Quantcast

ಎಚ್ ಎಸ್ ವಿ ಕಾಲಂ: ಟೌನ್ ಹಾಲ್, ರೈಲ್ವೇನಿಲ್ದಾಣವಾದ ಪವಾಡ…

ತಾವರೆಯ ಬಾಗಿಲು-೮
ಎಚ್.ಎಸ್.ವೆಂಕಟೇಶ ಮೂರ್ತಿ

 

ಕವಿತೆಯನ್ನು ಬರೆಯಲಿಕ್ಕೆ ಕವಿಗೆ ಒಂದು ಬೆದೆ ಬೇಕು ಎನ್ನುವರು. ಹಾಗೆಯೇ ಕವಿತೆಯನ್ನು ಓದಲಿಕ್ಕೆ ಓದುಗನಿಗೂ ಒಂದು ಮನಸ್ಸಿನ ಹದ ಬೇಕು. ಪರೀಕ್ಷೆಗೆ ಕೂತ ವಿದ್ಯಾರ್ಥಿಯಂತೆ ಕವಿತೆಯನ್ನು ಹಠ ಮಾಡಿ ಓದಲಿಕ್ಕಾಗದು. ಕವಿತೆಯನ್ನು ಓದಲಿಕ್ಕೆ ಬೇಕಾದ ಹದ ಯಾವುದು? ಈಗ ಕವಿತೆಯೊಂದನ್ನು ನಾನು ಓದಲೇ ಬೇಕು ಎಂಬ ತೀವ್ರವಾದ ಹಸಿವು. ತಳಮಳ. ಹಂಗರ್ ಫಾರ್ ಪೊಯಮ್ ಎನ್ನುತ್ತಾರೆ. ಹೊಟ್ಟೆ ತುಂಬಿದವನಿಗೆ ಹುಗ್ಗಿ ಮುಳ್ಳು ಎನ್ನುತ್ತಾರಲ್ಲವೇ? ಮನಸ್ಸು ಪರ್ಯಾಪ್ತವಾದಾಗ ಎಂಥ ಕವಿತೆಯೂ ನಮಗೆ ಹಿಡಿಸಲಾರದು.

french_designಓದುವ ತೆವಲು ಉಂಟಾದಾಗ ನಾವು ಏಕಾಂತದಲ್ಲಿ ಕವಿತೆಯೊಂದನ್ನು ಕೈಗೆತ್ತಿಕೊಳ್ಳುತ್ತೇವೆ. ಕವಿತೆಯ ಗ್ರಹಣೆಗೆ ತಕ್ಕಂಥ ಅಂತರಂಗ, ತಕ್ಕಂತ ಬಹಿರಂಗ ಒಮ್ಮೊಮ್ಮೆ ತಾನೇ ತಾನಾಗಿ ಒದಗಿ ಬರುವುದು. ಪುತಿನ ಅವರ ‘ಗೋಕುಲ ನಿರ್ಗಮನ’ದ ಪ್ರಾರಂಭದಲ್ಲಿ ಒಂದು ಪ್ರಸಂಗವಿದೆ.

ಮೋಡ ಕವಿದಿರುವ ರಾತ್ರಿ. ಕವಿ ತನ್ನ ಮನೆಯಲ್ಲಿ ಇದ್ದಾನೆ. ಮರೆಯಲ್ಲಿ ಗೊಲ್ಲ ಹುಡುಗರು ಊದುವಂಥ ಕೊಳಲ ನಾದವು ಒಮ್ಮೆಗೇ ಕೇಳುತ್ತದೆ. ಯಾವನಪ್ಪಾ ಈ ಹುಚ್ಚ?  ಸರಿಹೊತ್ತಲ್ಲಿ ಹೀಗೆ ಮಧುರವಾದ ರಾಗವನ್ನು ರಚಿಸುತ್ತಿದ್ದಾನಲ್ಲಾ! ಎಂಬುದಾಗಿ ಕವಿ ಅಚ್ಚರಿಪಡುತ್ತಾನೆ. ಕಾಲವೇ ಹಿಂದು ಹಿಂದಕ್ಕೆ ಸರಿದು ಗೊಲ್ಲ ಹುಡುಗರ ಕೊಳಲ ಧ್ವನಿ ಕವಿಯ ಮನಸ್ಸಿಗೆ ಗೋಕುಲದ ನೆನಪು ತರುತ್ತದೆ. ಕೊಳಲ ನಾದ ಮತ್ತಷ್ಟು ಮಧುರತರವಾಗುತ್ತದೆ!

ಎಲ್ಲ ಹೊತ್ತಲ್ಲೂ ಇಂಥ ಅನುಭವ ಕವಿಗೆ ಆಗುತಿತ್ತೋ ಇಲ್ಲವೋ! ಕತ್ತಲು. ಏಕಾಂತ. ಆಕಾಶವನ್ನು ತುಂಬಿರುವ ಮೋಡಗಳು. ಕವಿಯ ಮನಸ್ಸು ಈಗ ಕಲೆಯ ಆಸ್ವಾದನೆಗೆ ತಕ್ಕ ಹದದಲ್ಲಿ ಇದೆ. ಆಗ ಕೇಳಿಬಂದ ಗೊಲ್ಲ ಹುಡುಗರ ಕೊಳಲ ಧ್ವನಿ ಒಂದು ಮಾಯೆಯನ್ನೇ ಕವಿಯ ಮೇಲೆ ಕವಿಸಿಬಿಡುತ್ತದೆ! ಕೊಳಲ ನಾದದ ಚೆಲುವು ಅವರ ಮನಸ್ಸಲ್ಲಿ ಅದ್ಭುತವಾದ ಒಂದು ಮಾಯಾಲೋಕವನ್ನು ನಿರ್ಮಿಸಿಬಿಡುತ್ತದೆ! ಆಹಾ! ಇದಪ್ಪಾ ಕವಿತೆಯ ಆಸ್ವಾದನೆಗೆ ಬೇಕಾದ ಮನಸ್ಸಿನ ಹದ.

ನೀವು ಕೆಲವು ಕವಿಗೋಷ್ಠಿಗಳಲ್ಲಿ ಕವಿಯಾಗಿಯೋ, ಕೇಳುಗನಾಗಿಯೋ ಭಾಗವಹಿಸಿರಬಹುದು. ದೊಡ್ಡ ಜನಜಂಗುಲಿ. ಹೊರಗೆ ಧಗ ಧಗ ಉರಿಯುವ ಬಿಸಿಲು. ವೇದಿಕೆಯ ಮೇಲೆ ಯಾರದ್ದೋ ಮಾತು.. ಎಂಥದೋ ಗೊಂದಲ. ಊಟದ ಸಮಯ ಬೇರೆ ಹತ್ತಿರವಾಗುತ್ತಿದೆ. ತಡವಾದರೆ ಪಂಕ್ತಿಯಲ್ಲಿ ಸ್ಥಳ ದೊರೆಯಲಾರದೇನೋ ಎಂಬ ಆತಂಕ ಕೇಳುಗರಿಗೆ. ಆಗ ಕವಿಯೊಬ್ಬರು ತಮ್ಮ ಕವಿತೆಯ ವಾಚನ ಶುರುಹಚ್ಚುತ್ತಾರೆ. ಕವಿಗೋಷ್ಠಿಯ ಉಳಿದ ಕವಿಗಳು ತಾವು ಯಾವ ಕವಿತೆ ಓದಬೇಕು ಎಂಬ ಗಡಿಬಿಡಿಯಲ್ಲಿ ತಮ್ಮ ಪುಸ್ತಕವನ್ನು ತಿರುವುತ್ತಿದ್ದಾರೆ. ಮತ್ತೆ ಕೆಲವರು ಕವಿತೆಯ ಮೇಲೆ ಮನಸ್ಸಿಡದೆ ಯಾವುದೋ ಯೋಚನೆಯಲ್ಲೋ, ಮಾತು ಕತೆಯಲ್ಲೋ ಮಗ್ನರಾಗಿದ್ದಾರೆ. ಪ್ರೇಕ್ಷಕರು ನಿಧಾನಕ್ಕೆ ಎದ್ದು ಜಾಗ ಖಾಲಿ ಮಾಡುತ್ತಾ ಇದ್ದಾರೆ. ಪಾಪ…ಕವಿಯೊಬ್ಬರು ಕವಿತೆಯನ್ನು ಓದುತ್ತಾ ಇದ್ದಾರೆ! ಇದು ಕವಿತೆಯ ಓದಿಗೆ ತಕ್ಕ ಸಮಯವೂ ಅಲ್ಲ; ಹದವೂ ಅಲ್ಲ.

ಇಂತಹ ವಿಷಮ ಸನ್ನಿವೇಶದಲ್ಲೂ ಕವಿತೆ ತನ್ನ ಮಾಯೆಯನ್ನು ಸೃಜಿಸಬೇಕು ಎಂದರೆ ಅದು ಬೇಂದ್ರೆಯ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬಂಥ ಅದ್ಭುತ ರಚನೆಯಾಗಿರಬೇಕು. ಬೇಂದ್ರೆ ತಮ್ಮ ಆ ಕವಿತೆಯನ್ನು ಓದಿ ಲಕ್ಷಾಂತರ ಕನ್ನಡಿಗರ ಮನಸ್ಸನ್ನು ಸೂರೆ ಮಾಡಿದ್ದೂ ಅಂಥ ಒಂದು ಬಿರುಬಿಸಿಲ ಕದಡಿದ ಕೊಳದಂಥ ಪ್ರೇಕ್ಷಕರ ಬೃಹದ್ ಸಭೆಯಲ್ಲೇ! ಈಗ ವಾತಾವರಣದಲ್ಲಿ ಕವಿತೆಯ ಹಸಿವು ಕಾಣದಾಗಿದೆ. ನಾವು ಕವಿತೆಯೋದಲು ತಕ್ಕ ಮನಸ್ಸಿನ ಹದ ಕಾಯಬೇಕಾಗಿದೆ. ಒಂದು ಧ್ಯಾನಸ್ಥಿತಿ. ಒಂದು ಮೌನ. ಒಂದು ಕಾವ್ಯದ ಚಡಪಡಿಕೆ. ಒಂದು ಕಾವ್ಯದ ದುರ್ದಮ್ಯ ಅಗತ್ಯ. ಮೋಡ ಕವಿದ ಇರುಳಲ್ಲಿ ಗೋಕುಲ ನಿರ್ಗಮನದ ಕವಿ ಗೊಲ್ಲ ಹುಡುಗರ ಕೊಳಲ ಧ್ವನಿ ಕೇಳಿದನಲ್ಲ ಅಂಥ ಮಾಯಕ ವಾತಾವರಣ.

ನನ್ನ ಜೀವನದಲ್ಲೂ ಕವಿತೆ ಮನಸ್ಸನ್ನು ಇನ್ನಿಲ್ಲದಂತೆ ಆವರಿಸಿದ ಕೆಲವು ಸಂದರ್ಭಗಳು ಇವೆ. ಅಂಥ ಒಂದು ಸಂದರ್ಭವನ್ನು ತಮ್ಮ ಮುಂದೆ ನಿವೇದಿಸುತ್ತೇನೆ. ದಶಕಗಳ ಹಿಂದಿನ ಸಂದರ್ಭ ಇದು. ಟೌನ್ ಹಾಲಿನಲ್ಲಿ ಕೆ ಎಸ್ ನರಸಿಂಹಸ್ವಾಮಿಯವರಿಗೆ ಅರವತ್ತು ತುಂಬಿದ ಸಂದರ್ಭದಲ್ಲಿ ಅವರಿಗೊಂದು ಸನ್ಮಾನ ಏರ್ಪಾಡಾಗಿದೆ. ಕಿಕ್ಕಿರಿದು ತುಂಬಿರುವ ಸಭೆ. ಡಿವಿಜಿ ಅವರ ಅಧ್ಯಕ್ಷತೆ. ಪಕ್ಕದಲ್ಲಿ ಮಾಸ್ತಿ. ಅವರು ಸಭೆಯ ಮುಖ್ಯ ಅತಿಥಿ. ಈಕಡೆ ಬದಿಯಲ್ಲಿ ಮದುಮಗನಂತೆ ಲಕಲಕಿಸುತ್ತಿರುವ ಕೆ ಎಸ್ ನ…. ಸಂಜೆಯ ಸಮಯ. ಆಗಷ್ಟೆ ಒಂದು ಹದ ಮಳೆ ಹೊಡೆದು ನಿಂತಿದೆ. ಹಾಗಾಗಿ ತಣ್ಣನೆಯ ತಂಗಾಳಿ ಭವನದ ಒಳಗೆ ತಾನೂ ಒಬ್ಬ ಕಾವ್ಯ ಕೇಳುಗ ಎಂಬಂತೆ ನುಸುಳುತ್ತಾ ಇದೆ.

hsvಸಭೆಗೆ ತಡವಾಗಿ ಹೋಗಿರುವ ನಾನು ಕೂರಲು ಸ್ಥಳವಿಲ್ಲದೆ ಕೊನೆಯ ಸಾಲಿನ ಕುರ್ಚಿಯ ಹಿಂದೆ ನಿಂತಿದ್ದೇನೆ. ಈಗ ಕೆ ಎಸ್ ನರಸಿಂಹಸ್ವಾಮಿ ಕವಿತೆಯೋದುವ ಸಮಯ. ಮೆಲ್ಲಗೆ ಕವಿ ಎದ್ದು ನಿಲ್ಲುತ್ತಾರೆ. ಯಾರೋ ಮೈಕ್ ಸರಿಪಡಿಸುತ್ತಾರೆ. ಜನವೆಲ್ಲಾ ಕಾತರರಾಗಿ ಕೆ ಎಸ್ ನ ಓದುವ ಕವಿತೆಯ ನಿರೀಕ್ಷೆಯಲ್ಲಿದ್ದಾರೆ. ಅಬ್ಬರವಿಲ್ಲದ ಪ್ರಸನ್ನವಾದ ಆದರೆ ಕೊರಳಲ್ಲಿ ಆರ್ದ್ರತೆ ತುಂಬಿದ ಧ್ವನಿಯಲ್ಲಿ ಕವಿ ಕವಿತೆ ಓದಲು ತೊಡಗುತ್ತಾರೆ. ಅದಕ್ಕೆ ಮಾರುದ್ದದ ಪೀಠಿಕೆಯಿಲ್ಲ! ಕೇಳುಗರನ್ನು ಪ್ರಭಾವಿಸಲೇ ಬೇಕೆಂಬ ಹಠವೂ ಇಲ್ಲ. ಜಗತ್ತಿನಲ್ಲಿ ಈ ಹೊತ್ತು ನಾನು ಮತ್ತು ನನ್ನ ಕವಿತೆ ಮಾತ್ರ ಇರುವುದು ಎಂಬಂಥ ತಾದಾತ್ಮ್ಯದಲ್ಲಿ ಕವಿತೆಯ ಓದು ಪ್ರಾರಂಭವಾಗುತ್ತದೆ! ಇನ್ನೂ ಅಚ್ಚಾಗಿರದ ಹೊಸ ಕವಿತೆ! ರೈಲ್ವೇ ನಿಲ್ದಾಣದಲ್ಲಿ! ಮಾತಾಡಿದರೆ ಎಲ್ಲಿ ಕವಿತೆ ಕಿವಿ ಜಾರುವುದೋ ಎಂಬ ಆತಂಕದಲ್ಲಿ ಕವಿತೆಯ ತೀವ್ರವಾದ ಹಸಿವಿನಲ್ಲಿ ನಾನು ಕಾವ್ಯಾಸ್ವಾದನಕ್ಕೆ ಸಿದ್ಧನಾಗಿದ್ದೇನೆ. ಕವಿಯ ಬಗೆಗಿನ ಅಭಿಮಾನ; ಮಾಸ್ತಿ, ಡಿವಿಜಿ ಅವರ ಹಾಜರಿಯ ಗಾಂಭೀರ್ಯ. ಕವಿಯ ಅರವತ್ತರ ಜನ್ಮದಿನದ ಸಂಧಿಯ ಆವೇಗ. ಕೆ ಎಸ್ ನ ಪದ್ಯ ಓದುತ್ತಾರೆ:

ರೈಲ್ವೆ ನಿಲ್ದಾಣದಲ್ಲಿ

ಎಲ್ಲಿದ್ದೀಯೇ ಮೀನಾ?
ಇಲ್ಲೇ ಇದ್ದೀನಮ್ಮ.
ತೊಟ್ಟಿಲು ಪೆಟ್ಟಿಗೆ ಹಾಸಿಗೆ
ಇಲ್ಲೇ ಇವೆಯಮ್ಮ.

ಏನನ್ನೋ ಮರೆತಂತಿದೆ?
ಮರೆಯುವುದೇ ಹೇಗೆ?
ಏನನ್ನೋ ನೆನೆವಂತಿದೆ?
ನಾನಿರುವುದೆ ಹಾಗೆ.

ಬಿಸಿನೀರಿದೆಯೇ ಮೀನಾ,
ಮಗುವಿನ ಹಾಲಿನ ಪುಡಿಗೆ?
ಬೇಕಾದಷ್ಟಿದೆಯಮ್ಮ-
(ಕಣ್ಣಲ್ಲೂ ಜತೆಗೆ).

ಮಗುವನು ಹಿಡಿಯೇ ಹೀಗೆ,
ಕಪ್ಪಿಡುವೆನು ಹಣೆಗೆ-
ಮೈ ಬಿಸಿಯಾಗಿದೆಯಲ್ಲೆ
ಹೊರಡುವ ಸಮಯಕ್ಕೆ!

ಘಂಟೆಯ ಹೊಡೆತಕೆ, ಸಿಳ್ಳಿಗೆ,
ಬೀಸಿದ ಬಾವುಟಕೆ
ನಡುಗುತ್ತಿದೆ ಬಂಡಿಯ ಮೈ
ದೀಪದ ಬೆದರಿಕೆಗೆ.

ಕಿಟಕಿಯ ಜತೆಗೂ ಬರುವುದು
ಬೇಡಮ್ಮ, ಹೋಗು.
ಇಲ್ಲಿಂದಲೆ ಕೈಮುಗಿಯುವೆ-
ನಲ್ಲಿಂದಲೆ ಹರಸು.

ಕಂಬಿಗಳುದ್ದಕು ಹಬ್ಬಿತು
ಎಂಜಿನ್ನಿನ ಕೂಗು;
ಎಲ್ಲಿದ್ದೀಯೆ ಮೀನಾ,
ಎಲ್ಲಿದ್ದೀಯೇ?

ಕಿಡಿಗಳು ಹೊರಳುವ ಹೊಗೆಯಲಿ
ಹೆಗ್ಗಾಲಿಗಳುರುಳು;
ಇಲ್ಲೇ ಇದ್ದೇನಮ್ಮ,
ಇಲ್ಲೇ ಇದ್ದೇನೆ.

ಕಿಟಕಿಯ ಮುಚ್ಚಿಕೊ ಮೀನಾ
ಕಿಡಿ ಬೀಳುವುದೊಳಗೆ
ಕಿಟಕಿಯ ಮುಚ್ಚಿದೆನಮ್ಮ,
ಕಿಡಿ ಬೀಳದ ಹಾಗೆ.

trainನಾನು ಸಂಪೂರ್ಣ ಪರವಶನಾಗಿದ್ದೆ. ಕವಿತೆ ಮುಗಿಯಿತೆ? ಸಭೆಯ ಪ್ರತಿಕ್ರಿಯೆ ಏನು? ನಾನು ಎಲ್ಲಿದ್ದೇನೆ? ಯಾವುದೂ ನನ್ನ ಗ್ರಹಿಕೆ ಬರಲಿಲ್ಲ. ಟೌನ್ ಹಾಲ್ ಒಮ್ಮೆಗೇ ರೈಲ್ವೇ ನಿಲ್ದಾಣವಾಗಿ ಸ್ಥಳಾಂತರ ಪಡೆದಿತ್ತು. ತಾಯಿಯ ಕಕುಲಾತಿ; ಮಗಳ ಚಡಪಡಿಕೆ. ಕಣ್ಣಂಚಲ್ಲಿ ಯಾರಿಗೂ ಕಾಣದಂಥ ಒಂದು ಸಣ್ಣ ಹನಿ. ಐದೇ ನಿಮಿಷದಲ್ಲಿ ತಮ್ಮ ಕಾವ್ಯದ ಇಂದ್ರ ಜಾಲದಿಂದ ಕವಿ ಇಡೀ ವಾತಾವರಣದಲ್ಲಿ ಭಾವದ ವಿದ್ಯುತ್ ಹರಿಸಿಬಿಟ್ಟಿದ್ದರು.

ಕಕ್ಕುಲಾತಿ. ಕಕ್ಕುಲಾತಿ. ಅದುಬಿಟ್ಟು ಜಗತ್ತಿನಲ್ಲಿ ಮತ್ತೇನೂ ಇಲ್ಲ. ಈ ಮಾತಲ್ಲಿ ಈ ಕಾವ್ಯ ಈವರೆಗೆ ಎಲ್ಲಿ ಹುದುಗಿತ್ತು? ಕವಿಯ ಸ್ಪರ್ಶದಿಂದ ನಮ್ಮ ನಿತ್ಯ ಮಾತಿನಲ್ಲಿ ಮುದುಡಿ ಕೂತಿದ್ದ ಕಾವ್ಯ ಹೇಗೆ ಒಮ್ಮೆಗೇ ಭೂಮ್ಯಾಕಾಶ ವ್ಯಾಪಿಯಾಗಿ ವಾತ್ಸಲ್ಯದ ತೀವ್ರಭಾವವನ್ನು ಕಡೆದಿಟ್ಟುಬಿಟ್ಟಿತು. ಇದೊಂದು ಭಾವದ ನಾಟಕ. ಸಭಾಮಧ್ಯದಲ್ಲಿ ನಿಲ್ದಾಣದ ನಿರ್ಮಾಣ. ಜನಜಂಗುಲಿಯಲ್ಲಿ ತಾಯಿ ಮಗಳು ಮಗುವಿನ ಭಾವದ ಏಕಾಂಕ. ಈ ಮಧ್ಯೆ ತಾನು ಯಂತ್ರವಲ್ಲ….ಜೀವ ಉಳ್ಳ ಚೈತನ್ಯವೆಂಬಂತೆ ನಿಟ್ಟುಸಿರುಬಿಡುತ್ತಾ, ಕಾಲೆಳೆಯುತ್ತಾ, ಮೈ ನಡುಗಿಸುತ್ತಾ, ಎಲ್ಲಿದ್ದೀಯೇ ಮೀನಾ ಎಂದು ಅಮ್ಮನ ಜತೆಗೆ ಇನ್ನೊಂದು ಅಮ್ಮನಾಗಿ ಕೂಗುತ್ತಾ ಹಳಿಗಳ ಮೇಲೆ ಕರಗಿ ಹೋದ ರೈಲ್ವೇ ಬಂಡಿ.

ಇದನ್ನೇ ನಾನು ಕವಿತೆಯ ಮಾಯೆ ಎನ್ನುವುದು. ಕಾವ್ಯಾಸ್ವಾದಕ್ಕೆ ತನಗೆ ತಾನೇ ಒದಗಿ ಬಂದ ಅದ್ಭುತವೆನ್ನುವ ಹದ ಇದು. ಇದು ಮತ್ತೊಮ್ಮೆ ಇದೇ ಪ್ರಮಾಣದ ಭಾವೋನ್ನತಿಯಲ್ಲಿ ಮರುಕೊಳಿಸೀತೆ? ಕಾಯುತ್ತಾ ಇದ್ದೇನೆ. ಎಲ್ಲಿದ್ದೀಯೇ ಮೀನಾ ಎಲ್ಲಿದ್ದೀಯೇ?

2 Comments

  1. Sangeeta Kalmane
    November 11, 2016
  2. S.p.vijaya Lakshmi
    November 10, 2016

Add Comment

Leave a Reply