Quantcast

ಮಹಾಶಿವರಾತ್ರಿಗೊಂದು ಅಡುಗೆಮನೆಯ ಪದ್ಯ

ರಜನಿ ಗರುಡ 

ಅತ್ತ ವಾಸುದೇವನ ಕಡಲ

ಮೇಲಿನ ತೇಲುವಡಿಗೇಮನೆಯಲಿ

ಚಿನ್ನ-ಬೆಳ್ಳಿಯ ತಟ್ಟೆ-ಬಟ್ಟಲು

ಮುತ್ತು-ರತ್ನದ ಪಾತ್ರೆ-ಸೌಟು

ಹವಳ ಕಟ್ಟಿದ ಮಣೆಯ ಮುಂದೆ

ದಟ್ಟ ಹಸಿರಿನ ಎಳೆಬಾಳೆ ಹರಡಿ

ಆವಿಯಾಡುವ ಅನ್ನ-ಪಾಯಸ

ಬಗೆಬಗೆಯ ಷಡ್ರಸಗಳನು

ಬುಸುಗುಡುವ ಆದಿಶೇಷನ

ಹೆಡೆಯ ಕೆಳಗಡೆ ಮುಚ್ಚಿಇಟ್ಟು

ಬೆವರನೊರೆಸುತ ಸಕಲ

ಭೂಶಿತೆ ಶ್ರೀಲಕ್ಷ್ಮೀಯು ಅವತಾರ

ಮುಗಿಸಿಬರುವವನ ಕಾಯುತಿರುವಳು

 

ಮೈಯ್ಯನಲುಗಿಸದಿರು ಮಹರಾಯ

ತುಳುಕಿ ಚೆಲ್ಲಿಬಿಡುವುದು ಎಲ್ಲ

ಇಲ್ಲಿ ಈ ಕೆಳನೆಲದ ಜನ ನಾವು

ನಮ್ಮದೇ ಉಂಟು ತುಂಬಿತುಳುಕಲು

ತಡೆಯಲಾರೆವು ಮತ್ತೆ ಅದನೂ ಹೇ ವಾಸುಕಿಯೇ…

 

*************************

 

ಇತ್ತ ಕೈಲಾಸದಲಿ ಸರಿರಾತ್ರಿ ತನಕವು

ಶಿವನ ಗಣಗಳು ಮತ್ತರಾಗಿ ಕುಣಿದುದಕೆ

ಹೊತ್ತು ಮೇಲೇರಿ ಎದ್ದ ಶ್ರೀಗೌರಿ

ಬೂದಿ-ಧೂಳನು ಹೊಡೆದು ಸಾರಿಸಿ

ಹಾವು-ಚೇಳನು ಮೂಲೆಗೊತ್ತಿ

ಗಂಡ-ಮಕ್ಕಳ ಹಿಡಿದು ಮೀಯಿಸಿ

ಮಿಂದ ಕೂದಲ ತುರುಬು ಕಟ್ಟಿ

ಇಂದಿನಡಿಗೆಯೇನೆನುತ ಸೆರಗ ಸಿಕ್ಕಿಸಿ

ನಿಂತು ಹುಬ್ಬು ಮೇಲೇರಿಸಿ ಯೋಚಿಸಿದಳು….

 

ಬೋಳೆಶಂಕರನ ಮನೆಯಲಿಂದು

ಕಟುಕರೊಟ್ಟಿಗೆ ಕಾಳುಪಲ್ಲೆ

ಬದನೆ ಇಡುಗಾಯಿಪಲ್ಲೆ-ಝುಣಕಾ

ಮೇಲೆ ಶೇಂಗಾಹಿಂಡಿ ಮೊಸರು

ಹಸಿಖಾರ-ಕೆಂಪುಚಟ್ನಿ-ಕರಿಂಡಿಯು

ತಲೆಬುರುಡೆ ಪಾತ್ರೆ ಕೈ ಕಾಲು

ಎಲುಬಿನ ಸೊಟ್ಟುಗದಲ್ಲಿ

ದರಲೆ-ಪುರುಲೆಯ ಒಲೆಗೆ ಒಟ್ಟಿ

ರೊಟ್ಟಿ ಬಡಿಯುತ ಶ್ರೀಗೌರಿಯು

ಸಕಲ ಗಣಗಳಿಗೆ ಖುದ್ದು ಉಣಬಡಿಸಿದಳು…

 

*********************

 

ಇಲ್ಲಿ ಭೂಮಂಡಲದ ಮೂಲೆಯಲ್ಲಿ

ಗೋಡೆ ಬಾಗಿಲು ಬೆಳಕಿಂಡಿ ಹಂಗಿಲ್ಲದ

ಸಣ್ಣಷೇಶಿಯ ತೆರೆದ ಅಡಿಗೆಮನೆ

ಕವುಚಿ ಬಿದ್ದಾ ಆಕಾಶದಗಲಕು

ದಟ್ಟ ಹೊಗೆಯ ಕೌದಿಯು

 

ಮೂರು ಕಲ್ಲಿನ ಒಲೆಯ ಹೂಡಿ

ಆರು ಕಟ್ಟಿಗೆಗೆ ಉರಿಯ ಹಚ್ಚಿ

ಮಡಕೆ ಇರಿಸಿ ನೀರು ಸುರಿದು

ನಾಲ್ಕು ಮುಷ್ಟಿ ಕುಸಲಕ್ಕಿ ಹಾಕಿ

ಗಂಜಿಯಾಗುವುದನ್ನೆ ಕಾಯುತ್ತಿದ್ದವು

ಸಣ್ಣಷೇಶಿಯ ಪುಟ್ಟ ಪರಿವಾರವು

 

ಚಿಕ್ಕ ಕೈಗೂಸು ಸೊಂಟಕೆ

ತಿಪ್ಪೆಕೆದರುವಕೋಳಿ ಬೂದಿರಾಶಿಲಿ

ಮಲಗಿ ಹೊರಳುವ ನಾಯಿಕುನ್ನಿ

ಬೇಲಿಹಾರಿ ಮೆಂದುಬರುವ ಕಾಳಿದನವು

ಇದೇ ಪುಟ್ಟಷೇಶಿಯ ಪರಿವಾರವು

 

ಉಡಿಯತುಂಬ ಪರಮ ತಂದಾ

ಪುಟ್ಟಬಾಲದ ಮೀನು-ಸಿಗಡಿಯು

ಕೆಂಪಗೆ ಎಲ್ಲವನ್ನೂ ಹುರಿದು

ತಾಟನಿಟ್ಟು ಗಂಜಿಸುರಿದು

ಉಪ್ಪು ಚಿಮುಕಿಸಿ ನಂಜಿಕೊಂಡು

ಚಪ್ಪರಿಸಿ ತಿಂದರು ಹುರಿದಮೀನನು

ಒಂದು ಕೈಯಲಿ ಗಂಜಿಸುರಿಯುತ

ಕೂಸಿಗಲ್ಲಿಯೆ ತುತ್ತನಿಡುತ

ಉಣ್ಣಿಸಿದಳು ಪುಟ್ಟಷೇಶಿ ಗಂಡಪರಮನ ಸೇರಿಕೊಂಡು

ನಾಯಿಕುನ್ನಿ ಕೋಳಿ ಕಾಳಿಯು

ಉಂಡು ಸಂತೃಪ್ತರಾದರು ಅವರ ಜೊತೆಯಲ್ಲಿಯೆ…

 

ಸಕಲ ಪರಿವಾರ ಜನರನು

ತಬ್ಬಿ ಉದರ ಸಂತೃಪ್ತಿಗೊಳಿಸಿ

ಬೊಗಸೆ ತುಂಬಿದ ಅನ್ನ

ಅಕ್ಷಯವಾಗಿಸುವ ಗುಟ್ಟು

ನಿನ್ನಿಂದಲೆ ತಿಳಿಯಬೇಕು ಹೆಣ್ಣೆ…

ಎಲ್ಲ ಸರಿದೂಗಿಸಬಲ್ಲ

ಬದುಕಿ-ಬಾಳುವ ವಿನಯ-ವಿವೇಕ

 

ನಿನ್ನ ಧಾರಣಶಕ್ತಿಯನ್ನು ಎಲ್ಲಿ ಪಡೆದೆ

ರಜೆಯೆ ಇಲ್ಲದ ಅಡುಗೆಮನೆಯೆನ್ನುವ

ಕಾರಖಾನೆಯಲ್ಲಿಯೇ?…..

 

ರಜನಿ

 

 

 

 

 

 

 

 

 

 

 

 

 

 

 

 

 

 

 

One Response

  1. Shruthi B R
    February 23, 2017

Add Comment

Leave a Reply