Quantcast

ಕಾರಣ, ನಾನು ಟಿಪ್ಪೂ ಸುಲ್ತಾನ..

k-n-vijayakumar      ಕ.ನಾ.ವಿಜಯಕುಮಾರ, ಶಿಕಾರಿಪುರ

 

ಗೋರಿಯೊಳಗೆ ಮಗ್ಗಲು ಬದಲಿಸಲಾಗುತ್ತಿಲ್ಲ..

ಹೊರಗೆ ಹೊಗಳುವವರ ತೆಗಳುವವರ

ತೆವಲುಗಳ ತಡಕಾಟದಲಿ ತಡೆಯಲಾಗುತ್ತಿಲ್ಲ,

ನನ್ನ ಕನಸು ಮತ್ತು ಗೊಂದಲ

ಚಲಿಸುತ್ತಲೇ ಚಿಂದಿಯಾಗುವ ಚರಿತ್ರೆಯೊಳಗಣ ಕಣ..

ಕಾರಣ,   ನಾನು ಟಿಪ್ಪೂ ಸುಲ್ತಾನ..

ಹಾಗಾಗಿ ಗೋರಿಯೊಳಗೆ ಮಗ್ಗಲು ಬದಲಿಸಲಾಗುತ್ತಿಲ್ಲ.
ನಾನು ಅಪ್ರತಿಮ ವೀರನಲ್ಲ..,

ಹುಟ್ಟಿನಿಂದಲೂ ಹೋರಾಟದ ಬದುಕು ನನ್ನದು.

ನಾನು ಕ್ರಾಂತಿಕಾರಿಯಲ್ಲ..,

ಬದಲಾವಣೆಗೆ ಭಾಗಿಯಾಗುವ ಮನಸ್ಸಿತ್ತಷ್ಟೆ.

ನಾನು ದೇಶಭಕ್ತನಲ್ಲ..,

ನಾನಿರುವ ಮಣ್ಣಿನ ಮೇಲೆ ಮಾತೃಗೌರವ ನನಗೆ.

ನಾನು ಸಾರ್ಥಕ ಮಗನಲ್ಲ, ಒಳ್ಳೆಯ ಅಪ್ಪನಲ್ಲ,

ಅಸಲಿಗೆ ನಾನು ನಾನಾಗಲೇ ಇಲ್ಲ.

ಆದರೂ ಇತಿಹಾಸದಲ್ಲಿ ನನ್ನಷ್ಟು ನಲಿದವನು, ನಲುಗಿದವನು, ನಿಡುಸುಯ್ದವನು ಇಲ್ಲವೇ ಇಲ್ಲ.

ಕಾರಣ, ನಾನು ಟಿಪ್ಪೂ ಸುಲ್ತಾನ

ಸುನ್ನಿಗಳ ಸಂತಾನ.

tippu tableau

ಅವರ್ಯಾರೋ ನನ್ನನ್ನು ಮತಾಂಧ-ದೇಶದ್ರೋಹಿ ಎಂದು ಹೀಗಳೆಯುವರು.,

ಇವರ್ಯಾರೋ ನಾನೊಬ್ಬ ದೇಶಭಕ್ತ ದೊರೆಯೆಂದು ಸಾರಿ ಸಂಭ್ರಮಿಸುವರು,

ಆದರೆ ನಾನೊಬ್ಬ ಅಪ್ಪಟ ಮನುಷ್ಯನೆಂದು ಮರೆತು ಹೋದವರು..,

ಇವರೆಲ್ಲರ ಇತಿಹಾಸ ಪುರುಷನಾಗುವ ಇರಾದೆ ಇಲ್ಲವೇ ಇಲ್ಲ ನನಗೆ.

 

ನನ್ನ ನಾಡನ್ನು ಕಾಪಾಡಲು ಪರಕೀಯರೊಂದಿಗೆ ಶರಂಪರ ಯುದ್ದಕ್ಕೆ ಬಿದ್ದೆ,

ನನ್ನ ನಾಡಿನಿಂದಲೇ ಅಲ್ಲ ಇಡೀ ಹಿಂದೂಸ್ತಾನದಿಂದಲೇ ಹೊರದಬ್ಬುವ ಉದ್ದೇಶವಿತ್ತು ನನಗೆ.

ಆದರೆ ಆ ಉದ್ದೇಶವನ್ನೂ ಮೀರಿದ ಮತ-ಧರ್ಮದ ಮೇಲಾಟಗಳ ಅರಿವಾದದ್ದು ಕೊಂಚ ಕಡಿಮೆ.

tippu tiger doll

ಹೊಸದನ್ನು ಹುಡುಕುವ ಭರದಲ್ಲಿ ಶತ್ರುವಿನ ಶತ್ರುಗಳ ಮಿತ್ರರಾಗಿಸಿದೆ,

ತಂತ್ರಜ್ಞಾನದ ಸೆಳೆತದಲಿ ಸ್ವಾತಂತ್ರ್ಯದ ಮಂತ್ರ ಜಪಿಸಿದೆ,

ಅತಂತ್ರವಾಗುವ ಅರಿವಿಲ್ಲದೆಯೇ ಯಂತ್ರ ಕಟ್ಟುವ ಕೆಲಸ ಮಾಡಿದೆ,

ಕುತಂತ್ರದ ಕುಡಿಗಳು ನನ್ನ ಹೊಸ್ತಿಲಲ್ಲೇ ಹೊಗಳುತ್ತಿದ್ದರು.

 

ಹುಲಿಯೆಂದು ಬಗೆದು ಹಸಿವಿಲ್ಲದೆಯೂ ಆಹಾರವ ಹಂಬಲಿಸಿದೆ.

ಅವೆಲ್ಲ ಹೋಗಲಿ ಬಿಡಿ.., ನಾನು ಒಳ್ಳೆಯದನ್ನಷ್ಟೇ ಮಾಡಿದೆ ಎಂದು ಸುಳ್ಳು ಹೇಳಲಾರೆ.

 

ಸಾಮಾನ್ಯರೊಂದಿಗೆ ಸೇರಲು ಕ್ರಾಂತಿಕಾರಿ ಜಕೋಬಿಯನ್ ಕ್ಲಬ್ಬಿನ ಸದಸ್ಯನಾದೆ,

ಅಂದಿನಿಂದ ನಾನು ಬರೀ ಸುಲ್ತಾನನಲ್ಲ, ಟಿಪ್ಪೂ ಸುಲ್ತಾನನೂ ಅಲ್ಲ, ಟಿಪ್ಪೂ ಸಿಟಿಜನ..

ಜನಾನಾದ ಹೊರತಾಗಿಯೂ ಜನಮಾನಸದಲ್ಲಿ ಉಳಿಯಲು ತಿಣುಕಾಡಿದ ತಿಕ್ಕಲುತನ.

tippu kundapura samuday

ಮದ್ಯಪಾನ ನಿಷೇಧಕ್ಕಾಗಿ ಆಗ ಅಷ್ಟೊಂದು ಪ್ರಯತ್ನಪಟ್ಟೆ,

ಮದ್ಯದ ದೊರೆಯೊಬ್ಬ ಈಗ ನನ್ನ ಖಡ್ಗವನು ತರಿಸಿ ತೋರಿಸುವುದ ನೋಡಿ ಆನಂದಪಡಿ.

 

ನಾನು ಧರ್ಮದಿಂದ ಬದುಕಿದೆ, ಧರ್ಮಾಂಧನೆಂದರು;

ಜಾತಿ ನಡುವಣ ಕಂದಕವ ಕಡಿಮೆಯಾಗಿಸಲು ಹೋದೆ, ಕೋಮುವಾದಿಯೆಂದರು;

ಮಕ್ಕಳನು ಒತ್ತೆ ಇಟ್ಟೆ, ಮುಠ್ಠಾಳನೆಂದರು;

ಇಂತಹ ವಿಪರ್ಯಾಸಗಳೇ ವಿಪರೀತವಾಗಿ, ಚರಿತ್ರೆಯ ಚೂರುಗಳಾಗುವ ವಿಲಕ್ಷಣ ಕ್ಷಣ..,

ಕಾರಣ,  ನಾನು ಟಿಪ್ಪೂ ಸುಲ್ತಾನ

ಧರ್ಮ ರಾಜಕೀಯದ ರಾವಣ.

One Response

  1. mm shaik
    November 8, 2016

Add Comment

Leave a Reply