Quantcast

ಟಿಪ್ಪು ಚರ್ಚೆ ಕಥನವೋ, ಕದನವೋ..

kiran m gajanuru

ಡಾ. ಕಿರಣ್ ಎಂ ಗಾಜನೂರು

ಕಳೆದ ವರ್ಷದಿಂದ ಸರ್ಕಾರ ಟಿಪ್ಪು ಜಯಂತಿಯನ್ನು ಒಂದು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವ ನಿರ್ಧಾರವನ್ನು ಕೈಗೊಂಡ ಮೇಲೆ ಕರ್ನಾಟಕದ ಮಟ್ಟಿಗಂತೂ  ಟಿಪ್ಪು ಮಹತ್ವದ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದ್ದಾನೆ. ಟಿಪ್ಪು ಪರ ಮತ್ತು ವಿರೋಧಗಳ ಚರ್ಚೆ ಬೌದ್ಧಿಕ ವಲಯವನ್ನು ದಾಟಿ ರಾಜಕೀಯ ಹೋರಾಟವಾಗಿ ರೂಪುಗೊಳ್ಳುವಷ್ಟು ತಾರಕಕ್ಕೆ ಏರಿದೆ.

ಕಳೆದ ಕೆಲವು ದಿನಗಳಿಂದ ಟಿಪ್ಪು ಜಯಂತಿಯ ಪರ/ವಿರೋಧ ವಾದಿಸುತ್ತಿರುವ ಎರಡೂ ಗುಂಪುಗಳು ನಡೆಸುತ್ತಿರುವ ಒಟ್ಟು ಚರ್ಚೆಯನ್ನು ಗಮನಿಸಿದರೆ, ಈ ಚರ್ಚೆ ಟಿಪ್ಪುವನ್ನು ಐತಿಹಾಸಿಕವಾಗಿ ಅರ್ಥಮಾಡಿಕೊಳ್ಳುವ ಮಹತ್ವದ ವೈಜ್ಞಾನಿಕ ಕ್ರಮವನ್ನೆ ಬದಿಗೆ ಸರಿಸಿ ಅವನನ್ನು ವರ್ತಮಾನದ ಪಕ್ಷ ರಾಜಕೀಯದ ತಾತ್ವಿಕತೆಗೆ ಒಗ್ಗಿಸಿಕೊಂಡು ನಿರೂಪಿಸುವ ಶುಷ್ಕ ಅಧಿಕಾರ ರಾಜಕೀಯದ ಕಸರತ್ತಿನಂತೆ ಕಾಣುತ್ತಿದೆ.

tippu infoಆ ಅರ್ಥದಲ್ಲಿ ಟಿಪ್ಪು ಜಯಂತಿಯ ಹಿನ್ನಲೆಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಚರ್ಚೆಯ ಮಾದರಿಯು ರಾಜಕೀಯ ಪಕ್ಷಗಳ ತಾತ್ವಿಕತೆಗಳನ್ನು ಮೀರಿ ಒಂದು ವೈಜ್ಞಾನಿಕ ವಿಧಾನವಾಗಿ ನಮ್ಮ ಚರಿತ್ರೆಯನ್ನು ನಿರೂಪಿಸಲು ನಡೆಯುತ್ತಿರುವ ಭೌದ್ದಿಕ ಪ್ರಯತ್ನದಂತೆ ಕಾಣದೆ ಈ ಕಾಲದ ಸಂಕುಚಿತ ರಾಜಕೀಯ ಅಗತ್ಯವಾಗಿದೆ ಎನ್ನಿಸುತ್ತಿದೆ.

ಈ ಕಾರಣಕ್ಕೆ ಆ ಒಟ್ಟೂ ಚರ್ಚೆಯಲ್ಲಿ ನಮ್ಮ ಕಾಲದ ಬಹುತ್ವದ ತಾತ್ವಿಕತೆಯನ್ನು ಆಧರಿಸಿದ ಜನಕೇಂದ್ರಿತ ಚರಿತ್ರೆಯೊಂದನ್ನು ಕಟ್ಟಿಕೊಳ್ಳಲು ಅಗತ್ಯವಾದ ಅಳವಾದ ಸಾಮಾಜಿಕ ಮತ್ತು ತಾತ್ವಿಕತೆಯ ಪ್ರಶ್ನೆಗಳೇ ಗೈರಾಗಿವೆ ಎನ್ನಿಸುತ್ತಿದೆ. .

ಹೀಗಿದ್ದಾಗಲೂ ನಮ್ಮ ಕಾಲದಲ್ಲಿ ಗಂಭೀರ ಐತಿಹಾಸಿಕ ಅಧ್ಯಯನಕ್ಕೊಳಪಡಬೇಕಾದ ಟಿಪ್ಪುವನ್ನು ಏಕಕಾಲಕ್ಕೆ ಸಕಾರಾತ್ಮಕ ಮತ್ತು ನಕಾರಾತ್ಮಕ ಈ  ಎರಡೂ ನೆಲೆಗಳಲ್ಲಿ ನಿರೂಪಿಸಲು ಏಕೆ ಸಾಧ್ಯವಾಗುತ್ತಿದೆ? ಎಂಬ ಮಹತ್ವದ ಪ್ರಶ್ನೆ ಹಾಗೇ ಉಳಿಯುತ್ತದೆ.  ಗತ/ಪುರಾಣಗಳ ಕಥೆಗಳನ್ನೇ ಇತಿಹಾಸದ ಆಕರವಾಗಿ ಗುರುತಿಸಿ ಬಳಸುವ ಭಾರತದಲ್ಲಿನ ಇತಿಹಾಸ ಅಧ್ಯಯನದ ವೈಧಾನಿಕತೆಯಲ್ಲಿನ ಸಮಸ್ಯೆಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ನಮಗೆ ನಮ್ಮ ಕಾಲದ ಟಿಪ್ಪುವಿನ ಕುರಿತಾದ ಈ ಬಗೆಯ ಮೇಲ್ಮೈನ ಪರ/ವಿರೋಧದ ಚರ್ಚೆಗೆ ಇರುವ ತಾತ್ವಿಕ ಚೌಕಟ್ಟಿನ ಮಿತಿ ಅರ್ಥವಾಗುತ್ತದೆ. .

ನನ್ನ ಓದಿನ ಹಿನ್ನೆಲೆಯಲ್ಲಿ ನೋಡುವುದಾದರೆ ಭಾರತೀಯರಿಗೆ ಚರಿತ್ರೆಯನ್ನು ರೂಪಿಸಿಕೊಳ್ಳುವ ಕ್ರಮ ಎರಡು ರೀತಿಯಲ್ಲಿ ದಕ್ಕಿದೆ : ಸಿದ್ಧ ಧಾರ್ಮಿಕ ಚೌಕಟ್ಟಿನ ಹಿನ್ನಲೆಯಲ್ಲಿ ಪುರಾಣವನ್ನಾಧರಿಸಿದ ಗತವನ್ನೆ ಚರಿತ್ರೆಯಂತೆ ಕಟ್ಟಿಕೊಳ್ಳುವ ಮತ್ತು ಅದು ಮಾತ್ರವೆ ನೈಜ ಚರಿತ್ರೆಯೆಂದು ಸಾಧಿಸಬಯಸುವ “ಕೋಮುವಾದ” ಎಂದು ಗುರುತಿಸುವ  ಕ್ರಮ ಒಂದಾದರೆ,,  ಮತ್ತೊಂದು ಬದಲಾದ ಕಾಲದಲ್ಲಿ ಯುರೋಪಿಯನ್ ವಸಾಹತು ಕಲಿಕಾ ಕ್ರಮ ರೂಪಿಸಿಕೊಟ್ಟ ಉದಾರವಾದಿ ನಿರೂಪಣೆಗಳ ಚೌಕಟ್ಟಿಗೆ ಭಾರತೀಯ ಸಾಮಾಜಿಕ/ಐತಿಹಾಸಿಕ ವಾಸ್ತವಗಳನ್ನು ಜೋಡಿಸಿ ಭಾರತೀಯರೂ ಉದಾರವಾದಿ ನೆಲೆಯ ಅಂತಃಸತ್ವ ಹೊಂದಿದ್ದವರು ಎಂಬುದನ್ನು ನಿರೂಪಿಸುವ “ಪ್ರಗತಿಪರ” ಎಂದು ಗುರುತಿಸುವ ಕ್ರಮ ಇನ್ನೊಂದು.

ಈ ಎರಡೂ ಕ್ರಮಗಳು ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಯುರೋಪಿಯನ್ ಧಾರ್ಮಿಕ ಥಿಯಾಲಜಿ ಕಟ್ಟಿಕೊಟ್ಟ ಚರಿತ್ರೆಯನ್ನು ನೋಡುವ ಕ್ರಮವಾದರೆ ಮತ್ತೊಂದು ಯುರೋಪಿಯನ್ ಉದಾರವಾದಿ ರಾಜಕೀಯ ಐಡಿಯಾಲಜಿ ನಮ್ಮ ಚರಿತ್ರೆಯನ್ನು ಗುರುತಿಸುಲು ಕಲಿಸಿಕೊಟ್ಟ ಕ್ರಮವಾಗಿದೆ. ಆದ್ದರಿಂದ ಬಹುಪಾಲು ಬುದ್ಧಿಜೀವಿಗಳು ಬಳಸುತ್ತಿರುವ ಈ ಎರಡೂ ಮಾದರಿಗಳು ನಮ್ಮ  ಸಾಮಾಜಿಕ/ಐತಿಹಾಸಿಕ ವಾಸ್ತವಗಳ  ಮಾಹಿತಿಯನ್ನು ಈಗಾಗಲೇ ಭೌದ್ಧಿಕ ವಲಯದಲ್ಲಿ ಪ್ರಖ್ಯಾತವಾಗಿರುವ “ಕೋಮುವಾದಿ” ಮತ್ತು “ಉದಾರವಾದಿ” ಎಂಬ ಚಿಂತನಾ ಚೌಕಟ್ಟುಗಳಿಗೆ ಹೊಂದಿಸಿ ವಿವರಿಸುವ ಕೆಲಸವನ್ನಷ್ಟೆ ಮಾಡುತ್ತಿವೆಯೇ ಹೊರತು ಭಾರತೀಯ ಸನ್ನಿವೇಶದಲ್ಲಿ ಈ ಎರಡು ವಿವರಣಾ ಚೌಕಟ್ಟುಗಳ ಮಿತಿಗಳೇನು? ಇವುಗಳು ನಿಜವಾಗಿಯೂ  ಗತವನ್ನು ಆಧರಿಸಿದ ವರ್ತಮಾನದ ಭಾರತೀಯ ಜನಜೀವನವನ್ನು ಅದು ಇರುವಂತೆಯೇ ನಿರೂಪಿಸಿವೆಯೇ? ಎಂಬುದರ ಕುರಿತಂತೆ ಏನನ್ನೂ ಚರ್ಚಿಸುತ್ತಿಲ್ಲ..

ನಮ್ಮ ನಡುವೆ  ಜನಪ್ರಿಯವಾಗಿರುವ ಚರಿತ್ರೆಯನ್ನು ನೋಡುವ ಈ ನಿರ್ಧಿಷ್ಟ ಕ್ರಮ “ಇತಿಹಾಸ” ಎಂಬ ಅಧ್ಯಯನ ಶಿಸ್ತನ್ನು  ಗತದ ಸಾಮಾಜಿಕತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ವರ್ತಮಾನವನ್ನು ಅದರ ಜೊತೆಗಿಟ್ಟು ಅರ್ಥಮಾಡಿಕೊಳ್ಳಬೇಕಾದ ಅಗತ್ಯ ವೈಜ್ಞಾನಿಕ ಅಧ್ಯಯನ ಕ್ರಮ ಎಂಬ ಅಂಶವನ್ನು ನಗಣ್ಯಗೊಳಿಸಿದೆ. ಮಾತ್ರವಲ್ಲ ಈ ಒಟ್ಟೂ ಚರ್ಚೆಯನ್ನು ಸೀಮಿತ ಚೌಕಟ್ಟಿನಲ್ಲಿ ವಿವರಿಸುವ ಅಧಿಕಾರ ರಾಜಕೀಯ ನಿರೂಪಣೆಯಾಗಿ ಬದಲಾಯಿಸಿದೆ.

ಈ ಅಧ್ಯಯನ ಕ್ರಮವನ್ನು ಬಳಸಿ ನೀವು ಯಾವುದೇ ಐತಿಹಾಸಿಕ ವ್ಯಕ್ತಿ ಮತ್ತು ಸಂಗತಿಗಳಿಗೆ ಪರ/ವಿರೋಧ ನಿರೂಪಣೆಗಳನ್ನು ಸರಳವಾಗಿ ಆರೋಪಿಸಬಹುದು. ಏಕೆಂದರೆ ಈ ಬಗೆಯ ಅಧ್ಯಯನ ಮಾದರಿಗಳು ಸಿದ್ಧಮಾದರಿಗಳಾಗಿ ಈಗಾಗಲೇ ಜನಪ್ರಿಯವಾಗಿರುವುದರಿಂದ ಇವುಗಳ ಮೂಲಕ ಸಂಶೋಧನೆಗಳಿಂದ ದಕ್ಕುವ ವ್ಯಕ್ತಿ ಅಥವಾ ಘಟನೆಯ ಕುರಿತಾದ ಮಾಹಿತಿಗಳನ್ನು ನೀವು ಒಪ್ಪುವ ಚೌಕಟ್ಟಿಗೆ ಪೋಣಿಸಿದರೆ ಸಾಕು ಬೇಕಾದ ರೂಪ ದಕ್ಕುತ್ತದೆ. ಇಂದು ನಮ್ಮ ನಡುವೆ ನಡೆಯುತ್ತಿರುವ ಟಿಪ್ಪುವಿನ ಚರ್ಚೆಯ ವಿಚಾರದಲ್ಲಿಯೂ ಇದೇ ಆಗುತ್ತಿರುವುದು .(ಇಲ್ಲಿ ಟಿಪ್ಪು ಉದಾಹರಣೆ ಮಾತ್ರ.ಶಿವಾಜಿ, ವಿವೇಕಾನಂದ, ಗಾಂಧಿ, ಅಂಬೇಡ್ಕರ್, ಸೇರಿದಂತೆ ಯಾವುದೇ ಚಾರಿತ್ರಿಕ ವ್ಯಕ್ತಿತ್ವಗಳನ್ನು ಹೀಗೆ ಬೈನರಿಯಾಗಿ ಇಟ್ಟು ಓದುವ ಕ್ರಮ ಚಾಲ್ತಿಯಲ್ಲಿದೆ. ಈ ರೀತಿಯ ಚರ್ಚೆಗೆ ಕೊನೆಯೂ ಇಲ್ಲ ಯಾವ ಪ್ರಯೋಜನವೂ ಇಲ್ಲ)

tippu tiger dollಆ ಕಾರಣಕ್ಕೆ ಟಿಪ್ಪುವಿನ ಚರಿತ್ರೆಯ ಕುರಿತು ನಡೆಯುತ್ತಿರುವ ಒಟ್ಟು ಚರ್ಚೆ ಒಂದು ಧಿಕ್ಕಿನಲ್ಲಿ ಅಧಿಕಾರ ರಾಜಕಾರಣಕ್ಕೆ ಅನುಕೂಲಕರವಾಗುವಂತೆ ಕಟ್ಟಲು  ಹೊರಟ ಹಾಸ್ಯಾಸ್ಪದ ಸಾಂಸ್ಕೃತಿಕ ನಿರೂಪಣೆಯಂತೆ ಕಂಡರೆ,  ಮತ್ತೊಂದು ಕಡೆ ಇದರ ವಿರುದ್ಧವಾಗಿ ಟಿಪ್ಪುವನ್ನು ಧಾರ್ಮಿಕಗೊಳಿಸಿ ವಿವರಿಸುತ್ತಿರುವ ಚಾರಿತ್ರಿಕ ನಿರೂಪಣೆಯು ವರ್ತಮಾನದಲ್ಲಿ ಬಹುತ್ವದ ಮೌಲ್ಯ ಪರಂಪರೆಯನ್ನಾಧರಿಸಿದ ನಮ್ಮ ಪ್ರಜಾಪ್ರಭುತ್ವ ಜೀವನಕ್ರಮಕ್ಕೆ ಧಕ್ಕೆಯನ್ನುಂಟು ಮಾಡುವ  ಅಪಾಯಕಾರಿ ಲಕ್ಷಣಗಳು ಕಾಣುತ್ತಿವೆ.

ಈ ಎರಡೂ ಬದಿಯ ಜನರು ಬಳಸುತ್ತಿರುವ ಭೌದ್ದಿಕ ಚೌಕಟ್ಟಿನ ಮಿತಿಗಳ ಕುರಿತು ಗಮನ ಸೆಳೆಯಬೇಕಾದ ಬೌದ್ಧಿಕ ವರ್ಗ ಯಾವುದೋ ಒಂದು ವಾದಕ್ಕೆ ಪೂರಕವಾಗಿ ನಿಲ್ಲುತ್ತಿರುವುದು ಅತಂಕದ ವಿಷಯ .ಆ ಕಾರಣಕ್ಕೆ ಟಿಪ್ಪುವಿನ ಕುರಿತಾಗಿ ಐತಿಹಾಸಿಕ ದಾಖಲೆಗಳಿಂದ ಹೆಕ್ಕುತ್ತಿರುವ ಮಾಹಿತಿಗಳನ್ನು ಆಧರಿಸಿ ನಡೆಯುತ್ತಿರುವ ಚರ್ಚೆಗಳೆಲ್ಲವೂ ಒಂದು ಕೋಮುವಾದಿ ನೆಲೆಯಲ್ಲಿ ಸಾಮಾನ್ಯರನ್ನು ಪ್ರಚೋದಿಸಲು ಬಳಕೆಯಾಗುತ್ತಿವೆ ಮತ್ತೊಂದು ಆ ಕಾಲದ ರಾಜಸತ್ತೆಯ ವ್ಯವಸ್ಥೆಯೊಳಗಿನ ಇತಿಮಿತಿಗಳನ್ನು ನಗಣ್ಯಗೊಳಿಸಿ ಉದಾರವಾದಿ ನೆಲೆಯಿಂದ ವೈಭವಿಕರಣಕ್ಕೆ ಒಳಗಾಗಿ ರೂಪುಗೊಳ್ಳುತ್ತಿವೆ. ಆದರೆ ವಾಸ್ತವದಲ್ಲಿ ಟಿಪ್ಪುವಿನ ಕುರಿತ ಈ ಎರಡೂ ಲೋಕದೃಷ್ಟಿಗಳು ಮಿತಿಯನ್ನು ಹೊಂದಿವೆ ಎಂದನಿಸುತ್ತಿದೆ. .

ಆ ಕಾರಣಕ್ಕೆ ಇವೆಡನ್ನೂ ಹೊರತುಪಡಿಸಿ ಒಬ್ಬ ವ್ಯಕ್ತಿಯಾಗಿ, ಸಮುದಾಯದ ನಾಯಕನಾಗಿ ತನ್ನೆಲ್ಲ ಮಿತಿಗಳ ಒಳಗೆ ಟಿಪ್ಪುವಿನ ಕೊಡುಗೆ ಏನು? ಅದನ್ನು ವರ್ತಮಾನಕ್ಕೆ  ಪೂಕರವಾಗಿ ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ನಿರೂಪಿಸಿಕೊಳ್ಳಲು ಬೇಕಾದ ವೈಜ್ಞಾನಿಕ ಅಧ್ಯಯನ ವಿಧಾನದ ಕುರಿತು ನಾವು ಹೆಚ್ಚು ಆಸಕ್ತಿಯಿಂದ, ಸ್ವಸ್ಥವಾಗಿ  ಚರ್ಚಿಸಬೇಕಿದೆ.

ಈ ಹಿನ್ನಲೆಯಲ್ಲಿ ಭಾರತೀಯ ಪುರಾಣಗಳನ್ನು ಪ್ರತೀಕಗಳಂತೆ ನೋಡುವ ಪಾಶ್ಚಿಮಾತ್ಯ ಲೋಕದೃಷ್ಟಿ ಮತ್ತು ಇಲ್ಲಿನ ಪುರಾಣಗಳ ಅಮೂರ್ತತೆಯನ್ನೇ ವೈಭವೀಕರಿಸಿ ಅದನ್ನೆ ಚರಿತ್ರೆಯಾಗಿಸಲು ಬಯಸುತ್ತಿರುವ  ರಾಷ್ಟ್ರೀಯವಾದಿ ದೃಷ್ಟಿಕೋನಗಳ ಪ್ರತಿಪಾದನೆಯಲ್ಲಿ ಕಳೆದು ಹೋಗಿರುವ ಬಹುಪಾಲು ಶೋಧನೆಗಳು ಈ ನೆಲದ ಬಹುತ್ವವನ್ನು ಗೌರವಿಸುವ, ವಿವಿಧತೆಯಲ್ಲಿ ನಂಬಿಕೆ ಹೊಂದಿರುವ, ಸಮುದಾಯ ಕೇಂದ್ರಿತ ಚರಿತ್ರೆಯ ಕಟ್ಟುವಿಕೆಗೆ ಅಗತ್ಯವಾದ, ಸಮಾಜದಲ್ಲಿನ ಬೇರೆ ಬೇರೆ ಜನ ವರ್ಗಗಳ ಕೂಡು ಬದುಕಿನ ಚಲನಶೀಲ ಭೌತಿಕ ಅಸ್ತಿತ್ವವನ್ನೇ ನಿರ್ಲಕ್ಷಿಸಿವೆ ಎಂಬ ಅಂಶವನ್ನು ಅರಿಯುವುದು ನಮ್ಮ ಕಾಲದ ಸಂಶೋಧನೆಯ ಮುಖ್ಯ ಸಂಗತಿಯಾಗಬೇಕಿದೆ.

ಈ ಕಾರಣಕ್ಕೆ ನಮ್ಮ ನಡುವೆ ನಡೆಯುತ್ತಿರುವ ಟಿಪ್ಪು ಚರ್ಚೆ ಹುಟ್ಟುಹಾಕಿರುವ ಗೊಂದಲ ಕೇವಲ ಮತ ಅಥವಾ ಅಧಿಕಾರ ರಾಜಕೀಯ ಸಂಗತಿ ಮಾತ್ರ ಅಲ್ಲ!  ಬದಲಾಗಿ ಭಾರತೀಯ ಸಾಮಾಜಿಕ ಸನ್ನಿವೇಶವನ್ನು ವಸಾಹತು ಉತ್ಪನ್ನವಾದ ಕೋಮುವಾದಿ/ಉದಾರವಾದಿ ಚರಿತ್ರೆಯಾಗಿಸುವ ಕ್ರಮದಲ್ಲಿನ ಸಮಸ್ಯೆಯಿಂದ ಉದ್ಬವಿಸಿದ ಪರಿಣಾಮ ಎಂಬ ವಿಶಾಲ ನೆಲೆಯಲ್ಲಿ ನಾವು ಗ್ರಹಿಸಿಕೊಂಡು ವಿಶ್ಲೇಷಣೆ ನಡೆಸಬೇಕಿದೆ. ..

ಬಹಳ ಮುಖ್ಯವಾಗಿ ನಮ್ಮ ಚರಿತ್ರೆಯನ್ನು ಗ್ರಹಿಸಲು ಅನ್ಯವಾದ ಈ ಎರಡೂ ಲೋಕದೃಷ್ಟಿಗಳ ಮಿತಿಗಳನ್ನು ಮೀರಿ ಪರ್ಯಾಯವಾಗಿ ಹೇಗೆ ಭಾರತೀಯ ಗತದಲ್ಲಿನ ಸಾಮಾಜಿಕ ವಾಸ್ತವವನ್ನು ವರ್ತಮಾನದ ಬದುಕಿಗೆ ಪೂರಕವಾಗಿ ನಿರೂಪಿಸಿಕೊಳ್ಳಬೇಕು ಎಂಬ ನೆಲೆಯ ಶೋಧನೆಗಳ ಕಡೆ ಹೆಚ್ಚು ಗಮನವನ್ನು ಕೇಂದ್ರೀಕರಿಸಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಚಾರಿತ್ರಿಕ ಸಂಗತಿಗಳು ವರ್ತಮಾನದ ಪೀಳಿಗೆಗಳ ಬದುಕಿಗೆ ನೆರವಾಗುವ ಬದಲು ಎರಡು ಅಲುಗಿನ  ಕತ್ತಿಯಂತೆ ಮನಬಂದಂತೆ ಬಳಸಿದ ಕಡೆಯಲ್ಲೆಲ್ಲಾ  ಹಿಂಸೆಯನ್ನೇ ಹೆಚ್ಚಾಗಿಸುವ ಸಂಕುಚಿತ ರಾಜಕೀಯಕ್ಕೆ ಬಳಕೆಯಾಗುವ ಅಸ್ತ್ರವಾಗುವ ಅಪಾಯವನ್ನು ಪ್ರಜ್ಞಾವಂತರೆಲ್ಲರೂ ತುರ್ತಾಗಿ ಮನಗಾಣಬೇಕಿದೆ (ಅದರ ಲಕ್ಷಣಗಳು ಈಗಾಗಲೇ ಅಲ್ಲಲ್ಲಿ ಕಾಣುತ್ತಿವೆ.)

ಟಿಪ್ಪು ಕುರಿತಾದ ಚರ್ಚೆ ಅದಕ್ಕೊಂದು ವೇದಿಕೆ ಒದಗಿಸಿದೆ ಅನ್ನಿಸುತ್ತಿದೆ. ಆದರೆ ನಮ್ಮ ಬಹುಪಾಲು ಚಿಂತಕರು ನಮ್ಮ ಸಾಮಾಜಿಕ ನೆಲೆಗೆ ಅನ್ಯವಾದ ಚೌಕಟ್ಟುಗಳ ವಕ್ತಾರಿಕೆಯನ್ನೇ ಮಹತ್ವದ ಬೌದ್ಧಿಕ ಚರ್ಚೆ ಎಂಬಂತೆ ವಾದಿಸುತ್ತಿರುವುದು ಮತ್ತು ಐತಿಹಾಸಿಕ ಸಂಗತಿಗಳನ್ನು ಅವುಗಳ ಸಮರ್ಥನೆಗೆ ಆಕರವಾಗಿ ಬಳಸುತ್ತಿರುವುದು ತನ್ಮೂಲಕ ನೂರಾರು ವರ್ಷಗಳ ಕಾಲ ಬಹುತ್ವವನ್ನು ಆಧರಿಸಿ ಜನರು ಕಟ್ಟಿದ ಸಹಬಾಳ್ವೆಯ ಚರಿತ್ರೆಯನ್ನು ಧಾರ್ಮಿಕಗೊಳಿಸುತ್ತಿರುವುದು ನಮ್ಮ ನಡುವಿನ ಆತಂಕವನ್ನು ಇನ್ನೂ ಹೆಚ್ಚಾಗಿಸುತ್ತಿದೆ. . .

 

2 Comments

  1. Anonymous
    November 10, 2016
    • Kiran Gajanur
      November 10, 2016

Add Comment

Leave a Reply