Quantcast

ಕೆಂಪ ಕೆಂಪಗೆ ಚೆಂದ ಇದ್ದ ಕಾಯ್ಕಿಣಿ

ಹೀಗೊಂದು ನೆನಪು

ಸಂಗೀತಾ

ನನಗೆ ಸರಿಯಾಗಿ ನೆನಪಿದೆ. ನನ್ನ ಹತ್ತಿರ ಅಪ್ಪ ಹೊಲಿಸಿಕೊಟ್ಟ ಉದ್ದನೆಯ ಮಿಣಿ ಮಿಣಿ ಲಂಗ ಇತ್ತು. ಅದು ನಾನು ಎಸ್. ಎಸ್. ಎಲ್. ಸಿ. ಬೀಳ್ಕೊಡುಗೆ ಸಮಾರಂಭಕ್ಕೆ ಹಾಕಿಕೊಂಡು ಹೋಗಲು ಅಪ್ಪನ ಹತ್ತಿರ ಹಠ ಮಾಡಿ ತೆಗೆಸಿಕೊಂಡಿದ್ದೆ. ಮೀಟರಿಗೆ ರೂ. 15 ಇನ್ನೂ ಚೆನ್ನಾಗಿ ನೆನಪಿದೆ. ಅದರ ಬೆಲೆ ಕೂಡಾ. ಯಾಕೆಂದರೆ ಆ ಲಂಗದ ಹಿಂದೆ ಒಂದು ಸುಮಧುರ ನೆನಪಿದೆ. ಅದಕ್ಕೆ ಆ ಲಂಗ ಕಣ್ಣ ಮುಂದಿದೆ ಇನ್ನೂ.

kaykini_at-225x3001977ನೇ ಇಸವಿ ಅದೊಂದಷ್ಟು ದಿನ ನಾನು ಹಳಿಯಾಳದ ನನ್ನ ಸೋದರ ಮಾವ ಸಾಹಿತಿ ಪಿ.ವಿ.ಶಾಸ್ತ್ರಿ ಕಿಬ್ಬಳ್ಳಿ ಅವರ ಮನೆಯಲ್ಲಿ ಸುಮ್ಮನೆ ಓಡಾಡಿಕೊಂಡು ಇದ್ದೆ. ಅವರ ಮಗ ಚಿಕ್ಕವನು ಅತ್ತೆ ಡಾಕ್ಟರ್, ನಾನು ಅವರ ಮಗನೂ ಸಖತ್ ಆಟ ಆಡೋದು, ಅವನಿಗಿನ್ನೂ ಮೂರು ವಷ೯. ಇಬ್ಬರೂ ‘ಸಂಪತ್ತಿಗೆ ಸವಾಲ್’ ಸಿನೆಮಾಕ್ಕೆ ಹೋಗಿ ವಜ್ರಮುನಿ ಕಣ್ಣಿಗೆ ಹೆದರಿ ಅಧ೯ದಲ್ಲೇ ಗಲಾಟೆ ಮಾಡಿ ಮನೆಗೆ ಓಡಿ ಬಂದವನು ಈಗ ಇಂಗ್ಲೆಂಡಿನಲ್ಲಿ ದೊಡ್ಡ ಡಾಕ್ಟರ್ ಆಗಿದ್ದಾನೆ. ‘ಪುಕ್ಕಲಾ..’ ಎಂದು ರೇಗಿಸಿದ್ದು ಇವನಿಗೇನಾ ಅನ್ನುವಷ್ಟು ಬೆಳೆದಿದ್ದಾನೆ.

ಒಂದಿನ ಮಾವನ ಮನೆಗೆ ಒಬ್ಬ ಹುಡುಗ ಬಂದಿದ್ದ.  ಆರಾಮ್ ಚೇರಿನಲ್ಲಿ ಕುಳಿತಿದ್ದ. ಮಾವ ಮತ್ತು ಅವನ ಮಾತುಗಳು ರೂಮಿನಲ್ಲಿ ಕುಳಿತ ನನಗೆ ಸ್ಪಷ್ಟವಾಗಿ ಕೇಳುತ್ತಿತ್ತು. ಬರೀ ಸಾಹಿತ್ಯದ ಮಾತುಗಳು. ತಲೆ ಬುಡ ಒಂದೂ ಅಥ೯ ಆಗ್ತಿರಲಿಲ್ಲ.

ಹೊರಗೆ ಬಂದು ನೋಡುವ ಕುತೂಹಲ. ಅಷ್ಟರಲ್ಲೆ ಮಾವ ‘ಸಂಗೀತಾ ಬಾರೆ ಇಲ್ಲಿ’ ಅಂದರು. ಛಂಗನೆ ಎದ್ದು ಬಂದೆ. ‘ಹೋಗು ಟೀ ಮಾಡಿಕೊಂಡು ಬಾ’ ಕುಳಿತಿದ್ದವನ ಕಡೆ ಒಮ್ಮೆ ನೋಡಿ ಒಳಗೋಗಿದ್ದೆ. ಸರಿ ಟೀ ಕೊಟ್ಟಾಯಿತು. ಯಾರು ಅಂತ ಗೊತ್ತಾಗಲೇ ಇಲ್ಲ. ಇಬ್ಬರೂ ಮಾತಿನ ಸಂತೋಷದಲ್ಲಿ ಮುಳುಗೋಗಿದ್ದಾರೆ.

ನಾನೋ ಅತ್ತಿಂದಿತ್ತ ಇತ್ತಿಂದತ್ತ ಎರಡು ಮೂರು ಸಾರಿ ಅವರ ಎದುರಿಗೆ ಮಿಣಿ ಮಿಣಿ ಲಂಗ ಓಲಾಡಿಸ್ತಾ ಓಡಾಡಿದ್ದೆ. ಹುಡುಗ ಬೆಳ್ಳಗೆ ಕೆಂಪ ಕೆಂಪಗೆ ಚೆಂದ ಇದ್ದ. ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡೋ ಹಾಗಿದ್ದ. ನಾನೇನು ಮಾಡ್ಲಿ? ಯಾರಿವನು? ಇಷ್ಟು ವಷ೯ದಲ್ಲಿ ಒಮ್ಮೆನೂ ಮಾವನ ಮನೇಲಿ ನೋಡಿಲ್ಲ? ಏಕೆಂದರೆ  ನಾನು ಹೆಚ್ಚಿನ ದಿನಗಳನ್ನು ನಮ್ಮಾವನ ಜೊತೆಗೆ ಕಳೆದಿದ್ದು. ಅವರಿಂದಲೆ ನನಗೂ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿ ಬರೆಯೋಕೆ ಶುರು ಮಾಡಿದ್ದು. ಮಾವ  ಅಂದರೆ ನನಗೆ ಅಪ್ಪ. ‘ಏ ಬಾರೆ ಇಲ್ಲಿ. ನೋಡು ಇವನು ಜಯಂತ ಕಾಯ್ಕಿಣಿ ಅಂತ. ಬೊಂಬಾಯಿಯಲ್ಲಿ ಇರೋದು.  ಇವಳು ನನ್ನ ಅಕ್ಕನ ಮಗಳು’  ಅಂತೂ ಪರಿಚಯ ಮಾಡಿಕೊಟ್ಟರು.

ನನಗೇನು ಗೊತ್ತು ಮುಂದೊಂದು ದಿನ ಎಲ್ಲರೂ ಭಜನೆ ಮಾಡೋ ಸಾಹಿತಿ ಆಗ್ತಾರೆ ಅಂತ. ನಾನು ಮಾಮೂಲಿ ಹುಡುಗನಂತೆ ಪರಿಗಣಿಸಿದ್ದೆ ಅಂದು. ಇಂದಿಗೂ ಅವರನ್ನು ನೋಡಿದ ಆ ಜಯಂತ ಕಾಯ್ಕಿಣಿ ರೂಪ ಆರಾಮ್ ಖುಚಿ೯ಯಲ್ಲಿ ಕುಳಿತು ಹರಟುತ್ತಿರೊ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ.  ಆದರೆ ಅವರದೆಷ್ಟು ಹೊತ್ತು ಇದ್ದರು, ಊಟ ಮಾಡಿ ಹೋದರಾ ಏನು ಎತ್ತ ಯಾವುದೂ ನೆನಪಿಲ್ಲ.

ಸುಮಾರು ವಷ೯ ಕಳೀತು. ‘ಮುಂಗಾರು ಮಳೆ’ಯ ಹಾಡುಗಳೊಂದಿಗೆ ಜಯಂತ ಕಾಯ್ಕಿಣಿಯವರು ಮನೆ ಮನೆ ಮಾತಾದರು. ನನ್ನ ಮಾವ 2008ರಲ್ಲಿ ಕೊನೆ ಉಸಿರೆಳೆದಿದ್ದರು.  ಹಾಗೆ ಅವರ ಅಣ್ಣ ಕಿಬ್ಬಳ್ಳಿ ಗಣಪತಿ ಶಮಾ೯, ಸಾಹಿತಿ ಅವರೂ 2002ರಲ್ಲಿ ಕಾಲವಾಗಿದ್ದರು.

ಅವರು ಮಲ್ಪೆ ಹತ್ತಿರ ತೊಟ್ಟಂ ಊರಿನಲ್ಲಿ ಇರುವಾಗ 1979ರಲ್ಲಿ ನಾನು ಅವರ ಮನೆಯಲ್ಲಿ ಇದ್ದೆ. ಟೈಪಿಂಗ್ ಕಲೀತಿದ್ದೆ ಮಲ್ಪೆಗೆ ಬಂದು. ಇವರಿಬ್ಬರ ಸಾಧನೆಗಳ ಕಿರು ಹೊತ್ತಿಗೆ ‘ಬದುಕಿನಾಚೆಗೂ ಬದುಕಿದವರು’ ಪುಸ್ತಕ ಬಿಡುಗಡೆ ಸಮಾರಂಭ ಜಯಂತ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 26-1-2011 ರಲ್ಲಿ ಯಲಹಂಕದ ಒಂದು ಸಭಾಂಗಣದಲ್ಲಿ ನೆರವೇರಿತು.

ಇಬ್ಬರು ಮಾವಂದಿರ ನೆನಪಲ್ಲಿ ಬರೆದ ನನ್ನೆರಡು ಕವನಗಳು ಕೂಡ ಆ ಪುಸ್ತಕದಲ್ಲಿ ಸೇರಿತ್ತು. ಕಾಯ್ಕಿಣಿಯವರಿಂದ ಮೆಚ್ಚುಗೆ ನುಡಿ ಹಸ್ತಾಕ್ಷರದಲ್ಲಿ. ವಾವ್! ಅಂದುಕೊಂಡಿರಲಿಲ್ಲ ಎಲ್ಲವೂ ಸುಂದರ ನೆನಪುಗಳು.

One Response

  1. Sangeeta Kalmane
    November 15, 2016

Add Comment

Leave a Reply