Quantcast

ಹೀಗೂ ಉಂಟೇ..!!

ಮೇಯರ್ ಅಬ್ದುಲ್ ಖಾದರ್- ಕಮಿಷನರ್ ಶಂಕರಲಿಂಗೇಗೌಡ !

Chidambara Baikampady

ಚಿದಂಬರ ಬೈಕಂಪಾಡಿ 

ನಾನು ಪತ್ರಕರ್ತನಾಗಿ ಮೇಯರ್ ಅಬ್ದುಲ್ ಖಾದರ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಆಗ ಮಹಾನಗರ ಪಾಲಿಕೆ ಕಚೇರಿ ಇದ್ದದ್ದು ಮಂಗಳೂರು ಹಳೆ ಬಂದರು ಪ್ರದೇಶದಲ್ಲಿ. ಅದು ಸಂಜೆ ಹೊತ್ತು ಹೋಗಿದ್ದ ಕಾರಣ ಜನರೂ ಇರಲಿಲ್ಲ. ಯಾಕೆ ಹೋಗಿದ್ದೆನೆಂದರೆ ಏನಾದರೂ ಸುದ್ದಿ ಸಿಗುತ್ತೆ ಎನ್ನುವ ನಂಬಿಕೆ.

ಸಹಜವಾಗಿ ಅಬ್ದುಲ್ ಖಾದರ್ ನನ್ನನ್ನು ಬನ್ನಿ ಬನ್ನಿ ಎಂದರು. ಅದೂ ಮಹಾನಗರ ಪಾಲಿಕೆಯಾಗಿ ಎರಡನೇ ವರ್ಷ. ಆಗ ತಾನೇ ಮೇಯರ್ ಅಬ್ದುಲ್ ಖಾದರ್. ಸಹಜವಾಗಿಯೇ ಅವರು ಚಹಾ ತರಿಸಿದರು. ಲೋಕಾಭಿರಾಮವಾಗಿ ಮಾತನಾಡಿ ಹೊರಡಬೇಕು ಎನ್ನುವಷ್ಟರಲ್ಲಿ ಗಂಟೆ 7 ಅಗಿತ್ತು.

m-k-shankaralinge-gowda2ನಾನು ಹೊರಡುತ್ತೇನೆ. ಸಮಯವಾಯಿತು ಎಂದಾಗ ಮೇಯರ್ ಅಬ್ದುಲ್ ಖಾದರ್ ನನ್ನನ್ನು ಹೋಗಲು ಬಿಡಲಿಲ್ಲ. ಇಷ್ಟು ಬೇಗ ಮನೆಗೆ ಹೋಗುತ್ತೀರಲ್ಲ ಮದುವೆಯಾಗಿದೆಯೇ, ಮಕ್ಕಳು ನಿಮ್ಮನ್ನು ಕಾಯುತ್ತಾರೆಯೇ ಬನ್ನಿ ..ಬನ್ನಿ ಎಂದು ಕಾರಿನಲ್ಲಿ ಕುಳ್ಳಿರಿಸಿದರು.
ಅವರು ಹೇಳುವುದರಲ್ಲೂ ಸತ್ಯಾಂಶವಿತ್ತು. ನಾನು ಏಕಾಂಗಿ. ಹೋದರೂ ಆಗುತ್ತೇ-ಹೋಗದಿದ್ದರೂ ಆಗುತ್ತೇ. ಆ ಕಾಲದಲ್ಲಿ ಮನೆಯಲ್ಲಿ ಹೊತ್ತಿಗೆ ಸರಿಯಾಗಿ ಕೋಳಿಮರಿ ಗೂಡಿಗೆ ಬರದಿದ್ದರೆ ಮನೆಯವರಿಗೆಲ್ಲ ಚಡಪಡಿಕೆ, ಆದರೆ ನನ್ನ ಬಗ್ಗೆಯಲ್ಲ.

ಕಾರು ಹೊರಟಿತು. ಅಬ್ದುಲ್ ಖಾದರ್ ಅವರಿಗೆ ಏನು ನೆನಪಾಯಿತೋ ಕಮಿಷನರ್ ಮನೆಗೆ ತಿರುಗಿಸು ಎಂದರು. ಚಾಲಕ ಕಾರನ್ನು ಕಮಿಷನರ್ ಮನೆಗೆ ತಿರುಗಿಸಿದ. ಅಂದಹಾಗೆ ಕಮಿಷನರ್ ಶಂಕರಲಿಂಗೇಗೌಡ. ಇವರು ಮುಂದೆ ಬೆಂಗಳೂರಿಗೆ ಹೋದರು. ಎಸ್ ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅವರು ಕೂಡಾ ಪ್ರಧಾನ ಪಾತ್ರವಹಿಸಿದ್ದರು. ಈಗ ಏನಾಗಿದ್ದರೋ ಗೊತ್ತಿಲ್ಲ.

ಹೋಗಿ ಹೋಗಿ ಕಮಿಷನರ್ ಮನೆಗೆ ಯಾಕೆ ಹೋಗದು, ಪಾಪ ಅವರು ಮನೆಯಲ್ಲಿ ಹೆಂಡತಿ, ಮಕ್ಕಳೊಂದಿಗಿರುವ ಸಮಯವೆಂದೆ. ಆಗ ಅಬ್ದುಲ್ ಖಾದರ್ ಅದಕ್ಕೇನಾಯ್ತೂ, ಹೆಂಡತಿ, ಮಕ್ಕಳೊಂದಿಗಿದ್ದರೆ ನಾವೂ ಸೇರಿಕೊಳ್ಳೋಣ, ಅದಕ್ಕೇನಂತೆ ಎಂದು ನಕ್ಕರು.
ಕಾರು ಕಮಿಷನರ್ ಮನೆಗೆ ಹೋಯಿತು. ಕಾರು ನಿಂತರೂ ಕಮಿಷನರ್ ಬರಲಿಲ್ಲ.

ಮನೆಯೊಳಗೆ ಲೈಟ್ ಕೂಡಾ ಇಲ್ಲ. ನಾನು ಕಮೀಷನರ್ ಇಲ್ಲ ಅಂತ ಕಾಣುತ್ತೆ. ಬನ್ನಿ ಹೋಗೋಣ ಎಂದೆ. ಅಬ್ದುಲ್ ಖಾದರ್ ತಡಿ ನೋಡೋಣ ಎಂದು ಕಾರಿನಿಂದ ಇಳಿದರು. ನಾನು ಇಳಿದೆ. ಇಬ್ಬರೂ ನಡೆದುಕೊಂಡು ಮನೆ ಬಾಗಿಲಿಗೆ ತಲುಪಿದೆವು. ಅಷ್ಟೊತ್ತಿಗೆ ಶಂಕರಲಿಂಗೇಗೌಡ ಓಡುತ್ತಾ ಬಂದು ಬಾಗಿಲು ತೆರೆದರು. ವಾಟ್ ಯೆ ಸರ್ಫರೈಸ್ ಎನ್ನುತ್ತಾ ಬಾಗಿಲು ತೆಗೆದು ಬರಮಾಡಿಕೊಂಡರು.

ಅಬ್ದುಲ್ ಖಾದರ್ ಇವರಿಗೆ ಮುಜುಗರವಿದೆ, ಬರುವುದಿಲ್ಲ ಅಂತ ಅಂದ್ರು, ಒತ್ತಾಯ ಮಾಡಿ ಕರೆದುತಂದೆ ಎಂದು ನನ್ನನ್ನು ತೋರಿಸಿದರು. ಚೇ..ಚೇ ಚಿದಂಬರಗೆ ಮುಜುಗರನಾ ನೋ ನೋ ಎನ್ನುತ್ತಾ ನನ್ನನ್ನು ಕೈಹಿಡಿದು ಮನೆಗೆ ಎಳೆದರು.

ಅಂದ ಹಾಗೆ ಮನೆಯಲ್ಲಿ ಯಾರೂ ಇಲ್ಲ ಎಂದರು. ನಾನು ಬಚಾವ್ ಅಂದುಕೊಂಡೆ. ಏನ್ ತೆಗೆದುಕೊಳ್ತೀರಿ ಕುಡಿಯಲು ಚಹಾ.. ಜೂಸ್ ಎಂದರು ಶಂಕರಲಿಂಗೇಗೌಡ. ನಾನು ಬೇಡ ಬಿಡಿ ಚಹಾ ಕುಡಿದೆವು ಅಂದೆ. ಈ ಅಬ್ದುಲ್ ಖಾದರ್ ಮಾತ್ರ ಚಹಾ ಆಗಲಿ ಅಂದ್ರು.

ಚಹಾ ಮಾಡುವುದು ನಾನೇ ಆಗಾಗಿ, ನಿಮಗೆ ಸಿಹಿ-ಕಹಿಯಾದರೆ ಬೇಸರ ಬೇಡ ಎಂದರು ನಗುತ್ತಾ. ಸಿಹಿಯಾದರೆ ಪರವಾಗಿಲ್ಲ, ಕಹಿ ಮಾಡಬೇಡಿ ಎಂದರು ಅಬ್ದುಲ್ ಖಾದರ್. ಅಬ್ದುಲ್ ಖಾದರ್ ಅವರು ಅಡುಗೆ ಮನೆಗ ಹೋದಾಗಲೂ ಅವರನ್ನು ಹಿಂಬಾಲಿಸಿದರು. ನನಗೋ ಕಸಿವಿಸಿ ಆಯ್ತು. ಅವರ ಅಡುಗೆ ಮನೆಗೂ ಬಿಡುವುದಿಲ್ಲ ಈ ಮೇಯರ್ ಅಂದು ಕೊಂಡು ನಾನು ಸುಮ್ಮನೆ ಕುಳಿತೆ. ಕಮಿಷನರ್ ಬಿಡುತ್ತಾರೆಯೇ ನನ್ನನ್ನೂ ಕರೆದರು. ನಾನು ಅವರು ಕರೆದ ಮೇಲೆ ಮನಸ್ಸಿಲ್ಲದ ಮನಸ್ಸಿನಿಂದ ಹೋದೆ.

ಚಹಾ ಮಾಡಲು ಸ್ಟೌ ಹಚ್ಚಿದರು. ನೀರಿಟ್ಟರು. ಸಕ್ಕರೆ, ಚಹಾ ಹುಡಿ ಸೇರಿಸಿ ಚಹಾ ಮಾಡಿದರು. ಈಗ ಮೊದಲೂ ಟೇಸ್ಟ್ ಮಾಡೋರು ಯಾರು ಎನ್ನುವ ಪ್ರಶ್ನೆ. ಆಗ ಅಬ್ದುಲ್ ಖಾದರ್ ಅದಕ್ಕೇ ಚಿದಂಬರ.. ಚಿದಂಬರ ಅಂದರು. ಜೋರಾಗಿ ನಗಾಡಿದ ಶಂಕರಲಿಂಗೇಗೌಡರು ಏನೂ ಇಲ್ಲ ಒಂದೋ ಸಕ್ಕರೆ ಕಡಿಮೆಯಾಗಿರುತ್ತೆ.. ಅಥವಾ ಹೆಚ್ಚಾಗಿರುತ್ತೆ ಬನ್ನಿ ಟೇಸ್ಟ್ ನೋಡಿ ನಿಮ್ಮ ಛಾನ್ಸ್ ಅಂದರು.

ಚಹಾ ಕುಡಿದೆ, ಅಹಾ ಎಂಥ ಟೇಸ್ಟ್ ಅಂದೆ. ಇಬ್ಬರು ಖುಷಿಪಟ್ಟುಕೊಂಡರು. ಶಂಕರಲಿಂಗೇಗೌಡರು ಹೇಗೆ ಕೈಗುಣ ಎನ್ನುತ್ತಾ ಬೀಗಿದರು.

ಇದಿಷ್ಟನ್ನೂ ಹೇಳಿದ್ದು ಯಾಕೆಂದರೆ ಶಂಕರಲಿಂಗೇಗೌಡ ಅಧಿಕಾರಿಯಾಗಿ ಮಂಗಳೂರು ಮಹಾನಗರಪಾಲಿಕೆಗೆ ಭದ್ರಬುನಾದಿ ಹಾಕಿದವರು. ಮೇಧಾವಿ, ಪರಿಣತರೂ ಕೂಡಾ. ಸರಳ, ಸಜ್ಜನಿಕೆಯ ಅಧಿಕಾರಿಯಾಗಿದ್ದರು. ಅವರಿಗೆ ಇಲಾಖೆಯಲ್ಲಿನ ಕಿರಿಯರಿಂದ ಕೆಲಸ ಮಾಡಿಸಿಕೊಳ್ಳುವುದೂ ಗೊತ್ತಿತ್ತು.

ಅವರು ಕಮಿಷನರ್ ಎಂದರೆ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟವರು. ಹಾಗೆಯೇ ಶಿಸ್ತು, ಕಾಳಜಿ ಹಾಗೂ ಪಾರದರ್ಶಕತೆಯನ್ನು ತೋರಿಸಿಕೊಟ್ಟವರು ಕೂಡಾ.
ಕಮಿಷನರ್ – ಮೇಯರ್ ಹೇಗಿರುತ್ತಾರೆ ಎನ್ನುವುದಕ್ಕೆ ಉದಾಹರಣೆ. ಹಾಗೆಯೇ ಪತ್ರಕರ್ತರೂ ಕೂಡಾ.

One Response

  1. Anonymous
    November 29, 2016

Add Comment

Leave a Reply