Quantcast

ಅಲೆ ತಾಕಿದರೆ ದಡ..

bidaloti ranganath

ಬಿದಲೋಟಿ ರಂಗನಾಥ್

 

ಸಹೃದಯಿ ಕವಿ ವಾಸುದೇವ ನಾಡಿಗರ 6ನೇ ಕವನ ಸಂಕಲನ ‘ಅಲೆ ತಾಕಿದರೆ ದಡ’ ಬಿಡುಗಡೆಗೊಂಡಿದೆ.

ಸ್ವಚ್ಚಂದ ಬದುಕಿನ ಜೊತೆ ತೂಗಾಕಿಕೊಂಡಿರುವ ಮನಸುಗಳೇ ಹೀಗೆ, ಬದುಕಿನ ಜಂಜಾಟದ ನಡುವೆ ಗುರಿ ತಲುಪಬೇಕಾದರೆ ಸಿಕ್ಕಿಕೊಳ್ಳುವ ಮುಳ್ಳುಗಳ ಕಿತ್ತೆಸೆದೇ ಸಾಗುವ ಅನಿವಾರ್ಯತೆ ಎದುರಾದಾಗ, ನೋವಾಗುತ್ತದೆಯೇನೊ ಎಂಬ ಭಾವದಲಿ ಬದುಕುವ ಜೀವಿಗಳು. ಸಹಜವಾಗಿ ಕವಿಯಾಗತ್ತಾರೆ. ಅಂತಹ ತಾಯ್ತನ ಕವಿಗೆ ಬೇಕು ಕೂಡ. ಆ ಸಾಲಿನಲ್ಲಿ ನಾಡಿಗರು ನಿಲ್ಲುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಈ ಸಂಕಲನದ ಪದ್ಯಒಂದರಲ್ಲಿ ನೋಡುವಂತೆ,

vasudev nadig‘ಚಿತೆಗೆ ಬೆಂಕಿಯಿಟ್ಟ ಬೆರಳುಗಳಲ್ಲಿದೆ ಕಪ್ಪು ಮಸಿಯೀಗಲೂ
ಹೊತ್ತ ಹೆಗಲು ಹಿಡಿದ ಬೆರಳು ದಾಟಿಸಿದ ಕಾಲ್ಗಳು
ಎಲ್ಲಾ ಲಟ ಲಟನೆ ಸಿಡಿದು ಯೋಚಿಸಿದ್ದ ಮೆದುಳೂ
ಭಾವ ಬಿತ್ತಿದ್ದ ಹೃದಯ ಬದುಕ ಕೊಟ್ಟಿದ್ದ ಉಸಿರು
ಗಾಳಿಗಳಲ್ಲಿ ತೂರಿಹೋಗಿ ವ್ಯೋಮದಲ್ಲಿ ಹಾರಿಹೋದ ಬೂದಿ
ಮತ್ತೆ ನೆನಪ ಸಸಿಗೆ ತಾನೇ ಗೊಬ್ಬರ’ (ಅಪ್ಪನ ಮೂಳೆ)

ಕವಿಯ ತಂದೆ ತೀರಿಹೋದದ್ದ ನೆನೆದು ಕಣ್ಣೀರಾಗಿ ಬರೆದ ಪದ್ಯ ಓದಿದಾಗ ಓದುಗನಿಗೆ ಕಣ್ಣೀರ ಕರೆಯದಿರಲಾರದು. ಭಾವನೆಗಳ ಮಾತಿಗೆ ತಲೆಬಾಗಲೇ ಬೇಕಾದ ಅನಿವಾರ್ಯತೆ. ಅಷ್ಟು ಚನ್ನಾಗಿ ಬರೆಯಬಲ್ಲ ಕವಿಯ ಮನಸು ಹೆಂಗರಳು ಎಂಬುದನ್ನ ಸಾಭೀತುಪಡಿಸುತ್ತದೆ. ತಂದೆಯ ಮೇಲಿನ ಪ್ರೀತಿ ಕಾಳಜಿ ಒಡಲಿಗೆ ಬೆಂಕಿ ತಾಕಿಸುತ್ತದೆ. ಭಾವುಕತೆ ತುಂಬಿ ಬರೆಯಬಲ್ಲ ನಾಡಿಗರು ಶ್ರೇಷ್ಠ ಕವಿ ಎಂದು ಬಿಡಿಸಿ ಹೇಳಬೇಕಿಲ್ಲ. ಅದೇ ರೀತಿ ಇನ್ನೊಂದು ಪದ್ಯದಲ್ಲಿ ಹೇಳುವಂತೆ,

‘ಒಳಕೋಣೆಯ
ಹಣತೆ
ಬೀದಿಯಂಗಳದಲಿ
ಪಳಗುವುದು ಸರಳ ಮಾತಲ್ಲ’ (ಒಳಕೋಣೆಯ ಹಣತೆ)

ಬೆಳಕನ್ನ ನೀಡುವ ದೀಪ ಬರೀ ಒಳಕೋಣೆಯನ್ನ ಬೆಳಗುವದು ಸುಲಭ. ಆದರೆ ಗಾಳಿ ಮಳೆ ಉರುಬುವ ತುಟಿಗಳ ಮಧ್ಯೆ ಆರದೆ ಬೆಳಕ ಕೊಡಬೇಕು ಎಂಬ ಕವಿಯ ಹಂಬಲ ಅವರ ಸೂಕ್ಷ್ಮ ಮತ್ತು ಸಂವೇದನಶೀಲತೆಯನ್ನು ತೋರಿಸುತ್ತದೆ. ಹೌದು ಬದುಕನ್ನೂ ಹಾಗೆ ಕಷ್ಟ ಕಾರ್ಪಣ್ಯದ ನಡುವೆ ಗೆಲ್ಲಬೇಕು. ಹೆದರಿ ಸೋತರೆ ಅರ್ಧಕ್ಕೆ ನಿಂತು ಕೈ ಚೆಲ್ಲಿದ ಆರೋಪ ಹೊರಬೇಕಾಗುತ್ತದೆ. ಬದುಕು ವಿಶಾಲ ಹಾದಿಯ ಪಯಣಿಗ. ಎಲ್ಲವನ್ನೂ ಅನುಭವಿಸೇ ನಡೆಯಬೇಕು ಭಾವಿಯೊಳಗಿನ ಕಪ್ಪೆಯಾಗದೆ. ನಾಡಿಗರ ಆಲೋಚನೆಯ ಹಾದಿ ವಿಶಾಲತೆಯ ನಡಿಗೆ.. ಎಂಬುದರಲ್ಲಿ ಎರಡು ಮಾತಿಲ್ಲ. ಜೀವಪರ ಕಾಳಜಿಯ ಜೊತೆಗೆ ಇಂತಹದ್ದೊಂದು ಕವಿತೆ ನಿಸ್ವಾರ್ಥತತೆಯನ್ನು ಅಪ್ಪಿಕೊಂಡಿದೆ.

ಅವರ ಈ ಸಂಕಲನದ ಇನ್ನೊಂದು ಪದ್ಯದಲ್ಲಿ ಈಗೆ ಬರೆಯುತ್ತಾರೆ..

‘ಇಡೀ ರಾತ್ರಿ ಬದುವಿಗೆ
ಬದುಕನ್ನ ನೀಡಿ
ಹಸಿ ನೆಲಕೆ ಹೃದಯವೂರಿ
ಪಿಚಕ್ಕನೆ ಚಿಮ್ಮುವ ಕೆಸರಲಿ
ಸಸಿಕರುಳ ನೋಯದಂತೆ
ನೆಡುವವರ
ಬಾಗಿದ ಜೀವಗಳೇ ನೆನಪಾಗುತ್ತದೆ’ (ಅಕ್ಕಿ ಆರಿಸುವಾಗ)

ಈ ಪದ್ಯದಲ್ಲಿ ಕಾಣುವಂತೆ ಕವಿಗೆ, ರೈತನ ಬದುಕಿನ ಬಗ್ಗೆ ಅಪಾರ ಗೌರವ ಹಾಗು ಕರುಣೆಯಿದೆ ಇರಬೇಕು ಸಹ. ಹೌದು ನಾವು ತಿನ್ನುವ ಪ್ರತಿ ಅಗುಳಿನ ಹಿಂದೆ ರೈತನ ಶ್ರಮ ಅಪಾರ. ರಾತ್ರಿ ಹಗಲ್ಲೆನ್ನದೆ ಮಳೆಯನ್ನ ನೆಚ್ಚಿ ದುಡಿಯುವ ರೈತರ ಬದುಕೇ ಘೋರ. ಅವರು ತನ್ನ ಮಕ್ಕಳಿಗಿಂತ ತಾವಿಟ್ಟ ಬೆಳೆಗಳ ಆರೈಕೆ ಮಾಡುವಲ್ಲಿ ಜೀವ ತೇದುತ್ತಾರೆ. ಅಂತಹ ರೈತನ ಕಡೆಗಣನೆ ಇಷ್ಟಪಡದ ಕವಿ ಮನಸು ಅನ್ನದಾತನ ಆರಾಧಿಸುವುದು ಮಾನವೀಯ ಮೌಲ್ಯವುಳ್ಳದ್ದು.

ಕವಿತೆಗಳು ಕೇವಲ ನಾಲ್ಕು ಗೋಡೆಯ ಮಧ್ಯೆ ಕೊಳೆಯಬಾರದು ಅವು ಬಯಲ ಬನಿ ಎಂಬುದನ್ನ ಕವಿ ತನ್ನ ಒಂದು ಕವಿತೆಯಲ್ಲಿ ಹೀಗೆ ಬರೆಯುತ್ತಾನೆ

‘ಏಕಾಂತಗಳಲ್ಲಿ ಹುಟ್ಟುವ ನನ್ನ ಕವಿತೆಗಳು
ಸಂತೆಯಲ್ಲಿ ಜೀವ ಪಡೆಯುತ್ತವೆ
ಜನದಟ್ಟಣೆಯ ಬೀದಿಗಳಲ್ಲಿ ಚಲಿಸುತ್ತವೆ
ನಿಶಬ್ದಗಳಲಿ ಏಳುವ ಶಬ್ದಗಳು
ಗದ್ದಲಗಳ ನಡುವೆ ಮಾತಾಡುತ್ತವೆ
ತಕರಾರುಗಳ ಜೊತೆ ಹರಟೆಗೆ ಕೂತಿವೆ’ (ಜೀವ ಪ್ರಣಾಳಿಕೆ)

ale-taakidare-dadaಹೌದು ಕವಿತೆಯನ್ನು ಬರೆಯುವಾಗ ಕವಿಯ ಪ್ರಜ್ಞೆ ಹೀಗೆ ಇರಬೇಕು. ತಾನು ಬರೆಯುವ ಕವಿತೆ ಸಮಾಜಕ್ಕೆ ಏನಾದರು ಕೊಡುಗೆ ಕೊಡುವಂತಿರಬೇಕು.ಇಂತಹ ಪ್ರಜ್ಞಾಪೂರ್ವಕ ಕವಿತೆ ಇದು. ಕವಿತೆಯ ಆಶಯ ಶಕ್ತಿಯುತವಾದುದು. ಬರೆಯಲೇಬೇಕೆಂದು ಕಾಟಾಚಾರಕ್ಕೆ ಬರೆದ ಕವಿತೆ ಸಮಾಜಕ್ಕೆ ಏನನ್ನೂ ಕೊಡಲಾರದು. ಜನಜಂಗುಳಿಯ ನಡುವೆ ನಿಲ್ಲಲಾರದು.
ಕವಿತೆ ಎದೆಸೆಟೆದು ನಿಲ್ಲಬೇಕು. ಆಗ ಕವಿತೆ ಬರೆದ ಕವಿಗೂ ಸಾರ್ಥಕ್ಯ.

ಕವಿ ನಾಡಿಗ್ ನಮ್ಮೊಳಗಿನ ಅಂತರ್ಮುಖಿ ಪ್ರಜ್ಞಾವಂತ ಕವಿಯಾದರು, ಸಮಾಜ ಮುಖಿ ಕವಿತೆಗಳು ಅವರ ಮನಸಿನ ಗರ್ಭದಿಂದ ಜನಿಸಲಿ ಎಂಬುದು ನಮ್ಮ ಒತ್ತಾಸೆ. ಈ ಸಂಕಲನದ ಅನೇಕ ಕವಿತೆಗಳು ಬದುಕಿನ ಗೋಜಲಿನ ಜಂಜಾಟದ ನಡುವೆ ಹುಟ್ಟಿದ ಕವಿತೆಗಳೇ ಆಗಿವೆ. ಹಾಗಂತ ಓದಿಸಿಕೊಂಡು ಹೋಗಲಾರದ ಕವಿತೆಗಳು ಅಂತ ಅಲ್ಲ.

ಭಾವನೆಗಳ ಜೊತೆ ಸಂಘರ್ಷಕ್ಕಿಳಿದು ಸ್ಥಾನಗಿಟ್ಟಿಸಿಕೊಂಡು ಗೆದ್ದ ಕವಿತೆಗಳು ಸಂಕಲನದಲ್ಲಿ ಇವೆ. ಓದುಗರ ಮನಸಿನಾಳಕ್ಕೆ ಇಳಿಯಬಲ್ಲ ಸಂವೇದಾನಶೀಲ ಕವಿತೆಗಳು ಎಂದು ಹೇಳಿದರೆ ತಪ್ಪಾಗಲಾರದು. ಕೆಲವು ಕವಿತೆಗಳು ವಾಚಾಳಿಯಾದರೂ ಚಿಂತನೆಗೀಡು ಮಾಡುತ್ತವೆ. ಏನೇ ಆದರು ಕವಿ ವಾಸುದೇವ ನಾಡಿಗ್ ಒಬ್ಬ ಭಾವುಕ ಧ್ಯಾನಸ್ಥ ಕವಿ ಎಂಬುದು ಈ ಸಂಕಲನದ ಕವಿತೆಗಳನ್ನ ಓದಿದರೆ, ಅರಿವಿಗೆ ಬಾರದಿರದು.

One Response

  1. Ramesh gabbur
    November 7, 2016

Add Comment

Leave a Reply