Quantcast

ಚಾರಣಿಗರೇ, ಇಂಬಳಗಳಿವೆ ಎಚ್ಚರಿಕೆ!

rajeev narayan nayakರಾಜೀವ ನಾರಾಯಣ ನಾಯಕ

ಕಾಡು ತನ್ನೊಡಲಲ್ಲಿ ಏನೇನೋ ನಿಗೂಢತೆಯನ್ನು ತುಂಬಿಕೊಂಡಿರುತ್ತದೆ. ಸಹಸ್ರಾರು ಸಸ್ಯಗಳು ಮತ್ತು ಪ್ರಾಣಿ ಪ್ರಭೇದಗಳು ಹಾಗೂ ಅವುಗಳ ಜೀವನಕ್ರಮ – ಸೃಷ್ಟಿಯ ಬಗ್ಗೆ ವಿಸ್ಮಯದ ಭಾವನೆ ಮೂಡಿಸುತ್ತವೆ.  ಜೀವ ವೈವಿಧ್ಯಗಳಿಂದಾಗಿ ನಮ್ಮ ಪಶ್ಚಿಮಘಟ್ಟ ಮತ್ತು ಮಲೆನಾಡು ಪ್ರದೇಶಗಳು ಭೂಮಿ ಮೇಲಿನ ಅತಿ ಸೂಕ್ಷ್ಮ ತಾಣಗಳೆನಿಸಿಕೊಂಡಿವೆ. ಇಲ್ಲಿ ಅಪರೂಪದ ಸಸ್ಯಗಳಿವೆ, ಪ್ರಾಣಿಪಕ್ಷಿಗಳಿವೆ. ವಿಶಿಷ್ಟ ಜೀವಿಗಳಿವೆ. ಅವುಗಳಲ್ಲಿ ಈ ಇಂಬಳವೂ ಒಂದು! ಹಿರುಡಿನಿಯ ಎಂಬ ದ್ವಿಲಿಂಗಿ ಬಳಗಕ್ಕೆ ಸೇರಿದ ಈ ಜೀವಿಯು ಪರಾವಲಂಬಿಯಾಗಿದ್ದು ಪ್ರಾಣಿಗಳ ರಕ್ತಹೀರಿ ಬದುಕುತ್ತದೆ.

ಆದಿ ವೈದ್ಯ ಸುಶ್ರುತನು ಇಂಬಳಗಳನ್ನು ಬಳಸಿ ಮೈಕ್ರೋ ಸರ್ಜರಿ ನಡೆಸುತ್ತಿದ್ದನಂತೆ. ದೇವತೆಗಳ ವೈದ್ಯ ಧನ್ವಂತರಿಯು ಒಂದು ಕೈಯಲ್ಲಿ ಇಂಬಳವನ್ನು ಧರಿಸಿದ್ದಾನೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಇಂಬಳ ಕಚ್ಚುವ ನವಿರು ಹಾಸ್ಯದ ಪ್ರಸಂಗವಿದೆ. ಯಾರಾದರೂ ಕಚಗುಳಿ ಮಾಡಿದರೆ ನಮ್ಮ ಅಂಕೋಲಾ ಕಡೆ ಇಂಬಳಿಕೆ ಮಾಡಬೇಡ ಅನ್ನುತಾರೆ. ಈ ಶಬ್ದದ ಉತ್ಪತ್ತಿ ಇಂಬಳ ಹುಳದಿಂದಲೆ ಆಗಿರಬಹುದೆ?

notesದಾರದ ಗಾತ್ರದ ಇಂಬಳಗಳು (ಉಂಬಳ ಎಂದು ಕೂಡ ಕರೆಯುತ್ತಾರೆ) ಪ್ರಾಣಿಗಳ ಮತ್ತು ಮನುಷ್ಯರ ಮೈಗೆ ಅಂಟಿಕೊಂಡು ಅರಿವಾಗದಂತೆ ರಕ್ತ ಹೀರುವ ಜೀವಿಗಳು. ಒಮ್ಮೆ ರಕ್ತ ಹೀರಿದರೆ ಅವಕ್ಕೆ ತಿಂಗಳುಗಟ್ಟಲೆ ಹೊಟ್ಟೆ ತುಂಬಿರುತ್ತದಂತೆ! ಇಂಬಳಗಳ ಬಾಯಿಯಲ್ಲಿ ಕೆಮಿಕಲ್ ಫ್ಯಾಕ್ಟರಿಯೇ ಇದೆ. ಅವು ಕಚ್ಚಿದ್ದು ಗೊತ್ತಾಗದಿರಲು ಅರಿವಳಿಕೆ ಉಂಟು ಮಾಡುವ ರಾಸಾಯನಿಕ ವಸ್ತು ಸ್ರವಿಸುತ್ತವೆ, ನಮ್ಮ ರಕ್ತನಾಳಗಳಿಂದ ಸಲೀಸಾಗಿ ರಕ್ತ ಹರಿದು ಬರಲು ರಕ್ತ ಹೆಪ್ಪುಗಟ್ಟದಂತೆ ಮಾಡುವ ರಾಸಾಯನಿಕ ವಸ್ತುವೂ ಇದೆ!

ಹಿಂದೊಮ್ಮೆ ಗೋವಾದ ದೂದಸಾಗರದಲ್ಲಿ ಒಂದೆರಡು ಇಂಬಳಗಳಿಂದ ಕಚ್ಚಿಸಿಕೊಂಡು ಏನೋ ಸ್ವಲ್ಪ ರಕ್ತ ಕುಡಿದು ನಂತರ ತಮ್ಮಷ್ಟಕ್ಕೇ ಬಿದ್ದು ಹೋಗುತ್ತವೆ, ‘ಇದೊಂಥರಾ ರಕ್ತದಾನ’ ಮಾಡಿದಂತೆ ಅಂತ ಸುಮ್ಮನೇ ಬಿಟ್ಟಿದ್ದೆ. ಈ ಇಂಬಳಗಳ ಪ್ರಚಂಡ ಪ್ರತಾಪ ಅನುಭವಕ್ಕೆ ಬಂದದ್ದು ಇತ್ತೀಚೆಗೆ! ನಮ್ಮ ಅಂಕೋಲಾ ತಾಲೂಕಿನ  ಅಚವೆ ಸಮೀಪವಿರುವ ನಿಶಾನೆ ಗುಡ್ಡ ಹತ್ತಿಳಿದಾಗ! ಒಣಕಡ್ಡಿಯಂತೆ ಬಿದ್ದುಕೊಂಡಿದ್ದ ಇವು ಹಿಂದಿನ ದಿನ ಮಳೆಯಾಗಿದ್ದರಿಂದ ಸಕ್ರಿಯಗೊಂಡಿದ್ದವು. ಹೆಜ್ಜೆಯಿಟ್ಟಲ್ಲಿ ದಾಳಿಯಿಡುತ್ತಿದ್ದವು.

ಇಂಬಳಗಳು ಮೊದಲು ಕಚ್ಚುವ ಭಾಗಕ್ಕೆ ಬಾಯಿಯ ಲಾಲಾರಸವನ್ನು ಲೇಪಿಸಿ ಆ ಭಾಗವು ಸಂವೇದನೆಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ನಂತರ ದೇಹಕ್ಕೆ ಚುಚ್ಚಿ ರಕ್ತನಾಳದಿಂದ ನೇರವಾಗಿ ರಕ್ತ ಹೀರಿಕೊಳ್ಳುತ್ತಿದ್ದರೂ ಗೊತ್ತೇ ಆಗುವುದಿಲ್ಲ. ರಕ್ತ ಸೋರಿಕೆ ತಡೆಯಲು ರಕ್ತ ಹೆಪ್ಪುಗಟ್ಟಿಸಿಕೊಳ್ಳುವ ಸ್ವಯಂ ವ್ಯವಸ್ಥೆಯೊಂದು ನಮ್ಮ ದೇಹರಚನೆಯಲ್ಲಿದೆ. ಈ ಇಂಬಳಗಳು ರಕ್ತ ಹೆಪ್ಪುಗಟ್ಟದಂಥ ಪ್ರತಿ ರಾಸಾಯನಿಕಗಳನ್ನು ತಮ್ಮ ಬಾಯಿಯಿಂದ ಬಿಡುಗಡೆಗೊಳಿಸಿ ರಕ್ತ ಸರಾಗವಾಗಿ ತಮ್ಮ ಉದರದೊಳಗೆ ಹರಿಯುವಂತೆ ಮಾಡುತ್ತವೆ. ಕಣ್ಣಿಂದ ಕಾಣುವ ವರೆಗೂ ನಿಮಗೆ ಇಂಬಳ ಕಚ್ಚಿದ್ದು ಅರಿವೇ ಆಗುವುದಿಲ್ಲ.

ಇಂಬಳಗಳು ವಿಷ ಜಂತುಗಳಲ್ಲವಾದ್ದರಿಂದ ಅವು ಕಚ್ಚಿದರೆ ಅಪಾಯವೇನೂ ಇಲ್ಲ. ಆದರೆ ಅವು ಕಚ್ಚಿದ ಭಾಗದಲ್ಲಿ ತುರಿಕೆ ಶುರುವಾಗಿ ಕೆರೆದುಕೊಂಡರೆ ಮಾತ್ರ ಸಮಸ್ಯೆ ಶುರುವಾಗುತ್ತದೆ. ಉಗುರಿಂದ ತುರಿಸಿಕೊಂಡು ಸೋಂಕು ತಗಲುವ ಸಾಧ್ಯತೆಯಿರುತ್ತದೆ. ಮುಖ್ಯವಾಗಿ ಇಂಬಳಗಳು ಕಚ್ಚಿರುವುದನ್ನು ಕಂಡಾಗ ಗಾಬರಿಯಾಗಿ ಅವನ್ನು ಕಿತ್ತೆಸೆಯುವಲ್ಲಿ ಅವಸರ ಮಾಡಬಾರದು. ಅದು ಕಚ್ಚಿಕೊಂಡಲ್ಲಿ ಬೆರಳು ಅಥವಾ ಉಗುರ ತುದಿಯಿಟ್ಟು ಹಗುರವಾಗಿ ಪಕ್ಕಕ್ಕೆ ಸರಿಸಿ ನಮ್ಮ ದೇಹದಿಂದ ಪ್ರತ್ಯೇಕಿಸಿ ಎಸೆಯಬೇಕು.

ಬಲವಂತವಾಗಿ ಎಳೆದರೆ ಗಟ್ಟಿ ಕಚ್ಚಿಕೊಂಡ ಇಂಬಳಗಳ ಬಾಯಿಯ ವೃತ್ತಾಕಾರದ ಭಾಗವೊಂದು ಹಾಗೆ ದೇಹದಲ್ಲೇ ಉಳಿದುಕೊಳ್ಳುವ ಸಾಧ್ಯತೆಯಿರುತ್ತದೆ. ಅದು ರಕ್ತನಾಳಗಳುದ್ದಕ್ಕೂ ಚಲಿಸಿ ಅವಕ್ಕೆ ಹಾನಿ ಮಾಡಬಹುದು. ಅದೂ ಅಲ್ಲದೇ ಇಂಬಳವನ್ನು ಗಡಿಬಿಡಿಯಲ್ಲಿ ಕೊಡಹುವಾಗ ಅದು ತನ್ನ ಹೊಟ್ಟೆಯಲ್ಲಿದ್ದುದನ್ನು ನಮ್ಮ ದೇಹದೊಳಗೆ ಕಾರಿಬಿಡಬಹುದು. ಅದರಲ್ಲಿಯ ರೋಗಾಣುಗಳು ನಮ್ಮ ದೇಹದೊಳಗೆ ಸೇರಿದರೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನನಗೆ ಆದದ್ದೂ ಅದೇ!

ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಕುಮಟೆಯ ನಿತಿನ್ ಪೀಟರ್, ಪವನ್ ಮತ್ತು ಓಂಕಾರ ಪೈ ಮುಂತಾದ ಎಳೆಯ ಗೆಳೆಯರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಎರಡನೇ ಅತಿ ಎತ್ತರದ ಪ್ರದೇಶವಾದ ಯಾಣಕ್ಕೆ ಸಮೀಪವಿರುವ ನಿಶಾನೆ ಗುಡ್ಡಕ್ಕೆ ಚಾರಣ ಹೋದಾಗ ಅದು ಆದದ್ದು! ಗುಡ್ಡವೇರುವಾಗ ಇಂಬಳಗಳ ಬಗ್ಗೆ ಧ್ಯಾನ ಇತ್ತಾದರೂ ಸಾಕ್ಸ್ ಒಳಗೆ ಸೇರಿಕೊಂಡ ಹತ್ತಾರು ಇಂಬಳಗಳು ಹಿಮ್ಮಡಿ ಭಾಗದಲ್ಲಿ ಕಚ್ಚಿಕೊಂಡು ನಿರುಂಬಳವಾಗಿ ರಕ್ತ ಹೀರಿದ್ದು ಗೊತ್ತೇ ಆಗಲಿಲ್ಲ.(ಥೇಟ್ ಕುವೆಂಪುರವರ  ಮಲೆಯಲ್ಲಿ ಮದುಮಗಳು ಕಾದಂಬರಿಯಲ್ಲಿ ಗುತ್ತಿಗೆ ಆದ ಹಾಗೇ!) ರಕ್ತ ಹೀರಿದ ಇಂಬಳಗಳು ದ್ರಾಕ್ಷಿ ಹಣ್ಣಿನಂತಾಗಿ ನಡೆಯುವಾಗ ಶೂಸ್ ಗೆ ತಿರಿದಿರಬೇಕು. ಆ ಘರ್ಷಣೆಯಲ್ಲಿ ಬಹುಶ: ಅವು ಹೊಟ್ಟೆಯೊಳಗಿನ ದ್ರವವನ್ನು ನನ್ನ ದೇಹದೊಳಗೆ ಕಾರಿಕೊಂಡಿರಬೇಕು. ಅಥವಾ ಆ ತಿಕ್ಕಾಟದಲ್ಲಿ ಇಂಬಳಗಳ ಉಂಗುರದ ಬಾಯಿ ಕಳಚಿಕೊಂಡಿರಲೂಬಹುದು. ಅಂತೂ ಕೆಲವು ದಿನಗಳ ನಂತರ ತುರಿಕೆ ಶುರುವಾಯಿತು!

leech1ತುರಿಸುವಾಗ ನೊಚ್ಚಗಾಗುವುದರಿಂದ ನಿದ್ದೆಯಲ್ಲಿ ತುರಿಸುವ ಕ್ರಿಯೆ ನಮ್ಮ ಅರಿವಿಲ್ಲದೇ ನಡೆದುಹೋಗುತ್ತದೆ. ಇಡೀ ಪಾದವೇ ಕೆಂಪಗಾಗಿ ಬಿಚ್ಚಿಕೊಂಡಿತು. ರಕ್ತನಾಳಗಳುದ್ದಕ್ಕೂ ಬೊಕ್ಕೆಗಳು ಮೂಡುತ್ತಾ ಹೋದವು. ಮುಂಬಯಿಯಲ್ಲಿ ಚರ್ಮರೋಗ ತಜ್ಞರಲ್ಲಿ ತೋರಿಸಿದಾಗ ಆಕೆ ಕೂಡಲೇ ಆಡ್ಮಿಟ್ ಆಗು ಎಂದು ಸ್ಟ್ರಾಂಗ್ ಸ್ಟಿರಾಯಿಡ್ ಗುಳಿಗೆಗಳನ್ನು ಬರೆದಳು! ರಕ್ತ ಹೀರಲು ಹಾತೊರೆಯುತ್ತಿರುವ ಇಂಬಳದಂತೇ ಕಂಡಳು! ಇದೋ ಬಂದೆ, ಎಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡೆ!  ಕೂಡಲೆ ಊರಿಗೆ ಬಂದು ಆಯುರ್ವೇದ ಚಿಕಿತ್ಸೆಯ ಮೊರೆ ಹೋದೆ. ಕುಮಟೆಯ ಕಡ್ಲೆ ಡಾಕ್ಟರು ಕಾಳಜಿಯಿಂದ ಚಿಕಿತ್ಸೆ ಮಾಡಿದರು. ಗುಳಿಗೆಗಳನ್ನು ತಿನ್ನದ ನನಗೆ ಯಕಶ್ಚಿತ್ ಜಂತುವೊಂದು ದಿನಕ್ಕೆ ಹತ್ತತ್ತು ಗುಳಿಗೆಗಳನ್ನು ನುಂಗುವಂತೆ ಮಾಡಿತು.

ಕಾಲಿಗೆ ಬ್ಯಾಂಡೇಜು ಸುತ್ತಿ ಹೌಸ್ ಅರೆಸ್ಟ್ ನಲ್ಲಿರಬೇಕಾಯಿತು. ಇಂಬಳ ಕಚ್ಚಿ ಆದ ಅವಘಡವನ್ನು ಡಿಮೊನಟೈಸೇಶನ್ ಗಿಂತ ರಹಸ್ಯವಾಗಿ ಇಟ್ಟರೂ ಕೆಲವು ಸಂಬಂಧಿಕರಿಗೆ ಹೇಗೋ ಗೊತ್ತಾಯಿತು. ಅವರು ಮೂಸಂಬಿ ಕಟ್ಟಿಸಿಕೊಂಡು ‘ನೋಡಲು’ ಬರಲಿರುವುದು ಕಲ್ಪಿಸಿಕೊಂಡು ಹೆದರಿ ‘ವಾಸಿಯಾಯ್ತು’ ಎಂದು ಸ್ವಯಂ ಘೋಷಿಸಿಕೊಂಡು ಮತ್ಸ್ಯಗಂಧ ಟ್ರೇನು ಹತ್ತಿದೆ! ನಾನೇ ಡ್ರೆಸ್ಸಿಂಗ್ ಮಾಡಿಕೊಳ್ಳುವುದನ್ನು ಕಲಿತೆ. ಒಂದು ತಿಂಗಳ ನಂತರ ‘ಇಂಬಳಗಾಯ’ ಹಿಡಿತಕ್ಕೆ ಬಂತು. ಅಂತೂ ನಾನು ನಿರಪಾಯಕಾರಿ ಎಂದು ಪರಿಗಣಿಸಿದ್ದ ಜಂತುವೊಂದು ತಿಂಗಳುಗಟ್ಟಲೆ ಕಷಾಯ ಕುಡಿಸಿತು!

ಇತ್ತೀಚೆಗೆ ಹುರುಪಿನಲ್ಲಿ ಚಾರಣಪಾರಣ ಎನ್ನುತ್ತಾ ಕಾಡೊಳಗೆ ನುಸುಳುವ ಎಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಚಾರಣಿಗರು ಮಂಡಿವರೆಗೆ ಬರುವ ವಿಶೇಷ ಲೀಚ್ ಸಾಕ್ಸ್ ಬಳಸಿದರೆ ಒಳ್ಳೆಯದು. ಅವರು ಕಚ್ಚಿದ ಇಂಬಳವನ್ನು ಹಗುರವಾಗಿ ಬಿಡಿಸಿಕೊಳ್ಳುವ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕು. ಚಾರಣಕ್ಕೆ ಹೋಗುವಾಗ ಕೈಕಾಲಿಗೆಲ್ಲ  ಡೆಟ್ಟಾಲ್ ಒರೆಸಿಕೊಂಡರೆ ಇಂಬಳಗಳು ಅಷ್ಟಾಗಿ ಹತ್ತುವುದಿಲ್ಲವಂತೆ. ಉಪ್ಪು, ಹೊಗೆಸೊಪ್ಪು ಅಥವಾ ಸುಣ್ಣದ ಸಣ್ಣಗಂಟನ್ನು ಇಟ್ಟುಕೊಂಡರೆ ಅದನ್ನು ಕಚ್ಚಿಕೊಂಡಿರುವ ಉಂಬಳಕ್ಕೆ ತಾಗಿಸಿದಾಗ ಉದುರಿಹೋಗುತ್ತವೆ. ಆದರೆ ಅದನ್ನು ನಾಜೂಕಾಗಿ ಮಾಡದಿದ್ದರೆ ಗಲಿಬಿಲಿಯಲ್ಲಿ ಇಂಬಳಗಳು ತಮ್ಮ ಹೊಟ್ಟೆಯೊಳಗಿನದನ್ನು ನಮ್ಮ ದೇಹದೊಳಗೇ ಕಾರಿದರೆ ಸೆಕೆಂಡರಿ ಇನಫೆಕ್ಷನ್ ಉಂಟಾಗುವ ಸಾಧ್ಯತೆಗಳಿರುತ್ತವೆ. ದೇವತೆಗಳ ವೈದ್ಯ ಮತ್ತು ಆಯುರ್ವೇದದ ಗುರು ಧನ್ವಂತರಿಯ ಕೈಗಳಲ್ಲಿ ಶಂಖ ಚಕ್ರ ಮತ್ತು ಔಷಧಿ ಸಸ್ಯಗಳ ಜೊತೆಗೆ ಇಂಬಳವೂ ಇರುವುದನ್ನು ಅರಿತು ಅದು ಕಚ್ಚಿದಾಗ ಗಾಬರಿ ಬೀಳದೇ ಅವುಗಳೊಡನೆ ಗೌರವಯುತವಾಗಿ ನಡೆದುಕೊಳ್ಳಬೇಕು!

Add Comment

Leave a Reply