Quantcast

ಜಿಸ್ ದೇಶ್ ಮೆ ಗಂಗಾ ಬೆಹತೀ ಹೈ.

rajeev nayak (1)

ರಾಜೀವ ನಾರಾಯಣ ನಾಯಕ

ಪರ್ವತ ಶ್ರೇಣಿಗಳ ನಡುವಿನ ಕಣಿವೆಗಳಲ್ಲಿ ರಭಸದಿಂದ ಹರಿದು ಸಾವಿರಾರು ಮೈಲು ಕ್ರಮಿಸಿ ಕೋಟ್ಯಾಂತರ ಜನರಿಗೆ ಜೀವಸೆಲೆಯಾಗಿರುವ ಗಂಗಾನದಿ ಬಗ್ಗೆ ಭಾರತೀಯರು ಪವಿತ್ರ ಭಾವನೆಯನ್ನು ಹೊಂದಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ. ಭಾರತದ ಅಸ್ಮಿತೆಯಾಗಿರುವ ಗಂಗಾ ಹೆಸರಿಗೆ ನಮ್ಮನ್ನು ಆಪ್ತ ತೀರಕ್ಕೆ ಕರೆದೊಯ್ಯುವ ಅಲೌಕಿಕ ಶಕ್ತಿಯಿದೆ. ಆದರೆ ಪುಣ್ಯನದಿಯೆಂದು ಪೂಜಿಸುತ್ತಲೇ ಆಧುನಿಕತೆಯ ವ್ಯಸನಗಳಿಂದ, ಸ್ವಾರ್ಥ ಮತ್ತು ಲಾಲಸೆಗಳಿಂದ  ಗಂಗೆಯನ್ನೂ ಮಲಿನಗೊಳಿಸಿಬಿಟ್ಟಿರುವುದೂ ಅಷ್ಟೇ ಸತ್ಯ.

anga1ಸ್ವರ್ಗದಿಂದ ಧರೆಗಿಳಿದ ಗಂಗೆ ಶಿವನ ಜಟೆಯಲ್ಲಿ ನದಿಯಾಗುವ ಪುರಾಣವು ಎಲ್ಲ ಭಾರತೀಯರ ಪ್ರಜ್ಞೆಯಲ್ಲಿ ಗಂಗಾನದಿ ಬಗ್ಗೆ ದೈವಿಕ ಭಾವವು ಅಚ್ಚೊತ್ತುವಂತೆ ಮಾಡಿದೆ. ನಾವೆಲ್ಲ ಚಿಕ್ಕವರಿರುವಾಗ ಸತ್ಯನಾರಾಯಣ ಕಥೆ ಓದಿಸುವವರ ಮನೆಯಲ್ಲಿ ಅಥವಾ ಹೋಮ ಹವನಗಳಲ್ಲಿ ಭಟ್ಟರು ಚಿಕ್ಕ ಶೀಷೆಯಲ್ಲಿ ತರುತ್ತಿದ್ದ ಗಂಗಾಜಲವನ್ನು ಕಂಡು ಗಂಗಾನದಿ ಬಗ್ಗೆ ಪಾವಿತ್ರ್ಯದ ಕಲ್ಪನೆಗಳನ್ನು ತುಂಬಿಕೊಳ್ಳುತ್ತಿದ್ದೆವು. ಕಾಶಿಗೋ ಹರಿದ್ವಾರಕ್ಕೋ ಹೋದವರು ತಾಮ್ರದ ಗಿಂಡಿಯಲ್ಲಿ ಗಂಗಾಜಲವನ್ನು ತಂದುಕೊಟ್ಟರೆ ದೇವರ ಕೋಣೆಯಲ್ಲಿಟ್ಟು ಪೂಜ್ಯಭಾವನೆಯಲ್ಲಿ ಕಾಣುತ್ತಿದ್ದೆವು.

ಇಂಥ ಹನಿಹನಿ ಬಳಸಿ ಪಾವನಗೊಳ್ಳುತ್ತಿದ್ದ ಅಪರೂಪದ ಪವಿತ್ರಜಲವನ್ನು ಅಂಚೆ ಇಲಾಖೆ ಮೂಲಕ ಈಗ ಯಥೇಚ್ಚವಾಗಿ ಮನೆಗೇ ತರಿಸಿಕೊಳ್ಳಬಹುದಾದ ಯೋಜನೆಯನ್ನು ಇತ್ತೀಚೆಗೆ ಕೇಂದ್ರ ಸರಕಾರವು  ಅಧಿಕ್ರತವಾಗಿ ಘೋಷಿಸಿದೆ. ಗಂಗಾನದಿಯ ಉಗಮ ಸ್ಥಾನ ಗಂಗೋತ್ರಿಯಿಂದಷ್ಟೆ ಅಲ್ಲ ಅದಕ್ಕೂ ಮುಂದೆ ಗೋಮುಖ ಅನ್ನುವಲ್ಲಿಂದಲೂ ಗಂಗಾಜಲವನ್ನು ಬಾಟಲಿಗಳಲ್ಲಿ ತುಂಬಿ ಭಾರತದುದ್ದಕ್ಕೂ ಪೂರೈಕೆ ಮಾಡಲಾಗುತ್ತದಂತೆ. ಇನ್ಮುಂದೆ ಗಂಗಾಜಲ ಮನೆ ಬಾಗಿಲಿಗೇ ಹರಿದು ಬರುವುದರಿಂದ  ನಾವು ಗೈದ ಪಾಪಗಳಿಂದ ಮುಕ್ತರಾಗಬಹುದು! ಪವಿತ್ರ ಗಂಗಾಜಲ ಹೊತ್ತುತರುವ ಪಾಪದ ಅಂಚೆಯಣ್ಣನ ಬಗ್ಗೆ ಈಗಲಾದರೂ ಪೂಜ್ಯ ಭಾವನೆ ಮೂಡೀತು!!

ಜನರ ಭಾವನೆಗಳು ಮತ್ತು ನಂಬಿಕೆಗಳನ್ನು ಹಗುರ ಮಾಡುವ ಉದ್ದೇಶ ಈ ಲೇಖನಕ್ಕೆ ಇಲ್ಲವಾದರೂ ಈ ಯೋಜನೆಯಿಂದ ಗಂಗಾನದಿಯ ಪರಿಸರದಲ್ಲಿ ಆಗಬಹುದಾದ ಏರುಪೇರಿನ ಬಗ್ಗೆ ಆತಂಕ ವ್ಯಕ್ತಪಡಿಸದಿರುವುದು ಸಾಧ್ಯವೆ?  ಹತ್ತು ಸಾವಿರ ಅಡಿ ಎತ್ತರದ ಪ್ರದೇಶದಿಂದ ಗಂಗಾಜಲವನ್ನು ಸಂಗ್ರಹಿಸುವ, ಬಾಟಲಿಗಳಲ್ಲಿ ತುಂಬಿ ಅಲ್ಲಿಂದ ಸಾಗಾಣಿಕೆ ಮಾಡುವಂತಹ ಚಟುವಟಿಕೆಗಳು ಅಲ್ಲಿಯ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡದಿರುವುದೇ? ಬೃಹತ್ ಸ್ವರೂಪದ ಇಂಥ ಯೋಜನೆಯ  ಸಾಧಕ ಬಾಧಕಗಳ ಅಂದಾಜಿದೆಯೇ?

ಋಷಿ ಮೂಲ ನದಿ ಮೂಲ ಹುಡುಕಬಾರದು ಎನ್ನುವ ಮಾತಿದೆಯಾದರೂ ಮನುಷ್ಯನ ಕುತೂಹಲವು ಗಂಗಾ ಮೂಲವನ್ನು ಅರಸಿ ಹಿಮಾಲಯವನ್ನು ಹತ್ತಿಳಿಸುತ್ತಿದೆ. ಹರಿದ್ವಾರದಿಂದ ಸುಮಾರು ಎಂಟು ಗಂಟೆಗಳ ಪ್ರಯಾಣ ದೂರವಿರುವ ಗಂಗೋತ್ರಿಯಲ್ಲಿ ಗಂಗೆ ಪ್ರಕಟಗೊಳ್ಳುತ್ತಾಳೆ. ಭಗೀರಥನ ಘೋರ ತಪಸ್ಸಿನಿಂದ ಒಲಿದ ಗಂಗೆ ಸ್ವರ್ಗದಿಂದ ಭೂಮಿಗಿಳಿದಾಗ ಶಿವನು ತನ್ನ ಜಟೆಯಲ್ಲಿ ಇಳಿಸಿಕೊಂಡ ಸ್ಥಾನವಾದ ಗಂಗೋತ್ರಿಯಲ್ಲಿ ಭಗೀರಥ ಮತ್ತು ಗಂಗಾಮಾತೆಯ ಮಂದಿರ ಪ್ರತಿಷ್ಠಾಪನೆ ಮಾಡಲಾಗಿದೆ.

ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಗಂಗೋತ್ರಿಗೆ ಲಕ್ಷಾಂತರ ಭಕ್ತರು ಭೇಟಿ ನೀಡಿ ಗಂಗಾಮೂಲದ ದರ್ಶನ ಪಡೆದು ಹಿಮನೀರಿನಲ್ಲೂ ಮುಳುಗೆದ್ದು ಪುನೀತರಾಗುತ್ತಾರೆ. ಅಲ್ಲಿಂದ ಮರಳುವಾಗ ಕ್ಯಾನುಗಟ್ಟಲೆ ಗಂಗಾಜಲವನ್ನು ತುಂಬಿ ತರುತ್ತಾರೆ. ತಾಪಮಾನ ವೈಪರೀತ್ಯ ಮತ್ತು ಪರಿಸರದ ಮೇಲಿನ ಅಡ್ಡ ಪರಿಣಾಮಗಳಿಂದ ಗಂಗಾಮೂಲವು ಇನ್ನಷ್ಟು ಹಿಂದಕ್ಕೆ ಸರಿದಿದೆ. ಈಗ ಗಂಗೆ ಗಂಗೋತ್ರಿಯಿಂದ ಇನ್ನಷ್ಟು ಮೇಲೆ ಗೋಮುಖ ಎನ್ನುವಲ್ಲಿ ಉಧ್ಬವಗೊಳ್ಳುತ್ತಾಳೆ.  ಹೋಗಲು ರಸ್ತೆಯಿಲ್ಲದಿದ್ದರೂ ಜನ ಅಲ್ಲಿಗೂ ಕ್ಯಾನುಗಳನ್ನು ಹಿಡಿದು ಚಾರಣಗೈಯುತ್ತಿದ್ದಾರೆ!

ಕೆಲವು ವರ್ಷಗಳ ಹಿಂದೆ ಹಿಮಾಲಯ ಪ್ರದೇಶಗಳಲ್ಲಿ  ಚಾರಣಕ್ಕೆ ಹೋದಾಗ ನಾನೂ ಕೂಡ ಸಮೂಹ ಸನ್ನಿಗೆ ಒಳಗಾದವನಂತೆ ಗಂಗೋತ್ರಿಯಿಂದ ದೊಡ್ಡ ಕ್ಯಾನಿನಲ್ಲಿ ಗಂಗಾಜಲವನ್ನು ಹೊತ್ತು ತಂದಿದ್ದೆ! ಅಗಾಧ ಎತ್ತರದ ಪರ್ವತ ಸಾಲುಗಳ ನಡುವಿನ ಕಣಿವೆಯಲ್ಲಿ ಪ್ರಕಟಗೊಳ್ಳುವ ಹಿಮನೀರಲ್ಲಿ ಮುಳುಗೆದ್ದಿದ್ದು ಪುಲಕಗೊಳಿಸಿದ್ದು ನಿಜ. ಆದರೆ ಅಲ್ಲಿಂದ ಮರಳುವಾಗ ಹರಿದ್ವಾರದಲ್ಲಿ ನನ್ನೊಳಗಿನ ಪಾಪಪುಣ್ಯಗಳು ಮತ್ತು ಪಾವಿತ್ರ್ಯತೆಯ ಪರಿಕಲ್ಪನೆಗೆ ಭಂಗವುಂಟಾಗಿತ್ತು! ಹರಿದ್ವಾರದ ಹರ್ ಕಿ ಪೌಡಿಯಲ್ಲಿಯ ಗಂಗಾ ಆರತಿ ಜಗತ್ಪ್ರಸಿದ್ಧ.

ಆ ಮಹಾಆರತಿ ದರ್ಶನಕ್ಕೆ ನಿತ್ಯವೂ ಸಾವಿರಾರು ಜನರು  ನೆರೆಯುತ್ತಾರೆ. ಗಂಗಾನದಿಯನ್ನು ವಿಭಜಿಸಿ ಕಟ್ಟಲಾಗಿರುವ ಹಲವು ಪೌಡಿಗಳಲ್ಲಿ ಜನರನ್ನು ಗುಂಪಾಗಿ ಕುಳ್ಳಿಸಿ ನಾನಾತರದ ಪೂಜೆ ಪುನಸ್ಕಾರ ಕೈಗೊಳ್ಳಲಾಗುತ್ತದೆ. ಸೂರ್ಯಾಸ್ತದ ನಂತರ ಜರುಗುವ ಈ ಗಂಗಾಪೂಜೆಯನ್ನು ವೀಕ್ಷಿಸುವುದು ಒಂದು ಅಪೂರ್ವ ಅನುಭವ. ದೂರದಲ್ಲಿಯ ಪರ್ವತ ಶ್ರೇಣಿಗಳು ಕತ್ತಲಲ್ಲಿ ಕರಗಿಕೊಳ್ಳುವ ಮುಸ್ಸಂಜೆಯಲ್ಲಿ ಅಳಿದುಳಿದ ಬೆಳಕನ್ನು ತನ್ನ ಧಾರೆಗಳಲ್ಲಿ ಮಿಂಚಾಗಿ ಹೀರಿಕೊಂಡು ಗಂಗೆ ರಭಸದಿಂದ ಹರಿಯುತ್ತಾಳೆ.

ದಡದಲ್ಲಿರುವ ಮಂದಿರಗಳಲ್ಲಿ ಮೊಳಗುವ ಗಂಟೆಗಳ ನಿನಾದಿಸುತ್ತವೆ. ದೂರದೂರದಿಂದ ಆಗಮಿಸಿದ ಭಕ್ತರು ಎಲೆಮಡಚಿ ಮಾಡಿದ ದಿಯಾಗಳಲ್ಲಿ ದೀಪ ಹಚ್ಚಿ ಗಂಗೆಯಲ್ಲಿ ತೇಲಿಬಿಡುತ್ತಾರೆ. ನೀರ ಮೇಲೆ ತೇಲುತ್ತಾ ಸಾಗುವ ಸಾವಿರಾರು ದಿಯಾಗಳಿಂದಾಗಿ ಅಲ್ಲಿ ನಿತ್ಯದೀಪಾವಳಿಯ ಸಂಭ್ರಮ. ಕೊನೆಯಲ್ಲಿ ಗಂಗಾ ದಡದಲ್ಲಿ ನಿಂತು ಕಾರ್ಗತ್ತಲನ್ನು ಹಿಮ್ಮೆಟ್ಟಿಸುವಂಥ ಮಹಾ ಆರತಿಯನ್ನೆತ್ತಿ ಗಂಗೆಯನ್ನು ಪೂಜಿಸಲಾಗುತ್ತದೆ. ಇಂಥ ಪರವಶಗೊಳ್ಳುವ ಗಳಿಗೆಯಲ್ಲಿದ್ದ ನನಗೆ ಚಿಕ್ಕ ಬಾಲಕರು ನೀರಿನಲ್ಲಿ ನಿಂತು ಗಾಳ ಹಾಕುವುದು ಕಣ್ಣಿಗೆ ಬಿತ್ತು.

ganga3ಸೊಂಟಕ್ಕೆ ಸಣ್ಣ ಪಂಜಿ ಸುತ್ತಿಕೊಂಡು, ಮಾಸಿದ ಬನಿಯನ್ನು ಹಾಕಿಕೊಂಡ ಆ ಪೋರರು ಕೈಯಲ್ಲಿ ಹಿಡಿದ ಬಳ್ಳಿಯನ್ನು ನದಿಗೆಸೆಯುವುದೂ ಹಗುರವಾಗಿ ಎಳೆಯುತ್ತಾ ಮೇಲೆತ್ತುವುದೂ ಮತ್ತೆ ಎಸೆಯುವುದೂ ಮಾಡುತ್ತಿದ್ದರು. ಇಷ್ಟು ರಭಸದ ನೀರಲ್ಲಿ ಎಂಥ ಮೀನು ಸಿಕ್ಕೂದು ಮಾರಾಯಾ ಎಂದುಕೊಂಡು ಕುತೂಹಲದಿಂದ ಆ ಕಡೆ ಹೋದೆ. ಸನಿಹಕ್ಕೆ ಬಂದಾಗ ಅವರ ಕೈಲಿದ್ದದ್ದು ಗಾಳವೂ ಅಲ್ಲ, ಅವರು ಹಿಡಿಯುತ್ತಿರುವುದು ಮೀನೂ ಅಲ್ಲ ಎನ್ನುವುದು ತಿಳಿಯಿತು. ದಾರದ ತುದಿಗೆ ಮ್ಯಾಗ್ನೆಟ್ ಕಟ್ಟಿ ನೀರಿಗೆಸೆದು ನಾಣ್ಯ ಗೋರುತ್ತಿದ್ದರು. ಗಂಗಾ ಆರತಿ ದರ್ಶನಕ್ಕೆ ಸೇರಿದ ಜನಸ್ತೋಮವು ನಾಣ್ಯಗಳನ್ನು ನದಿಯಲ್ಲೆಸೆಯುವುದು ಅಲ್ಲಿ ಸಂಪ್ರದಾಯ.

ನದಿಗೆ ಬಿದ್ದ ಆ ನಾಣ್ಯಗಳು ಇವರ ಚುಂಬಕಕ್ಕೆ ಅಂಟಿಕೊಂಡು ಬರುತ್ತಿದ್ದವು. ಸೊಂಟದಲ್ಲಿ ಕಂಡ ಗಂಟು ಸಾಕಷ್ಟು ಉಬ್ಬಿಕೊಂಡಿತ್ತು. ಮಕ್ಕಳ ಜಾಣತನಕ್ಕೆ ಮೆಚ್ಚಿದೆ. ಆದರೆ ರಭಸದಿಂದ ಹರಿಯುವ ನೀರಿನಲ್ಲಿ ಮುಂದುವರಿದರೆ ಅಪಾಯಕಾರಿಯಾದ ಈ ಕೆಲಸಕ್ಕೆ ಇವರನ್ನು ಹಚ್ಚಿದವರ್ಯಾರು? ಇವರು ಶಾಲೆ ಗೀಲೆಗೆ ಹೋಗುತ್ತಾರೋ ಹೇಗೆ? ಮಕ್ಕಳನ್ನು ಮಾತಾಡಿಸುವ ಪ್ರಯತ್ನ ಮಾಡಿದೆ. ನನ್ನ ಎಲ್ಲ ಪ್ರಶ್ನೆಗಳಿಗೂ ಅವರದು ನಿರುತ್ಸಾಹ! ನನ್ನ ಮಾತಿಗೆ ಕ್ಯಾರೇ ಮಾಡಲಿಲ್ಲ. ನನ್ನತ್ತ ನೋಡಲೂ ಇಲ್ಲ. ಈ ನನ್ಮಕ್ಕಳ ಕೊಬ್ಬು ನೋಡು! ಎಂದು ಗೊಣಗಿದಾಗ ಬಾಲಕನೊಬ್ಬ ನನ್ನತ್ತ ತಿರುಗಿದ. ಗಂಗಾ ಆರತಿಯ ಬೆಂಕಿ ಅವನ ಕಣ್ಣುಗಳಲ್ಲಿ ಧಗಧಗಿಸುತ್ತಿತ್ತು!

ಭವ್ಯ ಗಂಗಾ ಆರತಿ ಮನಸಿನಲ್ಲಿ  ಅಚ್ಚೊತ್ತಿರುವಂತೆಯೇ ಆ ಹುಡುಗನ ಉರಿನೋಟ ನನ್ನಲ್ಲಿ ಹಾಗೇ ಉಳಿಯಿತು. ಅವನ ಮನಸಲ್ಲಿ ಏನಿತ್ತು? ಆ ಸುಡುನೋಟ ಯಾಕೆ? ತಮ್ಮಂಥ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾದರೂ ಕೊಡದೇ, ನಾನಾತರದ ಪೂಜೆ ಮಂತ್ರಾಕ್ಷತೆ ಹೆಸರಲ್ಲಿ ಹಣವನ್ನು ಪುರೋಹಿತರ ಕೈಗಿಡುವ, ಅಥವಾ ಸುಮ್ಮನೇ ನದಿಗೆಸೆದು ಪೋಲು ಮಾಡುತ್ತಿರುವ ಬಗ್ಗೆ ಅವರಿಗೆ ತಿರಸ್ಕಾರ ಇರಬಹುದೆ? ಹುಟ್ಟಿನಿಂದ ನೀರಲ್ಲಿ ಮುಳುಗೆದ್ದರೂ ಬಡತನದಿಂದ ಮುಕ್ತರಾಗದ ತಮ್ಮನು ನೋಡಿಯೂ ಪಾಪ ಮುಕ್ತರಾಗುವ ಗೀಳಿಗೆ ಬಿದ್ದಿರುವ ಈ ಜನರ ಬೌದ್ಧಿಕ ದಿವಾಳಿತನಕ್ಕೆ ಜಿಗುಪ್ಸೆ ಇರಬಹುದೆ? ಅಥವಾ…ಮರಳುವ ದಾರಿಯಲ್ಲಿ ನಮ್ಮ ಟ್ರೇನು ರಾಜಸ್ಥಾನದ ಅದ್ಯಾವುದೋ ಸ್ಟೇಶನ್ನಿನಲ್ಲಿ ನಿಂತಿತ್ತು.

ಕೈಕಾಲು ಆಡಿಸಿಕೊಳ್ಳಲು ಕೆಳಗಿಳಿದು ಪ್ಲಾಟಫಾರ್ಮಿನಲ್ಲಿ ಅಡ್ಡಾಡಿದೆವು. ಅದು ಮೇ ತಿಂಗಳ ರಣ ಬಿಸಿಲು. ಕೆಂಡ ಸೋಂಕಿದಂತೆ ಬೀಸುತ್ತಿದ್ದ ಗಾಳಿ. ಆದಿವಾಸಿಯಂತೆ ಕಾಣುವ ಬಡ ಮಹಿಳೆಯೊಬ್ಬಳು ಬಾಟಲಿ ಹಿಡಿದು ಎಲ್ಲ ನಲ್ಲಿಗಳನ್ನು ತಿರುಗಿಸುತ್ತಾ ಬರುತ್ತಿದ್ದಳು. ಯಾವುದರಿಂದಲೂ ನೀರು ಬರುತ್ತಿರಲಿಲ್ಲ. ಅವಳಿಗೆ ನೀರಡಿಕೆಯಾಗಿರುವುದು ದಣಿದ ಮುಖದಲ್ಲಿ ಕಾಣುತ್ತಿತ್ತು. ನಾನು ಟ್ರೇನಿನೊಳಗೆ ಹೋಗಿ ಗಂಗಾಜಲವಿದ್ದ ಕ್ಯಾನನ್ನು ತಂದು ಅವಳಿಗೆ ಕೊಟ್ಟೆ. ಜತೆಗಿದ್ದ ಮುಂಬೈನ ಗೆಳೆಯರು ‘’ ಗಂಗೋತ್ರಿಯ ಪವಿತ್ರ ಜಲವನ್ನು ದಾರಿಯಲ್ಲೆ ಧಾರೆಯೆರೆದೆಯಲ್ಲೋ, ಪಾಗಲ್” ಅಂದರು. ” ನಮ್ಮೂರಲ್ಲಿ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿಯಂಥ ಪವಿತ್ರ ನದಿಗಳಿವೆ; ಇಡೀ ಕರ್ನಾಟಕವೇ ಪಾವನಗೊಳ್ಳುವಷ್ಟು! ”ಎಂದೆ.

ದಾಹವನ್ನು ನೀಗಿಸಿಕೊಂಡ ಆ ಹೆಣ್ಣುಮಗಳ ಕಣ್ಣುಗಳಲ್ಲಿ ಕ್ರತಜ್ಞತೆಯ ಭಾವ ಗಂಗೆಯಷ್ಟೇ ಶುಭ್ರವಾಗಿತ್ತು!

6 Comments

 1. Anonymous
  November 16, 2016
  • Anonymous
   November 17, 2016
 2. Kamalaksha.K
  November 16, 2016
  • ರಾಜೀವ
   November 16, 2016
 3. Ravi
  November 15, 2016
  • ರಾಜೀವ
   November 16, 2016

Add Comment

Leave a Reply