Quantcast

ಡಿ ಕೆ ರವಿ ಎಂಬ ಮಳೆ ನಿಂತು ಹೋದ ಮೇಲೆ…

ಕಚೇರಿ ಕೆಲಸ ಮುಗಿಸಿ ಬಸ್ ನಲ್ಲಿ ವಾಪಾಸಾಗುತ್ತಿದ್ದೆ. ವಾಟ್ಸಾಪ್ ನಲ್ಲಿ ಐಎಎಸ್ ಅಧಿಕಾರಿ ಡಿ. ಕೆ. ರವಿ ಆತ್ಮಹತ್ಯೆ ಸುದ್ದಿಯಿತ್ತು. ಹ್ಯಾಂಡ್ ಸಮ್ ರವಿ ಫೋಟೋಗಳು ಕೂಡ ಇದ್ದವು. ನೋಡಿದ ಕ್ಷಣ ಛೇ ಯಾಕಾದ್ರು ಆತ್ಮಹತ್ಯೆ ಮಾಡಿಕೊಂಡ್ರೋ ಅಂತ ಮನಸ್ಸು ವೇದನೆಯನ್ನು ಪಟ್ಟಿತ್ತು. ಅಷ್ಟರಲ್ಲಿ ಮಾಧ್ಯಮಗಳು ರವಿ ಆತ್ಮಹತ್ಯೆ ಕುರಿತಂತೆ ಸಾಕಷ್ಚು ಸುದ್ದಿಗಳನ್ನು ಪ್ರಸಾರ ಕೂಡ ಮಾಡುತ್ತಿದ್ದವು.

jyothi-column-low-resನಿಷ್ಠಾವಂತ ಐಎಎಸ್ ಅಧಿಕಾರಿಯ ಸಾವಿನ ಸುತ್ತ ನಿಧಾನವಾಗಿ ಸರ್ಕಾರದ ಪಾತ್ರವನ್ನು ಹಿಂಬಾಲಿಸಲಾಗಿತ್ತು. ಸಚಿವರು ಕೆಲವರು ಮುಖ್ಯಮಂತ್ರಿ ಹೀಗೆ ಹಲವು ಕಾರಣಗಳು ರವಿ ಆತ್ಮಹತ್ಯೆ ಹಿಂದೆ ಥಳಕು ಹಾಕಲಾಗಿತ್ತು. ಈ ವಿಷಯಗಳು ಕೆಲವು ವರದಿಗಳಲ್ಲಿ ಉಲ್ಲೇಖವಾಗಿದ್ದವು.

ಎಲ್ಲೇ ಹೋದ್ರು ಆತ್ಮಹತ್ಯೆಗೆ ಒತ್ತಾಯವೇ ? ಅಥವಾ ಕೊಲೆಯೇ ? ರಿಯಲ್ ಎಸ್ಟೇಟ್ ಲಾಬಿಗೆ ಅಧಿಕಾರಿ ಬಲಿಯಾದ್ರೇ ಪ್ರತಿಯೊಬ್ಬರು ಕೇಳುತ್ತಿದ್ದ ಪ್ರಶ್ನೆಗಳಿವು,

ಮಾಧ್ಯಮಗಳ ತೀರ್ಪು..ಅವಸರ

ರಾಷ್ಟ್ರೀಯ ಮಟ್ಟದಲ್ಲು ಡಿ. ಕೆ. ರವಿ ಆತ್ಮಹತ್ಯೆ ಕುರಿತಂತೆ ಚರ್ಚೆ ನಡೆಯುತ್ತಿತ್ತು. ‘ಟೈಮ್ಸ್ ನೌ ‘ಅರ್ನಾಬ್ ಗೋಸ್ವಾಮಿ ತೀರ್ಪನ್ನೇ ಕೊಟ್ಟಿದ್ರು. ಸರ್ಕಾರ, ವ್ಯವಸ್ಥೆಯೇ ಡಿ. ಕೆ. ರವಿ ಸಾವಿಗೆ ಕಾರಣವೆಂಬಂತೆ ಮಾತಾಡುತ್ತಿದ್ರು. ‘ಇಂಡಿಯಾ ಟುಡೇ’ಯಲ್ಲಿ ರಾಜ್ ದೀಪ್ ಸರ್ದೇಸಾಯಿ ಎಲ್ಲಾ ದೃಷ್ಟಿಕೋನದಿಂದಲು ಸತ್ಯವನ್ನು ಹುಡುಕುವ ರೀತಿ ಮಾತಾಡುತ್ತಿದ್ರು.

ಕನ್ನಡದ ಚಾನೆಲ್ ಒಂದು ಜನಾಭಿಪ್ರಾಯಕ್ಕೆ ಮುಂದಾಗಿತ್ತು. ಮುಖ್ಯಮಂತ್ರಿಗೆ ಚಪ್ಪಲ್ ನಲ್ಲಿ ಹೊಡೆಯುವೆ ಎಂದು ಜನರ ಆಕ್ರೋಶ ತಲುಪವಷ್ಟು ವಿಷಯವನ್ನು ವೈಭವೀಕರಿಸತೊಡಗಿತ್ತು. ಇಲ್ಲಿ ನಾನಂತು ಸರ್ಕಾರದ ಪರವಾಗಲಿ ವಿರುದ್ಧವಾಗಲಿ ಮಾತಾಡತೊಡಗಿಲ್ಲ,

ನಿಜ ನಿಷ್ಟಾವಂತ ಅಧಿಕಾರಿಗಳನ್ನು ಎತ್ತಂಗಡಿ ಮಾಡೋದನ್ನು ನಾವು ವಿರೋಧಿಸಿದ್ದೇವೆ. ಆದರೆ ರವಿ ಪ್ರಕರಣದಲ್ಲಿ ನಿಜವಾಗಿಯು ಆದದ್ದೇನು ಅನ್ನೋದರ ಕುರಿತಂತೆ ತೀರ್ಪು ಕೊಡಲು ನಾವು ಶಕ್ತರಿರಲಿಲ್ಲ. ನಾನಂತು ಡಿ.ಕೆ. ರವಿ ಅವರನ್ನು ಮಾತಾಡಿಸಿರಲಿಲ್ಲ. ಅಥವಾ ಯಾವ ರೀತಿಯ ಅಭಿಪ್ರಾಯ ಕೊಡೋ ಸ್ಥಿತಿಯಲ್ಲಿ ಇರಲಿಲ್ಲ. ಪ್ರತಿ ವ್ಯಕ್ತಿಗೆ ಯಾರಿಗು ಹೇಳಿಕೊಳ್ಳಲಾರದ ವೈಯಕ್ತಿಕ ಸತ್ಯಗಳಿರುತ್ತದೆ. ಕೆಲವೊಮ್ಮೆ ತೀರಾ ಆತ್ಮೀಯರ ಬಳಿ ಅವರು ಅದನ್ನು ಮುಕ್ತವಾಗಿ ಹೇಳಬಹುದು. ಅಥವಾ ತನ್ನೊಳಗೆ ಬೆಚ್ಚಗೆ ಇಟ್ಟುಕೊಂಡಿರಬಹುದು. ಅದು ಆತನಿಗೆ ಅಥವಾ ಅವಳಿಗೆ ತುಂಬಾ ಅಮೂಲ್ಯವಾದ ಸತ್ಯವಾಗಿರಬಹುದು.

ಆದರೆ ರವಿ ಪ್ರಕರಣದಲ್ಲಿ ವಿಷಯವನ್ನು ಎಲ್ಲಾ ದೃಷ್ಟಿಕೋನದಿಂದ ನೋಡುವ ಗೋಜಿಗೆ ಕೆಲವು ಮಾಧ್ಯಮಗಳು ಹೋಗಲೇ ಇಲ್ಲ. ಅಥವಾ ಒಂದು ಇಮೇಜ್ ನ ಜೊತೆ ಹೋದರೆ ಮತ್ತು ಸರ್ಕಾರವನ್ನು ಬೈದ್ರೆ ಜನ ಇಷ್ಟಪಡಬಹುದೆಂಬ ತೀರ್ಮಾನಕ್ಕೆ ಕೆಲವರು ಬಂದಿರಬಹುದು, ಹಾಗಾಗಿದ್ರೆ ಅದು ಮಾಧ್ಯಮದ ದುರಂತ.

ಮಳೆ ನಿಂತು ಹೋದ ಮೇಲೆ …

ಅದೊಂದು ರೀತಿಯಲ್ಲಿ ಸುದ್ದಿಯ ಅಬ್ಬರ. ನಿಜ ಯಾವುದು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ, ನಿಖರತೆಯಿಲ್ಲ. ಒಂದೆಡೆ ವಿಷಯವನ್ನು ರಾಜಕೀಯಗೊಳಿಸುವ ಪ್ರಯತ್ನ, ಇನ್ನೊಂದೆಡೆ ಜಾತಿ ಹೆಸರಲ್ಲಿ ವಿಷಯಾಂತರ. ಇಂತಹ ಬೆಳವಣಿಗೆ ಮಧ್ಯೆ ಪ್ರಕರಣವನ್ನು ಸಿಬಿಐ ಗೆ ವಹಿಸಲಾಯಿತು. ಆಗಲೇ ವಿಧಾನಸೌದದ ಮೊಗಸಾಲೆಯಲ್ಲಿ ಐಎಎಸ್ ಅಧಿಕಾರಿಯೊಬ್ಬರನ್ನು ರವಿ ತುಂಬಾನೆ ಪ್ರೀತಿಸುತ್ತಿದ್ರು. ಆದರೆ ಆಕೆ ಸ್ಪಂದಿಸದ ಕಾರಣ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.

girl in loveಇದೀಗ ಮತ್ತೆ ಸಿಬಿಐ ವರದಿಯಲ್ಲಿ ವೈಯಕ್ತಿಕ ಪ್ರೀತಿಯ ಕಾರಣವೇ ಸಾವಿಗೆ ಕಾರಣ ಎಂಬ ಸಾಲುಗಳಿವೆ ಎಂಬ ಅಂಶ ಬಹಿರಂಗಗೊಂಡಿದೆ. ವರದಿ ಸುಳ್ಳೆಂದು ಕೆಲವರು ಹೇಳುತ್ತಿದ್ದಾರೆ.

ಪ್ರೀತಿಯ ವಿಚಾರದಲ್ಲಿ ಕೆಲವೊಮ್ಮೆ ಪ್ರತಿಯೊಬ್ಬ ಹತಾಶನಾಗುತ್ತಾನೆ. ಅವನ ಅಥವಾ ಅವಳ ಮಾನಸಿಕ ಸ್ಥಿತಿ ಆಗ ತುಂಬಾನೆ ಸೂಕ್ಷ್ಮವಾಗಿರುತ್ತದೆ. ಇಡೀ ಜಗತ್ತನ್ನೇ ಪ್ರೀತಿಸುವ ವ್ಯಕ್ತಿಯೊಂದಿಗೆ ಕಲ್ಪಿಸುವವರಿಗೆ ಅವನು ಅಥವಾ ಅವಳಿಲ್ಲದ ಜಗತ್ತು ಶೂನ್ಯವೆನಿಸುತ್ತದೆ. ಜಗತ್ತಿಗೆ ಸುಂದರ, ಪ್ರಭಾವಿ  ಎಂದೆಲ್ಲಾ ತೋರುತ್ತಿದ್ದರು ಒಳಗೊಳಗೇ ಶಕ್ತಿಹೀನನಾಗಿರುತ್ತಾನೆ. ಕ್ಷಣ ಕ್ಷಣವು ಸಾಯುತ್ತಾನೆ. ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾರದ ಸ್ಥಿತಿಯಲ್ಲಿ ಪರಿಹಾರಕ್ಕಾಗಿ ಶಾಶ್ವತ ವಿದಾಯಕ್ಕಾಗಿ ಆತ್ಮಹತ್ಯೆಗೆ ಮೊರೆ ಹೋಗುತ್ತಾನೆ.

ಡಿ.ಕೆ. ರವಿಯ ಸಂದೇಶಗಳತ್ತ ಗಮನ ಹರಿಸಿದ್ರೆ ಇಂತಹುದ್ದೇ ವ್ಯಾಕುಲತೆ, ಅತಿಯಾದ ಭಾವುಕತೆ, ಆತನೇ ಸೃಷ್ಟಿಸಿಕೊಂಡ ಭಾವನಾತ್ಮಕ ಜಗತ್ತು, ಅವಲಂಬನೆ ಸ್ಪಷ್ಟವಾಗಿ ಕಾಣುತ್ತದೆ. ತನ್ನನ್ನು ತಾನು ಪ್ರೀತಿಸುವ ವ್ಯಕ್ತಿ ಜೊತೆ ರವಿ ಜೋಡಿಸಿಕೊಂಡ ಪರಿ ಗೋಚರವಾಗುತ್ತದೆ. ಆತ್ಮದ ಬಗ್ಗೆ ಮಾತನಾಡುತ್ತಾ ಎಲ್ಲೋ ಈ ಜಗತ್ತಿನಲ್ಲಿ ಸಾಧ್ಯವಾಗದನ್ನು ಸಾವಿನ ಮೂಲಕ ಸಾಧಿಸುವ ಹಠ ಆತ್ಮದ ಬಗ್ಗೆ ಸಂದೇಶದಲ್ಲಿ ಮಾಡಿರುವ ಉಲ್ಲೇಖ ಪುಷ್ಟೀಕರಿಸುತ್ತದೆ. ಆತ್ಮ  ಸಾಯುವುದಿಲ್ಲ ಹಾಗಾಗಿ ದೇಹ ಮೀರಿ ಆತ್ಮದ ಜೊತೆ ನಾನು ಇರುತ್ತೇನೆ ಎನ್ನೋ ಮಾತು ಅತಿ ಭಾವುಕತೆಯ ಪ್ರತೀಕವೆನಿಸುತ್ತದೆ.

ನನಗಿರುವುದು ಎರಡೇ ಆಯ್ಕೆ , ಒಂದೋ ನಿನ್ನನ್ನು ಮರೆಯುವುದು , ಅದು ಸಾಧ್ಯವಾಗದ ಮಾತು ಹಾಗಾಗಿ ಆತ್ಮಹತ್ಯೆ ಆಯ್ಕೆ ಮಾಡಿಕೊಂಡಿದ್ದೇನೆ ಎಂಬ ಸಂದೇಶದ ಸಾಲುಗಳು ನನ್ನನ್ನಂತು ತಟ್ಟಿದವು. ಆದರೆ ಜನರ ಸೇವೆಗಾಗಿ ಆ ಪ್ರೀತಿಯನ್ನು ಮುಡುಪಾಗಿಡಬಹುದಿತ್ತೇನೋ ಎಂಬ ಇನ್ನೊಂದು ಯೋಚನೆಯು ಮೂಡಿಬಂತು.

ಏನೇ ಇರಲಿ ಡಿ. ಕೆ. ರವಿ ಆತ್ಮಹತ್ಯೆ ಯ  ಕಾರಣದ ನಂತರ ಗುಡುಗಿನಂತೆ ಸದ್ದು ಮಾಡಿದ ವಿವಿಧ ವ್ಯಾಖ್ಯಾನಗಳ ನಂತರ ಸಿಗದ ಪ್ರೀತಿ ಕಾರಣ ಎಂಬ ವಿಷಯವನ್ನು ಸಿಬಿಐ ವರದಿ ಪ್ರಸ್ತಾಪಿಸಿದೆ. ಡಿ. ಕೆ. ರವಿ ಭಾವನೆಗಳಿಗೆ ಗೌರವವಿರಲಿ. ಸಾಯಬಾರದಿತ್ತು ನಿಜ.. ಸಾವಿನ ನಂತರ ಸತ್ಯದ ಶೋಧನೆಯು ಸುಳ್ಳಿನ ಪಥದಲ್ಲಿ ಇಲ್ಲದಿರಲಿ. ನಾವೇ ಕಲ್ಪಿಸಿಕೊಂಡ ಕಲ್ಪನೆಗಳ ಆಧಾರದ ಮೇಲೆ ಜನರ ದಿಕ್ಕು ತಪ್ಪಿಸುವ ಪ್ರಯತ್ನಗಳು ನಿಲ್ಲಲಿ  ಅಷ್ಟೇ.

ಮುಂದಿನ ವಾರ ಮತ್ತೊಂದು ಕವರೇಜ್ ನ   ನೆನಪಿನೊಂದಿಗೆ ಬರ್ತೀನಿ,..

ಜ್ಯೋತಿ ಇರ್ವತ್ತೂರು …

4 Comments

 1. ಮಮತ
  November 29, 2016
 2. Palahalli Vishwanath
  November 28, 2016
 3. Pradeep
  November 28, 2016
 4. Gayatri Badiger, Dharwad
  November 28, 2016

Add Comment

Leave a Reply