Quantcast

ಅಚ್ಚೇದಿನಗಳಲ್ಲಿ ನಮಗೊಂದು ಕೆಲಸಕೊಡಿ..

ಚಲಂ ಹಾಡ್ಲಹಳ್ಳಿ 

ಜನಸಾಮಾನ್ಯ ಅಂದ್ರೆ ಇವತ್ತು ಲೆಕ್ಕಕ್ಕಿಲ್ಲ…

ನನ್ನ ಆರ್ಥಿಕ ಮೂಲ ಹೈನುಗಾರಿಕೆಯದ್ದು. ಬರದ ಈ ಕಾಲದಲ್ಲಿ ಜೋಳದ ಒಣಕಡ್ಡಿಯಲ್ಲೇ ನಮ್ಮ ಹಸುಗಳು ಬದುಕಿವೆ. ಕೆ.ಎಂ.ಎಫ್ ಫೀಡ್ ಕ್ವಿಂಟಾಲಿಗೆ 1800 ರೂ. ಹಸುಗಳ ಸಾಕುವುದು, ಅದರಿಂದ ಆದಾಯ ಕಾಣುವುದು ತುಂಬಾ ಕಷ್ಟದ ದಿನಗಳು ಇವು. ಯಾವ ರೈತನೂ ಹೇಳುತ್ತಿಲ್ಲ..ಅಥವಾ ಅವನನ್ನು ಯಾರೂ ಮಾತನಾಡಿಸುತ್ತಿಲ್ಲ.ಹಲವಾರು ಹಳ್ಳಿಗಳ ರೈತ ಇವತ್ತಿಗೂ ಬದುಕಿದ್ದಾನೆ ಎಂದರೆ ಅದು ಹೈನುಗಾರಿಕೆಯಿಂದ.

chalam-hadlahalliಹಳ್ಳಿಗಳ ಡೈರಿಯಲ್ಲಿ ಮೊದಲು ಹದಿನೈದು ದಿನಕ್ಕೊಮ್ಮೆ ದುಡ್ಡು ಕೊಡೋರು. ಈಗ ಹತ್ತಿರತ್ತಿರ ಒಂದು ತಿಂಗಳಾಯ್ತು… ದುಡ್ಡು ಕೊಟ್ಟಿಲ್ಲ.. ಹಾಲು ಉತ್ಪಾದಕರ ಸಂಘ ನಮ್ಮದೇ.. ನಮ್ಮವರೇ ಅದ್ಯಕ್ಷರು, ಕಾರ್ಯದರ್ಶಿಗಳು.. ಅವರಲ್ಲಿ ಏನಂತ ಒತ್ತಾಯ ಮಾಡೋದು..? ಅವರೂ ಡೈರಿಯಿಂದ ಹಣ ಬರದೇ ಕೊಡಲಾರರು.

ನಮ್ಮ ಮನೆಯ ಎರಡು ಮಕ್ಕಳ ವ್ಯಾನ್ ಫೀಸನ್ನು ಕಟ್ಟಲು ನಮ್ಮಣ್ಣನಿಗೂ ಹಾಲಿನ ದುಡ್ಡೇ ಮೂಲ. ನೆನ್ನೆ ಮಕ್ಕಳ ಹತ್ತಿರವೇ ಶಾಲೆಯವರು ಹಣ ತರದಿದ್ರೆ ವ್ಯಾನ್ ಹತ್ತಿಸಲ್ಲ ಅಂತ ಹೇಳಿ ಕಳಿಸಿದ್ದಾರೆ. ಮಕ್ಕಳಿಗೆ ಅದೆಂತಹಾ ಪರಿಣಾಮ ಬೀರಿರಬಹುದೋ..?

ಹಸುಗಳನ್ನು ರೈತರು ಬಂದ ಬೆಲೆಗೆ ಮಾರುತ್ತಿದ್ದಾರೆ. ಮೇವಿಲ್ಲದೇ ಹೇಗೆ ಸಾಕುತ್ತಾರೆ. ಬರದ ದಿನಗಳಲ್ಲಿ ಗಾಯದ ಮೇಲೆ ಬರೆ ಎಂಬಂತೆ ಹಸು ಸಾಕಿದವರಿಗೂ ಆದಾಯವಿಲ್ಲ.. ಒಂದು ತಿಂಗಳಾಗಿದೆ.. ಹಣ ಕೊಡುವುದು ಇನ್ನೂ ಒಂದು ತಿಂಗಳಾಗಬಹುದು… ದೇಶದ ಉದ್ದಾರಕ್ಕೆ ವ್ಯಾನಿನವನು ತಯಾರಿಲ್ಲ… ಅವನೂ ಮನುಷ್ಯನಲ್ಲವೇ..? ಅವನಿಗೇನು ಪೆಟ್ರೋಲ್ ಬಂಕಲ್ಲಿ ಡೀಸೇಲ್ ಸಾಲ ಕೊಡ್ತಾನೆಯೇ..?

ಮನೇಲಿ ನಮ್ಮ ಅಣ್ಣ ಇಟ್ಟಿದ್ದ 5600 ದುಡ್ಡನ್ನು ತಾನು ಅಕೌಂಟ್ ಮಾಡಿಸಿದ ಡಿ.ಸಿ.ಸಿ.ಬ್ಯಾಂಕಿಗೆ ಹಾಕಿ ವೈಟ್ ಮಾಡಿಕೊಂಡಿದ್ದಾನೆ. ಇವತ್ತು ಹಣ ತೆಗೆಯಲು ಹೋದರೆ ಬೆಳಗ್ಗೆ ಅರ್ದ ಗಂಟೆಗೆ ದುಡ್ಡು ಖಾಲಿ ಅಂದಿದ್ದಾರೆ. ಸಹಕಾರಿ ಬ್ಯಾಂಕುಗಳು ಅಪಾಯದಲ್ಲಿವೆ.

ಅದಕ್ಕೂ ಕೆಲವರು ಸಹಕಾರಿ ಬ್ಯಾಂಕಲ್ಲಿ ದುಡ್ಡು ವೈಟ್ ಆಗೋದಕ್ಕೆ ಒಳ್ಳೆ ಜಾಗ ಅಂತ ಹೇಳಿದ್ದಾರೆ. ಇರಬಹುದು ಆದರೆ ನನ್ನ ಅಣ್ಣನ ಸಮಸ್ಯೆಗೂ ಕಪ್ಪು ಬಿಳುಪಿಗೂ ಸಂಬಂಧವಿಲ್ಲ.

ಯಾವ ಕಾರಣಕ್ಕೂ ಹಸುಗಳ ಸಹವಾಸ ಸಾಕು. ನಾನೆಲ್ಲಿಯಾದರೂ ಸೆಕ್ಯೂರಿಟಿ ಕೆಲಸಕ್ಕೆ ಸೇರ್ತೀನಿ ಅಂತ ಕೂತಿದಾನೆ. ಎರಡು ಮಕ್ಕಳ ತಂದೆಯ ಯೋಚನೆ ಈ ಬುದ್ದಿವಂತರ ಯೋಚನೆಯಂತಿರುವುದಿಲ್ಲ. ಇಷ್ಟು ಅಸಹಾಯಕ ಸ್ಥಿತಿ ಎಂದೂ ಕಂಡಿರಲಿಲ್ಲ…

ಜನಸಾಮಾನ್ಯನಿಗೆ ಕಷ್ಟ ಕೊಟ್ಟ ಯಾವ ಯೋಜನೆಯೂ ಉದ್ದಾರವಾಗಿಲ್ಲ.. ನನ್ನ ಅಣ್ಣನಂತಹವರ ಶಾಪ, ಅವಮಾನ ಸಹಿಸುವ, ದಕ್ಕಿಸಿಕೊಳ್ಳುವ ಶಕ್ತಿ ಈ ಯೋಜನೆ ಮಾಡಿದವರಿಗಿಲ್ಲ.

ನೋಟ್ ಬ್ಯಾನ್ ಅಂತೆ… ದಿನಕ್ಕೆ ಒಂದು 2000 ಚಿಲ್ಲರೆ ಸಿಗದ ನೋಟಂತೆ, ಕಪ್ಪು ಹಣ ಬೆಳ್ಳಗಾಯ್ತಂತೆ.
ವಿಜಯ ಮಲ್ಯನ ಸಾಲ ಮನ್ನಾ ಅಂತೆ…ಅದು ಮನ್ನ ಅಲ್ಲ. ಲಿಸ್ಟಿಂದ ತೆಗೆದವ್ರೆ ಅನ್ನೋ ಆಂಬೋಣವಂತೆ, ದರಿದ್ರವ್ರು…

ಬನ್ನಿ ನಾಕು ಹಸುಗಳಿದಾವೆ… ಅದೆಷ್ಟಾಗುತ್ತೋ ಕೊಟ್ಟು ತಗೊಂಡೋಗಿ ದೇಶಭಕ್ತ ಎಜೆಂಟರೇ.. ಬೀದಿಗೆ ಬಿದ್ದಾಗಿದೆ.. ಖುಷಿಪಡಿ.
ಅಚ್ಚೇದಿನಗಳಲ್ಲಿ ನಮಗೊಂದು ಕೆಲಸಕೊಡಿ.. ಮೂಟೆ ಹೊರ್ತೀವಿ.. ಹೊಲದಲ್ಲಿ ಗೆಯ್ದು ಗೊತ್ತು.. ನಾವು ಬಡವರಂತ ಗೊತ್ತಿತ್ತು.. ಅದಕ್ಕೆ ನಮ್ಮಿಂದಲೇ ಮೊಹರು ಹೊಡೆಸ್ತಾ ಇದೀರಿ…

2 Comments

  1. Pradeep
    November 28, 2016

Add Comment

Leave a Reply