Quantcast

ಮೊಳ ಉದ್ದದ ನಂಗ್, ಅಂಗೈ ಅಗಲದ ಕೊಕ್ಕರ್..

Manjunath-Kamath

ಮಂಜುನಾಥ್ ಕಾಮತ್

ಯಾವ ಹೊಟೇಲು, ಅಂಗಡಿಗೆ ಹೋದರೂ ನಾವು ಆತ್ಮೀಯತೆಯನ್ನು ಬಯಸುವವರು. ಅದಕ್ಕೆಂದೇ ಉಡುಪಿಯ ಬಂಟ್ಸ್ ಹೊಟೇಲು ಮಧ್ಯಾಹ್ನದ ಊಟಕ್ಕೆ ಖಾಯಂ ಆಗಿತ್ತು.

ಸುಚಿತ್ ಹಾಗೂ ನನಗೆ ದೊಡ್ಡ ದೊಡ್ಡ ಮೀನುಗಳೇ ಬೇಕು. ಕೃಷ್ಣಣ್ಣ, ಅರುಣ್ ಸರ್, ಅವಿನಾಶ್ ಗೆಲ್ಲಾ ಇರೋದರಲ್ಲಿ ಸಣ್ಣದು. ಅದಕ್ಕೆ ನಾವು ಹೊಟೇಲ್ ಒಳಗೆ ಕಾಲಿಟ್ಟ ಕೂಡಲೇ ಗಲ್ಲೆಯಲ್ಲಿ ಕೂತ ಶೆಟ್ರು ” ಮಾಸ್ಟ್ರ್ ನಕುಲು ಬತ್ತೆರ್” ಎಂದೊಮ್ಮೆ ಸೂಚನೆ ಕೊಡ್ತಾರೆ. ಕೂತು ಆರ್ಡರ್ ಕೊಟ್ಟಮೇಲೆಯೂ ಅಷ್ಟೇ. ಸಪ್ಲಯರ್ ತಂಬಿ, ಒಳಗಿರುವವರಿಗೆ “ಮಾಸ್ಟ್ರೆನಕಲೆಗ್.. ಸ್ಪೆಷಲ್” 14908414_1236967743032286_1924506237462107851_nಎಂದೊಮ್ಮೆ ಕಿರುಚುತ್ತಾನೆ. ಅದಕ್ಕೆ ಹೂಂಗುಟ್ಟ ಮಾಲ್ ವಾಲ ಸಣ್ಣ ಕಿಂಡಿಯ ಮೂಲಕ ನಮ್ಮನ್ನೊಮ್ಮೆ ನೋಡಿ ಸ್ಮೈಲ್ ಮಾಡೋಕಿದೆ. 80ರ ದಶಕದ ಹೀರೋಗಳ ಮೀಸೆಯಂತೆ ಕಂಡುಬರುವ ಅವರನ್ನು ನೋಡಿ ನಾವೂ ನಗೋಕಿದೆ.

ನಿಜಕ್ಕೂ, ಬಂಟ್ಸ್ ಹೊಟೇಲನ್ನು ನಾವು ಅಷ್ಟೊಂದು ಹಚ್ಚಿಕೊಂಡದ್ದು ಆತ್ಮೀಯತೆಗಾಗಿ. ಸಲುಗೆ ಹೆಚ್ಚಾದಂತೆ ನಮಗಿಬ್ಬರಿಗೆ ಮೀನುಗಳು ದೊಡ್ಡದೇ ಬಂದವು. ಫಲವಾಗಿ ಈಗಾಗಲೇ ಊದಿಕೊಂಡಿರುವ ಸುಚಿತ್ ಉಸಿರು ಬಿಗಿಯತೊಡಗಿತು. ನನ್ನ ಹೊಟ್ಟೆ ಮುಂದೆ ಬಂತು.

ಮೊಳ ಉದ್ದದ ನಂಗ್, ಅಂಗೈ ಅಗಲದ ಕೊಕ್ಕರ್, ದೊಡ್ಡ ಮುರು, ಬಂಗುಡೆ. ಜೊತೆಗೆ ಒಂದೆರಡು ಕಬಾಬ್ ಪೀಸು. ಇಷ್ಟೆಲ್ಲಾ ತಿಂದಾಗ ನಾವು ಊದಿಕೊಳ್ಳದೇ ಇರುತ್ತೇವೆಯೇ. ರುಚಿ ತಿನ್ನುವಾಗ ಏನೂ ಅನ್ನಿಸುತ್ತಿರಲಿಲ್ಲ. ಈಗ ಬೇಜಾರು.

ಅದಕ್ಕೀಗ ಮಧ್ಯಾಹ್ನದ ದಾರಿಯನ್ನು ಬಲವಂತವಾಗಿ ಬದಲಾಯಿಸಿದ್ದೇವೆ. ಮಣಿಪಾಲದ ಗಂಜಿಯಂಗಡಿ‌. ಐದಾರು ಮರಗಳ ಅಡಿಯಲ್ಲಿ ಪ್ಲಾಸ್ಟಿಕ್ ಟೆಂಟು. ನಡುವೆ ಒಂದು ಗೂಡು. ದೊಡ್ಡ ದೊಡ್ಡ ಎರಡು ಗುರಿಕೆಗಳಲ್ಲಿ ಗಂಜಿ ಬೇಯಿಸುವ ಚಂದ ನೋಡಿಯೇ ಬೆರಗಾದೆವು. ಜೊತೆಗೊಂದು ನಗು ಕೊಟ್ಟ ಅದರ ಮಾಲಿಕ ಆ ಹೊಟೇಲನ್ನೂ ನಮ್ಮದಾಗಿಸಿ ಬಿಟ್ಟಿತು.

ಮಜ್ಜಿಗೆ ಮೆಣಸು ಟೇಬಲ್ ಮೇಲಿರುತ್ತದೆ. ಅದೆಷ್ಟು ಬೇಕಾದರೂ ತೆಗೀಬಹುದು. ಫುಲ್ ಪ್ಲೇಟ್ ಗಂಜಿ. ತಟ್ಟೆಯಲ್ಲಿ ಒಣಮೀನಿನ ಚಟ್ನಿ, ಉಪ್ಪಿನ ಕಾಯಿ, ಮತ್ತೆ ಯಾವುದಾದರೂ ಒಂದು ಪಲ್ಯ. ಸಸ್ಯಹಾರಿಗಳಿಗೆ ಬೇರೆ ಚಟ್ನಿಯೂ ಇರುತ್ತದೆ.

ನುಂಗೆಲ್ ಮೀನಿನ ಚಟ್ನಿ ತುಂಬಾ ರುಚಿ. ನನಗದು ತುಂಬಾ ಇಷ್ಟ. ಈ ಹೊಟೇಲಿನ ಮತ್ತೊಂದು ವಿಶೇಷವೆಂದರೆ ಗಂಜಿಯಾಗಲೀ, ಚಟ್ನಿ ಪಲ್ಯಗಳಾಗಲಿ ಅದೆಷ್ಟು ಸಲ ಬೇಕಾದರೂ ನಾವು ಕೇಳಬಹುದು‌ ಕೇಳ ಬೇಕೆಂದೇ ಇಲ್ಲ. ಬರೆದಾಗುತ್ತಿರುವ ತಟ್ಟೆ ಬಟ್ಟಲುಗಳನ್ನು ಕಂಡು ಅವರೇ ಬಾಲ್ದಿ ಹಿಡಿದು ಬರುತ್ತಾರೆ ಬೇಕಾದಷ್ಟು ಬಡಿಸುತ್ತಾರೆ‌. Extra ಹಣವಿಲ್ಲ. ಅಷ್ಟು ಊಟಕ್ಕೆ ರೂ. 25. ಮೊಸರು ಬೇಕಾದರೆ ಮತ್ತೆ ರೂ.3. ಹಣಕ್ಕಿಂತಲೂ ಅವರ ಮಾತು, ನಗು ನಮಗಿಷ್ಟ.

ಅದೇ, ಇತ್ತೀಚೆಗೆ ಕೃಷ್ಣ ಮಠದ ರಥಬೀದಿಯ ಸುತ್ತಲಿರುವ ಪ್ರಸಿದ್ಧ (!) ಹೊಟೇಲೊಂದರೊಳಗೆ ನುಗ್ಗಿದ್ದೆವು. ಹೆಸರು ನೋಡಿ ಹೋಗಿದ್ದು. ಮುಖದಲ್ಲಿ ನಗುವಿಲ್ಲ. ಮಾತಿನಲ್ಲಿ ಸ್ನೇಹವಿಲ್ಲ. ಅದಕ್ಕೂ ಮುಖ್ಯವಾಗಿ ರುಚಿಯಿದ್ದ ಒಂದೇ ಒಂದು ಪಲ್ಯವನ್ನು ಪುನಃ ಕೊಡ್ತೀರಾ ಎಂದು ಕೇಳಿದರೂ ಗಂಟುಮುಖದಲ್ಲೇ ಇಲ್ಲವೆಂಬ ಉತ್ತರ. ಹಣ ಕೊಡ್ತೇವೆ ಅಂದರೂ ಹೂಂ..ಹೂಂ…ಕನಕ ನಡೆ ಹಾಗೂ ಉಡುಪಿ ಚಲೋದವರು ಮಠದ ಊಟದ ಬಗ್ಗೆ ಚರ್ಚಿಸೋ ಮೊದಲು ಈ ಹೊಟೇಲಿನೊಳಗೆ ನುಗ್ಗಿ ಬಂದಿದ್ದರೆ ಚೆನ್ನಾಗಿತ್ತು ಅಂತ ಆ ಹೊತ್ತು ಅನ್ನಿಸಿತ್ತು. ಇನ್ನೆಂದಿಗೂ ಅಲ್ಲಿಗೆ ಬರಲೇ ಬಾರದೆಂಬ ಶಾಸನ ನಮ್ಮಲ್ಲಿ ಜಾರಿಯಾಯಿತು.

*****

14906915_1236967863032274_9113914614627706475_nಈಗ ವಿಷಯಕ್ಕೆ ಬರುತ್ತೇನೆ‌. ನನಗೆ ಟೀವಿಯಲ್ಲಿ ಕೆಲಸ ಮಾಡಬೇಕೆಂಬ ಆಸೆ ಅತಿಯಾಯಿತು. ಜಿ.ಎನ್.ಮೋಹನ್ ಸರ್ ಬಳಿ ಕೇಳಿಕೊಂಡೆ. ಅದಕ್ಕವರು ವ್ಯವಸ್ಥೆಯನ್ನೂ ಮಾಡಿದ್ದರು. ಒಳ್ಳೆಯ ಚ್ಯಾನೆಲ್ಲಿನಲ್ಲಿ, ಒಳ್ಳೆಯ ಅವಕಾಶವನ್ನೇ ನನ್ನ ಮುಂದಿಟ್ಟಿದ್ದರು. ಕಾರಣಾಂತರದಿಂದ ನಾನೇ ಮತ್ತೆ ಹಿಂದೆ ಸರಿದೆ. ಈ ಸಲಕ್ಕೆ ಕರಾವಳಿಯಲ್ಲೇ, ಉಪನ್ಯಾಸಕನಾಗಿ ಉಳಿದುಕೊಳ್ಳುವ ನಿರ್ಧಾರ ಮಾಡಿದೆ.

ನನ್ನಾಸೆಯನ್ನು Gn Mohan ಸರ್ ಬಳಿ ಹೇಳಿಕೊಳ್ಳುವಾಗ ಅವರು ಹೇಳಿದ ಮಾತೊಂದನ್ನು ಕೇಳಿ ಗಮ್ಮತ್ತಾಯ್ತು. ಯಾವತ್ತಿಗೂ ನೆನಪಲ್ಲಿ ಉಳಿಯುವಂತದ್ದು.

” ಟೀವೀಲಿ ಕೆಲಸ ಮಾಡಬೇಕೆಂದಿದ್ದರೆ ನೀವು ಬೆಂಗಳೂರಿಗೆ ಬರಬೇಕು. ಬನ್ನಿ. ಮತ್ತೆ ಊರಲ್ಲಿ ಸ್ವಲ್ಪ ಕಷ್ಟವೇ. ಉಡುಪಿ ಅಂದ್ರೆ ಅದೊಂದು ಹಳ್ಳಿ‌. ಇನ್ನು ಮಣಿಪಾಲ ಅನ್ನೋದು ಒಂದು ಚಂದದ ಮೆಡಿಕಲ್ ಸ್ಟೋರು. ಬೆಂಗಳೂರಿಗೆ ಬಂದು ಬಿಡಿ” ಅಂದಿದ್ದರು.

ಮಣಿಪಾಲವನ್ನು ” ಚಂದದ ಮೆಡಿಕಲ್ ಸ್ಟೋರ್” ಎಂದಿದ್ದು ಕೇಳಿ ನಗು ತಡೆಯಲಾಗಲಿಲ್ಲ‌. ಅವರು ಹೇಳಿದ್ದು ಸತ್ಯ ಕೂಡಾ. ಅದನ್ನು ಎಷ್ಟು ಮಂದಿಯ ಬಳಿ ಹೇಳಿದ್ದೆನೆಂದಿಲ್ಲ. ಆದರೂ ನಾನು ಈ ಊರಲ್ಲೇ ಉಳಿದಿರುವಾಗ ಮಣಿಪಾಲವನ್ನೊಮ್ಮೆ ಅರ್ಥ ಮಾಡಿಕೊಳ್ಳಬೇಕೆಂಬ ಆಸೆ.

ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ಕಚೇರಿ ಬಳಿ ಇರೋ ಗಂಜಿ ಊಟದ ಹೊಟೇಲಿನ ನೆಪದಲ್ಲಿ ಅದೀಗ ಸಾಧ್ಯವಾಗುತ್ತಿದೆ. ಕಂಡದ್ದೆಲ್ಲವನ್ನೂ ಹಾಗೇ ಇಲ್ಲಿ ಹಂಚಿಕೊಳ್ಳುತ್ತೇನೆ. ಮಿನಿ ವಿಶ್ವವೆಂದೇ ಕರೆಯಲಾಗುವ ಮಣಿಪಾಲದಲ್ಲಿ ಶಿಕ್ಷಣ, ಸಾಧನೆ, ತಮಾಷೆ, ಹುಚ್ಚು, ಪ್ರೇಮ, ಕಾಮ, ಅಮಲು, ಸೇಡು, ಕೆಡುಕಿನ ನಡುವೆಯೂ ಜೀವನ ಪ್ರೀತಿಯ ಹಲವಾರು ಕಥೆಗಳಿವೆ.

ಮೊದಲ ಪ್ರಯತ್ನವಾಗಿ, ಟೈಗರ್ ಸರ್ಕಲ್ ಬಳಿಯ ಫ್ರುಟ್ ಜ್ಯೂಸ್ ಅಂಗಡಿಯೊಂದರಲ್ಲಿ ನೇತು ಹಾಕಿದ “Don’t call Anna” (ಅಣ್ಣ ಎಂದು ಕರೆಯಬೇಡಿ) ಎಂಬ ನೊಟೀಸಿನ ಬಗ್ಗೆ ಮುಂದಿ‌ನ ಪೋಸ್ಟಿನಲ್ಲಿ ಹೇಳುತ್ತೇನೆ.

14907701_1236967916365602_2322528615619784320_n

Add Comment

Leave a Reply