Quantcast

ಎಚ್ ಎಸ್ ವಿ ಕಾಲಂ: ರಾಮನವಮಿಯ ರಾತ್ರಿ…

ತಾವರೆಯ ಬಾಗಿಲು-೯
ಎಚ್.ಎಸ್.ವೆಂಕಟೇಶ ಮೂರ್ತಿ
ಇದು ರಾಮನವಮಿಯ ಆಸುಪಾಸಿನಲ್ಲಿ ಬರೆದದ್ದು

ರಾಮನವಮಿ ಬರುತ್ತಾ ಇದೆ. ಬಿಸಿಲ ಬೇಗೆ ಉಲ್ಬಣಿಸುತ್ತಿರುವ ದಿನಗಳು ಇವು. ಈಗಲ್ಲದೆ ಮತ್ತೆ ಯಾವಾಗ ರಾಮನವಮಿ ಬರಬೇಕು? ನಡುಹಗಲಲ್ಲಿ ಕೊಲ್ಲಾರ ಬಂಡಿಗಳಲ್ಲಿ ಬೇಲದ ಪಾನಕದ ಕೊಪ್ಪರಿಗೆಗಳು ಕೋಸಂಬರಿ ರಸಾಯನಗಳೊಂದಿಗೆ ಮುದ್ದೇನಹಳ್ಳಿಯ ಬೆಟ್ಟದ ಆಂಜನೇಯನ ಗುಡಿಗೆ ಸಾಗುತ್ತಿದ್ದ ಬಾಲ್ಯದ ನೆನಪುಗಳು ನನ್ನನ್ನು ಕಾಡುತ್ತಾ ಇವೆ. ಬೆಟ್ಟದ ಗುಡಿಯಲ್ಲಿ ಜನಜಾತ್ರೆಯೇ ಸೇರಿದೆ.

ಮೂಲವರ ಪೂಜೆ ಆರತಿ ಮುಗಿಯಿತು. ಇನ್ನು ಪಾನಕ ಪನಿವಾರ ಕೋಸಂಬರಿಯ ವಿತರಣೆ. ಭಕ್ತರಲ್ಲಿ ನೂಕು ನುಗ್ಗಲು. ಹಣೆಯ ಮೇಲೆ ಬೆವರ ನಾಮ ಧರಿಸಿದ ಭಕ್ತರು ಗಟಗಟಗಟ ಪಾನಕ ಬಾಯಿಗೆ ಬಗ್ಗಿಸಿಕೊಳ್ಳುತ್ತಿದ್ದಾರೆ.ಮಕ್ಕಳು ಕಾಯಿ ಕೋಸಂಬರಿ ಮುಕ್ಕುತ್ತಿದ್ದಾರೆ! ಬೇಗ ಮುಗಿಸಿದರೆ ಮತ್ತೆ ಸರ್ತಿ ನಿಲ್ಲಬಹುದಲ್ಲ! ಗರ್ಭಗುಡಿಯಲ್ಲಿ ಆಂಜನೇಯ ಸಂಜೀವಿನಿ ಪರ್ವತ ಹಿಡಿದು ಇನ್ನೇನು ಮೇಲಕ್ಕೆ ಹಾರಬೇಕು ಅಂಥ ಭಂಗಿ. ಆಂಜನೇಯನ ಮಿರುಗುವ ಆಳೆತ್ತರದ ಮೂರ್ತಿ ನನ್ನಲ್ಲಿ ರಾಮಾಯಣದ ಕಥೆಯನ್ನು ಉದ್ದೀಪಿಸುತ್ತಾ ಇದೆ!

hsv1-2
ರಾಮನವಮಿ ಎಂಬುದು ರಾಮ ಧ್ಯಾನದ ದಿವಸ. ಅಂಥ ಧ್ಯಾನದ ಫಲವಾಗಿ ಕನ್ನಡಕ್ಕೆ ಘನವಾದ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಜೊತೆ ಜೊತೆಗೇ ಕೆಲವು ಮಹತ್ವದ ರಾಮಕವಿತೆಗಳು ದೊರೆತಿವೆ. ರಾಮಾಯಣವು ಕೇವಲ ವಿರಾಮಾಯಣದ ದೀರ್ಘತೆ ಮಾತ್ರವಲ್ಲ. ಬಿಕ್ಕಟ್ಟಾದ ಮಂತ್ರಗ್ರಾಮ ಕೂಡ.

ಗೋಪಾಲಕೃಷ್ಣ ಅಡಿಗರ ‘ರಾಮನವಮಿಯ ದಿವಸ’ ಹೀಗೆ ಧ್ಯಾನರೂಪಿಯಾದ ಒಂದು ಮಹತ್ವದ ರಚನೆ. ಜಗತ್ತಿನ ಸಂಕಟವನ್ನು ಕೇಳುವ ಕಿವಿಯೇ ವಲ್ಮೀಕ ಎನ್ನುವರು. ಹುತ್ತ ಎಂಬುದು ಭೂಮಿತಾಯಿಯ ಕಿವಿಯಂತೆ! ಲೋಕವ್ಯಾಕುಲವನ್ನು ವಾಲ್ಮೀಕಿ ಕೂಡ ಹುತ್ತಗಟ್ಟಿಯೇ ಗ್ರಹಿಸಿದ್ದು. ಆವಾಗಲೇ ಶೋಕವೆಂಬುದು ಶ್ಲೋಕವಾದದ್ದು. ಅಡಿಗರ ಕವಿತೆಯ ಬಹು ಮುಖ್ಯ ಸಾಲಾದರೂ ಅದೇ: ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ ರೇಖೆ? ಹುತ್ತ ಹೀಗೆ ಕೇಳುವ ಮತ್ತು ತಾಳುವ ಅದ್ಭುತ ಪ್ರತೀಕ.

ಇಡೀ ರಾಮಚರಿತೆಯನ್ನೇ ಸ್ಮರಣೆಯಿಂದ ಸುರುಳಿ ಬಿಚ್ಚಿ ದಂಡಕದ ಉದ್ದಕ್ಕೂ ಅಡಿಗರ ಕವಿತೆ ಹಾಸಿಬಿಡುತ್ತದೆ. ರಾಮನ ಹುಟ್ಟಿಗೆ ಅದೆಷ್ಟು ಕಾರ್ಯ ಕಾರಣ ತಪಶ್ಚರಣ. ಪುತ್ರಕಾಮೇಷ್ಟಿ ಗೆರೆ ಹಠಾತ್ತನೆ ತಾಗಿದಾಗ ತ್ರಿಕಾಲ ಚಕ್ರಕ್ಕೆ, ಶ್ರೀರಾಮೋದ್ಭವ. ರಾಮ ಕಥೆಯೋ ಇರುಳು ಬೆಳಕಿನ ನಿರಂತರ ಕಾಳಗ. ಕತ್ತಲೆಗೆ ಹತ್ತೆ ತಲೆ? ಕತ್ತರಿಸಿದರೆ ಕತ್ತಿಗೆ ಬರುವ ಅನಂತ. ಅದಕ್ಕಾಗಿಯೇ ಕೋದಂಡ ದಂಡವೂ ದಂಡ. ದಂಡ ಶಿಕ್ಷೆ ಹೇಗೋ ಹಾಗೆ ಆ ಶಿಕ್ಷೆಯ ಕಾಲಮಿತಿಯನ್ನೂ ಧ್ವನಿಸುವ ಪದ. ದಂಡ, ಶಿಕ್ಷೆ. ದಂಡ ದೊಣ್ಣೆ. ದಂಡ, ವ್ಯರ್ಥ. ಒಂದು ಶಬ್ದದ ಸುತ್ತ ಅದೆಷ್ಟು ಅರ್ಥಗಳ ಪರಿಭ್ರಮಣೆ! ಆದರೆ ಪುರುಷೋತ್ತಮನ ಮೂರ್ತಿಯನ್ನು ಕ್ರಿಯಾಶೀಲತೆ ಮತ್ತೆ ಮತ್ತೆ ಕಡೆಯಲೇ ಬೇಕಾಗುವುದು. ಇಲ್ಲವಾಗಿದ್ದರೆ ಸಂಭವಾಮಿ ಯುಗೇ ಯುಗೇ ಎಂಬ ಮಾತಿನ ಮತಿತಾರ್ಥವಾದರೂ ಏನು? ಅಡಿಗರ ಕಾವ್ಯದ ಬಿಗಿಯಾದ ಪ್ರತಿಮಾಶರೀರದ ಗ್ರಹಿಕೆಗಾಗಿ ಪದ್ಯದ ಕೊನೆಯ ಮೂರು ನುಡಿಗಳನ್ನು ಓದಿರಿ:

ವಿಜೃಂಭಿಸಿತು ರಾಮಬಾಣ; ನಿಜ. ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ.
ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ
ಅನಾದಿ. ಕೋದಂಡ ದಂಡವೂ ಹೀಗೆ ದಂಡ.

ಅಥವಾ ಚಕ್ರಾರ ಪಂಕ್ತಿ; ಚಕಮಕಿ ಕಲ್ಲನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ.

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೇ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?

rama with bowನನ್ನನ್ನು ಕಾಡುತ್ತಿರುವ ಇನ್ನೊಂದು ರಾಮನವಮಿಯ ಪದ್ಯ  ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತವಾದದ್ದು!

ಅಡಿಗರ ಕವಿತೆ ಆಳಬಗೆವ ಮಡು; ಮಾಸ್ತಿ ಕವಿತೆ ತಿಳಿತಿಳಿ ಪಾರದರ್ಶಕ ಸಮತಲ ನದಿ! (ಮಾಸ್ತಿ ಕುರಿತ ಅಡಿಗರ ವಿಮರ್ಶೆ ಅವರ ಕಾವ್ಯವನ್ನು ತಿಳಿಯಾಗಿ ಹರಿಯುವ ಸಲಿಲಕ್ಕೆ ಹೋಲಿಸಿರುವುದು ನೆನಪಾಗುತ್ತಿದೆ). ರಾಮನವಮಿ (ಮಾಸ್ತಿ ಬರೆದದ್ದು) ಅಡಿಗರ ಮೆಚ್ಚಿನ ಕವಿತೆಯೂ ಹೌದು. ನಮ್ಮ ಹೊಸ ಪೀಳಿಗೆಗೆ ಇಂಥ ಕವಿತೆಯನ್ನು ಮತ್ತೆ ಮತ್ತೆ ಓದಿಸಬೇಕಾಗಿದೆ.

ಹಾಗೆ ನೋಡಿದರೆ ಮಾಸ್ತಿಯವರ “ರಾಮನವಮಿ” ಹೇಳುವುದು ಭೂತದ ನೆನಪಲ್ಲಿ ಘಟಿಸುವ ವರ್ತಮಾನದ ಕಥೆಯನ್ನ. ಒಮ್ಮೆ ಕವಿತೆಯ ನಿರೂಪಕ (ಅದನ್ನು ಮಾಸ್ತಿಯೆಂದೇ ಗ್ರಹಿಸಿದರೂ ತಪ್ಪಿಲ್ಲ) ಒಳ್ಳೆ ಬಿಸಿಲಲ್ಲಿ ಬೋವನ ಹಳ್ಳಿಯ ಬಳಿಗೆ ಬಂದಾಗ ಊರ ಹೊರಗಿನ ಬಸರಿಮರದ ಕಟ್ಟೆಯ ಮೇಲೆ ಕೂತಿದ್ದ ಗೌಡರೊಬ್ಬರು ಅವರ ಕಣ್ಣಿಗೆ ಬೀಳುತ್ತಾರೆ.

ಈ ನಡು ಬಿಸಿಲಲ್ಲಿ ವಯಸ್ಸಾದ ಆ ವೃದ್ದರು ಯಾರ ನಿರೀಕ್ಷೆಯಲ್ಲಿ ಬಸರಿಮರದ ಕಟ್ಟೆಯ ಮೇಲೆ ಕೂತಿರಬಹುದು? ಕುತೂಹಲದಿಂದ ನಿರೂಪಕ ಗೌಡರನ್ನು ಕೇಳುತ್ತಾರೆ. ಬೋವನ ಹಳ್ಳಿಯ ಜವರ ಗೌಡ ಎಂಬ ಆ ಹಿರಿಯರು ರಾಮನವಮಿಯ ಆ ಹಗಲು ಕಾಯುತ್ತಾ ಕೂತಿರುವುದು ರಾಮ ಸೀತ ಲಕ್ಷ್ಮಣರ ದರ್ಶನಕ್ಕಾಗಿ. ಅದು ಆ ಊರಿನವರ ನಂಬಿಕೆ. ರಾಮಾಯಣದ ಕಾಲದಲ್ಲಿ ರಾಮನು ವನವಾಸದಲ್ಲಿದ್ದಾಗ ಒಂದು ದಿನ ಈ ಬಸರಿಮರದ ಬಳಿಗೆ ಬಂದಿದ್ದನಂತೆ! ಆವತ್ತೇ ರಾಮನ ಜನ್ಮದಿನ. ಸೀತ ಆ ಮರದ ನೆರಳಲ್ಲೇ ಹಬ್ಬದ ಅಡುಗೆ ಮಾಡಿ ಪತಿ ಮತ್ತು ಮೈದುನರಿಗೆ ಬಡಿಸುತ್ತಾಳೆ. ಸ್ವಲ್ಪ ಕಾಲ ವಿಶ್ರಮಿಸಿ ಅವರು ಮುಂದಕ್ಕೆ ತೆರಳುವಾಗ ರಾಮನವಮಿಯಂದು ತಮಗೆ ನೆರಳು ನೀಡಿದ ಬಸರಿ ಮರ ಮತ್ತು ನೀರು ಕೊಟ್ಟ ಬಾವಿ ಎಂದೆಂದಿಗೂ ಒಣಗದಿರಲಿ ಎಂದು ಸೀತೆ ಹರಸುತ್ತಾಳೆ.

ಪ್ರತಿ ರಾಮನವಮಿಯ ಹಗಲು ಮೂರು ತಾಸು ತಾವು ಮೂವರೂ ಇಲ್ಲಿ ಸುಳಿಯುವುದಾಗಿಯೂ ಮಾತು ಕೊಟ್ಟಿದ್ದಾಳೆ. ಜವರ ಗೌಡರ ತಾತ, ಹೆತ್ತಾತ ಈ ಮರದ ಬಳಿ ರಾಮನವಮಿಯಂದು ಸೀತಾರಾಮಲಕ್ಷ್ಮಣರ ದರ್ಶನ ಪಡೆದಿದ್ದರಂತೆ. ಜವರ ಗೌಡರ ಕಣ್ಣಿಗೆ ಅವರು ಇನ್ನೂ ಬಿದ್ದಿಲ್ಲ. ಅದಕ್ಕೆ ದೈವಕೃಪೆ ಬೇಕಲ್ಲ ಎಂದು ಗೌಡರು ಉದ್ಗಾರ ತೆಗೆಯುತ್ತಾರೆ. ಅಷ್ಟರಲ್ಲಿ ದೂರದಲ್ಲಿದ್ದ ತಗ್ಗಿನ ಮರದ ನೆರಳಲ್ಲಿ ಇಬ್ಬರು ತರುಣ ತರುಣಿ ನಿರೂಪಕರ ಕಣ್ಣಿಗೆ ಬೀಳುತ್ತಾರೆ! ಒಂದು ಕ್ಷಣ ಅವರ ಎದೆ ಝಲ್ಲೆನ್ನುತ್ತದೆ. “ಗೌಡರೇ ಆ ಮರದ ಕೆಳಗೆ ನಿಂತಿರುವವರು ರಾಮ ಮತ್ತು ಸೀತೆಯೇ ಇರಬಹುದೆ?”. ಗೌಡರು ನಗುತ್ತಾರೆ: “ಸ್ವಾಮೀ ಅವರು ನನ್ನ ಮಗ ರಾಮಣ್ಣ, ಸೊಸೆ ಈರವ್ವ. ಹೊಸದಾಗಿ ಮದುವೆಯಾಗಿದೆ. ತುಂಬಿದ ಮನೆಯಲ್ಲಿ ಅವರಿಗೆ ಏಕಾಂತ ಕಷ್ಟ. ನನ್ನನ್ನು ಕರೆಯಲು ಬಂದವರು, ಹೊಸಬರು ನನ್ನ ಬಳಿ ಇರುವುದು ನೋಡಿ ಅಲ್ಲೇ ನಿಂತಿದ್ದಾರೆ!”.

ಗೌಡರು ಏನೇ ಹೇಳಲಿ, ನಿರೂಪಕರಿಗೆ ಅನ್ನಿಸುವುದು, ಅವರು ರಾಮ ಸೀತೆ ಎಂದೇ. ಗೌಡರು ದಶರಥ. ಹಾಗಾದರೆ ನಾನು? ನಾನೇ ಜನಕ! ಹೀಗೆ ಕವಿತೆ ಕೊನೆಯಾಗುತ್ತದೆ. ರಾಮಾಯಣದ ದಾಂಪತ್ಯದ ಸುಂದರ ಸತ್ವ ಸಾವಿರಾರು ವರ್ಷಗಳನ್ನು ದಾಟಿ ಹೀಗೆ ವರ್ತಮಾನಕ್ಕೆ ಬಂದಿದೆ. ಪ್ರತಿಮನೆಯಲ್ಲೂ ರಾಮ ಸೀತೆ ಲಕ್ಷ್ಮಣರು ಇದ್ದಾರೆ! ಮಗನೇ ರಾಮ; ಸೊಸೆಯೇ ಸೀತೆ; ಮೈದುನನೇ ಲಕ್ಷ್ಮಣ. ಇನ್ನು ತಂದೆ ದಶರಥ! (ರಾಮನಿಗಾಗಿ ನಿರೀಕ್ಷೆಯಲ್ಲಿರುವ ದಶರಥ!). ಎಂಥ ಅದ್ಭುತ ಕಲ್ಪನೆ! ರಾಮಾಯಣ ಕಥಿಸುವ ಒಂದು ಅಪೂರ್ವವಾದ ಜೀವನ ಮೌಲ್ಯವನ್ನು ಮಾಸ್ತಿಯ ರಾಮನವಮಿ ಕವನ ಈವತ್ತಿಗೆ ಆವಾಹಿಸುತ್ತಾ ಇದೆ!

ಮುದುಪನ ಮಾತದು ಏನೇ ಇರಲಿ
ನನಗಾಕ್ಷಣದಲ್ಲಿ
ಚಿತ್ರ ಒಂದು ಮೂಡಿತು ನಮ್ಮೆಲ್ಲರ
ನಿಲ್ಲಿಸಿ ಮನದಲ್ಲಿ.

ದಶರಥ ಸೀತಾರಾಮರು ಇವರು,
ನಾನೆ ಆದೆ ಜನಕ;
ಮನದಿಂದಿಳಿಯದು ಇನ್ನಾ ಚಿತ್ರ
ಈ ಉಸಿರಿರುವನಕ.

ರಾಮನವಮಿಯ ಎರಡು ಮಹತ್ವದ ಪದ್ಯಗಳನ್ನು ನಾನು ಕಾವ್ಯಾಸಕ್ತರ ನೆನಪಿಗೆ ತಂದಿದ್ದೇನೆ. ಮಾಸ್ತಿಯ ಕವಿತೆ ಪಾರಾಯಣದ ಫಲ; ಅಡಿಗರ ಕವಿತೆ ಏಕಾಗ್ರ ಧ್ಯಾನದ ಫಲ. ಎರಡೂ ರಾಮನವಮಿಯನ್ನು ಹಗಲಲ್ಲಿ ಕಾಣುವ ಪದ್ಯಗಳು. ನಾನಾದರೋ ರಾಮನವಮಿಯಂದು ರಾಮದರ್ಶನ ಮಾಡಿದ್ದು ಇರುಳಲ್ಲಿ. ಸಾಲು ದೀಪಗಳ ಕಣ್ಕಿವುಚುವ ಬೆಳಕಲ್ಲಿ. ಗರ್ಭಗುಡಿಯಲ್ಲಿ ನಂದಾದೀಪ. ಸಾಲು ನಿಂತ ಭಕ್ತರು. ಅರ್ಚಕರ ತೀರ್ಥ ಪ್ರೋಕ್ಷಣೆ. ರಾಮನಿಗೇ ನಡೆದ ರಾಮಾಯಣ ನಿವೇದನೆ! ರಾಮಕಾವ್ಯವನ್ನು ರಾಮನಿಗೆ ನಿವೇದಿಸುವ ಕಾವ್ಯ ಮೋಹಿ ಅರ್ಚಕರು! (ನಿನ್ನನ್ನು ನಿನ್ನ ಕನ್ನಡಿಯಲ್ಲಿ ನೀನೇ ನೋಡಿಕೋ ಎಂಬಂತೆ!). ಅರ್ಚಕರ ಆ ಆರ್ತ ನಿವೇದನೆ ರಾಮ ಸೀತೆ ಲಕ್ಷ್ಮಣ ಮಾರುತಿಯ ಮೇಲೆ ಬೀರಬಹುದಾದ ಪರಿಣಾಮವೆಂಥದು?  ಆ ಕುರಿತು ಇಡೀ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಈ ಕವಿತೆ ಬರೆದಿದ್ದೇನೆ. ವಿವರಣೆಯ ಗೀಟು ಗುರುತಿಲ್ಲದ ಈ ಕಿರುಗವಿತೆಯನ್ನು ರಾಮನವಮಿಯ ನನ್ನ ಕಾಣಿಕೆಯಾಗಿ ದಯಮಾಡಿ ಓದುಗರು ಪರಾಂಬರಿಸಬೇಕು.

ರಾಮನವಮಿಯ ರಾತ್ರಿ

ಶ್ರೀರಾಮ ಗುಡಿಯಲ್ಲಿ, ರಾಮನಿಗೆ ಅರ್ಚಕರು
ನಿತ್ಯವೂ ರಾಮಕಥೆ ಒಪ್ಪಿಸುವರು.
“ಕರುಣಾಳು ಪ್ರಭು! ಲೋಕಮಾತೆ ಸೀತೆಯ ನೀನು
ತೊರೆದದ್ದು ಸರಿಯೇನು?” ನೆಪ್ಪಿಸುವರು.

ಶ್ರೀಮುಖದಲಾಗ ಸಣ್ಣಗೆ ನೋವು ಸುಳಿಯುವುದು.
ಶಿಲ್ಪಕ್ಕೆ ತುಟಿಯುಂಟು; ಇಲ್ಲ ಮಾತು.
ಕರುಣಾರ್ದ್ರ ತಾಯಿ ನೋಡುವರು ರಾಘವನನ್ನ!
ಅಭಿಷೇಕಜಲ ಕಣ್ಣಲೊಸರುತಿಹುದು.

ಲಕ್ಷ್ಮಣಗೆ ಕಸಿವಿಸಿ. ತಲೆ ತಗ್ಗಿಸಿದ ಹನುಮ.
ತಾಯಿ ಮತ್ತೇನನ್ನೊ ಧ್ಯಾನಿಸುವಳು.
ಇರುಳು ಭಕ್ತರು ಹೋದಮೇಲೆ ರಾಮನು ಇಲ್ಲಿ
ಇರುವ ಬಗೆ ಹೇಗೆಂದು ಚಿಂತಿಸುವನು.

“ಅರ್ಚಕರು ಮುಂಜಾನೆ ಮತ್ತದೇ ಕಥೆಯನ್ನು
ಹೇಳಿದರೆ ಕೇಳದೆಯೆ ಇರಲಿ ಹೇಗೆ?”
ನಿಂತರೂ ನಡೆದವರ ನಡೆದ ನಡೆ ಕಾಡುವುದು.
ಮುಗಿದಿರುವ ಹಾಡ ಪಲ್ಲವಿಯ ಹಾಗೆ.

One Response

  1. Anonymous
    November 19, 2016

Add Comment

Leave a Reply