Quantcast

ಕನಕದಾಸರ ಮರು ಓದು ಏನು? ಮತ್ತು ಹೇಗೆ?. . .

kiran-gajanur

ಡಾ ಕಿರಣ್ ಎಂ ಗಾಜನೂರು

ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ ೧೭ ನಾವು ಕನಕ ಜಯಂತಿಯನ್ನು ಆಚರಿಸುತ್ತಿದ್ದೇವೆ.  ೧೬ನೇ ಶತಮಾನದಲ್ಲಿ ಅಲೋಚಿಸಿದ್ದ ಕನಕನನ್ನು ಇಂದಿನ ನಮ್ಮ ಕಾಲಘಟ್ಟದಲ್ಲಿ ನೆನೆಯೋದು ಅಂದ್ರೆ ಏನು..? ಅಥವಾ ವರ್ತಮಾನದ ನಮ್ಮ ಯಾವ ಅಗತ್ಯದ ಭಾಗವಾಗಿ ಕನಕನನ್ನು ನೆನಪಿಸಿಕೊಳ್ಳುತ್ತಿದ್ದೇವೆ..? ಹೀಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿರುವುದಂತೂ ಸುಳ್ಳಲ್ಲ!

ಏಕೆಂದರೆ ೧೬ನೇ ಶತಮಾನದ ಪಠ್ಯವನ್ನು ನಾವು ೨೧ನೇ ಶತಮಾನಕ್ಕೆ ಒಗ್ಗಿಸಿಕೊಳ್ಳವ ಜರೂರು ಏನಿದೆ? ಎಂಬ ಮುಖ್ಯ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳದ ಹೊರತು ನಾವು ಕನಕರ ಜಯಂತಿಯನ್ನು ಆರ್ಥಪೂರ್ಣವಾಗಿ ಆಚರಿಸಲಾರೆವು ಅನ್ನಿಸುತ್ತಿದೆ.

kanakadasa statue meet RPಆ ಹಿನ್ನೆಲೆಯಲ್ಲಿ ನೋಡುವುದಾದರೆ ಪರಂಪರೆಗಳ ಕುರಿತ ಅಧ್ಯಯನಗಳು ಇತ್ತೀಚೆಗೆ ಗಣನೀಯವಾಗಿ ಹೆಚ್ಚುತ್ತಿವೆ. ಇದಕ್ಕೆ ಮುಖ್ಯ ಕಾರಣ ವಸಾಹುತೋತ್ತರ ಕಾಲದ ಚಿಂತನೆ. ಸಾಹಿತ್ಯದ ಪಠ್ಯಗಳನ್ನು ಕೇವಲ ಸಾಹಿತ್ಯಿಕವಾಗಿ ನೋಡದೆ ಅವುಗಳಲ್ಲಿ ಆಳವಾಗಿ ಹಾಸು ಹೊಕ್ಕಾಗಿರುವ ಸಂಸ್ಕೃತಿಯ ಮಹತ್ವವನ್ನು ಹೊರ ತರಬೇಕು ಎಂಬ ವಾದಗಳನ್ನು ಮುಂಚೂಣಿಗೆ ತಂದದ್ದು ಎಂಬ ಅಂಶವನ್ನು ಗುರುತಿಸಬಹದು ಅನ್ನಿಸುತ್ತದೆ.

ಆ ಹಿನ್ನೆಲೆಯಲ್ಲಿ ಸಾಹಿತ್ಯದಲ್ಲಿ ಹಾಸು ಹೊಕ್ಕಾಗಿರುವ ಜನ ಸಂಸ್ಕೃತಿಯ ಗುಣಧರ್ಮವನ್ನು ಮುಂಚೂಣಿಗೆ ತರುವ ಉದ್ದೇಶದಿಂದಲೂ ಕನಕ ಸಾಹಿತ್ಯವನ್ನು ಪ್ರವೇಶಿಸಬಹದು ಎಂಬ ಅಲೋಚನೆಯನ್ನು ಹಲವಾರು ಚಿಂತಕರು ವ್ಯಕ್ತಪಡಿಸಿದ್ದಾರೆ.

ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಬುದ್ಧ, ಬಸವ, ಜೈನ, ಮೀರಾಪಂಥ, ನಾಥಪಂಥ, ಕಬೀರಪಂಥ, ಚೈತನ್ಯ ಪಂಥ, ಮುಂತಾದ ಹಲವು ಪಂಥಗಳೊಂದಿಗೆ ದಾಸ ಪಂಥವೂ ಒಂದು. ಈ ಪಂಥ ನಮ್ಮ ಸಂಸ್ಕೃತಿಯಲ್ಲಿ ಅತ್ಯಂತ ಅಮೂಲ್ಯವಾದ ಸ್ಥಾನವನ್ನು ಹೊಂದಿದೆ. ದಾಸರು ತಮ್ಮ ಕೀರ್ತನೆಗಳನ್ನು ಅನುಭಾವಾತ್ಮಕ ನೆಲೆಯಲ್ಲಿ ರಚಿಸಿದ್ದು ಮಾನವ ಬದುಕಿನ ಸರಳ ಸತ್ಯವನ್ನು ಸಾರುವ ಇವು ಇಂದಿನವರೆಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿವೆ.

ದಾಸರು ಎಂದಾಕ್ಷಣ ನಮ್ಮ ಸ್ಮೃತಿ ಪಠಲಕ್ಕೆ ಬರುವುದು, ಪುರಂದರ ದಾಸರು ಮತ್ತು ಕನಕ ದಾಸರು. ಇವರನ್ನು ಕುರಿತು ದಾಸರೆಂದರೆ ದಾಸರಯ್ಯ ಎಂಬ ಮಾತು ಕೂಡ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಅದರಲ್ಲಿಯು ಕನಕದಾಸರ ಕೀರ್ತನೆಗಳು ಅವುಗಳಲ್ಲಿನ ಅರ್ಥ ಜನಮನಗಳಲ್ಲಿ ಹಚ್ಚ ಹಸಿರಾಗಿರುವುದನ್ನು ಇಂದಿಗೂ ಕಾಣಬಹುದು. ಮಾನವ ಬದುಕನ್ನು ಸರಳಾತಿ ಸರಳವಾಗಿ ತಮ್ಮ ಅನುಭವದ ನೆಲೆಯಲ್ಲಿ ಕಿರ್ತನೆಗಳನ್ನು ರಚಿಸುವ ಮೂಲಕ ಕಟ್ಟಿಕೊಟ್ಟ ದಾಸರ ಮಾತುಗಳ ಹಿಂದಿನ ಅರ್ಥಗಳನ್ನು ಅವು ಇರುವಂತೆ ಗ್ರಹಿಸುವುದು ಇಂದಿನ ಅಗತ್ಯವಾಗಿದೆ.

ಹಾಗೆ ನೋಡುವುದಾದರೆ ಹೊಸಗನ್ನಡ ಸಾಹಿತ್ಯ ಕೋಗಿಲೆ, ದಾಸ ಸಾಹಿತ್ಯದ ಬನದ ಕೋಗಿಲೆ ಎಂದು ಕನಕದಾಸರು ಹೆಸರಾಗಿದ್ದರು.  ಕೆಳಜಾತಿಯ ನೋವು, ನಲಿವು, ಅರಿವು ಅವರ ಸಾಹಿತ್ಯದಲ್ಲಿ ಮಾರ್ದನಿಸಲು ಶುರು ಮಾಡಿತು. ಇವರು ತಮ್ಮ ಸಮಕಾಲೀನ ದಾಸರಂತೆ ಸಂಪೂರ್ಣವಾಗಿ ಹರಿಯನ್ನು ಹೊಗಳದೆ “ಆರು ಬದುಕಿದರಯ್ಯಾ ಹರಿ ನಿನ್ನ ನಂಬಿ” ಎಂಬ ವೈಚಾರಿಕ ನೆಲೆಯಲ್ಲಿ ಹರಿಯನ್ನು ಪ್ರಶ್ನಿಸಿ, ತಮ್ಮ ವಿಶಿಷ್ಠ ವೈಚಾರಿಕದೃಷ್ಟಿಯಿಂದ ಬದುಕಿನ ನೈಜ್ಯಚಿತ್ರಣವನ್ನು ನಂತರದ ಪೀಳಿಗೆಗೆ ಬದಲಾಯಿಸಿ ಸಾಹಿತ್ಯ ಹರಿಸಿದವರು. ಈ ಕಾರಣವೇ ಕನಕರಿಗೆ ದಾಸರದಾಸ ಎಂದೆನಿಸಿಕೊಳ್ಳಲು ಸಾಧ್ಯವಾಗಿಸಿತು ಅನ್ನಿಸುತ್ತದೆ.

ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಬಹು ಮುಖ್ಯವಾಗಿ ಎರಡು ಕಾವ್ಯಗಳನ್ನು ರಸವತ್ತಾಗಿ ಚಿತ್ರಿಸುವ ಮೂಲಕ ಜೀವ ತುಂಬಿದ್ದಾರೆ. ಅವುಗಳಲ್ಲಿ ಮೋಹನ ತರಂಗಿಣಿ (ಶೃಂಗಾರ ರಸಕಾವ್ಯ) ಹಾಗೂ ನಳ ಚರಿತ್ರೆ (ನಳ-ದಮಯಂತಿಯರ ಪ್ರೇಮಕಾವ್ಯ) ಪ್ರಮುಖವಾದುವು. ಉಳಿದಂತೆ ಹರಿಭಕ್ತ ಸಾರ, ರಾಮಧಾನ್ಯಚರಿತ್ರೆ ಕನಕದಾಸರ ವೈವಿಧ್ಯಮಯ ಸಾಹಿತ್ಯಕ್ಕೆ ಹಿಡಿದ ಕೈಗನ್ನಡಿ. ಹಾಗೆ ನೋಡುವುದಾದರೆ ಕನಕನ ಧ್ಯೇಯವನ್ನು ಪಾಲಿಸಿ ಬದುಕುತ್ತಿರುವ ಜನಪದರ ಬದುಕು ಇಂದಿಗೂ ಆ ಕೆಲಸ ಮಾಡುತ್ತಿವೆ. ಇದು ನಮಗಿರುವ ಬಹುದೊಡ್ಡ ನಿದರ್ಶನ ಎಂಬ ವಿಶ್ಲೇಷಣೆಗಳನ್ನು ನಾವು ಕನಕದಾಸರ ಕುರಿತ ಸಾಹಿತ್ಯಿಕ ಚರ್ಚೆಯಲ್ಲಿ ಗುರುತಿಸಬಹುದಾಗಿದೆ.

ಆದರೆ ನಮ್ಮಕಾಲದ ದುರಂತ ಎಂದರೆ ಕನಕದಾಸರಂತ ಮಹನೀಯರ ಅನುಭವದ ಹಿನ್ನಲೆಯಲ್ಲಿ ರಚಿಸಿದ ಬರಹಗಳ ಆಧಾರದಲ್ಲಿ ಸಮಾಜವನ್ನು ಇಲ್ಲಿ ಸಂಸ್ಕೃತಿಯನ್ನು ಅವುಗಳಲ್ಲಿನ ತಾರತಮ್ಯಗಳನ್ನು ಅರ್ಥಮಾಡಿಕೊಳ್ಳದೆ ೧೮ ಮತ್ತು ೧೯ನೇ ಶತಮಾನದಲ್ಲಿ ಯುರೋಪಿಯನ್ನರು ತಮ್ಮ ಅನುಭವದ ಹಿನ್ನಲೆಯಲ್ಲಿ ಈ ನೆಲದ ಯಾವ ಗ್ರಹಿಕೆಗೂ ಸಂಬಂದವಿಲ್ಲದಂತೆ ಸೃಷ್ಟಿಸಿದ ಚೌಕಟ್ಟಿನ ಒಳಗೆ ನಮ್ಮ ಕನಕಾದಿ ಶರಣರ ಮಾತುಗಳನ್ನು ಗುರುತಿಸಿ ವಿವರಿಸುತ್ತಿದ್ದೇವೆ. ಆ ಮೂಲಕ ನಿಜ ಅರ್ಥದಲ್ಲಿ ಇಂದು ನಾವು ವಸಾಹತುಶಾಹಿ ನಿರ್ಮಿಸಿದ ಭಾರತದ ಸಮರ್ಥನೆಗೆ ಕನಕಾದಿ ಮಹನೀಯರ ಮಾತುಗಳನ್ನು ಬಳಸುತ್ತಿದ್ದೇವೆ ಮತ್ತು ಅದನ್ನೇ ಪ್ರಗತಿ ಎಂದು ತಿಳಿದಿದ್ದೇವೆ. ಶಿಕ್ಷಣದ ಹೆಸರಿನಲ್ಲಿ ಅದನ್ನೇ ಕಲಿಸುತ್ತಿದ್ದೇವೆ.

kanakadasa m s murthy paintingನಮ್ಮ ಈ ಪ್ರವೃತ್ತಿಯಿಂದ ಮನುಷ್ಯ ಬದುಕಿನ ಕುರಿತು ಸಾಮಾಜಿಕ ಸಾಮರಸ್ಯದ ಕುರಿತು ನಮ್ಮ ನೆಲದ ಸಂಸ್ಕೃತಿಯ ಕುರಿತು ತಮ್ಮ ಅನುಭವದ ಮೂಲಕ ಜಗತ್ತಿಗೆ ಮಾದರಿಯಾಗಬಹುದಾದ ಚಿಂತನೆಗಳನ್ನು ರಚಿಸಿದ ಕನಕರಂತಹ ಅನುಭಾವಿಗಳು ಜಗತ್ತಿನ ಶ್ರೇಷ್ಠ ವಿದ್ವಾಂಸರ ಪಟ್ಟಿಯಲ್ಲಿ ಕಾಣಲಾಗಿಲ್ಲ ಎಂಬುದು ಒಂದು ನ್ಯೂನತೆಯಾದರೆ, ಇನ್ನೊಂದು ಈ ಹೊತ್ತಿನ ಆರೋಗ್ಯಪೂರ್ಣ ಸಮಾಜದ ನಿರೂಪಣೆಗೆ ಬೇಕಾಗಿರುವ ತಿಳಿವನ್ನು ರೂಪಿಸಲು ಕನಕರಂತವರು ಎಷ್ಟು ಮುಖ್ಯರೆಂಬುದನ್ನು ವಿವರಿಸುವ ಮಾದರಿಯ ಕೊರತೆಯನ್ನು ನಾವಿಂದು ಎದುರಿಸುತ್ತಿದ್ದೇವೆ. ಈ ಎಲ್ಲಾ ವಿಶ್ಲೇಷಣೆಗಳು ನಾವು ಕನಕದಾಸರನ್ನು ಏಕೆ ನಮ್ಮ ಕಾಲದಲ್ಲಿ ಮರು ಓದು ಮಾಡಬೇಕು ಎಂಬ ಅಂಶಗಳತ್ತ ನಮ್ಮ ಗಮನವನ್ನು ಸೆಳೆಯುತ್ತದೆ. . .

ಆದರೆ ೧೬ನೇ ಶತಮಾನದ ಕನಸದಾರನ್ನು ಇಂದು ಹೇಗೆ ಓದಬೇಕು? ಎಂಬ ಮಹತ್ವದ ಪ್ರಶ್ನೆ ಹಾಗೆ ಉಳಿಯುತ್ತದೆ. ಈ ಕಾಲಕ್ಕೆ ಇದೊಂದು ಮಹತ್ವದ ಪ್ರಶ್ನೆಯೂ ಹೌದಾಗಿದೆ. ಏಕೆಂದರೆ ಅವ್ಯಕ್ತ ಚರಿತ್ರೆಯ ಹಿನ್ನಲೆಯಲ್ಲಿ ಡಾ. ಮೊಗಳ್ಳಿಯವರು ಆಡಿದ “ನಿರ್ವಚನದ ಸ್ವಾತಂತ್ರ್ಯವನ್ನು ನಿರ್ಧಿಷ್ಟಗೊಳಿಸುವ ಶಿಷ್ಟಚರಿತ್ರೆಯ ಕ್ರಮಗಳು ಅಲಕ್ಷಿತ ಸಮುದಾಯಗಳ ಮೂಲ ಪ್ರಶ್ನೆಗಳನ್ನೆ ತಿರಸ್ಕರಿಸಿ ಬಿಡುತ್ತವೆ” ಎಂಬ ಮಾತು. ಸಾಹಿತ್ಯ ಧಾರೆಯೊಂದರ ಅಭಿವ್ಯಕ್ತಿಯನ್ನು ಶಿಷ್ಟತೆಯ ಪರಿಧಿಗೆ ತಂದ ತಕ್ಷಣ ಅದು ಸಾಹಿತ್ಯ ಅಭಿವ್ಯಕ್ತಿಯೊಂದರ ನೈಜ ಪ್ರತಿಪಾದನೆಗೆ ಒಂದು ತಡೆಯಾಗಿ ಮಾರ್ಪಡುತ್ತದೆ ಅನ್ನಿಸುತ್ತದೆ. ಈ ತಡೆ ಕನಕದಾಸರ ಸಾಹಿತ್ಯ ಚರಿತ್ರೆಯನ್ನು ಓದಿಕೊಳ್ಳುವಾಗ ನಮ್ಮನ್ನು ಅವರಿಸುವ ಸ್ಥಿತಿ ಇದೆ ಆ ಕಾರಣಕ್ಕೆ ನಮ್ಮ ಕಾಲದಲ್ಲಿ ಕನಕದಾಸರನ್ನು ಓದುವ ಕ್ರಮ ಯಾವುದು? ಎಂಬುದು ನಾವು ಶೋಧಿಸಿಕೊಳ್ಳಬೇಕಾದ ಮಹತ್ವಪೂರ್ಣವಾದ ಸಂಗತಿಯಾಗುತ್ತದೆ.

ಏಕೆಂದರೆ ಕನಕರು ನಮ್ಮ ಚಿಂತನೆಗಳಲ್ಲಿ ಪ್ರತಿಪಾದಿಸಿದ ಆಧ್ಯಾತ್ಮ ಎನ್ನುವುದು ಇಂದು ನಾವು ಚರ್ಚಿಸುತ್ತಿರುವ ಮತ/ಧರ್ಮಗಳ ಪರಿಧಿಯನ್ನು ಮೀರಿದ್ದು,  ಸ್ವತಂತ್ರವಾದದ್ದು. ಜೊತೆಗೆ ಸಾಮಾನ್ಯ ಜನರ ಆಶಯಗಳಿಗೆ ಪೂರಕವಾದದ್ದು ಆದ್ದರಿಂದಲೇ ಅವರಿಗೆ ಸಂಸಾರದಲ್ಲಿದ್ದುಕೊಂಡೆ ಸಂಸಾರವನ್ನು ದಾಟಬಹುದು ಎಂಬ ಮಹತ್ವದ ಅಲೋಚನೆಯನ್ನು ಆಧ್ಯಾತ್ಮದ ಆಸರೆಯಿಂದ ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂಬ ಅಂಶಗಳನ್ನು ಅವರ,

ಡೊಂಕುಬಾಲದ ನಾಯಕರೆ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ,

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೊ

ಬಯಲು ಆಲಯದೊಳಗೊ ಆಲಯ ಬಯಲಿನೊಳಗೊ

ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ

ಎಂಬ ಅವರ ಕಿರ್ತನೆಗಳ ಸಾಲಿನಲ್ಲಿ ಗುರುತಿಸಬಹುದಾಗಿದೆ. ಈ ಅಂಶ ಇಂದು ೨೧ನೇ ಶತಮಾನದ ರಾಜಕೀಯ ಮತ್ತು ಸಾಂಸ್ಕೃತಿಕ ಅಗತ್ಯತೆಗಳ ಭಾಗವಾಗಿ ಪರಂಪರೆಗಳನ್ನು ಗುರುತಿಸುತ್ತಿರುವ ಮಾದರಿಗಳಿಗೆ ಸಂಪೂರ್ಣ ವಿರುದ್ಧವಾದ ಮತ್ತು ಜನಪರ ಚಿಂತನಾ ಮಾದರಿಯಾಗಿವೆ ಜೊತೆಗೆ. . .

(೧)

ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ

ಅಚ್ಯುತನ ನಾಮವನು ನೆನೆದು ಸುಖಿಯಾಗೊ

 (೨)

ದಾಸದಾಸರ ಮನೆಯ ದಾಸಿಯರ ಮಗ ನಾನು

ಸಾಸಿರ ನಾಮದೊಡೆಯ ರಂಗಯ್ಯನ ಮನೆಯ

(೩)

ಅಡುಗೆಯನ್ನು ಮಾಡಬೇಕಣ್ಣ  ನಾನೀಗ ಜ್ಞಾನ

ದಡುಗೆಯನು ಮಾಡಬೇಕಣ್ಣ

ಎಂಬ ಕನಕದಾಸರ ರಚನೆಗಳು ನಮಗೆ ಒಂದು ಕಾಲದ ಚಿಂತನೆ ಕನಕರನ್ನು ಭಕ್ತಿಪಂಥದಲ್ಲಿ ಗುರುತಿಸಿದರೂ ಅವರ ಎಲ್ಲಾ ಅಲೋಚನೆಗಳು ಲೌಕಿಕವಾಗಿ ಮನುಷ್ಯ ನಿರ್ಮಿಸಿಕೊಂಡಿರುವ ಬೇಲಿಗಳನ್ನು ಮೀರುವ ಉದ್ದೇಶವನ್ನು ಹೊಂದಿದ್ದವು ಎಂಬುದು ಸ್ಪಷ್ಟವಾಗುತ್ತದೆ. ಅವರ ಕಿರ್ತನೆಯ ಆಧಾರವಾಗಿರವ ಕೆಲವು ಸಂಗತಿಗಳನ್ನು ವಿಶ್ಲೇಷಿಸಿಕೊಳ್ಳುವ ಮೂಲಕ ಈ ನಿಲುವನ್ನು ನಾವು ಇನ್ನೂ ಗಟ್ಟಿಗೊಳಿಸಿಕೊಳ್ಳಬಹುದಾಗಿದೆ.

ಮುಂದುವರಿದು  ಡಾ.ನಿಂಗಣ್ಣ ಸಣ್ಣಕ್ಕಿ ಅವರು “ಜನಪದದ ಕಣ್ಣಲ್ಲಿ ಶ್ರೀ ಕನಕದಾಸರು” ಎಂಬ ಲೇಖನದಲ್ಲಿ ವಿಶ್ಲೇಷಿಸಿರುವಂತೆ ಕನಕದಾಸರನ್ನು ಕೇವಲ ಒಬ್ಬ ಸಂತರಾಗಿ, ಆಧ್ಯಾತ್ಮಿಕ ಚಿಂತಕನಾಗಿ ಗುರುತಿಸುವ ನೆಲೆ ಬಹಳ ಸಂಕುಚಿತವಾದದ್ದು. ಇದಕ್ಕೆ ಬದಲಾಗಿ ಕನಕರು ಇಂದು ಒಬ್ಬ ಅನುಭಾವಿಯಾಗಿ ನಮ್ಮ ಸಮಾಜದ ವಿವಿಧ ವರ್ಗಗಳು ತಮ್ಮ ಸಮುದಾಯದ ಕಲಾಪ್ರಕಾರಗಳ ಭಾಗವಾಗಿ ನಡೆಸುತ್ತಾ ಬಂದಿರುವ ಜನಾಂದೋಲನದ ಭಾಗವಾಗಿ ಗುರುತಿಸುವ ಜರೂರು ಇದೆ ಎಂಬುದನ್ನು ಸಾಮಾನ್ಯರ ಸಾಂಸ್ಕೃತಿಕ ಅಭಿವ್ಯಕ್ತಿಗಳಾದ ಡೊಳ್ಳಿನ ಪದಗಳಲಿ,  ತ್ರಿಪದಿಗಳಲ್ಲಿ,  ಹಂತಿಯ ಹಾಡಿನಲಿ,  ಏಕತಾರಿ ಹಾಡಿನಲ್ಲಿ,  ಗೀಗೀ ಮತ್ತು ಸುಖೀ ಪದಗಳಲಿ,  ಸಂಪ್ರದಾಯದ ಆಚರಣೆಗಳಲಿ, ಗಾದೆಗಳಲ್ಲಿ ಕನಕರನ್ನು ಜನ ತಮ್ಮವನಾಗಿಸಿಕೊಂಡಿರುವ ಕ್ರಮವನ್ನು ಉದಾಹರಿಸಿ ಸಮರ್ಥಿಸಿದ್ದಾರೆ.

kanakadasaಇಂದಿಗೂ ಕನ್ನಡದ ತಳ ಸಮುದಾಯದ ಜನ ಕನಕರನ್ನು ತಮ್ಮ ಅನುಭಾವಿಕ ಬದುಕಿನ ಭಾಗವಾಗಿ ಸಾಂಸ್ಕೃತಿಕ ನಾಯಕನಾಗಿ ಹಾಡುಗಳಲ್ಲಿ, ಗಾದೆಗಳಲ್ಲಿ ,ಲಾವಣೆಗಳಲ್ಲಿ  ಬೆಳೆಸುತ್ತಾ ಬಂದಿರುವುದು ಕನಕ ಕೇವಲ ಅಧ್ಯಾತ್ಮಿಕ ಸಂತನಲ್ಲ ಬದಲಾಗಿ ಅನುಭಾವಿಕ ಚಿಂತಕ ಎಂಬ ವಿಷಯವನ್ನು ಮನದಟ್ಟು ಮಾಡುತ್ತದೆ. ಇಷ್ಟೆಲ್ಲಾ ಇದ್ದರೂ ಕನಕರನ್ನು ಇಂದಿಗೂ ನಮ್ಮ ಬೌದ್ದಿಕ ವರ್ಗ ಕೇವಲ ದಾಸ ಸಾಹಿತ್ಯ ಪ್ರಕಾರದೊಂದಿಗೆ ಹೆಚ್ಚು ಏಕೆ ಗುರುತಿಸುತ್ತದೆ? ಎಂಬ ಪ್ರಶ್ನೆಗಳನ್ನು ಆಧರಿಸಿ ಯೋಚಿಸಿದರೆ ಕನಕದಾಸರ ಚಿಂತನೆಗಳ ಸಾರ ನಮಗೆ ಎರಡು ರೀತಿಯಲ್ಲಿ ಧಕ್ಕಿದೆ, ಒಂದು ಅಧ್ಯಾತ್ಮಿಕ ಚಾಕಟ್ಟುಗಳ ಹಿನ್ನಲೆಯಲ್ಲಿ, ದಾಸ ಸಾಹಿತ್ಯದ ಭಾಗವಾಗಿ. ಮತ್ತೊಂದು ಆಧುನಿಕ ಚಿಂತನೆಗಳನ್ನು, ಜೀವನಕ್ರಮಗಳನ್ನು ವಿಮರ್ಶಿಸುವ ರೀತಿಯಲ್ಲಿ. ಈ ಎರಡು ನೆಲೆಗಳು ತಮ್ಮದೆ ಆದ ರಾಜಕಾರಣ ಹೊಂದಿವೆ. ಮೊದಲನೆಯದು ಒಂದು ನಿರ್ಧಿಷ್ಟ ಸಂಪ್ರದಾಯವನ್ನು ಸಮರ್ಥಿಸುವ ಒತ್ತಡಕ್ಕೆ ಸಿಲುಕಿದ್ದರೆ, ಎರಡನೆಯದು ಆಧುನಿಕ ಪರಿಕಲ್ಪನೆಗಳಾದ ಪ್ರಜಾಪ್ರಭುತ್ವ, ಉದಾರವಾದಿ ನೀತಿಗಳು ನಮ್ಮಲ್ಲೂ ಇದ್ದವು ಎಂಬ ಸಮರ್ಥನೆಯ ಭಾಗವಾಗಿ ಮಂಡಿಸಲ್ಪಟ್ಟಿವೆ!

ಈ ನೆಲೆಯಲ್ಲಿ ನಾವು ಮೊದಲು ಮಾಡಬಹುದಾದ ಕೆಲಸ ಈಗಾಗಲೇ ಸಂಸ್ಕೃತ ಮತ್ತು ಪಶ್ಚಿಮದ ಚೌಕಟ್ಟುಗಳಲ್ಲಿ ಸಿಕ್ಕಿಕೊಂಡಿರುವ ಕನಕರ ಚಿಂತನೆಗಳನ್ನು ಮುಕ್ತಗೊಳಿಸಿ ಅವರು ರೂಪಿಸಿದ ಸ್ವತಂತ್ರ್ಯ ಚಿಂತನಾಧಾರೆಯನ್ನು ಗುರುತಿಸುವ/ಓದುವ ಮಾದರಿಗಳನ್ನು ಕಟ್ಟಿಕೊಳ್ಳುವುದು ಆಗಬೇಕಿದೆ. ಆಗ ೧೬ನೇ ಶತಮಾನದ ಕನಸದಾರನ್ನು ಇಂದು ಹೇಗೆ ಓದಬೇಕು ಎಂಬ ಪ್ರಶ್ನೆಗೆ ಉತ್ತರ ಧಕ್ಕಬಹದು. ಜೊತೆಗೆ ಮಾರುಕಟ್ಟೆ ಮತ್ತು ಧಾರ್ಮಿಕರ ಮೂಲಭೂತವಾದಗಳಿಂದ ಆಳಲ್ಪಡುತ್ತಿರುವ  ೨೧ನೇ ಶತಮಾನದ ಜನ ಸಮುದಾಯಕ್ಕೆ “ಆತ್ಮ ಯಾವ ಕುಲ, ಜೀವ ಯಾವ ಕುಲ, ತತ್ವೇಂದ್ರಿಗಳ ಕುಲ ಪೇಳಿರಯ್ಯ”  ಎಂಬ ಕನಕ ವಾಣಿಯನ್ನು ಸಮರ್ಥವಾಗಿ ಅನ್ವಯಿಸಿ ವಿವರಿಸಲು ಸಾಧ್ಯವಾಗಬಹದು ಈ ದಾರಿ ಆಯ್ದುಕೊಳ್ಳುವ ಮೂಲಕ ಈ ಬಾರಿಯ ಕನಕ ಜಯಂತಿಯನ್ನು ಅರ್ಥಪೂರ್ಣಗೊಳಿಸಬಹದು ಎನ್ನಿಸುತ್ತಿದೆ.

Add Comment

Leave a Reply