Quantcast

ಮಿತಿಮೀರಿದಾಗ ವಿನಾಶ..

ಎಲ್ಲದಕ್ಕು ಮಿತಿಯಿರುತ್ತದೆ.

ಮಿತಿಮೀರಿದಾಗ ವಿನಾಶ ಹಿಂಬಾಲಿಸುತ್ತದೆ.

ಆಧುನಿಕ ಜಗತ್ತಿನಲ್ಲಿ ಕಳೆದುಹೋದ ನಮಗೆ ಇತ್ತೀಚಿನ ವರ್ಷಗಳಲ್ಲಿ ತಟ್ಟಿರುವುದು ವಾಯುಮಾಲಿನ್ಯದ ಬಿಸಿ . ಆದರೆ ಈ ಹಿಂದೆ ಈ ಕುರಿತಂತೆ ಎಚ್ಚರಿಕೆಯನ್ನು ನೀಡಿದರು ಯಾರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಪರಿಸರವಾದಿಗಳು, ಪರಿಸರದ ಬಗ್ಗೆ ಕಾಳಜಿ ಹೊಂದಿದ ಯಾರು ಮಾತಾಡಿದ್ರು ಕಿವಿಗೆ ಹಾಕಿಸಿಕೊಳ್ಳುತ್ತಿರಲಿಲ್ಲ,

ಆದರೆ ಈಗ ಅಪಾಯದ ಅರಿವಾಗಿದೆ. ದೆಹಲಿಯ ಮಾಲಿನ್ಯದ ಚಿತ್ರಣ ಕಣ್ಣ ಮುಂದೆ ಕಟ್ಟಿದಂತಿದೆ. ಹೀಗೆ ಮುಂದುವರಿದರೆ ಮುಂದೇನು ಎಂಬ ಭಯ ಶುರುವಾಗಿದೆ.

jyothi-column-low-resವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಆರಂಭದ ದಿನಗಳು , ಬೆಂಗಳೂರಿನ ಕೆರೆಗಳು ಮಾಯವಾಗುತ್ತಿರುವ ಬಗ್ಗೆ ಮತ್ತು ಇರುವ ಕೆರೆಗಳು ಕಲುಷಿತಗೊಳ್ಳುತ್ತಿರುವ ಬಗ್ಗೆ ಗ್ರೌಂಡ್ ರಿಪೋರ್ಟಿಂಗ್ ಹಲವು ಮಾಡಿದ್ದೆ. ಆದರೆ ಅದ್ಯಾಕೋ ಅದರ ತೀವ್ರತೆಯನ್ನು ಯಾರು ಅರ್ಥಮಾಡಿಕೊಳ್ಳುತ್ತಿಲ್ಲವಂದು ನನಗನಿಸುತ್ತಿತ್ತು. ಮುಂದೆ ಆಗುವ ಅಪಾಯ ಕಣ್ಣಿಗೆ ಕಾಣುವಂತಿತ್ತು.

ವೃಷಭಾವತಿ ನದಿಯನ್ನು ತುಂಬಿರುವ ವಿಷಪೂರಿತ ನೊರೆ ನೋಡಿದ್ರೆ ನೋವನ್ನಿಸುತ್ತದೆ, ಇನ್ನು ಈ ನದಿ ಸಾವಿನ ಕಥೆ ಮೆಲ್ಲನೆ ಹಳ್ಳಿಗರೇ ಹೇಳಬೇಕು. ಈಟಿವಿಯಲ್ಲಿನ ಆರಂಭದ ದಿನಗಳು ಅವು.ಸುತ್ತಮುತ್ತಲಿನ ಹಳ್ಳಿಗಳನ್ನು ಸುತ್ತಿ ನದಿಯ ಬಗ್ಗೆ ಕೇಳುತ್ತಿದ್ದೆ. ತಂಪಾದ ನೀರಲ್ಲಿ ಸ್ನಾನ ಮಾಡುತ್ತಿದ್ದ ದಿನಗಳ ಬಗ್ಗೆ ಕೂದಲು ಹಣ್ಣಾದ ತಾತ ವಿವರಿಸುತ್ತಲೇ ಇದ್ದರು. ನಿಧಾನವಾಗಿ ಕೈಗಾರೀಕರಣ ತನ್ನ ಹಸ್ತವನ್ನು ಚಾಚುತ್ತಿದ್ದಂತೆ ಎಲ್ಲವು ಬದಲಾಯಿತು. ನದಿಯನ್ನು ಉಳಿಸಿಕೊಳ್ಳಬೇಕೆಂಬ ಕನಿಷ್ಟ ಯೋಚನೆ ಯಾರಿಗು ಬರದೇ ಹೋಯಿತು.

ಈಗ ಕಾಲ ಮೀರಿದಂತಿದೆ. ಕೆರೆಗಳ ಮಾಲಿನ್ಯದ ಬಗ್ಗೆ ಚರ್ಚೆಯಾಗಿದೆ ಅಪಾಯದ ಗೆರೆ ದಾಟಿದ ಮೇಲೆ , ಒತ್ತುವರಿ ತೆರವು ಅನಿವಾರ್ಯವೆಂಬುದು ಅರಿವಾಗಿದೆ. ಹಾಗಾಗಿ ಸ್ವಲ್ಪ ಮಟ್ಟಿನ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಯಾಕಂದ್ರೆ ಬದುಕಬೇಕೆಂಬ ಮಾನವನ ಸ್ವಾರ್ಥಕ್ಕೆ ಬದಲಿಗೆ ನಿಸರ್ಗ ಮೇಲಿನ ಮಮತೆಯಿಂದಲ್ಲ.

ಬೆಂಗಳೂರಿನ ಮಾಲಿನ್ಯದ ಕುರಿತಂತೆ ಜೇನುಕುರುಬ ಮಹಿಳೆಯೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ. ಜೇನುಕುರುಬರ ಜೀವನದ ಬಗ್ಗೆ ವಿವರವಾದ ಕಾರ್ಯಕ್ರಮವನ್ನು ಮಾಡಲೆಂದು ಹೆಗ್ಗಡದೇವನ ಕೋಟೆಗೆ ಹೋಗಿದ್ದಾಗ ಶೂಟಿಂಗ್ ಮುಗಿದ ಮೇಲೆ ನೀವು ಬೆಂಗಳೂರಿಗೆ ಬನ್ನಿ ಅಂತ ಹೇಳಿದೆ,ಆಗ ಆಕೆ ನೇರಾನೇರವಾಗಿ ಅಷ್ಟೇ ಮುಗ್ಧವಾಗಿ ಪ್ರತಿಕ್ರಿಯಿಸಿದ ಬಗೆಯಿದು,

“ಅಯ್ಯೋ ನಿಮ್ಮ ಬೆಂಗಳೂರಿಗೆ ಯಾರು ಬರ್ತಾರೆ. ಅಲ್ಲಿ ಬರೀ ವಾಸನೆ ಇದೆ ನಾನಂತು ಬರೋದಿಲ್ಲಪ್ಪ. ನಮಗೆ ಕಾಡೇ ಸಾಕು. ನೆಮ್ಮದಿಯಾಗಿ ಒಳ್ಳೆಯ ಗಾಳಿ ಕುಡಿದುಕೊಂಡು ಇರ್ತೀವಿ. ಆದ್ರೆ ಅದಕ್ಕು ಬಿಡೋದಿಲ್ಲ. ಇಲ್ಲೂ ಬರ್ತಾರೆ. ಕಾಡಿಂದ ನಮ್ಮ ದೂರ ತಳ್ಳೋ ಪ್ರಯತ್ನ ಮಾಡ್ತಿದ್ದಾರೆ. ಎಲ್ಲಾ ಹೀಗೆ.”  ಎಂದು ಸುಮಾರು ಇಪ್ಪತ್ತು ನಿಮಿಷ ತೊಂದರೆ ಕೊಡೋರಿಗೆ ಬೈಯ್ತಾನೆ ಇದ್ರು. ಆಕೆಯ ಕೋಪದ ತೀವ್ರತೆ ನನಗೆ ಅರ್ಥವಾಗುತ್ತಿತ್ತು.,

pollution2ಆಕೆ ಹೇಳೋದರಲ್ಲು ಅರ್ಥವಿತ್ತು. ನಿಸರ್ಗದ ಜೊತೆ ಬದುಕಿದೋರಿಗೆ ಯಾವತ್ತು ನಿಸರ್ಗ ತೊಂದರೆ ಕೊಡಲಿಲ್ಲ. ನಮ್ಮ ಅತಿಯಾಸೆಯನ್ನು  ಆಕ್ರಮಣಶಾಲೀ ಪ್ರವೃತ್ತಿಯನ್ನು ಒಂದು ಹಂತದವರೆಗೆ ಸಹಿಸಿಕೊಂಡ ಪ್ರಕೃತಿ ಆಗಿಂದಾಗ್ಗೆ ಎಚ್ಚರಿಕೆಯನ್ನು ಕೊಡುತ್ತಲೇ ಇದೆ. ಕೊನೆಗೊಮ್ಮೆ ಕೊಡುವ ಏಟಿಗೆ ತತ್ತರಿಸಲಾರದ ಪರಿಸ್ಥಿತಿ. ಈಗ ಆಗಿರೋದು ಕೂಡ ಇದೆ,

ಚೆನ್ನೈ ನಲ್ಲಿ ಬಿದ್ದ ಭಾರೀ ಮಳೆಯಿಂದ ಅಲ್ಲಿ ಏನಾಯಿತು ಅನ್ನೋದು ನಮ್ಮ ಕಣ್ಣ ಮುಂದಿದೆ. ಹಾಗಾಗಿ ಆತಂಕವು ಇದೆ.

ಇನ್ನು ಕೆಲವು ವರ್ಷಗಳ ಹಿಂದೆ ಬಿಬಿಸಿ ಸಹಯೋಗದೊಂದಿಗೆ ವಾಯುಮಾಲಿನ್ಯದ ಕುರಿತಂತೆ ಡಾಕ್ಯುಮೆಂಟರಿಯೊಂದನ್ನು ಮಾಡುತ್ತಿರುವಾಗಲು ಮುಂದಾಗುವ ಅನಾಹುತವನ್ನು ಊಹಿಸಲಾಗಿತ್ತು. ಆದರು ಯಾರು ಎಚ್ಚೆತ್ತುಕೊಳ್ಳಲೇ ಇಲ್ಲ. ಅದ್ಯಾಕೋ ನಿಸರ್ಗದ ವಿಷಯ ಬಂದಾಗ ಸಣ್ಣದೊಂದು ಅಸಡ್ಡೆಯನ್ನು ವ್ಯವಸ್ಥೆ ನಾವು ತೋರಿಸುತ್ತಲೇ ಬಂದಿದ್ದೇವೆ. ಪ್ರಕೃತಿಯ ಔದಾರ್ಯವನ್ನು ನಾವು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದರಿಂದಲೇ ಸ್ಪಷ್ಟವಾಗಿ ಗೋಚರವಾಗುತ್ತದೆ. ಔದಾರ್ಯತೆಯನ್ನು ಮಿತಿ ಮೀರಿ ದುರ್ಬಳಕೆ ಮಾಡಿಕೊಂಡಾಗ ತನಗಿರುವ ಸಾಮರ್ಥ್ಯವನ್ನು ನಿಸರ್ಗವು ತೋರಿಸಿದೆ.

ಆದರೂ ಪಾಠ ಕಲಿಯುವುದಿಲ್ಲ. ಕಣ್ಣೆದುರೇ ಹೆಚ್ಚಿದ ವಾಯಮಾಲಿನ್ಯ ಹೆಚ್ಚಾಗುತ್ತಿರುವ ನಿಸರ್ಗದ ಮುನಿಸಿನ ಮಧ್ಯೆ ಇನ್ನು ಎಂಟು ವರ್ಷಗಳ ಹಿಂದೆ ಆ ಡಾಕ್ಯುಮೆಂಟರಿಯಲ್ಲಿ ವರ್ಷ ತುಂಬದ ಮಗು ಉಸಿರಾಡಲು ಪರದಾಡುತ್ತಿದ್ದ ದೃಶ್ಯ ಕಣ್ಣ ಮುಂದೆ ಬಂದು ನಿಂತಂತಿದೆ. ಬೆಂಗಳೂರಿಗೆ ಉದ್ಯೋಗಕ್ಕೆಂದು ಬಂದಿದ್ದ ಮಗುವಿನ ಹೆತ್ತವರು ಈಗ ಬಹುಷಹ ಬೆಂಗಳೂರು ತೊರೆದಿರಬೇಕು. ಇಲ್ಲಿದ್ದರೆ ಇನ್ನಷ್ಟು ತೊಂದರೆಯಾದೀತೆಂಬ ಆತಂಕ ಆಗಲೇ ಅವರ ಮುಖದಲ್ಲಿತ್ತು.

ಯಾಕೋ ಪ್ರಕೃತಿಗಾಗಿ ಬರೆದ ಕೆಲವು ಸಾಲುಗಳು ನೆನಪಾದವು,

ವಿನಮ್ರಳಾಗುತ್ತೇನೆ ನಾನು

ಸೋಮಾರಿಯಾಗದ ಸೂರ್ಯ

ನಿದ್ರಿಸದೆ ಉರಿಯುತ್ತಿರುವಾಗ

ವಿನಮ್ರಳಾಗುತ್ತೇನೆ ಪಾದವೂರಲು

ಜಾಗ ಕೊಟ್ಟ ಭೂಮಿಯ ಔದಾರ್ಯತೆಗೆ

ವಿನಮ್ರಳಾಗುತ್ತೇನೆ ನದಿ ,ಕೆರೆಗೆ

ನೀರನ್ನಿತ್ತು ಪೋಷಿಸಿದ ಪರಿಗೆ

ವಿನಮ್ರಳಾಗುತ್ತೇನೆ ನೆರಳ ನೀಡಿ

ಪ್ರತಿಯಾಗಿ ಏನೂ ನಿರೀಕ್ಷಿಸದ ಮರಗಳಿಗೆ

ಕೊಡಲಿ ಎತ್ತಿದ್ರರು ನೋವನುಂಗಿ ನಕ್ಕ ಬಗೆಗೆ

ವಿನಮ್ರಳಾಗುತ್ತೇನೆ ಪ್ರತಿ ದಿನ ಪ್ರತಿ ಕ್ಷಣ

ಮತ್ತೊಂದು ವಿಷಯದ ಕವರೇಜ್ ನ ನೆನಪಿನೊಂದಿಗೆ ಮತ್ತೆ ಭೇಟಿಯಾಗ್ತೀನಿ..

ಅಲ್ಲಿವರೆಗು ಟೇಕ್ ಕೇರ್

ಜ್ಯೋತಿ

One Response

  1. ಮಮತ
    November 21, 2016

Add Comment

Leave a Reply