Quantcast

ಪ್ರಶ್ನಿಸಲು ಪ್ರೇರೇಪಿಸಿದ ಬ್ರೆಕ್ಟ್ 

ಇಂದು ಸಮುದಾಯ, ಬೆಂಗಳೂರು ತಂಡ
ಬ್ರೆಕ್ಟ್ ನ ‘ಧರ್ಮಪುರಿಯ ದೇವದಾಸಿ’ ನಾಟಕವನ್ನು ರಂಗಕ್ಕೆ ತರುತ್ತಿದೆ.
ಈ ಹಿನ್ನೆಲೆಯಲ್ಲಿ ಬ್ರೆಕ್ಟ್ ಬಗ್ಗೆ ಒಂದು ನೋಟ 
ಜಿ ಎನ್ ಮೋಹನ್ 

ಕನ್ನಡ ರಂಗಭೂಮಿ ಶೇಕ್ಸ್ ಪಿಯರ್ ನಷ್ಟೇ ಗಾಢವಾಗಿ ಪ್ರೀತಿಸಿದ ಇನ್ನೊಬ್ಬ ನಾಟಕಕಾರ ಬ್ರೆಕ್ಟ್. ‘ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡನಾಡಿ..’ ಎಂದವನು ಬ್ರೆಕ್ಟ್. ಪ್ರಶ್ನೆ ಎನ್ನುವುದು ಒಂದು ಆಯುಧ ಎಂದು ತಿಳಿದ ಬ್ರೆಕ್ಟ್ ತನ್ನ ನಾಟಕ, ಕವಿತೆಗಳ ಮೂಲಕ ಮಾಡಿದ್ದು ಅದನ್ನೇ. ಆತನಿಗೆ ಗೊತ್ತಿತ್ತು ಪ್ರಶ್ನೆ ಮಾಡುವುದರಿಂದ ಸಮಾಜಧಲ್ಲಿರುವ ಅಂಧಕಾರವನ್ನು ತೊಡೆಯಬಹುದು ಎಂದು. ಪ್ರಶ್ನೆ ಮಾಡುವುದರಿಂದ ಸರ್ವಾಧಿಕಾರಿಯನ್ನೂ ಅಲುಗಿಸಬಹುದು ಎಂದು. ಹಾಗಾಗಿ ಪ್ರಶ್ನಿಸುತ್ತಲೇ ಹೋದ. ಮಾತ್ರವಲ್ಲ, ಪ್ರಶ್ನಿಸುವಂತೆಯೂ ಎಲ್ಲರನ್ನೂ ಪ್ರೇರೇಪಿಸಿದ.

ht2ನಾವೆಲ್ಲರೂ ಕಲೆ ಸಮಾಜಕ್ಕೆ ಹಿಡಿದ ಕನ್ನಡಿ ಎಂದು ಭಾವಿಸಿದ್ದಾಗ ಬ್ರೆಕ್ಟ್ ಇನ್ನೂ ಎಷ್ಟೋ ಮುಂದೆ ಹೋಗಿಬಿಟ್ಟಿದ್ದ. ಆತ ಸ್ಪಷ್ಟ ಮಾತುಗಳಲ್ಲಿ ಹೇಳಿದ- ‘ಅದು ಕನ್ನಡಿಯಲ್ಲ, ಸಮಾಜವನ್ನು ಕುಟ್ಟಿ ಸರಿಮಾಡಬೇಕಾದ ಸುತ್ತಿಗೆ’ ಅಂತ. ಹಾಗಾಗಿಯೇ ಆತನ ಸರಿಸುಮಾರು 45 ನಾಟಕಗಳು, ಕೈಗೆ ಸಿಕ್ಕಿರುವ ಸಾವಿರಕ್ಕೂ ಹೆಚ್ಚು ಕವಿತೆಗಳು, ನೂರಾರು ರಂಗ ಗೀತೆಗಳು ಸುತ್ತಿಗೆಯಂತೆ ಕೆಲಸ ಮಾಡುತ್ತದೆ. ಬ್ರೆಕ್ಟ್ ಸುತ್ತಿಗೆ ಕೈಗೆತ್ತಿಕೊಂಡದ್ದು ಜನತೆಯ ಪರವಾಗಿ ಹಾಗೂ ಜನಶತ್ರುಗಳ ವಿರುದ್ಧ.
ವೈದ್ಯಕೀಯ ಶಿಕ್ಷಣ ಪಡೆದ ಬ್ರೆಕ್ಟ್ ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಸೇನಾ ಶಿಬಿರಗಳಲ್ಲಿ ಕೆಲಸ ಮಾಡಬೇಕಾಯಿತು. ಕಣ್ಣೆದುರಿಗೆ ಕಂಡ ಧಾರುಣ ದೃಶ್ಯಗಳು ಬ್ರೆಕ್ಟ್ ನೊಳಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದವು. ಯುದ್ಧ ಮುಗಿದ ನಂತರ ಕಂಡಿದ್ದು ಬದುಕಿನಲ್ಲಿ ಅಂಧಕಾರ ತುಂಬಿದವರನ್ನು. ದೇಶಕ್ಕೆ ದೇಶವೇ ನಿರಾಶ್ರಿತರ ಶಿಬಿರದಂತೆ ಆಗಿತ್ತು. ಹಿಟ್ಲರ್ ಘರ್ಜಿಸತೊಡಗಿದ, ನಾಜಿ ಪಡೆ ಆರ್ಭಟಿಸತೊಡಗಿತು. ಬ್ರೆಕ್ಟ್ ಗೆ ಅನಿಸಿಹೋಯಿತು- ನಾನು ಬರೆದು ಸಮಾಜ ಹೀಗಿದೆ ಎಂದು ಸಾರುತ್ತ ಹೋದರಷ್ಟೇ ಸಾಲುವುದಿಲ್ಲ ಸಮಾಜವನ್ನು ರಿಪೇರಿಯೂ ಮಾಡಬೇಕು ಎಂದು. ಅವನ ಯಾವುದೇ ನಾಟಕ ತೆಗೆದುಕೊಳ್ಳಿ, ಕವಿತೆಗಳ ಒಳಗೆ ಕೈ ಆಡಿಸಿ ಅದು ಒಂದು ಪ್ರಶ್ನೆಯನ್ನು ಎತ್ತದಿದ್ದರೆ ಕೇಳಿ.
ಸಮಾಜದ ನೋವಿನೊಳಗೆ ಕಳೆದು ಹೋಗಿಬಿಡುವುದಲ್ಲ, ಆ ನೋವನ್ನು ಅರಿತು ಅದನ್ನು ಬದಲಿಸುವುದು ಮುಖ್ಯ ಎಂದು ಕಂಡುಕೊಂಡ ಕಾರಣಕ್ಕಾಗಿಯೇ ‘ಎಪಿಕ್ ರಂಗ’ ಶೈಲಿ ಸಹಾ ಕುಡಿಯೊಡೆಯಿತು. ಕಕೇಶಿಯನ್ ಚಾಕ್ ಸರ್ಕಲ್, ಥ್ರೀ ಪೆನ್ನಿ ಅಪೇರಾ, ಗುಡ್ ವುಮನ್ ಆಫ್ ಸೆಜುವಾನ್, ಮದರ್ ಕರೇಜ್, ಗೆಲಿಲಿಯೋ ಹೀಗೆ ಸಾಲು ಸಾಲು ನಾಟಕಗಳು ಬ್ರೆಕ್ಟ್ ನ ಕಾಣ್ಕೆಯನ್ನು ಸ್ಪಷ್ಟಪಡಿಸಿದವು. ಜರ್ಮನಿಯ ಬವೇರಿಯಾ ಪ್ರಾಂತ್ಯದಿಂದ ಹೊರಟ ಬ್ರೆಕ್ಟ್ ನ ಬದುಕಿನ ಯಾತ್ರೆ ಕೊನೆಗೆ ದೇಶಭ್ರಷ್ಟನ ಹಣೆಪಟ್ಟಿ ಹೊತ್ತು ದೇಶ ದೇಶ ಅಲೆಯುವಂತೆ ಮಾಡಿತು. ಆ ನಂತರ ಅಮೆರಿಕಾದಲ್ಲೂ ಆತ ವಿಚಾರಣೆಯನ್ನು ಎದುರಿಸಬೇಕಾಗಿ ಬಂತು, ಪೂರ್ವ ಜರ್ಮನಿಯಲ್ಲೂ ಇರಿಸು ಮುರಿಸು ಅನುಭವಿಸಿದ. ಆದರೆ ಬ್ರೆಕ್ಟ್ ಎಲ್ಲೆಡೆಯೂ ಬರೆದ, ಎಲ್ಲೆಡೆಯೂ ನಾಟಕ ಆಡಿಸಿದ, ಎಲ್ಲೆಡೆಯೂ ಪ್ರಶ್ನೆಯನ್ನು ಹುಟ್ಟು ಹಾಕುತ್ತಲೇ ಹೋದ.
question markಸಪ್ತದ್ವಾರಗಳ ಥೀಬ್ಸ್ ನಗರವನ್ನು ಯಾರು ಕಟ್ಟಿದರು?
ಪುಸ್ತಕಗಳು ರಾಜಮಹಾರಾಜರುಗಳ ಹೆಸರನ್ನು ಹೇಳುತ್ತವೆ
ಏನು, ಮಹಾರಾಜರು ಕಲ್ಲು ಹೊತ್ತರೆ?
ಯುವ ಅಲೆಕ್ಸಾಂಡರ್ ಭಾರತವನ್ನು ಗೆದ್ದ
ಏನು, ಒಂಟಿಯಾಗಿಯೇ?..
ಹೀಗೆ ಬ್ರೆಕ್ಟ್ ಪ್ರಶ್ನಿಸುತ್ತಲೇ ಹೋದ. ‘ನಾನು ಬರ್ಟೋಲ್ಟ್ ಬ್ರೆಕ್ಟ್ ‘ಹಿಂದಿನ ಕಾಲದಲ್ಲಿ ನಮ್ಮಮ್ಮನ ಹೊಟ್ಟೆಯಲ್ಲಿದ್ದಾಗಲೇ/ ಕಪ್ಪಗಾಡುಗಳಿಂದ ಡಾಂಬರು ನಗರಕ್ಕೆ ತಂದು ಒಗೆಯಲ್ಪಟ್ಟವನು..’ ಎಂದು ತನ್ನನ್ನು ಬಣ್ಣಿಸಿಕೊಳ್ಳುವ ಬ್ರೆಕ್ಟ್ ಕತ್ತಲ ಕಾಲದ ಕವಿ. ಯಾಕೆಂದರೆ ಆತ ಬರೆಯುತ್ತಾನೆ
ಕಗ್ಗತ್ತಲಕಾಲದಲ್ಲಿ ಹಾಡುವುದೂ ಉಂಟೆ? 
ಹೌದು, ಹಾಡುವುದೂ ಉಂಟು
ಕಗ್ಗತ್ತಲ ಕಾಲವನ್ನು ಕುರಿತು..
ಅಂತಹ ಕಗ್ಗತ್ತಲ ಕಾಲದ ಮೇಲೆ ಬೆಳಕು ಚೆಲ್ಲುವ ಒಂದು ನಾಟಕ ‘ಧರ್ಮಪುರಿಯ ದೇವದಾಸಿ’

Add Comment

Leave a Reply