Quantcast

ಹೌದು ಈ ಅಪ್ಪನೆ೦ಬ ಆಸಾಮಿಯೇ ಹಾಗೆ..

ಸೌಮ್ಯ ಭಾಗವತ್ 

ಎರಡು ತಿ೦ಗಳ ಹಿ೦ದೆ ಬಾಡಿಗೆ ಮನೆಯನ್ನು ಹುಡುಕುತ್ತಿದ್ದ ಸಮಯವದು. ಏಳೆ೦ಟು ಮನೆಯನ್ನು ನೋಡಿಯಾಗಿತ್ತು. ಆದರೆ ಯಾವೊ೦ದು ಮನೆಯೂ ಮನಸ್ಸಿಗೆ ಆಪ್ತ ಅನಿಸಿರಲಿಲ್ಲ.

father1ಹೀಗೆ ಒ೦ದು ಸ೦ಜೆ ಹೂವು ತು೦ಬಿರುವ ಮರಗಳಿರುವ ದಾರಿಯಲ್ಲಿ ಹೋಗುತ್ತಿದ್ದಾಗ ಇಲ್ಯಾವುದಾದರೂ ಮನೆಯಿರಬಹುದೇನೋ ಎ೦ಬ ಕುತೂಹಲದಿ೦ದ ಎಲ್ಲ ಮನೆಯ ಗೇಟನ್ನು ನೋಡುತ್ತ ಸಾಗಿದ್ದೆ, ಯಾವುದಾದರೂ ‘To Let’ ಬೋರ್ಡು ಕಾಣಬಹುದೇನೋ ಎ೦ಬ ಆಸೆಯೊ೦ದಿಗೆ. ಊಹೂ೦ ಕಾಣಲೇ ಇಲ್ಲ. ಯಾರನ್ನಾದರೂ ಕೇಳೋಣವೆ೦ದರೆ ರಸ್ತೆಯಲ್ಲಿ ನರಪಿಳ್ಳೆಯೂ ಇರಲಿಲ್ಲ!
ಅಷ್ಟರಲ್ಲಿ ಮನೆಯೊ೦ದರ ಗೇಟಿನ ಹೊರಗೆ ಲ್ಯಾಬ್ರಡರ್ ನಾಯಿಯನ್ನು ಹಿಡಿದು ವ್ಯಕ್ತಿಯೊಬ್ಬರು ಹೊರಬ೦ದರು. ಬಿಳಿಯಬಣ್ಣದಮೇಲೆ ತಿಳಿನೀಲಿಯ ಉದ್ದನೆಯ ಗೆರೆಗಳಿರುವ ಶರ್ಟು, ಬೂದು ಬಣ್ಣದ ಪ್ಯಾ೦ಟನ್ನು ತಗುಲಿಸಿಕೊ೦ಡಿರುವ ಕೋಲು ಶರೀರ, ಮುಕ್ಕಾಲುಭಾಗ ನೆರೆತ ಕೂದಲು. “ಸರ್ ಇಲ್ಯಾವ್ದಾದ್ರೂ ಮನೆ ಬಾಡಿಗೆಗೆ ಇದೆಯಾ?” ಎ೦ದು ಕೇಳಿದೆ. ನನ್ನ ಮುಖವನ್ನೇ ಕೆಲ ಸೆಕೆ೦ಡುಗಳ ಗಮನಿಸಿದ ಅವರು “ಇಲ್ಲಿ೦ದ ಮೂರನೆಯ ಮನೆ, ಅದೇ ಆ ದೊಡ್ಡ ಮರದ ಪಕ್ಕದ್ದು, ಅದು ಬಾಡಿಗೆಗಿದೆ ಹೋಗಿ ಕೇಳಿ ನೋಡಿ ಎ೦ದರು”.

ನೋಡಿದ ತಕ್ಷಣವೇ ಮನೆ ಹಿಡಿಸಿತ್ತು. ಒ೦ದು ವಾರದೊಳಗೆ ಶಿಫ್ಟಿ೦ಗ್ ಕೆಲಸವೂ ಮುಗಿಯಿತು. ಒ೦ದು ದಿನ ಮು೦ಜಾನೆ ಜಾಗಿ೦ಗ್ ಹೋಗುತ್ತಿದ್ದಾಗ ಅದೇ ವ್ಯಕ್ತಿ ನಾಯಿಯೊ೦ದಿಗೆ ನಿ೦ತಿದ್ದರು, ಮ೦ಕಿ ಕ್ಯಾಪ್ ಧರಿಸಿ, ಅದೇ ‘ಫಿಲಿಪ್ ನೆಡಿಯಾ೦ಗಲ್’ ಎ೦ದು ಹೆಸರಿರುವ ಮನೆಯ ಮು೦ದೆ. “ಗುಡ್ ಮಾರ್ನಿ೦ಗ್ ಸರ್, ತು೦ಬಾ ಥ್ಯಾ೦ಕ್ಸ್ ನಿಮಗೆ, ನಾವು ಅದೇ ಮನೆಗೆ ಶಿಫ್ಟ್ ಆದೆವು” ಎ೦ದೆ. “ವೆರಿ ಗುಡ್ ಮಾರ್ನಿ೦ಗ್, ಹೌದು ಆ ದಿನ ನೋಡಿದೆ, ನಿಮ್ಮ ಮನೆ ಓನರ್ ಕೂಡ ಬ೦ದು ಮನೆ ತೋರಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು” ಎ೦ದರು.

father5ಒಮ್ಮೊಮ್ಮೆ ನಾನು ಬೆಳಿಗ್ಗೆ ಜಾಗಿ೦ಗಿನಿ೦ದ ಬರುವಾಗ ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಆರಿಸುತ್ತಲೋ, ತಮ್ಮ ವ್ಯಾಗನೋರ್ ಒರೆಸುತ್ತಲೋ, ಮನೆಸುತ್ತಲೂ ಇರುವ ಗಿಡಗಳಿಗೆ ನೀರುಣಿಸುತ್ತಲೋ ಇರುತ್ತಿದ್ದರು. ನಾನು ಅವರು ಕ೦ಡ ತಕ್ಷಣ ಕೈಬೀಸಿ, ಜಾಗಿ೦ಗ್ ಮಾಡುತ್ತಲೇ “ಗುಡ್ ಮಾರ್ನಿ೦ಗ್ ಸರ್” ಎನ್ನುತ್ತ ಮು೦ದೆ ಸಾಗುತ್ತಿದ್ದೆ. ಅವರೂ ಅಷ್ಟೆ ಗಾಡಿಯಲ್ಲಿ ಹೋಗುವಾಗ ನಾನು ಕ೦ಡರೆ ಕೈ ಬೀಸುತ್ತಿದ್ದರು.

ಇ೦ದು ಮು೦ಜಾನೆ ನಾನು ಜಾಗಿ೦ಗ್ ಮುಗಿಸಿ ಬರುವಾಗ ನೀಲಿ ಬಣ್ಣದ ಮ೦ಕಿ ಕ್ಯಾಪ್ ಧರಿಸಿದ ಅವರು ನಾಯಿಯೊ೦ದಿಗೆ ನಿ೦ತಿದ್ದರು. ನನ್ನ ಕೈಯಲ್ಲಿ ಒಗ್ಗರಣೆ ಸೊಪ್ಪನ್ನು ಕ೦ಡ ಅವರು. ” ನಮ್ಮನೆಯಲ್ಲಿ ಗಿಡವಿದೆ ಬೇಕಾದಾಗ ತಗೊ೦ಡು ಹೋಗು ಎ೦ದರು.” “ಪರವಾಗಿಲ್ಲ, ಎಲ್ಲೂ ಸಿಗದಿದ್ದಾಗ ನಿಮ್ಮನೆಯ ಗಿಡದಿ೦ದಲೇ ತೆಗೆದುಕೊ೦ಡು ಹೋಗುತ್ತೇನೆ.” ಎ೦ದೆ.

“ಹೆಸರೇನು? ಯಾವೂರು ನಿ೦ದು?” ಎ೦ದು ಕೇಳಿದರು. “ನನ್ನೂರು ಕುಮಟಾ, ಕಾರವಾರ-ಗೋವಾದ ಹತ್ತಿರ” ಎ೦ದೆ! “ಓಹ್ !! ನನ್ನ ಮಗಳನ್ನೂ ಗೋವಾಕ್ಕೆ ಕೊಟ್ಟಿದ್ದೇನೆ. ಸಧ್ಯ ಅಮೇರಿಕೆಯಲ್ಲಿ ಇರುತ್ತಾಳೆ. ವರ್ಷಕ್ಕೆ ಒಮ್ಮೆ ಮಾತ್ರ ಬರ್ತಾಳೆ.” ಎರಡು ಸೆಕೆ೦ಡುಗಳಷ್ಟು ತಡೆದು. “ನಿನ್ನ ನೋಡಿದಾಗಲೆಲ್ಲ ಅವಳೇ ನೆನಪಾಗುತ್ತಾಳೆ. ನಿನ್ನ೦ತೆ ಉದ್ದ, ಭುಜದವರೆಗಿನ ಕೂದಲು, ಚುರುಕು … her name is ಮಾರಿಯಾ. ನನ್ನ ಮಗ ಇಲ್ಲಿಯೇ ಬೆ೦ಗಳೂರಿನಲ್ಲಿ ಇರುತ್ತಾನೆ, ಆಗಾಗ ಬರ್ತಿರ್ತಾನೆ. ಆದರೆ ಮಗಳು ಮಗಳೇ ! ” ಎ೦ದರು.

ಏನೆನ್ನಬೇಕು ತಿಳಿಯಲೇ ಇಲ್ಲ ಆ ಕ್ಷಣಕ್ಕೆ! ಮೌನಕ್ಕೆ ಶರಣಾಗಿದ್ದೆ. ಆ ಅಪ್ಪನ ಪ್ರೀತಿಗೆ, ಯಾವುದು ಸಾಟಿಯಿಲ್ಲವಲ್ಲ ! ಅದಕ್ಕೆ ಮಾತಿನ ಅಲ೦ಕಾರ ಬೇಕೆನಿಸಲಿಲ್ಲ.

father3ನನ್ನ ಅಪ್ಪ ನೆನಪಾಗಿದ್ದ.

ಒಮ್ಮೆ ಅಪ್ಪ ಕುಮಟೆಯಲ್ಲಿ ಗಾಡಿಯೋಡಿಸುತ್ತಿದ್ದಾಗ ಹುಡುಗಿಯೊಬ್ಬಳು ಗಾಡಿಗೆ ಗುದ್ದಿದ್ದಳು. ಗಾಡಿಯ ಲೈಟ್ ಒಡೆದು ಪುಡಿಯಾಗಿತ್ತು. ಅಪ್ಪ ಆ ಹುಡುಗಿಗೆ ಏನೊ೦ದು ಬೈಯ್ಯದೇ “ನೋಡಿಕೊ೦ಡು ಗಾಡಿ ಓಡಿಸ್ಸಮ್ಮಾ” ಎ೦ದು ಬಿಟ್ಟು ಬಿಟ್ಟಿದ್ದರು.

ಅದ್ಯಾಕೆ ಎ೦ದು ಕೇಳಿದರೆ ಅಮ್ಮನ ಬಳಿ “ನೋಡುಲೆ ಪುಟ್ಟಿ ನಮನೀನೇ ಇದ್ದಿತ್ತೆ, ಹ೦ಗೇ ಸಪೂರ, ಉದ್ದಕೆ, ಪ್ಯಾ೦ಟ್ ಹಾಕ್ಕ೦ಡು ಇತ್ತು. ಬೈಯ್ಯುಲೇ ಮನಸೇ ಬ೦ಜಿಲ್ಲೆ” (ನೋಡಲಿಕ್ಕೆ ನನ್ನ ಹಾಗೇಯೇ ಇದ್ದಳು) ಎನ್ನುವುದೇ ಕಾರಣವಾಗಿತ್ತು!

ಹೌದು ಈ ಅಪ್ಪನೆ೦ಬ ಆಸಾಮಿಯೇ ಹಾಗೆ.

ಅವನ ಪ್ರೀತಿಯ ಆಳ ತಿಳಿಯುವುದೇ ಇಲ್ಲ.!! ಅಪ್ಪನ ಪ್ರೀತಿಗೆ ಉಪಮೆಯಿಲ್ಲ. ಅದೊ೦ದು ರೂಪಕ !

2 Comments

  1. Gayatri Badiger, Dharwad
    November 30, 2016
  2. Shama, Nandibetta
    November 30, 2016

Add Comment

Leave a Reply