Quantcast

ರಂಗಗುರು ಅಶೋಕ ಬಾದರದಿನ್ನಿ

ಅಗಲಿಕೆಯಲ್ಲಿ ಬಿಚ್ಚಿಕೊಂಡ ನೆನಪಿನ ಬುತ್ತಿ

shashikanth yadahalli

ಶಶಿಕಾಂತ ಯಡಹಳ್ಳಿ 

ನನ್ನ ರಂಗಭೂಮಿಯ ಅರಿವನ್ನು ವಿಸ್ತರಿಸಿದ ರಂಗಗುರು ಅಶೋಕ ಬಾದರದಿನ್ನಿಯವರು ತಮ್ಮ ಪಾತ್ರವನ್ನು ಮುಗಿಸಿ ವೇಷ ಕಳಿಚಿಟ್ಟು ನವೆಂಬರ್ 24 ರಂದು ಬೆಳ್ಳಂಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಖಾಯಂ ಆಗಿ ನೇಪಥ್ಯಕ್ಕೆ ಹೊರಟುಹೋದರು.

ವಯಕ್ತಿಕವಾಗಿ ನನ್ನ ರಂಗಭೂಮಿಯ ಬದುಕಲ್ಲಿ ಅಪಾರವಾದ ಪ್ರಭಾವ ಬೀರಿದವರಲ್ಲಿ ಬಾದರದಿನ್ನಿಯವರೂ ಒಬ್ಬರು. ಅದೇಕೆ ಹೀಗಾಗುತ್ತೋ ಗೊತ್ತಿಲ್ಲ. ಬಿಸಿ, ಸಿಜಿಕೆ, ಆರ್.ನಾಗೇಶ್, ಎ.ಎಸ್.ಮೂರ್ತಿ ಹೀಗೆ… ನನಗೆ ರಂಗಪಾಠ ಹೇಳಿಕೊಟ್ಟ ರಂಗ ಗುರುಗಳೆಲ್ಲಾ ಒಬ್ಬೊಬ್ಬರಾಗಿ ತಮ್ಮ ಸಾಧನೆ ಮುಗಿಸಿ ನೆನಪುಗಳ ಬಳವಳಿ ಕೊಟ್ಟು ಹೊರಟುಹೋದರು.

ashok-badaradinni1ಈಗ ಕೊಟ್ಟ ಕೊನೆಯ ಗುರು ಬಾದರದಿನ್ನಿಯವರೂ ನಿರ್ಗಮಿಸಿದ್ದು ಮುಂದಿನ ದಾರಿ ಗುರಿ ತೋರಿಸಲು ಜೀವಂತ ಗುರುಗಳೇ ಇಲ್ಲದ ಶೂನ್ಯ ಸ್ಥಿತಿ ನನ್ನದಾಗಿದೆ. ಬಾದರದಿನ್ನಿಯವರ ಜೊತೆಗೆ ನನ್ನ ಖಾಸಗಿ ಒಡನಾಟಗಳನ್ನಿಟ್ಟುಕೊಂಡೇ ಅವರ ವ್ಯಕ್ತಿತ್ವದ ಕೆಲವು ಆಯಾಮಗಳನ್ನು ತೆರೆದಿಡಲು ಈ ಲೇಖನದಲ್ಲಿ ಪ್ರಯತ್ನಿಸುತ್ತಾ ಗುರುಗೆಳೆಯನಿಗೆ ಅಕ್ಷರ ನಮನ ಸಲ್ಲಿಸುತ್ತಿರುವೆ.

ಬಾದರದಿನ್ನಿ ಎನ್ನುವ ಅರ್ಥವಿಲ್ಲದ ವಿಕ್ಷಿಪ್ತ ಹೆಸರಿನಷ್ಟೇ ವಿಚಿತ್ರವಾಗಿರುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದ ಅಶೋಕ್ ತಮ್ಮಲ್ಲಿದ್ದ ವಿಶಿಷ್ಟ ಪ್ರತಿಭೆಯನ್ನು ಇತರರಿಗೆ ಹಂಚಿಕೊಂಡೇ ಬಂದವರು. ಸಾಮಾನ್ಯ ಅಸಾಮಾನ್ಯ ಹಾಗೂ ಅತಿರೇಕ ಎನ್ನುವ ಮೂರು ರೀತಿಯ ವ್ಯಕ್ತಿತ್ವಗಳು ಅಶೋಕರವರ ಬದುಕಿನ ಭಾಗವಾಗಿಯೇ ಬೆಳೆದು ಬಂದಿದ್ದನ್ನು ನಾನು ಗಮನಿಸಿದೆ. ಯಾಕೋ ಏನೋ ನನ್ನ ಜೊತೆಗೆ ಮೊದಲಿನಿಂದ ಗುರು ಎನ್ನುವ ಹಾಗೆ ಅವರು ಇರಲೇ ಇಲ್ಲ. ಗೆಳೆಯನಂತೆಯೇ ಸಂವಾದ ಮಾಡುತ್ತಿದ್ದರು. ಎಲ್ಲರ ಜೊತೆಗೂಡಿರುವಾಗ ಅವರು ಇರುವುದೇ ಹಾಗೆ.. ಅತೀ ಸಾಮಾನ್ಯನಂತೆಯೇ ನಗು, ಜೋಕ್ಸು, ಹಾಸ್ಯಲಹರಿ ಮಾಡುತ್ತಲೇ ಆತ್ಮೀಯತೆಯನ್ನು ಸುತ್ತಲಿರುವವರ ಜೊತೆಗೆ ಅನಾವರಣ ಗೊಳಿಸುತ್ತಿದ್ದರು.

ಆದರೆ.. ನಾಟಕ ನಿರ್ದೇಶನ ಮಾಡುವಾಗ ತಾಲಿಂ ಆರಂಭವಾದರೆ ಸಾಕು ಅವರ ಅಸಾಮಾನ್ಯ ಪ್ರತಿಭೆಯ ಆವರಣ ಬಿಚ್ಚಿಕೊಳ್ಳುತ್ತಿತ್ತು. ಪ್ರತಿಯೊಂದು ಪಾತ್ರಗಳ ಮಾತು, ಕೃತಿ, ಚಲನೆ, ಭಾವನೆಗಳನ್ನು ರೂಪಿಸುವಲ್ಲಿ ಬಾದರದಿನ್ನಿಗೆ ಬಾದರದಿನ್ನಿಯೇ ಸಾಟಿ ಎನ್ನುವಂತಿತ್ತು. ಹೊರಗಿದ್ದಾಗ ಸಾಮಾನ್ಯನಂತೆ ಗೋಚರಿಸುವ ಅಶೋಕ್ ತಾಲೀಮಿನ ಸಂದರ್ಭದಲ್ಲಿ ಉಗ್ರಾವತಾರ ತಾಳುವುದನ್ನು ನೋಡಿದವರಿಗೆ ಭಯ ಹಾಗೂ ಭಕ್ತಿ ಎರಡೂ ಏಕಕಾಲದಲ್ಲಿ ಉಂಟಾಗುತ್ತಿತ್ತು. ವಯಕ್ತಿಕವಾಗಿ ಅತೀ ಅರಾಜಕ ಅಶಿಸ್ತಿನ ವ್ಯಕ್ತಿಯಾಗಿದ್ದ ಬಾದರದಿನ್ನಿ ಅದೆಷ್ಟು ರಂಗಬದ್ದತೆಯನ್ನು ಹೊಂದಿದ್ದರೆಂದರೆ ಯಾವುದೇ ಕಲಾವಿದ ಒಂಚೂರು ಅಶಿಸ್ತಿನಿಂದ ವರ್ತಿಸಿದರೂ ಉತ್ತರ ಕರ್ನಾಟಕದ ದೇಸಿ ಸಂಸ್ಕೃತ ಭಾಷೆಯ ದಾಳಿಗೆ ಒಳಗಾಗಬೇಕಾಗುತ್ತಿತ್ತು. ಸಾಮಾನ್ಯ ವ್ಯಕ್ತಿಯಾಗಿ ಆತ್ಮೀಯತೆಯನ್ನೂ ಅಸಾಮಾನ್ಯ ವ್ಯಕ್ತಿಯಾಗಿ ಶಿಸ್ತನ್ನೂ ತೋರಿಸುತ್ತಿದ್ದ ಬಾದರದಿನ್ನಿಯವರು ಕೆಲವೊಮ್ಮೆ ಕಲಾವಿದರ ಜೊತೆಗೆ ಅತಿರೇಕದ ವರ್ತನೆಯನ್ನೂ ತೋರುತ್ತಿದ್ದರು.

“ಯಾಕೆ ಗುರುಗಳೇ ಹೀಗೆಲ್ಲಾ ಕೂಗಾಡಿ ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ತೀರಿ” ಎಂದೊಮ್ಮೆ ಕೇಳಿದ್ದೆ. “ಗುರುಗಳು ಎಂದು ಹೇಳುವುದನ್ನು ಮೊದಲು ನಿಲ್ಲಿಸು.. ಗೆಳೆಯಾ ಅಂದರೆ ಸಾಕು. ಕಲಾವಿದರನ್ನು ನಾನು ಎಲ್ಲಕ್ಕಿಂತಾ ಹೆಚ್ಚಾಗಿ ಪ್ರೀತಿಸುತ್ತೇನೆ. ಆದರೆ.. ಅವರನ್ನು ತಿದ್ದುವ ಸಂದರ್ಭ ಬಂದಾಗ ಸ್ಟ್ರಿಕ್ಟ್ ಮೇಷ್ಟ್ರಾಗಬೇಕಾಗುತ್ತದೆ. ಇದು ಕೂಡಾ ಕಲಿಕೆಯ ಭಾಗವೇ ಆಗಿದೆ. ನಾನು ಕೇವಲ ನಾಟಕವನ್ನು ಮಾತ್ರ ನಿರ್ದೇಶಿಸಲು ಬಯಸುವುದಿಲ್ಲ. ಅಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ತಿದ್ದಿ ತೀಡಿ ಕಲಾವಿದರನ್ನಾಗಿ ರೂಪಿಸಲು ಶ್ರಮಿಸುತ್ತಿರುವೆ. ಅದಕ್ಕಾಗಿ ಕೆಲವೊಮ್ಮೆ ಜೋರು ಮಾಡುವ ಅನಿವಾರ್ಯತೆ ಇರುತ್ತದೆ” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಕೋಪ ಮಾಡಿಕೊಳ್ಳುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಾಗಲೂ ಒಂದಿಲ್ಲೊಂದು ದಿನ ಎಲ್ಲರಿಗೂ ಸಾವು ಬಂದೇ ಬರುತ್ತದೆ. ಸಾವಿಗೆ ಮುನ್ನ ಕೆಲವರನ್ನಾದರೂ ಕಲಾವಿದರನ್ನಾಗಿ ರೂಪಿಸಿದರೆ ಸಾರ್ಥಕತೆ ಲಭಿಸುತ್ತದೆಂದು ಫಿಲಾಸಪಿ ಹೇಳಿ ಬಾಯಿಮುಚ್ಚಿಸುತ್ತಿದ್ದರು.

ಇಂತಾ ವಿಕ್ಷಿಪ್ತ ಗುರು ನನಗೆ ಸಿಕ್ಕಿದ್ದು ಅಭಿನಯ ತರಂಗದಲ್ಲಿ. 1988 ರಲ್ಲಿ ಎ.ಎಸ್.ಮೂರ್ತಿಗಳ ಅಭಿನಯ ತರಂಗದಲ್ಲಿ ನಾನು ರಂಗಾಭ್ಯಾಸ ಮಾಡುತ್ತಿದ್ದಾಗ ಪಾಠ ಹೇಳಲು ಬಂದವರು ಅಶೋಕ ಬಾದರದಿನ್ನಿ. ಆಗ ರಂಗಭೂಮಿಯ ಶಿಸ್ತಿನ ಕ್ಯಾಪ್ಟನ್ ಬಿ.ಸಿ ಯವರು ಅಲ್ಲಿ ಪ್ರಾಂಶುಪಾಲರಾಗಿದ್ದರು. ಪಾಠದ ಆರಂಭಕ್ಕಿಂತಾ ಮೊದಲು ಬಾದರದಿನ್ನಿಯವರನ್ನು ನೋಡಿ ಮಾತಾಡಿಸಿದಾಗ ನಾಯಿ ಹೊಡೆಯುವ ಕೋಲಿನಂತಿರುವ ಈ ಪೀಚಲು ದೇಹದ ವಿಚಿತ್ರ ಮನುಷ್ಯ ಅದೇನು ಪಾಠ ಮಾಡಿಯಾರು? ಎಂಬ ಸಂದೇಹ ನನ್ನನ್ನು ಕಾಡಿದ್ದಂತೂ ಸತ್ಯ.

ಆದರೆ.. ಯಾವಾಗ ಪಾಠ ಆರಂಭಿಸಿದರೋ ಆಗ ನನ್ನ ತಿಳುವಳಿಕೆ ತಪ್ಪೆಂದು ಮನವರಿಕೆ ಆಯಿತು. ರಂಗಭೂಮಿಯ ತಂತ್ರಗಳನ್ನೆಲ್ಲಾ ತಮ್ಮದೇ ಆದ ವಿಡಂಬಣಾತ್ಮಕ ಶೈಲಿಯಲ್ಲಿ ಬಿಡಿಬಿಡಿಸಿ ಹೇಳಿದಾಗಿ ನನ್ನ ಮೈಯೆಲ್ಲಾ ಕಣ್ಣಾಗಿದ್ದು ಸುಳ್ಳಲ್ಲ. “ವೇದಿಕೆಯನ್ನು ಹೇಗೆ ಒಂಬತ್ತು ಬಾಗಗಳಾಗಿ ವಿಂಗಡಿಸಬೇಕು, ಯಾವ ಪಾತ್ರಗಳು ತಮ್ಮ ಗುಣಲಕ್ಷಣಗಳಿಗೆ ತಕ್ಕಂತೆ ಯಾವ ಭಾಗದಲ್ಲಿ ಇರಬೇಕು. ಯಾವ ಪಾತ್ರ ಯಾವ ರೀತಿಯ ಚಲನೆಯನ್ನು ಮಾಡಬೇಕು. ಚಲನೆ ಹಾಗೂ ಭಾವನೆಗಳಿಗಿರುವ ಅಂತರ್ ಸಂಬಂಧ ಹೇಗಿರಬೇಕು. ವ್ಯಕ್ತಿ ಪಾತ್ರವಾಗುವ ರೀತಿ ರಿವಾಜುಗಳೇನು..” ಹೀಗೆ ಹಲವಾರು ನಟನೆ ಹಾಗೂ ನಾಟಕದ ಗುಟ್ಟುಗಳನ್ನು ಹೇಳಿಕೊಟ್ಟರು.

ಇಂತದೇ ವಿಷಯಗಳನ್ನು ಬಿ.ಸಿ ಯವರೂ ಹೇಳುತ್ತಿದ್ದರಾದರು ಅವರದು ಅತಿಯಾದ ಉನ್ನತ ಭಾಷೆ ಹಾಗೂ ಗಾಂಭೀರ್ಯವಾದ ತೂಕದ ಮಾತು. ತುಂಬಾನೇ ಅಕಾಡೆಮಿಕ್ ಆಗಿ ಹೇಳುತ್ತಿದ್ದುದರಿಂದ ಅದ್ಯಾಕೋ ಬಿ.ಸಿ ಯವರ ಪಾಠಗಳು ನನಗಂತೂ ಕೇವಲ ಮಾಹಿತಿಯ ಮಹಾಪೂರ ಎನ್ನಿಸುವಂತಿತ್ತು. ಆದರೆ ಈ ಬಾದರದಿನ್ನಿ ಗುರುಗಳ ಮಾತುಗಳಲ್ಲಿ ಹೊರಹೊಮ್ಮುತ್ತಿದ್ದ ಹಾಸ್ಯಗಾರಿಕೆ, ತುಂಟುತನ ಹಾಗೂ ರಸಿಕತನಗಳು ಆಗ ಯುವಕನಾಗಿದ್ದ ನನ್ನನ್ನು ಬಹುವಾಗಿ ಆಕರ್ಷಿಸಿದ್ದವು. ರಂಜನೆಯ ಮೂಲಕ ಭೋದನೆ ಎನ್ನುವುದರ ಪ್ರಾತ್ಯಕ್ಷಿಕೆಯನ್ನು ನಾನು ಮೊದಲು ನೋಡಿದ್ದು ಎ.ಎಸ್.ಮೂರ್ತಿಗಳಲ್ಲಿ ತದನಂತರ ಬಾದರದಿನ್ನಿರವರಲ್ಲಿ.

ಅಭಿನಯ ತರಂಗಕ್ಕೆ ಮೇಜರ್ ಪ್ರೊಡಕ್ಷನ್ ಯಾವುದನ್ನು ತೆಗೆದುಕೊಳ್ಳುತ್ತೀರಿ ಎಂದು ಮೂರ್ತಿಗಳು ಬಾದರದಿನ್ನಿಯವರನ್ನು ಕೇಳಿದಾಗ ‘ಅಭಿಜ್ಞಾನ ಶಾಕುಂತಲೆ’ ಎಂದು ಉತ್ತರಿಸಿದರು. ಸರಳ ನಾಟಕಗಳನ್ನು ಬಿಟ್ಟು ಈ ಕ್ಲಿಷ್ಟಕರ ನಾಟಕವನ್ನು ಆಯ್ದುಕೊಂಡು ನಿರ್ದೇಶಿಸಲು ಒಪ್ಪಿಕೊಂಡ ಬಾದರದಿನ್ನಿಯವರಲ್ಲಿ ಆಗ ತಾಲಿಂ ಮಾಡಿಸಲೂ ಸಮಯವಿರಲಿಲ್ಲ. ಯಾಕೆಂದರೆ ಚಿತ್ರದುರ್ಗದ ಮುರಘಾಮಠದ ಜಮುರಾ ರೆಪರ್ಟರಿಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಅಭಿನಯದ ತರಂಗದ ನಟರು ಚಿತ್ರದುರ್ಗದ ಮಠಕ್ಕೆ ಬಂದರೆ ಮಾತ್ರ ಅಲ್ಲಿ ತಾಲಿಂ ಮಾಡಿಸುವ ಶರತ್ತಿನ ಮೇಲೆ ನಾಟಕ ನಿರ್ದೇಶಿಸಲು ಒಪ್ಪಿಕೊಂಡರು.

ನನಗೆ ನಾಟಕದಲ್ಲಿ ಪಾತ್ರವಾಗಲು ಬಹಳ ಆಸೆ ಇದ್ದರೂ ನಾನು ಕೆಲಸ ಮಾಡುತ್ತಿದ್ದ ಕಂಪನಿ ರಜೆ ಕೊಡಲು ನಿರಾಕರಿಸಿತು. ಆಗ ನನಗೆ ಹೊಟ್ಟೆಪಾಡು ಸಹ ಅನಿವಾರ್ಯವಾಗಿತ್ತು. ಇರುವುದನ್ನು ಹೇಳಿದೆ. ಸರಿ ಇಲ್ಲಿಯೇ ಇರು ಎಂದು ಹೇಳಿದ ಬಾದರದಿನ್ನಿ ಬಾಕಿ ಯುವಕರನ್ನು ಕರೆದುಕೊಂಡು ಚಿತ್ರದುರ್ಗಕ್ಕೆ ಹೊರಟರು. ಹದಿನೈದು ದಿನಗಳ ಕಾಲ ತಾಲಿಂ ಮುಗಿಸಿ ಅದೊಂದು ಭಾನುವಾರ ಎಲ್ಲರೂ ಮರಳಿ ಬಂದಾಗ ನನಗೆ ಅದೆಂತದೋ ತಳಮಳ. ನಾಟಕದಲ್ಲಿ ಪಾತ್ರವಾಗಲು ಸಾಧ್ಯವಾಗದೇ ಇದ್ದುದಕ್ಕೆ ಅತೀವ ಬೇಸರವಾಯಿತು.

ಆದರೂ ಗ್ರ್ಯಾಂಡ್ ರಿಹರ್ಸಲ್ ಅಭಿನಯ ತರಂಗದಲ್ಲಿ ಶುರುವಾಯಿತು. ಇನ್ನು ಮೂರು ದಿನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಫಿಕ್ಸಾಗಿತ್ತು. ಬೇಸರದಿಂದ ಒಂಟಿಯಾಗಿ ನಿಂತಿದ್ದ ನನ್ನ ಹೆಗಲ ಮೇಲೆ ಬಾದರದಿನ್ನಿಯವರ ಕೈಬಿತ್ತು. “ ಶಶಿ ಬೇಸರ ಮಾಡ್ಕೋಬೇಡಾ ಬಾರೋ ಇಲ್ಲಿ. ನೀನಿಲ್ಲದೇ ನಾಟಕ ಮಾಡುತ್ತೇನೇನೋ. ನೀನು ಈ ನಾಟಕದಲ್ಲಿ ಕಣ್ವ ಮಹರ್ಷಿಯ ಪಾತ್ರ ನಿರ್ವಹಿಸಬೇಕು ಎಂದು ಆತ್ಮೀಯವಾಗಿ ಬೆನ್ನು ತಟ್ಟಿದರು. ನನಗೆ ನಿಜಕ್ಕೂ ಅಚ್ಚರಿಯಾಯ್ತು. ದಾನ ಮಾಡದೇ ಪುಣ್ಯ ಸಿಕ್ಕಂತಾಯ್ತು. ಆಮೇಲೆ ಗೊತ್ತಾಗಿದ್ದೇನೆಂದರೆ ಶಕುಂತಲೆಯ ಸಾಕು ತಂದೆಯಾದ ಆ ಋಷಿಯ ಪಾತ್ರವನ್ನು ಯಾರಿಗೂ ಕೊಡದೇ ನನಗಾಗಿಯೇ ಬಾದರದಿನ್ನಿಯವರು ಮೀಸಲಿರಿಸಿದ್ದರು.

ಅವರ ಪ್ರೀತಿ ಹಾಗೂ ನನ್ನ ಮೇಲಿಟ್ಟಿದ್ದ ನಂಬಿಕೆಗೆ ನಾನಿವತ್ತಿಗೂ ಅವರಿಗೆ ಋಣಿಯಾಗಿರುವೆ. “ಏನು ಕೊಟ್ಟು ನಿರ್ದೇಶಕರನ್ನು ಬುಕ್ ಮಾಡಿಕೊಂಡಿರುವೆ, ನಿನಗಾಗಿಯೇ ಪಾತ್ರವನ್ನು ರಿಸರ್ವ ಮಾಡಿಸಿಕೊಂಡಿದ್ದೀಯಾ” ಎಂದು ಎ.ಎಸ್.ಮೂರ್ತಿಗಳು ನನ್ನ ಕಾಲೆಳೆದರು. ಆದರೆ ಅಲ್ಲೇ ಇದ್ದ ಬಾದರದಿನ್ನಿ “ಎಷ್ಟೇ ಆದರು ನಮ್ಮೂರು ಎನ್ನುವ ಸೆಳೆತ ಇದ್ದೇ ಇರುತ್ತಲ್ಲಾ ಮೂರ್ತಿಗಳೇ” ಎಂದು ಉತ್ತರಿಸಿದರು.

ಯಾಕೆಂದರೆ ನಾವು ಗುರುಶಿಷ್ಯರಿಬ್ಬರೂ ಬಾಗಲಕೋಟೆ ಜಿಲ್ಲೆಯವರಾಗಿದ್ದೆವು. ಬಾಗಲಕೋಟೆಯಿಂದ ನನ್ನೂರು ಹತ್ತು ಕಿಲೋಮಿಟರ್ ದೂರದಲ್ಲಿದ್ದರೆ, ಬಾದರದಿನ್ನಿಯವರ ಊರು ಅಚನೂರು ಹದಿನೈದು ಕಿ.ಮಿ. ದೂರದಲ್ಲಿದೆ. ಅವರು ಹುಟ್ಟಿದೂರನ್ನು ತೊರೆದು ಅದೆಷ್ಟೋ ವರ್ಷಗಳಾದರೂ ನೆರೆಹೊರೆಯ ಊರಿನವ ಎನ್ನುವ ಪ್ರೀತಿಗೆ ಮಹತ್ವ ಕೊಟ್ಟಿದ್ದರು. ಅದರಿಂದಾಗಿಯೇ ನನಗೆ ತಾಲಿಂಗೆ ಹೋಗದೇ ಪಾತ್ರ ಕೊಟ್ಟಿದ್ದರು. ನೆಲ ಹಾಗೂ ನುಡಿಯ ಸೆಳೆತ ಎಂದರೆ ಇದೇ ಇರಬೇಕು. ಪಾತ್ರವೇನೋ ಕೊಟ್ಟರು. ಆದರೆ ಮೂರೇ ದಿನಗಳಲ್ಲಿ ಹೇashok-badaradinni4ಗೆ ಪ್ರಮುಖ ಪಾತ್ರವೊಂದಕ್ಕೆ ಸಿದ್ದವಾಗುವುದು. ಸಹ ಪಾತ್ರಗಳೊಂದಿಗೆ ಹೊಂದಿಕೊಳ್ಳುವುದು. ಆಂತರಿಕ ಹಿಂಜರಿಕೆ ಹೆಚ್ಚಿತು. ಆದರೂ ಅದಕ್ಕೂ ಸಮಾಧಾನ ಹೇಳಿದ ಬಾದರದಿನ್ನಿಯವರು ನಿನ್ನ ಮೇಲೆ ನನಗೆ ನಂಬಿಕೆ ಇದೆ. ಅಳುಕದೇ ನಟನೆ ಮಾಡು ಎಂದು ದೈರ್ಯ ತುಂಬಿದರು. ಅದು ಹೇಗೋ ಬಾದರದಿನ್ನಿಯವರ ಮೇಲೆ ಭಾರ ಹಾಕಿ ಸಿದ್ದತೆ ಶುರುಮಾಡಿಕೊಂಡೆ.

ಎಲ್ಲರಿಗೂ ಒಂದು ದಾರಿಯಾದರೆ ಯಡವಟ್ಟನಿಗೆ ಇನ್ನೊಂದು ದಾರಿ ಎಂಬಂತೆ ಇದ್ದವರು ಬಾದರದಿನ್ನಿ ಎಂಬುದು ಸಾಬೀತಾಗಲು ರವೀಂದ್ರ ಕಲಾಕ್ಷೇತ್ರಕ್ಕೆ ಬಂದಾಗ ಅರಿವಿಗೆ ಬಂತು. ಎಲ್ಲರೂ ವೇದಿಕೆಯ ಮೇಲೆ ನಾಟಕ ಮಾಡಿ ಸಭಾಂಗಣದಲ್ಲಿ ಪ್ರೇಕ್ಷಕರನ್ನು ಕೂಡಿಸಿದರೆ ಈ ಪುಣ್ಯಾತ್ಮ ಕಲಾಕ್ಷೇತ್ರದ ವೇದಿಕೆಯಲ್ಲೇ ಪ್ರೇಕ್ಷಕರನ್ನು ಸುತ್ತಲೂ ಕೂಡಿಸುವ ವ್ಯವಸ್ಥೆ ಮಾಡಿದ್ದರು. ಕಲಾಕ್ಷೇತ್ರದ ಸೈಡ್ ವಿಂಗ್ಸಗಳನ್ನೆಲ್ಲಾ ತೆಗೆದಿರಿಸಿ ಬಟಾಬಯಲು ಮಾಡಿಸಿದ್ದರು. ವೃತ್ತಾಕಾರದಲ್ಲಿ ಗೆರೆ ಎಳೆದು ವೃತ್ತದ ಒಳಗೆ ಕಲಾವಿದರುಗಳು ಹಾಗೂ ವೃತ್ತದ ಹೊರಗೆ ಪ್ರೇಕ್ಷಕರು ಎಂದು ವಿಭಾಗೀಕರಿಸಿದರು. ಕಲಾಕ್ಷೇತ್ರದ ಬೆಳಕಿನ ವ್ಯವಸ್ಥೆಯನ್ನೇ ಬಳಸದೇ ಕೇವಲ ಪಂಜುಗಳ ದೀಪದಲ್ಲಿ ಇಡೀ ನಾಟಕವನ್ನು ಪ್ರದರ್ಶಿಸುವಂತೆ ಸಂಯೋಜನೆ ಮಾಡಿದ್ದರು.

ಇದು ಆಧುನಿಕ ರಂಗಭೂಮಿಯಲ್ಲಿ ವಿಶಿಷ್ಟವಾದ ಪ್ರಯೋಗವಾಗಿತ್ತು. ನನಗೋ ಒಳಗೊಳಗೆ ದಿಗಿಲಾಗಿತ್ತು. ಎ.ಎಸ್.ಮೂರ್ತಿಯವರ ಜೊತೆ ಸೇರಿ ಕೆಲವಾರು ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದರಿಂದ ವೃತ್ತ ರಂಗಭೂಮಿಯ ಅಭ್ಯಾಸವಾಗಿತ್ತು. ಆದರೂ ಏನಾಗುತ್ತೋ ಏನೋ ಎನ್ನುವ ಆತಂಕ ಕಾಡುತ್ತಿತ್ತು. ಅದೆಲ್ಲಿದ್ದರೋ ಏನೋ ಬಾದರದಿನ್ನಿ ಸಾಹೇಬರು ಇನ್ನೇನು ನಾಟಕ ಶುರುವಾಗುವ ಕೆಲವೇ ನಿಮಿಷಗಳ ಮುನ್ನ ಹತ್ತಿರ ಬಂದು ಬೆನ್ನು ತಟ್ಟಿದರು. ನಾನು ಗುರುಶಿಷ್ಯ ಪರಂಪರೆಯಂತೆ ಕಾಲು ಮುಟ್ಟಲು ಹೋದೆ. ಅದನ್ನು ವಿಫಲಗೊಳಿಸಿ ಅಪ್ಪಿಕೊಂಡರು.

ಅಂತೂ ಇಂತೂ ನಾಟಕ ಆರಂಭವಾಯಿತು. ಪ್ರತಿಯೊಬ್ಬರೂ ಚೆನ್ನಾಗಿ ಅಭಿನಯಿಸಿದರು ಯಾಕೆಂದರೆ ಅವರಿಗೆ ಬೇಕಾದಷ್ಟು ರಿಹರ್ಸಲ್ಸಗಳಾಗಿದ್ದವು. ಆದರೆ ನನಗಾಗಿರಲಿಲ್ಲ. ಅದ್ಯಾಕೋ ಅಭಿನಯಿಸುವಾಗ ನಂತರದ ಸಂಬಾಷಣೆ ಮೊದಲು ಹೇಳಿ ಮೊದಲಿನ ಮಾತು ಆಮೇಲೆ ಹೇಳಿಬಿಟ್ಟೆ. ಈ ವ್ಯತ್ಯಾಸ ನನಗೆ ಹಾಗೂ ನಿರ್ದೇಶಕರಿಗೆ ಬಿಟ್ಟು ಯಾರೆಂದರೆ ಯಾರಿಗೂ ಗೊತ್ತಾಗಲೇ ಇಲ್ಲ. ನಾಟಕದ ನಂತರ ಬಾದರದಿನ್ನಿ ದೂರ್ವಾಸಾವತಾರದಲ್ಲಿ ಬಂದು ಬೈಯುತ್ತಾರೇನೋ ಎನ್ನುವ ಆತಂಕ ನಿಜವಾಗಲಿಲ್ಲ. ಬೆನ್ನಿಗೊಂದು ಪುಟ್ಟ ಪೆಟ್ಟು ಕೊಟ್ಟ ನಿರ್ದೇಶಕರು “ಪರವಾಗಿಲ್ಲಾ ಸೈಕಲ್ ಹೊಡೆದರೂ ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳುವ ಕಲೆಯಾದರೂ ಸಿದ್ದಿಸಿದೆಯಲ್ಲಾ.. ನಟ ಆಗದಿದ್ದರೂ ನಿರ್ದೇಶಕನಾದರೂ ಆಗುತ್ತೀ ಬಿಡು” ಎಂದು ಭವಿಷ್ಯ ನುಡಿದರು. ಅವರು ಹೇಳಿದಂತೆಯೇ ಆಯ್ತು. ನಾನು ಮುಂದೆ ನಟನೆಯನ್ನು ಕಡಿಮೆ ಮಾಡಿ ನಿರ್ದೇಶನ ಹಾಗೂ ಬರವಣಿಗೆಯತ್ತ ಹೆಚ್ಚು ತೊಡಗಿಕೊಂಡೆ. ನಿರ್ದೇಶನಕ್ಕೆ ಇಳಿಯಿಲು ಬಾದರದಿನ್ನಿ ನನಗೆ ಸ್ಪೂರ್ತಿಯಾದರೆ ಬರವಣಿಗೆಗೆ ನಿಸ್ಸಂದೇಹವಾಗಿ ಎ.ಎಸ್.ಮೂರ್ತಿಗಳೇ ಪ್ರೇರಕರಾದರು.

ರಂಗಕರ್ಮಿ ಸಿಜಿಕೆಯವರು ತೀರಿಕೊಂಡಾಗ ಅವರ ಬದುಕು ಹಾಗೂ ಸಾಧನೆಗಳನ್ನು ಆಧರಿಸಿ “ರಂಗಜಂಗಮನಿಗೆ ನುಡಿ ನಮನ” ಎನ್ನುವ ಸಿಜಿಕೆ ಕುರಿತ ಲೇಖನಗಳ ಸಂಕಲನಗಳ ಪುಸ್ತಕವನ್ನು ಬರೆದಿದ್ದೆ. ರಂಗನಿರಂತರ ತಂಡವು ಅದನ್ನು ಪ್ರಕಟಿಸಿತ್ತು. ಅದರ ಒಂದು ಪ್ರತಿಯನ್ನು ಬಾದರದಿನ್ನಿಯವರಿದ್ದ ಚಿತ್ರದುರ್ಗಕ್ಕೂ ಕಳುಹಿಸಿ ಕೊಟ್ಟಿದ್ದೆ. ಒಂದು ವಾರದ ನಂತರ ಬೆಂಗಳೂರಿಗೆ ಬಂದಿದ್ದ ಬಾದರದಿನ್ನಿಯವರು ಅರ್ಜೆಂಟಾಗಿ ಕಲಾಕ್ಷೇತ್ರಕ್ಕೆ ಬಂದು ಬೇಟಿಯಾಗಲು ಹೇಳಿ ಕಳುಹಿಸಿದ್ದರು. ಯಾಕಿರಬಹುದು ಎಂದು ಕುತೂಹಲದಿಂದ ಹೋಗಿ ಬೇಟಿಯಾದರೆ ಅವರದೇ ಶೈಲಿಯಲ್ಲಿ ತಬ್ಬಿಕೊಂಡು “ಆಹಾ ಎಂತಾ ಪುಸ್ತಕ ಬರೆದಿದ್ದೀಯಾ? ಸಿಜಿಕೆ ಪುಸ್ತಕ ಓದಿ ಸಿಜಿಕೆ ಒಡನಾಟವೇ ನೆನಪಾದಂತಾಯ್ತು” ಎಂದು ಆತ್ಮೀಯವಾಗಿ ಮಾತಾಡಿದರು. ಆಗ ಅವರಿಗೆ ಸಾಣೇಹಳ್ಳಿ ಶ್ರೀಮಠವು ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿತ್ತು. ನಾನು ಗೆಳೆಯನಂತಿದ್ದ ಗುರುವನ್ನು ಅಭಿನಂದಿಸಿ ಎರಡು ಗಂಟೆಗಳ ಕಾಲ ಸಂಸ ಕಟ್ಟೆಯ ಮೇಲೆ ಕುಳಿತು ಸಂದರ್ಶನವನ್ನು ಮಾಡಿ ನನ್ನ ರಂಗಭೂಮಿ ವಿಶ್ಲೇಷಣೆ ಪತ್ರಿಕೆಯಲ್ಲಿ ಮುದ್ರಿಸಿದೆ.

ಅದೊಂದು ದಿನ ಬಾದರದಿನ್ನಿಯವರಿಂದ ಪೋನ್ ಬಂದಿತು. ಸಾಣೇಹಳ್ಳಿ ರೆಪರ್ಟರಿಗೆ ಕಲಾವಿದರ ಕೊರತೆ ಇದೆ. ಯಾರಾದರೂ ಹತ್ತು ಜನ ಯುವಕರನ್ನು ಕಳುಹಿಸಿಕೊಡು ಎಂದು ವಿನಂತಿಪೂರ್ವಕ ಆದೇಶಿಸಿದರು. “ಈಗಾಗಲೇ ಸಾಣೇಹಳ್ಳಿ ಸ್ವಾಮಿಗಳೂ ಪೋನ್ ಮಾಡಿದ್ದಾರೆ ಇನ್ನು ಮೂರು ದಿನಗಳಲ್ಲಿ ಕಳುಹಿಸುವೆ” ಎಂದು ಭರವಸೆ ಕೊಟ್ಟು ಅದನ್ನು ನೆರವೇರಿಸಿದೆ. ಆಯ್ದ ಹತ್ತು ಜನ ನನ್ನ ಸೃಷ್ಟಿ ಸಂಸ್ಥೆಯ ಹುಡುಗರನ್ನು ಪುಸಲಾಯಿಸಿ ಸಾಣೇಹಳ್ಳಿ ಶಿವಸಂಚಾರ ರೆಪರ್ಟರಿಗೆ ಕಳುಹಿಸಿಕೊಟ್ಟೆ. ಆಗ ನಮ್ಮ ಹುಡುಗರಿಗೆ ಸಮಯ ಸಿಕ್ಕಾಗಲೆಲ್ಲಾ “ನೀವು ನನ್ನ ಶಿಷ್ಯನ ಶಿಷ್ಯರು. ನಾನು ನಿಮಗೆ ಗುರುವಿನ ಗುರು, ಹೀಗಾಗಿ ನಾಟಕ ಚೆನ್ನಾಗಿ ಮಾಡಿ” ಎಂದು ಪ್ರೋತ್ಸಾಹಿಸುತ್ತಿದ್ದರಂತೆ.

ಸಾಣೇಹಳ್ಳಿಯಲ್ಲಿ ಅವರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಾನು ಹೋಗಿದ್ದಾಗ ಅತ್ಯಂತ ಭಾವುಕರಾಗಿದ್ದರು. ವೇದಿಕೆಯ ಮೇಲೆ ಚಿಕ್ಕಮಕ್ಕಳಂತೆ ಅತ್ತೇ ಬಿಟ್ಟರು. ಆ ನಂತರ ಯಾಕೆ ಕಣ್ಣೀರು ಹಾಕಿದಿರಿ ಎಂದು ಕೇಳಿದಾಗ “ಅದ್ಯಾಕೋ ಭಾವಾತೀರೇಕ ತಡೆಯಲಾಗಲಿಲ್ಲ. ನನ್ನ ನಿಯಂತ್ರಣ ಮೀರಿ ಕಣ್ಣೀರು ಹರಿಯಿತು” ಎಂದು ಸಮಜಾಯಿಸಿ ಕೊಟ್ಟರು.

“ಏನಾದರೂ ಮಾಡಿ ಬಿಡುವು ಮಾಡಿಕೊಂದು ಹತ್ತಾರು ದಿನ ಚಿತ್ರದುರ್ಗಕ್ಕೆ ಬಂದು ನನ್ನ ಬದುಕಿನ ರಂಗಾನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಬೇಕೆಂದು” ಕೇಳಿಕೊಂಡರು. ಆಗಲಿ ಎಂದು ನಾನು ಹೇಳಿದೆನಾದರೂ ಮುಂದಿನ ತಿಂಗಳು ಹೋಗೋಣವೆಂದುಕೊಂಡು ಪೋಸ್ಟಪೋನ್ ಮಾಡುತ್ತಲೇ ಬಂದೆ. ಬೆಂಗಳೂರಿನ ಯಾಂತ್ರಿಕ ಬದುಕಿನಲ್ಲಿ ಸಮಯವೆನ್ನುವುದು ಸಿಗಲೇ ಇಲ್ಲ. ಗುರುಗೆಳೆಯ ಬಾದರದಿನ್ನಿಯವರ ಕೊನೆಯ ಆಸೆ ನೆರವೇರಿಸಲು ಆಗಲೇ ಇಲ್ಲ. ನಮ್ಮನ್ನಗಲಿ ಹೋದ ಅವರನ್ನು ಇನ್ನೊಮ್ಮೆ ಬೇಟಿ ಮಾಡಿ ಮಾತಾಡಿಸಲಂತೂ ಸಾಧ್ಯವೇ ಇಲ್ಲ. ಗುರುವಿನ ಬಯಕೆ ಇಡೇರಿಸಲಾಗದ ನನಗೆ ಕೊನೆಯವರೆಗೂ ಈ ಗುರುದ್ರೋಹ ಕಾಡದೇ ಬಿಡುವುದಿಲ್ಲ.

ತೀರಿಕೊಂಡವರ ಬಗ್ಗೆ ನಕಾರಾತ್ಮಕವಾಗಿ ಮಾತಾಡಬಾರದು ಹಾಗೂ ಬರೆಯಬಾರದು ಎನ್ನುವ ಅಘೋಷಿತ ನಿಯಮವೊಂದಿದೆ. ಆದರೆ.. ಬಾದರದಿನ್ನಿಯಂತವರ ಸಾಧನೆ ನಮಗೆಲ್ಲಾ ಪ್ರೇರಣೆ ಆಗಿರುವಂತೆಯೇ ಅವರ ವಯಕ್ತಿಕ ದೌರ್ಬಲ್ಯಗಳು ಪಾಠವಾಗಿದ್ದಂತೂ ಸುಳ್ಳಲ್ಲ. ಬಾದರದಿನ್ನಿಯವರು ಗ್ರಾಮೀಣ ಪ್ರದೇಶದಿಂದ ಬಂದ ಅಪರೂಪದ ಪ್ರತಿಭೆ ಅನ್ನುವುದರಲ್ಲಿ ಸಂದೇಹವೇ ಇಲ್ಲ. ಅದೆಷ್ಟೋ ಯುವಪ್ರತಿಭೆಗಳಿಗೆ ಮಾರ್ಗದರ್ಶನ ಮಾಡಿ ಬೆಳೆಸಿದರು ಎನ್ನುವುದರಲ್ಲೂ ಹುಸಿಯಿಲ್ಲ. ಆಧುನಿಕ ಕನ್ನಡ ರಂಗಭೂಮಿಗೆ ಅವರ ಕೊಡುಗೆ ಅಪಾರವಾಗಿದೆ. ಆದರೆ.. 65 ವರ್ಷ ಸಾಯುವ ವಯಸ್ಸೇನಲ್ಲಾ. ವ್ಯಯಕ್ತಿಕ ಬದುಕಲ್ಲಿ ವ್ಯಸನದಿಂದ ದೂರವಿದ್ದು ಶಿಸ್ತಿನ ಬದುಕನ್ನು ರೂಢಿಸಿಕೊಂಡಿದ್ದರೆ ಬಾದರದಿನ್ನಿ ಇನ್ನೂ ಕನಿಷ್ಟ ಹತ್ತಾರು ವರ್ಷವಾದರೂ ನಾಟಕಗಳನ್ನು ಕಟ್ಟುತ್ತಲೇ ಇರುತ್ತಿದ್ದರು.

ಆದರೆ.. ಕುಡಿತ ಎನ್ನುವ ವ್ಯಸನ ಅವರನ್ನು ಆದಷ್ಟು ಬೇಗ ಬಲಿ ತೆಗೆದುಕೊಂಡಿತು. “ಒಂದಲ್ಲಾ ಶಶಿ.. ಒಟ್ಟು ಏಳು ಜನ್ಮಕ್ಕಾಗುವಷ್ಟು ಕುಡಿದಿದ್ದೇನೆ. ಈಗ ನಾನು ಹೆಂಡಾ ಕುಡೀತಿಲ್ಲಾ.. ಹೆಂಡವೇ ನನ್ನನ್ನು ಕುಡೀತಿದೆ” ಎಂದು ಅಂದು ಬಾದರದಿನ್ನಿಯವರು ವಿನೋದವಾಗಿ ಹೇಳಿದರೂ ಅದರ ಹಿಂದಿರುವ ವಿಷಾದ ನನ್ನ ಗ್ರಹಿಕೆಗೆ ಬಂದಿತ್ತು. ಹವ್ಯಾಸವಾಗಿ ಆರಂಭವಾಗಿದ್ದ ಕುಡಿತವೆನ್ನುವುದು ಸಾವಕಾಶವಾಗಿ ವ್ಯಸನವಾಗಿ ಬದಲಾಗಿ ಬಾದರದಿನ್ನಿಯಂತಹ ಮಹಾನ್ ಪ್ರತಿಭೆಯನ್ನು ಕಂತುಕಂತಲ್ಲಿ ಸತಾಯಿಸಿ ಅಕಾಲಿಕವಾಗಿ ಬಲಿತೆಗೆದುಕೊಂಡಿತು. ಕೊನೆಕಾಲದಲ್ಲಿ ವೈದ್ಯರ ಸಲಹೆಯ ಮೇರೆಗೆ ಕುಡಿತವನ್ನು ತ್ಯಜಿಸಿದರಾದರೂ ಅಷ್ಟರಲ್ಲಾಗಲೇ ರಿಕವರಿ ಮಾಡಿಕೊಳ್ಳುವ ಕಾಲ ಮಿಂಚಿಹೋಗಿತ್ತು. ದೇಹದ ಅಂಗಾಗಗಳು ಅಸಹಕಾರ ಚಳುವಳಿಗಿಳಿದಿದ್ದವು. ಕೈಕಾಲುಗಳಿಗೆ ಲಕ್ವಾ ಹೊಡೆದು ಅರ್ಧ ದೇಹ ಸ್ವಾದೀನ ಕಳೆದುಕೊಂಡಿತ್ತು. ಮಾತುಗಳು ಅಸ್ಪಷ್ಟವಾದವು. ಕರುಳು ಕಮರಿಹೋಗಿತ್ತು. ಅಲ್ಸರ್ ಉಲ್ಬಣಗೊಂಡಿತ್ತು. ಆದರು ಗಟ್ಟಿ ಜೀವ ಬೇಗ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಹೀಗೆಯೇ ಏಳೆಂಟು ವರ್ಷಗಳ ಕಾಲ ಬದುಕನ್ನು ಸವೆಸಿ ಸೋತ ಜೀವ ಸಾವಿನ ಜೊತೆಗೆ ನಿತ್ಯ ಸೆನೆಸಿತು. ಆದರೆ.. ಕೊನೆಗೂ ಸಾವೇ ಮೇಲುಗೈ ಸಾಧಿಸಿ ಬಾದರದಿನ್ನಿಯವರನ್ನು ಸೋಲಿಸಿ ಸೆಳೆದೊಯ್ಯಿತು. ಅಸಾಮಾನ್ಯ ಪ್ರತಿಭೆಯೊಂದು ಅಕಾಲದಲ್ಲಿ ಕಾಲವಶವಾಯಿತು.

ಅಶೋಕ ಬಾದರದಿನ್ನಿಯವರದು ಕಲಾಲೋಕದಲ್ಲಿ ಬಹುಮುಖಿ ಪ್ರತಿಭೆ. ಇಪ್ಪತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ಇನ್ನೂರಕ್ಕೂ ಹೆಚ್ಚು ವಿಭಿನ್ನ ಬಗೆಯ ನಾಟಕವನ್ನು ನಿರ್ದೇಶಿಸಿದ್ದರು. ರಾಷ್ಟ್ರೀಯ ನಾಟಕ ಶಾಲೆಯ ಗೋಲ್ಡ್ ಮೆಡಲ್ ಪದವೀಧರರಾಗಿದ್ದ ಅಶೋಕ್ ಎನ್‌ಎಸ್‌ಡಿ ಪ್ರಣೀತ ಹಮ್ಮುಬಿಮ್ಮುಗಳಿಲ್ಲದ ಸರಳ ವ್ಯಕ್ತಿಯಾಗಿದ್ದರು.ashok-badaradinni3

ನಾಟಕದಲ್ಲಿ ನಟರ ಪ್ರಾಮುಖ್ಯತೆಯನ್ನು ಕಡಿಮೆ ಗೊಳಿಸಿ ಕೇವಲ ರಂಗತಂತ್ರಗಳ ವೈಭವೀಕರಣ ಮಾಡುತ್ತಿರುವ ಹಲವಾರು ಎನ್‌ಎಸ್‌ಡಿ ನಿರ್ದೇಶಕರನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಎನ್‌ಎಸ್‌ಡಿ ತಂತ್ರಗಾರಿಕೆಗಳಿಗೆ ವ್ಯತಿರಿಕ್ತವಾಗಿ ಸರಳ ರೂಪದಲ್ಲಿ ನಟ ಪ್ರಧಾನವಾದ ನಾಟಕಗಳನ್ನು ಬಾದರದಿನ್ನಿಯವರು ಕಟ್ಟಿಕೊಡುತ್ತಿದ್ದರು. ಎ.ಎಸ್.ಮೂರ್ತಿಗಳು ಹಾಗೂ ಡಾ. ವಿಜಯಮ್ಮನವರು ಸೇರಿ ಅಶೋಕರವರ ನಿರ್ದೇಶನದ ಪ್ರತಿಭೆಯನ್ನು ಗುರುತಿಸಿ ಅಭಿನಯ ತರಂಗ ಎನ್ನುವ ಭಾನುವಾರದ ರಂಗಶಾಲೆಯಿನ್ನು ಬಾದರದಿನ್ನಿಯವರಿಗಾಗಿಯೇ ಹುಟ್ಟುಹಾಕಿದ್ದೊಂದು ಇತಿಹಾಸ.

ಅಭಿನಯ ತರಂಗದ ಮೊದಲ ಪ್ರಾಂಶುಪಾಲರಾಗಿದ್ದ ಬಾದರದಿನ್ನಿಯವರು ಹಲವಾರು ನಾಟಕಗಳನ್ನು ರಂಗಶಾಲೆಗೆ ನಿರ್ದೇಶಿಸಿದರು. ಅದೆಷ್ಟೋ ವರ್ಷಗಳ ಕಾಲ ಬೆಂಗಳೂರಿನಲ್ಲಿ ಅಭಿನಯ ತರಂಗವೇ ಬಾದರದಿನ್ನಿಯವರ ಮನೆಯಾಗಿಬಿಟ್ಟಿತ್ತು. ತದನಂತರ ಸಾಣೇಹಳ್ಳಿ ಶ್ರೀಮಠದ ಶಿವಸಂಚಾರ ಹಾಗೂ ಚಿತ್ರದುರ್ಗದ ಮುರಘಾಮಠದ ಜಮುರಾ ರೆಪರ್ಟರಿಗಳ ನಿರ್ದೇಶಕರಾಗಿ ಹಲವಾರು ನಾಟಕಗಳನ್ನು ನಿರ್ದೇಶಿಸಿ ನೂರಾರು ನಟರಿಗೆ ಅಭಿನಯದ ತರಬೇತಿಯನ್ನು ಕೊಟ್ಟಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಹಲವಾರು ರಂಗಶಿಬಿರಗಳ ನಿರ್ದೇಶಕರಾಗಿ ಸಾವಿರಾರು ಯುವಕರಿಗೆ ರಂಗತರಬೇತಿಯನ್ನು ಕೊಟ್ಟು ನಾಟಕಗಳನ್ನೂ ಮಾಡಿಸಿದ್ದಾರೆ. ರಂಗಭೂಮಿಯಲ್ಲಿ ಒಂದು ತಲೆಮಾರು ಸಿದ್ದವಾಗಿ ರಂಗಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಬಾದರದಿನ್ನಿಯವರ ಶ್ರಮ ಹಾಗೂ ಪ್ರಯತ್ನವೂ ದೊಡ್ಡದಿದೆ.

ಕೇವಲ ರಂಗಭೂಮಿ ಮಾತ್ರವಲ್ಲ ಸಿನೆಮಾ ರಂಗದಲ್ಲೂ ಬಾದರದಿನ್ನಿಯವರು ತಮ್ಮ ವಿಶಿಷ್ಟ ಅಭಿನಯದಿಂದಾಗಿ ಹೆಸರುವಾಸಿಯಾಗಿದ್ದರು. ಎಂಬತ್ತಕ್ಕೂ ಹೆಚ್ಚು ಸಿನೆಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಅಭಿನಯಿಸಿ ಪ್ರೇಕ್ಷಕರನ್ನು ನಕ್ಕು ನಗಿಸಿ ಜನಮೆಚ್ಚುಗೆಯನ್ನು ಗಳಿಸಿದ್ದಾರೆ. ಗೀಜಗನ ಗೂಡು ಚಲನಚಿತ್ರದಿಂದ ಸಿನೆಮಾ ರಂಗದಲ್ಲಿ ಅಭಿನಯ ಆರಂಭಿಸಿದ ಬಾದರದಿನ್ನಿಯವರು ಮನಮೆಚ್ಚಿದ ಹುಡುಗಿ, ಅಂಜದ ಗಂಡು, ಸಂಭವಾಮಿ ಯುಗೇ ಯುಗೇ, ತಾಳಿಗಾಗಿ, ಚುಕ್ಕಿ ಚಂದ್ರಮ, ಕಿಲಾಡಿ ತಾತಾ, ಬೂತಯ್ಯನ ಮಕ್ಕಳು, ಏಕಲವ್ಯ, ಒಂದು ಮುತ್ತಿನ ಕಥೆ, ಆಸ್ಪೋಟ, ನವತಾರೆ, ಧರ್ಮಪತ್ನಿ .. ಹೀಗೆ ಅನೇಕ ಸಿನೆಮಾಗಳಲ್ಲಿ ತಮ್ಮ ಅಭಿನಯ ಪ್ರತಿಭೆಯಿಂದ ಬಾದರದಿನ್ನಿ ಜನಮನ್ನಣೆಗೆ ಪಾತ್ರವಾದರು.

ಕೆಲವು ಸಿನೆಮಾಗಳ ಯಶಸ್ಸಿಗೆ ಬಾದರದಿನ್ನಿಯವರು ಉಣಬಡಿಸಿದ ಹಾಸ್ಯ ದೃಶ್ಯವೇ ಕಾರಣವಾಗಿದ್ದನ್ನು ಅಲ್ಲಗಳೆಯಲಾಗದು. ರಾಜಕುಮಾರರ ವಜ್ರೇಶ್ವರಿ ಕಂಬೈನ್ಸ್ ಪ್ರೊಡಕ್ಷನ್ ಸಿನೆಮಾಗಳಲ್ಲಿ ಖಾಯಂ ಹಾಸ್ಯ ನಟನಾಗಿದ್ದರು. ಆದರೆ ಅದೇನೋ ಅವಘಡ ಮಾಡಿಕೊಂಡು ಆ ಪ್ರೊಡಕ್ಷನ್ ಹೌಸನಿಂದ ದೂರಾದರು. ಅವರು ಕೊಟ್ಟ ಕೊನೆಗೆ ಅಭಿನಯಿಸಿದ ಚಲನಚಿತ್ರ “ಬಿಡಲಾರೆ ಎಂದೂ ನಿನ್ನ” ವನ್ನು ನಿರ್ದೇಶಿಸಿದ್ದು ಅಶೋಕರವರ ಸಹೋದರ ಉಮೇಶ್ ಬಾದರದಿನ್ನಿಯವರು. ಮನಮೆಚ್ಚಿದ ಹುಡುಗಿ ಸಿನೆಮಾದ ಅಭಿನಯಕ್ಕಾಗಿ ರಾಜ್ಯಸರಕಾರದ ಅತ್ಯುತ್ತಮ ಹಾಸ್ಯಕಲಾವಿದ ಪ್ರಶಸ್ತಿಯನ್ನು ಪಡೆದರು. ನಲವತ್ತಕ್ಕೂ ಹೆಚ್ಚು ಟಿವಿ ದಾರಾವಾಹಿಗಳಲ್ಲೂ ಅಭಿನಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಗೌರಿಶಂಕರ ಎನ್ನುವ ಸಿನೆಮಾವನ್ನೂ ಸಹ ಬಾದರದಿನ್ನಿಯವರು ನಿರ್ದೇಶಿಸಿದ್ದರು. ಚಲನಚಿತ್ರ ರಂಗದಲ್ಲಿ ಇಷ್ಟೆಲ್ಲಾ ತೊಡಗಿಸಿಕೊಂಡಿದ್ದರೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅಂತಿಮ ದಿನಗಳಲ್ಲಿ ಸಿನೆಮಾ ರಂಗ ಸಹಾಯ ಮಾಡುವುದಿರಲಿ ಯಾರೂ ಬಂದು ಸಾಂತ್ವನವನ್ನೂ ಹೇಳಲಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ.

ಹೀಗೆ.. ರಂಗಭೂಮಿ ಹಾಗೂ ಚಲನಚಿತ್ರ ಈ ಎರಡೂ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಶೋಕ ಬಾದರದಿನ್ನಿ ಎನ್ನುವ ಪ್ರತಿಭೆಯನ್ನು ಜನರು ಗುರುತಿಸಿ ಗೌರವಿಸಿದಷ್ಟು ಸರಕಾರಗಳು ಗೌರವಿಸಿ ಸನ್ಮಾನಿಸಲಿಲ್ಲ. ಇಲ್ಲಿವರೆಗೆ 1990 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೊಂದು ಮಾತ್ರ ದೊರಕಿದ್ದು ಇವರ ಸೇವೆಯನ್ನು ಗುರುತಿಸಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಗೌರವಿಸಲಾಗಿದೆ. ಮಠಮಾನ್ಯ ಸಂಘ ಸಂಸ್ಥೆಗಳು ಬಾದರದಿನ್ನಿಯವರ ಸಾಧನೆಯನ್ನು ಗೌರವಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿವೆ. 2008 ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿದೆ.

ಆದರೆ.. ಬಾದರದಿನ್ನಿಯವರ ಪ್ರತಿಭೆ ಹಾಗೂ ಸಾಧನೆಗೆ ಹೋಲಿಸಿದರೆ ಸರಕಾರ ಹಾಗೂ ಸಂಸ್ಕೃತಿ ಇಲಾಖೆ ಅವರನ್ನು ನಿರ್ಲಕ್ಷಿಸಿದೆ. ಅದಕ್ಕೆ ಬಹುಮುಖ್ಯ ಕಾರಣ ಬಾದರದಿನ್ನಿ ಯಾವುದೇ ಲಾಬಿ ಮಾಡಲು ಸಾಧ್ಯವಾಗದೇ ಹೋಗಿದ್ದು ಹಾಗೂ ತಮ್ಮ ನೇರವಾದ ಮಾತುಗಳಿಂದ ಎಲ್ಲವನ್ನೂ ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದುದು. ಬಾದರದಿನ್ನಿಯವರ ಸಾಧನೆಯನ್ನು ಗುರುತಿಸಿ ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿಸಬಹುದಾಗಿತ್ತು. ಮಾಡಲಿಲ್ಲ. ರಂಗಾಯಣಕ್ಕಾದರೂ ನಿರ್ದೇಶಕರನ್ನಾಗಿ ನಿಯಮಿಸಬೇಕಾಗಿತ್ತು. ಅದೂ ಆಗಲಿಲ್ಲ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಿಗಬೇಕಿತ್ತು ಸಿಗಲಿಲ್ಲ.

ಆದರೂ ಎಂದೂ ಯಾವುದಕ್ಕೂ ಬಾದರದಿನ್ನಿಯವರು ಗೊಣಗಲಿಲ್ಲ. ತಾನು ಮಾಡಿದ ರಂಗಕಾರ್ಯಕ್ಕೆ ಬದಲಾಗಿ ಯಾವುದೇ ಪ್ರತಿಫಲವನ್ನು ಅಪೇಕ್ಷಿಸಲಿಲ್ಲ. ತನ್ನಿಚ್ಚೆ ಬಂದಂತೆ ಬದುಕಿ, ತಾನೊಲಿದಂತೆ ಹಾಡಿ ಕೊನೆಗೊಮ್ಮೆ ಮೌನವಾದರು. ಆಧುನಿಕ ರಂಗಭೂಮಿಯಲ್ಲಿ ಬಾದರದಿನ್ನಿ ಯುಗವೊಂದು ಸಮಾಪ್ತಿಯಾಯ್ತು. ಇನ್ನು ಮೇಲೆ ಅಶೋಕರಂತವರ ನೆನಪೊಂದೇ ನಮಗೆ ಸ್ಥಿರಸ್ಥಾಯಿಯಾಯ್ತು. ಬಾದರದಿನ್ನಿ ಎನ್ನುವ ದೈತ್ಯ ರಂಗಸಾಧಕನಿಗೆ ರಂಗನಮನಗಳು.

One Response

  1. Chandra Aithal
    November 26, 2016

Add Comment

Leave a Reply