Quantcast

ಬ್ಲಾಕ್ ಮನಿ: ಹೆರೆದದ್ದು ಕಾಯಿಯೋ, ಕರಟವೋ?

rajaram tallur low res profile

ರಾಜಾರಾಂ ತಲ್ಲೂರು

ನವೆಂಬರ್ ಎಂಟರ ನಡುರಾತ್ರಿಯಿಂದ 1000  ಮತ್ತು 500 ರೂಗಳ ಕರೆನ್ಸಿಗೆ ಬೆಲೆ ಇಲ್ಲ ಎಂಬ ಕೇಂದ್ರ ಸರಕಾರದ ಘೋಷಣೆಯ ಪರಿಣಾಮಗಳು, ಮುಂದಿನ ಕೆಲವು ದಿನಗಳ ಕಾಲ ಹಣಕಾಸು ಎಮರ್ಜನ್ಸಿಯಂತಹ ಸ್ಥಿತಿಗೆ ಕಾರಣ ಆಗಲಿವೆ ಎಂಬುದರಲ್ಲಿ ಸಂಶಯವಿಲ್ಲ.

ಸರ್ಕಾರದ ಉದ್ದೇಶ ಕಪ್ಪು ಹಣ, ಖೋಟಾ ನೋಟು ಮತ್ತು ಹವಾಲಾ-ಉಗ್ರವಾದ ಹಣಸಂಗ್ರಹಗಳನ್ನು ವ್ಯರ್ಥಗೊಳಿಸುವುದು. ಸಾಮಾನ್ಯವಾಗಿ ಜಗಲಿ ಕಟ್ಟೆಯಲ್ಲಿ ಕುಳಿತು ದೇಶ ಸುಧಾರಿಸಬೇಕಿದ್ದರೆ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ಕಥೆ ಹೇಳುವವರ ಫೇವರೀಟ್ ವಿಷಯಗಳಲ್ಲೊಂದು – ಈ ರಾತ್ರೋರಾತ್ರಿ ಹಣವನ್ನು ಅಮಾನ್ಯಗೊಳಿಸುವುದು.

avadhi-column-tallur-verti- low res- cropಕೇಂದ್ರ ಸರ್ಕಾರ ಇಂತಹದೊಂದು ಕಾಗಕ್ಕ-ಗುಬ್ಬಕ್ಕ ಕಥೆಯನ್ನು ಯತಾರ್ಥ ಮಾಡಿಬಿಟ್ಟಿದೆ. ಹೆಚ್ಚಿನಂಶ ನರೇಂದ್ರ ಮೋದಿ ಸರ್ಕಾರ ಬಂದಮೇಲೆ ತೆಗೆದುಕೊಂಡ ಮೊದಲ ‘ಧಮ್ ದಾರ್’ ನಿರ್ಧಾರ ಇದು. ಯಾಕೆಂದರೆ, ಕಳೆದ ತಿಂಗಳು ಕಪ್ಪುಹಣ ಘೋಷಣೆಗೆ ನೀಡಿದ ಅವಕಾಶವನ್ನು ಜನ ಬಳಸಿಕೊಳ್ಳದಿದ್ದಾಗ ಕೊನೆಗಳಿಗೆಯಲ್ಲಿ ಐಟಿ ಅಧಿಕಾರಿಗಳಿಗೆ ಇಂತಿಷ್ಟು ಬಿಳಿ ಮಾಡಲೇಬೇಕು ಎಂದು ಒತ್ತಡ ಹೇರಬೇಕಾಗಿ ಬಂದಿತ್ತು. ಅಷ್ಟಾಗಿ ಕೂಡ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.

ಕಪ್ಪು ಹಣದ ಕಥೆ ಮುಗಿಯಿತೆ?

ಈ ಹೆಜ್ಜೆಗಳಿಂದ ಕಪ್ಪು ಹಣದ ಕಥೆ ಮುಗಿಯಿತೇ? ಎಂದು ಕೇಳಿದರೆ ಉತ್ತರ “ಭಾಗಶಃ ಮಾತ್ರ” ಎಂದು. ಈ ಕರೆನ್ಸಿ ಅಮಾನ್ಯಗೊಳಿಸಿದ್ದರಿಂದ ಕಂಗೆಡಲಿರುವವರು ರಿಯಲ್ ಎಸ್ಟೇಟ್ ಉದ್ಯಮಿಗಳು, ಟ್ರೇಡರ್ ಗಳು, ಭ್ರಷ್ಟ ಸರ್ಕಾರಿ ಅಧಿಕಾರಿಗಳು, ಧಾರ್ಮಿಕ ಕೇಂದ್ರಗಳು ಮತ್ತು ನಗದು ವಹಿವಾಟು ನಿರತರಾದ ಕೈಗಾರಿಕೆಗಳು.

ತಜ್ನರ ಅಂದಾಜಿನಂತೆ, ದೇಶದ ಒಟ್ಟು ಕಪ್ಪುಹಣದಲ್ಲಿ 30% ಕಪ್ಪು ಹಣ ಮಾತ್ರ ನಗದು ರೂಪದಲ್ಲಿದ್ದರೆ, ಉಳಿದ 70% ಬೇನಾಮಿ ಆಸ್ತಿ, ಒಡವೆ, ವಾಹನ, ಹೂಡಿಕೆ ಇತ್ಯಾದಿ ಇತ್ಯಾದಿ ರೂಪಗಳಲ್ಲಿ ಇರುತ್ತವೆ. ಅವಕ್ಕೆಲ್ಲ ಸದ್ಯ ಏನೂ ಕಂಟಕ ಬರುವುದಿಲ್ಲ.

ಸಣ್ಣ ಪ್ರಮಾಣದ ಕಪ್ಪುಹಣ ಇರುವವರಿಗೂ ಇದರಿಂದ ಆತಂಕ ಆಗಲಾರದು. ತಮ್ಮ ಗೆಳೆಯರಿಗೋ, ಸಂಬಂಧಿಕರಿಗೋ ಅಥವಾ ಸಿಬ್ಬಂದಿಗಳಿಗೋ ದಂಬಾಲು ಬಿದ್ದು, ಅವರಿಗೆ ಸ್ವಲ್ಪ ಕಮಿಷನ್ನೋ, ಲಾಭವೋ ಕೊಟ್ಟು, ಯಾರೂ ಆದಾಯ ತೆರಿಗೆಯವರ ಕಣ್ಣಿಗೆ ಬೀಳದಂತೆ ಮಾನ್ಯ ಕರೆನ್ಸಿಗೆ ಆ ಹಣವನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಇದೆ. ಅಂತಹವರಿಗೆ ಇನ್ನು ಒಂದೆರಡು ತಿಂಗಳು ಭರಪೂರ ಕಮಾಯಿ!

ಆದರೆ ಲಕ್ಷಾಂತರ ರೂಪಾಯಿಗಳ ನೋಟಿನ ಕಟ್ಟುಗಳನ್ನು ಮನೆಯಲ್ಲೇ ಇರಿಸಿಕೊಂಡು ವ್ಯವಹರಿಸುವವರು ಈವತ್ತಿನ ಸರ್ಕಾರಿ ನಿರ್ಧಾರದ ಮೊದಲ ಹೊಡೆತ ತಿನ್ನಲಿದ್ದಾರೆ. ಈಗ ಕಪ್ಪುಹಣ ಘೋಷಣೆ ಅವಧಿ ಮುಗಿದಿರುವುದರಿಂದ, ಇರುವ ಕಪ್ಪುಹಣ ಘೋಷಣೆ ಮಾಡಿಕೊಂಡರೂ ಅದು ಕ್ರಿಮಿನಲ್ ಅಪರಾಧ ಆಗಲಿದೆ. ಮಾಡದಿದ್ದರೆ, ಆ ಹಣಕ್ಕೆ ಮಾನ್ಯತೆ ಉಳಿದಿರುವುದಿಲ್ಲ. ಕಪ್ಪುಹಣಕ್ಕೆ ಇದು ದೇಶದಲ್ಲಿ ಬಿದ್ದಿರುವ ಮೊದಲ ಕಡಿವಾಣ.

black-money2ಕೇಂದ್ರ ಸರ್ಕಾರ ತನ್ನ ಈ ಕ್ರಮವನ್ನು, ಕರೆನ್ಸಿಗಳ ವಹಿವಾಟಿನ ಮೇಲೆ ಸೂಕ್ತ ನಿಯಂತ್ರಣ ಮತ್ತು ಪ್ಲಾಸ್ಟಿಕ್ ಮನಿ (ಕ್ರೆಡಿಟ್/ಡೆಬಿಟ್ ಕಾರ್ಡ್)ಗಳ ಬಳಕೆಗೆ ಸೂಕ್ತ ಪ್ರೋತ್ಸಾಹದೊಂದಿಗೆ ಸಮರ್ಥಿಸಿಕೊಳ್ಳದಿದ್ದರೆ ಹೆಚ್ಚು ಪ್ರಯೋಜನವಾಗದು. ಹೆಚ್ಚೆಂದರೆ ಕಪ್ಪು ಹಣದ ಒಂದು ಚಾಪ್ಟರ್ ಮುಚ್ಚಿ, ಹೊಸ ಚಾಪ್ಟರ್ ತೆರೆದುಕೊಳ್ಳಬಹುದು ಅಷ್ಟೇ.

ಈ ನಡುವೆ ಕಪ್ಪು ಹಣದ ದರ್ಬಾರು ಸ್ವಲ್ಪ ತಣ್ಣಗಾಗುವುದರಿಂದ, ಮಾರುಕಟ್ಟೆಯಲ್ಲಿ ಹಣದುಬ್ಬರ ಗಣನೀಯವಾಗಿ ತಗ್ಗಲಿದೆ. ಹಾಗಾಗಿ, ಆ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಬದುಕು ಸ್ವಲ್ಪ ಹೆಚ್ಚು ಸಹನೀಯ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಭೂಮಿ, ಚಿನ್ನಾಭರಣ, ಗ್ರಾಹಕ ಬಳಕೆಯ ಸಾಮಗ್ರಿಗಳಿಗೆ ಬೇಡಿಕೆ ತಗ್ಗಿ, ಅವುಗಳ ಬೆಲೆ ಇಳಿಯಲಿದೆ ಎಂಬ ನಿರೀಕ್ಷೆ ಕೂಡ ಇದೆಯಂತೆ.

ಸವಾಲು ನಿಭಾವಣೆಯದು

ಬುಧವಾರ ಬ್ಯಾಂಕು-ATM ಕಾರ್ಯಾಚರಿಸದಿರುವುದರಿಂದ, ಗುರುವಾರದಂದು ಸ್ವಲ್ಪಮಟ್ಟಿಗೆ ಆರ್ಥಿಕ ಎಮರ್ಜನ್ಸಿಯಂತಹ ಪರಿಸ್ಥಿತಿ, ಗೊಂದಲ ಇರಬಹುದು. ಅಂಚೆ ಕಚೇರಿ, ಬ್ಯಾಂಕು, ಪೆಟ್ರೋಲ್ ಬಂಕುಗಳೆದುರು ಉದ್ದುದ್ದ ಸರತಿಸಾಲುಗಳು ಕಂಡುಬರಬಹುದು. ದೊಡ್ಡ ಪ್ರಮಾಣದ ವಹಿವಾಟುಗಳೆಲ್ಲ ಆದಾಯತೆರಿಗೆ ಇಲಾಖೆಯ ಗಮನಕ್ಕೆ ಬರಲಿದೆ. ಇವನ್ನೆಲ್ಲ ನಿಭಾಯಿಸಿ, ಹೊಸ ಕರೆನ್ಸಿ ವ್ಯವಸ್ಥೆಯನ್ನು ಸುಸೂತ್ರ ಜಾರಿಗೆ ತರುವ ತನಕ ಪರಿಸ್ಥಿತಿಯನ್ನು ನಿಭಾಯಿಸುವುದು ಸರ್ಕಾರಕ್ಕೂ, ವ್ಯವಸ್ಥೆಗೂ ಸವಾಲಾಗಲಿದೆ.

 

4 Comments

 1. Pradeep
  November 10, 2016
 2. ಕೆ.ಈ.ಸಿದ್ದಯ್ಯ ತುಮಕೂರು.
  November 9, 2016
 3. ಮಮತ
  November 9, 2016
  • Neelakanta
   November 10, 2016

Add Comment

Leave a Reply