Quantcast

ತಯಾರಾಗುತ್ತಿದ್ದಾರೆ ‘ನೀ’ರಪರಾಧಿಗಳು!

ಚಿನ್ನಕ್ಕಾಗಿ, ಭೂಮಿಗಾಗಿ ನಡೆಯುತ್ತಿದ್ದ ಅಪರಾಧಗಳು ಈಗ ನೀರಿಗಾಗಿ ನಡೆಯಲಾರಂಭಿಸಿವೆ. ನೀರಿಗಾಗಿ ಹೆಣಗಳು ಬೀಳಲು ಆರಂಭವಾಗಿವೆ. ಆದರೆ, ಸರ್ಕಾರಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ.

ಅರಬ್ಬೀ ಸಮುದ್ರದ ತಟದಲ್ಲಿರುವ ಉಡುಪಿ-ಮಂಗಳೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಇದೆ, ನಗರಸಭೆಗಳು ಇನ್ನೊಂದು ತಿಂಗಳ ನೀರು ಸಂಗ್ರಹ ಮಾತ್ರ ಇದೆ; ಎಚ್ಚರದಿಂದ ನೀರನ್ನು ಬಳಸದಿದ್ದರೆ ಮುಂದೇನೋ ಗೊತ್ತಿಲ್ಲ ಎಂದು ಕೈ
ಎತ್ತಿವೆ.  ಈ ಬೇಸಗೆ ಈಗಾಗಲೇ ಕಾಡಲಾರಂಭಿಸಿದೆ. ಕರಾವಳಿಯದೇ ಈ ಸ್ಥಿತಿಯಾದರೆ,  ಕರ್ನಾಟಕದ ಒಳನಾಡುಗಳ ಸ್ಥಿತಿ, “ಜಗತ್ತಿನ ಅತ್ಯಂತ ಪ್ರಶಸ್ತ” ಐಟಿ ಮಾರುಕಟ್ಟೆಯನ್ನು ಹೊಂದಿರುವುದರಿಂದಾಗಿ ತನಗೆ ಏಗಲು ಸಾಧ್ಯವಿರದಷ್ಟು ಜನಭಾರವನ್ನು ಹೊತ್ತಿರುವ ಬೆಂಗಳೂರಿನಂತಹ ಮಹಾನಗರಿಗಳ ಸ್ಥಿತಿ ಇನ್ನು ಹೇಗಿರಬೇಕೆಂದು ಊಹಿಸಿ.

2013ರಿಂದ ಕರ್ನಾಟಕದ ಬಹುತೇಕ ಭಾಗಗಳು ಬರಪೀಡಿತ ಎನ್ನುತ್ತಿವೆ ಸರ್ಕಾರಿ ದಾಖಲೆಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಕೈನಲ್ಲೂ ಈ ಬಗ್ಗೆ ಅಟ್ಟಿಗಟ್ಟಲೆ ವರದಿಗಳು, ಅಂಕಿ-ಅಂಶಗಳು ಇವೆ. ಆದರೆ, ಅವನ್ನೆಲ್ಲ ಇಟ್ಟುಕೊಂಡು ಉಪ್ಪಿನಕಾಯಿ ಹಾಕಿ ನೆಕ್ಕಿದ್ದು ಬಿಟ್ಟರೆ ಬೇರೇನೂ ಆದಂತಿಲ್ಲ. ರಾಜ್ಯ ಸರ್ಕಾರದ ಪ್ರಕಾರ 2013ರಲ್ಲಿ 64 ತಾಲೂಕುಗಳು ಬರಪೀಡಿತವಾಗಿದ್ದರೆ, 2015ರ ಸರ್ಕಾರಿ ದಾಖಲೆಗಳು 27 ಜಿಲ್ಲೆಗಳ 135 ತಾಲೂಕುಗಳು ಬರಪಿಡಿತ ಎಂದು ಪ್ರಕಟಿಸಿವೆ. ದಿನ ಕಳೆದಂತೆ ಪರಿಸ್ಥಿತಿ ಹದಗೆಡುತ್ತಲೇ ಸಾಗುತ್ತಿದೆ.

ಕರ್ನಾಟಕದಲ್ಲಿ ಮಾತ್ರವಲ್ಲ, ಇಡಿಯ ಭಾರತದಲ್ಲಿ ಈ ಸ್ಥಿತಿ ಇದ್ದು, 13ರಾಜ್ಯಗಳು ಬರಪೀಡಿತ ಎಂದು ಕೇಂದ್ರ ಸರ್ಕಾರದ ದಾಖಲೆಗಳು ಹೇಳುತ್ತವೆ. ಸದ್ಯಕ್ಕೆ ದೇಶದಲ್ಲಿ ಲಭ್ಯ ಇರುವುದು ಅಗತ್ಯ ವಿರುವುದರಲ್ಲಿ ಬರೀ 85% ಗ್ರಾಮೀಣ ಕುಡಿಯುವ ನೀರು, 60-65% ನಗರ ಪ್ರದೇಶಗಳ ಕುಡಿಯುವ ನೀರು, 55% ಕೈಗಾರಿಕಾ ಬಳಕೆಯ ನೀರು ಮತ್ತು 65%  ನೀರಾವರಿ ಬಳಕೆಯ ನೀರು. ಇಷ್ಟೇ ಬಳಕೆಯ ಹೊತ್ತಿಗೆ, ಕಳೆದ 60 ವರ್ಷಗಳಲ್ಲಿ ನೆಲದಡಿಯ ನೀರಿನ ಒರತೆ ಮೂರು ಪಟ್ಟು ಕಡಿಮೆ ಆಗಿದೆ! ಈ ಲಭ್ಯವಿರುವ ನೆಲದಡಿಯ ನೀರಿನ ಒರತೆಯಲ್ಲೂ 50% ಕಲುಷಿತ ನೀರು. ಕರ್ನಾಟಕದಲ್ಲಿ ವಿವಿಧ ತಾಲೂಕುಗಳ 1044 ಬ್ಲಾಕ್ ಗಳಲ್ಲಿ 7.79 ಲಕ್ಷ ಮಂದಿ ಇನ್ನೂ ನೆಲದಡಿಯ ವಿಷ ಮಿಶ್ರಿತ ನೀರನ್ನೇ ಕುಡಿದು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಆದರೆ, ಸರ್ಕಾರಗಳು ನರಸತ್ತಂತೆ ವರ್ತಿಸುತ್ತಿದ್ದು, ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡಿ ಕಾಸು ಗೋರಿಕೊಳ್ಳುವ ಮಾಫಿಯಾದ ಪರವಾಗಿಯೇ ಕೆಲಸ ಮಾಡುತ್ತಿವೆ. ಉಡುಪಿಯಲ್ಲೇ ಮೊನ್ನೆ ಜಿಲ್ಲಾಪಂಚಾಯತಿ ಸಭೆಯಲ್ಲಿ ಆಳುವ ಪಕ್ಷದ ವಿಧಾನಪರಿಷತ್ ಸದಸ್ಯರೊಬ್ಬರು ವಾರಾಹಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸುವ ಬದಲು ಅಧಿಕಾರಿಗಳು ಖಾಸಗಿ ವಿದ್ಯುತ್ ಉತ್ಪಾದಕರಿಗೆ ಸಂಗ್ರಹಿಸಿಟ್ಟುಕೊಳ್ಳಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆಪಾದಿಸಿದರು ಮತ್ತು ಕುಡಿಯುವ ನೀರಿಗೆ ಆದ್ಯತೆ ಸಿಗಬೇಕೆಂದು ಒತ್ತಾಯಿಸಿದರು. ದುರದ್ರಷ್ಟವಶಾತ್, ತಮ್ಮನ್ನು ತಾವೇ ಮಾರಿಕೊಂಡಿರುವ ಮಾಧ್ಯಮಗಳಿಗೂ ಇದು ದೊಡ್ಡ ಸುದ್ದಿ ಆಗಲಿಲ್ಲ. ಬದಲಿಗೆ ಕಾಸು ಬರುವ ‘ಮರಳು ಗುತ್ತಿಗೆ’ ವಿಚಾರ ಮಹತ್ವದ್ದಾಯಿತು.

ಅಪಾಯದಲ್ಲಿರುವ ಪರಿಸರವನ್ನು ಕಾಪಾಡುವುದಕ್ಕಿಂತ ಸಿ ಆರ್ ಝಡ್ ನಿಯಮ, ಕಸ್ತೂರಿ ರಂಗನ್ ವರದಿಗಳನ್ನು ತಿರಸ್ಕರಿಸುವ ವಿಚಾರಗಳು ಮಾಧ್ಯಮಗಳ ಮತ್ತು ಸಾಮಾಜಿಕ ಚರ್ಚೆಗಳಲ್ಲಿ ಆದ್ಯತೆ ಪಡೆಯುವ ಬಗೆಯೇ ವಿಶಿಷ್ಟ. ಈ ರೀತಿಯ “ಉಪರಾಟೆ” ಸೂತ್ರಗಳು ಹೇಗೆ ತನ್ನಿಂತಾನಾಗಿಯೇ ಉದ್ಭವಿಸುತ್ತದೆಂಬುದಕ್ಕೆ ಒಂದು ಒಳ್ಳೆಯ “ಗುಜರಾತ್ ಮಾದರಿ” ಉದಾಹರಣೆ ಇಲ್ಲಿದೆ.

ದೇಶದ ಮೊತ್ತಮೊದಲ ಸೌರವಿದ್ಯುತ್ ಸಹಕಾರಿ ಸಂಸ್ಥೆ ಇರುವುದು ಗುಜರಾತಿನ ಖೇಡಾ ಜಿಲ್ಲೆಯ ಧುಂಡಿ ಹಳ್ಳಿಯಲ್ಲಿ. ಅವರು ಈಗ ತಮ್ಮ  ‘ಧುಂಡಿ ಸೌರ್ ಊರ್ಜಾ ಉತ್ಪಾದಕ್ ಸಹಕಾರಿ ಮಂಡಳಿ’ ಮೂಲಕ ವಿದ್ಯುತ್ ಉತ್ಪಾದಿಸಿ, ಮಧ್ಯ ಗುಜರಾತ್ ವಿಜ್ ಕಂಪನಿ ಲಿಮಿಟೆಡ್ (MGVCL)ಗೆ  ಮಾರುವ ಕಾಯಕ ಕೈಬಿಟ್ಟು, ತಾವು ಉತ್ಪಾದಿಸಿದ ಸೌರ ವಿದ್ಯುತ್ತನ್ನು ಬಳಸಿಕೊಂಡು, ಹಳ್ಳಿಯಲ್ಲಿರುವ ನೀರನ್ನು ಪಂಪ್ ಮೂಲಕ ಎತ್ತಿ ಕಂಪನಿಗಳಿಗೆ ಮಾರಿ, 2.5 ಪಟ್ಟು ಹೆಚ್ಚು ಲಾಭ ಗಳಿಸುತ್ತಿದ್ದಾರಂತೆ. ನೆಲದಡಿಯ ನೀರ ಒರತೆ ಹೆಚ್ಚಿಸುವ ಉದ್ದೇಶದಿಂದ ಆರಂಭಗೊಂಡ ಸಹಕಾರಿ ಸಂಘದ ಪರಿಸ್ಥಿತಿ ಇದು!

ಹೆಚ್ಚಿನ ಓದಿಗಾಗಿ:

ಗುಜರಾತ್ ಮಾದರಿಯ ಕಥೆ:  http://indianexpress.com/ article/india/india-news- india/gujarat-solar-co- operative-at-dhundi-village- sells-water-instead-of- electricity-2974172/
Gujarat: Solar co-operative at Dhundi village sells water …
indianexpress.com

ಕೇಂದ್ರ ಜಲಸಂಪನ್ಮೂಲ ಇಲಾಖೆ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ವಸ್ತುಸ್ಥಿತಿ ಪರಿಶೀಲಿಸಿ ಬರೆದಿರುವ ವರದಿ: http://www.wrmin.nic.in/ writereaddata/ON_THE_SPOT_ STUDY_DROUGHT_2015-16.pdf

ನೆಲದ ನೀರಿನ ಒರತೆಯ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2016ರ ವರದಿ: http://www.cgwb.gov.in/Ground- Water/GW%20Monitoring% 20Report_January%202016.pdf
Ground Water Scenario in India January 2016 – cgwb.gov.in
www.cgwb.gov.in

Add Comment

Leave a Reply