Quantcast

ಕಥೆ ಕಥಿಸಿ, ಸಮುದ್ರ ಮಥಿಸಿ..

hbi1

ಎಚ್ ಬಿ ಇಂದ್ರಕುಮಾರ್ 

ಕಥೆ ಕಥಿಸಿ, ಸಮುದ್ರ ಮಥಿಸಿ ಹೊಸ ಹುಟ್ಟು ಪಡೆಯಿತು.

ಕಾರ್ಯಕ್ರಮದ ಹೊಸ ರೀತಿಯ ಪ್ರಕ್ರಿಯೆಯನ್ನು ಕಂಚಿನ ಕಂಠದಲ್ಲಿ ಮಯೂರ್ ಬರಗಾಲೆ ಪರಿಚಯಿಸಿ, ಮಾತಿನ ದಿಕ್ಸೂಚಿ ಹಿಡಿದರು.

ಬಾಗಲಕೋಟೆಯ ಭಾಷೆಯಲ್ಲರಳಿದ ತಿರುಪತಿ ಭಂಗಿ ಯವರ ಕೈರೊಟ್ಟಿಯನ್ನು ಬಸವಣ್ಣೆಪ್ಪಾ ಕಂಬಾರ ತಟ್ಟಿದರು. ಸದ್ದಾಯಿತು. ಶಿವಾಪುರ ಮಾತಿನ ವಸ್ತುವಾಗಿದ್ದು ಪೋಕಳೆ ಸರ್ ಪ್ರಶ್ನೆಯಿಂದ. ಇಂದ್ರಕುಮಾರ್ ಎಚ್ ಬಿ ಅವರ ಪರಮೂ ಪ್ರಪಂಚಕ್ಕೆ ಚಳ್ಳಕೆರೆಯ ಮೋದೂರು ತೇಜ ಪ್ರವೇಶ ಪಡೆದು, ತಮ್ಮ ಪ್ರಾಂತೀಯ ಶೈಲಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

15032850_10208048280548514_9030242474434763904_nಟಿ ಎಸ್ ಗೊರವರ, ಕಲ್ಲೇಶ್ ಕುಂಬಾರರ ಉಸಿರ ಪರಿಮಳವಿರಲು, ಚಿಂತೆಯೇಕೆ ಎಂದು ಸದ್ಯದ ಪರಿಸ್ಥಿತಿಯಲ್ಲಿ ಕಥೆಗಳ ದೃಷ್ಟಿಕೋನದ ಪ್ರಾಮುಖ್ಯತೆ ಮನಗಾಣಿಸಿದರು. ಝೀರೋ ಮತ್ತು ಒಂದು ಇಂದು ಮುಖ್ಯವಾಗಿದೆ ಎಂದು ಇಂದ್ರಕುಮಾರ್, ವಿಕ್ರಮ್ ಹತ್ವಾರರ ಕಥಾವಲೋಕನ ಮಾಡಿದರು. ಶಿಸ್ತು ಬದ್ಧ ತಯಾರಿಯಲ್ಲಿ ಮೋದೂರು ತೇಜ ಅವರ ಹುಲಿವೇಷದ ಅರ್ಥಪೂರ್ಣವಾದ ಕತಾ ಮೀಮಾಂಸೆ ಮಮತಾ ಆರ್ ಮಾಡಿದರು. ಪ್ರವೀಣ ಅವರ ‘ವ್ಯೂಹಗನ್ನಡಿ’ಗೆ ನಗೆಗನ್ನಡಿ ಹಿಡಿದವರು ತಿರುಪತಿ ಭಂಗಿ.

ಕಥಾಶಾಲೆಯಿಂದ ಪಾಕಶಾಲೆಗೆ ಹೊರಳಿ ಮತ್ತೆ ಮಾತು, ನಗು, ಚರ್ಚೆ, ಪರಿಚಯಗಳ ನಡುವೆ ರುಚಿಯಾದ ಊಟ ಚಪ್ಪರಿಸಿದೆವು.

ಗೊರವರ ಅವರ ಕುದರಿ ಮಾಸ್ತರನ ಮುನ್ನೆಲೆಗೆ ಕರೆದುಕೊಂಡ ವಿಕ್ರಮ್ ಹತ್ವಾರ್ ಕಥನ ಶಕ್ತಿ ಮೆಚ್ಚುತ್ತಲೆ ಸ್ತ್ರೀ ಪಾತ್ರಗಳ ತುಲನೆಗಿಳಿದರು. ಮಂಜುನಾಥ ಬೆಳಗಾವಿ ಯವರ ಮುಗಿಲ ಮಾಯೆಯ ಕರುಣೆಯನ್ನು ಕರುಣಾ ರಸ, ನಿಸರ್ಗಾರಾಧನೆಯ ಆಯಾಮದಲ್ಲಿ ಕಲ್ಲೇಶ್ ಕುಂಬಾರ್ ವಿಶ್ಲೇಷಿಸಿದರು. ಲಕ್ಷ್ಮಣ್ ಬದಾಮಿಯವರ ಬೇರು ಮತ್ತು ಬೆವರಿನ ಪ್ರಾಮುಖ್ಯತೆ ಸಶಕ್ತವಾಗಿ ಮೂಡಿಬಂದ ಸಾರ್ಥಕತೆಯನ್ನು ಮಧುರಾ ಕರ್ಣಮ್ ಸರಳ ರೂಪದಲ್ಲಿ ಹಿಡಿದಿಟ್ಟರು.

ಮಧ್ಯಾಹ್ನದ ನಗೆಯ ಅಲೆಗೆ ಕಾರಣರಾದ ಪಿ ಮಂಜುನಾಥ, ಮಧುರಾ ಕರ್ಣಮ್ ಅವರ ‘ಅವಳ ಭಾವ’ದ ಕಥೆಗಳಲ್ಲಿನ ನವಿರು ನಿರೂಪಣೆಯ ಪರಿ ತೆರೆದಿಟ್ಟರು. ಬಸವಣ್ಣೆಪ್ಪಾ ಕಂಬಾರರ ಭಾಷೆ ದುಡಿಸಿಕೊಳ್ಳುವ ಶಕ್ತಿಯನ್ನು ಸಶಕ್ತ ಪ್ರಾಂತೀಯ ದನಿಯಲ್ಲಿ ಓದು-ವಿಮರ್ಶೆ ರೀತಿಯಲ್ಲಿ ಲಕ್ಷ್ಮಣ ಬದಾಮಿ ಮಾಡಿದರು. ಮಮತಾ ಆರ್ ಅವರ ಕಥೆಗಳು ಸುಲಭಕ್ಕೆ ಅರಗಿಸಿಕೊಳ್ಳುವುದು ಕಷ್ಟ ಎನ್ನುತ್ತಲೇ ಕಥನ ಸಾಧ್ಯತೆಯ ಅಪರೂಪ ಲಕ್ಷಣಗಳನ್ನು ವಿವರಿಸಿದ ಪ್ರವೀಣ್, ಕೊನೆಯ ಸರತಿಯಲ್ಲಿ ಮಾತು ಮುಗಿಸಿದರು.

ಹದಿಮೂರು ಕತೆಗಾರರು ಮಾತಾಡಿದೆವು. ಭಾಷೆ, ಶೈಲಿ, ನಿರೂಪಣೆ, ಪ್ರಾರಂಭ ಅಂತ್ಯ, ಶಿಫ್ಟ್ ಡ್ರಿಫ್ಟ್, ಜನಪ್ರಿಯ ಗಂಭೀರ, ಪರಂಪರೆ.. . ಅಂತೆಲ್ಲ ಮಾತಾಡಿದೆವು. ಕಥೆಗಾರರಿಗಿಂತ ಕಥೆಗಳ ಬಗ್ಗೆ ಸಮರ್ಥನೆಗಿಳಿದೆವು. ವಾದ ಸಂವಾದದಲ್ಲಿ ಒಮ್ಮೆಲೆ ನಕ್ಕೆವು, ಲಿಂಕ್ ಜೋಡಿಸಿದೆವು. ಕಥಾಬೀಜದ ಹೆಣಿಗೆಯನ್ನು ಪ್ರಶ್ನಿಸಿದೆವು. ಇತಿಮಿತಿಗಳಲ್ಲಿ ಕಲಾಕೃತಿಗಾದ ಅನ್ಯಾಯಕ್ಕೆ ನಿಡುಸುಯ್ದೆವು. ಪೋಕಳೆ ಸರ್, ಚೌಗಲೆ ಸರ್ ಅಲ್ಲಲ್ಲಿ ಮಾತಿನ ದಿಕ್ಕಿಗೆ ಶಕ್ತಿ ನೀಡಿದರು.

14907274_1126422064077940_6090469278646161325_nಅಂತ್ಯದಲ್ಲಿ ಹೊಸಕಥನಕ್ಕೆ ‘ಫ್ರೆಶ್’ ನೆಸ್ ತಂದು ಕೊಟ್ಟ ಮಂಜುನಾಥ್ ಲತಾ ಹೊಸ ದಿಕ್ಕು ಸಾಗಬಹುದಾದ ಹಾದಿ ಕಾಣಿಸಲೆತ್ನಿಸಿದರು. ಖೋ ಆಟದಂತಹ ಓಟಕ್ಕೆ ಬೆರಗಾಗಿ ರೆಫ್ರಿ ಸೀಟಿ ಊದಿ ಈ ಕಾರ್ಯಕ್ರಮಕ್ಕೆ ಅಂತ್ಯ ಹಾಡಿದರು. ಭರವಸೆ

ಹಿರಿಯ ಕಥೆಗಾರರ ಅಪರೂಪದ ಕಥೆಗಳ ಮನಸಾರೆ ಹೊಗಳಿದೆವು. ವೀರಣ್ಣ ಮಡಿವಾಳರ ಕ್ಯಾಮೆರಾ ಕಣ್ಣಲ್ಲೇ ಸಂಗತಿಗಳನ್ನು ಹಿಡಿದು ಮಾತಾಡಿದರು. ನಕ್ಕು ನಗಿಸಿದರು. ಬಾಹುಬಲಿ ಎಲ್ಲರ ಉಪಚಾರದ ಜವಾಬ್ದಾರಿ ನಿಭಾಯಿಸಿದರು. ಚಳ್ಳಕೆರೆಯ ಶ್ರೀನಿವಾಸರಾಜು ಕತೆಮಾತಿಗೆ ಸಭೀಕರ ಕಡೆಯಿಂದ ಪ್ರಶ್ನೆಗಳ ವಹಿವಾಟಿಗೆ ಚಾಲನೆ ಕೊಟ್ಟರು. ವಿಠ್ಠಲ ದಳವಾಯಿ, ಸಮರ್ಥನೆಗಳಿಗೆ ಉದಾಹರಣೆ ಪೋಣಿಸಿದರು. ಪುಸ್ತಕ ಪ್ರದರ್ಶನ, ಮಾರಾಟವೂ ಕಳೆಗಟ್ಟಿತ್ತು.

ಕಥೆಗಾರರ ಸೇರಿಸಿ ಒಬ್ಬರೊಬ್ಬರ ಕಥೆ ಓದಿಸಿ, ಚರ್ಚಿಸುವಂತೆ ಮಾಡಿದ ಪ್ರವೀಣರ ಮುಖದಲ್ಲಿ ಸಾರ್ಥಕ ನಗು ಇತ್ತು. ಆಫ್ ಲೈನ್ ಮಾತುಕತೆ ಕಾರ್ಯಕ್ರಮ ದ ನಂತರ ಮುಂದುವರೆಯಿತು. ಆನ್ ಲೈನ್ ಗಾಗಲೇ ಕಾರ್ಯಕ್ರಮದ ತುಣುಕುಗಳು ಹರಿದಾಡತೊಡಗಿದ್ದವು.
‘ನೆಕ್ಸ್ಟ್ ಕಾದಂಬರಿ ಪ್ರಕಾರ ತೊಗೋತೀರೇನ್ರಿ?’
‘ಯಾವ ಊರಲ್ಲಿ ಮಾಡೂ ವಿಚಾರ ಅದ?’
ಇತ್ಯಾದಿ ಪ್ರಶ್ನೆಗಳ ನಡುವೆ ಗ್ರೂಪಿ, ಸೆಲ್ಫಿ ಫಳಪಳಿಸಿದವು.

ಅರ್ಥಪೂರ್ಣ ಕಾರ್ಯಕ್ರಮಕ್ಕೆ ಉರಿದುರಿದು ಹಿಂಸೆಕೊಡದೆ ಅಸ್ತಂಗತನಾದ ಬೆಳಗಾವಿಯ ಸೂರ್ಯ.

15085594_10208048289668742_7732718090021384771_n-1

Add Comment

Leave a Reply