Quantcast

ಕವಿತೆ bunch: ಎಚ್ ಎನ್ ಆರತಿ ಇಲ್ಲಿದ್ದಾರೆ..

   ಆರತಿ.ಎಚ್.ಎನ್.

 

ಬಿರಿದ ಸಂಪಿಗೆಯೆಸಳು

ಹೊರಟುಬಿಟ್ಟೆ ಏಕೆ
ಇಷ್ಟು ಬೇಗ?
ಎಷ್ಟು ಮಾತು ಬಾಕಿಯಿತ್ತು
ನನ್ನೊಳಗೆ,
ರಾತ್ರಿ ಇನ್ನೂ ಉಳಿದಿದೆ
ಕಣ್ಣೊಳಗೆ…

she-with-the-boatsನೆನಪ ಬಿಸಿ ಆರಿಲ್ಲ
ಮೈಯಲ್ಲಿ.
ಕಾತುರತೆ ಹಬ್ಬಿ ಕುಳಿತಿದೆ
ತುಟಿಯಲ್ಲಿ.
ಸುತ್ತೆಲ್ಲಾ ಹರಡುತ್ತಿದೆ
ಹೂ ಅರಳಿ ದೇಹಗಂಧ
ಗಾಳಿಯಲೆಯಲ್ಲೇ ತೂಗುತ್ತಿದೆ
ಬಿಸಿ ಉಸಿರಾಗಿ ಬೆಳಕು ಮಂದ…

ಖಾಲಿತನದೊಂದಿಗೆ ರಾಜಿ
ಸಾಧ್ಯವೇ?
ಮಾತು ಕಿತ್ತುಕೊಂಡಂತಿದೆ
ನೀನು ಮುತ್ತ ನೀಡಿ.
ತೊಟ್ಟ ಕೈಬಳೆಯೂ ಇಂದು
ಶಬ್ದ ಮಾಡದು ನೋಡು
ಸುರುಳಿ ಸುತ್ತಿದೆ ಹಾಡು
ನುಡಿಯದೇ
ಸಿಡಿಯಲಾಗದ ಪಾಡು…

ಕವಿದ ಬೇಸರದಲ್ಲಿ
ಹಠ ಮಾಡಬಹುದೆ ಹೀಗೆ?
ಹರಡಿ ಚೆಲ್ಲಿದ ಹಾಗೆ
ಬಿರಿದ ಸಂಪಿಗೆಯೆಸಳು.
ಮುಸ್ಸಂಜೆಯೂ ನೋಡೀಗ
ಕೆಂಪಾಗಿ ಇಳಿಯುವುದು
ಮುಳುಗಿ ತೇಲಿದಂತಿದೆ
ಕಣ್ಣಲ್ಲಿ ನೆರಳು…

ಜಾರಿ ಹೋಗುತ್ತದೆ ಸಮಯ,
ಭಾರವಾಗಿದೆ ಕೊರಳು
ರೆಕ್ಕೆಯಿಲ್ಲದ ಆಕಾಶದಂಚಲ್ಲಿ
ಕಲಕಿದಂತಿದೆ ಮೋಡ
ಒಡಲು ಮಿಂಚ ಅಮಲು…
ಇನ್ನು ಇಲ್ಲಿ ನನ್ನದೇನೂ ಇಲ್ಲ,
ಸಾಲುಸಾಲಿಗೂ ಬರುವ ಹಾಡ ಕಾವು.
ಅರಳುತ್ತದೆ, ಯಾರು ನೋಡದಿದ್ದರೂ
ಬಾನು ಮುಟ್ಟುವ ಬೆಟ್ಟದಡಿಯಲ್ಲಿ
ಹೀಗೆ ಕೆಂಪು ಹೂವು…
2.
………

ಮುರಿಯಲೇ ಬೇಕು
ಯಾರದಾದರೂ ಸೊಂಟವೋ
ಕೈ ಕಾಲೋ, ಪ್ರತಿಜ್ಞೆ ಮಾಡಿದೆ.
ಶುರುವಾಯಿತು ನೋಡಿ,
ಈ ಹುಚ್ಚು, ಏರಿದಂತೆ
ನೇರ ನೆತ್ತಿಗೆ ಸೂರ್ಯ.

paintingಇದು ಯಾರನ್ನಾದರೂ
ಪ್ರೀತಿಸಲೇಬೇಕು ಎಂದು
ಹಠ ತೊಟ್ಟ ಹಾಗಲ್ಲವಲ್ಲ.
ಪ್ರೀತಿಯೂ ಬೇಕಾಬಿಟ್ಟಿ
ಬರುವುದಿಲ್ಲ, ಕೋಪದಂತೆ.
ಒಳಗೇ ಹರಿಯುತ್ತದೆ
ಗುಪ್ತಗಾಮಿನಿಯಂತೆ…

ಅದೆಲ್ಲಾ ಬಿಡಿ, ಈಗ
ಸೊಂಟ, ಕೈ ಕಾಲು.
ಮತ್ತೆ ಪಿರಿಪಿರಿ ತಾಕಲಾಟ.
ಮುರಿಯುವುದು ಹೆಣ್ಣು ಸೊಂಟವೋ
ಗಂಡಿನದ್ದೋ?
ಅಂಗಸಂಗಕ್ಕೆ ಮಾತ್ರ ಲಿಂಗ,
ಅಂಗಭಂಗಕ್ಕಲ್ಲ,
ತರಬೇಡಿ ಇಲ್ಲಿ ಲಿಂಗರಾಜಕೀಯ!

ಅಂದುಕೊಂಡರಾಯ್ತೇ?
ಮಾಡಿ ತೋರಿಸಬೇಕು.
ಮೋಡದಲಿ ಕಾಣುವುದು
ಮಿಂಚು ಕಣ್ಣು, ಸಿಡಿಲ ಬೆನ್ನು.
ಸಂಕಲ್ಪ ಹಿಂಸೆಯಿದು ಪರಮಭೀಕರ,
ಬಸಿರ ಹೊತ್ತಂತೆ, ಮೈಯೊಳಗೆ
ಮಿಸುಕುವುದು ನವಿಲ ಸಾವಿರ ಕಣ್ಣು.

ಮುರಿದು ಕಟ್ಟಬಹುದೆಂದು
ಯಾರು ಹೇಳಿದರೋ?
ಕಟ್ಟಿ ಮುರಿಯಲೂಬಹುದು
ಮನಸೊಳಗೆ ನೂರು ಬಿಂಬ…
ಮುರಿಯುವುದು ಬಲು ಸುಲಭ
ತಟಕ್ಕನೆ ತಾಳಿ ಕಟ್ಟಿದರಾಯ್ತು,
ಮುರಿದಿಲ್ಲವೇ ಹೀಗೆ ಎಷ್ಟೋ
ಆಸೆ-ಭಾಷೆ, ಮನಸು-ಕನಸು…

ಮುರಿಯಲಾಗದು ಬಾಳು
ಅದು ಸುಲಭವಲ್ಲ.
ಭಾವ ತಂತುಗಳ ಜಗ್ಗಿ
ಹಿಡಿದು ನಗುತ್ತದೆ ಮಗು.
ಘಾತ ಗೊತ್ತಿದ್ದವರು,
ಆಘಾತ ಮಾಡುವುದಿಲ್ಲ.
ಮುರಿದ ಮನಸನು ಹಿಡಿದು
ಮುರಿಯಲಾಗದವರು
ಹೀಗೆ ಶಪಥ ಮಾಡಿ
ಮಣ್ಣು ಮುಕ್ಕುವುದಿಲ್ಲ!

 

3.
ಹೊರಡಬೇಕಿದೆ ಎಲ್ಲ ಬಿಟ್ಟು

ಹೊರಡಬೇಕಿದೆ ಎಲ್ಲ ಬಿಟ್ಟು ಜರೂರಾಗಿ,
ಭೂಪಟ ತೆರೆದರೆ, ಬರೀ ಗಡಿರೇಖೆ
ಸರಹದ್ದು, ಮುಳ್ಳುಬೇಲಿಗಳೇ.
ಹೊರಟ ಜಾಗಕ್ಕೂ ಇಲ್ಲಿಗೂ ಹೆಚ್ಚೇನೂ
ವ್ಯತ್ಯಾಸವಿಲ್ಲ…ನಿಯಮ ಇರುವುದು
ಕೇವಲ ಮುರಿಯುವುದಕ್ಕಲ್ಲ
ಪಾಲಿಸಲು ಪರಮಾತ್ಮನಾಗಬೇಕಿಲ್ಲ,
ಪತಿವ್ರತೆಯಾದರೆ ಸಾಕು!

she1ಹೊತ್ತು ತಂದ ಪೆಟ್ಟಿಗೆಯಲ್ಲಿರುವುದೇನೂ
ಕಡಿಮೆಯಲ್ಲ, ಕಠೋರಭಾರ.
ಹಸಿರುಬಳೆ ತುಂಡಾಗದೇ
ಚೂರುಚೂರಾಗಿ ಒಡೆದ ಸದ್ದು,
ಗದರುವ ದನಿಗೆ ಸತ್ತಮಾತು,
ಒದ್ದೆ ನಗುವ ಸದೆ ಬಡಿದ ಸಂತಾಪಸಂಭ್ರಮ,
ಹಾಕದ ಬರೆಗೆ ತಂನಿಂತಾನೇ ಸುಟ್ಟಕನಸು,
ಅವರಿಚ್ಛೆಯ ತಾಳಕ್ಕೆ ಕುಣಿದ
ತಕಥೈ ದಿಧಿತ್ತಾಂ – ಅಳುವ ಗೆಜ್ಜೆ…

ಕಟ್ಟಿಕೊಂಡಷ್ಟು ಸುಲಭವಲ್ಲ
ಬಿಟ್ಟುಬಿಡುವುದು.
ನಾರಿ ಕರೆದಾಕ್ಷಣ ಬಂದು
ಒದಗುವುದಕ್ಕೆ ನರಹರಿಯು
ನಾಚಿಕೆಯ ಮೂರ್ತಿ.
ಕಣ್ಣ ಕಾಡಿಗೆ ದೃಷ್ಟಿಬೊಟ್ಟು ಇಟ್ಟು
ಬಗ್ಗಿದರಾಯ್ತು, ಹರಸಿ ಹಾರೈಸುತ್ತಾರೆ,
ಮುತೈದೆತನ ಸಾವಿರ ವರುಷಕೂ ಸಲೀಸು…

ಹೊರಡಬೇಕಿದೆ ಎಲ್ಲ ಬಿಟ್ಟು,
ಕರೆಯುತ್ತಾರೆಂದು ಕೈ ಹಿಡಿಯಲಾಗದು.
ಕಣ್ಣನೋಟ ಹೆಣಭಾರವಾದರೆ,
ನಮ್ಮ ದೇಹವ ನಾವೇ ಹೊರಬೇಕು
ಹೊರೆಯಾಗದಂತೆ.
ಸುಮ್ಮನೇ ಹುಚ್ಚು ಬಳ್ಳಿ ಬಳುಕುವುದು
ಗಾಳಿಯಾಟದಂತೆ
ಹೂ ಬಿಟ್ಟರೆ ತಾನೆ,
ಗಂಧ-ಘಮಲಿನ ಚಿಂತೆ?!

ತಿಟ್ಟು ಹತ್ತಿದ ಮೇಲೆ, ತಿರುಗಿ ನೋಡಬಾರದು
ಹೆಣ್ಣು, ಹಳೆಯ ನೆನಪುಗಳ
ಹಸಿರು ಸೀರೆಯುಟ್ಟು.
ಬಿಟ್ಟು ಹೊರಡುವುದೂ
ಕೊಟ್ಟು ಸೋಲುವ ಹಾಗೆ,
ಹೋದವರಾರೂ ತಿರುಗಿ ಬರುವುದಿಲ್ಲ.
ಹೊರಡುತ್ತೇನೆ ಈ ಕ್ಷಣ, ಎಲ್ಲ ಬಿಟ್ಟು
ಎನ್ನುವವರು
ಯಾರೂ, ಯಾವತ್ತೂ, ಯಾರಿಗೂ
ಹೇಳಿ ಹೋಗುವುದಿಲ್ಲ!

5 Comments

 1. mm shaik
  November 7, 2016
  • arathi
   November 8, 2016
  • arathi
   November 8, 2016
 2. nutana M doshetty
  November 7, 2016

Add Comment

Leave a Reply