Quantcast

ಅಣ್ಣಿ ಹುಡುಕಿಕೊಂಡ ‘ಮಡಿಲ ನೂಲಿನ ಕೌದಿ’

chalam hadlahalli

ಚಲಂ ಹಾಡ್ಲಹಳ್ಳಿ

ನಾವೀಗ ಕವಿತೆಗಳ ಬಗ್ಗೆ ಮಾತನಾಡೋಣ ಎಂದು ಯಾರೂ ಧೈರ್ಯವಾಗಿ ಹೇಳಲಾಗದ ದಿನಗಳಲ್ಲಿ ಪ್ರೀತಿ, ಪ್ರೇಮದ ಬಗ್ಗೆ ಮಾತನಾಡುವುದು ಇನ್ನೂ ದುಸ್ತರವಾಗಿದೆ. ಪ್ರೀತಿಯ ಭಾಷೆಯಲ್ಲಿ ಮಾತನಾಡಿ ಎಂಬುದನ್ನು ದುಷ್ಟರು ಕ್ಲೀಷೆಯನ್ನಾಗಿ ಮಾಡಿಬಿಟ್ಟಿದ್ದಾರೆ.

ಆದರೆ ಕವಿತೆ ಬರೆಯಬೇಕಾದವನು ಏನನ್ನಾದರೂ ಪ್ರೀತಿಸಲೇಬೇಕು. ದ್ವೇಷವನ್ನಾದರೂ..
ಅಲ್ಲಿಗೆ ಖುಷಿಯ ವಿಚಾರವೆಂದರೆ ಇಂದಿನ ದಿನಗಳಲ್ಲಿ ಯಾರೇ ಬೇಡ ಅಂದರೂ ಕವಿತೆಗಳು ನಮ್ಮ ಸುತ್ತಮುತ್ತಾ ಸುಳಿದಾಡುತ್ತಿವೆ. ಕವಿತೆಗಳು ಹಾಗೇ ಸುಳಿದಾಡುವಾಗ ಯಾರನ್ನಾದರೂ ತಾಕುತ್ತವೆ, ಸೋಕುತ್ತವೆ. ‘ಸೋಕುವುದು’ ಎಂಬುದಕ್ಕೆ ಮಲೆನಾಡಿನಲ್ಲಿ ಅಂತಹಾ ಒಳ್ಳೆಯ ಅರ್ಥವೇನೂ ಇಲ್ಲ. ಆದರೆ ಅದನ್ನಾದರೂ ಮಾಡುತ್ತವೆ ಎಂಬ ಅಮಾಧಾನದ ಅಂಶ ಕವಿತೆಗಿದೆ.

goravi-aldur-coverಯಾರದೆಷ್ಟೇ ಬೇಡವೆಂದು ನಿಷೇದಿಸಿದರೂ ಕಾವ್ಯ ನಮ್ಮ ಅಂತಃಕರಣವನ್ನು ತಾಕುವಷ್ಟು ಬೇರೆ ಪ್ರಕಾರ ತಾಕುವುದಿಲ್ಲ ಎಂಬ ನಂಬುಗೆ ನನ್ನದು. ಆ ಕ್ಷಣಕ್ಕೆ ತಾಕುವುದು ಗದ್ಯಪ್ರಕಾರದ ಗೆಲುವಿರಬಹುದು. ಆದರೆ ಒಂದು ಬಿಂದುವಿನಲ್ಲಿ ಕೊಂಚ ಹೊತ್ತಾದರೂ ನಿಲ್ಲದೇ ಹೋದರೆ ನಮ್ಮ ಓದಿನಿಂದ ಅಷ್ಟಾಗಿ ಪ್ರಯೋಜನವಾಗುವುದಿಲ್ಲ.

ಮೂರು ಪ್ರಕಾರಗಳು ಮಾತ್ರ ನಮ್ಮನ್ನು ಹಿಡಿದು ನಿಲ್ಲಿಸುತ್ತವೆ. ನಮ್ಮಲ್ಲಿ ಪ್ರಶ್ನೆ ಹುಟ್ಟಿಸಿ ಉತ್ತರ ಕೇಳುತ್ತವೆ. ಇಲ್ಲವೆಂದರೆ ಉತ್ತರವೇ ದಕ್ಕಿ ಪ್ರಶ್ನೆಯನ್ನು ಬೇರೆಯವರಿಗೆ ದಾಟಿಸುತ್ತವೆ. ಅಂತಹಾ ಸಾಧ್ಯತೆ ಇರುವುದು ಕವಿತೆ, ವಿಮರ್ಶೆ ಮತ್ತು ಆದ್ಯಾತ್ಮಕ್ಕೆ.

ಇಲ್ಲಿ ಗೋರವಿ ಆಲ್ದೂರರ ‘ಮಡಿಲ ನೂಲಿನ ಕೌದಿ’ ಎಂಬ ಕವನ ಸಂಕಲನವಿದೆ. ಮಡಿಲ ನೂಲಿನ ಕೌದಿ ಎಂಬುದೇ ಅದ್ಬುತವಾದ ಮೂರು ಪದಗಳ ಸಾಲು. ಸಾಮಾನ್ಯವಾಗಿ ನಮ್ಮ ಈ ಕಾಲಘಟ್ಟದಲ್ಲಿ ಕವಿತೆಯ ಕ್ಷೇತ್ರದಲ್ಲಿ ಇರುವವರಿಗೆ ಇರುವ ಸಹಜ ಅನುಮಾನಗಳೇ ಗೋರವಿಗೂ ಇವೆ. ಆ ಕಾರಣಕ್ಕೆ ಕವಿತೆಯ ಸಾರ್ಥಕತೆಯ ಬಗ್ಗೆ ಸಣ್ಣಗೆ ಪ್ರಶ್ನೆ ಮಾಡುತ್ತಾರೆ. ಅದರ ಸಾಮಾಜಿಕ ಜವಬ್ದಾರಿಯ ಬಗ್ಗೆಯೂ ಮಾತನಾಡುತ್ತಾರೆ. ಆದರೆ ಈ ಸಾಮಾಜಿಕ ಜವಾಬ್ದಾರಿ ಎಂಬುದು ನಮಗೆ ಯಾವ ರೀತಿಯಲ್ಲಿ ಇರಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನನ್ನ ಪ್ರಕಾರ ತನ್ನೊಳಗನ್ನು ಪ್ರಾಮಾಣಿಕವಾಗಿ ಆಚೆಗೆಳೆಯುವ ಕವಿತೆ ಬರೆಯುವುದಕ್ಕಿಂತ ಮಹತ್ತರವಾದ ಸಾಮಾಜಿಕ ಜವಾಬ್ದಾರಿ ಬೇರೊಂದಿಲ್ಲ.

ಪ್ರಾಮಾಣಿಕತೆಯ ಕೊರತೆಯಿರುವ ಈ ಕಾಲದಲ್ಲಿ ಅಥವಾ ಕಡಿಮೆಯಿದೆ ಎಂಬ ಭ್ರಮೆಯನ್ನು ಭಿತ್ತಿಕೊಂಡಿರುವ ಜನಗಳ ನಡುವೆ ಪ್ರಾಮಾಣಿಕತೆಯ ಗಾಳಿ ಬೀಸಬೇಕು. ಅದಕ್ಕೆ ಕವಿತೆಯಂತಹಾ ದಾರಿ ಅತ್ಯಂತ ಅರ್ಥಪೂರ್ಣವಾದುದು.
ಈ ಸಂಕಲನ ಕೂಡ ಒಂದು ರೀತಿಯ ಪ್ರೀತಿಯ, ಪ್ರಾಮಾಣಿಕತೆಯ ವ್ಯಾಖ್ಯಾನ. ಗೋರವಿಗೆ ವ್ಯವಸ್ಥೆಯ ಬಗ್ಗೆ ಒಂದು ರೀತಿಯ ಆಕ್ರೋಶವೂ ಇದೆ. ಮತ್ತದೇ ಸಮಯದಲ್ಲಿ ಈ ವ್ಯವಸ್ಥೆಯ ಬಗ್ಗೆ ಒಲವೂ ಇದೆ. ಆಕ್ರೋಶ ಕವಿಗೆ ಬೇಕಾದ ಸಕಾರಣ ದ್ರವ್ಯ. ಒಲವು ಎಂಬುದು ನಾನೂ ಇದೇ ಸಮಾಜದ ಒಂದು ಭಾಗ ಎಂಬ ಸಂದಿಗ್ದತೆ. ಈ ಸಂದಿಗ್ದತೆಯನ್ನು ಯಾರೂ ದಾಟಲಾರರು. ವ್ಯವಸ್ಥೆಯಿಂದ ಹೊರನಿಂತು ಏನೂ ಮಾಡಲಾಗುವುದಿಲ್ಲ ಎಂಬ ಎಚ್ಚರವೂ ಈ ಸಾಲುಗಳಿಗಿವೆ. ಇದೇ ಕಾರಣಕ್ಕೆ ಗೋರವಿ ಪ್ರಾಮಾಣಿಕತೆಯ ಸಾಲುಗಳನ್ನು ಮೂಡಿಸುತ್ತಾರೆ.

ನಕ್ಷತ್ರಗಳ ಮನೆ ಬಾಗಿಲಿಗೆ
ಖಾಲಿ ಹೃದಯವಿಡಿದು
ಚಂದಿರ ಚಲಿಸಿದಂತೆಲ್ಲಾ
ಕಾಣುತ್ತಾನೆ ಪ್ರೇಮ ಭಿಕ್ಷಾಟನೆಗಿಳಿದಂತೆ

ಎಂದು ಬರೆಯುವ ಮೂಲಕ ಸಾಮಾನ್ಯವಾಗಿ ಎಲ್ಲರ ಭಾವವನ್ನು ಪ್ರತಿನಿಧಿಸುತ್ತಾರೆ. ಹಾಗೆ ಎಲ್ಲರ ಭಾವಗಳನ್ನು ಪ್ರತಿನಿದಿಸುವುದು ಸಾಹಿತ್ಯದ ಬಹುಮುಖ್ಯ ಅಂಶ. ಚಂದಿರ ಯಾರು ಯಾರಿಗೆ ಹೇಗೆಲ್ಲಾ ಕಂಡಿದ್ದಾನೆ..?

ಗೋರವಿ ಶೈಲಿಯಲ್ಲೇ ಹೇಳಬೇಕು ಎಂದರೆ ಚಂದಿರನನ್ನು ಉಜ್ಜಿ ಬಿಸಾಡಿದ್ದಾರೆ. ಹಾಗೆ ಹೇಳುವಾಗಲೂ ಗೋರವಿಗೂ ಸೇರಿದಂತೆ ಕೇಳುವವರಿಗೂ ಗೊತ್ತು. ಚಂದಿರನನ್ನು ಯಾರೂ ಯಾವ ಕಾಲಕ್ಕೂ ಉಜ್ಜಿ ಬಿಸಾಡುವುದು ಸಾಧ್ಯವಿಲ್ಲ. ಚಂದಿರ ಕಾವ್ಯಲೋಕದ ಬಹುಮುಖ್ಯ ಅನಿವಾರ್ಯತೆ. ಚಂದಿರ ಬಂದ ಕವಿತೆ ಎಂದರೆ ಇನ್ನೂ ಪ್ರವೇಶ ಎಂದು ಭಾವಿಸಿವವರು ಇದನ್ನು ಅರ್ತ ಮಾಡಿಕೊಂಡರೆ ಸಾಕು.

ಒಂದು ಕಾಲವಿತ್ತು. ಚಂದದ ಮನಸ್ಸು ಮಾತ್ರ ಕವಿತೆ ಬರೆಯಬಹುದು ಎಂದು ನಂಬಲಾಗಿತ್ತು. ಚಂದದ ಮನಸ್ಸು ಎಂದರೆ ಅದರ ವ್ಯಾಖ್ಯಾನವೂ ಬೇರೆಯದೇ ಇತ್ತು. ಯಾರನ್ನೂ, ಯಾವುದನ್ನೂ ಪ್ರಶ್ನಿಸದೆ ಇರುವ ಮನಸ್ಸು ಸುಂದರವಾಗಿರುತ್ತದೆ ಎಂದು ನಮ್ಮನ್ನು ನಂಬಿಸಲಾಗಿತ್ತು. ಆದರೆ ನವ್ಯಕಾಲದ ಬಹುಮುಖ್ಯ ಕೊಡುಗೆಯೆಂದರೆ ಈ ಮಿಥ್ ಅನ್ನು ತೊಡೆದು ಹಾಕಿದ್ದು. ನಂತರ ಪ್ರಶ್ನೆಗಳೆ ಕವಿತೆಗಳಾಗಿದ್ದನ್ನು ಬೇರೆಯಾಗಿ ಮಾತನಾಡಬಹುದು. ಯಾಕೆಂದರೆ ಮಡಿಲ ನೂಲಿನ ಕೌದಿ ಅಂತಹಾ ನಿಷ್ಪ್ರಯೋಜಕ ಪ್ರಶ್ನೆಗಳಲ್ಲ.

ಪ್ರೀತಿಯ ಬಗ್ಗೆ ಬರೆಯುವುದು ಎಲ್ಲಾ ವಯೋಮಾನದ ಅನಿವಾರ್ಯ. ಆದರೆ ಪ್ರೀತಿಗೆ ಒಂದು ವಯೋಮಾನವನ್ನು ನಿಗದಿ ಪಡಿಸಿ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದಾರೆ. ಅಂತಹಾ ಒಂದು ಮಾನದಂಡವನ್ನು ಹಿಡಕೊಂಡು ಮಾತನಡಿದರೆ ಗೋರವಿ ತನ್ನ ವಯೋಮಾನಕ್ಕೆ ಸರಿಯಾಗಿ ಕಾಣಿಕೆ ಸಲ್ಲಿಸಿದ್ದಾರೆ. ಪ್ರೀತಿಯ ಕವಿತೆಗಳು ಇಲ್ಲಿ ದಾರಾಳವಾಗಿವೆ. ಅವು ಹದ್ದುಮೀರುವುದಿಲ್ಲ ಎಂಬುದು ಸಂತಸವೋ..? ಬೇಸರವೋ..? ತಿಳಿಯುತ್ತಿಲ್ಲ. ನನ್ನ ಪ್ರಕಾರ ಪ್ರೀತಿಯ ವಿಚಾರದಲ್ಲಿ ಹದ್ದುಮೀರಬೇಕು. ತುಟಿ, ಕೆನ್ನೆಯನ್ನೂ ಮೀರಬೇಕು. ಕೇವಲ ದೈಹಿಕವಾಗಿ ಈ ಸಾಲನ್ನು ಅರ್ಥ ಮಾಡಿಕೊಂಡರೆ ನಷ್ಟ ಹಾಗೆ ಅರ್ಥ ಮಾಡಿಕೊಂಡವರಿಗೇ.

moon boatಗೋರವಿ ಹಾಸನದ ನೆಲತಾಕಿ ಹೋದವರು. ಚುಂಚನಗಿರಿ ಮಠದಲ್ಲಿ ಇದ್ದವರು. ನಂತರ ಚಲನಚಿತ್ರ ಕ್ಷೇತ್ರದಲ್ಲಿ ಗಭೀರ ಹೆಜ್ಜೆ ಇಡುತ್ತಿರುವವರು. ಅದೇ ಕಾಲದಲ್ಲಿ ಸಾಹಿತ್ಯಲೋಕದಲ್ಲಿ ಒಂದು ಸುತ್ತು ಹಾಕಿಬಂದವರು. ಯಾರು ಎಷ್ಟು ದಕ್ಕಿದರೋ ಗೊತ್ತಿಲ್ಲ. ಆದರೆ ಯಾರನ್ನು ದಕ್ಕಿಸಿಕೊಳ್ಳಬಾರದು ಎಂಬುದನ್ನು ಮಾತ್ರ ತಿಳಿದುಕೊಂಡರೆ ಸಾಕು. ಕವಿಯಾದವನಿಗೆ ಇರಬೇಕಾದ ನಿಜವಾದ ಸಾಮಾಜಿಕ ಜವಬ್ದಾರಿ ಎಂದರೆ ಸದಾ ಎಚ್ಚರವಾಗಿರುವುದು. ಅಂತಹಾ ಎಚ್ಚರ ಗೆಳೆಯ ಗೋರವಿ ಆಲ್ದೂರರಲ್ಲಿ ಸದಾ ಜಾಗೃತವಾಗಿರಲಿ.

ಈ ಸಾಲುಗಳನ್ನೊಮ್ಮೆ ಓದಿ ಗೋರವಿಯ ಸಾಧ್ಯತೆಗಳು ಇನ್ನೂ ನಿಚ್ಚಳವಾಗುತ್ತದೆ.

ಅಳುತ್ತಾ ಕುಳಿತವನಿಗೆ
ನೆತ್ತಿ ಸವರಿ ತಬ್ಬಿಕೊಂಡ ಅಜ್ಜ
ಅಳಬೇಡ ಕಂದಾ ನೀನು ಈ
ಜಗದ ಮೊದಲ ತಬ್ಬಲಿಯೂ ಅಲ್ಲ
ಕೊನೆಯವನೂ ಅಲ್ಲ
ಅಸಲಿಗೆ ಆ ದೇವರಿಗೆ ತಾಯ್ತಂದೆ
ಇಲ್ಲ ಎಂದ
ಹಣ್ಣಾದ ಕೂದಲೆದೆಗೆ
ಮುಖವೊತ್ತಿಕೊಂಡು ಅಜ್ಜಯ್ಯಾ
ದೇವರೂ ‘ಬೇವರ್ಸಿ’ನ? ಎಂದೆ
ಇನ್ನೂ ಬಿಗಿಯಾಗಿ ತಬ್ಬಿಕೊಂಡ
ಅಜ್ಜ ನಿರುತ್ತರನಾದ.

Add Comment

Leave a Reply