Quantcast

ಆ ‘ಕ್ಲಿಕ್’

ಕ್ಷಮಿಸುತಾಯೆ ..
ಹರಸು ನನ್ನ
ಮುನಿಯ ಬೇಡ.

ಪರಮೇಶ್ವರ ಗುರುಸ್ವಾಮಿ 

ಈ ಘಟನೆ, ನನ್ನನ್ನು ಬಹಳ ಕಾಡುತ್ತಿರುವ ನೆನಪು. ಬ್ಯಾಂಗ್ ಕಾಕ್ ನ ಆ ಜೆ.ಜೆ. ಮಾರುಕಟ್ಟೆಯಲ್ಲಿ ನಡೆದ ಘಟನೆ. ಅಲ್ಲಿಂದ ಇಲ್ಲಿಯವರೆಗೆ ಆಗಿನಿಂದ ಈಗಿನವರೆಗೆ ಆಗಾಗ್ಗೆ ಆಳದಿಂದ ಹೆಡೆಯೆತ್ತುವ ನೋವಿನಿಂದ ಆ ನೆನಪು ಅನ್ನುವುದಕ್ಕಿಂತ ಪಶ್ಚಾತ್ತಾಪವನ್ನುಂಟು ಮಾಡಿದೆ. ಮುಂದೆಯೂ ಸಹ.

ಜೆಜೆ ಮಾರ್ಕೆಟ್ ನಲ್ಲಿ ಏನೂ ಫ಼ೋಟೋ ತೆಗೆಯೋಲ್ಲ. ಬೇಕಾದ್ರೆ ಮೊಬೈಲ್ ಬಳ್ಸೋದು. ಬರೀ ನೋಡೋದು, ಆಸೆ ಆದುದ್ದರ ಬೆಲೆ ಕೇಳೋದು, ಸಾಧ್ಯವಾದಷ್ಟು ಉಳಿಸೋದು. ಅಸಾಧ್ಯವಾದ್ರೆ ಕೊಂಡುಕೊಳ್ಳೋದು ಅಂತ ನಿರ್ಧಾರ ಮಾಡಿದ್ದೆ. ಆದ್ರೆ ನನ್ನ ಔಷಧಿ ಪಾಸ್ಪೋರ್ಟು ಎಲ್ಲಾ ಕ್ಯಾಮೆರ ಬ್ಯಾಗ್ನಲ್ಲೇ ಇದ್ದದ್ದರಿಂದ ಕ್ಯಾಮೆರಾನೂ ನನ್ ಜೊತೇಲೆ ಇತ್ತು. ಕೈ ಬೀಸ್ಕೊಂಡ್ ನಡಿಬೇಕು ಅನ್ನೋ ಆಸೆ ತಪ್ತು.

OLYMPUS DIGITAL CAMERA

ಸುಮಾರು ಹೊತ್ತು ಫೋ಼ಟೋಗ್ರಫಿಯ ನೆನಪಾಗ್ಲೇ ಇಲ್ಲ. ಮೊಬೈಲ್ನೂ ಪ್ರಯತ್ನಿಸಬೇಕೆನಿಸಲಿಲ್ಲ. ಅಲ್ಲಿ ಒಂದು ಕಡೆ ಈ ಅಜ್ಜಿ ಅಷ್ಟೊಂದು ಜನ ಸಾಗರದ ನಡುವೆ ವಿಲಿಯಮ್ ವರ್ಡ್ಸ್ ವರ್ಥ್ ನ ‘ಸಾಲಿಟರಿ ರೀಪರ್’ ಳಂತೆ ತನ್ನ ಕಾಯಕದಲ್ಲಿ ನಿರತಳಾಗಿದ್ದಳು.

ಅದೇನಂದ್ರೆ, ಒಂದು ದೊಡ್ಡ ಪ್ಲಾಸ್ಟಿಕ್ ಚೀಲ ಕಟ್ಕೋಂಡು ಅಲ್ಲಿ ಬಿದ್ದಿರೋ ಖಾಲಿ ಪ್ಲಾಸ್ಟಿಕ್ ಬಾಟಲ್ ಗಳ್ನ ಹೆಕ್ಕಿ ಚೀಲದೊಳಕ್ಕೆ ಹಾಕ್ಕೋತ್ತಿದ್ಳು. ರಾಜಗಾಂಭೀರ್ಯದಲ್ಲಿ ಇದ್ದ ಬೆಕ್ಕಿಗೆ ಇಲಿ ಕಂಡಂಗಾಯ್ತು. ಇಲ್ಲ ಈವಾಗ ಸನ್ಯಾಸಾಚರಣೆ ನಡೀತಿದೆ. ಬೇಡ. ಅಂದ್ಕೊಂಡು ಬೇರೆ ಕಡೆ ನೋಡ್ಕೊಂಡು ಮುಂದುವರಿದೆ. ಅಲ್ಲೇ ಕಾಫಿ ಕುಡಿದೋ. ಬಹಳ ಬೆಲೆ. ನಂ ಕಡೆ ಹದ್ನೈದ್ ರುಪಾಯಿಗೆ ಕುಡಿಯೋ ಕಾಫಿ಼ಗೆ (ಅದೂ ಅಷ್ಟೊಂದು ಸ್ವಾದಿಷ್ಠ!) ಇಲ್ಲಿ ನಲ್ವತ್ ಬಾತ್. ಅಂದ್ರೆ ಎಂಭತ್ ರೂಪಾಯಲ್ಲಪ್ಪ ಅಂದ್ಕೋತಿದ್ದೆ.

ಅಷ್ಟೊತ್ತಿಗೆ ಇವ್ರಿಬ್ರೂ ಒಂದ್ ಅಂಗ್ಡಿ ಮುಂದೆ ನಿಂತ್ರು. ಅದ್ ಹೇಗ್ ನನ್ ಕೈಗ್ ಕ್ಯಾಮ್ರ ಬಂತೋ. ಎದರು ಬದಿಯಲ್ಲಿದ್ದ ಈ ಅಜ್ಜಿಯ ಮೇಲೆ ಎರಡೂ ಕೈಗಳಲ್ಲಿ ಕ್ಯಾಮೆರಾವನ್ನು ಪಂಜಾದ ಹಾಗೆ ಜ಼ೂಮಿನ್ ಜ಼ೂಮೌಟ್ ಮಾಡುತ್ತಾ ಫ಼ೋಕಸ್ ನ ಏಕಾಗ್ರತೆಯಲ್ಲಿದ್ದುದು ಅರಿವಿಗೆ ಬಂತು. ಅಷ್ಟರಲ್ಲಿ ಬೇಟೆ ಬೆಕ್ಕು ಇಲಿಯ ಮೇಲೆ ಎರಗಿದಂತೆ ಎರೆಡು ಹೊಡೆತ (ಕ್ಲಿಕ್) ಹೊಡೆದಿದ್ದೆ. ಮೂರನೆಯದನ್ನು ಅರೆ ಕುಕ್ಕರಗಾಲಿನಲ್ಲಿ ನಿಂತು ಅವಳ ಮುಖ ಕೆಳಗಿನ ಕೋನದಿಂದ ಕಾಣುವಂತೆ ಫ಼್ರೇಮ್ ಮಾಡಿ ಸ್ವಲ್ಪ ಅವಳು ಮುಖ ವಾಲಿಸಿದರೆ ಸಾಕು ಅಂತ ಕ್ಲಿಕ್ ಬಟನ್ ಅದುಮಿ ಇಷ್ಟೇ ಇಷ್ಟ್ ಒತ್ತಡ ಬಿದ್ರೆ ಸಾಕು ಕ್ಕಿಕ್ ಆಯ್ತು ಅಂತ ಕಾಯ್ತಾ ಇದ್ದೆ.

ಅವಳು ನನ್ನನ್ನು ನಿವಾರಿಸುವ ಹಾಗೆ ಕೈ ಚಾಲನೆ ಮಾಡಿ ಫೋ಼ಟೋ ತೆಗೆಯಬೇಡ ಎಂದು ಮುಖಕ್ಕೆ ಅಡ್ಡ ಹಿಡಿದುಕೊಂಡಳು. ಆ ಕ್ಷಣ ಅದ್ಭುತವಾದ ಫ಼್ರೇಮ್ ಅನಿಸಿತು.

“ಏಯ್!…. ಅಪ್ಪಾ…. ತೆಗಿಬೇಡ…” ಅಂತ ಅನಲ ಗದರಿಸಿದ್ದು ಕೇಳಿಸಿತು. ಈಗೀಗ ನನ್ನ ಮಗಳು ನಾನೇನೋ ಅತೀ ತುಂಟ ಹುಡುಗನೇನೋ ಎಂಬಂತೆ ಮೆಲ್ಲಗೆ, ಜೋರಾಗಿ ಹೇಗೇಗೆಲ್ಲ ಗದರಿಸಲಾರಂಭಿಸಿದ್ದಾಳೆ. ನಮ್ಮ ಮಕ್ಕಳಿಗೆ ನಾವೇ ಮಕ್ಕಳಾಗುವುದೆಂದರೆ ಇದೇ ಇರಬೇಕು. ಆ ಕ್ಷಣ ನಾನು ಸ್ಟ್ಯಾಚು ಆದೆ! ಕ್ಯಾಮೆರಾ ಐ ಪೀಸಿನಲ್ಲಿ ಆ ಅಜ್ಜಿಯ ಅದ್ಭುತವಾದ ಫ಼್ರೇಮ್ ಇದೆ! ಯಾವ ಕ್ಷಣದಲ್ಲಾದರೂ ಉಸಿರಾಟದ ಏರುಪೇರಿನ ಒತ್ತಡಕ್ಕೇ ಕ್ಲಿಕ್ ಆಗಿಬಿಡಬಹುದು. ಕಣ್ಣಲ್ಲಿ ಅದ್ಭುತವಾದ ಫ಼್ರೆಮ್ ಇದ್ದ ಹಾಗೆಯೇ ಹಿಂದಿನ ಕೆಲ ಕ್ಷಣಗಳು ಮನದಲ್ಲಿ ರೀಪ್ಲೇ ಆಗುತ್ತಿವೆ.

parameshvara-guruswamyದೇಶ ಭಾಷೆ ಪರಿಸರ ಇತ್ಯಾದಿಗಳನ್ನು ಅವಲಂಬಿಸಿ ಮನುಷ್ಯರ ಚಲನವಲನಗಳು ಬೇರೆ ಬೇರೆ ಅರ್ಥ ಸ್ಫುರಿಸುತ್ತವೆ. ಆದರೆ ಇದಾವುದರ ಊರೆಗೋಲುಗಳಿಲ್ಲದೆ ಇಬ್ಬರು ಮುಖಮುಖಿಯಾದಾಗ ಕಣ್ಣುಗಳ ಸಂವಹನ ಸತ್ಯಕ್ಕೆ ಹತ್ತಿರ. “ಮುಖ ಕೊಟ್ಟು ಮಾತಾಡು” ಅನ್ನೋದನ್ನ ಕೇಳಿದ್ದೀರಲ್ಲ.

ತನ್ನ ಪಾಡಿಗೆ ಕೆಲಸದಲ್ಲಿ ಮಗ್ನಳಾಗಿದ್ದವಳು ತನ್ನ ಮುಂದೆ ಆಕ್ರಮಣಕಾರಿ ಭಂಗಿಯಲ್ಲಿರುವ ನಾನು ಮತ್ತು ನನ್ನ ಕ್ಯಾಮೆರಾ ಕಂಡಿದ್ದಾಳೆ. ಮೊದಲು ಅವಳ ಕಣ್ಣುಗಳಲ್ಲಿ ವಿಷಣ್ಣತೆ. ಅಸಹಾಯಕತೆ. ನೋವು. ಒಂದಿನಿತೂ ಕೋಪ ಇರಲಿಲ್ಲ. ಕೊನೆಗೆ ಕ್ಯಾಮೆರಾದಲ್ಲಿ ಹತ್ತಿರಕ್ಕೆ ಕೈ ಚಾಚಿ ಬೇಡ ಎಂದಳು. ರಕ್ಷಣೆಗೆ ಎಂಬಂತೆ ಅದೇ ಕೈಯನ್ನು ಮುಖಕ್ಕೆ ಅಡ್ಡ ಹಿಡಿದಳು.

ಇದ್ದಕ್ಕಿದ್ದ ಹಾಗೆ ನಾನು ಅಪರಾಧಿ ಅಂತ ಹೊಳೆಯಿತು. ಕ್ಕಿಕ್ ಮಾಡಲಿಲ್ಲ. ಕ್ಯಾಮೆರಾ ಇಳಿಸಿ ತೆಗೆಯುವುದಿಲ್ಲ ಎಂದು ಹೇಳಲು ಹತ್ತಿರ ಹೋದೆ. ಹಾರಲಾಗದ ಹೆದರಿದ ಗುಬ್ಬಿಯ ಹಾಗೆ ಹಿಂದಕ್ಕೆ ವಲಿಸಿದಳು. ಪೆಚ್ಚನಂತೆ ಇವರಿಬ್ಬರ ಕಡೆ ನಡೆದೆ. ಅನಲ ದುಷ್ಟತನ ಮಾಡಿದ ಹುಡುಗನನ್ನು ಗದರಿಸುವ ಹಾಗೆ ಜೋರಾಗಿ ಗದರಿಸುತ್ತಿದ್ದಳು.

ಸಾಮಾನ್ಯವಾಗಿ ದಾಖಲಾಗಬಹುದಾದ ಅಥವಾ ಆಗಲೇಬೇಕಾದ ಸಂದರ್ಭಗಳನ್ನು ಬಿಟ್ಟರೆ, ಯಾರನ್ನಾದರೂ ಕ್ಲಿಕ್ ಮಾಡಬೇಕೆನಿಸಿದರೆ ಅವರನ್ನು ಕೇಳಿಯೇ ಮುಂದುವರೆಯುತ್ತೇನೆ. ಇಲ್ಲಿ ಹಾಗಾಗಲಿಲ್ಲ.

ಆದ್ದರಿಂದ ಥಾಯ್ ತಾಯಿಯೇ ನನ್ನ ಮೇಲೆ ಸಿಟ್ಟಾಗಬೇಡ. ಹರಸು ಎಂದು ಕೇಳಿಕೊಳ್ಳುತ್ತಿದ್ದೇನೆ.

Add Comment

Leave a Reply