Quantcast

ಗೆದ್ದವರು ಯಾರು?  ಸೋತವರು ಯಾರು?

preamlatha_bಡಾ ಪ್ರೇಮಲತ ಬಿ

ವಿದೇಶ ಪ್ರಯಾಣ, ಕೈ ತುಂಬ ಕಾಂಚಾಣ

ಆಕಾಶ ಭೇದಿಸಿ ಹೊರಟೈತೆ, ಆಸೆ ವಿಮಾನ!

ವಿದೇಶದ ಪ್ರಯಾಣ, ವಾಸ, ಕೆಲಸ ಅಂದರೆ, ಸ್ವದೇಶಕ್ಕಿನ್ನ ಹೆಚ್ಚು ದುಡ್ಡು ಎಂಬುದು ಅಲಿಖಿತವಾಗಿ ವೇದ್ಯವಾಗುವ ಸಾಮಾನ್ಯ ತಿಳುವಳಿಕೆ. ಇದು ಬಹಳ ವರ್ಷಗಳಿಂದ ನಮ್ಮ ಸಮಾಜದ ಮೇಲ್ಮಟ್ಟದ, ಮಧ್ಯಮವರ್ಗದ ಕುಟುಂಬಗಳಲ್ಲಿ ಬಹುತೇಕ ಎಲ್ಲರ ತಲೆಯಲ್ಲಿ ಹೊಕ್ಕ ಹುಳ! ಬರೀ ಓದಿದರೆ ಸಾಲದು, ಡಿಗ್ರಿ ಪಡೆದರೆ ಮುಗಿಯಲಿಲ್ಲ, ಮಕ್ಕಳನ್ನು ವಿದೇಶಕ್ಕೂ ಕಳಿಸಿದರೆ ಪೋಷಕರಿಗೆ ಮುಕ್ತಿ ಎಂಬಂತೆ ತಂದೆ ತಾಯಿಯರು ತಮ್ಮ ಘನತೆಯನ್ನು, ಪ್ರತಿಷ್ಠೆಯನ್ನು ಏರಿಸಿಕೊಂಡು ಮೆರೆದ ಮಾಪನ!!.

america-flight-liberty-statueಕಳೆದ ಹದಿನೈದು-ಇಪ್ಪತ್ತು ವರ್ಷಗಳಲ್ಲಿ ಇದೊಂದು ಉದ್ಯಮದ ಮಟ್ಟಿಗೆ ಬೆಳೆದು ಬಂದ ರೀತಿಯಲ್ಲಿ ಭಾರತೀಯ ಸಮಾಜದ ಬೆಳವಣಿಗೆಯೂ ಆಯ್ತು. ಮನೆ ಮನೆಯಲ್ಲಿನ ಮಕ್ಕಳು ಪೈಪೋಟಿ ನಡೆಸಿ ಅಮೆರಿಕಾ,ಇಂಗ್ಲೆಂಡ್, ಕೊಲ್ಲಿ ರಾಷ್ಟ್ರಗಳು, ಆಷ್ಟ್ರೇಲಿಯ-ನ್ಯೂಜಿಲೆಂಡ್, ಮಲೇಶಿಯಾ-ಸಿಂಗಪುರ್ ಅಂತ ರೆಕ್ಕೆ ಕಟ್ಟಿಕೊಂಡು ಪುರ್ ಎಂದು ಹಾರಿದರು. ಇವರೆಲ್ಲ ಮತ್ತೆ ತಮ್ಮ ದೇಶಕ್ಕೆ-ಮನೆಗಳಿಗೆ ಮರಳಿ ಬರುತ್ತಾರೆ, ತಂದೆ-ತಾಯಿಯರ ಜೊತೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಾರೆ ಎಂಬ ಆಸೆ ಈ ಪೋಷಕರಲ್ಲಿ ಆಗ ಖಂಡಿತಾ ಇತ್ತು!!!

ಮಲಗಿದ್ರೆ ಕನ್ಸಲ್ಲಿ ಒಂತರಾ… ಕಚಗುಳಿ

ವಿದೇಶದಲ್ಲಿ ಬಿಟ್ಟೋಯ್ತು, ಸ್ವದೇಶದ ಮೈಚಳಿ!

ಕಾಣದ ವಿದೇಶವನ್ನು ಕನಸಿಸಿ, ಸಿನಿಮಾದಲ್ಲಿ ಕಂಡ ದೃಷ್ಯಗಳನ್ನು ಕಣ್ಣಾರೆ ಕಾಣುವ  ಆಸೆ ಹೊತ್ತ ಯುವ ಸಮಾಜ ಆ ಕಚಗುಳಿಯನ್ನು ಅರಸಿ ನೆಲ ಬಿಟ್ಟಿದ್ದೇ ಬಿಟ್ಟಿದ್ದು, ಅವರ ಕನಸು ಬಾಗಿಲು ತೆರೆದುಕೊಂಡು ಅವರನ್ನು ಅಪ್ಪಿಕೊಂಡದ್ದೂ ಉಂಟು, ಕಚ್ಚಿ ಎಚ್ಚರಿಸಿ ಕನಸನ್ನು ಕಳೆದು ವಾಸ್ತವಕ್ಕೆ ಎಳೆದು ತಂದು ಕೆಲಸದ ನೊಗಕ್ಕೆ ಕತ್ತು ಕೊಟ್ಟು ಸಿಲುಕಿದ್ದೂ ಆಯ್ತು!!

ಈ ಹೊಸ ಜಂಜಾಟದಲ್ಲಿ, ವಿದೇಶಗಳಲ್ಲಿ ಸಲ್ಲುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರಮವಾಗಿ ಮೇಲೇರದೆ ದಾರಿಯಿರದ ಕಾರಣ ಅಲ್ಲಿಯೇ ವಾಸ್ತವ್ಯವನ್ನು ಹೂಡಿ, ಸಂಸಾರ ನಡೆಸಬೇಕಾದ ಪರಿಸ್ಥಿತಿಯಲ್ಲಿ ಇವರು ಮುಳುಗಿದರು. ಅರ್ಧ ಈಜಿದ ಮೇಲೆ ಮುಂದುವರೆಯುವುದೋ, ಅಥವಾ ಹಿಂದರುಗಿ ಮತ್ತೆ ಅರ್ಧ ಈಜುವುದು ಲೇಸೋ ಅನ್ನೋ ಸಂಧಿಗ್ಧದಲ್ಲಿ ಒಂದು ದೊಡ್ಡ, ಓದಿದ, ಮುಂದುವರೆದ, ಪ್ರತಿಭಾವಂತ ಸಮುದಾಯ ಸಿಕ್ಕಿಕೊಂಡಿತು.

ಗಮ್ಮತ್ತೆ ಗಮ್ಮತ್ತು, ವಿದೇಶದ ಈ ಮತ್ತು

ಕುಡಿದಂಗೆ ಮೈಯೆಲ್ಲ ಬಿಸಿಯೇರಿ ಕಾವ್ಕಿತ್ತು….

ಒಂದಷ್ಟು ವಿದೇಶದ ಅನುಭವಗಳು, ಭವ್ಯತೆಗಳು, ಆದ್ಯತೆಗಳ ರುಚಿ ಸಿಕ್ಕ ಈ ವರ್ಗದ ವಿಚಾರವಂತರಲ್ಲಿ ಭೋರ್ಗರೆವ ಸಮುದ್ರದ ಸೃಷ್ಟಿಯಾಯ್ತು. ಯಾವುದು ಸರಿ-ಯಾವುದು ತಪ್ಪು, ಇರುವುದೋ-ಹೋಗುವುದೋ ಎಂಬ ಅಲೆಗಳ ಹೊಡೆದಾಟ ಅವರಿಗೆ ಅರಿವಿರುವಂತೆಯೋ, ಇಲ್ಲದೆಯೋ ಆಗಿಯೇ ಇರುತ್ತದೆ. ಮನಸ್ಸು ಮರ್ಕಟ ತಾನೇ? ದೂರದ ಬೆಟ್ಟ ಹಸಿರು ಅಂತ ಸಾಗರ ದಾಟಿ ಬಂದ ಮೇಲೆ ಮತ್ತೆ ಹಿಂತಿರುಗಿ ತಮ್ಮ ವ್ಯವಸ್ಥಿತವಾದ ಅವ್ಯವಸ್ಥೆಗೆ ಹೊಂದಾಣಿಕೆಯಾಗುವುದಾ ಅಥವಾ ಇಲ್ಲಿನ ವ್ಯವಸ್ಥೆಯೊಂದಿಗೆ ರಾಜಿಯಾಗಿ ವಿದೇಶದಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಅಲ್ಲಿನ ಸುಖಗಳಲ್ಲಿ ತ್ರಿಶಂಕು ಸ್ವರ್ಗವನ್ನು ಸೃಷ್ಟಿಸಿಕೊಂಡು ಬದುಕುವುದಾ? ನಿಟ್ಟುಸಿರೊಂದನ್ನು ಹೊರಹಾಕಿ ಬಲವಂತವಾಗಿ ಸ್ವದೇಶದ ಬಗ್ಗೆ ಕಣ್ಮುಚ್ಚಿದ್ದೂ ಆಯ್ತು.

ಬದಲಾಗದ ನಮ್ಮ ದೇಶದ ವ್ಯವಸ್ಥೆ, ಈ ಸ್ವದೇಶಿ-ವಿದೇಶಿಗರ ದುಡ್ಡಿನ ಚಮಕ್ಕಿನಲ್ಲಿ ಏರಿ ಕೂತ ಸ್ವದೇಶಿ ಭೂಮಿಯ,ಕಟ್ಟಡಗಳ ಬೆಲೆ ಇವರನ್ನು ಮರಳಿ ಬರದಂತೆ ಉರುಳಾಗಿ ಕಾಡಿದ್ದು ಕೂಡ ನಿಜ! ಹಾಗಂತಲೇ ನಿಟ್ಟುಸಿರಿಟ್ಟು, ಸ್ವದೇಶವನ್ನು ದೂರದ ಅಪ್ಯಾಯಮಾನತೆಯನ್ನಾಗಿ ಕಾಣುವ ಪರಿಸ್ಥಿತಿ ಇವರದ್ದಾಯ್ತು.

’ಡರ್…’ ಅಂತ ತೇಗಿದ್ರೆ ಬುರುಗೆಲ್ಲ ಮೇಲೆದ್ದು

ಮರ್ತೋಯ್ತು ಸ್ವದೇಶದೆಲ್ಲ ಬಾಬತ್ತು!

ಕಾಲ ಯಾರಿಗೂ ಕಾಯುವುದಿಲ್ಲ. ಆದರೆ ಈ ಮಕ್ಕಳನ್ನು ಕಳಿಸಿದ ಪೋಷಕ ವರ್ಗ ಬಹುಷಃ ಇವರಿಗಾಗಿ ಕಾದೂ ಕಾದೂ ಕಾದದ್ದುಂಟು. ವರ್ಷಕ್ಕೊಮ್ಮೆ, ಹಲವು ವರ್ಷಕ್ಕೊಮ್ಮೆ ಬಂದು ಹೋಗುವ ಮಕ್ಕಳ ಹಿರಿಮೆಯನ್ನು ಗುಣಗಾನ ಮಾಡುತ್ತಾ, ಒಂಟಿ ಬದುಕಿನ ಕೋಟಲೆಗಳ ಬಗ್ಗೆ ಗೊಣಗಾಡುವ ಸರದಿ ಇವರದ್ದಾಯ್ತು!!   ಬರದ ಮಕ್ಕಳಿಗಾಗಿ ದೊಡ್ಡ ಮನೆಯನ್ನು ಕಾದಿಟ್ಟು ಕೂರುವ ಪಾಡಾದರೂ ಏಕೆ?  ಜೊತೆಗೆ ಕಳ್ಳ ಕಾಕರ ಭಯ. ಒಂಟಿ ಅಜ್ಜ –ಅಜ್ಜಿಯರ ಕೊಲೆ ಗಡುಕರು ಬೀದಿ ಬೀದಿಯಲ್ಲಿ ನಡುಕ ಹುಟ್ಟಿಸಿ ಇವರನ್ನು ಸಮುದಾಯಗಳಲ್ಲಿ ಕಟ್ಟಿದ ’ಗೇಟೆಡ್ ಕಮ್ಮ್ಯುನಿಟಿಗಳಲ್ಲಿ’ ಸಣ್ಣ ಫ್ಲಾಟ್ ಗಳಿಗೆ ದೂಡಿತು. ವೃದ್ದಾಶ್ರಮಗಳು ತಲೆ ಎತ್ತಿದವು.

foreign-card-postನೀವು ದೂರದಲ್ಲಿದ್ದೀರ? ನಿಮ್ಮ ತಂದೆ ತಾಯಿಗಳ ಆರೋಗ್ಯದ ಭಯವೇ? ನಾವಿದ್ದೇವೆ ಎಂದು ಅಭಯನೀಡುವ ಅವಕಾಶವಾದಿ ಸೇವಾ ಸೌಕರ್ಯಗಳು ಹುಟ್ಟಿದವು. ಈ ಪೋಷಕ ವರ್ಗವೀಗ ತಂದೆ ತಾಯಿಯರ ಜೊತೆಯೋ , ಹತ್ತಿರವೋ ಇರುವ ಮಕ್ಕಳನ್ನು ನೋಡಿ ನಿಟ್ಟುಸಿರಿಡುತ್ತಿದ್ದರೆ ಆಶ್ಚರ್ಯವಿಲ್ಲ. ಅವತ್ತಿನ ಅವರ ಗರ್ವ ಇವತ್ತು ಮುರಿದಿದೆ. ಕಳಿಸಿದವರಲ್ಲಿ ಮತ್ತು ಹೋದವರಲ್ಲಿ ಕೂಡ.

’ಕಾಲಾಯ ತಸ್ಮೈ ನಮಃ’, ಬದಲಾಯ್ತು ಎಲ್ಲ

ಮೆಟ್ಟೆದ್ದು ನಿಂತು, ಕಳೆದೆಲ್ಲ ಗರ್ವ!

ಹಾಗಂತ,ಇವರು ಮಕ್ಕಳ ಒಳಿತಿಗೆಂದೇ ಅಲ್ಲವೇ ಇದನ್ನೆಲ್ಲ ಮಾಡಿದ್ದು? ಅದರಲ್ಲಿ ಯಾವ ಅನುಮಾನಗಳೂ ಇಲ್ಲ. ಕಾಲವನ್ನು ಮುಂಚೆಯೇ ಕಂಡವರು ಯಾರು?

ಇತ್ತ, ವಿದೇಶವನ್ನು ಸೇರಿದ ಮಕ್ಕಳೇನು ಸುಖದಲ್ಲೇ ಕೈ ತೊಳೆಯುತ್ತಿದ್ದಾರೆಯೇ?. ಕೆಲಸ, ಮನೆ, ಸಂಬಳ, ಉಳಿತಾಯ, ಸುಖ-ದುಃಖ ,ಬದುಕು ನೀಡುವ ಎಲ್ಲ ಅನುಭವಗಳಿಗೆ ಇವರೇನು ಅತೀತರೇ? ಖಂಡಿತಾ ಇಲ್ಲ.

ಸಾಮಾನ್ಯವಾದ ಎಲ್ಲ ಕೋಟಲೆಗಳ ಜೊತೆ ಇವರಲ್ಲಿ ಸ್ವದೇಶಿ ಸಂವೇದನೆಗಳು ಕೂಡ ಮನೆ ಮಾಡಿರುತ್ತವೆ.

ಮನೆ, ಬಟ್ಟೆ, ಕಾರೆಲ್ಲವಾದ್ರು ವಿದೇಶ ಮುನಿಯುತ್ತೆ ಮನಸು,ಇಲ್ದಿದ್ರೆ ಮನೆಯೂಟ! ಎನ್ನುವ ಪರಿಸ್ಠಿತಿ ಅವರದು. ಅದೂ ಬೇಕು, ಇದೂ ಬೇಕು ಎಂದರೆ ದಕ್ಕುತ್ತದೆಯೇ? ಹಾಗಾಗಿ ಗ್ರೇಟರ್ ಗುಡ್ ನ್ನು ಒಪ್ಪಿ ತುಟಿ ಕಚ್ಚಿ ತಮ್ಮದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಇವರು ನಡೆಸುತ್ತಿದ್ದಾರೆ. ಇವರ ಮಕ್ಕಳು ಕೂಡ ವಿದೇಶಿ ಸಂಸ್ಕೃತಿಗಳಲ್ಲಿ ಮುಳುಗಲೇಬೇಕಾದ ಅನಿವಾರ್ಯತೆಯ  ವಾಸ್ತವಿಕತೆಯಲ್ಲಿ ಬೆಳೆಯುವುದರಿಂದ ತಂದೆ –ತಾಯಿಯರ ಜಗತ್ತಿನಿಂದ ಬೇರೆಯಾಗಿ ಇನ್ನೊಂದು ಹೊಸ ತಳಿಯನ್ನು ಸೃಷ್ಟಿಸುತ್ತಿದ್ದಾರೆ. ಹಾಗಾಗಿ ಈ ಎರಡನೇ ತಲೆಮಾರಿನ ವಿಚಿತ್ರ ಜಗತ್ತೊಂದು ತಲೆ ಎತ್ತಿದೆ.ಇಲ್ಲಿಯೂ ಭಾರತೀಯ ಕುಟುಂಬ ಛಿದ್ರವಾಗುತ್ತಿದೆ.

ಮೊದಲ ಪೀಳಿಗೆಯ ಜನ ತಮ್ಮ ಬೇರುಗಳನ್ನು ಉಳಿಸಿಕೊಳ್ಳುವ ಕಾರಣಕ್ಕೆ ಜಗತ್ತಿನಾದ್ಯಂತ ತಮ್ಮ ತಮ್ಮ ಭಾಷೆಯ ಸಮುದಾಯಗಳನ್ನು ಕಟ್ಟಿ ವರ್ಷದಲ್ಲಿ  ಆಗೀಗ ಕಲೆತು, ತಾವು ಬಿಟ್ಟು ಬಂದ ತಾಯ್ನೆಲದ ಮಹತ್ವದ ವಿಚಾರಗಳನ್ನು ಮೆಲುಕು ಹಾಕಲು ಹೊಸ ಉತ್ಸಾಹ ತೋರುತ್ತಿದ್ದಾರೆ.

ಗಂಟೆಗಟ್ಟಳೆ ವದರಿದ್ರು  ಬರಿ ಇಂಗ್ಲೀಷ್ ತಹತಹಿಸುತ್ತೆ ಬಾಯ್ಬಿಡೋಕೆ, ನಾಲ್ಗೆ ಕರ್ನಾಟ! ಎನ್ನುತ್ತಾರೆ ಇವರು. ಹಾಗಾಗಿ ಕನ್ನಡ ಸಂಘಗಳನ್ನು ಎಲ್ಲೆಡೆ ಹುಟ್ಟಿ ಹಾಕಿದ್ದಾರೆ. ನಮ್ಮ ದೇಶದ, ನಾಡಿನ ಪ್ರಸಿದ್ದ ಕಲಾವಿದರ ತಂಡಗಳನ್ನು ಕರೆಸಿಕೊಂಡು ಅವರ ಪ್ರತಿಭೆಗೆ ಹೊಸ ಹೊಸ ವೇದಿಕೆಗಳನ್ನು ನಿರ್ಮಿಸುತ್ತಿದ್ದಾರೆ. ಇವತ್ತಿನ ಬಹಳಷ್ಟು ನಟರು, ಹಾಡುಗಾರರು, ನೃತ್ಯ-ನಾಟಕ ಮಂಡಳಿಗಳು ಇದೀಗ ವಿದೇಶ ಪ್ರವಾಸ ಕೈಗೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಹಾಗೆಯೇ ವಿದೇಶಗಳಿಗೆ ಹೋಗಿ ಬರುವ ತಂದೆ –ತಾಯಿಯರ ಸಂಖ್ಯೆಯೂ ಏರುತ್ತಿದೆ. ಸಿನಿಮಾಗಳೂ ಬರುತ್ತಿವೆ. ಆದರೆ ಇವೆಲ್ಲ ಎಲ್ಲಿಯವರೆಗೆ ಮುಂದುವರೆಯುತ್ತವೆ?

face-birdsಕಲೀತು ಮಿದುಳು, ಮಾಗಿತ್ತು ಹೃದಯ

ಪರದೇಶದಲ್ಲಿದ್ದೆ ಪೋಷಿಸಿ ತಾಯಿ ಬೇರನ್ನ!

ಅಂತ ಇವರು ಪರದೇಶಗಳಲ್ಲಿದ್ದೇ ತಾವು ಬದುಕಿರುವವರೆಗೆ ತಮ್ಮ ತಾಯ್ನೆಲದ ಕಂಪಲ್ಲಿ ಆಗಾಗ ಮಿಂದು, ಮಿಕ್ಕಂತೆ ವಿದೇಶದ ಬದುಕಿಗೆ ಒಗ್ಗಿ ಇಬ್ಬಂದಿಗೆಯ ಬದುಕನ್ನು ಬದುಕುತ್ತಿದ್ದಾರೆ. ಇಲ್ಲಿಯೇ ಹಬ್ಬ ಹರಿದಿನಗಳನ್ನು ಮಾಡುತ್ತಾರೆ, ದೇವಸ್ಥಾನಗಳನ್ನು ಕಟ್ಟಿಕೊಂಡಿದ್ದಾರೆ. ಕೊನೆಗಾಲದ ಬದುಕು, ಒಂಟಿತನಗಳು ಇವರ ತಂದೆ –ತಾಯಿಗಳನ್ನು ಕಾಡಿದಂತೆಯೇ ವಿದೇಶ ಸೇರಿ ಬದುಕು ನೆಡೆಸಿರುವ ಇವರನ್ನು ಕಾಡದೆ ಬಿಟ್ಟಿಲ್ಲ.

ಇದೊಂದು ಕಾಲಾವಲೋಕನವಷ್ಟೆ. ಕಾಲ ತಂದ ಬದಲಾವಣೆಗಳು, ಅದರ ವಿಪರ್ಯಾಸಗಳು, ಸಂತಸಗಳು, ದಲ್ಲಾಳಿಗಳು, ಲಾಭವಾದ್ದು, ಕಳೆದುಕೊಂಡದ್ದು , ಗಳಿಸಿದ್ದು ಇವುಗಳ ಪುನರಾವಲೋಕನ.ಯಾರನ್ನೂ ದೂರುವುದು ಉದ್ದೇಶವಲ್ಲ. ಎಲ್ಲರೂ ಪರಿಸ್ಥಿತಿಯ ಕೈ ಗೊಂಬೆಗಳೇ.

ಈ ಕಾಲವಲೋಕನದಲ್ಲಿ ದೊಡ್ಡ ಪ್ರಶ್ನೆಗಳು ಏಳುತ್ತವೆ. ಉಳಿಯುತ್ತವೆ.ಚರ್ಚೆಗೆ ಅನುವು ಮಾಡಿ ಕೊಡುತ್ತದೆ.

ಇದರಲ್ಲಿ ಗೆದ್ದವರು ಯಾರು? ಸೋತವರು ಯಾರು? ಲಾಭ ಮಾಡಿಕೊಂಡವರು ಯಾರು? ಉತ್ತರಗಳನ್ನು ನಿಮ್ಮ ಅಭಿಪ್ರಾಯಗಳಲ್ಲಿ ನಿರೀಕ್ಷಿಸಬಹುದೇ? ನಿಮ್ಮ ತೀರ್ಪು ಏನು?

One Response

  1. Sarojini Padasalagi
    November 23, 2016

Add Comment

Leave a Reply