Quantcast

ಹೀಗೇ ಒತ್ತಡದ ನಡುವೆ ಬರೆದದ್ದು..

naa-divakar

ನಾ ದಿವಾಕರ

( ನೋಟು ವಿನಿಮಯ ಮತ್ತು ಜನಸಾಮಾನ್ಯರ ಪರದಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕಪ್ಪು ಹಣ ಮತ್ತು ನೋಟು ಅಮಾನ್ಯೀಕರಣವನ್ನು ಕುರಿತು ಗಂಭೀರವಾಗಿ ಕುಳಿತು ಯೋಚಿಸುವ ವ್ಯವಧಾನವನ್ನೂ ಕಳೆದುಕೊಂಡಿದ್ದೆ. ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗಿನ ಬ್ಯಾಂಕ್ ಕೆಲಸದ ಒತ್ತಡಗಳ ನಡುವೆ ಆಗಾಗ್ಗೆ ತೋಚಿದ ಫೇಸ್ ಬುಕ್ ನಲ್ಲಿ ಗೀಚಿದ ಕೆಲವು ಸಾಲುಗಳು ಇಲ್ಲಿವೆ. ಇವು ನ್ಯಾನೋ ಕಥೆಗಳೋ, ಅನಿಸಿಕೆಗಳೋ, ಹೈರಾಣಾದ ಮನಸ್ಸಿನ ಹುಚ್ಚು ಕೋಡಿ ಮಾತುಗಳೋ. ಓದಿ ಆನಂದಿಸಿ )

fill-in1

ನೆಲ ಸಮ ಮಾಡಲು ಜೆಸಿಬಿ ಬಾಗಿಲ ಹೊರಗೆ ನಿಂತಿತ್ತು
ನೆಲ ಗುಡಿಸುತ್ತಿದ್ದವ ಕೇಳಿದ, ಸಮ ಎಂದರೇನು ?

fill-in1

 

ತಾನು ಹಾಕಿದ ಗಾಳಕ್ಕೆ ಸಹಸ್ರ ಮೀನುಗಳು ಸಿಲುಕುತ್ತಿರುವುದನ್ನು ಕಂಡು ಸಂಭ್ರಮಿಸುತ್ತಿದ್ದ ಮೀನುಗಾರನಿಗೆ ದೂರದಲ್ಲಿದ್ದ ತಿಮಿಂಗಿಲವೊಂದು ಹೇಳಿತು –
ಮೊದಲು ನಾನು ಹಾಕುವ ಗಾಳದಿಂದ ತಪ್ಪಿಸಿಕೋ ನೋಡೋಣ !

fill-in1

ಕೊಳೆಗೇರಿಯೊಂದರ ಪಕ್ಕದಲ್ಲೇ ತನ್ನ ಬೃಹತ್ ಸೌಧ ನಿರ್ಮಿಸಲು
ಗುದ್ದಲಿ ಪೂಜೆ ನಡೆಸುತ್ತಿದ್ದ ಧನಿಕನಿಗೆ ಗಂಟೆ ಜಾಗಟೆಗಳ ನಡುವೆಯೂ
ಸಣ್ಣ ನಗುವೊಂದು ಕೇಳಿಸಿತು – ದೂರದಲ್ಲೊಂದು ತಲೆಬುರುಡೆ ಬಾಯ್ಬಿಟ್ಟು ಕುಳಿತಿತ್ತು !

fill-in1

 

ಅತ್ಯಂತ ಜನಪ್ರಿಯ ರಾಜಕೀಯ ನಾಯಕನೊಬ್ಬನನ್ನು ಮಾಧ್ಯಮ ಮಿತ್ರನೊಬ್ಬ ಕೇಳಿದ

– ಸ್ವಾಮಿ ನಿಮಗೆ ಜನಸಾಮಾನ್ಯರ ನಾಡಿ ಮಿಡಿತ ಅರಿವಾಗುತ್ತದೆಯೇ ?
ಥಟ್ಟನೆ ಜನನಾಯಕ ಕೇಳಿದ – ನಾಡಿ ಅಂದ್ರೇನಯ್ಯಾ ?’

fill-in1

ಆರು ಗಂಟೆಗಳ ಕಾಲ ಬಿಸಿಲ ಝಳಪಿನಲ್ಲಿ ನಿಂತು ಹೈರಾಣಾಗಿ

ಒಂದು ನೋಟು ಕೈಯ್ಯಲ್ಲಿ ಹಿಡಿದು ಮನೆಗೆ ಹಿಂದಿರುಗಿದವನನ್ನು ಅವನ ಮನೆಯ ಸಾಕು ನಾಯಿ ಕೇಳಿತು –
ನಾನೆಂದಾದರೂ ಕ್ಯೂನಲ್ಲಿ ನಿಂತಿರುವುದನ್ನು ನೋಡಿದ್ಯಾ ?

fill-in1

ಮೂರೇ ಜನರಿದ್ದ ತನ್ನ ಕುಟುಂಬಕ್ಕೆ ಮೂವತ್ತು ಅಂತಸ್ತಿನ ವೈಭವೋಪೇತ ಬಂಗಲೆಯನ್ನು

ಕಟ್ಟಿಸಿದ ಧನಿಕ ಹರುಷ ಉಕ್ಕಿ ತನ್ನ ಬಿಎಂಡಬ್ಲ್ಯು ಕಾರನ್ನು ಏರಲು ಹೋಗಿ,

ಪಂಚರ್ ಆಗಿದ್ದ ಕಾರಿನ ಟೈರ್ ನಲ್ಲಿ ಸಿಲುಕಿದ್ದ ಮೂಳೆಯ ತುಂಡನ್ನು ನೋಡುತ್ತಲೇ ನಿಂತುಬಿಟ್ಟ.

fill-in1

 

ಹೃದಯ ಸಂಬಂಧಿಯೊಬ್ಬರ ಶವಸಂಸ್ಕಾರ ಮುಗಿಸಿ ಮಸಣದಿಂದ

ಹೊರಬರುತ್ತಿದ್ದವನಿಗೆ ಕೀರಲು ದನಿಯೊಂದು ಕೇಳಿಸಿತು

– ನಿನ್ನ ಮುಂದಿನ ಹಾದಿ ಯಾವುದಯ್ಯಾ ?
ಅವನು ನಿರುತ್ತರನಾದ !

fill-in1

ತಾನು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎಂಬ ಭ್ರಮೆಯಲ್ಲಿರುವ

ದೊರೆಗೆ ತನ್ನ ಅಂಗಾಂಗಗಳ ಪರಿವೆ ಇರಬೇಕಲ್ಲವೇ ?

fill-in1

ಜೀವನವಿಡೀ ದೇವಸ್ಥಾನದ ಹೊರಗೆ ಬಿಡಿಗಾಸು ಭಿಕ್ಷೆಗಾಗಿ ಸಾಲಿನಲ್ಲಿ
ನಿಂತು ಹೈರಾಣಾಗಿದ್ದ ವ್ಯಕ್ತಿಯೊಬ್ಬ ಹೇಳಿದ – ನನ್ನ ಭಾರತ ಬ್ಯಾಂಕುಗಳ ಮುಂದಿದೆ ನೋಡಾ !

fill-in1

ಶವಾಗಾರವನ್ನು ಪ್ರವೇಶಿಸಿದ ಹೊಸ ಮೃತಾತ್ಮವನ್ನು ಅಲ್ಲಿಯೇ ತಂಗಿದ್ದ
ಮತ್ತೊಂದು ಆತ್ಮ ಪ್ರಶ್ನಿಸಿತು

– ನಿನಗೆ ಎಷ್ಟು ನೋಟುಗಳು ಸಿಕ್ಕಿದವು ?

fill-in1

ನೋಟು ವಿನಿಮಯದ ಭರಾಟೆಯಲ್ಲಿದ್ದ ಬ್ಯಾಂಕ್ ನೌಕರನೊಬ್ಬನ

ಕಿವಿಯ ಬಳಿ ಕುಳಿತ ಸೊಳ್ಳೆಯೊಂದು ಕಚ್ಚಲು ಹಿಂಜರಿದು ಮೆಲ್ಲನೆ ಉಸುರಿತು
– ನಿನ್ನಲ್ಲಿ ರಕ್ತವೇ ಇಲ್ವಲ್ಲೋ !!!!

fill-in1

ಶ್ರೀಮಂತರ ಮನೆಯ ರಾಜವೈಭೋಗದ ಮದುವೆಯೊಂದರಲ್ಲಿ
ಮಾಂಗಲ್ಯಂ ತಂತುನಾನೇನಾ ಎಂಬ ಮಂತ್ರವನ್ನಾಲಿಸಿದ ಶ್ರಮ ಜೀವಿಯೊಬ್ಬ
ಪುರೋಹಿತರನ್ನು ಕೇಳಿದ, ಸ್ವಾಮಿ ಮಾಂಗಲ್ಯದ ತಂತು ನಾನೇನಾ ?

fill-in1

ದಿನವಿಡೀ ಬೆವರು ಸುರಿಸಿ ಕೂಲಿನಾಲಿ ಮಾಡುತ್ತಾ ಹಸಿದು ಬೆಂದ
ವ್ಯಕ್ತಿಯೊಬ್ಬ ಒಂದು ನೋಟಿಗಾಗಿ ಸಾಲಿನಲ್ಲಿ ನಿಂತಾಗ ಅವನ ನೋಟ
ವೇಗದಿಂದ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರಿನ ಮೇಲಿತ್ತು.

fill-in1

ಇನ್ನು ಮುಂದೆ ಮನೆಯಲ್ಲಿ ಸಾವು ಸಂಭವಿಸಿದರೆ ಆತಂಕ ಬೇಕಿಲ್ಲ.

ಶವ ಸಾಗಿಸಲು ಯಾವುದೇ ಸಹಕಾರ ದೊರಕದೆ ಇದ್ದಲ್ಲಿ

ಹತ್ತಿರದಲ್ಲಿರುವ ಯಾವುದೇ ಸಾರ್ವಜನಿಕ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ

. ಕನಿಷ್ಠ ನಾಲ್ಕು ಸಿಬ್ಬಂದಿ ಇದ್ದೇ ಇರುತ್ತಾರೆ.

fill-in1

ಜೈಲಿನಲ್ಲಿದ್ದ ಅಕ್ರಮ ಆಸ್ತಿಯ ಒಡೆಯನ ರಾಜವೈಭವದ ಭಾಜಾ ಭಜಂತ್ರಿಯ ನಡುವೆ

ಪರಾರಿಯಾಗಿದ್ದ ವಂಚಕನೊಬ್ಬನಿಗೆ ರತ್ನಗಂಬಳಿಯ ಸ್ವಾಗತ

– ಅಮಾನ್ಯೀಕರಣವಾದದ್ದು ಹಳೆಯ ನೋಟುಗಳೋ ನೈತಿಕ ಮೌಲ್ಯಗಳೋ ?

fill-in1

ಕಿಂಗ್ ಫಿಷರ್ ಹಕ್ಕಿ ಸಂಕುಲದ ಒಡೆಯನ ಎದುರು ನಿಂತ
ಸಾವಿರ ರೂ ಮೌಲ್ಯದ ಕರೆನ್ಸಿ ನೋಟ್ ಹೇಳಿತು – ” ನೀನೇ ಅದೃಷ್ಟವಂತ ಕಣಯ್ಯಾ “!

fill-in1

ಶವ ಸಾಗಿಸುತ್ತಿದ್ದ ವಾಹನವೊಂದು ಪ್ರಪಾತಕ್ಕೆ ಬಿದ್ದು ವಾಹನದಲ್ಲಿದ್ದವರೆಲ್ಲೂ
ಶವಗಳಾದರು. ಕಮರಿಯೊಳಗಿಂದ ಸಣ್ಣ ಕೇಕೆಯೊಂದು ಕೇಳಿಸಿತು.

fill-in1

ತನ್ನ ಯಜಮಾನನ ಸೇವೆಯಲ್ಲಿ ದಿನವಿಡೀ ದುಡಿದು ದಣಿದು ಬೆವರಿಳಿಸಿ
ಮುಸ್ಸಂಜೆಯ ವೇಳೆಗೆ ಉಸ್ಸಪ್ಪಾ ಎಂದು ವಿರಮಿಸಿದ ಕತ್ತೆಯ ಬೆನ್ನಮೇಲೆ
ಯಜಮಾನ ಮತ್ತೊಂದು ಹೊರೆ ಹೊರಿಸಿದಾಗ ಕತ್ತೆ ಮನದಲ್ಲೇ ಹೇಳಿತು

– ಕತ್ತೆ ನಾನಲ್ಲ ಅವನು !

fill-in1

 

ಔದಾರ್ಯದ ಭಾವದಲ್ಲಿ ಶ್ರೀಮಂತನೊಬ್ಬ ದಾನ ಮಾಡಿದ ಒಂದು ದಟ್ಟಿ ಪಂಚೆ
ಈ ಹಿಂದೆ ತನ್ನಿಂದಲೇ ನಗ್ನರಾಗಿದ್ದವರ ಇತಿಹಾಸವನ್ನೇ ಮುಚ್ಚಿಹಾಕಿಬಿಟ್ಟಿತು.

fill-in1

ಇತಿಹಾಸದ ಕಂದಕಗಳಲ್ಲಿ ಗುಲಾಬಿಯ ಸುಗಂಧ ಶೋಧಿಸುತ್ತಿದ್ದಾಗ
ಕಾಲಿಗೆ ನೆಟ್ಟ ಮುಳ್ಳು ನೆನಪಿಸಿತು – ಎಲ್ಲಿರುವೆನೆಂದು !

fill-in1

ಹಾರಿ ಹೋಗುತ್ತಿದ್ದ ಪ್ರಾಣಪಕ್ಷಿಯನ್ನು
ಹಿಡಿಯಲು ಹೋದವ ಮರಳಲೇ ಇಲ್ಲ
ಪಕ್ಷಿಯೊಂದು ಕಾಯುತ್ತಲೇ ಇತ್ತು !

fill-in1

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು
ಮಾರಾಟದ ಕಡಲಿನಲಿ ಬಿಸಿಲು ಬೆಳದಿಂಗಳು
ನದಿಗಳು ಬತ್ತಿಹೋಗುತ್ತಿವೆ ಬಿಸಿಲು ಝಳಪಿಸುತ್ತಿದೆ
ಬೆಳದಿಂಗಳ ತಂಪಿನಲಿ ತೋಳಗಳು ಸಂಭ್ರಮಿಸುತ್ತಿವೆ.

fill-in1

ಬೆವರಿನ ಗುಳ್ಳೆಯೊಂದು ಅದ್ಧೂರಿ ಮದುವೆಯ
ಸುಗಂಧ ದ್ರವ್ಯಗಳ ನಡುವೆ ನುಸುಳಲು ಯತ್ನಿಸಿದಾಗ
ಬೂಟುಗಾಲುಗಳಡಿ ಸಿಲುಕಿ ನಲುಗಿಹೋಯಿತು
ಚೀತ್ಕಾರವನು ಕೇಳಿಸಿಕೊಂಡ
ನೆತ್ತರಿನ ಬಿಂದು ಮತ್ತೊಂದು ಬದಿಯಿಂದ
ಕೂಗಿ ಹೇಳಿತು
ನೀ ನನ್ನೊಡನೆ ಬಾ, ನಾವಿಬ್ವರೂ ಒಂದಾಗೋಣ !
ಸೆಲ್ಫಿಗಳ ಭರಾಟೆಯಲಿ ಗಾಂಧರ್ವ ವಿವಾಹ
ಗಮನಕ್ಕೇ ಬರದೆ ಹೋಯಿತು !

Add Comment

Leave a Reply