Quantcast

ಮೈಯೆಲ್ಲಾ ಜುಂ ಅಂತಾ ಜೀವ ಸಂಚಾರ..

rohith-150x150

ರೋಹಿತ್ ಎಸ್ ಹೆಚ್

ಪರೀಕ್ಷೆಗೋಸ್ಕರ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಹೇಳುವ ’ಸರ್’ ಆಗದೆ, ಬದುಕಿಗೆ ಬೇಕಾದ ಮಾರ್ಗದರ್ಶನ ನೀಡಿ, ವೈಚಾರಿಕತೆಯನ್ನು ಕಲಿಸಿ, ಬೆಳೆಸುವ ವಿಶೇಷ ಹಾಗೂ ನಿಜವಾದ ’ಗುರು ಕಾಳಜಿ’ ಇರುವುದರಿಂದಲೇ, ಕೆ.ವೈ.ನಾರಾಯಣ ಸ್ವಾಮಿ ಅವರು, ಶಿಷ್ಯವೃಂದದಲ್ಲಿ ’ಕೆ.ವೈ.ಎನ್. ಮೇಷ್ಟ್ರು’ ಎಂಬ ಪ್ರೀತಿಗೆ ಪಾತ್ರರಾಗಿರುವುದು.

ತರಗತಿಯ ಒಳಗೂ, ಹೊರಗೂ ಅವರಿಗಿರುವ ಶಿಷ್ಯವೃಂದದಲ್ಲಿ ನಾನೂ ಒಬ್ಬ ಎನ್ನುವುದೇ ನನಗೆ ಖುಷಿಯ ಸಂಗತಿ.  ಅವರ ಪರಿಚಯ ಆಕಸ್ಮಿಕ.  ಅವರ ಒಡನಾಟ ನನ್ನ ಪುಣ್ಯ.  ಅವರ ಈ ’ರಂಗ ಗೀತೆಗಳು’ ಪುಸ್ತಕಕ್ಕೆ ಈ ಲೇಖನ ಬರೆಯುತ್ತಿರುವುದು ನನಗೆ ಇಕ್ಕಟ್ಟಿನ ಸ್ಥಿತಿ. ಹೌದು, ಪಿ.ಎಚ್.ಡಿ ಮಾಡಿರುವವರ ಪುಸ್ತಕವೊಂದಕ್ಕೆ, ಎಲ್.ಕೆ.ಜಿ.ಯ ಶಿಶುವೊಂದು ಲೇಖನ ಬರೆದಂತಿರುತ್ತದೆ ಎಂದೇ ನಾನು ಈ ಬರಹವನ್ನು ಬರೆಯಲು ಹಿಂದೇಟು ಹಾಕಿದ್ದೆ.  ಹಾಗಾಗಿ, ಇದು ನನಗೆ ಇಕ್ಕಟ್ಟಿನ ಸ್ಥಿತಿ.

kyn-ranga-geete-coverಈ ಸಂದರ್ಭದಲ್ಲೇ ಸಂದರ್ಶನವೊಂದರಲ್ಲಿ ಗೌರೀಶ್ ಕಾಯ್ಕಿಣಿಯವರು ಹೇಳಿದ್ದ ಮಾತೊಂದು ನೆನಪಾಯಿತು.  “ರಸದ ಪರಿಜ್ಞಾನಕ್ಕೆ ಪಾಂಡಿತ್ಯಕ್ಕಿಂತ ಮಿಗಿಲಾಗಿ ರಸಿಕತೆ ಬೇಕು.  ಓದುಗನಲ್ಲಿ/ಕೇಳುಗನಲ್ಲಿ ಸಹೃದಯತೆ ಬೇಕು”
ಮೇಷ್ಟ್ರು ಬರೆದಿರುವ ಗೀತೆಗಳನ್ನ, ಅವರ ಕೃತಿಗಳನ್ನ ವಿಮರ್ಶಿಸುವ, ಅವುಗಳನ್ನು ತುಲನೆ ಮಾಡುವ ಪಾಂಡಿತ್ಯ ನನ್ನಲ್ಲಿಲ್ಲ.  ಆದರೆ, ಒಬ್ಬ ಸಾಮಾನ್ಯ ಕೇಳುಗನಾಗಿ ಅವರ ಗೀತೆಗಳನ್ನು ನಾನು ಹಾರ್ದಿಕವಾಗಿ ಮೆಚ್ಚಿದ್ದೇನೆ.  ಅವುಗಳ ಸೊಗಸಿಗೆ ಸೋತಿದ್ದೇನೆ.  ಅದನ್ನು ಒಪ್ಪಿಕೊಂಡೇ ಈ ರಸಪರಿಚಯದ ಸಾಹಸಕ್ಕೆ ಇಳಿದಿದ್ದೇನೆ.

ಇಲ್ಲಿರುವ ಗೀತೆಗಳಿಗೆ ಯಾವುದೇ ಪರಿಚಯದ ಅವಶ್ಯಕತೆಯೇ ಇಲ್ಲ.  ಅವುಗಳೆಲ್ಲವೂ ನೇರವಾಗಿ ಕೇಳುಗರ ಭಾವಪ್ರಪಂಚವನ್ನು ತಟ್ಟಿದಂತಹ ಗೀತೆಗಳೆ ಆಗಿವೆ!  ನಾಟಕಗಳ ಬಗ್ಗೆ, ರಂಗಗೀತೆಗಳ ಬಗ್ಗೆ ಏನೆಂದರೆ ಏನೂ ಪರಿಚಯವಿಲ್ಲದ ನನ್ನ ಸ್ನೇಹಿತನೊಬ್ಬ ’ಅನಭಿಜ್ಞ ಶಾಕುಂತಲ’ ನಾಟಕವನ್ನು ನೋಡಿದ ನಂತರ, ಅದರ ಹಾಡುಗಳಿಗೆ ಮನಸೂರೆಗೊಂಡಿದ್ದ.  ಹಾಡಿನ ಸಿ.ಡಿ. ತೆಗೆದುಕೊಂಡು, ಮನೆಯರಿಗೆಲ್ಲಾ ಕೇಳಿಸಿ ಸಂಭ್ರಮಿಸಿದ್ದ.  ಈ ಹಾಡುಗಳನ್ನು ಮೊದಲ ಬಾರಿ ಕೇಳಿದಾಗ ನನ್ನ ಪರಿಸ್ಥಿತಿಯೂ ಬೇರೆಯಾಗಿರಲಿಲ್ಲ; “ಮೈಯೆಲ್ಲಾ ಜುಂ ಅಂತಾ ಜೀವ ಸಂಚಾರ”.

ಆ ನಂತರ ಒಂದೊಂದೇ ಹಾಡುಗಳು ನನ್ನನ್ನು ಮರುಳು ಮಾಡುತ್ತಾ ಬಂದವು.  “ಆಕಾಸ ಭೂಮಿಗೆ ಧಾರೆ ಜಲಗಂಗೆ; ಮೈಯಾಗ ಮರುಳಾಗಿ ಬಂದಾಳೋ, ಮನ ಮುದದಿ ಸೋತು ನಿಂದಾಳೋ” ಎನ್ನುವಂತೆ. ಧಾರೆಯಾಗಿ ಹರಿದು ಬರುತ್ತಿದ್ದ ಹಾಡುಗಳಿಗೆ, ನಾನೂ, ನನ್ನೊಡನೆ ಹಾಡು ಕೇಳಿದವರೆಲ್ಲಾ ಸೋತು ನಿಂತಿದ್ದೆವು.

ಮೂರು, ಮೂರೂವರೆ ದಶಕಗಳ ಹಿಂದೆ ಕನ್ನಡ ಕವಿಗಳ ಕವನಗಳು ಭಾವಗೀತೆಗಳಾಗಿ ಕನ್ನಡದ ಮನೆ ಮನಗಳನ್ನು ಆವರಿಸಿಕೊಂಡಿದ್ದವು.  ’ಬಂದಾನೋ ಬಂದಾ ಸವಾರ’ ಎಂದು ಕನ್ನಡ ರಂಗಭೂಮಿ ಬಿ.ವಿ.ಕಾರಂತರ ಗೀತೆಗಳನ್ನು ಸಂಭ್ರಮಿಸಿತ್ತು. ಇವುಗಳ ಬಗ್ಗೆ ಪುಸ್ತಕಗಳಲ್ಲಿ ಓದಿದ್ದೆ, ಸಭೆ-ಸಮಾರಂಭಗಳಲ್ಲಿ ಹಿರಿಯರು ಮೆಲುಕು ಹಾಕುವುದನ್ನು ಕೇಳಿದ್ದೆ.  ಆದರೆ, ನನ್ನ ತಿಳುವಳಿಕೆಯ ಕಾಲದಲ್ಲಿ ಯಾವುದೇ ಆ ರೀತಿಯ ವಿದ್ಯಮಾನಗಳೇ ನಡೆಯುತ್ತಿಲ್ಲವಲ್ಲ ಎಂದು ಯೋಚಿಸುತ್ತಿದ್ದೆ.
ಹೊಸ ಕವನಗಳ ಭಾವಗೀತೆಯ ಸಿ.ಡಿ. ಬಿಡುಗಡೆಯಾಗಿ ಎಷ್ಟು ವರ್ಷಗಳಾಯಿತೋ ನೆನಪಿಲ್ಲ.  ಮಾರ್ಡ್ರನ್ ಆರ್ಟ್, ಹೊಸ ಪ್ರಯೋಗ ಎನ್ನುತ್ತಾ ನಾಟಕಗಳಲ್ಲಿ ಹಾಡುಗಳು ತಮ್ಮ ಜಾಗ ಕಳೆದುಕೊಂಡಿವೆ. ಆಗ, ’ಪಶ್ಚಿಮ ಕಡಲಿನ ಮಡಿಲಲ್ಲಿ ಅರುಣೋದಯವನ್ನು ಕಂಡೆ’ ಎನ್ನುವ ಸಾಲಿನಂತೆ, ನನಗೆ ಕಂಡಿದ್ದೇ ರಂಗಗೀತೆಗಳು.  ಸದ್ದಿಲ್ಲದೇ ಕನ್ನಡ ರಂಗಭೂಮಿಯಲ್ಲಿ ನಡೆಯುತ್ತಿರುವ ವಿದ್ಯಮಾನವೊಂದು ಕಣ್ಣೆದುರು ಕಾಣತೊಡಗಿತು.  ಅದೇ ಕೆ.ವೈ.ಎನ್. ರಂಗಗೀತೆಗಳು!

ಇಲ್ಲಿನ ಗೀತೆಗಳಲ್ಲಿ ಮಣ್ಣಿನ ಸೊಗಡಿದೆ ಆದರಿವು ಜನಪದ ಗೀತೆಗಳಲ್ಲ.  ಒಲವ ಹೂವಿನ, ಮನದ ನೋವಿನ ಭಾವ ತೀವ್ರತೆ ಇದೆ; ಆದರಿವು ಭಾವಗೀತೆಗಳ ಸಾಲಿನಲ್ಲಿ ನಿಲ್ಲುವುದಿಲ್ಲ.  ಹಳೆಗನ್ನಡದ ಸಾಲುಗಳಿವೆ ಆದರಿವು ಮಟ್ಟು, ಕಂದ ಪದ್ಯಗಳಲ್ಲ.

ಹೇಗೆ ರಂಗಭೂಮಿಯು ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುತ್ತದೆಯೋ, ಹಾಗೆಯೇ ಈ ರಂಗಗೀತೆಗಳೂ ಸಹ ಎಲ್ಲವನ್ನೂ ಒಳಗೊಂಡು, ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿವೆ; “ಕೆ.ವೈ.ಎನ್ ರಂಗಗೀತೆಗಳು” ಎಂಬ ಛಾಪನ್ನು ಮೂಡಿಸಿವೆ.

shakuntala3ಈ ಎಲ್ಲಾ ಗೀತೆಗಳು, ಮೇಷ್ಟ್ರು ರಚಿಸಿರುವ ನಾಟಕಗಳದ್ದೇ ಆಗಿದೆ.  ನಮಗೆಲ್ಲಾ ತಿಳಿದಿರುವಂತೆ ಅವರ ನಾಟಕಗಳ ವಿಷಯ, ವಸ್ತು ಐತಿಹಾಸಿಕ, ಪೌರಾಣಿಕ, ಜನಪದ, ಹೀಗೆ ಯಾವುದೇ ಹಿನ್ನೆಲೆ ಹೊಂದಿದ್ದರೂ, ಅವುಗಳು ವರ್ತಮಾನದ ಜೊತೆ ಸದಾ ಅನುಸಂಧಾನ ನಡೆಸುತ್ತಲೇ ಇರುತ್ತವೆ. ಹಾಗೆಯೇ ಅವರ ಗೀತೆಗಳೂ ಸಹ ಪ್ರಸ್ತುತವನ್ನು ಹಾಗೂ ಜೀವಪರ ಆಶಯವನ್ನು ಧ್ವನಿಸುವ ಗೀತೆಗಳಾಗಿ, ನಾಟಕದ ಒಟ್ಟಾರೆ ರಸಾಸ್ವಾದವನ್ನು ಹೆಚ್ಚಿಸಿವೆ.   ತೀವ್ರವಾದ ಅನುಭವವೊಂದು, ಭಾವನೆಯೊಂದು ಕೈ ಹಿಡಿದು ಜಗ್ಗಿದಾಗ ಆಗುವ ತಲ್ಲಣ, ರೋಮಾಂಚನ ಇಲ್ಲಿನ ಗೀತೆಗಳಲ್ಲಿದೆ.

ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಯ ತಲ್ಲಣವಿರಬಹುದು.
“ಎದೆಯೊಳಗಿನ ಮಧುಪಾತ್ರೆ ವಿಷವೀಗ.
ಕಿಚ್ಚಿಲ್ಲದೇ ಸುಡುತಿರುವ ಚಿತೆಯು ನಾನೀಗ”

ಸಮುದಾಯಗಳು ಅನುಭವಿಸುತ್ತಿರುವ ತಲ್ಲಣವಿರಬಹುದು.
“ಬಡವರ ಹಸಿವು ಎದ್ದು  ಸುಡುವಾಗ; ಭಗ ಭಗ ಭಗ ಭಗ
ಮಠದಲ್ಲಿ ಹೋಮವ ಮಾಡ್ತಾರೆ; ಧಗ ಧಗ ಧಗ ಧಗ”

ವಿಷಾದದ ತಲ್ಲಣವಿರಬಹುದು.
“ಕನಸೇ ಕನಿಕರಿಸು; ಒಮ್ಮೆ ಅವನ ತೋರಿಸು.
ಸುಖವೇ ಮರುಕಳಿಸು; ಒಮ್ಮೆ ಅವನ ಮರಳಿಸು”

ಹೀಗೆ, ಹಲವು ನೆಲೆಗಳ ತಲ್ಲಣಗಳು ಆಕರ್ಷಕವಾಗಿ, ಮಾರ್ಮಿಕವಾಗಿ, ಸಹಜ ಭಾಷೆಯಲ್ಲಿ ಮಿಡಿಯುತ್ತಿರುವುದರಿಂದಲೇ ಈ ಹಾಡುಗಳೆಲ್ಲವೂ ನಾಟಕದಾಚೆಗೂ ಕೇಳುಗರನ್ನು ಆವರಿಸಿವೆ. ಹಾಗಾಗಿಯೇ, ಇದುವರೆಗಿನ ಎಲ್ಲಾ ರಂಗಗೀತೆಗಳು ಒಟ್ಟಾಗಿ ಪುಸ್ತಕದ ರೂಪದಲ್ಲಿ ನಮ್ಮ ಕೈ ಸೇರಿರುವುದು.  ಭಾವದಲಿ ಹುಟ್ಟಿ, ಗಾಯನದಲಿ ಮಾಗಿ, ಸಂಗೀತದಲಿ ಮೆರುಗು ಪಡೆದು ಕೇಳುಗರ ಮನಸೂರೆಗೊಂಡ ಈ ಎಲ್ಲಾ ರಂಗಗೀತೆಗಳ ಧ್ವನಿಮುದ್ರಿಕೆಯೂ ಆದಷ್ಟೂ ಬೇಗ ರಸಿಕರ ಕೈ ಸೇರಲಿ ಎಂದು ಆಶಿಸುತ್ತೇನೆ.

ಇಲ್ಲಿರುವ ಗೀತೆಗಳು, ಹೇಳಿ ಅರ್ಥ ಮಾಡಿಸಬೇಕಾದ ಗೀತೆಗಳಲ್ಲ; ಕೇಳಿ / ಓದಿ ಅನುಭವಿಸಬೇಕಾದ ಗೀತೆಗಳು.  ಹಾಗಾಗಿ, ನೆನೆಯದೇ ರಂಗಸ್ಥಳಕ್ಕೆ ಬಂದ ವಿನಾಯಕನನ್ನೇ,

’ಬಣ್ಣದ ಗೀಳು ನಮ್ಮನ್ನು ಕೊರೆಯೆ?
ಆಟದ ಮಧ್ಯೆ ಬರುವುದು ಸರಿಯೇ?”
ಎಂದು ತರಾಟೆಗೆ ತೆಗೆದುಕೊಂಡು ರಂಗಸ್ಥಳದಿಂದ ಓಡಿಸಿದಂತೆ,  ನನ್ನನ್ನೂ ಓಡಿಸುವ ಮೊದಲೇ ನಾನು ನನ್ನ ಈ ಆಲಾಪವನ್ನು ನಿಲ್ಲಿಸುವುದು ಒಳ್ಳೆಯದು.

ಈ ಗೀತೆಗಳು ನಿಮ್ಮೆದೆಯ ರಾಗದಲ್ಲಿ ನಿತ್ಯ ನಿರಂತರವಾಗಿರಲಿ.  ಆ ರಸಗ್ರಹಣದ ಸ್ವಾದಸುಖ ನಿಮ್ಮ ಅನುಭವಕ್ಕೂ ಸಿಗಲಿ.

One Response

  1. Ravi
    November 26, 2016

Add Comment

Leave a Reply