Quantcast

ಟಿ ವಿ ಚಾನಲ್ ಗಳಿಗೆ ಮೌಢ್ಯಾಧಿಪತಿಗಳೇ ಬಂಡವಾಳ

ಉಂಡೆ ನಾಮದ ಹರಿಕಾರರಿಗೆ ಪ್ರೇರಕರಾರು ಪ್ರಚೋದಕರಾರು ?

naa-divakar

ನಾ ದಿವಾಕರ

ರಾಜ್ಯ ಸರ್ಕಾರ ಮೌಢ್ಯಾಚರಣೆಯನ್ನು ನಿಷೇಧಿಸುವ ಮಸೂದೆಯೊಂದನ್ನು ಜಾರಿಗೊಳಿಸಲು ಸಿದ್ಧವಾಗುತ್ತಿರುವಂತೆಯೇ ಮೈಸೂರಿನಲ್ಲಿ ಒಬ್ಬ ಮುಸ್ಲಿಂ ಯುವಕ ಮೌಢ್ಯದ ಪರಾಕಾಷ್ಠೆಗೆ ಬಲಿಯಾಗಿದ್ದಾನೆ.

ವಶೀಕರಣ ತಂತ್ರಕ್ಕೆ ಬಲಿಯಾಗಿರುವ ಬಾಲಕ ತನ್ನ ಭವಿಷ್ಯದ ದಿನಗಳನ್ನು ಹಸನಾಗಿಸಲು ಹೋಗಿ ಬೀದಿ ಪಾಲಾಗಿದ್ದಾನೆ. ಸಾಂಸ್ಕೃತಿಕ ನಗರಿಯಲ್ಲಿ ಈ ಘಟನೆ ನಡೆದಿರುವುದನ್ನು ಅಪರೂಪದ ಘಟನೆ ಎಂದೇನೂ ಬಣ್ಣಿಸುವ ಅಗತ್ಯವಿಲ್ಲ. ಈ ಯುವಕ ಎಂಟು ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವುದರಿಂದ ಸುದ್ದಿಯಾಗಿದೆ.

lemon-chilli-superstitionವಾಸ್ತವ ಎಂದರೆ ದಿನನಿತ್ಯ ಇಂತಹ ಉಂಡೆ ನಾಮ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಕೇಂದ್ರ ಸರ್ಕಾರದ ರೂಪಾಯಿ ಅಮಾನ್ಯೀಕರಣ ನೀತಿಯ ಪ್ರಹಾರವನ್ನು ತಪ್ಪಿಸಿಕೊಳ್ಳಲು ಹವಣಿಸುತ್ತಿರುವ ಕರಾಳ ದಂಧೆಯ ವಾರಸುದಾರರು ಬಹುಶಃ ಈ ಮೌಢ್ಯಾಧಿಪತಿಗಳಿಗೆ ಶರಣಾಗಬಹುದು. ಶೀಘ್ರದಲ್ಲೇ ಸರಳ-ವಿರಳ-ಮರುಳ ವಾಸ್ತು ತಜ್ಞರು ಅಕ್ರಮ ಸಂಪತ್ತಿನ ವಾರಸುದಾರರ ಮನೆಗಳ ವಿನ್ಯಾಸಗಳನ್ನು ಬದಲಾಯಿಸಬಹುದು. ಪಿರಮಿಡ್ಡುಗಳು, ಸ್ಫಟಿಕ ಹರಳುಗಳು, ಕೆಂಪು ದೀಪಗಳು, ತಾಮ್ರದ ತಗಡುಗಳು ಅಂಗಡಿ ಮುಗ್ಗಟ್ಟುಗಳಲ್ಲಿ ರಾರಾಜಿಸಬಹುದು.

ಮೌಢ್ಯ ಎಂದರೇನು ಎಂಬ ಪ್ರಶ್ನೆ ಎದುರಾದಾಗ ಒಂದು ವಿರಾಟ್ ವಿಶ್ವವೇ ತೆರೆದುಕೊಳ್ಳುತ್ತದೆ. ನಂಬಿಕೆ, ವಿಶ್ವಾಸ ಮತ್ತು ಶ್ರದ್ಧೆಗಳು ಮಾರುಕಟ್ಟೆಯ ಸರಕುಗಳಾದಾಗ, ಬಿಕರಿಯಾಗುವ ವಸ್ತುಗಳಾಗಿ ಪರಿಣಮಿಸಿದಾಗ ಮೌಢ್ಯ ದಲ್ಲಾಳಿಗಳು ಪ್ರತ್ಯಕ್ಷವಾಗುತ್ತಾರೆ. ಜನಸಾಮಾನ್ಯರ ಹತಾಶೆ, ಆತಂಕ ಮತ್ತು ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆ ಈ ದಲ್ಲಾಳಿಗಳಿಗೆ ಬಂಡವಾಳವಾಗುತ್ತದೆ. ಅಸಹಾಯಕ ಜನರ ಆತಂಕಗಳನ್ನು ನಿವಾರಿಸಲು ಜೀವನ ಶೈಲಿಯ ಮಾರ್ಗ ವಿಧಾನಗಳಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡುವ ಬದಲು ಮೌಢ್ಯಾಧಿಪತಿಗಳು ಪ್ರಜ್ಞಾಪೂರ್ವಕವಾಗಿಯೇ ತಮ್ಮ ಮಾರುಕಟ್ಟೆಯ ಸರಕುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾರಂಭಿಸುತ್ತಾರೆ.

ಅತಿವೇಗದಲ್ಲಿ ಮುನ್ನಡೆಯುತ್ತಿರುವ ಆಧುನಿಕ ಸಮಾಜಕ್ಕೆ ತಕ್ಷಣದ ಪರಿಹಾರ ಆಕರ್ಷಣೀಯವಾಗಿ ಕಾಣುವುದೂ ಸಹಜ. ವಿಷಮ ಶೀತ ಜ್ವರದಿಂದ ಬಳಲುತ್ತಿರುವವರಿಗೆ ಕನಿಷ್ಠ ಒಂದು ವಾರದ ಕಾಲ ಚಿಕಿತ್ಸೆ ನೀಡಿ ಗುಣಪಡಿಸುವ ವೈದ್ಯನಿಗಿಂತಲೂ ಸ್ಟೆರಾಯ್ಡ್ ಇರುವ ಒಂದೇ ಒಂದು ಚುಚ್ಚುಮದ್ದು ನೀಡಿ ಕೂಡಲೇ ವಾಸಿ ಮಾಡುವ ವೈದ್ಯ ಪ್ರಿಯನಾಗುತ್ತಾನೆ. ಮೌಢ್ಯಾರಾಧಕರೂ ಸಹ ಇದೇ ಧೋರಣೆಗೆ ಬಲಿಯಾಗುತ್ತಾರೆ. ತಾಳ್ಮೆ ಸಹನೆ ಕಳೆದುಕೊಳ್ಳುತ್ತಿರುವ ಆಧುನಿಕ ನಾಗರಿಕ ಸಮಾಜ ತನ್ನ ಎಲ್ಲ ಸಮಸ್ಯೆಗಳಿಗೂ ತಕ್ಷಣದ ಪರಿಹಾರವನ್ನು ಅರಸುತ್ತಿರುವುದರಿಂದಲೇ ಮೌಢ್ಯವೂ ಹೆಚ್ಚಾಗುತ್ತಿದೆ.

superstition_1665005ಪತ್ರಿಕೆಗಳಲ್ಲಿನ ನಿತ್ಯ ಭವಿಷ್ಯದಿಂದ ಹಿಡಿದು ವಾಸ್ತುಪ್ರಕಾರದ ಜಾಹೀರಾತುಗಳವರೆಗೂ ಹರಡಿರುವ ಮೌಢ್ಯ ಜಗತ್ತಿನ ಜಾಲಕ್ಕೆ ದಿನೇ ದಿನೇ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ವಾಸ್ತು ಪಿರಮಿಡ್ ಇಲ್ಲದ ಅಂಗಡಿ ಮುಗ್ಗಟ್ಟುಗಳನ್ನು ಕಾಣುವುದು ಸಾಧ್ಯವೇ ಇಲ್ಲವೇನೋ ಎನ್ನುವಂತಾಗಿದೆ. ಜೊತೆಗೆ ಸ್ಪಟಿಕದ ಹರಳುಗಳು ನೇತಾಡುತ್ತಿರುತ್ತವೆ. ಹಿತ್ತಾಳೆ ಅಥವಾ ಕಂಚಿನ ಆಮೆಯೊಂದು ಅಂಗಡಿಗಳ ಅಟ್ಟಗಳ ಮೇಲೆ ವಿರಾಜಮಾನವಾಗಿರುತ್ತವೆ. ಧನಾತ್ಮಕ ಶಕ್ತಿಯನ್ನು ವೃದ್ಧಿಸಲು ಮತ್ತು ಋಣಾತ್ಮಕ ಶಕ್ತಿಯನ್ನು ನಿರ್ಬಂಧಿಸಲು ಈ ಪರಿಕರಗಳು ಸಹಾಯಕವಾಗುತ್ತವೆ, ತನ್ಮೂಲಕ ವ್ಯಾಪಾರ ವಹಿವಾಟು ವೃದ್ಧಿಸುತ್ತದೆ ಎಂಬ ಗಾಢವಾದ ನಂಬಿಕೆಯನ್ನು ಬಿತ್ತಲಾಗುತ್ತಿದೆ.

ಪ್ಲಾಸ್ಟಿಕ್ ನಿಂದ ತಯಾರಿಸಲಾದ ಒಂದು ಚೌಕಾಕಾರದ ಪಿರಮಿಡ್ ಅಥವಾ ಗೋಡೆಗೆ ತಗುಲದೆ ನೇತಾಡುವ ಸ್ಫಟಿಕದ ಹರಳು ಈ ಋಣಾತ್ಮಕ ಶಕ್ತಿಯನ್ನು ಹೇಗೆ ತಡೆಯುತ್ತದೆ ? ತಡೆಯುವುದೇ ಆದರೆ ಈ ಋಣಾತ್ಮಕ ಶಕ್ತಿ ಯಾವ ರೂಪದಲ್ಲಿ ಹರಿಯುತ್ತದೆ ? ಘನರೂಪವೋ, ದ್ರವರೂಪವೋ, ವಾಯು ರೂಪವೋ ಈ ಯಾವುದೇ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರೆಯುವುದಿಲ್ಲ. ಅಸ್ತಿತ್ವವೇ ಇಲ್ಲದ ಧನಾತ್ಮಕ-ಋಣಾತ್ಮಕ ಶಕ್ತಿಯ ಕಲ್ಪನೆಗಳೇ ವಾಸ್ತುಪಂಡಿತರ ಬಂಡವಾಳವಾಗುತ್ತದೆ.

ನೀರಿನ ತೊಟ್ಟಿ, ತಾರಸಿಯ ಮೇಲಿರುವ ನೀರಿನ ಟ್ಯಾಂಕ್, ದೇವರಮನೆಯ ದಿಕ್ಕು, ಸಂಡಾಸಿಗೆ ಕುಳಿತುಕೊಳ್ಳುವ ದಿಕ್ಕು, ಓದುವ ದಿಕ್ಕು, ಮಲಗುವಾಗ ತಲೆ ಇಡುವ ದಿಕ್ಕು, ಬಚ್ಚಲು ಮನೆಯ ಬಾಗಿಲು, ಮುಂಬದಿಯ ಬಾಗಿಲು, ಮಹಡಿ ಏರುವ ಮೆಟ್ಟಿಲು ಹೀಗೆ ಒಂದು ಸ್ಥಿರಾಸ್ಥಿಯ ಎಲ್ಲ ಅವಯವಗಳನ್ನೂ ವಾಸ್ತುಶಾಸ್ತ್ರ ಮಾರುಕಟ್ಟೆಯ ಬಿಡಿಭಾಗಗಳಾಗಿ ಮಾಡಲಾಗಿದೆ. ಈ ಬಿಡಿ ಭಾಗಗಳನ್ನು ವಾಸ್ತು ಪಂಡಿತರು ಹೇಳಿದಂತೆ ಬದಲಾಯಿಸುತ್ತಾ ಹೋದರೆ ಭವಿಷ್ಯ ಉಜ್ವಲವಾಗುತ್ತದೆ ಎಂಬ ಗಾಢವಾದ ನಂಬಿಕೆ ಜನಸಾಮಾನ್ಯರನ್ನು ಆವರಿಸಿದೆ.

ಪ್ರಜ್ಞಾವಂತ, ಸುಶಿಕ್ಷಿತ ಸಮಾಜ ಇಂತಹ ಮೌಢ್ಯತೆಗೆ ಬಲಿಯಾದರೆ, ಸಾಧಾರಣ ಜನರು ಉಂಡೆ ನಾಮದಂತಹ ವಂಚನೆಗೆ ಬಲಿಯಾಗುತ್ತಿದ್ದಾರೆ. ಈ ಮೌಢ್ಯದ ಪ್ರೇರಣೆ ಏನು ಎಂದು ಹೇಳಬೇಕಿಲ್ಲ. ಖ್ಯಾತ ವಿಜ್ಞಾನ ಲೇಖಕ ದಿ. ಜಿ ಟಿ ನಾರಾಯಣರಾವ್ ಜ್ಯೋತಿಷ್ಯ ಬೊಗಳೆ ವಾಸ್ತು ಅದರ ಸೋದರ ಎಂದು ಹೇಳುತ್ತಿದ್ದುದು ನೆನಪಾಗುತ್ತದೆ. ಈ ಅವಳಿ ಸೋದರರೇ ಇಂದು ಸಮಾಜವನ್ನು ಮೌಢ್ಯದ ಕಂದಕಕ್ಕೆ ತಳ್ಳಿ ತಮ್ಮ ಸಾಮ್ರಾಜ್ಯವನ್ನು ನಿರ್ಮಿಸುತ್ತಿದ್ದಾರೆ.

ಇಲ್ಲಿ ಪ್ರಶ್ನೆ ಇರುವುದು ಈ ಮೌಢ್ಯದ ಪ್ರೇರಕರು ಯಾರು ? ಪ್ರಚೋದಕರು ಯಾರು ಎನ್ನುವುದು. ಜನಸಾಮಾನ್ಯರು ದಿನನಿತ್ಯ ಪಠಿಸುವ ನವಗ್ರಹ ಸ್ತೋತ್ರದಲ್ಲಿ ಭೂಮಿಯ ಹೆಸರೇ ಇಲ್ಲ ಎಂದು ತಿಳಿದಿದ್ದರೂ, ಈ ಸ್ತೋತ್ರದಲ್ಲಿ ನಾಲ್ಕು ಗ್ರಹಗಳು ಗ್ರಹಗಳೇ ಅಲ್ಲ ಎಂದು ತಿಳಿದಿದ್ದರೂ ನವಗ್ರಹ ಪೂಜೆ, ಪಠಣಕ್ಕೆ ಕುಂದು ಬಂದಿಲ್ಲ. ವಿಜ್ಞಾನದ ವಿದ್ಯಾರ್ಥಿಗಳೂ ಈ ನವಗ್ರಹದ ಪ್ರತಿಮೆಗಳನ್ನು ಸುತ್ತುತ್ತಾ ನಮಿಸುವುದನ್ನು ನೋಡಿದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಮೂಡುತ್ತದೆ. ಇರಲಿ, ಈ ಪಿಡುಗನ್ನು ಸರಿಪಡಿಸಲು ಯಾರಿಂದ ಸಾಧ್ಯ ? ಈ ಪ್ರಶ್ನೆ ಹೆಚ್ಚು ಪ್ರಸ್ತುತ.

superstitionನಾವು ಅನುಸರಿಸುತ್ತಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ಮೌಢ್ಯಗಳಿಂದ ಭವಿಷ್ಯದ ಪ್ರಜೆಗಳನ್ನು ದೂರ ಇರಿಸುವ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಭೌತಶಾಸ್ತ್ರದ ಅಧ್ಯಾಪಕರೂ ನವಗ್ರಹ ಸ್ತೋತ್ರ ಪಠಿಸುವ ಯುಗದಲ್ಲಿ ಇದನ್ನು ನಿರೀಕ್ಷಿಸುವುದೂ ಕಷ್ಟ. ಆದರೆ ಈ ಮಹತ್ಕಾರ್ಯವನ್ನು ಮಾಧ್ಯಮಗಳು ಮಾಡಬಹುದಲ್ಲವೇ ? ವಿಪರ್ಯಾಸವೆಂದರೆ ಮೌಢ್ಯಾರಾಧಕರಿಗೆ ಮೌಢ್ಯ ಒಂದು ಬಂಡವಾಳವಾದರೆ, ವಿದ್ಯುನ್ಮಾನ ಮಾಧ್ಯಮಗಳಿಗೆ ಮೌಢ್ಯಾಧಿಪತಿಗಳೇ ಬಂಡವಾಳ. ನಿತ್ಯ ಭವಿಷ್ಯ ಪ್ರಕಟಿಸದೆ ಇರುವ ಮುಖ್ಯವಾಹಿನಿಯ ದಿನಪತ್ರಿಕೆಗಳು ಎಷ್ಟಿವೆ ? (ನನಗೆ ತಿಳಿದಂತೆ ಆಂದೋಲನ ಒಂದು ಅಪವಾದ).

ಉಂಡೆ ನಾಮ ಹಾಕುವ ನಕಲಿ ವೈದ್ಯರು, ಯಾವುದೇ ಪರಿಣಾಮ ಬೀರದ ಉದ್ಧೀಪನಾ ಮದ್ದುಗಳು, ಔಷಧಿಗಳು ಜಾಹೀರಾತಿನ ರೂಪದಲ್ಲಿ ಮುಖ್ಯವಾಹಿನಿಯ ಎಲ್ಲ ಪತ್ರಿಕೆಗಳಲ್ಲೂ ರಾರಾಜಿಸುತ್ತವೆ. ಹಾಗೆಯೇ ಕಾಗಕ್ಕ ಗೂಬಕ್ಕನ ಕಥೆ ಹೇಳುವ ಜ್ಯೋತಿಷಿಗಳು, ವೈದ್ಯರ , ಒಂದೇ ದಿನದಲ್ಲಿ ನಿಮ್ಮ ಎಲ್ಲ ಸಂಕಷ್ಟಗಳನ್ನೂ ಪರಿಹರಿಸಲಾಗುತ್ತದೆ ಎಂದು ಘೋಷಿಸುವ ಮೌಢ್ಯಾಧಿಪತಿಗಳ ಜಾಹೀರಾತುಗಳು ರಾರಾಜಿಸುತ್ತವೆ. ಕನಿಷ್ಠ ಪ್ರಜ್ಞಾವಂತ ಮುದ್ರಣ ಮಾಧ್ಯಮಗಳು ಅವೈಜ್ಞಾನಿಕ ಎನ್ನಬಹುದಾದ ಇಂತಹ ಜಾಹೀರಾತುಗಳನ್ನು ಬಹಿಷ್ಕರಿಸುವ ಮೂಲಕ ಸಮಾಜಕ್ಕೆ ದಾರಿದೀಪವಾಗಬಹುದಲ್ಲವೇ ?

3 Comments

  1. .ಮಹೇಶ್ವರಿ.ಯು
    December 1, 2016
  2. Premalatha
    November 30, 2016
  3. Anonymous
    November 30, 2016

Add Comment

Leave a Reply