Quantcast

ಸಛ್ ಕಾ ಸಾಮ್ನಾ

 valli quadras

ಕೊಂಕಣಿ / ಕನ್ನಡ: ವಲ್ಲಿ ಕ್ವಾಡ್ರಸ್, ಅಜೆಕಾರು

” ’ಬಿಲ್ಕುಲ್ ಸತ್ಯ’…. ವ್ಹಾ! ಇನ್ನು ಬರೇ ಮೂರೇ ಪ್ರಶ್ನೆಗಳು, ನಿಮ್ಮ ಮತ್ತು ಒಂದು ಕೋಟಿ ರುಪಾಯಿಗಳ ಮಧ್ಯೆ ..”

ಟಿವಿ ಸ್ಟುಡಿಯೋ ಹಾಲ್‌ನಲ್ಲಿದ್ದ ನೂರಾರು ಜನರ ಕೈಚಪ್ಪಾಳೆಗಳ ನಡುವೆ ಆಂಕರ್ ರಾಜೀವ್ ಖಂಡೇಲ್‌ವಾಲ್ ಘೋಷಣೆ ಮಾಡಿದ. ನಾ ಮಾತ್ರ ಬೆವರಿದ್ದೆ. ಮಾತ್ರವಲ್ಲ, ಮುಖದ ಮೇಲಿದ್ದ ಒಂಥರದಾ ಅಪರಾಧಿ ಭಾವವನ್ನು ಬಚ್ಚಿಟ್ಟಲು ಪ್ರಯತ್ನಿಸುತ್ತಿದ್ದೆ.

ಒಂದು ಕೋಟಿ… ಇಡೀ ಜೀವನವನ್ನೇ ಸವೆಸಿದರೂ ಕೂಡಿಸಲಾಗದ ಮೊತ್ತ ಆದು, ಅಂತಹ ದೊಡ್ಡ ಮೊತ್ತ ಇನ್ನು ಕೆಲವೇ ಗಳಿಗೆಯಲ್ಲಿ ಕೂಡಿಸಬಹುದು ಎನ್ನುವಂತಹ ಅದೃಷ್ಟದ ದ್ವಾರ ನನ್ನ ಮುಂದೆ..

mastpic_sks’ಜಗತ್ತಿನಲಿ ಒಳಿತು/ಕೆಡುಕು ಅನ್ನೋದು ಕಾಲವಶದಲ್ಲಿರುತ್ತೆ, ಎಲ್ಲವೂ ಕ್ಷಣಿಕ, ಶಾಶ್ವತವಾಗಿರೋದು ಕೇವಲ ಜಯ, ಆದ್ರಿಂದ ಏನಾದರಾಗಲೀ ನಾನು ಗೆಲ್ಲಲೇಬೇಕಿತ್ತು, ಅದೇ ನನ್ ಜೀವನದ ಗುರಿ. ಈ ಜಗತ್ತು ಬರೇ ಜಯಿಸಿದವರನ್ನು ಮಾತ್ರ ನೆನಪಿಡ್ತಾರೆ, ಸೋತವರನ್ನಲ್ಲ’ – ಇದೇ ನನ್ ಜೀವನದ ತತ್ವಗಳಾಗಿದ್ದವು.

ನನಗೆ ಪಾಲಿಗ್ರಾಫ್ ಮೆಶಿನ್ ಮುಖಾಂತರ ಸುಮಾರು ಐವತ್ತು ಪ್ರಶ್ನೆಗಳನ್ನು ಕೇಳಿದ್ದರು, ನಾನು ಅರೆಪ್ರಜ್ಞೆಯಲ್ಲೂ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೆ. ಆ ಐವತ್ತು ಪ್ರಶ್ನೆಗಳಿಂದಾ ಆಯ್ದ ಇಪ್ಪತ್ತೊಂದು ಪ್ರಶ್ನೆಗಳನ್ನು ಈಗ ಪುನಃ ಟಿ.ವಿ. ಸ್ಟುಡಿಯೊದಲ್ಲಿ ಕ್ಯಾಮರಾ ಮುಂದೆ ಕೇಳಲಾಗುವುದು, ನಾನು ಈಗಲೂ ಸತ್ಯವನ್ನೇ ನುಡಿಯಬೇಕಿತ್ತು, ಸತ್ಯದ ಜತೆ ಇನ್ನೊಂದು ಮುಖಾಮುಖಿಯಿದು.

ಬೆಳಗ್ಗೆಯಿಂದ ಸ್ಟುಡಿಯೋದಲ್ಲಿ ’ಸಛ್ ಕಾ ಸಾಮ್ನಾ’ ದ ರೆಕಾರ್ಡಿಂಗ್ ಆಗುತ್ತಾ ಇತ್ತು. ನನ್ ಜತೆ ನನ್ ಮಡದಿ, ಅವಳ ತಾಯಿ, ನನ್ ತಾಯಿ, ನನ್ ತಮ್ಮ ಹಾಗೂ ನನ್ ಆಪ್ತ ಮಿತ್ರನೂ ಬಂದು ಆಂಕರ್ ರಾಜೀವ್ ಖಂಡೇಲ್‌ವಾಲ್ ಮುಂದೆ, ನನ್ ಜತೆ ಕೂತಿದ್ರು. ಪ್ರೇಕ್ಷಕರಲ್ಲಿ ನನ್ನ ನೂರಾರು ಅಭಿಮಾನಿಗಳು ಬಂದಿದ್ರು.

ಬಹುಶಃ ಒಬ್ಬ ಸಾಹಿತಿ ಇಶ್ಟು ಮೊತ್ತ ಜಯಿಸುವುದು ಇದೇ ಮೊದಲಬಾರಿ.

ಮೊದಲ ರೌಂಡಲ್ಲಿ ಹತ್ತು ಲಕ್ಷ, ಎರಡನೇಯಲ್ಲಿ ಇಪ್ಪತ್ತು ಲಕ್ಷ ನಾನಿಷ್ಟರಲ್ಲೇ ಜಯಿಸಿದ್ದೆ. ಮುಂದಿನ ಪ್ರಶ್ನೆಗಳು ಇಪ್ಪತ್ತೈದು, ಐವತ್ತು ಲಕ್ಷದ್ದು, ನಂತರ ಕೊನೆಯ ಪ್ರಶ್ನೆ ಒಂದು ಕೋಟಿದ್ದು.

ನನ್ನಂತೆಯೇ ನನ್ ಜತೆ ಬಂದಿದ್ದವರ ಮುಖದಲ್ಲೂ ಒಂದು ಥರಹಾ ಅಪರಾಧಿ ಭಾವ ಯಾಕೋ ನನ್ಗೆ ಕಾಣಿಸ್ತಿತ್ತು; ನನ್ಗೆ ಜಯಿಸಬೇಕಿತ್ತು.

‘ಹಸಿವು’ ನನ್ನ ಅತ್ಯಂತ ಜನಪ್ರಿಯ ಕಾದಂಬರಿಯ ಹೆಸರು. ಸಮಾಜದಲ್ಲಿ ಶಿಕ್ಷಣವಿದ್ದೂ, ನಿರುದ್ಯೋಗಿಯಾಗಿ, ಸ್ವಾಭಿಮಾನಿಯಾಗಿ ಸ್ವತಃ ’ಹಸಿವಿನಲ್ಲಿ’ ಬದುಕಿದ ಕೆಲವು ಯುವಕರಬಗ್ಗೆ ಕಥೆಯದು. ಮುಂದಿನ ಪ್ರಶ್ನೆ ಅದೇ ಪುಸ್ತಕಕ್ಕೆ ಸಂಬಂಧಪಟ್ಟಿದ್ದು;

“ವಿದೇಶದಲ್ಲಿ ದುಡಿಯುತ್ತಿದ್ದ ನಿಮ್ಮ ಒಬ್ಬ ಸಂಪಾದಕ ಆಪ್ತ ಮಿತ್ರ ತನ್ನ ನೌಕರಿ ಕಳೆದುಕೊಂಡ ಸಂಧರ್ಭದಲ್ಲಿ, ನೌಕರಿ ಕೊಡಿಸುವ ಒಂದು ಕಂಪೆನಿಗೆ ಒಂದು ರೆಫೆರನ್ಸ್ ಕೊಡಲು ನಿನ್ನಲ್ಲಿ ವಿನಂತಿಸಿದಾಗ, ನೀವು ಆತನಿಗೆ ಸಹಾಯ ಮಾಡೋ ಬದ್ಲು, ಅವನ ಬಗ್ಗೆ ಅಪಪ್ರಚಾರ ಮಾಡಿದ್ದು ಮಾತ್ರವಲ್ಲ, ಆತ ಘೋಷಿಸಿದ ಪುರಸ್ಕಾರದ ಮೊತ್ತ ಸುಲಿದಿದ್ದು ಸತ್ಯವಾ?”

rope313ನಾನು ಸತ್ಯವನ್ನೇ ನುಡಿಯಬೇಕಿತ್ತು, ಇದು ಖಂಡಿತವೂ ಸತ್ಯ. ನಾನು ಸಾಹಿತ್ಯಕ್ಕೆ ಬಂದಿದ್ದೇ ಹಣಕ್ಕೋಸ್ಕರ, ಖ್ಯಾತಿಗೋಸ್ಕರ, ಪ್ರಶಸ್ತಿಗೋಸ್ಕರ. ನನ್ನ ನೂರಾರು ಅಭಿಮಾನಿ ಮಿತ್ರರೆದುರು ನನ್ನ ಪ್ರತಿಷ್ಟೆ ಸ್ಥಾಪನೆಗೋಸ್ಕರ. ನನಗೆ ವರ್ಷದ ಸಾಹಿತಿ ಪ್ರಶಸ್ತಿ ಘೋಷಿಸಿದ ಕೆಲವೇ ತಿಂಗಳಲ್ಲಿ ಆ ಸಂಪಾದಕ ಮಿತ್ರನ ನೌಕರಿ ಕಳೆದುಕೊಂಡದ್ದಕ್ಕೆ ನನ್ ತಪ್ಪೇನಿಲ್ಲ. ನಾನು ಹಣ ಕೊಡೋಬದ್ಲು, ನೌಕರಿಗೆ ಶಿಫಾರಸು ಕೇಳಿದ್ದಕ್ಕೆ ನಾನು ಅವನನ್ನು ಅಪಹಾಸ್ಯ ಮಾಡಿದೆ. ಹೌದು – ಇದನ್ನು ಒಪ್ಪಿಕೊಳ್ಳುವ ಧೈರ್ಯ ನನಗಿದೆ, ನಾನು ಉತ್ತರ ಕೊಟ್ಟೆ;

“ಹೌದು, ಇದು ಸತ್ಯ”

ನನ್ನ ಜೊತೆ ಕೂತವರು ಮಾತ್ರವಲ್ಲ, ಸಭಿಕರು ಕೂಡಾ ನನ್ನಿಂದ ’ಹೌದು’ ಎಂಬ ಉತ್ತರ ಬರುತ್ತಿದ್ದಂತೆಯೇ ಮೌನವಾದರು. ಕೆಲವು ಕ್ಷಣ ಕ್ರೂರ ಮೌನ ಆವರಿಸಿತು. ಒಬ್ಬ ಪ್ರಾಮಾಣಿಕ ಸಾಹಿತಿ ನುಡಿದ ಸತ್ಯವದು. ಒಂದು ಕೋಟಿಯ ಗುರಿಯತ್ತ ದಾಪುಗಾಲು ಹಾಕುವ ಕಠೋರ ಸತ್ಯ ಆದು.

*********

ರಾಜೀವ್ ಖಂಡೇಲ್‌ವಾಲ್ ಮುಂದಿನ ಪ್ರಶ್ನೆಗೆ ತಯಾರಾಗುತ್ತಿದ್ದ;

ನಿಮ್ಮ ‘ನಿಷ್ಕಳಂಕ ಜೀವ’ ಎರಡು ಭಾಷೆಗಳಲ್ಲಿ ಅನುವಾದವಾದ ಕಾದಂಬರಿ, ನಿನ್ನ ಮುಂದಿನ ಪ್ರಶ್ನೆ ಹೀಗಿದೆ; ‘ನಿಮ್ಮ ವೈವಾಹಿಕ ಜೀವನದ ಹೊರಗೆ ನೀವು ಬೇರೆ ಹೆಂಗಸಿನ ಜತೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದೀರಾ?’

ಈ ಪ್ರಶ್ನೆ ಕೇಳಿ ನನ್ನ ಜೊತೆ ಕುಳಿತಿದ್ದ ನನ್ನ ಮಡದಿ, ಅವಳ ತಾಯಿ, ಹಾಗೂ ನನ್ನ ತಾಯಿ ಎಲ್ಲರ ಮುಖದ ಭಾವವೇ ಬದಲಾಯ್ತು. ನಾನು ಕಣ್ಮುಚ್ಚಿ ಕೂತಿದ್ರೂ, ನನ್ ಮನಸ್ಸಿನ ಕಣ್ಣುಗಳಿಂದ ನೋಡುತ್ತಿದ್ದೆ. ಐವತ್ತು ಲಕ್ಷದ ಈ ಪ್ರಶ್ನೆಯಿಂದ ದೂರ ಓಡೋಣ ಅನಿಸಿತು, ಆದರೆ ಸತ್ಯದ ಜತೆಗಿನ ಮುಖಾಮುಖಿಯಿದು. ನನಗೆ ಜಯಿಸಬೇಕಿತ್ತು, ಒಂದು ಕೋಟಿಯ ಕಡೆ ಓಡಬೇಕಿತ್ತು

ಕ್ಯಾಮರಾದ ಫೋಕಸ್ ನನ್ನ ಜತೆಯಿದ್ದ ಒಬ್ಬೊಬ್ಬರ ಮುಖದ ಮೇಲೆ ಇತ್ತು, ನನ್ನ ಮನದಲ್ಲಿ ಬೇಕು-ಬೇಡ ಭಾವಗಳ ಸಂಘರ್ಷವಿತ್ತು.

ಒಬ್ಬ ಖ್ಯಾತ ಸಾಹಿತಿ ಹಾಗೂ ಸತ್ಯದ ಜತೆಗಿನ ಮುಖಾಮುಖಿ. ನನ್ನ ಸಾಹಿತಿಕ ವ್ಯಕ್ತಿತ್ವವನ್ನು ನಗ್ನವಾಗಿಸುವ ಪ್ರಶ್ನೆಯದು.

‘ಹೌದು’ ನಾನು ಪುನಃ ಅದೇ ಉತ್ತರ ಕೊಟ್ಟೆ.

ಈಗ ಪಾಲಿಗ್ರಾಫ್ ಮೆಶಿನ್ ನತ್ತ ಕ್ಯಾಮರಾದ ಫೋಕಸ್ ಆಗಿತ್ತು, ಮೆಶಿನ್ ಕೆಲವೇ ಕ್ಷಣದಲ್ಲಿ ’ಹಸಿರು ದೀಪ’ ಬೆಳಗಿಸಿತು; ಪುನಃ ನನ್ನ ಉತ್ತರ ಜಯಿಸಿತ್ತು.

ಸಭಿಕರ ಚಪ್ಪಾಳೆಗಳ ಸದ್ದು ಕೇಳಿಸುತ್ತಿದ್ದಂತೆಯೇ ಅವು ನನ್ನ ಜಯಕ್ಕೋ ಅಥ್ವಾ ನನ್ನ ಅಂತರಂಗದ ಸೋಲಿಗೋ ಎಂದು ತಿಳೀಲಿಲ್ಲ. ಆದ್ರೂ ಆ ಶಬ್ಧದ ಮಧ್ಯೆ ನನ್ನ ಹೃದಯದ ಕೂಗು ಮಾತ್ರ ನನಗೆ ಸ್ಪಷ್ಟವಾಗಿ ಕೇಳಿಸ್ತಿತ್ತು. ನನಗೆ ಒಂದು ಕೋಟಿಯ ಗುರಿ ತಲುಪಬೇಕಿತ್ತು ಅಷ್ಟೇ.

‘ಐವತ್ತು ಲಕ್ಷ ಮೊತ್ತ ಜಯಿಸಿದಕ್ಕೆ ಹಾರ್ಧಿಕ ಅಭಿನಂದನೆಗಳು..’ ಈಗ ಉಳಿದಿದೆ ಒಂದೇ ಪ್ರಶ್ನೆ, ನಿಮಗೆ ಒಂದು ಕೋಟಿ ರೂಪಾಯಿ ಕೊಡೋ ಪ್ರಶ್ನೆ, ಆದ್ರೆ ಮೊದಲು ಒಂದು ಸಣ್ಣ ಕಮರ್ಶಿಯಲ್ ಬ್ರೇಕ್.

***********

bhavinlakhani-sachkasaamna4ಬ್ರೇಕ್ ಮುಗಿದು ವಾಪಸು ಬರುವ ವೇಳೆಗೆ ಮುಂದಿನ ಪ್ರಶ್ನೆ ತಯಾರಾಗಿತ್ತು;

‘ನಿಮ್ಮ ನಲವತ್ತು ವರ್ಷದ ಸಾಹಿತ್ಯಕ ಜೀವನದಲ್ಲಿ ನಿಮಾಗೇ ಬಹಳಷ್ಟು ಪ್ರಶಸ್ತಿ/ಪುರಸ್ಕಾರಗಳು ದೊರಕಿವೆ, ಸತ್ಯ ಹೇಳಿ; ಇದರಲ್ಲಿ ಎಷ್ಟು ಪ್ರಶಸ್ತಿಗಳು ನಿಮ್ಮ ಪ್ರಾಮಾಣಿಕ ಯೋಗ್ಯತೆಗೆ ಲಭಿಸಿವೆ? ಎಷ್ಟು ಪ್ರಶಸ್ಥಿಗಳು ನೀವು ಲಂಚಕೊಟ್ಟು, ಲಾಭಿ ಮಾಡಿ ಗಳಿಸಿದ್ದೀರಾ?’

ಬಹಳ ಕಠಿಣ ಪ್ರಶ್ನೆಯದು. ನಿಜ ಹೇಳಬೇಕೆಂದರೆ,  ಉತ್ತರ ತುಂಬಾ ಕಠಿಣವಾಗಿತ್ತು.

ನಾನು ಕೆಲವು ಕ್ಷಣ ಮೌನವಾಗಿದ್ದೆ, ನಾನು ಸತ್ಯ ನುಡಿಯಬೇಕಿತ್ತು, ಅದೇ ನನ್ನನ್ನು ನನ್ನ ಗುರಿಯತ್ತ ತಲುಪಿಸುತ್ತೆ.

ನಾನು ಕೇವಲ ನನ್ನ ಹಾಗೂ ನನ್ನ ಗುರಿಯ ಬಗ್ಗೆ ಯೋಚಿಸುತ್ತಿದ್ದೆ, ಜಯಿಸಲು ನಾನೇನೂ ಮಾಡಲು ಹಿಂಜರಿಯಲಾರೆ ಎಂದು ಇಲ್ಲಿವರೆಗೆ ಬಂದಿದ್ದೆ, ಆದರೆ ನನ್ನ ಗುರಿಯ ಪಯಣದಲ್ಲಿ ನನ್ನ ಜತೆ ಬಂದಿದ್ದವರೆಲ್ಲರೂ ನನ್ನ ಬದುಕಲ್ಲೂ ನನ್ನ ಜೊತೆ ಬಂದವರು ಹಾಗೂ ಬರುವವರು. ಈಗ ನಾನು ಸತ್ಯ ಹೇಳಿಬಿಟ್ಟರೆ ಅವರಿಗೆ ಯಾವ ರೀತಿಯ ಮಾನಸಿಕ ಯಾತನೆಯಾಗಬಹುದು ಎನ್ನುವ ಯೋಚನೆ ನನ್ನ ಮನಸ್ಸಲ್ಲಿ ತೇಲಿತು.

ಇದುವರೆಗೂ ನನ್ನ ಸಾಹಿತ್ಯಕ ಪ್ರತಿಭೆಯ ಬಗ್ಗೆ, ನನ್ ಜ್ಞಾನ, ನನ್ನ ವಿಚಾರಗಳ ಬಗ್ಗೆ ಅಭಿಮಾನ ಹೊಂದಿದವರು. ಎಲ್ಲರಿಗೂ ಇವತ್ತು ನನ್ನ ಬಣ್ಣ ಗೊತ್ತಾಗುತ್ತಾ ಹೋಯಿತು.

ಇದುವರೆಗೂ ನಾನು ಸತ್ಯವನ್ನೇ ನುಡಿದಿದ್ದೆ, ಒಂದು ಕೋಟಿಯ ನನ್ನ ಗುರಿ ತಲುಪಲು ನನ್ನ ಮುಂದೆ ಇದ್ದದ್ದು ಅದು ಒಂದೇ ಮಾರ್ಗವಾಗಿತ್ತು. ಆದರೆ ನಾನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಗೊತ್ತಾಗುತ್ತಾ ಹೋದಂತೆ ಯಾಕೋ ತಳಮಳ ಆರಂಭವಾಯಿತು.

ಇದೇ ಮೊದಲ ಬಾರಿಗೆ ನನ್ನ ಮನದಲ್ಲಿ ಒಂದು ಥರಾ ಭಯ ಶುರುವಾಯ್ತು, ನಾನಂದೆ;

“ನಾ ಕ್ವಿಟ್ ಮಾಡ್ತೇನೆ”

One Response

  1. John suntikoppa
    November 27, 2016

Add Comment

Leave a Reply