Quantcast

ಕಂಬಾರರು ಕೊಟ್ಟ ಕುದುರೆಯನ್ನು ಏರಿ ಕತ್ತೆಗಳಾಗಿದ್ದೇವೆ..

‘ಮಹಿಳೆ ಮತ್ತು ಮಕ್ಕಳ ವರ್ತಮಾನದ ನೋಟ’ ಕುರಿತು ಆರಂಭವಾಗಿರುವ ಚರ್ಚೆಗೆ ಹಿರಿಯ ರಂಗಕರ್ಮಿ ‘ಬಳ್ಳೇಕೆರೆ ಹಳ್ಳಿ ಥೇಟರ್’ ಹಾಗೂ ‘ನಮ್ಮ ನಡುವಿನ ತೇಜಸ್ವಿ’ ಲೇಖಕ ಪ್ರಸಾದ್ ರಕ್ಷಿದಿ ಪ್ರತಿಕ್ರಿಯಿಸಿರುವುದು ಹೀಗೆ..

ಪ್ರಸಾದ್ ರಕ್ಷಿದಿ 

‘ಮಹಿಳೆ ಮತ್ತು ಮಕ್ಕಳ ವರ್ತಮಾನದ ನೋಟ’ ನಾಟಕೋತ್ಸವದ ಬಗ್ಗೆ ನೀವು ಬರೆದಿರುವುದು ಸರಿಯಾಗಿಯೇ ಇದೆ.

ನಮ್ಮ ರಂಗಕ್ಕೂ ಒಂದು ನಾಟಕ ಕೊಡಲ್ಪಟ್ಟು ನಾವು ಆ ನಾಟಕವನ್ನು ಪ್ರದರ್ಶನ ಮಾಡಿರುವುದರಿಂದ ಧೀರ್ಘ ವಿವರಣೆ ನೀಡಿದ್ದೇನೆ.

ಕಳೆದ ಜುಲೈ ತಿಂಗಳ ಕೊನೆಯ ವಾರದಲ್ಲಿ ನನಗೆ ಬೆಂಗಳೂರಿನಿಂದ ಶಶಿಧರ ಭಾರಿಘಾಟ್ ಅವರು ಕರೆಮಾಡಿ. “ಪ್ರಸಾದ್ ಇದೇ 23 ರಂದು ನೀವು ಅಥವಾ ನಿಮ್ಮ ತಂಡದ ಯಾರಾದರೊಬ್ಬರು ಕುಪ್ಪಳಿಗೆ ಬಂದು ಒಂದು ನಾಟಕ ಶಿಬಿರದಲ್ಲಿ ಭಾಗವಹಿಸಬೇಕು, ಹೋಗಿ ಬರುವ ಖರ್ಚು ವೆಚ್ಚಗಳನ್ನು ನೀಡಲಾಗುತ್ತದೆ” ಎಂದರು.

ನನಗೆ ಈ ಕಾರ್ಯಕ್ರಮದ ಯಾವ ಮಾಹಿತಿಯೂ ಇರಲಿಲ್ಲ. ಅದಕ್ಕೆ ನಾನು “ನಾನು ಬರುವುದು ಕಷ್ಟ ನಮ್ಮ ತಂಡದ ಸದಸ್ಯರು ಯಾರಾದರೂ ಭಾಗವಹಿಸುತ್ತಾರೆ” ಎಂದೆ. ಎರಡು ದಿನಗಳ ನಂತರ ಅವರೇ ಕರೆ ಮಾಡಿ “ಪ್ರಸಾದ್ ಇದೊಂದು ಪ್ರಾಜೆಕ್ಟ್ ಇದೆ ಹಾಗಾಗಿ ನೀವೆ ಖಂಡಿತ ಬನ್ನಿ ವಿವರಗಳನ್ನು ಅಲ್ಲಿಯೇ ತಿಳಿಸಲಾಗುವುದು” ಎಂದರು.

ಮತ್ತೆ ಒಂದೆರಡು ದಿನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರೆ ಬಂತು. ನೀವು ಬರುವಾಗ 50 ರೂ ಛಾಪಾಕಾಗದ ತರತಕ್ಕದ್ದೆಂದು ಸಿಬ್ಬಂದಿಯೊಬ್ಬರು ತಿಳಿಸಿದರು. ಅದಕ್ಕೆ ನಾನು ಯಾಕೆ “ರವೀಂದ್ರ ಕಲಾಕ್ಷೇತ್ರವನ್ನು ನಮಗೆ ಬರೆದು ಕೊಡುತ್ತಾರೆಯೇ? ಎಂದು ತಮಾಷೆ ಮಾಡಿದೆ.

ಆ ದಿನ ನನ್ನ ಮಗಳ ಗೆಳೆಯರಾದ ರಂಗ ನಿರ್ದೇಶಕ ಅನಿಲ್ ರೇವೂರ್ ಮತ್ತು ಚಂದ್ರ ನೀನಾಸಂ ನಮ್ಮ ಮನೆಗೆ ಬಂದರು. ಅವರೂ ಕುಪ್ಪಳ್ಳಿಗೆ ಹೊರಟಿದ್ದರು. ಅವರಿಂದ ಯೋಜನೆಯ ಕೆಲವು ವಿಚಾರಗಳು ನನಗೆ ತಿಳಿದವು.

ಅಂತೂ ನಾನು ಕುಪ್ಪಳ್ಳಿಗೆ ಹೋದೆ. ಚಂದ್ರ ಶೇಖರ ಕಂಬಾರರ ನೇತೃತ್ವದಲ್ಲಿ ಎಲ್ಲರೂ ಸೇರಿದ್ದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಕೆವೈನಾ “ಇಂತಹ ಯೋಜನೆ ಅಕಾಡೆಮಿಯ ಇತಿಹಾಸದಲ್ಲಿ ಹಿಂದೆ ಆಗಿಲ್ಲ ಮುಂದೆ ಆಗುವುದೂ ಇಲ್ಲ, ಇದು ಮುಖ್ಯವಾಗಿ ಗ್ರಾಮೀಣ ಹವ್ಯಾಸಿ ರಂಗಭೂಮಿಗೆ ನವಚೈತನ್ಯ ತುಂಬುವ ಯೋಜನೆ” ಎಂದೆಲ್ಲ ಮಾತನಾಡಿದರು.

ನಂತರ ಮಾತನಾಡಿದ ಕಂಬಾರರು “ಇಲ್ಲಿನ ನಾಟಕಗಳನ್ನು ತಜ್ಞರುಗಳೇ ರಚಿಸಿದ್ದು, ನಾಟಕ ರಂಗದ ತಜ್ಞರುಗಳು ಅದನ್ನು ಪರಿಶೀಲಿಸಿ ಆಯ್ಕೆ ಮಾಡಿದ್ದಾರೆ. ಒಟ್ಟು 22 ನಾಟಕಗಳು ಇಲ್ಲಿವೆ ನಿಮಗೆ ಇದರಲ್ಲಿ ಒಂದೊಂದು ನಾಟಕವನ್ನು ಕೊಡಲಾಗುವುದು. ಅದನ್ನು ನೀವು ಆಡಬೇಕು.” ಎಂದು ಹೇಳಿದರು.

ಆಗ ಯಾರೋ “22 ನಾಟಕಗಳನ್ನು ಓದಿ ನಾವು ಇಂದು ಆಯ್ಕೆ ಮಾಡುವುದು ಹೇಗೆ” ಎಂದರು. ಅದಕ್ಕೆ ಕಂಬಾರರು “ನಿಮಗೆ ಆಯ್ಕೆಗೆ ಹೆಚ್ಚು ಅವಕಾಶವಿಲ್ಲ ನಿಮ್ಮನ್ನು ಆರು ಜನರ ಗುಂಪನ್ನಾಗಿ ಮಾಡಿ ಆರು ನಾಟಕವನ್ನು ನೀಡಲಾಗುವುದು. ನೀವು ಅದರಲ್ಲೇ ಪರಸ್ಪರ ಬದಲಾವಣೆ ಮಾಡಿಕೊಳ್ಳಬಹುದು” ಎಂದರು. ಹಾಗೇ ಮುಂದುವರಿದು “ಇದೆಲ್ಲ ಇಂದು ಮಧ್ಯಾಹ್ನದ ವೇಳೆಗೆ ತೀರ್ಮಾನವಾಗಬೇಕಿರುವುದರಿಂದ ನಿಮಗೆ ಕಾಲಾವಕಾಶ ಇಲ್ಲ ನಾಟಕಗಳ ಸಾರಲೇಖವನ್ನು ಓದಲಾಗುವುದು ಅದರಲ್ಲೇ ನೀವು ಆಯ್ಕೆ ಮಾಡಿಕೊಳ್ಳಬೇಕು !” ಎಂದರು.

ಈ ಹಂತದಲ್ಲಿ ನಾನು ಕಂಬಾರರಿಗೆ “ಸರ್ ನಮ್ಮದು ನೂರಕ್ಕೆ ನೂರು ಗ್ರಾಮೀಣ ಹಾಗೂ ಹೆಚ್ಚಿಗೆ ವಿದ್ಯೆಯನ್ನೂ ಕಲಿಯದವರ ತಂಡ, ನಮ್ಮ ತಂಡದ ಶಕ್ತಿ ಮತ್ತು ಇತಿ-ಮಿತಿಗಳನ್ನು ನೋಡಿ ನಾನು ನಾಟಕ ಆಯ್ಕೆ ಮಾಡಿಕೊಳ್ಳಬೇಕಲ್ಲವೇ, ಅದೂ ಅಲ್ಲದೆ ತುಂಬಾ ಸ್ತ್ರೀ ಪಾತ್ರಗಳಿರುವ ನಾಟಕವನ್ನಾಡುವುದೂ ನಮಗೆ ಕಷ್ಟ” ಎಂದೆ.

ಆಗ ಕಂಬಾರರು. “ಅಲ್ರೀ ಹಾಗಂದ್ರೆ ಹ್ಯಾಗ್ರೀ ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ ಶೂರನೂ ಅಲ್ಲ ಅಂತ ಗಾದೆ ಮಾತಿದೆ ಕೇಳಿದ್ದೀರಾ” ಎಂದರು. ಅದಕ್ಕೆ ನಾನು ‘ಸಾರ್ ಅದು ಯುದ್ಧಭೂಮಿಗೆ ಸರಿ ರಂಗಭೂಮಿಗೆ ಅಲ್ಲ, ಹೀಗಾದರೆ ನನಗೆ ಈ ಪ್ರಾಜೆಕ್ಟ್ ಬೇಡ” ಎಂದೆ. ಅದಕ್ಕವರು “ಸರಿ ನಿಮ್ಮಷ್ಟ” ಎಂದರು. ಕೊಡಗಿನ ಗೆಳೆಯ ಅಡ್ಡಂಡ ಕಾರಿಯಪ್ಪ ನನ್ನ ಮಾತಿಗೆ ದನಿಗೂಡಿಸಿದರು.

ನಂತರ ನಮ್ಮನ್ನೆಲ್ಲ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಯಿತು. ನಾ.ದಾ. ಶೆಟ್ಟಿಯವರು ಆರು ಜನರ ನಮ್ಮ ಗುಂಪಿಗೆ (ಮೈಸೂರು ವಿಭಾಗ) ಆರು ನಾಟಕಗಳ ಸಾರಲೇಖವನ್ನು ಓದಿ ಹೇಳಿದರು. ಕೆಲವರು ನಾಟಕವನ್ನು ಆಯ್ಕೆ ಮಾಡಿಕೊಂಡರು. ನಾನು ಯಾವ ನಾಟಕವನ್ನೂ ಆಯ್ಕೆ ಮಾಡಿಕೊಳ್ಳಲಿಲ್ಲ.

ಕೊನೆಯಲ್ಲಿ ಕೆವೈನಾ ಒಂದು ನಾಟಕದ ಸ್ಕ್ರಿಪ್ಟನ್ನು ಹಿಡಿದುಕೊಂಡು ನಮ್ಮ ಕೊಠಡಿಗೆ ಬಂದು “ಪ್ರಸಾದ್ ನೀವು ಈ ಕಾರ್ಯಕ್ರಮದಲ್ಲಿ ಇರಲೇಬೇಕೆಂದು ಕರೆಸಿದ್ದೇವೆ ನೀವೇ ಹೀಗೆಂದರೆ ಹೇಗೆ ತಗೊಳ್ಳಿ ಇದನ್ನು ನೀವು ಮಾಡಿಸಬೇಕು” ಎಂದು ಅದನ್ನು ನನ್ನ ಕೈಗಿತ್ತರು. ಅದನ್ನು ಪುಟ ಬಿಡಿಸಿ ನೋಡಿದೆ ಎರಡೇ ಸ್ತ್ರೀ ಪಾತ್ರವಿತ್ತು. “ಸರಿ ಕೊಡಿ ಪ್ರಯತ್ನಿಸುತ್ತೇನೆ” ಎಂದು ತೆಗೆದುಕೊಂಡೆ. ಅದು “ಬಹುಮಾನ” ನಾಟಕವಾಗಿತ್ತು. ಆಗ ಕೆವೈನಾರವರೇ ಅದು ನೆಗೆಟಿವ್ ಎಂಡ್ ಇದೆ. ನಾಟಕಕಾರೊಡನೆ ಮಾತಾಡಿ ಬದಲಾಯಿಸಿಕೊಳ್ಳಿ ಎಂದರು.

ನಂತರ ಎಲ್ಲರಿಂದ ಕರಾರು ಒಪ್ಪಂದಕ್ಕೆ ಸಹಿ ಪಡೆಯಲಾಯ್ತು ಇನ್ನು ಎರಡು ಮೂರು ದಿನಗಳಲ್ಲಿ ನಿಮ್ಮ ಖಾತೆಗೆ ಒಂದು ಲಕ್ಷ ಹಣ ಬರುತ್ತದೆ. ನಂತರ ನಾಟಕ ಗ್ರಾಂಡ್ ರಿಹರ್ಸಲ್ ನೋಡಲು ನಮ್ಮ ತಂಡ ಬಂದು ನೋಡಿ ನಾಟಕ ನಮಗೆ ಸರಿಯೆನಿಸಿದರೆ-ಚೆನ್ನಾಗಿದ್ದರೆ, ಮಾತ್ರ ನೀವು ಕಾರ್ಯಕ್ರಮದಲ್ಲಿ ಮುಂದುವರಿಯುತ್ತೀರಿ ಇಲ್ಲವಾದಲ್ಲಿ ನಿಮ್ಮ ನಮ್ಮ ಸಂಬಂಧ ಅಲ್ಲಿಗೇ ಮುಗಿಯಿತು. ಹಾಗಾಗಿ ನಾಟಕ ಚೆನ್ನಾಗಿ ಮಾಡಿ, ಆ ನಂತರ ನೀವು ಹತ್ತು ಪ್ರದರ್ಶನ ಮಾಡಬೇಕು. ಕೊನೆಯ ಪ್ರದರ್ಶನ ಬೆಂಗಳೂರಿನಲ್ಲಿ ಇರುತ್ತದೆ. ನಿಮಗೆ ಒಟ್ಟು ಮೂರು ಲಕ್ಷದಷ್ಟು ಹಣ ಬರಬಹುದು…ಎಂದೆಲ್ಲ ಹೇಳಿದರು. ನೀವು ಊರಿಗೆ ಹೋದ ಕೂಡಲೇ ಕೆಲಸ ಪ್ರಾರಂಭಿಸಿ . ಅಕ್ಟೋಬರ್ ಕೊನೆಯ ವೇಳೆಗೆ ಎಲ್ಲಾ ಪ್ರದರ್ಶನಗಳು ಮುಗಿಯಬೇಕು ಎಂದರು.

ಆಗ ನಾನು ಮತ್ತು ಕಾರಿಯಪ್ಪ ನಮ್ಮದು ದಟ್ಟ ಮಲೆನಾಡಿನ ಪ್ರದೇಶ ನಮಗೆ ಮಳೆಗಾಲ ಮುಗಿಯುವುದೇ ಅಕ್ಟೋಬರ್ ನಲ್ಲಿ ಹಾಗಾಗಿ ನಮಗೆ ಹೆಚ್ಚಿಗೆ ಕಾಲಾವಕಾಶ ಬೇಕೆಂದೆವು. ನಮಗೆ ಹದಿನೈದು ದಿನ ಹೆಚ್ಚಿಗೆ ಕಾಲಾವಕಾಶ ಸಿಕ್ಕಿತು. ಈ ಹಂತದಲ್ಲಿ ಅನಿತಾ ಕಾರಿಯಪ್ಪ “ಪ್ರಸಾದಣ್ಣ ನಿನಗೂ ಕಾರಿಯಪ್ಪನಿಗೂ ಈ ಮುದಿ ವಯಸ್ಸಿನಲ್ಲಿ ಹೀಗೆ ಕೈ ಕಟ್ಟಿ ನಿಲ್ಲುವ ಕೆಲಸಬೇಕಿತ್ತಾ ನೀವು ಯಾವ ಪ್ರಾಜೆಕ್ಟಿಗೂ ಕೈ ಒಡ್ಡದವರು ಇಲ್ಲಿಗೆ ಯಾಕೆ ಬಂದ್ರಿ” ಎಂದು ತಮಾಷೆ ಮಾಡಿದರು.
ಅಂತೂ ನಾವೆಲ್ಲ ಊರಿಗೆ ಮರಳಿದೆವು.

ಆ ವಾರವೇ ನಾವು ನಿರ್ದೇಶಕರೊಡನೆ ಮಾತಾಡಿ . ನಾಟಕಕಾರರೊಡನೆ ಚರ್ಚಿಸಿ ನಾಟಕವನ್ನು ಹೊಸ ಸ್ಕ್ರಿಪ್ಟ್ ತಯಾರಿಸಿಕೊಂಡು ಕೆಲಸ ಪ್ರಾರಂಭಿಸಿದೆವು. ಮೂರು ದಿನಗಳಲ್ಲಿ ಕಳುಹಿಸುತ್ತೇವೆಂದು ಹೇಳಿದ ಹಣ ನಮಗೆ ತಲುಪಿದ್ದು ಹಲವಾರು ಬಾರಿ ಫೋನ್ ಮಾಡಿ ವಿಚಾರಿಸಿ ಎಲ್ಲ ಆದ ಮೇಲೆ. ಒಂದು ತಿಂಗಳು ಹತ್ತು ದಿನಗಳ ನಂತರ ಸೆಪ್ಟೆಂಬರ್ ಮೂರರಂದು.!

ಈ ವರ್ಷ ಮಲೆನಾಡಿನಲ್ಲಿಯೂ ಮಳೆ ಇಲ್ಲದ್ದರಿಂದ ಅಕ್ಟೋಬರ್ ಮೊದಲ ವಾರಕ್ಕೆ ನಮ್ಮ ನಾಟಕ ತಯಾರಾಗಿತ್ತು! ನಂತರ ವೀಕ್ಷಕರನ್ನು ಕಳಿಸಿಕೊಡಿ ಎಂದು ಪೋನ್ ಮಾಡಿದೆವು. ಅಕ್ಟೋಬರ್ 23 ರಂದು ಕೆ ವೈ ನಾರಾಯಣ ಸ್ವಾಮಿ, ನಾ.ದಾಮೋದರ ಶೆಟ್ಟಿ, ಶಶಿಧರ ಬಾರಿಘಾಟ್, ಅಕಾಡೆಮಿಯಿಂದ ಮಂಜುನಾಥ ಆರಾಧ್ಯ ಅವರಲ್ಲದೆ ನಾಟಕಕಾರ ಬಸವಣ್ಣೆಪ್ಪ ಕಂಬಾರ ಅವರೂ ಅಂದು ನಮ್ಮೂರಿಗೆ ಬಂದು ನಮ್ಮ ಪೂರ್ಣಚಂದ್ರ ತೇಜಸ್ವಿ ರಂಗಮಂದಿರದಲ್ಲಿ ನಾಟಕದ ಗ್ರಾಂಡ್ ರಿಹರ್ಸಲ್ ನೋಡಿದರು. ನಂತರ ಸಾಕಷ್ಟು ವಿಚಾರ ವಿನಿಮಯ ಚರ್ಚೆ ನಡೆದು ಕೈವೈನಾ ಅವರು ನಾನು ನಿಮ್ಮನ್ನು ಕರೆದು ಸ್ಕ್ರಿಪ್ಟ್ ಕೊಟ್ಟದ್ದು ಇದಕ್ಕೇ ನಿಮ್ಮದು ನಿಜವಾದ ಗ್ರಾಮೀಣ ತಂಡ ನಾನು ಇನ್ನು ನಿಮ್ಮನ್ನು ಭೇಟಿಯಾಗುವುದು ನಿಮ್ಮ ಇಪ್ಪತ್ತೈದನೇ ಪ್ರದರ್ಶನದಲ್ಲಿ ಎಂದರು.

ನಂತರ ನಾನು ಬೆಂಗಳೂರು ಪ್ರದರ್ಶನ ಯಾವಾಗ ನಾವು ಇನ್ನು ಪ್ರದರ್ಶನಗಳನ್ನು ಮಾಡುತ್ತಾ ಹೋಗಬೇಕು ಇಲ್ಲವಾದಲ್ಲಿ ತಂಡ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ನಮ್ಮ ತಂಡದಲ್ಲಿ ಅನೇಕರು ಕೂಲಿಕಾರ್ಮಿಕರು ಮತ್ತು ಕುಶಲಕರ್ಮಿಗಳು. ಹೊಟ್ಟೆ ಪಾಡಿನ ಪ್ರಶ್ನೆ ಇದೆ. ಮತ್ತೆ ಮತ್ತೆ ಹೊಸಬರಿಗೆ ತಾಲೀಮು ನೀಡುವುದು ದುಬಾರಿ ಎಂದೆ.

ಇಲ್ಲ ಬೆಂಗಳೂರಿನ ಪ್ರದರ್ಶನ ನಂತರ ತೀರ್ಮಾನ ಮಾಡುತ್ತೇವೆ. ಈಗ ನೀವು ಸುತ್ತ ಮುತ್ತ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಪ್ರದರ್ಶನ ನೀಡುತ್ತಾ ಹೋಗಿ ಎಂದರು. ಹಣ ನಂತರ ನಿಮಗೆ ಬರುತ್ತದೆ. ಎಂದರು.

ಅದರಂತೆ ನಾವು ನಮ್ಮೂರಿನಲ್ಲಿ, ಹಾಸನ, ಪುತ್ತೂರು, ಮೈಸೂರು, ಹೀಗೆ ನಾಲ್ಕೈದು ಪ್ರದರ್ಶನ ಮಾಡಿದೆವು. ಆ ವೇಳೆಗೆ ಗೆಳೆಯ ಕಾರಿಯಪ್ಪ ಫೋನ್ ಮಾಡಿ “ಪ್ರಸಾದ್ ಬೆಂಗಳೂರಿನ ಪ್ರದರ್ಶನವಾಗದೇ ನಾಟಕವನ್ನು ಬೇರೆಲ್ಲೂ ಮಾಡಬಾರದಂತೆ, ಹಾಗೆ ಮಾಡಿದರೆ ಆ ಪ್ರದರ್ಶನದ ಹಣ ನೀಡುವುದಿಲ್ಲವಂತೆ” ನನಗೆ ಹಾಗೆ ತಿಳಿಸಿದ್ದಾರೆ.

ಅದಕ್ಕೆ ನಾನು “ ನನಗೆ ಹಾಗೆ ತಿಳಿಸಿಲ್ಲ ಪ್ರದರ್ಶನ ಮಾಡಲು ತಿಳಿಸಿದ್ದಾರೆ ನಾನು ಪ್ರತಿ ಪ್ರದರ್ಶನದ ಮೊದಲು ನಮ್ಮಲ್ಲಿಗೆ ವೀಕ್ಷಕರಾಗಿ ಬಂದ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯವರು ಬರೆದ ಪತ್ರದಲ್ಲಿ ಸಂಚಾಲಕರೆಂದು ತಿಳಿಸಿರುವ ಶಶಿಧರಭಾರಿಘಾಟ್ ಹಾಗೂ ನಾ.ದಾ. ಶೆಟ್ಟಿಯವರಿಗೆ ತಿಳಿಸಿದ್ದೇನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ಮಾಡಿದ್ದೇನೆ. ನನಗೆ ಈ ಕಾನೂನು ಅನ್ವಯವಾಗುವುದಿಲ್ಲ ! ನನಗೆ ಇಂದೂ ಯಾರೂ ಹೇಳಿಲ್ಲ” ಎಂದೆ. ಅದಕ್ಕವರು “ಅದೇನೋ ಮಂತ್ರಿಗಳೇ ಹಾಗೆ ಹೇಳಿದ್ದಾರಂತೆ ನನಗೆ ಗೊತ್ತಿಲ್ಲ” ಎಂದರು.

ಈಗ ಬೆಂಗಳೂರು ಪ್ರದರ್ಶನವೂ ಮುಗಿದಿದೆ. ಅವರು ಹೇಳಿದ ಎರಡನೇ ಕಂತಿನ ಹಣವೂ ಬಂದಿಲ್ಲ ನಾವು ಊರೂರು ತಿರುಗಿ ನೀಡಿದ ನಾಲ್ಕೈದು ಪ್ರದರ್ಶನದ ಹಣವೂ ಬಂದಿಲ್ಲ. ಬೆಂಗಳೂರಿನ ಪ್ರದರ್ಶನ ಊಟ ವಸತಿ ಯ ಚೆಕ್ ಮಾತ್ರ ಬಂದಿದೆ. ವ್ಯಾನ್ ಬಾಡಿಗೆಯೂ ಇನ್ನು ಬರಬೇಕಷ್ಟೆ. ಒಂದು ಹವ್ಯಾಸಿ ರಂಗ ತಂಡ ತಾಲೀಮು ನಡೆಸಿ ಮೂರು ತಿಂಗಳ ಕಾಲ ಯಾವುದೇ ಪ್ರದರ್ಶನ ಮಾಡದೆ ಉಳಿದುಕೊಳ್ಳುವುದು ಹೇಗೂ ಆಯೋಜಕರೇ ತಿಳಿಸಬೇಕು.

ಅವರು ಕೊಟ್ಟ ಒಂದು ಲಕ್ಷವಲ್ಲದೇ ಇದುವರೆಗೂ ಬೇರೆ ಹಣ ನಮಗೆ ಬಂದಿಲ್ಲ ಅದರ ಮೇಲೆ ಲಕ್ಷಗಳಲ್ಲಿ ಸಾಲಮಾಡಿ ಕುಳಿತಿದ್ದೇವೆ. ಇದು ನಮ್ಮ ತಂಡದ ಗತಿ ಮತ್ತು ಸ್ಥಿತಿ.

ಚಂದ್ರಶೇಖರ ಕಂಬಾರರು ಕೊಟ್ಟ ಕುದುರೆಯನ್ನು ನಾವು ಏರಿ ಕತ್ತೆಗಳಾಗಿ ಕುಳಿತಿದ್ದೇವೆ…..

ನಾಟಕೋತ್ಸವ ಕೊನೆಯ ದಿನ 18/2 ರಂದು ಶನಿವಾರ ಕಲಾಗ್ರಾಮದಲ್ಲಿ ನಮ್ಮ ನಾಟಕ ಪ್ರದರ್ಶನವಿತ್ತು ಅದೇ ವೇಳೆಗೆ ರಾಷ್ಟ್ರೀಯ ರಂಗಶಾಲೆಯವರ (ಹೈದರಾಬಾದ್ ತಂಡ)ನಾಟಕವೂ ಅದೇ ವೇಳೆಗೆ ಮೇಲಿನ ರಂಗಮಂದಿರಲ್ಲಿ ಇತ್ತು. ಎರಡೂ ರಂಗಮಮಂದಿರಗಳು ಅಂದು ಭರ್ತಿಯಾಗಿದ್ದವು (ಶನಿವಾರವಾದದ್ದು ಕಾರಣವಿರಬಹುದು) ಇಲಾಖೆ ಮತ್ತ ಅಕಾಡೆಮಿಯಿಂದ ಜವಾಬ್ದಾರಿಯುತ ಸದಸ್ಯರಾರೂ ಬಂದಿರಲಿಲ್ಲ ಯಾರೋ ನೌಕರರನ್ನು ಕಳುಹಿಸಿದ್ದರು. ನಮ್ಮ ನಾಟಕ ಪ್ರೇಕ್ಷಕರನ್ನು ರಂಜಿಸಿತು. ನಾಟಕಕಾರು ಬೆಳಗಾವಿಯಿಂದ ಬಂದಿದ್ದರು.

One Response

  1. Anand h
    February 24, 2017

Add Comment

Leave a Reply