Quantcast

ಅಮೇರಿಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ

ವೈಶಾಲಿ ಹೆಗಡೆ, ಬಾಸ್ಟನ್

ಕನ್ನಡ ಪ್ರಜ್ಞೆ ಎನ್ನುವುದು ಇಂದು ಬರೀ ಕರ್ನಾಟಕಕ್ಕಷ್ಟೇ ಸೀಮಿತವಾಗುಳಿದಿಲ್ಲ. ಕನ್ನಡಿಗರು ಜಾಗತಿಕವಾಗಿ ಗುರುತಿಸಿಕೊಳ್ಳುವ ಹೊತ್ತಲ್ಲಿ ಕನ್ನಡ ಪ್ರಜ್ಞೆಯೂ ರೂಪಂತರಗೊಳ್ಳುತ್ತಿದೆ. ಆದರೆ ಈ ಕನ್ನಡ ಪ್ರಜ್ಞೆ ವಲಸೆ ಬಂದ ನಂತರದ ಪೀಳಿಗೆಯಲ್ಲಿ ಅದೇ ಓಘದಲ್ಲಿ ಯಾಕೆ ಮುಂದುವರಿಯುತ್ತಿಲ್ಲ ಅದನ್ನುಳಿಸಿಕೊಳ್ಳುವುದು ಹೇಗೆ ಎಂದು ಬಹಳಷ್ಟು ಬಾರಿ ನಾವೆಲ್ಲಾ ಚರ್ಚಿಸಿಯಾಗಿದೆ. ನನ್ನ ಪ್ರಕಾರ ಒಂದು ನೆಲದ ಸಂಸ್ಕೃತಿಯೊಡನೆ ಬೆರೆತುಕೊಳ್ಳದೆ ಭಾಷೆ ಉಳಿಯುವುದೂ ಇಲ್ಲ ಅಂತಲ್ಲಿ ಬೆಳೆಯಬೇಕೆಂದು ಅಪೇಕ್ಷಿಸುವುದೂ ಕೂಡ ಸಮಂಜಸವಲ್ಲ.

ಭಾಷೆ ಎಂಬುದು ಬರೀ ಲಿಪಿಯ, ಆಡುಮಾತಿನ ಸಂವಹನ ಮಾಧ್ಯಮ ಮಾತ್ರವಲ್ಲ. ಅದೊಂದು ಜನಜೀವನದ ಪರಿವಿಡಿ.

ಕನ್ನಡದ ಹೆಸರಾಂತ ಭಾಷಾ ಶಾಸ್ತ್ರಜ್ಞ ಕೆ. ವಿ. ತಿರುಮಲೇಶರೊಮ್ಮೆ ಹೇಳಿದ್ದು ಎಂದಿಗೂ ನಾ ಮರೆಯದ ಸತ್ಯ. “ಒಂದು ಭಾಷೆ ಸತ್ತರೆ ಅದು ಬರೀ ಒಂದು ಭಾಷೆಯ ಸಾವಲ್ಲ, ಅದೊಂದು ತಲೆಮಾರಿನ ಇತಿಹಾಸದ ಸಾವು. ಸಾಹಿತ್ಯಿಕ ಸಾವು ಒಂದು ಇಡೀ ಸಂಸ್ಕೃತಿಯ ಸಾವು.”

kannada fingersಹಾಗಿದ್ದರೆ ಅಮೆರಿಕನ್ನಡಿಗರಾಗಿ ನಾವು ಉಳಿಸಿಕೊಳ್ಳ ಹೊರಟಿದ್ದು ಏನನ್ನು? ನಮ್ಮ ಭಾಷೆಯನ್ನೇ? ನಮ್ಮ ಸಾಹಿತ್ಯವನ್ನೇ? ಅಥವಾ ಭಾಷೆಯೊಂದಿಗಿನ ಕೊಂಡಿಯಲ್ಲಿ ನಮ್ಮ ಇಡೀ ಬೇರನ್ನೇ? ಆದರೆ ಸುತ್ತಲೂ ಒಂದು ಕನ್ನಡ ಪರಿಸರವೇ ಇರದಿರುವಾಗ ನಾವು ಸೃಷ್ಟಿಸುವ ಸೀಮಿತ ಕನ್ನಡ ಜಗತ್ತು ನಮ್ಮ ಮಕ್ಕಳಿಗೆ ಎಷ್ಟೆಂದರೂ ಅಪರಿಚಿತವೇ ಎನಿಸುವಾಗ ಆ ಭಾಷೆಯ ಮೂಲ ಸೊಗಡನ್ನು ನಾವು ದಾಟಿಸಲು ಹೇಗೆ ಸಾಧ್ಯ?

ಒಂದು ಭಾಷೆ ತನ್ನತನವನ್ನು ಉಳಿಸಿಕೊಳ್ಳಬೇಕೆಂದರೆ ಅದನ್ನು ಆ ಒಂದು ಪರಿಧಿಯಲ್ಲಿ ಅನುಭವಿಸುವ ಭಾಷಿಕರೂ ಬೇಕು.  ಆ ಪರಿಸರದ ಹೊರತಾಗಿ ಒಂದು ಭಾಷೆಯನ್ನ ಬಳಸಿದಾಗ ಅದು ಎಷ್ಟೆಂದರೂ ಕೃತ್ರಿಮವೇ. ಉದಾಹರಣೆಗೆ, ಕಾರವಾರ ಜಿಲ್ಲೆಯಲ್ಲಿ  ಆ ಒಂದು ಪರಿಸರದಲ್ಲಿ ಬೆಳೆದವರಿಗಷ್ಟೇ ಅರ್ಥವಾಗುವ ಹಲವು ಶಬ್ದಗಳಿವೆ. ಎಂಥ ಮಳ್ಳ ಅವಾ ಎಂದು ಹೇಳಿದರೆ. ಆ “ಮಳ್ಳ” ಶಬ್ದಕ್ಕೆ ಅರ್ಥ ವಿವರಿಸಬೇಕಿಲ್ಲ. ಬೆಂಗಳೂರಲ್ಲಿ ಇದೇ ಮಾತನ್ನು ಹೇಳಿದರೆ ಮಳ್ಳ ಎಂದರೆ ಹುಚ್ಚ ಇರಬಹುದೇನೋ ಎಂದುಕೊಳ್ಳುವ ಸಾಧ್ಯತೆಯಿದೆ. ಖಂಡಿತಾ ಸರಿಯಾದ ಅರ್ಥವಲ್ಲ. ಆದರೆ ಹಾಗೆಂದು ಆ ಶಬ್ದವನ್ನು ಸರಿಯಾದ ವ್ಯಾಪ್ತಿಯಲ್ಲಿ ವಿವರಿಸಲೂ ಸಾಧ್ಯವಿಲ್ಲ. ಪೆದ್ದ-ತಲೆತಿರುಕ-ಅರೆಹುಚ್ಚ-ಅನನುಭವಿ ಇತ್ಯಾದಿ ಭಾವಗಳ ಒಂದು ಅರಬರೆ ಮಿಳಿತ ಶಬ್ದವಿದು.

ಭಾಷೆಯ ಇಂಥಹ ಸೂಕ್ಷ್ಮ ವ್ಯತ್ಯಾಸಗಳು ಬರೀ ಭಾಷೆಯನ್ನ ಕಲಿತ ಮಾತ್ರಕ್ಕೆ ಬರುವುದು ಸಾಧ್ಯವಿಲ್ಲ. ಆ ಪರಿಸರದಲ್ಲಿ ಬೆಳೆದರೆ ಮಾತ್ರ ದಕ್ಕುವಂಥದ್ದು. ಹಾಗೆಯೇ ನನ್ನ ಮಕ್ಕಳಿಗೂ ಈ ಮಳ್ಳ ಶಬ್ದವನ್ನು ನಾನು ವಿವರಿಸುವ ಅಗತ್ಯವಿಲ್ಲ. ಅವರಿಗೂ ಇಂಗ್ಲೀಷಿನಲ್ಲಿ ಕೂಡ ಇಂಥದ್ದೇ ಎಂದು ವಿವರಿಸಲು ಆಗುವುದಿಲ್ಲ. ಯಾಕೆಂದರೆ ಅವರು ಭಾಷೆಯ ಈ ಒಂದು ಪ್ರಾದೇಶಿಕತೆಯಲ್ಲಿ ಸೀಮಿತವಾಗಿಯಾದರೂ ಚಿಕ್ಕಂದಿನಿಂದ ಕೇಳಿ ಬೆಳೆದಿದ್ದಾರೆ. ಕನ್ನಡ ಅರ್ಥವಾದರೂ  ಅವರಿಗೆ ಸುಲಲಿತ ಮಾತನಾಡಲು ಬಾರದು. ಆದರೆ ಭಾಷೆಯೊಂದಿಗಿನ ಒಂದು ಸಾಂಸ್ಕೃತಿಕ ಕಲ್ಪನೆ ಏನಿದೆ ಅದು ಜೊತೆಗಿದೆ.

ಕಾಗಕ್ಕ ಗುಬ್ಬಕ್ಕನ ಕತೆಯನ್ನು ಯಾರು ಬೇಕಾದರೂ ಇಂಗ್ಲೀಷಿಗೆ ಅನುವಾದಿಸಬಹುದು. ಆದರೆ ಆ ಕಾಗಕ್ಕನಿಗೊಂದು ಇಂಗ್ಲೀಷಿನ ಹೆಸರಿಡುವುದು ಸಾಧ್ಯವೆ ಇಲ್ಲ. ಅದನ್ನು ಇಂಗ್ಲೀಷಿನಲ್ಲಿ ಹೇಗೆ ಬರೆದರೂ ಕಾಗಕ್ಕನಾಗಲೀ ಗುಬ್ಬಕ್ಕನಾಗಲೀ ಅವರಾಗಿ ಉಳಿಯುವುದಿಲ್ಲ. ಆ ಒಂದು ಕಲ್ಪನೆಯ ಪರಿಸರ ನಾವೆಲ್ಲಾ ನಮ್ಮ ಮಕ್ಕಳಿಗೆ ಖಂಡಿತ ಒದಗಿಸಿಕೊಟ್ಟಿದ್ದೇವೆ. ಅಂತೆಯೇ ಇಲ್ಲಿನ ಕನ್ನಡ ಮಕ್ಕಳೂ ಇಂಗ್ಲೀಷಿನಲ್ಲಿ ಈ ಕತೆ ಹೇಳುತ್ತವೆ. ಆದರೆ ಅಲ್ಲಿ ಕೂಡ ಕಾಗಕ್ಕ ಕಾಗಕ್ಕನೇ, ಅದು ಸಿಸ್ಟರ್ ಕ್ರೌ ಅಥವಾ ಅ ಕ್ರೌ ಅಥವಾ ಅ ಕ್ರೌ ನೆಮ್ಡ್ ವೆರೋನಿಕಾ ಆಗುವುದಿಲ್ಲ.

ನನ್ನ ಅಜ್ಜಿ ಒಂದು ಕಥೆ ಹೇಳುತ್ತಿದ್ದರು. “ಪಂಚಾಗ ಭಟ್ಟನ ಕತೆ” ಅವರೇ ಕಟ್ಟಿಕೊಂಡು ಹೇಳುತ್ತಿದ್ದದ್ದು. ಅದನ್ನು ನಾನು ಮಕ್ಕಳಿಗೂ ಹೇಳಿದ್ದೇನೆ. ಈ ಕಥೆಯಲ್ಲಿ ಪಂಚಾಗ ಭಟ್ಟ ಎನ್ನುವ ಬ್ರಾಹ್ಮಣನೊಬ್ಬ ಅನುಭವಿಸುವ, ಕೇಳುವ ಮಕ್ಕಳೆಲ್ಲ ಬಿದ್ದು ಬಿದ್ದು ನಗುವಂತ ಒಂದಿಷ್ಟು ಘಟನಾವಳಿಗಳ ಸರಮಾಲೆ ಈ ಕತೆ. ಈ ಕತೆಯಲ್ಲಿ ಬರುವ ಹಲವಷ್ಟು ಪ್ರಾದೇಶಿಕ ಶಬ್ದಗಳನ್ನು ಇಂಗ್ಲೀಷಿಗೆ ಅನುವಾದಿಸಿಬಿಟ್ಟರೆ ನನ್ನ ಮಕ್ಕಳಿಗೆ ನಾನು ಬೇರೆಯೇ ಕಥೆ ಹೇಳಿದಂತೆ. ಪಂಚೆ, ಸುಟ್ಟೇವು, ನೀರಿನ ಗಿಂಡಿ, ಸೌಟು, ಹಪ್ಪಳ, ರಸಾಯನ, ಕುಂಕುಮ, ವಿಭೂತಿ, ಪೂಜೆ, ಮಂತ್ರ ಇತ್ಯಾದಿ ಶಬ್ದಗಳ ಅರ್ಥ ಅವರಿಗೆ ಎಲ್ಲೂ ಆಭಾಸವಾಗದಂತೆ ಹೇಳಬೇಕಾದರೆ ಅವೇ ಶಬ್ದಗಳನ್ನು ಖಂಡಿತ ಬಳಸಬೇಕು. ಬಹಳಷ್ಟು ಬಾರಿ  ಕ್ರಿಯಾಪದವಷ್ಟೇ ಇಂಗ್ಲೀಷು, ಇಡೀ ಕತೆಯ ಶಬ್ದಗಳೆಲ್ಲ ಕನ್ನಡ. ಹಾಗಿರುವಾಗ ಭಾಷೆ ಇಲ್ಲಿ ತನ್ನ ಇಡಿಯಾದ ಅಸ್ತಿತ್ವದೊಂದಿಗೆ ಸಂವಹಿಸದಿದ್ದರೂ, ಭಾಷೆ ಮೂಲತವಾಗಿ ಸಾಧಿಸಬೇಕಾದ ಸಂವೇದನೆಯನ್ನು ಕಳೆದುಕೊಳ್ಳುವುದಿಲ್ಲ. ಅಷ್ಟರ ಮಟ್ಟಿಗೆ ನಾವೆಲ್ಲಾ ನಮ್ಮ ಸಂಸ್ಕೃತಿಯನ್ನು ಖಂಡಿತ ದಾಟಿಸಿದ್ದೇವೆ.  ಭಾಷೆಯೊಂದಿಗಿನ ಪರಿಸರ, ಸಂಸ್ಕೃತಿಯ ಪ್ರತಿಬಿಂಬವನ್ನು ಮೂಡಿಸಿದ್ದೇವೆ.

ಎಷ್ಟೊಂದು ಬಾರಿ ಗಮನಿಸಿದ್ದೇನೆ ಇಲ್ಲಿನ ಮಕ್ಕಳು ನಮ್ಮ ಕನ್ನಡ ತಿಂಡಿ, ಅಡುಗೆಯನ್ನು ವಿವರಿಸುವಾಗೆಲ್ಲ ಅದನ್ನು ಇಂಗ್ಲೀಷಿಗೆ ಪರಿವರ್ತಿಸಿ ಹೇಳಬೇಕು ಎಂದುಕೊಳ್ಳುವುದಿಲ್ಲ.  “ಐ ಹ್ಯಾಡ್ ಅನ್ನ–ಸಾರು ಫಾರ್ ಲಂಚ್” “ಚಟ್ನಿಪುಡಿ ಇಸ್ ವೆರಿ ಖಾರ”,  “ಅಮ್ಮ ಐ ವಾಂಟ್ ದೋಸೆ ವಿಥ್ ಬೆಲ್ಲ” ಎಂದರೂ ನನ್ನ ಮಟ್ಟಿಗೆ ಅವೆಲ್ಲ ಕನ್ನಡ ವಾಕ್ಯವೇ. ಕನ್ನಡ ಮಕ್ಕಳು “ಖಾರ” ಎನ್ನುವುದು ಸ್ಪೈಸೀ ಅಲ್ಲ, ಹಾಟ್ ಅಲ್ಲ ಖಾರಕ್ಕೊಂದು ಸ್ಪಷ್ಟ ರುಚಿಯಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಅದನ್ನು ಇಷ್ಟುದ್ದ ವಾಕ್ಯಗಳಲ್ಲಿ ತರ್ಜುಮೆ ಮಾಡಿ ನಾವ್ಯಾರೂ ವಿವರಿಸಬೇಕಿಲ್ಲ.

ಮಾವಿನ ಹಣ್ಣಿನ ಸೀಕರಣೆ ಎಂದರೆ ಮ್ಯಾಂಗೋ ಕಸ್ಟರ್ಡ್ ಅಲ್ಲ ಎಂಬ ಅರಿವಿದೆ. ಬೆಲ್ಲದಂಥ ಅಪ್ಪಟ ಕನ್ನಡ ಶಬ್ದಕ್ಕೆ ಇನ್ಯಾವ ಪರ್ಯಾಯ ಶಬ್ದವಿದೆ? ಅದನ್ನು ಮೊಲ್ಯಸಿಸ್ ಎಂದಾಗಲೀ, ಸಿರಪ್ಪ್ ಎಂದಾಗಲೀ, ಜ್ಯಾಗರೀ ಎಂದಾಗಲೀ ಹೇಳಿದರೆ ಅದು ಜೋನಿಬೆಲ್ಲವಾಗುವುದಿಲ್ಲ. ಆ ರುಚಿಯ ಸಂವೇದನೆ ಮೆದುಳಿಗೆ ರವಾನೆಯಾಗುವುದಿಲ್ಲ.  ಆ ಬೆಲ್ಲದ ರುಚಿಯ ಅರಿವಾದುದೂ ಕನ್ನಡದ ಶಬ್ದದ ಮುಖಾಂತರವೇ.

ಸಾರು, ಚಟ್ನಿಪುಡಿ ಗಳನ್ನ ಏನೆಂದು ವಿವರಿಸುವುದು? ಆದರೆ ಇವೆಲ್ಲ ಏನೆಂಬ ಕಲ್ಪನೆ ಕನ್ನಡ ಮಕ್ಕಳಿಗಿದೆ. ಒಂದು ಭಾಷೆ ಇಂದು ಅಮೆರಿಕನ್ನಡದ ಆಹಾರ ಸಂಸ್ಕೃತಿಯೊಡನೆ ತಳಕು ಹಾಕಿಕೊಂಡಿರುವ ಸಣ್ಣ ಉದಾಹರಣೆಯಷ್ಟೇ ಇದು. ಆದರೆ ಇಂಥ ಚಿಕ್ಕ ಚಿಕ್ಕ ಸಂಗತಿಗಳಲ್ಲಿ ಮಾತ್ರವೇ ಮುಂದಿನ ಪೀಳಿಗೆಯಲ್ಲಿ ಕನ್ನಡ ಉಳಿದುಕೊಂಡು ಹರಿಯಬಲ್ಲುದು. ಮುಂದೊಂದು ದಿನ ತಲೆಮಾರುಗಳ ನಂತರವೂ ಬೆಲ್ಲ ಎಂದರೆ ಇಂಥದ್ದೇ ಎಂದು ಅರಿವಿನಲ್ಲಿರುವುದು.

ನನ್ನ ಮಟ್ಟಿಗೆ ಒಂದು ಭಾಷೆ ತನ್ನದಲ್ಲದ ನೆಲದಲ್ಲಿ ಆ ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಿ ಬೆಳೆಸಿಕೊಳ್ಳುವುದು ಮುಖ್ಯವೇ ಹೊರತು ನನ್ನ ಮಗಳು ಬೇಂದ್ರೆಯ ಕವಿತೆಯ ಹೊಳಹುಗಳನ್ನು ಕನ್ನಡದಲ್ಲಿ ಅರಿಯಲು ಎಂದಿಗೂ ಸಾಧ್ಯವಿಲ್ಲ. ಹಾಗೆಂದು kannada_bannerನಾನು ಬಯಸುವುದೂ ಇಲ್ಲ.  ಕನ್ನಡ ಕಟ್ಟುವ ಕೆಲಸ ಮೂಲತಃ ಅದರ ಹುಟ್ಟುನೆಲದಲ್ಲಿ ನಡೆಯಬೇಕು. ಒಂದು ಅಪ್ಪಟ ಕನ್ನಡ ಪ್ರೇಮ ಇಲ್ಲಿನ ಎರಡನೆ ತಲೆಮಾರಿಗೆ ಹುಟ್ಟಲು ಸಾಧ್ಯವಿಲ್ಲ. ಕನ್ನಡ ಅಮೆರಿಕೆಯಲ್ಲಿ ಜೀವಂತವಾಗಿರುವುದು ಏನಿದ್ದರೂ ಹೊಸ ವಲಸಿಗರಿಂದ. ಕನ್ನಡವನ್ನು ಬಿಟ್ಟುಬಂದ ಕನ್ನಡಕ್ಕಾಗಿ ಹಂಬಲಿಸುವ ಮನಗಳಿಂದ.

ಇಲ್ಲಿನ ಕನ್ನಡ ಕೂಟಗಳಲ್ಲೇ ಕಾಣುತ್ತೇವೆ, ಮಕ್ಕಳು ಕೃಷ್ಣವೇಷ ಹಾಕಿ ವೇದಿಕೆ ಹತ್ತಿದರೆ ಮುಂದೆ ನಾಟಕ, ನೃತ್ಯ ಎಂದು ಹೈಸ್ಕೂಲು ಮುಗಿಯುವವರೆಗೆ ವೇದಿಕೆಗೆ ಬಂದರೆ ಅದೇ ಹೆಚ್ಚು. ಆ ನಂತರ ಕನ್ನಡ ಎನ್ನುವ ವೇದಿಕೆಯೊಂದು ಅವರನ್ನು ಕೇವಲ ಅದೊಂದೇ ಕಾರಣಕ್ಕೆ ಹಿಡಿದಿಡಲಾರದು. ಹಳಬರು ಎಷ್ಟು ಬೇಡವೆಂದರೂ ನಮ್ಮ ಮಕ್ಕಳನ್ನು ಮತ್ತೆ ಕನ್ನಡ ಕೂಟಕ್ಕೆ ತರುವುದು ಹೇಗೆ ಎಂದು ತಲೆ ಕೆಡಿಸಿಕೊಳ್ಳುತ್ತಾರೆಯೇ ಹೊರತು ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಹೊಸ ವಲಸಿಗರಿಗೆ ದಾರಿಮಾಡಿಕೊಟ್ಟಾಗ ಮಾತ್ರ ಕನ್ನಡ ವೇದಿಕೆ ಅದೇ ಒಂದು  ಉತ್ಸಾಹವನ್ನು ಕಾಯ್ದುಕೊಂಡು ಮುಂದುವರಿಯಬಲ್ಲುದು. ಅದನ್ನು ನಾವು ಇಲ್ಲಿಯೇ ಹುಟ್ಟಿ ಬೆಳೆದ ಕನ್ನಡ ಮೂಲದ ಅಮೆರಿಕನ್ನರಲ್ಲಿ ಹುಡುಕುವುದು ಖಂಡಿತ ತಪ್ಪು.

ಇಲ್ಲಿನ ಬಹುತೇಕ ಕನ್ನಡ ಮಕ್ಕಳು ರವಿವಾರದ ಕನ್ನಡ ಶಾಲೆಗಳಿಗೆ ಹೋಗುತ್ತವೆ. ನೀಲಿ ಕೆಂಪು ಹಳದಿಗಳನ್ನು ಉಲಿಯುವ ಮಕ್ಕಳನ್ನು ನೋಡಿ ಪಾಲಕರೂ ಉಬ್ಬುತ್ತವೆ. ಆದರೆ ನಾನು ನೋಡಿದಂತೆ ನಮ್ಮ ಮಕ್ಕಳು ಅಜ್ಜ ಅಜ್ಜಿಯರ ಬಳಿಗೆ ಅನಿವಾರ್ಯವೆಂದು ಕನ್ನಡ ಮಾತನಾಡುವರೆ ವಿನಃ ಇನ್ನೊಂದು ಕನ್ನಡ ಗೆಳೆಯ ಗೆಳತಿಯರೊಡನೆ ಅಲ್ಲ. ಕನ್ನಡ ಶಾಲೆಗಳಲ್ಲಿ ಮನೆಯಲ್ಲಿ ಕೇಳಿ ಬೆಳೆದ ಮಾತನ್ನು ಪರಿಚಿತವೆಂದು ಕಲಿತುಬಿಡುವ ಮಕ್ಕಳಿಗೆ ಅಕ್ಷರ ಕಲಿಸುವುದು ಅಷ್ಟೇನೂ ಸುಲಭವಲ್ಲ. ಇಂದು ಹೈಸ್ಕೂಲಿನಲ್ಲಿ ಜರ್ಮನ್, ಫ್ರೆಂಚ್ ಕಲಿತಂತೆ ಅವು ಕನ್ನಡ ಕಲಿಯುತ್ತವೆಯೇ ಹೊರತು ಕನ್ನಡದೊಂದಿಗೆ ಆತ್ಮೀಯ ಬಂಧದೊಂದಿಗೆ ಅಲ್ಲ. ಕನ್ನಡೇತರ ಜಗತ್ತಿನಲ್ಲಿ ಬೆಳೆಯುವ ಮಕ್ಕಳಿಗೆ ಚೈನೀಸ್ ಲಿಪಿಯೂ ಒಂದೇ ಕನ್ನಡ ಲಿಪಿಯೂ ಒಂದೇ.

ಮನೆಯ ಹೊರತಾಗಿ ನಿತ್ಯಜೀವನದಲ್ಲಿ ಎಲ್ಲೂ ಸುತ್ತಲೂ ಕಿವಿಯ ಮೇಲೆ ಕನ್ನಡ ಬೀಳುವ ವಾತಾವರಣವೇ ಇಲ್ಲದಿದ್ದಾಗ ಎಷ್ಟು ದಿವಸಗಳವರೆಗೆ ನಾವು ಒತ್ತು ನೀಡಲಾದೀತು? ನಾವಿನ್ನೂ ಅರಗಿಸಿಕೊಳ್ಳಲಾರದ ವಾಸ್ತವವೆಂದರೆ ನಮ್ಮ ಮಾತೃಭಾಷೆ ಕನ್ನಡವೇ ಹೊರತು ನಮ್ಮ ಮಕ್ಕಳದಲ್ಲ. ನಮಗೆ ಕನ್ನಡ ನೆಲದಲ್ಲೇ ಒಂದು ಪ್ರದೇಶದ ಸೊಗಡನ್ನು ಇನ್ನೊಂದು ಪ್ರದೇಶದ ಕನ್ನಡಿಗರಿಗೆ ದಕ್ಕಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಕೋಲೆಯ ಸೊಗಡನ್ನು ನನಗೆ ಹೇಗೆ ಮೈಸೂರಿಗರಿಗೆ ಸಂಪೂರ್ಣ ದಾಟಿಸಲು ಸಾಧ್ಯವಿಲ್ಲವೋ, ಬಿಜಾಪುರದ ಬೆಡಗನ್ನು ನಾನು ಹೇಗೆ ಬರೀ ಭಾಷೆಯ ಓದಿನಿಂದ  ಅನುಭವಿಸಲಾರೆನೋ ಅಂಥಾದ್ದರಲ್ಲಿ ಮೂಲ ಒಂದೇ, ಭಾಷೆ ಒಂದೇ ಎಂದ ಮಾತ್ರಕ್ಕೆ ನಮ್ಮ ಅಮೇರಿಕನ್ ಮಕ್ಕಳನ್ನು ಕನ್ನಡಿಗರನ್ನಾಗಿಸಲು ಹೇಗೆ ಸಾಧ್ಯ? ಇಂಥದ್ದೊಂದು ಭ್ರಮೆಯಿಂದ ಹೊರಬಂದರೆ ಕನ್ನಡದ ಅರಿವನ್ನು, ಸಂವೇದನೆಯನ್ನು ನಮ್ಮ ಮಕ್ಕಳಿಗೆ ಅವರಿಗೆ ದಕ್ಕುವಷ್ಟಾದರೂ ಒದಗಿಸಿಕೊಡಲು ಸಾಧ್ಯ. ಇದು ನಾವೆಲ್ಲರೂ ಇಂದು ಒಪ್ಪಿಕೊಳ್ಳಬೇಕಾದ ಸತ್ಯ.

ಅಮೆರಿಕೆಯ ಕನ್ನಡಿಗರಾಗಿ ನಾವು ಇಲ್ಲಿನ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ದಾಟಿಸುವುದು ಹೇಗೆ ಎಂದು ತಲೆಕೆಡಿಸಿಕೊಳ್ಳುವ ಬದಲು ನಮ್ಮ ಯೋಚನಾ ಲಹರಿಯನ್ನು ಬದಲಿಸಿಕೊಳ್ಳಬೇಕಾದ ಸಮಯವಿದು.

ಕನ್ನಡಕ್ಕಾಗಿ ದುಡಿಯುವವರು ಏನಿದ್ದರೂ ಕನ್ನಡತನದೊಂದಿಗೆ ಗುರುತಿಸಿಕೊಂಡು ಹೆಮ್ಮೆ ಪಡುವವರು ಮಾತ್ರ. ಕನ್ನಡ ನೆಲದೊಂದಿಗಿನ ನೇರಸಂಪರ್ಕವಿರುವ ಕನ್ನಡಿಗರಲ್ಲಿ ಮಾತ್ರವೇ ಪೂರ್ಣ ಪ್ರಮಾಣದ ಕನ್ನಡಪ್ರಜ್ಞೆ ಇರಲು ಸಾಧ್ಯ. ಅಮೆರಿಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ ಉಳಿಯಬೇಕೆಂದರೆ ಅದು ಕನ್ನಡ ನೆಲದಲ್ಲಿ ಮೊದಲು ಉಳಿಯಬೇಕು. ಅಲ್ಲಿಂದ ಬರುವ ಹೊಸ ತಲೆಮಾರಿನಲ್ಲಿ ಸದಾ ಸಂವಹಿಸುತ್ತಿರಬೇಕು. ಇಲ್ಲಿಂದ ಆ ನೆಲಕ್ಕೆ ಅಕ್ಷರದ ಋಣ ತೀರಿಸುವವರನ್ನು ಕನ್ನಡದ ನೆಲ ಅಪ್ಪಿಕೊಳ್ಳಬೇಕು. ಕನ್ನಡತನವನ್ನು ಸದಾ ಜೀವಂತವಾಗಿಡುವುದು  ಕನ್ನಡವನ್ನು ಕಳೆದುಕೊಂಡ ಹತಾಶೆ ಮಾತ್ರ.

ಅದು ಎಲ್ಲ ಖಾಲಿಯಾಗುವ ಮೊದಲೇ ಅನುಭವಕ್ಕೆ ಬರುವುದು ವಲಸಿಗರಿಗೆ ಮಾತ್ರ. ಅಂತೆಯೇ ಕನ್ನಡವನ್ನು ಬಹು ಜತನದಿಂದ ಉಳಿಸಿಟ್ಟುಕೊಂಡು ಕಾಪಿಡುವ  ಮಹದಾಸೆ ವಲಸಿಗರಲ್ಲಿ ಮೂಡುವುದು ಸಹಜ. ಆದರೆ ಮುಂದೆ ಬರುವ ಹೊಸ ಹೊಸ ವಲಸಿಗರಲ್ಲಿ ಕನ್ನಡ ಇಷ್ಟೇ ಶಕ್ತವಾಗಿ ಪ್ರವಹಿಸುವುದೇ? ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದವರೇ ಜೀವನವಿಡೀ ಕನ್ನಡವನ್ನು ಮರೆತು ಇಲ್ಲಿ ಬಂದಾಗ ಕನ್ನಡ ಜಾಗೃತವಾಗಲು ಸಾಧ್ಯವೇ? ಭಾಷೆಯ ಬೆಸುಗೆ ಸುಲಭಕ್ಕೆ ಬಿಟ್ಟುಕೊಳ್ಳುವ pa sa Vishva Kannada2ಹೊಲಿಗೆಯಲ್ಲ. ಅದು ಚಿಕ್ಕಂದಿನಿಂದ ಬದುಕಿನ ಭಾಗವಾದಲ್ಲಿ ಮಾತ್ರ ಸಾಧ್ಯ. ಭಾಷೆಯ ಬಂಧವನ್ನು ಕಡಿದುಕೊಂಡಾಗ ಆಗುವ ಅತಂತ್ರ ಭಾವನೆಯೇನು ಎಂಬುದು ಅಲ್ಲಿನವರಿಗೆ ಬಹುಶಃ ಇನ್ನೂ ಅರಿವಾಗಲಿಕ್ಕಿಲ್ಲ, ಆದರೆ ಆ ಭಾವದ ಪದರಗಳನ್ನು ಕೆದಕಿರುವ ನಮಗೆ ಅರಿವಿದೆ.

ನಾವು ಕರ್ನಾಟಕದಲ್ಲಿ ಕನ್ನಡವನ್ನು ಉಳಿಸುವ ಪ್ರಯತ್ನ ಮಾಡದಿದ್ದಲ್ಲಿ ಮುಂದೆ ಅಮೆರಿಕೆಯಲ್ಲೂ ಕನ್ನಡ ಉಳಿಯುವುದಿಲ್ಲ. ಅದು ನಮ್ಮೆಲ್ಲರಿಂದ  ಇಲ್ಲಿ ಕನ್ನಡದ ಕೆಲಸ ಮಾಡಿದಕ್ಕಿಂತ ಹೆಚ್ಚಿನ ಶ್ರಮ, ಆಸ್ಥೆ ಮತ್ತು ಸವಲತ್ತುಗಳನ್ನು ಬೇಡುತ್ತದೆ. ಇಲ್ಲಿ ಎಷ್ಟು ಕನ್ನಡ ಶಾಲೆಗಳನ್ನು ಕಟ್ಟಿದರೂ ಅದು ನಮ್ಮ ಹುಸಿ ಸಾಂತ್ವನಕ್ಕೆ ಹೊರತು ಅದರಿಂದ ಹೆಚ್ಚಿನ ಕನ್ನಡಸೇವೆಯಾಗಲಾರದು.

ಬದಲಿಗೆ ಕರ್ನಾಟಕದ ಕನ್ನಡ ಶಾಲೆಗಳನ್ನು, ಅಲ್ಲಿನ ಆರ್ಥಿಕ ಪರಿಸ್ಥಿತಿ, ಜನರಿಗೆ ಕನ್ನಡದ ಮೇಲಿನ ಅನವಶ್ಯಕ ಅನಾದರ ಎಲ್ಲವನ್ನೂ ಪರಿಗಣಿಸಿ ಮುಂದುವರಿದಲ್ಲಿ ಕನ್ನಡ ಉಳಿಸುವ ನಿಟ್ಟಿನಲ್ಲಿ ಅಮೆರಿಕನ್ನಡಿಗರ ಹೊಸ ಹೆಜ್ಜೆಯಾದೀತು. ಅಲ್ಲಿನ ಕನ್ನಡ ಶಾಲೆಗಳಿಗೆ ಸಮ ಪ್ರಮಾಣದಲ್ಲಿ ಇಂಗ್ಲೀಷಿನ ಸೌಕರ್ಯಗಳನ್ನು ಒದಗಿಸಿ, ಭಾಷೆಯ ಪ್ರೇಮ, ನಮ್ಮ ಅನುಭವಗಳನ್ನೂ ಹಂಚಿಕೊಂಡಲ್ಲಿ, ಕನ್ನಡದ ಜೊತೆಜೊತೆಗೆ ಜಾಗತಿಕ ಭಾಷೆ, ವಿಷಯಗಳನ್ನೂ ಅರಿಯುವ ಅವಕಾಶವಾದಲ್ಲಿ ನಮ್ಮದೇ ಭಾಷೆಯ ಬಗೆಗೊಂದು ಹೊಸ ಭರವಸೆ ಮೂಡೀತು.

ಅಲ್ಲಿನ ಕನ್ನಡವನ್ನು ಪುಷ್ಟಗೊಳಿಸಿದಲ್ಲಿ ಇಲ್ಲಿನ ಕನ್ನಡವಷ್ಟೇ ಅಲ್ಲ, ಎಲ್ಲೆಲ್ಲಿಯ ಕನ್ನಡವೂ ಉಳಿದೀತು.

5 Comments

 1. Palahalli Vishwanath
  November 17, 2016
 2. Suma
  November 16, 2016
 3. ರಾಜೀವ ನಾರಾಯಣ ನಾಯಕ
  November 16, 2016
  • Vaishali
   November 16, 2016
 4. Anonymous
  November 16, 2016

Add Comment

Leave a Reply