Quantcast

ನೀ ಇವತ್ತೂ ಅವತ್ತಿನಷ್ಟೇ ಇಷ್ಟ ಕಣೇ..

ಆಹಾ..ಚಹಾ ಸರಣಿ

ಶಮ ನಂದಿಬೆಟ್ಟ 

ಕೈಗೆ ಕೈ ಬೆಸೆದು ಕೂತ ಹದಿನೆಂಟರ
ಖೋಡಿಗಳು ನನ್ನೆದುರು..
ತಮ್ಮಷ್ಟಕ್ಕೆ ಪಿಸು ಮಾತಿನ ಸಲ್ಲಾಪ
ಜಗತ್ತಿನ ಪರಿವೆಯಿಲ್ಲದೇ
ವಿಹರಿಸುತ್ತಿರುವ ಈ ಕ್ಷಣದಲ್ಲಿ
ನಿನ್ನದಲ್ಲದೇ ಇನ್ಯಾರ ಚಿತ್ರ
ಈ ಪುಟ್ಟ ಚಿತ್ತ ಭಿತ್ತಿಯಲ್ಲಿ ?

ಹಳೆಯ ನೆನಪುಗಳಲ್ಲಿ ಕಳೆದು
ಹೋದ ನನ್ನ ಮೂರು ಗಂಟೆಯ
ಕರೆ ಎಚ್ಚರಿಸದೇ ಹೋಗಿದ್ದರೆ
ಚಹಾ ಮರೆತು ಹೋಗಿ
ಅದಿನ್ನೆಂಥ ಪ್ರಮಾದ ಆಗುತಿತ್ತು
ಒಮ್ಮಿಂದೊಮ್ಮೆ ಚಹಾ ಬೇಕೆನಿಸಿ
ನೀ ಬಂದಿದ್ದರೆ ಪೆಚ್ಚು
ನಗೆಯಿಂದ ಎದುರ್ಗೊಳ್ಳುತಿದ್ದೆ

ಮನೆಯ ತಿರುವಲ್ಲಿ ಹೆಬ್ಬಾವಿನಂತೆ
ಮೈ ಚಾಚಿದ ಸಪೂರ
ಬಂಡೆಯ ಮೇಲೆ ಚಹಾ
ಹೀರುವಾಗ “ಜತೆಗೆ ಕೂತು ಕುಡಿವ
ಕೊನೆಯ ಚಹಾ” ಅಂದಿದ್ದು
ಸಾವಿರ ಸಲ ಪ್ರತಿಧ್ವನಿಸಿದೆ
ಆ ಜೋಡಿಯ ಕಂಡ ಮೇಲೆ !
ಅವತ್ತು ಚಹಾ ಮಾರುವ
ಹುಡುಗನ ಕಣ್ಣಲ್ಲಿ ನೀರಿತ್ತಾ ?

ಬದುಕಿನ ಹಾದಿ ನಿನ್ನೆಡೆಗೆ
ಮತ್ತೆ ನನ್ನ ತರುವ ಲವಲೇಶ
ನಿರೀಕ್ಷೆಯಿರಲಿಲ್ಲ ಅವತ್ತು
ಊರಲ್ಲಿ ನಿನ್ನ ಕಾಣುವ ವರೆಗೂ
“ನೀ ಮಾಡುವ ಚಹಾಕ್ಕೆ ಮಾತ್ರ
ಅದೇ ರುಚಿ ಕಣೇ” ಎಷ್ಟು ಸರಳ
ಮಾತುಗಳು ನಿನಗೆ !!

ಕಿಟಕಿಯಂಚಿನ ಬಿಸಿಲು ಕೋಲಿಗೆ
ಕತ್ತಲು ಸರಿಸಿ ಸದ್ದಿಲ್ಲದೇ
ಒಳ ಬರುವ ಹವಣಿಕೆ
ನಿರೀಕ್ಷೆಯ ಸ್ವಪ್ನಗಳ
ಹಣೆ ಸವರಿ ಕಣ್ಣಲ್ಲಿ ಕಣ್ಣಿಟ್ಟು
ಒಮ್ಮೆ ಹೇಳು “ನೀ ಇವತ್ತೂ
ಅವತ್ತಿನಷ್ಟೇ ಇಷ್ಟ ಕಣೇ”
ಜೀಕಿ ತುಳುಕಲು ತಾನೂ ಕಾಯುತ್ತಿದೆ
ಕೈಯಲ್ಲಿನ ಚಹಾದ ಬಟ್ಟಲು

3 Comments

  1. Hema
    February 25, 2017
  2. ಕೈದಾಳ್ ಕೃಷ್ಣಮೂರ್ತಿ
    February 25, 2017
    • Shama, Nandibetta
      February 25, 2017

Add Comment

Leave a Reply