನ್ಯಾಯವನ್ನು ಕಾಣುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ.

ಇನ್ನೂ ಹೆಚ್ಚಿನ ದುರಂತವೆಂದರೆ ಇಂತಹ ವಿಕೃತಿಗಳನ್ನು, ಕ್ರೌರ್ಯವನ್ನು, ಹಿಂಸಾತ್ಮಕ ಧೋರಣೆಯನ್ನು ವಿಜೃಂಭಿಸುವ ಮನೋಭಾವ. ಸಿಮಿ ಕಾರ್ಯಕರ್ತರ ಸಾವನ್ನು ಸಂಭ್ರಮಿಸುವ, ಹೆಮ್ಮೆಯಿಂದ ಮೆರೆಯುವ ವಿಕೃತ ಮನಸ್ಸುಗಳೇ ಕಲ್ಬುರ್ಗಿ, ಪನ್ಸಾರೆ, ಧಾಬೋಲ್ಕರ್ ಅವರ ಹತ್ಯೆಯನ್ನೂ ಸಂಭ್ರಮಿಸುತ್ತವೆ. ಸ್ಥಾಪಿತ ಸಾಂಸ್ಕೃತಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಪ್ರತಿರೋಧಿಸುವ ಪ್ರತಿಯೊಬ್ಬ ವ್ಯಕ್ತಿಯೂ ಇಲ್ಲಿ ಸಾವಿನ ಅರ್ಹತಾ ಪ್ರಮಾಣ ಪತ್ರ ಪಡೆಯುವುದನ್ನು ಕಾಣಬಹುದು.

ಪ್ರತಿರೋಧದ ದನಿಯನ್ನೇ ಶಿಕ್ಷಾರ್ಹ ಎಂದು ಪರಿಗಣಿಸುವುದು ಸರ್ವಾಧಿಕಾರದ ಲಕ್ಷಣ. ಈ ಪ್ರತಿರೋಧದ ದನಿಗೆ ಸಾವು ಒಂದೇ ಶಿಕ್ಷೆ ಎಂದು ಭಾವಿಸುವುದು ಸರ್ವಾಧಿಕಾರದ ವಿಕೃತ ಸ್ವರೂಪ. ಈ ವಿಕೃತ ಪ್ರಜಾತಂತ್ರ ವ್ಯವಸ್ಥೆಯನ್ನು ನಾವಿಂದು ಕಾಣುತ್ತಿದ್ದೇವೆ. ಎನ್ಕೌಂಟರ್ ಎಂಬ ವಿದ್ಯಮಾನವೇ ಮಾನವ ವಿರೋಧಿ ನೆಲೆಯಲ್ಲಿ ರೂಪುಗೊಂಡ ಸಂವೇದನೆಯೇ ಇಲ್ಲದ ಆಳುವ ವರ್ಗಗಳ ವಿಕೃತ ಧೋರಣೆ. ಇದರ ಸಮರ್ಥನೆ ಅಥವಾ ಖಂಡನೆಗಿಂತಲೂ ಹೆಚ್ಚಾಗಿ ಈ ದೇಶದಲ್ಲಿ ನ್ಯಾಯ ವ್ಯವಸ್ಥೆ ಜೀವಂತವಾಗಿದೆಯೋ ಇಲ್ಲವೋ, ನ್ಯಾಯ ವ್ಯವಸ್ಥೆಯಲ್ಲಿ ಮಾನವೀನ ಸಂವೇದನೆ ಇರುವುದೋ ಇಲ್ಲವೋ ಎಂದು ನಿರ್ಧರಿಸಲು ಇದು ಮಾನದಂಡವಾಗುತ್ತದೆ.

Add Comment

Leave a Reply