Quantcast

‘ಅವಧಿ’ ನೋಡಿ ಚಹಾಗೆ ಹಾಲಿಟ್ಟು ಬಂದೆ..

ಆಹಾ ಚಹಾ.. ಸರಣಿ

ಚಹಾದ ಜೋಡಿ ಕೂತರ ಹೀಂಗ

ಹೇಮಾ ಹೆಬ್ಬಗೋಡಿ 

ಬೆಳಗಾಗ ಎದ್ದು ಆ ಕೆಲಸ ಈ ಕೆಲಸ ಎಲ್ಲ ಮುಗಿಸಿ ‘ಅವಧಿ’ ಒತ್ತಿದರೆ ಸಾಕು ‘ಚಾ.. ಚಾ.. ಚಾ..’ ಅನ್ನಕ್ಕೆ ಶುರುವಾಗಿದೆ. ಅದು ಚಹಾದ ಕವನಗಳ ಸೀರಿಸ್ ಅಂತ ಮೊದಲು ತಿಳಿಯದೆ ಹೋಯ್ತು. ಊರಿಗೆ ಹೋಗಿದ್ದಾಗ ಫೋನಲ್ಲಿ ‘ಅವಧಿ’ ತೆಗೆದು ಪರದೆ ಸೊಯ್ಯಂ ಅಂತ ಸರಿಸಿದಾಗ ಶೀರ್ಷಿಕೆ ಹಾರಿ ಚಹಾ, ಚಾ ಅಂತ ಕಣ್ಣಿಗೆ ಕಾಣಿಸಿ ‘ಅರೆ ಏನಿದು ಹೊಸದೇನು ಹಾಕೇ ಇಲ್ಲ’ ಅಂತ ಮುಚ್ಚಿದ್ದೆ. ಮನೆಗೆ ಬಂದು ನನ್ನ ಮಡಿಲ ಮರಿಯ (Lap top) ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಗೊತ್ತಾಯ್ತು ಓಹೋ ಚಾ.. ಚಾ.. ಸಿರೀಸ್! I missed previous post ಅಂತ.

ನಾನು ಚಹಾದ ಪ್ರೇಮಿಯಾಗಿದ್ದು ತೀರ ಇತ್ತೀಚೆಗೆ. ಆದರೆ ಚಹಾದ advertisement fan ಆಗಿ ಬಹಳ ವರ್ಷಗಳಾದವು. ಹೌದು ಇವತ್ತಿಗೂ ಚಹಾ ಅಂದತಕ್ಷಣ ನನಗೆ ನೆನಪಾಗುವುದು ಅಶ್ವಗಂಧ, ತುಲಸಿ ಮೊದಲಾದ ಇಪ್ಪತ್ನಾಲ್ಕು ಗಿಡಮೂಲಿಕೆಗಳುಳ್ಳ ಚಹಾ ಅಲ್ಲ. ತಾಜಮಹಲಿನ ಮುಂದೆ ಕೂತ ಜಾಕೀರನ ಹಾರುವ ಕೂದಲು ‘ಅರೆ ಹುಜೂರ್ ವಾಹ್ ತಾಜ್ ಬೋಲಿಯೆ!’. ಅವನ ಬೆರಳುಗಳ ಕರಾಮತ್ತಿಗೆ ಬೆರಗಾದಷ್ಟೇ ಆ ಕೂದಲಿಗೆ ಮನಸೋತಿದ್ದೆ. ಪ್ರತಿ ಸಾರಿ ಆ ಜಾಹಿರಾತು ಬಂದಾಗಲೂ ವಾಹ್ ತಾಜ್! ಅನ್ನುತಿತ್ತು ಮನಸ್ಸು. ತಾಜಮಹಲು ನನ್ನೊಳಗೆ ಕೂತಿದ್ದು ಆ ಜಾಹಿರಾತಿನಿಂದಲೇ.

ಕಾಫಿಯ ಮುಂದೆ ಇನ್ನೆಲ್ಲವೂ ಸಪ್ಪೆಯೇ ಅಂತ ಗಾಢವಾಗಿ ನಂಬಿ ಏಕಪೇಯ ವ್ರತಸ್ಥಳಾಗಿದ್ದ ನನ್ನ ವ್ರತಭಂಗವಾದದ್ದು ಆ ಹೆಸರು ಗೊತ್ತಿಲ್ಲದ ಊರಲ್ಲಿ ಹೆಸರಿಲ್ಲದ ಸಣ್ಣ ಪೆಟ್ಟಿಅಂಗಡಿಯಲ್ಲಿ.

ಭಯಂಕರ ಭಾಷಣವೊಂದರಿಂದ ಜರ್ಜರಿತವಾಗಿ ಜೊತೆಗೆ ಪ್ರಯಾಣದ ಆಯಾಸವೂ ಸೇರಿ ಎಲ್ಲಾರೂ ಕಾಫಿ ಸಿಕ್ಕರೆ.. ಅಂತ ಕನವರಿಸುತ್ತಿದ್ದಾಗ ಕಣ್ಣಿಗೆ ಕಂಡ ಆ ಅಂಗಡಿ ಹೊಕ್ಕಿತ್ತು ನಮ್ಮ ಗುಂಪು.

ಕಾಫಿ? ಅಂದದ್ದಕ್ಕೆ ಟೀ ಸೊರ್ ಅಂತ ಎತ್ತಿ ಸುರಿಯುತ್ತಾ 180 ಡಿಗ್ರಿಯಲ್ಲಿ ತಲೆಯಾಡಿಸಿದಾತ. ಸೋಸಿದ ಬಿಸಿ ಟೀಯನ್ನು ಗಾಜಿನ ಗ್ಲಾಸಲ್ಲಿ ಸುರಿದು ಟಪ್ ಅಂತ ಡಬ್ಬಿ ಮೇಲಿಟ್ಟ. ಇನ್ನೇನು ಮಾಡುವುದು ಅಂತ ನಾವು ಅದನ್ನೇ ಕೊಡಿ ಅಂದೆವು.

ಮನಸ್ಸಿಲ್ಲದ ಮನಸ್ಸಿನಿಂದ ಕಾಫಿ ಸಿಗದ ಫುಲ್ ಫೀಲಿಂಗ್ನಲ್ಲಿ ಲೋಟ ಎತ್ತಿ ಗುಟುಕರಿಸಿದೆ. ‘ಓಹ್! ಎಷ್ಟು ಚೆನ್ನಾಗಿತ್ತು ಗೊತ್ತಾ!’ ಭಯಂಕರ ಇಷ್ಟವಾಗಿ ಮತ್ತೊಂದು ಟೀ ಕುಡಿದು ‘ವಾಹ್! ತಾಜ್!’ ಅಂದಿದ್ದೆ.

ಮತ್ತೊಂದು ಮರೆಯದ ಟೀ ಅಂದರೆ ಊಟಿಯ ಟೀ ಫ್ಯಾಕ್ಟರಿಯಲ್ಲಿ ಚಳಿಯಲ್ಲಿ ಗುಟುಕರಿಸಿದ್ದು. ‘ಎಂಥ ಸ್ವಾದ! ಎಂಥ ಸ್ವಾದ ನಿನ್ನಲಿಹುದು!’ ಅಂತ ಹುಚ್ಚೆದ್ದು ಟೀಗೆ ಶರಣಾಗಿದ್ದೆ. ದಿನವೂ ಇಂತದ್ದೇ ಟೀ ಕುಡಿದು ಖುಷಿಪಡಲು ತೊಗೊಳ್ಳಿ ನಂ ಟೀಪುಡಿ’ ಅಂತ ಕೂಗುತ್ತಿದ್ದವನ ಕೈಯಿಲ್ಲಿದ್ದ ಟೀಪುಡಿಯ ಘಮಲಿಗೆ ಮರುಳಾಗಿ ಕೊಂಡು ತಂದಿದ್ದೆ. ಹೇಗೆ ಮಾಡಬೇಕು ಅಂತ ಅರೆಬರೆ ತಮಿಳಿನಲ್ಲಿ ಕೇಳಿದ ಪ್ರಶ್ನೆಗೆ ಆತ ಫುಲ್ ತಮಿಳಲ್ಲಿ ಗೊತ್ತಿರೋ ಪದಗಳನ್ನು ಇಂಗ್ಲೀಷಲ್ಲೂ ಹೇಳುತ್ತಾ demo  ಬೇರೆ ಕೊಟ್ಟು ‘ಇಪ್ಪಡಿ ಪೊಣ್ಣೊಣು’ ಅಂದಿದ್ದಕ್ಕೆ ಎಲ್ಲ ಅರ್ಥವಾಗಿ ಟೀ ಮಾಡುವ ಕಲೆ ರಕ್ತಗತವಾಗಿ ಬಿಟ್ಟಿತು ಅಂತ ಹಿಗ್ಗಿದ್ದೆ. ಮನೆಗೆ ಬಂದು ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಅಂತ ಆ ಟೀ ಟೇಸ್ಟ್ ಬರಿಸಲೇಬೇಕು ಅಂತ ಒಂದು ಕೆ.ಜಿ ಪುಡಿ ಕರಗಿಸಿದೆ. ಆದರೆ ಇನ್ನೂ ಆ ಕೈರುಚಿ ಸಿದ್ಧಿಸಿಲ್ಲ. ಈಗ ಉಳಿದಿರುವ ಟೀ ಪುಡಿ ಅಡುಗೆಮನೆಯ ಶೆಲ್ಫಿನಲ್ಲಿ ನಗುತ್ತ ‘ಎಪ್ಪಡಿ’ ಅನ್ನುತ್ತ ಅಣಕಿಸುತ್ತಿದೆ.

‘ಚಾ.. ಚಹಾ..’ ಸಿರೀಸ್ ಓದುತ್ತ ಮತ್ತದರ ನೆನಪಾಗಿ ಚಹಾಗೆ ಹಾಲಿಟ್ಟು ಬಂದೆ. ಚಹಾ ಮಾಡುತ್ತ ಮಾಡುತ್ತ ಅಮೃತ ಪ್ರೀತಂ ಪದ್ಯ ನೆನಪಾಯಿತು:

ಹಸಿರು ಚಾ ಎಲೆಗಳಂತೆ
ಮುರಿದ-ಕಳೆದುಹೋದ ಮಾತುಗಳನ್ನು
ಕಾಪಿಟ್ಟ ಒಣಗಿದ ಮಾತುಗಳನ್ನು
ನೀರೊಳಗೆ ಹಾಕಿ ನೋಡು
ಬಣ್ಣ ಬದಲಾಗುವುದ ನೋಡು

ಬಿಸಿಯಾದ ಒಂದು ಗುಟುಕು ನಿನಗಿರಲಿ
ಬಿಸಿಯಾದ ಒಂದು ಗುಟುಕು ನನಗಿರಲಿ
ಬದುಕಿನ ವಸಂತವಂತೂ ಕಳೆದುಹೋಯಿತು
ಆದರೆ ಚಳಿಗಾಲಗಳು ಹೀಗೆ ಕಳೆಯದಿರಲಿ
ಬಾ ನಲ್ಲ ಇಂದಾದರೂ ಮಾತಾಡೋಣ..

ಬಿಸಿಯಾದ ಚಹಾ ಹೀರುತ್ತಾ ‘ಅರೆ ಹುಜೂರ್ ವಾಹ್ ತಾಜ್! ಬೋಲಿಯೇ!’ ಅಂದಿತು ಮನಸು.

Add Comment

Leave a Reply