Quantcast

ಪಾರ್ವತಿಯನ್ನೇ ಎರಡು ಭಾಗ ಮಾಡು ಅಂದ..

ಶಿವ ಪ್ರಸಾದ ಪಟ್ಟಣಗೆರೆ

ಶಿವ ಪಾರ್ವತಿಯರದು ಇಂದಿನ ಕಥೆಯಲ್ಲ

ಈ ಮನುಷ್ಯ ಜಗತ್ತು ಈ ಕಥೆಯನ್ನು ತನ್ನದೇ ಆದ ರೀತಿಯಲ್ಲಿ ಹಲವು ನೆಲೆಗಳಲ್ಲಿ ಕಟ್ಟಿಕೊಂಡಿದೆ. ಆದರೆ ಕೆಲವೊಂದು ಮಾತ್ರ ವೈದಿಕ ಸ್ವರೂಪವನ್ನು, ಮಡಿವಂತಿಕೆಯನ್ನೂ ಪಡೆದುಕೊಂಡುಬಿಟ್ಟಿದೆ.

ಮೊನ್ನೆ ಹೀಗೆ ಶಾಸನ ಹುಡುಕುತ್ತಾ ಕುಣಿಗಲ್ಲಿಗೆ ಹೋದಾಗ ತೆಲುಗಿನ ‘ದುಗ್ಗ’ ಕಥೆಯನ್ನು ಕೇಳಿದೆ. ಅದರಲ್ಲಿ ಬರುವ ಒಂದು ಪ್ರಸಂಗವನ್ನು ನಾನಿಲ್ಲಿಡುತ್ತಿದ್ದೇನೆ.

ಪಾರ್ವತಿ ಶಿವನನ್ನು ಮೋಹಿಸಿ ಆತನನ್ನು ತನ್ನ ಕುಲದ ಪ್ರಕಾರ ಮದುವೆಯಾಗುತ್ತಾಳೆ.  ಶಿವ ಪಾರ್ವತಿಯೊಂದಿಗೆ ತನ್ನ ಕುಲದ ವ್ಯಾಪ್ತಿಗೆ ಬಂದಾಗ ಶಿವನ ಅಪ್ಪ ಅವನನ್ನು ಬಿಟ್ಟುಕೊಳ್ಳದೆ ಹಟ್ಟಿಯ ಬಾಗಿಲಲ್ಲೆ ತಡೆಯುತ್ತಾನೆ.

ಆಗ ಶಿವ ‘ಅಪ್ಪ ನೋಡು ನಾನೆಂತ ಹೆಣ್ಣನ್ನ ಕರ್ಕೊಂಡು ಬಂದಿದ್ದಿನಿ’ ಎನ್ನುತ್ತಾನೆ. ನಂತರ ನಾನಾ ಥರದಲ್ಲಿ ವರ್ಣಿಸುತ್ತಾ ಆಕೆಯನ್ನು ಅಪ್ಪನಿಗೆ ಪರಿಚಯಿಸುತ್ತಾನೆ.

ಇದನ್ನೆಲ್ಲಾ ಕೇಳಿಸಿಕೊಂಡ  ಅಪ್ಪ ಹೇಳುತ್ತಾನೆ. ‘ಬಹಳ ಒಳ್ಳೆ ಕೆಲಸ ಮಾಡಿದ್ದೀಯ, ನೀ ಮಾಡಿರುವುದು ಸರಿ ಆದರೆ ನೀನು ಇಲ್ಲಿಂದ ಹೊರಡುವಾಗ ಕುರಿಗಳು ನೂರಿತ್ತು ಈಗ ನೂರಿಪ್ಪತ್ತು ಆಗಿವೆ ಏನು ಮಾಡೋದು?’ ಎಂದು ಕೇಳಿದಾಗ  ಆ ಶಿವನು ‘ಏನಿಲ್ಲ ನೀನರ್ಧ-ನಾನರ್ಧ ಹಂಚಿಕೊಳ್ಳೋದು ಅಷ್ಟೆ’ ಎಂದು ಉತ್ತರಿಸುತ್ತಾನೆ.

‘ಹೌದು ಹೌದು ನಿನ್ನ ಮಾತು ಸರಿಯಾಗಿಯೇ ಇದೆ. ನೀನು ಹೋಗುವಾಗ ಒಬ್ಬನೇ ಇದ್ದೆ ಈಗ ಇಬ್ಬರು ಬಂದಿದ್ದೀರಿ ಇದರಲ್ಲೂ ಸಮಪಾಲಾಗಬೇಕು’ .

‘ಪೈನುಂಡೇದಿ ನುವ್ವು ತೀಸ್ಕೋ, ಕೆನುಕ್ಕುನ್ನೇದಿ ನೇನು ತೀಸ್ಕೊಂಟಾನು’  ಪಾರ್ವತಿಯನ್ನು ಅರ್ಧಭಾಗ ಮಾಡಿ ಮೇಲ್ಬಾಗ ನಿನಗೆ ಕೆಳಭಾಗ ನನಗೆ ಎಂದು ಹೇಳುತ್ತಾನೆ. (ದ್ರೌಪದಿಯ ವಿಷಯದಲ್ಲೂ ಅಷ್ಟೆ ಆ 5 ಜನರು ಸಮನಾಗಿ ಹಂಚಿಕೊಂಡ ಜನಪದ ಕಥೆ ನಮ್ಮಲ್ಲಿದೆ)

ಆಗ ಶಿವ ಕೆಂಡಾಮಂಡಲವಾಗಿ ‘ನೀನು ಮುದಿಗೊಡ್ಡು ಸರಿಯಾಗಿ ಅವಳನ್ನು ಆಸ್ವಾದಿಸುವ ಕಣ್ಣೂ ಇಲ್ಲ ಅಂತಹದರಲ್ಲಿ ಹಂಚಿಕೆಯನ್ನು ಕೇಳುತ್ತೀಯಾ ?’ ಎಂದು ಸಿಟ್ಟಿನಿಂದ ನುಡಿಯುತ್ತಾನೆ

ಇದು ಒಂದು ರೀತಿಯ ದೈವಸಂಕರ. ನಮ್ಮ ಮಾರಮ್ಮನ ವಿಚಾರದಲ್ಲೂ ಅಷ್ಟೆ, ಮಾರಮ್ಮನೂ ಕೂಡ ಮೇಲ್ಸ್ತರದ ಕುಲದವನನ್ನು ಮೋಹಿಸಿದ ಪ್ರಸ್ತಾಪಗಳೂ ಸಹ ಹೀಗೇ ಇವೆ ಇಂತಹ ಹಲವು ಉದಾಹರಣೆಗಳನ್ನು ನಾವು ಕಾಣಬಹುದು.

Add Comment

Leave a Reply