Quantcast

ನಿಸರ್ಗ ಗೋವು- ನಗರ ಹುಲಿ

dr-rajegowda-hosahalli

ಡಾ ರಾಜೇಗೌಡ ಹೊಸಹಳ್ಳಿ

ನಿಸರ್ಗ ಗೋವು. ನಗರ ಹುಲಿ. ಹುಲಿಯೀಗ ಹಸಿವಿಗಾಗಿ ಹುಲ್ಲು ತಿನ್ನುವ ಪ್ರಾಣಿಯೊಂದನ್ನು ತಿನ್ನುತ್ತಿಲ್ಲ. ನೆಲದಾಳದ ಕಬ್ಬಿಣ ಕಲ್ಲಿದ್ದಲು ತೈಲ ಸಕಲಾದಿ ನಿಸರ್ಗ ಸಂಪತ್ತನ್ನೆಲ್ಲಾ ಅಗಿದುಗಿದು ಅಜೀರ್ಣದಿಂದ ನರಳುತ್ತಿದೆ.

ಅದಕ್ಕೀಗ ಹೊಟ್ಟೆ ಭಾದೆ. ಯಾವ ಪ್ರಾಣಿ ವೈದ್ಯನಾಗಲೀ ದಯಾಮರಣ ನೀಡುವ ನ್ಯಾಯದ ತಕ್ಕಡಿಯಾಗಲೀ ಸಿಂಹಾಸನಾಧೀಶರ ಆಜ್ಞೆಗಳಾಗಲೀ ಅದರ ವೃಣದ ತೂತುಗಳನ್ನು ಮುಚ್ಚಲಾಗುತ್ತಿಲ್ಲ. ಅದೀಗ ಅತ್ತ ಸಾಯುತ್ತಲೂ ಇಲ್ಲ. ಇತ್ತ ಬದುಕುತ್ತಲೂ ಇಲ್ಲ! ಆದರೂ ಮಲಗಿದ್ದಲ್ಲೆ ಗುಟುರಿಕೆ ಹಾಕುತ್ತಿದೆ.

punyakoti (1)ಅದೀಗ ಬೆಂಗಳೂರು ನಗರದ ಹತ್ತಿರದ ಮಂಚನಬೆಲೆ ಮಡುವಿನ ಬಳಿ ಕಾಲು ಮುರಿದುಕೊಂಡು ಮರಣ ಬೇಡುತ್ತಿರುವ ಸಿದ್ಧನೆಂಬ ಆನೆ ರೂಪಕ.

ಮಂಜು ನಿಸರ್ಗದ ಹನಿ. ಬಣ್ಣಬಣ್ಣದ ಸಗ್ಗದ ಹೂ ಮಕರಂದವನ್ನು ಹನಿಯಾಗಿಸಿದ ಬನಿಯಾಗಿಸುವ ಸಿಹಿ ಉಸಿರು. ರವಿಕಿರಣಗಳನ್ನು ಮುತ್ತುರತ್ನವಾಗಿಸುವ ನಿಸರ್ಗದ ನಗೆಹನಿ. ಮಂಜುಹನಿ ನೀರಹನಿಯಾಗಿ ರವಿಗೂ ಮುಗಿಲಿಗೂ ಕಿರಣದ ನಂಟಿನದು. ಅದರ ಸ್ಥಾನವನ್ನು ಇಂದು ನಗರವು ಕಸಿದುಕೊಂಡಿದೆ. ಹೊಂಜು ಈ ನಂಟು ಕತ್ತರಿಸಿ ಬಾವು ಬೆಳೆಸುವ ನಿಸರ್ಗದ ರಕ್ತಹೀರಿ ಬರಡಾಗಿಸುವ ರಕ್ಕಸ ಮಾದರಿ.

ದಿಲ್ಲಿಯ ಹೊಂಜು ತೇವರಹಿತ ನೆಲ ಮುಗಿಲಿನ ಧೂಮಮಂಜು. ಹಾಗಾಗಿ ದಿಲ್ಲಿಯಲ್ಲಿ ಶಾಲಾಮಕ್ಕಳು ಅಕಾಲ ಮುಪ್ಪಿಗೊಳಗಾದಂತೆ ಸಂನ್ಯಾಸಿ ಬಟ್ಟೆ ಬಾಯಿಗೆ ಕಟ್ಟಿಕೊಂಡಂತೆ ಓಡಾಡುತ್ತಿವೆ. ಇಡೀ ನಗರ ಉಬ್ಬಸ ರೋಗಕ್ಕೆ ತುತ್ತಾಗಿದೆ. ಈ ದೇಶದ ಹೃದಯ ಭಾಗಕ್ಕೆ ತಟ್ಟಿರುವ ರೋಗವಿದು.

ಬೆಂಗಳೂರು ???? ಇತರೆ ನಗರಗಳು ಇದಕ್ಕಿಂತ ಹೊರತೇನೂ ಅಲ್ಲ. ರಾಜ್ಯಕ್ಕೆ ಈಗ ಬರ ಬಂದಿದೆ. ಗೋವು ತಿನ್ನಲು ಹುಲ್ಲಿಲ್ಲ. ಕುಡಿಯಲು ನೀರಿಲ್ಲ. ಆದರೆ ಗೋವು ತಿನ್ನುವ ಭತ್ತ ಗೋಧಿ ಹುಲ್ಲು 32 ಮಿಲಿಯನ್ ಟನ್ನಷ್ಟು ಹರಿಯಾಣ ಪಂಜಾಬು ರೈತರು ಗದ್ದೆಯಲ್ಲಿ ಸುಡುತ್ತಾರಂತೆ. ಅದು ದಿಲ್ಲಿಗೂ ಹರಡುತ್ತಾ ಹೋಗುವ ಹೊಗೆಯಂತೆ. ಇದರೊಂದಿಗೆ ಉಬ್ಬಸಪಡುವ ವಾಹನದ ಹೊಂಜು ಉಗುಳುವ ಕೈಗಾರಿಕಾ ಹೊಂಜು ಹೀಗೆ ಪಾರ್ಲಿಮೆಂಟ್ ಭವನವೇ ಕಾಣದಂತೆ ಮಮ್ತಾಜಳ ಪ್ರೀತಿಯ ಭವನವೇ ಕಾಣದಷ್ಟು ಧೂಮ ನಗರ ಪ್ರತಾಪವೇ ದಿಲ್ಲಿ.

ಅದೀಗ ಜ್ಞಾನತಪ್ಪಿ ಬಿದ್ದಿರುವ ನಗರ ಉಗ್ರ ಪ್ರತಾಪಿ. ನೀರು ಚಿಮುಕಿಸಿ ಬಾಯಿಗೆ ನೀರು ಕುಡಿಸಿ ಎಬ್ಬಿಸೋಣವೆಂದರೆ ಗಂಗೆ ಯಮನೆಯರು ಬಾಯಿಗೆ ನೀರು ಬಿಡದಷ್ಟು ಕೊಳಕಿಯರು. ಈ ರೀತಿ ಜಗತ್ತಿನ ಕಲ್ಲುಮುಳ್ಳು ಹಾದಿಯ ನಿವಾರಣೆಗಿಂದು ಹಿರೀಕರು ನಿಂತಿದ್ದಾರೆ. ಮಾಡಿದ ಕರ್ಮ ತೊಳೆಯಲು ಹೊರಟಿದ್ದಾರೆ. ಅದು ಸರಾಸರಿ ತಾಪಮಾನ 16 ಡಿಗ್ರಿಗಿಂತ ಎರಡೇ ಡಿಗ್ರಿ ಹೆಚ್ಚಾದರೆ ಪ್ರಳಯವೋ ಮತ್ತೇನೋ ಆಗುವ ಭಯದ್ದು.

CAMPA (Compansatory Afforestation Management of Planning Authority) ಎಂಬ ವಿಶ್ವ ಕಾಯಿದೆ ಮಾಡಿಕೊಂಡು ಲಕ್ಷಾಂತರ ಕೋಟಿ ಅದು ಬಂಡವಾಳ ಹಾಕಿಕೊಂಡು ಮನುಷ್ಯ ತಿಂದುಗಿದಿರುವ ಅಡವಿ ಗೋರಾಂಧ ಗಟಾರಗಳನ್ನೆಲ್ಲ ನಿಸರ್ಗ ದುಡುಗೆಯಾಗಿ ಉಡಿಸುವ ಕಾಯಕ.

ಉಪನಿಷತ್ತು ‘ಸಭೀ ಭೂಮಿಗೋಪಾಲಕೆ’ ಎನ್ನುತ್ತದೆ. ನೆಲಕ್ಕೆ ಕಣ್ಣುಗಳಿವೆ. ಅದಕ್ಕೆ ಮಂಜ ಹನಿ ಹೀರುವ ಸೂಕ್ಷ್ಮ ರಂಧ್ರಗಳಿರುತ್ತವೆ. ರವಿಕಿರಣ ಆಹ್ವಾನಿಸುವ ಬಣ್ಣದ ಕೋಲುಗಳಿರುತ್ತವೆ. ಅದೇ ನಿಸರ್ಗದ ಅನುಬಂಧ. ನೆಲಜಲ ಜೀವ ಜಾಲದ ಪ್ರತಿಕನ್ನಡಿ. ಅದರ ಮೇಲೆ ಹೊಂಜಿನ ಅನಾಚಾರವೇ ಜೀವ ಜಾಲಗಳ ಮೇಲಿನ ಅತ್ಯಾಚಾರ, ನಗರೀಕರಣವು ನೆಲದ ಕಣ್ಣ ತುಳಿವ ಅಜ್ಞಾನದ ಆಧುನಿಕತೆ. ‘ಯಾರೊಬ್ಬರೂ ನಿಸರ್ಗದ ವಾರಸುದಾರರಲ್ಲ; ಹಾಗೂ ನಿಸರ್ಗವು ಭೂಮಿಯಷ್ಟೆ ಬೆಲೆ ಬಾಳುವ ಜಮೀನು’ ಎಂದು ಇದನ್ನೆ ಗಾಂಧಿ ಅರ್ಥೈಸಿ ಹೇಳಿದ್ದರೂ, ಯಾರೂ ಕೇಳಿಸಿಕೊಳ್ಳಲಿಲ್ಲ. ಅದೇ ಈಗ ದಿಲ್ಲಿಗೆ ಹೊಂಜು ಕವಿದ ಕುಕಥನ. ದಿಲ್ಲಿ ಎಂಬ ರಾಣಿ ಈಗ ಕುರುಡಿಯಾಗುವ ಮೂಕಿಯಾಗುವ ಕಿವುಡಾಗುವ ಅಕಾಲ ಮೃತ್ಯು ದಾರಿ ಹಿಡಿದಿರುವ ಭಾರತದ ಸಿಂಹಾಸನಾಧೀಶ್ವರಿ.

ಗ್ರಾಮ ಭಾರತವೂ ಇದೇ ದಾರಿಯಲ್ಲಿ ಸಾಗುತ್ತಿದೆ. ಅಂತೆ ನಮ್ಮಲ್ಲಿನ ಹಿಮಾಲಯ-ಸುಂದರಬನ್-ಸಹ್ಯಾದ್ರಿ ಇವೆಲ್ಲವೂ ಹೊಂಜಿನ ಕಡೆ ಸಾಗುತ್ತಿವೆ. ಮಂಜರಾಬಾದ್ ಎಂಬುದು ಸಹ್ಯಾದ್ರಿ ಶ್ರೇಣಿಯ ನಮ್ಮ ರಾಜ್ಯದ ಒಂದು ತಾಣ. ಅಲ್ಲೀಗ ಮಂಜು ಬೆಳಗ್ಗೆಯೇ ಕಿರಿದಾಗಿ ನಿಸರ್ಗವು ನಗರದ ಮನುಷ್ಯನಿಗೆ ಎದ್ದು ಕಾಣುತ್ತಿದೆಯೆಂದರೆ ಅದು ಅವಸಾನದ ಮಾರ್ಗ. ಅಲ್ಲೀಗ ಆನೆಗಳಿಗೂ ಮನುಷ್ಯರಿಗೂ ಹೊಟ್ಟೆಗಾಗಿ ಸಮರ.

ಒಂದು ಹಲಸಿನ ಕಾಯಿ ಮರದಲ್ಲಿ ಕಂಡರೆ ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಆನೆ ಮರ ಎಳೆದು ಬೀಳಿಸುತ್ತದೆ. ಮನುಷ್ಯನ ಹಿತ್ತಲಲ್ಲಿ ಬಂದು ಬಾಳೆಮರ ಬೆಳೆದಿದೆಯೇ ಎಂದು ಬಗ್ಗಿ ಹುಡುಕುತ್ತದೆ. ತೋಟಕ್ಕೆ ಹೋಗಿ ಬೈನೆ ಮರ ಸಿಗಿದು ತಿನ್ನಲು ಹುಡುಕುತ್ತದೆ. ಗಜ ಜಮೀನು ತುಳಿದರೆ ಲಕ್ಷ್ಮಿಯ ಹೆಜ್ಜೆ ಗುರುತೆಂದು ನಂಬಿದ್ದ ಹೊಂದಾಣಿಕೆ ಬದುಕಿತ್ತು. ಈಗ ಮನುಷ್ಯನು ತನ್ನುಳಿವು ಮುಖ್ಯವೆಂದು ಆನೆ ದೂರವಿಡಲು ಹಲಸಿನ ಮರಕ್ಕೆ ಖಂಡುಹಾಕಿ ಒಣಗಿಸುತ್ತಾನೆ. ಬಾಳೆ ಹಾಕುವುದು ಬಿಟ್ಟಿದ್ದಾನೆ. ಬೈನೆ ಕಡಿದು ಆನೆ ದೂರವಿಡಲು ನೋಡುತ್ತಾನೆ.

punyakoti2ಅಂತೆ ತಾನು ಮರದ ಮೇಲೆ ಕುಳಿತು ಮರದ ಬುಡ ಕಡಿಯುತ್ತಿದ್ದಾನೆ. ತನ್ನ ಹೊಟ್ಟೆಪಾಡಿನ ಗದ್ದೆ ಬೆಳೆಗೆ ಹಾತೊರೆಯುತ್ತಾನೆ. ತನಗೂ ಹೊಟ್ಟೆ ಪಾಡೆಂದು ಆನೆ ಬಂದು ನಿಂತು ಹಸು ಮೇಯುವಂತೆ ಗದ್ದೆಯನ್ನು ಬಡಿಚಿ ಬಾಚಿ ತಿನ್ನುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ಆನೆಗಳು ನಿನಗಿಂತ ನಾವೇನು ಕಡಿಮೆಯೆಂದು ಎರಡು ಪಟ್ಟು ಸಂತಾನ ವೃದ್ಧಿಸಿವೆ. ಇದು ಮೂಕ ಜಗತ್ತಿಗೂ ಬಾಯಿ ಕಂಡ ಮನುಷ್ಯನಿಗೂ ಸಮರ. ಮಂಜು ನಾಶಮಾಡಿ ಹೊಂಜು ಆಮದು ಮಾಡಿಕೊಂಡ ಜಾಗತಿಕ ಸಮರ.

ಅಕ್ಷರ ಮಿದುಳಿಗೆ ಅಕ್ಕರೆ ತುಂಬವ ಮೊರವಾಗಬೇಕಿತ್ತು. ಸಡಗರದ ಮದುವೆಯೋ ನಾಮಕರಣವೋ ಈ ಸಡಗರದ ಮೌಢ್ಯಕ್ಕೆ ರೈತನ ಗುಂಟೆ-ಎಕರೆ ಜಮೀನು ಅದಲು ಬದಲಾಗುತ್ತಿವೆ. ರೈತ ಆಡಂಬರಕ್ಕೆ ಅನ್ನ ನೀಡುವ ಭೂಮಿ ಮಾರುವುದು ಅವಮಾನವೆಂದು ತಿಳಿದಿದ್ದ. ನಗರೀಕರಣಕ್ಕೆ ಭೂಮಿ ಈಗೊಂದು ಗರಿಗರಿ ನೋಟು ತರುವ ಕೇವಲ ವಸ್ತು. ಅದು ಮೈತುಂಬಾ ದಿರಿಸು ಏರಿಸುತ್ತಾ ಚಿನ್ನದ ಸಂಕೋಲೆಗಳನ್ನು ಕತ್ತಿಗೆ ಕೈಗೆ ಕಾಲಿಗೆಲ್ಲ ತೊಡಿಸುತ್ತಿದೆ. ಅದನ್ನೆ ನಾಗರೀಕತೆ ಎಂದು ಭ್ರಮಿಸುತ್ತದೆ.

ದೇಶವೀಗ ಅಭಿವೃದ್ಧಿ ಎಂಬ ಮಂತ್ರ ಘೋಷಣೆಗಳಲ್ಲಿ ಬಂಗಾರ ಬಗೆವ, ಉಕ್ಕಿನ ದಾರಿ ಮಾಡುವ ಯುದ್ಧ ನೌಕೆಗಳನ್ನು ಕಟ್ಟುವ ಆಕಾಶ ಯಾನದ ಬುಟ್ಟಿಗಳನ್ನು ನೇತಾಡಿಸುವ ವಿಜ್ಞಾನವಾಗಿ ಪೋಷಿಸುತ್ತಿದೆ. ಈ ಕಟ್ಟುವಿಕೆಯಲ್ಲಿ ಜಗತ್ತಿನ ಹಾಲಿ ದೊಡ್ಡ ಚುನಾವಣೆ ಕೂಡ ನಭಕ್ಕೆ ನಕ್ಷತ್ರವೆರಚುವಂತೆ ಹಣ ಎರಚುತ್ತಿದೆ. ಲೆನಿನ್-ಮಾವೋ-ಹಿಟ್ಲರ್-ನೆಪೋಲಿಯನ್ ಎಲ್ಲರನ್ನು ಅವರು ನರ ಸಂರಕ್ಷಕರಲ್ಲವೆಂದು ನಾವು ಮಾತ್ರ ಪ್ರಜಾ ಸಂರಕ್ಷಕರೆಂದು ಮತ ಚೀಟಿಗಳಲ್ಲಿ ಟಸ್ಸೆ ಒತ್ತಿ ಅವನ್ನು ಟಿಸ್ಸೂ ಕಾಗದವಾಗಿಸಿದೆ.

ಅವೆಲ್ಲವೂ ಈಗಿನ ಹೊಂಜು ಬೀಜಗಳು. ಬಂಗಾರದ ಹಾಗೂ ಡಾಲರಿನ ನೋಟುಗಳ ಬೆಳೆಗಳಾಗಿ ಕಾಣುತ್ತಿವೆ. ಮನುಷ್ಯ ಬೃಹತ್ ಗಿರಣಿ, ಗಣಿಗಳ, ಮಾಲ್ಗಳ ಹೊಂಜಿನ ಧಣಿಯಾಗಿದ್ದಾನೆ. ಇದೊಂದು ರೀತಿಯ ಆರ್ಥಿಕ ಉಗ್ರರ ಮುಖವಾಡ.

hqdefault-1ಈ ಆಧುನಿಕತೆ ಎಂಬ ಉಗ್ರಬಿಲ್ಲುಬಾಣಗಳು ಈಗ ಮುಗಿಲಿಗೆ ತೂತು ಹಾಕಿವೆ. ಭೂಮಿಗೆ ಕನ್ನ ಹಾಕಿವೆ. ಓಜೋನ್ ತೂತು ಅಗಲ ಮಾಡಿ ನೆಲನೀರಿಗೆ ಉರಿ ಹೆಚ್ಚಿಸಿ ಸಮುದ್ರಕ್ಕೆ ಹಿಮವತ್ ಪರ್ವತಗಳನ್ನೆ ಮುಳುಗಿಸುತ್ತಿವೆ. ಗೌರಿಶಂಕರನ ಸಿಂಹಾಸನದಡಿ ಗ್ಲೇಸಿಯರ್ ಕರಗುತ್ತಿವೆ. ನೇಪಾಳದಲ್ಲಿ 3000 ಸರೋವರಗಳು ಕಟ್ಟೆ ಒಡೆವ ಆತಂಕದಲ್ಲಿವೆಯಂತೆ. ಇದು ಮಹಾಮಳೆಗೆ ಕೆರೆ ಏರಿ ಒಡೆವ ಮಾದರಿ. ಸಾಗರಗಳು ಏರುತ್ತಿವೆ. ಪ್ರಳಯ ಕೂಗು ಹಾಕಿ ಕಾಯುತ್ತಿದೆ.

ಇದೀಗ ನೀರು-ನೆಲ-ನಿಸರ್ಗವನ್ನು ಸಭೀ ಗೋಪಾಲಕೆ ಆಗಿಸಲಾದೀತೆ!

ಫ್ರಾನ್ಸಿನ ಐಫೆಲ್ ಟವರಿನ ಮೇಲೆ ಕುಳಿತು ಜಗದೆಚ್ಚರಕ್ಕೆ ಹಾಕುತ್ತಿರುವ ವಿಶ್ವ ಪಂಚಾಯ್ತಿ ಕೂಗು. ಇದನ್ನು ಕೇಳಿಸಿಕೊಂಡ ನಾಗರೀಕತೆಯ ಹೆಜ್ಜೆ ಎತ್ತ ಎಂಬುದರ ಮೇಲೆ ಕಲಿಯುಗದ ಭವಿಷ್ಯ ನಿಂತಿದೆ. ಈಗಲೂ ಕಾಲ ಮೀರಿಲ್ಲ. ಪ್ರಕೃತಿಯನ್ನು ಅದರ ನ್ಯಾಯಕ್ಕೆ ಒಪ್ಪಿಸಿದರೆ ಪುನಃ ಜೀವಜಾಲವನ್ನು ಪೊರೆಯುವ ಶಕ್ತಿ ನಿಸರ್ಗಕ್ಕಿದೆ. ಅದೇ ಹೊಂಜು ನಿವಾರಣಾ ಸವಾಲು.

Add Comment

Leave a Reply