Quantcast

ಮೀಡಿಯಾದವರು ಅಂದ್ಮೇಲೆ ಮಾತಾಡಬೇಕು..

ಶ್ರಾವಣಿ

ನಾನು ನೇರ ಸನ್ಯಾಸಿನಿಯನ್ನು ನೋಡಿದ್ದು ಅದೇ ಮೊದಲು. ಬಿಳಿ ಸೀರೆ ಉಟ್ಟು, ಕೊರಳಿಗೆ ದೊಡ್ಡದು, ಚಿಕ್ಕದು ಇರುವ 4-5 ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದ, ಕೂತಲ್ಲಿ, ನಿಂತಲ್ಲಿ ಅದೇನೋ ಮಂತ್ರವನ್ನು ಪಠಿಸುತ್ತಲೇ ಇದ್ದರು. ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಾನು ಸಮೂಹ ಮಾಧ್ಯಮಗಳ ಕುರಿತು ಮಾತನಾಡಬೇಕಾಗಿತ್ತು.

ವಿವಿಧ ಕ್ಷೇತ್ರಗಳ ಗಣ್ಯರು ವೇದಿಕೆಯಲ್ಲಿದ್ದರು. ಒಬ್ಬರು ಕನ್ನಡ ಸನ್ಯಾಸಿನಿ, ಮತ್ತೊಬ್ಬರು ದೆಹಲಿಯಿಂದ ಬಂದ ಸನ್ಯಾಸಿನಿಯೂ ಇದ್ದರು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಜತೆಗೆ ಸಾಮಾಜಿಕ ಕಾರ್ಯಕರ್ತೆಯೂ ಇದ್ದರು. ಎಲ್ಲರೂ ನಮ್ಮ ಧರ್ಮ, ಪರಂಪರೆ, ಇತ್ಯಾದಿಗಳ ಕುರಿತೇ ಹೆಚ್ಚಾಗಿ ಮಾತನಾಡಿದರು. ಆ ಸನ್ಯಾಸಿನಿ ಧರ್ಮ, ಪರಂಪರೆಯ ಕುರಿತು ಮಾತನಾಡಿದ ಮೇಲೆ ಇಂದು ಹಿಂದುಗಳ ಸಂಖ್ಯೆ ಕ್ಷೀಣಿಸುತ್ತಿದೆ. ನಮ್ಮೆಲ್ಲ ಸಮಸ್ಯೆ ಬಗೆಹರಿಯಬೇಕೆಂದರೆ ನಮ್ಮ ಸಂಖ್ಯೆಯನ್ನು ಹೆಚ್ಚುಗೊಳಿಸಬೇಕು, ನಾವು ಹೆಚ್ಚು ಮಕ್ಕಳನ್ನು ಮಾಡಬೇಕು ಎಂದು ಅಂದು ಸಭೆಗೆ ಕರೆಕೊಟ್ಟಳು. ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು.

ನಂತರ ನಾನು, ಒಟ್ಟಾರೆಯಾಗಿ ಸಮೂಹ ಮಾಧ್ಯಮಗಳು ಹೆಣ್ಣನ್ನು ನೋಡುವ ರೀತಿ, ಜಾಹೀರಾತುಗಳಲ್ಲಿ ಹೆಣ್ಣಿನ ಅಗತ್ಯವೇ ಇಲ್ಲದಿದ್ದರೂ ಹೆಣ್ಣನ್ನು ಬಳಸಿಕೊಳ್ಳುವುದು ಸರಿಯಲ್ಲ, ಪುರುಷರು ದಾಡಿ ಮಾಡಿಸಿಕೊಳ್ಳಲು ಬಳಸುವ ರೇಜರ್‍ನ ಜಾಹೀರಾತಿಗೂ ಮಹಿಳೆಯೊಬ್ಬಳು ಇರಲೇ ಬೇಕು ಇವೆಲ್ಲ ಅಗತ್ಯವೇ ಇರುವುದಿಲ್ಲ…ಇತ್ಯಾದಿಯಾಗಿ ಮಾತನಾಡಿದೆ.

ಮಾತು ಮುಗಿದ ಮೇಲೆ ಕೆಲವರು ಬಂದು, ನೀವು ಹೇಳಿದ್ದೆಲ್ಲ ಸರಿ , ಆದ್ರೆ ನಿಮ್ಮ ಭಾಷಣದಲ್ಲಿ ಇನ್ನೂ ಒಂದು ಅಂಶ ತರಬೇಕಿತ್ತು. ಅದೆಂದರೆ ನಾವು ಹಿಂದುಗಳು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು. 2 ಮಕ್ಕಳಿಗಿಂತ ಹೆಚ್ಚು ಮಾಡಿಕೊಳ್ಳಬೇಕು ಎಂಬುದನ್ನು ಹೇಳಬೇಕಿತ್ತು. ಆಗ ನಿಮ್ಮ ಮಾತು ಹೆಚ್ಚು ಅರ್ಥಪೂರ್ಣವಾಗುತ್ತಿತ್ತು ಎಂದರು.
ಅದಕ್ಕೆ ಈ ಸನ್ಯಾಸಿನಿಯೂ ಹೌದೆಂದು ತಲೆ ಅಲ್ಲಾಡಿಸಿದರು.

ಅರ್ಥಪೂರ್ಣ ಆಗ್ತಾ ಇತ್ತೇನೋ… ಆದ್ರೆ ಅಷ್ಟು ಮಕ್ಕಳನ್ನು ಮಾಡಿಕೊಂಡರೆ ನೋಡಿಕೊಳ್ಳುವವರಾರು? ಈಗ ಒಂದು…ಎರಡು ಮಕ್ಕಳನ್ನು ನೋಡಿಕೊಳ್ಳೋ ಹೊತ್ತಿಗೇ ನಮಗೆ ಸಾಕಾಗಿ ಹೋಗಿದೆ. ಇನ್ನು ಅಷ್ಟಷ್ಟು ಮಕ್ಕಳನ್ನು ಹೆರೋದು, ಬೆಳೆಸೋದು ನೋಡಿಕೊಳ್ಳುವುದೆಂದರೆ ಸಾಮಾನ್ಯವಾ? ನೀವೇನಾದ್ರೂ ನೋಡಿಕೊಳ್ಳಬಹುದಾ… ಎಂದು ಮರು ಪ್ರಶ್ನಿಸಿದೆ.

ನಾವೆಲ್ಲಿ ನೋಡ್ಕೋಳೋಕ್ಕಾಗತ್ತೆ ಮೇಡಂ. ಅದು ನಿಮ್ಮ ಕರ್ತವ್ಯ…ನೋಡಿ… ಅವರು…(…) ಎಷ್ಟು ಬೇಕಾದ್ರೂ ಮಕ್ಕಳನ್ನು ಮಾಡ್ಕೋಬಹುದು. ಇನ್ನು ಕೆಲವೇ ವರ್ಷಗಳಲ್ಲಿ ಅವರದ್ದೇ ರಾಜ್ಯವಾಗಿಬಿಡುತ್ತದೆ ನೋಡಿ. ಅದಕ್ಕೇ ನಾವು ಹಿಂದುಗಳು ಜಾಸ್ತಿ ಮಕ್ಕಳನ್ನು ಮಾಡ್ಕೋಬೇಕು ಅಂತ ಹೇಳಿದ್ದು ಎಂದ.

ಸರಿಯಪ್ಪ… ನನ್ನ ಪ್ರಶ್ನೆ ಅದಲ್ಲವೇ ಅಲ್ಲ. ಅಷ್ಟು ಮಕ್ಕಳನ್ನು ಮಾಡಿದ್ರೆ ನೋಡ್ಕೋಳ್ಳೋರ್ಯಾರು? ಅವರನ್ನು ಸರಿಯಾಗಿ ಬೆಳೆಸುವುದೂ ಮುಖ್ಯವಲ್ಲವೇ? ಅವರಿಗೆ ಒಳ್ಳೆ ಶಿಕ್ಷಣ ಕೊಡಿಸ್ಬೇಕು. ಅವರ ಆರೋಗ್ಯ, ಆಹಾರ ಎಲ್ಲವೂ ಮುಖ್ಯವಾಗುತ್ತದಲ್ಲವಾ? ಇಂದಿನ ಈ ದುಬಾರಿ ದಿನಗಳಲ್ಲಿ ಈ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವೇ? ಸ್ವಲ್ಪ ಯೋಚಿಸಿ ನೋಡಿ… ಅಲ್ಲದೆ ಇಂದು ಎಲ್ಲರೂ ಉದ್ಯೋಗಸ್ಥರು. ಅವರಿಗೆ ಒಂದು ಮಗುವನ್ನು ಹೆತ್ತು ಬೆಳೆಸೋದೇ ದೊಡ್ಡ ಸಂಕಟವಾಗಿರುತ್ತದೆ. ನಿಮ್ಮಂಥ ಗಂಡಸರು ಅವರ ಕಡೆ ತಿರುಗಿ ಕೂಡ ನೋಡೋದಿಲ್ಲ. ಆಗ ಅಷ್ಟೊಂದು ಮಕ್ಕಳನ್ನು ಮಾಡಿಕೊಂಡ್ರೆಕಷ್ಟ ಆಗೋದಿಲ್ವಾ ಹೇಳಿ?

ಮೇಡಂ, ಅವರೆಲ್ಲ ಮಾಡೋದಿಲ್ಲವಾ? ಇಷ್ಟಕ್ಕೂ ಹುಟ್ಟಿಸಿದವ ಹುಲ್ಲು ಮೇಯಿಸೋದಿಲ್ಲವಾ? ಹೇಗೂ ಆಗತ್ತೆ ಬಿಡಿ. ನಾವು ಹೀಗೆಲ್ಲ ಯೋಚಿಸೋದಕ್ಕಾಗಿಯೇ ನಮ್ಮ ಸಂಖ್ಯೆ ಕಡಿಮೆಯಾಗ್ತಿರೋದು ಎಂದು ಅವನೆಂದರೆ, ನಿಜ, ನೀವು ಹೇಳೋದು, ನಾವು ಈ ಥರ ಎಲ್ಲ ಯೋಚಿಸೋದಿಕ್ಕೇ ಅವರು ಹೆಚ್ಚಿಸಿಕೊಂಡಿರೋದು ಎಂದು ಆ ಸನ್ಯಾಸಿನಿ ಮಧ್ಯೆ ಬಾಯಿ ಹಾಕಿದಳು.

ಅಂದ್ರೆ ಭಾರತದ ಇಂದಿನ ಎಲ್ಲ ಸಮಸ್ಯೆಗಳಿಗೂ ನಮ್ಮ ಸಂಖ್ಯೆ ಕಡಿಮೆಯಾಗ್ತಿರೋದೇ ಕಾರಣ. ಹಾಗಾಗಿ ಜಾಸ್ತಿ ಮಕ್ಕಳನ್ನು ಮಾಡಿಕೊಂಡು, ನಮ್ಮ ಜನಸಂಖ್ಯೆ ಜಾಸ್ತಿ ಆಗ್ಬಿಟ್ಟರೆ ಎಲ್ಲ ಸಮಸ್ಯೆಯೂ ಬಗೆಹರಿದುಬಿಡುತ್ತದೆ ಎಂಬುದಷ್ಟೇ ಈ ಇಬ್ಬರ ತಲೆಯಲ್ಲಿ ಪಟ್ಟಾಗಿ ಕೂತುಬಿಟ್ಟಿತ್ತು.

ಇದನ್ನೆಲ್ಲ ನಾನು ಮಾತನಾಡೋಕ್ಕಾಗಲ್ಲಪ್ಪ. ನೀವು ಗಂಡಸರು ಎಲ್ಲರೂ ಸೇರಿ ಬಾಂಡ್‍ಪೇಪರ್‍ಗೆ ಸಹಿಮಾಡಿಕೊಡಿ, ಈ ಮಕ್ಕಳನ್ನು ನಾವೇ ನೋಡ್ಕೋತೀವಿ, ಬೆಳೆಸ್ತೀವಿ ಎಂದು. ಅದಕ್ಕಿಂತ ಮುಖ್ಯವಾಗಿ ಹೆರುವ ಸಾಮರ್ಥ್ಯ ಬಹುಶಃ ನಿಮಗಿದ್ದಿದ್ದರೆ ನಿಮ್ಮಿಂದ ಇಂಥ ಮಾತುಗಳು ಬರ್ತಾನೇ ಇರ್ಲಿಲ್ವೇನೋ… ಎಂದು ಹೇಳಬೇಕೆಂದೆನಿಸಿತು. ಆದರೆ ಹೇಳಲಿಲ್ಲ. ಯಾಕೆಂದರೆ ಅದೆಲ್ಲ ಅವರ ತಲೆಗೆ ಹೋಗುವಂತೆ ಕಾಣಲಿಲ್ಲ. ಅವರಿಗೇನಿದ್ದರೂ ಜಾಸ್ತಿ ಮಕ್ಕಳನ್ನು ಮಾಡಿ ನಮ್ಮ ಜನಸಂಖ್ಯೆಯನ್ನು ಹೆಚ್ಚು ಮಾಡಿಬಿಟ್ಟರೆ ಎಲ್ಲವೂ ಸರಿಹೋಗಿಬಿಡುತ್ತದೆ ಎಂಬುದಷ್ಟೇ ತಲೆಯೊಳಗಿದ್ದಂತೆನಿಸುತ್ತಿತ್ತು.

ಹೊರಡುವ ತರಾತುರಿಯಲ್ಲಿದ್ದವಳನ್ನು ಮತ್ತೆ ಹಿಡಿದು ನಿಲ್ಲಿಸಿ, ಇನ್ನು ಮುಂದೆ ಬೇರೆ ಕಡೆ ನೀವು ಮಾತನಾಡುವಾಗ ದಯವಿಟ್ಟು ಈ ಅಂಶವನ್ನೂ ಸೇರಿಸಿ ಮೇಡಂ. ಆಗ ನಿಮ್ಮ ಮಾತು ಪರಿಪೂರ್ಣವಾಗುತ್ತೆ ಎಂದು ಬೇರೆ ಒತ್ತಾಯಿಸಿದ. ಅದಕ್ಕೆ ಆ ಸನ್ಯಾಸಿನಿ, ನಾನಂತೂ ಎಲ್ಲ ಕಡೆಯೂ ಇದನ್ನು ಹೇಳ್ತಾನೇ ಬಂದಿದೀನಿ. ಒತ್ತಾಯಿಸ್ತೀನಿ ಎಂದು ಸೇರಿಸಿದಳು.

ಅಷ್ಟೊತ್ತಿಗಾಗಲೇ ನನ್ನ ತಲೆ ಗಿರ್ ಅನ್ನತೊಡಗಿತ್ತು. ಇವರು ಬಡಪಟ್ಟಿಗೆ ಬಿಡುವಂತೆ ಕಾಣಿಸಲಿಲ್ಲ ನನ್ನ. ಅತ್ತ ಆಫೀಸು, ಮನೆ ಎಂದೆಲ್ಲ ಎರಡೂ ಕಡೆ ನಿಭಾಯಿಸಿ ಹೈರಾಣಾಗುತ್ತಿರುವ ನಮ್ಮ ಹೆಣ್ಣುಮಕ್ಕಳು ಆರತಿಗೊಂದು, ಕೀರುತಿಗೊಂದೆಲ್ಲ ಹೋಗಿ ಆರತಿ, ಕೀರುತಿ ಎರಡಕ್ಕೂ ಒಂದೇ ಸಾಕು ಎಂಬ ತೀರ್ಮಾನಕ್ಕೆ ಬಂದು ಯಾವುದೋ ಕಾಲವಾಗಿ, ಈಗ ಒಂದು ಮಗುವೂ ಬೇಡ, ಹೆರುವ ತಾಪತ್ರಯವೂ ಬೇಡ ಎಂದು ಅಡಾಪ್ಷನ್, ಸರೋಗೇಟೆಡ್ ಮದರ್, ಹೀಗೆ ಎಷ್ಟೆಲ್ಲ ಯೋಚಿಸುತ್ತಿರುವ ಸಮಯದಲ್ಲಿ ನಮ್ಮ ಹೆಣ್ಣುಮಕ್ಕಳಿರುವಾಗ ಹೆಚ್ಚು ಹೆಚ್ಚು ಮಕ್ಕಳನ್ನು ಮಾಡಿ…ಮಕ್ಕಳನ್ನು ಮಾಡಿ…ಎಂದು ಒತ್ತಾಯಿಸುವ ಇವರ ತಲೆಗೆ ಇವನ್ನೆಲ್ಲ ಹೇಗೆ ತುಂಬುವುದು ಎಂಬುದೇ ಅರ್ಥವಾಗಲಿಲ್ಲ.

ಅವರಿಗೆ ಹೇಳಿದೆ, ಹೀಗೆ ಮಾಡೋಣ, ಇನ್ನುಮುಂದೆ ವೇದಿಕೆಯಲ್ಲಿ ಜಾಗತಿಕವಾಗಿ ಯಾವುದೇ ಸಮುದಾಯ, ಯಾವುದೇ ಜನಾಂಗವೂ ಕಡಿಮೆ ಮಕ್ಕಳನ್ನೇ ಮಾಡಿಕೊಳ್ಳಿ. ಎಲ್ಲರೂ ಇದನ್ನೇ ಪಾಲಿಸಲಿ ಎಂದು ಬೇಕಾದ್ರೆ ಹೇಳೋಣ. ಮಕ್ಕಳು ಜಾಸ್ತಿ ಇದ್ದಷ್ಟೂ ಜನಸಂಖ್ಯೆ ಹೆಚ್ಚಿದ್ದಷ್ಟೂ ಅಲ್ಲಿ ಬಡತನ, ಅನಕ್ಷತೆ ಹೆಚ್ಚಿರುತ್ತದೆ. ಆಗಲೇ ಇಲ್ಲದ ಸಮಸ್ಯೆಗಳು ತಲೆದೋರುತ್ತವೆ. ಹಾಗಾಗಿ ಎಲ್ಲರಿಗೂ ಸಮವಾಗಿ ಹೇಳಿಬಿಡೋಣ ಎಂದೆ.

ಅಯ್ಯೋ ಅದೆಲ್ಲ ಅವರ ತಲೆಗೆಲ್ಲಿ ಹೋಗುತ್ತದೆ ಮೇಡಂ. ಅವರಿಗ್ಹೇಗೆ ಬೇಕೋ ಹಾಗಿರ್ತಾರೆ ಅಂದಮೇಲೆ ನಾವ್ಯಾಕೆ ಇಷ್ಟೆಲ್ಲ ಯೋಚಿಸಬೇಕು. ನಾವು ಕೂಡ ಮಕ್ಕಳನ್ನು ಹೆಚ್ಚಿಗೆ ಮಾಡಿದ್ರಾಯ್ತು ಎಂದ.

ಅದಕ್ಕೆ ಆ ಸನ್ಯಾಸಿನಿಯೂ ನೀವು ಮೀಡಿಯಾದವರು ಇಂಥವಕ್ಕೆಲ್ಲ ಹೆಚ್ಚು ಪ್ರಚಾರ ನೀಡಬೇಕು. ನಮ್ಮ ಧರ್ಮವನ್ನು ಎತ್ತಿ ಹಿಡಿಯಬೇಕು ಎಂದಳು.

ಇವರ ತಲೆಗೆ ಮಕ್ಕಳು ಹೆಚ್ಚಿಗೆ ಮಾಡೋದು ಬಿಟ್ಟು ಬೇರೇನೋ ಹೋಗ್ತಿಲ್ಲ. ನಮ್ಮ ಧರ್ಮ ಉಳಿಯಬೇಕಾದರೆ ಜಾಸ್ತಿ ಮಕ್ಕಳನ್ನು ಹೆರುವುದೊಂದೇ ಪರಿಹಾರ ಎಂದೇ ಯೋಚಿಸುತ್ತಿರುವ ಇವರ ತಲೆಗಿನ್ನೇನು ಹೋದೀತು… ಎಂದೆನಿಸಿ, ಸುಮ್ಮನೆ ಅವರು ಹೇಳಿದ್ದಕ್ಕೆಲ್ಲ ಹಲ್ಲು ಕಿರಿದು, ತಲೆ ಅಲ್ಲಾಡಿಸಿ ಅಲ್ಲಿಂದ ಕಾಲ್ಕಿತ್ತೆ..

ಅವಳ ಪ್ರಶ್ನೆಗೆ ಉತ್ತರಿಸುವವರಾರು…?

ಇತ್ತೀಚೆಗೆ ನಾನೊಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅದೊಂದು ಬೃಹತ್ ಕಾರ್ಯಕ್ರಮ. ಸಾವಿರಾರು ಜನ ಸೇರಿದ್ದರು. ವೇದಿಕೆಯ ಸಾಕಷ್ಟು ಗಣ್ಯರು ಕುಳಿತಿದ್ದರು. ಅವರ ಮಧ್ಯೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಒಬ್ಬರು ಸ್ವಾಮೀಜಿ ವಹಿಸಿದ್ದರು. ಅವರು ಆಗಲೇ ಬಂದು ತಮ್ಮ ಪೀಠದಲ್ಲಿ ಆಸೀನರಾಗಿದ್ದರು. ಅಕ್ಕಪಕ್ಕ ಅವರ ನಾಲ್ಕೈದು ಶಿಷ್ಯಂದಿರು ನಿಂತಿದ್ದರು. ಈ ಪೈಕಿ ಇಬ್ಬರು ಅವರ ಪಕ್ಕ ನಿಂತು ಅವರಿಗೆ ಗಾಳಿ ಬೀಸುತ್ತಿದ್ದರು. ಇನ್ನೂ ಕೆಲವು ರಾಜಕಾರಣಿಗಳು, ಗಣ್ಯಾತಿಗಣ್ಯರೆಲ್ಲ ಬರಬೇಕಿತ್ತು. ಹಾಗಾಗಿ ಕಾರ್ಯಕ್ರಮ ಇನ್ನೂ ಪ್ರಾರಂಭವಾಗಿರಲಿಲ್ಲ.

ನಮ್ಮ ಎದುರಿಗೆ ಒಂದಷ್ಟು ಮಹಿಳೆಯರು ಕುಳಿತಿದ್ದರು. ಅವರೆಲ್ಲ ಕಾರ್ಯಕ್ರಮದ ಕುಂಭ ಸ್ವಾಗತಕ್ಕೆ ಬಂದಿದ್ದರೆನಿಸುತ್ತದೆ. ಎಲ್ಲರೂ ರೇಶಿಮೆ ಸೀರೆ ಉಟ್ಟು ಚೆಂದವಾಗಿ ಅಲಂಕರಿಸಿಕೊಂಡು, ಕೈಯ್ಯಲ್ಲಿ ಕುಂಭಗಳನ್ನು ಹಿಡಿದು ಕುಳಿತಿದ್ದರು. ಅವರೆಲ್ಲ ಆಗಲೇ ಕುಂಭ ಸ್ವಾಗತವನ್ನು ಮುಗಿಸಿ ಬಂದಿದ್ದರೆನಿಸುತ್ತದೆ. ಸ್ವಲ್ಪ ಬೆವರಿದ್ದು, ಸುಸ್ತಾಗಿರುವಂತೆಯೂ ಕಾಣುತ್ತಿದ್ದರು. ಹೀಗಿದ್ದೂ ಒಬ್ಬರಿಗೊಬ್ಬರು ಮಾತುಗಳಿಗೇನೂ ಕಡಿಮೆ ಇರಲಿಲ್ಲ.

ನಾನು ಮತ್ತು ನನ್ನ ಸಂಬಂಧಿಕರೊಬ್ಬರ ಹುಡುಗಿಯೊಂದಿಗೆ ಆ ಕಾರ್ಯಕ್ರಮಕ್ಕೆ ಹೋಗಿದ್ದೆವು. ನಮ್ಮೆದುರಿಗೆ ಕುಳಿತಿದ್ದ ಆ ಕುಂಭ ಸ್ವಾಗತದ ಗುಂಪಿನ ಒಬ್ಬ ಮಹಿಳೆ ನನ್ನ ಸಂಬಂಧಿಕರ ಹುಡುಗಿಗೆ ಪರಿಚಯವಿತ್ತು. ಹಾಗಾಗಿ ಇಬ್ಬರೂ ಹಾಯ್ ಹಾಯ್ ಎಂದು ಮಾತನಾಡಿಕೊಂಡರು.

ಅವಳಿಗೊಬ್ಬ ಚೆಂದದ ಪುಟ್ಟ ಮಗಳು. ಅವಳನ್ನೂ ಚೆನ್ನಾಗಿ ಅಲಂಕಾರ ಮಾಡಿದ್ದರು. ಅವಳಿಗೆ ಎಂಟೋ ಹತ್ತೋ ವರ್ಷವಿರಬೇಕು. ರೇಶಿಮೆ ಲಂಗ ತೊಡಿಸಿ, ಚೌಲಿ ಹಾಕಿ ಉದ್ದನೆಯ ಜಡೆ ಹೆಣೆದು, ಮೊಗ್ಗಿನ ಜಡೆ ಹಾಕಿದ್ದಲ್ಲದೆ, ಕತ್ತಿಗೆರಡು ಮಣಿ ಸರ, ಕಿವಿಗೆ ಝುಮಕಿ ಎಲ್ಲ ಹಾಕಿ ಕುಂಭ ಸ್ವಾಗತಕ್ಕೆ ಹೇಗೆ ಬೇಕೋ ಹಾಗೆ ಅಲಂಕರಿಸಿದ್ದರು. ಹುಡುಗಿ ಮುದ್ದಾಗಿಯೂ ಇದ್ದಳು. ತುಂಬ ಚೂಟಿಯೂ ಇದ್ದಳು. ಪಟಪಟನೆ ಮಾತನಾಡುತ್ತಿದ್ದಳು.

ಇದ್ದಕ್ಕಿದ್ದಂತೆ ಆ ಹುಡುಗಿ ಅಮ್ಮನನ್ನು ಕರೆದಳು. ನಮ್ಮೊಡನೆ ಮಾತನಾಡುತ್ತಿದ್ದ ಅಮ್ಮ ಥಟ್ಟನೆ ತಿರುಗಿ `ಏನೇ… ‘ಎಂದಳು.
`ಅಮ್ಮಾ…. ಆ ಗುರುಗಳ ಪಕ್ಕ ನಿಂತಿದ್ದಾರಲ್ಲ ಆ ಶಿಷ್ಯ… ಅದೇ ಗುರುಗಳಿಗೆ ಗಾಳಿ ಬೀಸುತ್ತಿದ್ದಾರಲ್ಲ…ಅವರನ್ನು ನೋಡು…’
`ನೋಡಿದೆ… ಏನೀಗ… ‘ ಈ ತಾಯಿಗೆ ನಮ್ಮೊಡನೆ ಏನೇನೋ ಹರಟುತ್ತಿದ್ದವಳನ್ನು ಮದ್ಯದಲ್ಲಿ ತಡೆದದ್ದಕ್ಕಾಗಿ ಮಗಳ ಮೇಲೆ ಕೋಪ. ಕೊಂಚ ಅಸಹನೆಯಿಂದಲೇ ಕೇಳಿದಳು.

ಆದರೆ ಪುಟ್ಟ ಮಗಳು, ಅವಳಿಗೆ ಅವಳ ಕುತೂಹಲವೇ ದೊಡ್ಡದು. `ಅಮ್ಮಾ… ಆ ಶಿಷ್ಯನ ಮುಖ ಆ ಗುರುಗಳ ಥರವೇ ಇದೆ. ಬಹುಶಃ ಆ ಶಿಷ್ಯ ಆ ಗುರುಗಳ ಮಗ ಇರ್ಬೇಕು ಅಲ್ವಾ. ಅದಕ್ಕೇ ಗುರುಗಳ ಪಕ್ಕವೇ ನಿಂತಿರಬೇಕು ಅಲ್ವಾ…’ ಎಂದು ಕೇಳಿದಳು.
ಈಗ ಅಮ್ಮನಿಗೆ ಗಾಬರಿಯಾಯಿತು. ಈ ಮಗಳು ಏನೇನೋ ಮಾತನಾಡಿಬಿಡ್ತಾಳೆ ಎಂದೆನಿಸಿ, ಅಕ್ಕಪಕ್ಕ ನೋಡಿ, ಸರಿಯಾಗಿ ಕುಳಿತು ಮಗಳನ್ನು ಬಾಚಿ ಹಿಡಿದು…

`ಶೀ… ತಂಗೀ… ಸುಮ್ನಿರೇ… ಹಾಗೆಲ್ಲ ಗುರುಗಳಿಗೆ ಮದುವೆ ಆಗೋದಿಲ್ಲ. ಅವರಿಗೆ ಮಕ್ಕಳೆಲ್ಲ ಹುಟ್ಟೋದಿಲ್ಲ’ ಎಂದು ತಾಯಿ ಗದರಿದಳು.

ಅದಕ್ಕೆ ಕೂಸು ಸುಮ್ಮನಿರಲಾರದೆ… `ಯಾಕೆ ಮದುವೆಯಾಗೋದಿಲ್ಲ. ಮದುವೆ ಆಗಿರಬಹುದು, ನಿಂಗೊತ್ತಿಲ್ದೇ ಹೋಗಿರಬಹುದು. ಎಲ್ಲ ನಿಂಗೆ ಹೇಳಿಯೇ ಮಾಡ್ಕೋತಾರಾ… ಮದುವೆನಾ…?’ ಎಂದು ಪ್ರಶ್ನಿಸಿದಳು.

`ಅಯ್ಯೋ… ತಂಗೀ… ನಿಂಗಿದೆಲ್ಲ ಅರ್ಥ ಆಗೋದಿಲ್ಲ, ಸುಮ್ನಿರು… ಮದುವೆ ಆದ್ರೆ ಅವರು ಗುರುಗಳಲ್ಲ. ಗುರುಗಳೆಲ್ಲ ಮದುವೆ ಆಗೋದಿಲ್ಲ… ‘ಎಂದು ಮತ್ತೆ ಹೇಳಿದಳು.

`ಅಮ್ಮಾ… ಅವರಿಗೆ ಮದುವೆ ಆಗಿರಬಹುದಮ್ಮಾ…ನಿಂಗೊತ್ತಿಲ್ದೇ ಹೋಗಿರಬಹುದು. ಬೇಕಿದ್ರೆ ಬೇರೆ ಯಾರನ್ನಾದರೂ ಕೇಳು. ಆ ಶಿಷ್ಯನ ಮುಖ ನೋಡು, ಪಕ್ಕಾ ಗುರುಗಳ ಹಾಗೇ ಇದೆ. ಹೌದ ಅಲ್ವ ಎಂದು ಆ ಅತ್ತೆನ ಕೇಳಿ ನೋಡು..’ ಎಂದು ಎದ್ದ ಹುಡುಗಿಯನ್ನು ಗಾಬರಿಯಿಂದ ಫಟ್ಟನೆ ಹಿಡಿದೆಳೆದು ಕೂರಿಸಿದಳು ತಾಯಿ.

ಹಿಂದೆ ಕುಳಿತಿದ್ದ ನಮಗೆ ನಗು ತಡೆಯಲಾಗುತ್ತಿಲ್ಲ. ಆದರೆ ತಾಯಿಗೆ ಇನ್ನಿಲ್ಲದ ಗಾಬರಿ.

`ಅಯ್ಯೋ… ತಂಗಿ… ದಯವಿಟ್ಟು ಯಾರಿಗೂ ಏನೂ ಕೇಳಲು ಹೋಗಬೇಡ. ಸುಮ್ನಿರು… ಇದೆಲ್ಲ ದೊಡ್ಡ ವಿಷ್ಯ ‘ ಎಂದು ಅಳುವ ಧ್ವನಿಯಲ್ಲಿ ಹೇಳಿದಳು.

`ಅದೆಂಥ ದೊಡ್ಡ ವಿಷಯ ಅಮ್ಮಾ. ಎಲ್ರೂ ಮದುವೆ ಆಗ್ತಾರಲ್ವಾ? ಮದುವೆ ಆದಮೇಲೆ ಮಕ್ಕಳಾಗ್ತಾರಲ್ವಾ…’ ಮತ್ತೆ ಮುಗ್ಧವಾಗಿ ಹುಡುಗಿ ಪ್ರಶ್ನಿಸಿದಳು.

ನಮಗೆ ಆ ಹುಡುಗಿ ಮಾತಿನ ಮೇಲೆ ಭಾಳ ಇಂಟರೆಸ್ಟ್ ಆಗ್ಹೋಯ್ತು. ಇರು, ನಿನ್ನ ಮಗಳು ಏನು ಮಾತಾಡ್ತಾಳೆ ಕೇಳು ಸ್ವಲ್ಪ ಎಂದು ನಾವು ತಾಯಿಗೇ ಹೇಳಿದ್ರೆ, ತಾಯಿ `ಅಯ್ಯೋ ಸುಮ್ನಿರು. ಗುರುಗಳ ವಿಷ್ಯದಲ್ಲೆಲ್ಲ ಹಾಗೆಲ್ಲ ಮಾತ್ನಾಡೋದಾ…’ ಎಂದು ಶಾಂತಂ ಪಾಪಂ ಎಂಬಂತೆ ಎರಡೂ ಕೆನ್ನೆ ತಟ್ಟಿಕೊಂಡು…ಮಗಳಿಗೆ ಹೇಳಿದಳು.

`ಪುಟ್ಟೀ…ಎಲ್ರೂ ಮದುವೆ ಆಗ್ತಾರೆ… ಆದ್ರೆ ಗುರುಗಳು ಮದುವೆ ಆಗೋದಿಲ್ಲ… ನೀ ಸುಮ್ಮಂಗಿರು…’ ಈಗ ಹೆಚ್ಚುಕಮ್ಮಿ ಅಮ್ಮನಿಗೆ ಅಳುವೇ ಬಂದಂತಾಗಿಬಿಟ್ಟಿತು. ಈ ಮಗಳಿಗೆ ತಿಳಿ ಹೇಳುವುದು ಹೇಗೆ ಎಂಬುದೇ ಅವಳಿಗೆ ಅರ್ಥವಾಗುತ್ತಿಲ್ಲ. ಆದರೆ ಮಗಳ ಕುತೂಹಲ ಸ್ವಲ್ಪವೂ ತಣ್ಣಗಾಗುತ್ತಿಲ್ಲ.

ನಮ್ಮತ್ತ ತಿರುಗಿ ಆ ಹುಡುಗಿ `ಅತ್ತೆ ನೀನೇ ಹೇಳು ಆ ಶಿಷ್ಯ… ಆ ಶಿಷ್ಯ…’ಎಂದು ಮುದ್ದು ಭಾಷೆಯಲ್ಲಿ ಹೇಳಲು ಬಂದವಳನ್ನು ತಾಯಿ ಕೈಯಿಂದ ಅವಳ ಬಾಯಿ ಬಿಗಿಯಾಗಿ ಮುಚ್ಚಿ … `ನಡೀ ನೀನು… ಹೊರಗೆ ಹೋಗೋಣ’ ಎಂದು ಕೈ ಹಿಡಿದು ಹೆಚ್ಚುಕಡಿಮೆ ದರದರನೆ ಎಳೆದುಕೊಂಡೇ ಹೋದಳು.

ಏನಂತೇ ನಿನ್ನ ಮಗಳ ಕಿತಾಪತಿ ಎಂದು ಹಿರಿಯ ಮುತೈದೆಯೊಬ್ಬರು ಹೇಳಿದ್ದು ಕೇಳಿಸಿ ಇನ್ನೂ ಗಾಬರಿಯಾಗಿ ಆ ತಾಯಿ ಮಗಳನ್ನು ಕರೆದುಕೊಂಡು ಹೊರನಡೆದರು. ಮತ್ತೆ ಕಾರ್ಯಕ್ರಮ ಮುಗಿಯವವರೆಗೂ ಆ ತಾಯಿ ಮಗಳು ಬರಲೇ ಇಲ್ಲ.
ನನಗೆ ನಗು ಬಂದರೂ ಆ ಪುಟ್ಟ ಹುಡುಗಿಯ ಪ್ರಶ್ನೆಗಳು ನಿಜಕ್ಕೂ ದೊಡ್ಡದೆನಿಸಿತ್ತು. ಅವಳ ಮುಗ್ಧ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುವವರಾರು?

***

 

Add Comment

Leave a Reply