Quantcast

ಕಾಡುವ ಕಥೆಗಳ ಜಾಡು ಹಿಡಿದು

sudha-adukula-2

ಸುಧಾ ಆಡುಕಳ

“ಕಥೆ ಕವನಗಳೆಲ್ಲ ಮನಸಿಗೆ ಬಂದಾಗಲೇ ಹಾರ್ಧಿಕವಾಗಿ ಸ್ವಾಗತಿಸಿ, ಪ್ರೀತಿಯಿಂದ ಅಕ್ಷರಕ್ಕಿಳಿಸಬೇಕು. ಇಲ್ಲವಾದರೆ ಅವು ಬೇರೆಯವರನ್ನು ಹುಡುಕಿಕೊಂಡು ಹೋಗಿಬಿಡುತ್ತವೆ ಎಂದು ಅಮ್ಮ ಯಾವಾಗಲೂ ಹೇಳುತ್ತಾರೆ. ಹಾಗಾಗಿ ನನ್ನ ಮನಸಿಗೆ ಬಂದ ಭಾವಗಳನ್ನು ಅಕ್ಷರಕ್ಕಿಳಿಸುವ ಸಮಯವನ್ನು ಮಾತ್ರ ನಾನು ಮನೆಯವರಿಂದ ಬೇಡುತ್ತೇನೆ”

ಪ್ರಸಿದ್ಧ ಕಥೆಗಾರ್ತಿ ಸುನಂದ ಕಡಮೆಯವರ ಮಗಳಾದ ಕಾವ್ಯಾ ಕಡಮೆ ಸಂದರ್ಶನವೊಂದರಲ್ಲಿ ಹೇಳಿದುದನ್ನು ಕೇಳಿದಾಗಿನಿಂದ, ನಾನು ಇಷ್ಟಪಟ್ಟು ಓದುವ ಕಥೆಗಳೆಲ್ಲ ನಾನು ನಿರ್ಲಕ್ಷ ಮಾಡಿ ಬೇರೆಯವರ ಪಾಲಾದ ಕಥೆಗಳೇ ಅನಿಸಲಿಕ್ಕೆ ಶುರುವಾಯಿತು. ಇನ್ನಾದರೂ ಅವುಗಳನ್ನು ಹಿಡಿಯಲೇಬೇಕೆಂಬ ಹಠವೇ ನನ್ನೆಲ್ಲ ಅಶಾಂತಿಗೆ ಮೂಲವಾಗಿದೆ.

she skirt butterflyಈ ಕಥೆಗಳೋ ಎಂಥ ತುಡುಗು ಅಂತೀರಾ? ಎಲ್ಲ ಕೆಲಸ ಮುಗಿಸಿ ಪೆನ್ನು, ಪೇಪರ್ ಹಿಡಿದು ಕುಳಿತು ಎಷ್ಟು ಕರೆದರೂ ಹತ್ತಿರವೂ ಸುಳಿಯುವುದಿಲ್ಲ. ಸಂಜೆ ಕಾಲೇಜು ಮುಗಿಸಿ, ಸುಯ್.. ಎಂದು ಸ್ಕೂಟರಿನಲ್ಲಿ ಒಬ್ಬಳೇ ಬರುವಾಗ ರಪ್ಪನೆ ಮನಸಿನೊಳಗೆ ನುಗ್ಗಿಬಿಡುತ್ತವೆ.

ಈ ದಿನ ಹಿಡಿದೇಬಿಡಬೇಕೆಂಬ ಛಲದಲ್ಲಿ ಮನೆಯೊಳಗೆ ಬಂದೊಡನೆ ಸರಸರನೆ ಕೆಲಸಗಳನ್ನೆಲ್ಲ ಮುಗಿಸಿ, ಬಿಸಿ ಚಾ ಹಿಡಿದು ಕುಳಿತುಕೊಳ್ಳುವ ಹೊತ್ತಿಗೆ ಮಗರಾಯ ಬಾಡಿದ ಮೋರೆಯಲ್ಲಿ ಹಾಲ್ ನೊಳಗೆ ಪ್ರವೇಶಿಸುತ್ತಾನೆ. ಏನಾಯ್ತೋ? ಎಂದರೆ, ನೀನು ಲೆಕ್ಕ ಹೇಳಿಕೊಡುತ್ತೇನೆಂದು ಹೇಳಿ ಎಷ್ಟು ದಿನವಾಯ್ತು? ಇವತ್ತು ಅದರ ಪರೀಕ್ಷೆ ಮಾಡಿದರು. ತುಂಬಾ ತಪ್ಪಾಯ್ತು ಎಂದು ಅಲವತ್ತುಗೊಳ್ಳುತ್ತಾನೆ. ಇರಲಿಬಿಡು. ಇವತ್ತು ಖಂಡಿತ ಹೇಳಿಕೊಡುತ್ತೇನೆ. ಇದು ಯುನಿಟ್ ಟೆಸ್ಟ್ ಅಲ್ವಾ, ನಡೆಯುತ್ತೆ ಎಂದು ಅವನನ್ನು ಸಮಾಧಾನಪಡಿಸುತ್ತೇನೆ.

ಮನದೊಳಗಿನ ಕಥೆಗೆ ಚೂರು ಇರು ಎಂದು ಸಂತೈಸಿ, ಅವನ ಕೆಲಸ ಮುಗಿಸುವಾಗಲೇ ಠಣಗುಟ್ಟುವ ಫೋನ್ ನಾಳೆ ಬರಲಿರುವ ಅತಿಥಿಗಳ ಯಾದಿಯನ್ನು ನೀಡುತ್ತದೆ. ಛೇ! ಮನೆಯೆಂದರೆ ಒಳ್ಳೆ ಸಂತೆಯಂತಾಗಿದೆ, ಬಂದವರು ಏನಂದುಕೊಳ್ಳಲ್ಲ ಎಂದುಕೊಳ್ಳುತ್ತಲೇ ಎಲ್ಲವನ್ನು ಓರಣಗೊಳ್ಳುತ್ತಾ ಕಥೆಯೊಂದಿಗೆ ಸ್ವಲ್ಪ ಸಂಭಾಷಣೆಯನ್ನು ನಡೆಸುತ್ತೇನೆ.

ಇನ್ನೇನು ಊಟವೆಲ್ಲ ಮುಗಿದು ಕಥೆಯ ಲೋಕಕ್ಕೆ ಜಾರಬೇಕೆನ್ನುವಷ್ಟರಲ್ಲಿ ಮತ್ತೆ ರಿಂಗಣಿಸುವ ಫೋನ್ ದೂರದೂರಲ್ಲಿ ಹಾಸ್ಟೆಲ್ ನಲ್ಲಿದ್ದು ಓದುವ ಮಗನ ದನಿಯನ್ನು ಹೊತ್ತು ತರುತ್ತದೆ. ಯಾಕೆ ಫೋನೇ ಮಾಡಿಲ್ಲ? ಎಂಬ ಅವನ ಆಪಾದನೆಯೊಂದಿಗೆ ಆರಂಭವಾಗುವ ಸಂಭಾಷಣೆ ಸರಾಗವಾಗದಂತೆ ಎದುರು ಕುಳಿತ ಕಥೆ ತಡೆಯುತ್ತದೆ. ಅಮ್ಮಾ, ಇಂದು ನೀನ್ಯಾಕೋ ಮಾತಾಡುವ ಮೂಡಲಿಲ್ಲ. ನಾಳೆ ಫೋನ್ ಮಾಡು ಎಂದು ಫೋನಿಟ್ಟ ಮಗನಿಗೂ ತಿಳಿಯಿತಾ ಎದುರು ಕಥೆ ಕುಳಿತಿರುವುದು ಎಂದು ಅಚ್ಚರಿಗೊಳ್ಳುತ್ತೇನೆ.

ಅಷ್ಟರಲ್ಲಿ ಕಥೆ ಹೇಳಿ ಹೋಗಮ್ಮಾ ಎಂದು ಗೋಗರೆಯುವ ಮಗನ ದ್ವನಿ ಮತ್ತೆ ನನ್ನ ಕಥೆಯನ್ನು ನನ್ನೊಳಗೆ ಸೇರಿಸುತ್ತದೆ. ಅಂತೂ ಇಂದಿವಳನ್ನು ಬಿಡೆ ಎಂಬ ಹಠದೊಂದಿಗೆ ಅವನನ್ನು ಕಥೆ ಹೇಳಿ ಮಲಗಿಸಿ, ಅವನಿಗೆ ಎಚ್ಚರವಾಗದಂತೆ ಕಳ್ಳ ಹೆಜ್ಜೆಯಿಟ್ಟು ಬಂದು ಕಥೆಯನ್ನು ಮಾತಾಡಿಸಬೇಕೆಂದುಕೊಳ್ಳುತ್ತೇನೆ. ಬಾತ್ ರೂಮಿಗೆ ಹೋಗಿ ಬಂದು ಕುಳಿತುಬಿಡುವ ಎಂದು ಹೊರಟರೆ ಅಲ್ಲಿ ಇನ್ನೂ ಒಣಹಾಕದ ಮಗನ ಯುನಿಫಾರಂ ಅಣಕಿಸುತ್ತದೆ. ಒಣಹಾಕಿ ಬರುವಾಗಲೇ ನಾಳೆಯ ತಿಂಡಿಗೆ ಅಕ್ಕಿ ನೆನೆಸಿಲ್ಲವೆಂಬುದು ಬೇಡವೆಂದರೂ ನೆನಪಾಗುತ್ತದೆ.

ಎಲ್ಲವನ್ನೂ ಮುಗಿಸಿ ಬಂದು ಪೆನ್ನು ಹಿಡಿದರೆ, ಅರೆ! ಕಥೆ ನಿದ್ದೆಗೆ ಜಾರಿದೆ. ಎಚ್ಚರಿಸಲೇಬೇಕೆಂದು ಅಡಿಗೆ ಮನೆಗೆ ಹೋಗಿ ದೊಡ್ಡ ಕಪ್ ನಲ್ಲಿ ಗ್ರೀನ್ ಟೀ ತುಂಬಿಸಿ ಅದನ್ನು ಎಚ್ಚರಿಸುವ ಕಾಯಕದಲ್ಲಿ ತೊಡಗಿಕೊಳ್ಳುತ್ತೇನೆ. ಅರೆಬರೆ ನಿದ್ದೆಯಲ್ಲಿರುವ ಕಥೆ ಪೇಪರಿಗಿಳಿಯದೇ ತೂಕಡಿಸುತ್ತದೆ. ಇಡಿಯ ಕಥೆಯನ್ನು ಪುನಃ ಓದಿದರೆ ಅದು ಕಥೆಯಾಗದೇ ಬರಿಯ ವರದಿಯಾದಂತೆನಿಸಿ ಪೆಚ್ಚಾಗುತ್ತೇನೆ.

ಆಕಳಿಸಿ ನಿದ್ದೆಗೆ ಜಾರುವ ನನ್ನ ಕನಸಿನಲ್ಲಿ ಬಂದ ಕಥೆ ನನ್ನನ್ನು ಅಣಕಿಸಿ ನಗುತ್ತದೆ. ನಾನು ಏನೇನೂ ಬೇಸರಿಸದೇ ಮತ್ತೊಂದು ಕಥೆಯ ಜಾಡನ್ನು ಅರಸಿ ಹೋಗುತ್ತಿರುತ್ತೇನೆ. ಇಂದಾದರೂ ಕಥೆಯನ್ನು ಪ್ರೀತಿಯಿಂದ ಕರೆದು ಸ್ವಾಗತಸಿ ಅಕ್ಷರಕ್ಕಿಳಿಸುವ ಹಂಬಲದಲ್ಲಿ!

 

3 Comments

  1. ರಾಜೀವ
    November 19, 2016
  2. Deepa hiregutti
    November 19, 2016
  3. Anonymous
    November 19, 2016

Add Comment

Leave a Reply