Quantcast

‘ಸಹಕಾರಿ’ ಶೀತಕ್ಕೆ ಮೂಗು ಯಾಕೆ ಕತ್ತರಿಸುತ್ತೀರಿ?

rajaram tallur low res profile

ರಾಜಾರಾಂ ತಲ್ಲೂರು

ಭಾರತದಂತಹ ವೈವಿದ್ಯಮಯ ಬದುಕುಗಳಿರುವ ದೇಶವನ್ನು ಒಂದು ಸೂತ್ರದಲ್ಲಿ ಬಂಧಿಸಿರುವುದು ಇಲ್ಲಿನ ವೈವಿದ್ಯತೆಯೇ ಹೊರತು ಏಕರೂಪತೆ ಅಲ್ಲ. ಇದು ಸಂಸ್ಕ್ರತಿಗೆ ಮತ್ತು ಭಾಷೆಗೆ ಎಷ್ಟು ಸತ್ಯವೋ, ಆರ್ಥಿಕತೆಗೂ ಅಷ್ಟೇ ಸತ್ಯ. ಕೇಂದ್ರ ಸರ್ಕಾರ ಪ್ರತೀಬಾರಿ ಹಿಂದಿ ಹೇರಿಕೆಯ ಮಾತನ್ನಾಡಿದಾಗ, ಜನ ಅದನ್ನು ಕಟುವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಸಮಗ್ರ ದೇಶಕ್ಕೊಂದು ಏಕರೂಪಿ ಗಣವೇಶ ತೊಡಿಸುವ ಇಂತಹ ಕೇಂದ್ರ ಸರಕಾರದ ಹುನ್ನಾರಗಳು ಅಪಾಯಕಾರಿ.

avadhi-column-tallur-verti- low res- cropಮೊನ್ನೆ ರೂ. 1000, 500ರ ಕರೆನ್ಸಿಗಳು ರದ್ದಾದ ಬೆನ್ನಿಗೆ, ದೊಡ್ಡದೊಂದು ಪುಕಾರು ಎದ್ದಿರುವುದು ಸಹಕಾರಿ ವ್ಯವಸ್ಥೆಯ ವಿರುದ್ಧ. ಸಹಕಾರಿ ವ್ಯವಸ್ಥೆಯ ಪ್ರಬಲ ಹರಿಕಾರ ರಾಜ್ಯವಾಗಿರುವ ಕರ್ನಾಟಕದಲ್ಲಂತೂ ಪ್ರತಿಯೊಂದು ಜಿಲ್ಲೆಯಲ್ಲೂ ಸಹಕಾರಿ ಸೊಸೈಟಿಗಳ ಬಗ್ಗೆ ತಳವನ್ನೇ ಅಲ್ಲಾಡಿಸಬಲ್ಲ ಸುದ್ದಿಗಳು ಹರಡುತ್ತಿವೆ. ಎಲ್ಲ ಸೊಸೈಟಿಗಳ ಮೇಲೆ ಆದಾಯ ತೆರಿಗೆ ದಾಳಿಗಳಾಗುತ್ತಿವೆ, ಠೇವಣಿಗಳಲ್ಲಿ ಹೂಡಿಕೆಯನ್ನು ಫ್ರೀಝ್ ಮಾಡಲಾಗಿದೆ ಅಕೌಂಟುಗಳನ್ನೆಲ್ಲ ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂಬೆಲ್ಲ ಸುದ್ದಿಗಳು ಹರಡುತ್ತಿವೆ.

ದೇಶದಲ್ಲಿ ಸಹಕಾರಿ ತತ್ವದಡಿ ಸಂಸ್ಥೆಗಳು ಆರಂಭಗೊಂಡದ್ದು ಸ್ವಾತಂತ್ರ್ಯಕ್ಕಿಂತಲೂ ಬಹಳ ಮೊದಲೇ. 1890ರ ದಶಕದಲ್ಲಿ ಭೀಕರ ಬರಗಾಲ ಸಂಭವಿಸಿದಾಗ ಬ್ರಿಟಿಷ್ ಕಂಪಣಿ ಸರಕಾರದ ಮದರಾಸು ಆಡಳಿತವು ಪರಿಸ್ಥಿತಿಯನ್ನು ನಿಭಾಯಿಸಲು ಒಂದು ಸಮಿತಿ ರಚಿಸಿತು.  ಆ ಸಮಿತಿ 1898ರಲ್ಲಿ ನೀಡಿದ ವರದಿಯು ಗ್ರಾಮೀಣ ಆರ್ಥಿಕತೆಯನ್ನು ಬಲಗೊಳಿಸಲು ಸಹಕಾರಿ ತತ್ವದ ಬಳಕೆಯ ಬಗ್ಗೆ ಮಾತನಾಡಿತ್ತು ಮತ್ತು ಅಲ್ಲಿಂದಾಚೆಗೆ 1901ರಲ್ಲಿ ವೈಸರಾಯ್ ಲಾರ್ಡ್ ಕರ್ಜನ್ ಈ ಬಗ್ಗೆ ಪರಿಶೀಲನೆ ನಡೆಸಿ ಅನುಮತಿ ನೀಡಿದ ಮೇಲೆ, 1904ರಲ್ಲಿ ಸಹಕಾರಿ ಸಾಲ ಸೊಸೈಟಿಗಳ ಕಾಯಿದೆ 1904  ಅಸ್ತಿತ್ವಕ್ಕೆ ಬಂತು.

ಕರ್ನಾಟಕದಲ್ಲಂತೂ ಸಹಕಾರಿ ಚಳವಳಿ ದೇಶದಲ್ಲೇ ಪ್ರಖರವಾದುದಾಗಿದ್ದು, ರಾಜ್ಯದಾದ್ಯಂತ ಒಟ್ಟು ಅಂದಾಜು 3,53,000 ವಿವಿಧ ರೀತಿಯ ಸಹಕಾರಿ ಸಂಸ್ಥೆಗಳಿವೆ. ಅವುಗಳಲ್ಲಿ 1.75 ಕೋಟಿ ಮಂದಿ ಸದಸ್ಯರು 7000 ಕೋಟಿ ರೂಪಾಯಿಗಳ ಪಾಲುಬಂಡವಾಳ ಹೂಡಿದ್ದು, 19,000 ಕೋಟಿ ರೂಪಾಯಿಗಳ ಕಾರ್ಯವಹಿ ಬಂಡವಾಳ ಮಾರುಕಟ್ಟೆಯಲ್ಲಿದೆ. ಕರಾವಳಿಯಲ್ಲೂ ಮೊಳಹಳ್ಳಿ ಶಿವರಾಯರು, ಕಾರ್ನಾಡ್ ಸದಾಶಿವರಾಯರಂತಹ ನಿಸ್ಪ್ರಹ ಕಟ್ಟಾಳುಗಳ ಕಾರಣದಿಂದಾಗಿ ಸಹಕಾರ ಚಳವಳಿಯು ಇಲ್ಲಿನ ಆರ್ಥಿಕತೆಯ ತಳಪಾಯವನ್ನು ಭದ್ರವಾಗಿ ರೂಪಿಸಿದೆ.

ಇಂತಹ ಕಷ್ಟಪಟ್ಟು ಕಟ್ಟಿದ ಗೂಡುಗಳಲ್ಲಿ ಇತ್ತೀಚೆಗೆ ಬಿಲ್ಡರ್ ಗಳು, ಕಾಳಸಂತೆಕೋರರು, ಟ್ರೇಡರ್ ಗಳಂತಹ ಸುಲಭದುಡ್ಡಿನ ಸರದಾರರು ತೂರಿಕೊಂಡಿರುವುದು ಸುಳ್ಳಲ್ಲ. ಆ ಕಾರಣದಿಂದಾಗಿ ಸಹಕಾರ ಸೊಸೈಟಿಗಳು ಈಗ ಕ್ರಮೇಣ ದುಡ್ಡು ಠೇವಣಿ ಸಂಗ್ರಹಿಸಿ ಸಾಲ ಕೊಡುವ ಶೆಡ್ಯೂಲ್ ಬ್ಯಾಂಕ್ ಗಳ ಪಟ್ಟ ಕಟ್ಟಿಕೊಂಡಿವೆ. ಅಲ್ಲಿಂದಲೇ ಸಹಕಾರಿ ಸಂಘಗಳ ನೈತಿಕ ಅವನತಿಯೂ ಸಣ್ಣಗೆ ಆರಂಭಗೊಂಡಿದೆ.

ಈ ಸಂಘಗಳಲ್ಲಿ ಕಪ್ಪು ಹಣವನ್ನು ಸಂಗ್ರಹಿಸಿಡುವುದು ಸುಲಭ, ಆದಾಯ ತೆರಿಗೆ ಇಲಾಖೆ-ರಿಸರ್ವ್ ಬ್ಯಾಂಕುಗಳಿಗೆ ಇಲ್ಲಿನ ವ್ಯವಹಾರದ ಚಿತ್ರಣ ಸುಲಭವಾಗಿ ತಲುಪುವುದಿಲ್ಲ ಎಂಬ ನಂಬಿಕೆಯನ್ನೇ ಆಧಾರವಾಗಿಟ್ಟುಕೊಂಡು, ಸಹಕಾರಿಗಳ ನಡುವೆ ಸೇರಿಕೊಂಡ ಕಾಳಸಂತೆಕೋರರು, ಸಹಕಾರಿ ಚಳವಳಿಯ ಹಾದಿ ತಪ್ಪಿಸಿದರು ಎಂಬುದು ಸತ್ಯ. ಈಗ ಆದಾಯ ತೆರಿಗೆ ಇಲಾಖೆ, ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಗಳ ದೃಷ್ಟಿ ಈ ಸಹಕಾರಿ ಸೊಸೈಟಿಗಳತ್ತ ತಿರುಗಿದ್ದು, ನವೆಂಬರ್ 8ನೇ ತಾರೀಕಿನಿಂದೀಚೆಗೆ ಕರಾವಳಿಯಲ್ಲೇ ಹಲವು ಸೊಸೈಟಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದಿರುವುದು ಸುಳ್ಳಲ್ಲ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸೊಸೈಟಿಗಳಿಗೆ ನೇರವಾಗಿ ರಿಸರ್ವ್ ಬ್ಯಾಂಕಿನ ಕಣ್ಗಾಪಿನಡಿ ‘ಗಣವೇಶ’ ತೊಡಿಸುವ ಯೋಚನೆಗಳು ನಡೆದಿವೆಯಂತೆ. ಇದು ಸತ್ಯ ಸಂಗತಿಯೆಂದಾದರೆ, ದೇಶದ ವೈವಿದ್ಯತೆಯ ಮೇಲೆ, ಆರ್ಥಿಕ ವಿಕೇಂದ್ರೀಕರಣದ ಮೇಲೆ ನಡೆದ ಅಕಾರಣ ದಾಳಿ ಇದು ಎಂದೇ ತಿಳಿಯಬೇಕಾಗುತ್ತದೆ.

peopleಸಹಕಾರಿ ಚಳವಳಿಗಳ ಕಾರಣದಿಂದಾಗಿ ಗ್ರಾಮೀಣ ನಾಯಕತ್ವಗಳು ಹುಟ್ಟಿಕೊಂಡಿರುವುದು, ಗ್ರಾಮೀಣ ಆರ್ಥಿಕತೆ ಬಲಗೊಂಡಿರುವುದು ಮತ್ತು ಗ್ರಾಮ ಸ್ವರಾಜ್ಯ ಸಾಧ್ಯವಾಗಿರುವುದಕ್ಕೆ ಕರಾವಳಿಯಲ್ಲಂತೂ ಪ್ರತಿಯೊಂದು ಊರಿನಲ್ಲೂ ಉದಾಹರಣೆಗಳು ಸಿಗುತ್ತವೆ. ಇಲ್ಲಿನ ಹೆಚ್ಚಿನ ಶಾಸಕರು, ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹುಟ್ಟಿದ್ದೇ ಈ ವ್ಯವಸ್ಥೆಯ ಶಿಶುಗಳಾಗಿ. ಮಹಿಳಾ ಸಬಲೀಕರಣ, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಾಮರ್ಥ್ಯ ವ್ರದ್ಧಿ, ಕೃಷಿ-ತೋಟಗಾರಿಕೆಗಳ ಯಾಂತ್ರೀಕರಣ, ಗ್ರಾಮೀಣರಲ್ಲಿ ಆರೋಗ್ಯದ ಎಚ್ಚರ – ಈ ಎಲ್ಲ ಸಾಧನೆಗಳಲ್ಲೂ, ಕರಾವಳಿಯಲ್ಲಿ ಸಹಕಾರಿ ಚಳವಳಿಯ ಹೆಜ್ಜೆಗುರುತುಗಳು ಅಳಿಸಲಾಗದಂತಹವು.

ಇಂತಹ ಸಂಸ್ಥೆಗಳಲ್ಲಿ ಯಾರೋ ನಾಲ್ಕು ಜನ ಸೊಕ್ಕಿದ ದುಡ್ಡಿನವರು ಸೇರಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದ ಮಾತ್ರಕ್ಕೆ, ಈ ಸಂಸ್ಥೆಗಳ ಮೂಲ ತಳಹದಿಯನ್ನೇ ಅಲ್ಲಾಡಿಸುವ ಕ್ರಮಗಳನ್ನು ಕೈಗೊಳ್ಳುವುದು ಎಂದರೆ, ನೆಗಡಿ ಬಂತೆಂದು ಮೂಗನ್ನೇ ಕೊಯ್ದುಕೊಂಡಂತೆ. ಈ ಸಂಸ್ಥೆಗಳಲ್ಲಿ ಹೊಕ್ಕಿಕುಳಿತಿರುವ ಸೊಕ್ಕಿದ ದುಡ್ಡಿನ ಮಂದಿಯನ್ನು “ ಸ್ಮೋಕ್ ಔಟ್” ಮಾಡುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿ. ಆದರೆ, ಇಲ್ಲೂ ರೈತರು-ಗ್ರಾಮೀಣರು ಹೂಡಿಟ್ಟಿರುವ ಹಣವನ್ನು (ಅದಕ್ಕೆ ಅವರು ಸರ್ಕಾರಕ್ಕೆ ಲೆಕ್ಕ ತೋರಿಸದಿದ್ದರೂ) ತೆರಿಗೆ ಜಾಲದೊಳಗೆ ತರಲು ಕತ್ತು ಒತ್ತುತ್ತಿರುವುದು ಅಕ್ಷಮ್ಯ ಅಪರಾಧ.

ಸರ್ಕಾರ ತಾನುಮಾಡಿದ ವಿದೇಶಿ ಸಾಲ ತೀರಿಸಲು ಸಾಲ ಕೊಟ್ಟವರು (ADB, ವಿಶ್ವಬ್ಯಾಂಕ್ ಇತ್ಯಾದಿ) ಹೇಳಿದರೆಂದು ಗ್ರಾಮೀಣ ಸಹಕಾರಿಗಳನ್ನು ಕೂಡ ಕಟ್ಟುನಿಟ್ಟಾಗಿ ತೆರಿಗೆ ಜಾಲದೊಳಗೆ ಎಳೆದು ತಂದರೆ, ಇದರಿಂದ ದೇಶದ ಗ್ರಾಮೀಣಾಭಿವೃದ್ಧಿಗೆ ತೀವ್ರ ಹಾನಿ ಆಗಲಿದೆ. ಸರ್ಕಾರ ಇಲ್ಲಿಗೆ ಬರುವುದಿದ್ದರೂ ಇದು ಕೊಟ್ಟಕೊನೆಯ ತಂಗುದಾಣ ಆಗಬೇಕು.

unnamed

One Response

Add Comment

Leave a Reply