Quantcast

ನಿಲಿಂ ಎಂಬ ಅಸ್ಸಾಮಿನ ವಸಂತ

ನಿಲಿಂ ಅಸ್ಸಾಮಿನ ವಸಂತ. ಆತನ ಕಾವ್ಯದಲ್ಲಿ ಅಲ್ಲಿನ ಹಸಿರಿದೆ, ತಂಗಾಳಿಯಿದೆ.. ಹಾಗೆಯೇ ವೇದನೆಯೂ.. ವೃತ್ತಿಯಿಂದ ವೈದ್ಯರಾದ ನಿಲಿಂ ಕವಿತೆಯ ಬೆನ್ನೇರಿ ಹೊರಟಿದ್ದಾರೆ.

ಎಚ್ ಎನ್ ಆರತಿ ಅಸ್ಸಾಮಿ ಪಲುಕುಗಳನ್ನು ಕನ್ನಡಕ್ಕೆ ಬಡಿಸಿದ್ದಾರೆ 

fill-in2

ಕವಿ – ನಿಲಿಂ

h-n-arathi

ಭಾವಾನುವಾದ – ಆರತಿ.ಎಚ್.ಎನ್.

ಖಾಲಿ ಮನೆ!

ಬೀಗ ಜಡಿದು, ಮನೆಯವರೆಲ್ಲಾ
ಹೊರಟ ಮೇಲೆ
ಖಾಲಿ ಮನೆ ಅಳುತ್ತಾ, ಕಣ್ಣೀರಾಗುತ್ತದೆ.

ಚಿಕ್ಕ ಕುಟುಂಬ
ಕಡಿಮೆ ಜನರಿರುವ ಮನೆ.

empty-houseಮನೆಯೊಳಗೆ ಇರುವುದಕ್ಕಿಂತಾ
ಈ ಮಂದಿ, ಹೆಚ್ಚಾಗಿ
ಮನೆ ಹೊರಗೇ ಇರುತ್ತಾರೆ.

ನಗು, ಅಳು, ಹೆಜ್ಜೆ ಸಪ್ಪಳ
ನಿಶ್ಯಬ್ದ, ಪ್ರೀತಿಯ ತೀವ್ರತೆ
ಮಿಲನದ ಸಂಗೀತ…ಹೀಗೆ
ನಿಲ್ಲದ ದೈನಂದಿನ ವಹಿವಾಟಿಗೆ ಕಾಯುತ್ತಾ
ಮನೆ, ತನ್ನ ಪುಟ್ಟ ತೋಳುಗಳನ್ನು
ಚಾಚಿ, ಹಂಬಲಿಸುತ್ತದೆ!

ಇದಕ್ಕೋಸ್ಕರ ತಾನೇ
ಜನ ಮನೆ ಕಟ್ಟಿಸುವುದು?
ಖಾಸಗಿತನ ಕಾಪಾಡುತ್ತಾ
ಗೋಡೆ ಪದರಗಳಲ್ಲಿಡುತ್ತಾರೇನೋ?
ತನ್ನ ಪುಟ್ಟ ಮಿದುಳಲ್ಲಿ ಹೀಗೆಲ್ಲಾ
ಚಿಂತಿಸುತ್ತೆ, ಖಾಲಿಮನೆ!

ಮನೆ ಯೋಚಿಸುವ ಹಾಗೆ ಇರಲು
ನನ್ನ ಅನ್ಯಮನಸ್ಕ ಆಕಾಶದಿಂದ
ಮಳೆ ಸುರಿಸುವುದಕ್ಕಾಗುವುದಿಲ್ಲವಲ್ಲ!?

ಒಂದು ದಿನ ಹೀಗೆ
ಸಿದ್ಧನಾಗಿ ಹೊರಟು
ಬೀಗ ಹಾಕುವಾಗ, ಮನೆ
ನಿನ್ನ ಜೊತೆ ನಾನೂ
ಬರುತ್ತೇನೆಂದು
ಹೊರಟು ನಿಂತಿತು!

ಜೊತೆಗೆ ನನ್ನೂ
ಕರೆದುಕೊಂಡು ಹೋಗು ಪ್ಲೀಸ್,
ನನಗೆ ನಿನ್ನ ಬಿಟ್ಟಿರಲಾಗುವುದಿಲ್ಲ – ಅಂತು.

ಒಂದು ಖಾಲಿತನ
ನನ್ನನ್ನು ಯಾವಾಗಲೂ
ಹಿಂಬಾಲಿಸುವುದು ನಿಮಗೆ ಕಾಣುತ್ತಿಲ್ಲವೇ?

ಖಾಲಿ ಮನೆಯೊಂದು
ನನ್ನೊಳಗೆ ಬಂದದ್ದನ್ನು
ನೀವ್ಯಾರೂ ನೋಡಲೇ ಇಲ್ಲವೇ?!
ಮನುಷ್ಯ ಮತ್ತು ಪೆನ್ನು

ಪದೇ ಪದೇ, ಕಚ್ಚೀ ಕಚ್ಚೀ
ಆ ಮನುಷ್ಯ
ಪೆನ್ನು ತಿಂದುಹಾಕಿದ.
ನಂತರ,
pen-sketch-artನೋವುನಿವಾರಕ ಮಾತ್ರೆ
ನುಂಗುವವನಂತೆ,
ಒಂದು ಲೋಟ
ನೀರು ಕುಡಿದ.
ಮತ್ತೆ, ಚೇತರಿಕೆ ಪಡೆದವನಂತೆ
ಕೂತು, ಓದಲು
ಪೇಪರ್ ಹರಡಿದ.

ಅದಾದ ಮೇಲೆ
ಪೆನ್ ಬಗ್ಗೆ ಯೋಚಿಸಿದ.
ಧೀರ್ಘಕಾಲ ಚಿಂತಿಸಿ, ತಿಣುಕಿ,
ಇನ್ನೊಂದು ಪೆನ್ ಹುಟ್ಟಿಸಿದ.
ಇನ್ನು ಮುಂದೆ ಎಲ್ಲಾ ಸರಿ ಹೋದರೆ,
ಇನ್ಯಾವತ್ತೂ ಮತ್ತೆ ಪೆನ್
ತಿನ್ನುವುದಿಲ್ಲ ಅಂತ
ನಿರ್ಧರಿಸಿದ!

ಲೈಬ್ರರಿಯಲ್ಲಿ

ಲೈಬ್ರರಿಯಲ್ಲೊಂದು ಸಂಜೆ ಸತ್ತು ಬಿದ್ದಿದೆ
ನಿನ್ನೆ ನನ್ನಿಂದ
ಮೃತನಕ್ಷತ್ರಗಳ ಹಾದರದ ಗುಡ್ಡಗಳಿಂದ
ಒಂದು ಹನಿ ರಕ್ತ ಬೇಡಿದ್ದ
12342642_632396100233133_6565092078141029105_nಅದೇ ಆ ಸಂಜೆ.
ಅದುವರೆಗೂ ನನಗೂ ಗೊತ್ತಿರಲಿಲ್ಲ,
ನನ್ನ ರಕ್ತದ ರಹಸ್ಯ,
ಆ ಗುಡ್ಡ ಮತ್ತು ಆ ಸಾಯಂಕಾಲ.

ಇವತ್ತು ಈ ಪುಸ್ತಕಗಳ ನಡುವೆ
ಸಂಜೆ ಸತ್ತು ಮಲಗಿದೆ.
ಇಂಥ ಸಂಜೆಯಡಿಯಲ್ಲಿ
ಇಷ್ಟೂ ದಿನ
ಆ ಗುಡ್ಡ ಮತ್ತು ಆ ಸಾವು
ನನ್ನೊಳಗಿನ ಪ್ರಜ್ಞೆಯಲ್ಲಿ
ಹಾಗೆ, ಒಂದೇ ಘಳಿಗೆ
ಜೀವ ಪಡೆದ ಹಾಗಿದೆ!

ನೈಲ್ ಪಾಲಿಷ್

ಸತ್ತು ಶವವಾಗಿದ್ದಾಳೆ
ರಾಧೆ.
ತಣ್ಣಗೆ ಕೊರೆಯುವ
ಉಗುರುಗಳಿಗೆ ನಾನು
ಕಡುಗೆಂಪು ಬಣ್ಣದ
ನೈಲ್ ಪಾಲಿಷ್ ಹಚ್ಚುತ್ತೇನೆ!

 

One Response

  1. Anonymous
    November 17, 2016

Add Comment

Leave a Reply