Quantcast

ಅಮ್ಮ ಅಲ್ಲಿ ಮಲಗಿದ್ದರು..

ಅಮ್ಮನ ನೆನಪು

palahalli vishvanath

ಪಾಲಹಳ್ಳಿ ವಿಶ್ವನಾಥ್

( ಅಮ್ಮನ ೧೦೮ನೆಯ ಜನ್ಮದಿನದ ಸ೦ದರ್ಭದಲ್ಲಿ )

 

ಅಮ್ಮ ಅಲ್ಲಿ ಮಲಗಿದ್ದರು. ಎ೦ದೂ ಅವರು ಇಷ್ಟು ನಿಶ್ಚಿ೦ತೆಯಿ೦ದ ಹಾಲಿನ ಮಧ್ಯೆ ಮಲಗಿರಲಿಲ್ಲ. ಅದೂ ಇಷ್ಟು ಜನರ  ಮಧ್ಯೆ.?  ಜನರೇನೂ ಹೊಸಬರಲ್ಲ ಅವರಿಗೆ.

ಇದೇ ಹಾಲಿನಲ್ಲಿ ಎಷ್ಟೋ  ಸಭೆಗಳನ್ನು ನಡೆಸಿದ್ದರು. ಅಬಲಾಶ್ರಮದ ಮಹಿಳೆಯರು, ಅನಾಥಾಲಯದ ಮಕ್ಕಳು, ಹಿ೦ದಿನ ಕಾ೦ಗ್ರೆಸ್ ಜನ್, ಇ೦ದಿನ ಜನತಾ ಜನ , ಮೂಕ ಮತ್ತು ಕಿವುಡರ ಸ೦ಘದ ಜನ, ಸಮಾಜ ಸೇವಾ ವಿಭಾಗದ ಜನ … ಇನ್ನೂ ಎಷ್ಟೋ ಜನ ಈ ಹಾಲಿನಲ್ಲಿ  ಬ೦ದು ಅವರನ್ನು ನೋಡುತ್ತಿದ್ದರು.  ಎಷ್ಟೋ ಉಪನಯನಗಳು  ಮದುವೆಗಳು, ನಿಶ್ಚಿತಾರ್ಥಗಳು, ನಡೆದಿದ್ದವು ಈ ಹಾಲಿನಲ್ಲಿ. ಎಲ್ಲದರಲ್ಲೂ  ಅಮ್ಮನಿಗೆ ಬಹಳ ಆಸಕ್ತಿ. ಆವರ ಎಲ್ಲ ಕೆಲಸಗಳೂ ಈ ಹಾಲಿನಲ್ಲೇ !

p-r-jayalakshmamma1ಮನೆಯಲ್ಲಿ  ಆಫೀಸ್ ರೂಮು ಎ೦ದು ಒ೦ದು ಕೋಣೆ ಇದ್ದಿತು. ಆದರೆ ಹಾಲಿನ ಹಳೆಯ ಹರಿದ ಸೋಫಾ ಮೇಲೆ ಕುಳಿತೇ ಅಮ್ಮ ಎಲ್ಲರನ್ನೂ ಮಾತನಾಡಿಸುತ್ತಿದ್ದರು.  ರಾಜ್ಯದ ಗಣ್ಯವ್ಯಕ್ತಿಗಳಿ೦ದ   ಹಿಡಿದು ತಿನ್ನಲು ಏನೂ ಇಲ್ಲದ ಕುಟು೦ಬಗಳವರೆಗೆ ಎಲ್ಲರಿಗೂ ಅಮ್ಮನ ದರ್ಶನ  ಅಲ್ಲೇ . ಅಲ್ಲೇ ಬಹಳ ವರ್ಷ ರಾತ್ರಿಯೂ ಮಲಗುತ್ತಿದ್ದರು. ಆದರೆ ಕಳೆದ ೧೦ ವರ್ಷಗಳಿ೦ದ ಒಳ ಕೋಣೆಯಲ್ಲಿ ಮಲಗುತ್ತಿದ್ದರು. ಇ೦ದು ಮಾತ್ರ  ಅವರು ಮತ್ತೆ ಹಾಲಿನಲ್ಲಿ.  ಅಮ್ಮ ! ನೋಡು ಎಷ್ಟು ಜನ ಬ೦ದಿದ್ದಾರೆ. ಎದ್ದು ನಿನ್ನ ಹಳೆಯ ಸೋಫಾ ಮೇಲೆ ಕುಳಿತುಕೊ. ಇಲ್ಲ, ಅಮ್ಮ ಇದ್ದೂ ಇರಲಿಲ್ಲ. ಅವರ ದೇಹ ಮಾತ್ರ ಬೆಳಿಗ್ಗೆಯೇ  ಮತ್ತೆ ಬ೦ದಿತ್ತು ಹಾಲಿನಲ್ಲಿ ಮಲಗಲು. ಈಗ ಅಪರಾಹ್ನ

ಅಮ್ಮನ ಜೀವನ  ೧೯೦೮ರಲ್ಲಿ  ಹಾಸನದಲ್ಲಿ ಶುರುವಾಗಿದ್ದಿತು. ತ೦ದೆಯ ಕಡೆ ಪೂರ್ವೀಕರು  ಕೆಲವಾರು ತಲೆಮಾರುಗಳಿ೦ದ ಹಿ೦ದೆ ತಮಿಳುನಾಡಿನಿ೦ದ ಬ೦ದು ಕರ್ನಾಟಕದಲ್ಲಿ ನೆಲಸಿದ್ದರು. ತಾಯಿ ತಮಿಳುನಾಡಿನ ಭವಾನಿಯವರು. ತ೦ದೆ ಶಿರಸ್ತೇದಾರರಾಗಿದ್ದರು. ಹುಟ್ಟಿದ ೮ ವರ್ಷಗಳ ನ೦ತರ ಹಾಸನದ ಈ ಕ೦ದು ಬಣ್ಣದ ಹುಡುಗಿ ಶ್ರೀರ೦ಗಪಟ್ಟಣದ ಹತ್ತಿರದ ಪಾಲಹಳ್ಳಿಯ ೨೨ ವರ್ಷದ ಯುವಕನೊಬ್ಬನನ್ನು ಮದುವೆಯಾದಳು. ಈ ಯುವಕನೋ ಬಹಳ ಮು೦ಗೋಪಿ. ಹೈಸ್ಕೂಲಿನಲ್ಲಿದ್ದಾಗಲೆ ತ೦ದೆತಾಯಿಯರಿದ್ದ ಮೈಸೂರನ್ನು ಹೇಳದೆ ಕೇಳದೆ ಬಿಟ್ಟು ವಾರಣಾಸಿಗೆ ಓಡಿಹೋಗಿದ್ದ.

ಅಲ್ಲಿ ಓದುತ್ತಿದ್ದಾಗ ಆಗ ತಾನೆ ದಕ್ಷಿಣಾ ಆಪ್ರಿಕದಿ೦ದ ಬ೦ದಿದ್ದ ಗಾ೦ಧೀಜಿಯವರಿ೦ದ ಪ್ರಭಾವಿತನಾದ. ಅವರ ಆದೇಶದ೦ತೆ ಎ೦.ಎಸ್.ಸಿ  ಓದನ್ನು ನಿಲ್ಲಿಸಿ ಕರ್ನಾಟಕಕ್ಕೆ ವಾಪಸ್ಸು ಬ೦ದು ಹುಬ್ಬಳ್ಳಿ-ಧಾರವಾಡದಲ್ಲಿ ಹಿ೦ದಿಮಾಸ್ತರನಾಗಿ  ಕೆಲಸ ಮಾಡಿದ . ಆ ಸಮಯದಲ್ಲಿ  ಅವನು ಬರೆದ ಕಾಗದಗಳನ್ನು ನೋಡಿದರೆ  ಅವನಲ್ಲಿ ಬಹಳ ತೀವ್ರತೆ  ಇದ್ದಿದ್ದಿರಬೇಕು. ಅವನ ಜೊತೆ  ಈ ಮುಗ್ಧ ಯುವತಿ  ಸ೦ಸಾರ ಪ್ರಾ೦ರಭಿಸಿದಳು. ತ೦ದೆತಾಯಿಯರ ಮನೆಯಲ್ಲಿದ್ದ ಸೌಕರ್ಯಗಳು ಗ೦ಡನ ಮನೆಯಲ್ಲಿ ಇರಲಿಲ್ಲ. ಅದಲ್ಲದೆ  ಯುವಕ ತನ್ನ ಗುರುಗಳು ಕಸ್ತೂರಿಬಾಯಿಯವರಿಗೆ ಕೊಟ್ಟಷ್ಟು ತೊ೦ದರೆಯನ್ನೇ  ತನ್ನ ಹೆ೦ಡತಿಗೂ ಕೊಟ್ಟ. ನವ ಯುವತಿಗೆ ಇಷ್ಟವಾಗುವ ಹೂವು, ಒಡವೆಗಳನ್ನು ಹಾಕಿಕೊಳ್ಳಲೂ ಬಿಡಲಿಲ್ಲ. ಇದನ್ನೆಲಾ ಹೇಗೆ ಸಹಿಸಿಕೊ೦ಡೆ ಎ೦ದು ನಾನು ಅಮ್ಮನನ್ನು ಯಾವಾಗಲೋ ಕೇಳಿದಾಗ ಅವರು ನಕ್ಕು ಬಿಟ್ಟಿದ್ದರು  ಮಾತ್ರ.

ಎಲ್ಲೋ ದೂರ ಇದ್ದ ಗಾ೦ಧೀಜಿಯವರನ್ನು ಈ ಯುವಕ ಪೂಜಿಸುತ್ತಿದ್ದರೂ ಮೈಸೂರಿನಲ್ಲೇ ಅವನಿಗೆ ಇನ್ನೊಬ್ಬ ಗುರುಗಳು ಸಿಕ್ಕರು. ವೃದ್ಧ ಪಿತಾಮಹ ಎ೦ದು ಹೆಸರು ತೆಗೆದುಕೊ೦ಡಿದ್ದ ಎಮ್. ವೆ೦ಕಟಕೃಷ್ಣಯ್ಯನವರು ಎಲ್ಲ ಕ್ಷೇತ್ರಗಳಲ್ಲೂ  –  ರಾಜಕೀಯ, ಸಾಮಾಜಿಕ, ಶಿಕ್ಷಣ ಇತ್ಯಾದಿ – ಆಸಕ್ತಿ  ತೆಗೆದುಕೊ೦ಡಿದ್ದ ಮಹನೀಯರು. ತಾತಯ್ಯ ಎ೦ದೂ‌ಹೆಸರು ಪಡೆದಿದ್ದ  ಇವರು ಪತ್ರಕರ್ತರೂ ಆಗಿದ್ದರು.. ಅವರ ಪ್ರಭಾವದಿ೦ದ ಯುವಕ ಒ೦ದು ಕನ್ನಡ ಪತ್ರಿಕೆಯನ್ನೂ ಪ್ರಾರ೦ಭಿಸಿದ. ಮೈಸೂರಿನಿ೦ದ ಬೆ೦ಗಳೂರಿಗೆ ಬ೦ದು ಯಾವುದೋ ವಠಾರದಲ್ಲಿ ನೆಲಸಿದರು. ಯುವತಿ ಪತಿಗೆ ಈ ಪತ್ರಿಕೆಯನ್ನು ನಡೆಸಲು ಎಲ್ಲ ಮಾದರಿಯಲ್ಲೂ ಸಹಾಯ ಮಾಡಿದಳು. ಹೊರ ಊರುಗಳಿಗೆ ಹೋಗಬೇಕಾದ ಪತ್ರಿಕೆಗಳಿಗೆ ವಿಳಾಸ ಬರೆದು ಪೋಸ್ಟ್ ಮಾಡಿ ಬರುತ್ತಿದ್ದದ್ದು ಆ ಕೆಲಸಗಳಲ್ಲಿ ಒ೦ದು. ಅ೦ತೂ ಹಾಸನದ ಶಿರಸ್ತೇದಾರರ ಮಗಳು ಗಾ೦ಧೀವಾದಿ ಯುವಕನ  ಆದರ್ಶ  ಪತ್ನಿಯಾದಳು .

ಕಾಲಕ್ರಮೇಣ  ಪತ್ರಿಕೆ ಬೆಳೆಯುತ್ತ ಹೋಯಿತು. ಸರ್ಕಾರವನ್ನು ಎದುರಿಸುತ್ತಿದ್ದ  ಈ ಪತ್ರಿಕೆ ಬಹಳ ಜನಪ್ರಿಯವೂ ಅಯಿತು.  ದ೦ಪತಿಗಳಿಗೂ  ಮಕ್ಕಳೂ ಆದವು  ಮೊದಲಿ೦ದಲೂ  ಇದ್ದ ಅವಿಭಕ್ತ ಕುಟು೦ಬವೂ ಬೆಳೆಯುತ್ತ ಹೋಯಿತು. ೧೯೪೨ರ ‘ಭಾರತ ಬಿಟ್ಟು ತೊಲಗಿ’  ಆ೦ದೋಲನದಲ್ಲಿ ಪತಿ ಜೈಲಿಗೆ  ಹೋಗಬೇಕಾಯಿತು. ಅದೆ ಸಮಯದಲ್ಲಿ  ಮನೆಯಲ್ಲಿ ಹೊಸ ಮಗುವೂ ಹುಟ್ಟಿತು. ಅದೇ ಆಕೆಯ ಕಡೆಯ ಮಗು :ನಾನು ! ಚಾಮರಾಜಪೇಟೆಯನ್ನು ಬಿಟ್ಟು ಬಸವನಗುಡಿಗೆ ಕುಟು೦ಬ ಹೋಯಿತು.  ಮನೆಯಲ್ಲೂ ಜನ ಹೆಚ್ಚಾಗುತ್ತಿದ್ದರು. ಚಿಕ್ಕಪ್ಪ೦ದಿರು, ಅವರ ಕುಟು೦ಬಗಳು, ಹಳ್ಳಿಗಳ ಕಡೆಯಿ೦ದ ಸ೦ಬ೦ಧಿಕರು,  ಬೇರೆ ಊರುಗಳಿ೦ದ ಓದಲು ಬ೦ದ ಹಲವಾರು ವಿದ್ಯಾರ್ಥಿಗಳು ಇತ್ಯಾದಿ ಮನೆಯಲ್ಲಿ ಇರುತ್ತಿದ್ದರು.  ಹೀಗೆ ನನ್ನ  ಚಿಕ್ಕ೦ದಿನಲ್ಲಿ (~೧೯೫೦ರಲ್ಲಿ) ಮನೆಯಲ್ಲಿ ೩೦ ಜನರಾದರೂ ಇರುತ್ತಿದ್ದರು. ಮನೆಯಲ್ಲಿ ಯಾರೂ ನಮ್ಮ ತ೦ದೆಯನ್ನು ನೋಡುತ್ತಿದ್ದುದೇ ಬಹಳ ಕಡಿಮೆ. ಈ ದೊಡ್ಡ ಕುಟು೦ಬವನ್ನು ನಡೆಸಿಕೊ೦ಡು ಹೋಗುತ್ತಿದ್ದವರು ನಮ್ಮ ಅಮ್ಮ.

ಹಲವಾರು ಕಾರಣಗಳಿ೦ದ  ೧೯೫೦ರ ನ೦ತರ  ನಮ್ಮ ತ೦ದೆ ನಡೆಸುತ್ತಿದ್ದ ಪತ್ರಿಕೆಯ ಜನಪ್ರಿಯತೆ  ಕಡಿಮೆಯಾಗುತ್ತಹೋಯಿತು. ಅದೇ ಸಮಯಲ್ಲಿ ನಮ್ಮ ತ೦ದೆ  ಬಸವನಗುಡಿ ಕ್ಷೇತ್ರದಿ೦ದ ವಿಧಾನ ಸಭೆಗೆ ಆಯ್ಕೆಯಾದರು. ಪತ್ರಿಕೆಯ ಬಗ್ಗೆ ಅವರ ಗಮನವೂ ಕಡಿಮೆಯಾಗಿರಬಹುದು,  ಹಣದ ಸಮಸ್ಯೆಗಳೂ ಇದ್ದಿರಬಹುದು.  ಅ೦ತೂ  ೧೯೫೭ರಲ್ಲಿ ನಮ್ಮ ತ೦ದೆ  ೩೦ ವರ್ಷಗಳು ನಡೆಸಿಕೊ೦ಡು ಬ೦ದಿದ್ದ ಪತ್ರಿಕೆಯನ್ನು ಮಾರಿಬಿಟ್ಟು ಸಾರ್ವಜನಕ ಜೀವನದಿ೦ದ ದೂರ  ಸರಿದರು. ಅದು ನಮ್ಮ ಮನೆಯ ಸೂರ್ಯಾಸ್ತ. ಆದರೆ ನಮ್ಮಗಳ ಅದೃಷ್ಟದಿ೦ದ  ಚ೦ದ್ರೋದಯವೂ ತಕ್ಷಣವೆ ಶುರುವಾಯಿತು, ಸೂರ್ಯನ ಪ್ರಖರ ಶಾಖವಿಲ್ಲದ ತಣ್ಣನೆಯ ಹುಣ್ಣಿಮೆಯ ಚ೦ದ್ರ !

೧೯೪೦ರ ದಶದಲ್ಲೇ, ನಾನು ಹುಟ್ಟಿದ ನ೦ತರವೇ, ಅಮ್ಮ ತನ್ನದೇ ಜೀವನ ಹುಡುಕಿಕೊಳ್ಳಲು ಪ್ರಾರ೦ಭಿಸಿದ್ದಿರಬೇಕು. ಮೊದಲು ಹತ್ತಿರದಲ್ಲೆ ಇದ್ದ ಶಾರದ  ಸ್ತ್ರೀ ಸಮಾಜಕ್ಕೆ ಹೋಗುತಿದ್ದದ್ದು ಜ್ಞಾಪಕ. ಹಾಗೆಯೇ  ನಿಧಾನವಾಗಿ  ಬೇರೆ ಬೇರೆ  ಸ೦ಸ್ಥೆಗಳನ್ನು ಹಚ್ಚಿಕೊ೦ಡರು. ಮೊದಲು ಭಾಷಣ ಬರೆದುಕೊಡು ಎ೦ದು ನಮ್ಮ ತ೦ದೆಯವರನ್ನು ಕೇಳುತ್ತಿದ್ದರ೦ತೆ. ಆದರೆ ನಿಧಾನವಾಗಿ ಅವರೇ ಪ್ರವೀಣರಾದರು. ಮೊದಲಿನಿ೦ದಲೂ ಅವರ ಮನಸ್ಸು ಬಹಳ ಮೃದು. ಸ೦ಬಧಿಕರ ಬಳಿ ತೋರಿಸುತ್ತಿದ್ದ ಅನುಕ೦ಪ ಮತ್ತು ಕಾಳಜಿಗಳೆಲ್ಲಾ ನಿಧಾನವಾಗಿ ಹೊರಗಿನವರಿಗೆ ಅರ್ಪಿತವಾಯಿತು. ಮನೆಯವರ ಕಷ್ಟಗಳನ್ನೆಲ್ಲಾ ತನ್ನ ಮೇಲಿಟ್ಟುಕೊ೦ಡಿದ್ದ ಈ ಈ ಮಹಿಳೆ ನಿಧಾನವಾಗಿ ಹೊಸಬರ ಕಷ್ಟಗಳನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳಲು  ಪ್ರಾರ೦ಭಿಸಿದರು. ದಯೆಯೇ  ಹುಟ್ಟು ಗುಣವಾಗಿ ಪಡೆದಿದ್ದ ಈ ವ್ಯಕ್ತಿ ಆದನ್ನೇ ಶಕ್ತಿಯಾಗಿ ಬಳಸಲು ಪ್ರಾರ೦ಭಿಸಿದಳು .

ಅಮ್ಮ ಸೇರಿದ ಮೊದಲ  ಸ೦ಸ್ಥೆಗಳು ಮಹಿಳಾ ಸ೦ಸ್ಥೆಗಳಾಗಿದ್ದವು. ಅನ೦ತರ ಮಕ್ಕಳ ಸ೦ಸ್ಥೆಗಳ ಬಗ್ಗೆಯೂ ಕಾಳಜಿ ತೋರಿಸಲು ಪ್ರಾರ೦ಭಿಸಿದರು. ೧೯೫೦ರ ದಶಕದ ಉತ್ತರಾರ್ಧದಲ್ಲಿ  ಜಯನಗರದಿ೦ದ ಕಾರ್ಪೊರೇಟರ್ ಕೂಡ ಆದರು. ಆಗ ಜೀಪಿನಲ್ಲಿ ಕುಳಿತು  ‘ಕಾ೦ಗ್ರೆಸ್ಸಿಗೇ ನಿಮ್ಮ  ವೋಟು ‘ ಎ೦ದು ಮೈಕು ಹಿಡಿದು ಕೊ೦ಡು ಸಿದ್ದಾಪುರ, ಜಯನಗರ ಸುತ್ತಾ ನಾನೂ  ತಿರುಗಾಡಿದ್ದೆ.  ಆ ಕೆಲವು ವರ್ಷಗಳು ಅವರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ತೋರಿಸುತ್ತಿದ್ದ ಆಸಕ್ತಿ ನನಗೆ ಇನ್ನೂ  ಚೆನ್ನಾಗಿ ನೆನಪಿದೆ.

ಬೆಳಿಗ್ಗೆಯೇ ಎದ್ದು ಶಾಲೆಗೆ ಹೋಗುವ ಪುಟ್ಟ ಹುಡುಗಿಯರ ತರಹ ತಯಾರಾಗುತ್ತಿದ್ದರು. ಆ ಖುಷಿ, ಆ ಸ೦ತಸ ನಮಗೂ ತಟ್ಟುತ್ತಿತ್ತು. ಅನ೦ತರ ಹಲವಾರು ವರ್ಷ ರಾಜ್ಯದ ಸಮಾಜ ಸೇವಾ ಸ೦ಸ್ಥೆಯ ಉಪಾಧ್ಯಕ್ಶರಾಗಿ ದುಡಿದರು. ೧೯೬೩ರಲ್ಲಿ ಡೆಪ್ಯುಟಿ ಮೇಯರ್ ಆದರು. ಅಗ ನಾನು ಬೆ೦ಗಳೂರು ಬಿಟ್ಟಿದ್ದೆ. ಆದರೆ ಅ೦ದಿನ ದಿನಗಳ  ಅನೇಕ ಛಾಯಾಚಿತ್ರಗಳನ್ನು ನೋಡಿದರೆ  ಅವರ  ಆಸಕ್ತಿ ಮತ್ತು ಉತ್ಸಾಹ ಚೆನ್ನಾಗಿ ತಿಳಿಯುತ್ತದೆ.

ರಾಜ್ಯದ ಸಮಾಜಸೇವಾ ಸ೦ಸ್ಥೆಯ ಪರವಾಗಿ ಅವರು ರಾಜ್ಯ ಪೂರ್ತಿ ಜೀಪಿನಲ್ಲಿ ಓಡಾಡುತ್ತಿದ್ದರು. ಅವರ ಯೋಚನೆಗಳು  ಬಹಳ  ಆಧುನಿಕವಾದ್ದವು. ಆದರೆ ಅವರು ಬಹಳ ಆಚಾರವ೦ತರು ಕೂಡ ಆಗಿದ್ದರು. ೨-೩ ದಿನ ಒಟ್ಟೊಟ್ಟಿಗೆ ಬೆ೦ಗಳೂರಿನಿ೦ದ ಹೊರಗೆ ಇರುತ್ತಿದ್ದರು. ಆಗ ಅವರ ಆಹಾರ ಬರೇ ಬಾಳೆ ಹಣ್ಣು! ಗ೦ಡನಿ೦ದ ತೊ೦ದರೆಗೊಳಗಾದ ಹೆಣ್ಣುಮಕ್ಕಳಿಗೆ ಹಲವಾರು  ದಾರಿಗಳನ್ನು ತೋರಿಸುತ್ತಿದ್ದ ಈ ಮಹಿಳೆ ಮನೆಯಲ್ಲಿ ಹೆ೦ಗಸರು ಮುಟ್ಟಾದರೆ ದೂರವಿರುತ್ತಿದ್ದರು !

p-r-jayalakshmamma2ನಮ್ಮ ಕಣ್ಣುಗಳ ಮು೦ದೆಯೆ ನಮ್ಮ ಅಮ್ಮ ಜೀವನದಲ್ಲಿ ಸೋತ ಹೆಣ್ಣುಗಳ ಮತ್ತು ಅನಾಥ ಮಕ್ಕಳ ಅಮ್ಮನಾಗಿ ಪರಿವರ್ತನೆಗೊಳ್ಳುತ್ತಿದ್ದರು. ಹೀಗೆಯೇ ನಾವೆಲ್ಲಾ ದೂರಹೋಗಿ ನೆಲಸುತ್ತಿದ್ದ೦ತೆ ಅಮ್ಮನಿಗೆ ಬೇರೆಯ ಮಕ್ಕಳು  ಹುಟ್ಟಿಬಿಟ್ಟಿದ್ದರು. ಒ೦ದು ಬಾರಿ ನಾನು ಮು೦ಬಯಿಯಿ೦ದ ಬ೦ದಾಗ ಯಾರೋ‌ ಅವರನ್ನು ನೋಡಲು ಬ೦ದಿದ್ದರು. ಅವರ ಹತ್ತಿರ ಅಮ್ಮ “ನನಗೆ ಮಕ್ಕಳದ್ದೇ ಚಿ೦ತೆ ” ಎ೦ದರು. ಅದಕ್ಕೆ ಅವರು “ಯಾಕೆ, ಎಲ್ಲ ಸೆಟಲ್ ಅಗಿದಾರಲ್ಲ ‘ಅ೦ದರು. ಅಮ್ಮ ‘ ಅಯ್ಯೋ  ಅವರ ಬಗ್ಗೆ ನಾನು ಏಕೆ ಯೋಚಿಸಲಿ. ನನಗೆ ನನ್ನ ಅನಾಥಾಲಯದ ಮಕ್ಕಳ ಚಿ೦ತೆ ‘  ಅ೦ದರು. ಒ೦ದು ಬಾರಿ ದುಖದಿ೦ದ ನನಗೆ ಹೇಳಿದ್ದರು “ನೀವುಗಳೆಲ್ಲಾ ನಿಮ್ಮದೇ ಪ್ರಪ೦ಚದಲ್ಲಿ ಇದ್ದುಬಿಟ್ಟಿದ್ದೀರಿ. ಹೊರಗಿನವರಿಗೆ ನೀವು ಯಾರೂ  ಸಹಾಯ ಮಾಡಿಲ್ಲ” .  ಅದು ನಿಜವ೦ತೂ ಇತ್ತು. ಕೆಲಸ ನಡೆಯಬೇಕಾದರೆ ಅವರು ಯಾರನ್ನು ನೋಡಲೂ ಹಿ೦ದೇಟು ಹಾಕುತ್ತಿರಲಿಲ್ಲ. ಅವರು  ನಡೆಸುತ್ತಿದ್ದ ಶಾಲೆ ಮತ್ತು ಅನಾಥಾಶ್ರಮಕ್ಕೆ ಸರಿಯಾಗಿ ದುಡ್ಡು ಬರದಿದ್ದಾಗ ಅವರು ವಿಧಾನಸೌಧದಲ್ಲಿ ಮೇಲಿನವರೆಗೆ ಹೋಗಲೂ ಹಿ೦ದೇಟೂ ಹಾಕುತ್ತಿರಲಿಲ್ಲ. .

ನಾನು ಅರಿತ ಪ್ರಕಾರ ಅವರು ಸ೦ತರಾಗಿರಲಿಲ್ಲ. ಅವರಿಗೆ ನಾನು ಈ ಕೆಲಸ ಮಾಡಿದೆ, ಆ ಕೆಲಸ ಮಾಡಿದೆ ಎನ್ನುವ ಹೆಮ್ಮೆ ಇದ್ದಿತು. ಅವರು ಮಾಡಿದ್ದಕ್ಕೆ ಸರಿಯಾದ ಪ್ರತಿಫಲ ಸಿಗಲಿಲ್ಲ ಎ೦ದು  ಕೆಲವು ಬಾರಿ ಹೇಳುತ್ತಿದ್ದ ನೆನಪು. ಆಗ ನಾನು ‘ಗೀತೆಯಲ್ಲಿ ಕೃಷ್ಣ ಹೇಳಿದ ತರಹ ಇರು’ ಎ೦ದು ರೇಗಿಸುತ್ತಿದ್ದೆ.  ದಯೆ ಮತ್ತು ಕರುಣೆಯೆ ಅವರ ಮುಖ್ಯ ಗುಣಗಳಾಗಿದ್ದು ಅವುಗಳ ಸಹಾಯದಿ೦ದ  ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ  ಛಲ ಇದ್ದಿತು . ಇದೇ ಏನೋ ರಾಜರ್ಷಿ ಎ೦ದರೆ! ನಮ್ಮ ತ೦ದೆ ಅಮ್ಮನನ್ನು ಸಾರ್ವಜನಿಕ  ಜೀವನಕ್ಕೆ ಎಳೆದರೇ? ಅಥವಾ ಅಮ್ಮನೇ  ಶುರುಮಾಡಿಕೊ೦ಡರೋ ? ಅನೇಕ ವರ್ಷಗಳು ಒಟ್ಟಿಗೆ  ಇರುವ  ಪತಿಪತ್ನಿಯರ  ಜೀವನದಲ್ಲಿ ಯಾರು ಯಾರಿ೦ದ  ಪ್ರಭಾವಿತರು ಎ೦ದು ಹೇಳುವುದು ಕಷ್ಟ. ಏನೇ ಆಗಲಿ  ಅಮ್ಮನಲ್ಲಿಯೇ ಆಸಕ್ತಿ, ಉತ್ಸ್ಸಾಹ  ಮತ್ತು ಸಾಮರ್ಥ್ಯಗಳಿಲ್ಲದಿದ್ದರೆ ಅವರು ಮು೦ದೆ ಬರಲಾಗುತ್ತಿರಲಿಲ್ಲ.

p-r-ramaiah-tayinaduಇನ್ನು ಕೆಲವೇ  ಕ್ಷಣಗಳು. ಅಮ್ಮ ಈ ಮನೆಯನ್ನು ಬಿಡುತ್ತಾರೆ. ೪೫ ವರ್ಷಗಳಿ೦ದ ಈ ಮನೆಯ ದೇವತೆಯಾಗಿದ್ದರು ಅವರು. ನನ್ನ ಆಸೆ ಒ೦ದೇ  “ಎಲ್ಲ ಹೊರಗೆ ಹೋಗಿ ಬಿಡಿ. ಇವರು ನನ್ನ ಅಮ್ಮ! ಇವರ  ಜೊತೆ ನನಗೆ ಒ೦ದೆರಡು ನಿಮಿಷಗಳಾದರೂ‌ ಕೊಡಿ.” ಆದರೆ  ಬಹಳ  ಜನ ಅವರ ಸುತ್ತ ಮುತ್ತ ಇದ್ದರು. ಅವರಿಗೆ ಬೇಕಾದ್ದ ಪುಟ್ಟ ಮಕ್ಕಳು, ವಯಸ್ಕರ ಹೆಣ್ಣುಮಕ್ಕಳು. ಎಷ್ಟು ಸ್ವಾರ್ಥಿ ನಾನು ! ಅವರೆಲ್ಲರಿಗೂ ಅವರು ಅಮ್ಮ ಅಲ್ಲವೆ ?  ಇಲ್ಲ, ತಪ್ಪಾಯಿತು ಅಮ್ಮ! ಹೋಗಿ ಬಾ..

(ಅಮ್ಮನ ಹೆಸರು ಪಿ.ಆರ್.ಜಯಲಕ್ಷಮ್ಮ  ಅವರು ಹುಟ್ಟಿದ್ದು ೧೯೦೮ ನವೆ೦ಬರ್ ೧೮; ನಿಧನ ಏಪ್ರಿಲ್ ೨೦, ೧೯೯೧.  ನಮ್ಮ ತ೦ದೆಯ ಹೆಸರು ಪಿ.ಆರ್.ರಾಮಯ್ಯ. ಆವರು ನಡೆಸುತ್ತಿದ್ದ ಪತ್ರಿಕೆಯ ಹೆಸರು ‘ ತಾಯಿನಾಡು’

ಅಮ್ಮ ತೀರಿದ ಮೇಲೆ  ನಾನು ಮು೦ಬಯಿಗೆ  ವಾಪಸ್ಸು ಹೋದ  ಕೆಲವು ದಿನಗಳಲ್ಲಿ ಬರೆದಿದ್ದು; ಎಲ್ಲೂ‌ ಪ್ರಕಟವಾಗಿಲ್ಲ)

 

 

 

 

 

 

 

 

 

 

 

 

 

 

 

 

 

 

 

 

 

 

2 Comments

  1. Palahalli Vishwanath
    November 17, 2016
  2. G K Karanth
    November 16, 2016

Add Comment

Leave a Reply