Quantcast

B ಅಂದರೆ ಬಾಗಲೂರು, B ಅಂದರೆ ಭಾರತಿ..

ನೂರು ವರ್ಷಗಳ ಹಿಂದಿನ ಹೆಜ್ಜೆ ಗುರುತಿಗಾಗಿ ತಡಕಾಡಿ…
 ಬಿ ವಿ ಭಾರತಿ 
ನಾನು ಯಾವಾಗಲೂ ಹಳತು ಬೇರನ್ನು ಹುಡುಕಿ ಯಾಕೆ ಹೋಗುತ್ತೇನೆ ಅನ್ನುವುದು ನನಗೇ ಗೊತ್ತಿಲ್ಲ … ಒಟ್ಟಿನಲ್ಲಿ ಸದಾ ಹುಡುಕಾಟದಲ್ಲಿರುತ್ತದೆ ಹಾಳು ಮನಸ್ಸು. ಯಾವುದೋ ಬಾದರಾಯಣ ಸಂಬಂಧ, ಯಾಕೆ ಬೇಕು ಅಂದುಕೊಂಡರೂ ಸುಮ್ಮನಿರಲಾಗುವುದಿಲ್ಲ. ನನ್ನ ಹೆಸರಿನ ಭಾಗವಾಗಿರುವ B – ಅಂದರೆ ಬಾಗಲೂರನ್ನು ನಾನು ಕಂಡವಳೇ ಅಲ್ಲ. ನಾನಿರಲಿ, ನನ್ನ ಅಪ್ಪನೇ ಕಂಡವರಲ್ಲ ..
ನನ್ನ ಅಪ್ಪನಿರಲಿ, ತಾತ ಕಂಡಿದ್ದೇ ಹತ್ತು ವರ್ಷದವರಿರುವಾಗ! ಅದಾದ ನಂತರ ಅವರು ಆ ಊರನ್ನು ತೊರೆದು ಮೈಸೂರಿಗೆ ಬಂದರು. ಇಲ್ಲೇ ಓದಿದರು, ಕೆಲಸಕ್ಕೆ ಸೇರಿದರು, ಮದುವೆ-ಮಕ್ಕಳಾದವು, ಇಲ್ಲೇ ಸೆಟಲ್ ಆದರು. ಆ ಊರಿನ ಸಂಪರ್ಕವಿರಲಿಲ್ಲ, ತಾತನ ಕಡೆಯ ನೆಂಟರ ಸಂಪರ್ಕವೂ ಇರಲಿಲ್ಲ. ಮೈಸೂರಿನಲ್ಲೇ ಇದ್ದ ದೊಡ್ಡ ತಾತನ ಮನೆಯವರೊಡನೆಯೂ ಹೆಚ್ಚಿನ ಒಡನಾಟವಿಲ್ಲ. ಯಾಕೆ ಹೀಗೆ ಅನ್ನುವ ಪ್ರಶ್ನೆ ಕೋಟ್ಯಂತರ ಬಾರಿ ಕಾಡಿದೆ ಮತ್ತು ಕಾಡುತ್ತಲೇ ಇರುತ್ತದೆ. ಯಾಕೆ ಡೈನೋಸಾರ್ extinct ಆಗಿ ಹೋದ ಹಾಗೆ ಸಂಬಂಧ ಮುಗಿದುಹೋಗುತ್ತದೆ ಅನ್ನುವುದು ನನಗೆ ಅರ್ಥವೇ ಆಗಿಲ್ಲ.
ಹೀಗೆ ಸಂಬಂಧಗಳು ಕಡಿದುಹೋದ ಊರು ಭಾವನಾತ್ಮಕವಾಗಿ ದೂರವೇ ಉಳಿಯಿತು. ಯಾರಾದರೂ ‘ನಿನ್ನೂರು ಯಾವುದು’ ಎಂದರೆ ಥಟ್ ಅಂತ ಕೊಳ್ಳೆಗಾಲ ಅನ್ನುತ್ತೇನೆ ಹೊರತು ಬಾಗಲೂರು ಅನ್ನಲು ಬಾಯಿಯೇ ಬಾರದು. ಹೆತ್ತು ತೊರೆದ ಕುಂತಿಗಿಂತ ಬೆಳೆಸಿದ, ಎದೆಗಪ್ಪಿದ ಸಾಕುತಾಯಿ ರಾಧಾ ಕರ್ಣನಿಗೆ ಹತ್ತಿರವಾದ ಹಾಗೆ…! ಆದರೂ ನನ್ನ ಹೆಸರಿನ ಭಾಗವಾದ ಆ ಊರನ್ನೊಮ್ಮೆ ಕಂಡು ಬರಬೇಕು, ಯಾರಾದರೂ ಈ ವಿಷಯಗಳ ಮೇಲೆ ಬೆಳಕು ಚೆಲ್ಲಬಹುದೇನೋ ಅನ್ನುವ ಮಿಣುಕು ಆಸೆಯಿತ್ತು.
ಇಂದು ಅದಕ್ಕೆ ಕಾಲ ಕೂಡಿ ಬಂದು ಅಪ್ಪ-ಅಮ್ಮನೊಡನೆ ಹೊರಟೆ. ಬಾಗಲೂರೆಂದರೆ ಚಿಕ್ಕದೊಂದು ಹಳ್ಳಿಯಿರಬಹುದು ಎನ್ನುವುದು ನನ್ನ ಕಲ್ಪನೆಯಾಗಿತ್ತು. ಆದರೆ ತುಮಕೂರಿನಷ್ಟು ಬೆಳೆದ ಊರನ್ನು ಕಂಡು ತಬ್ಬಿಬ್ಬಾದೆ. ಈ ಫಳಫಳ ಹೊಳೆವ ಹೊಚ್ಚಹೊಸ ಊರಿನಲ್ಲಿ ತಾತನ ಹೆಜ್ಜೆ ಗುರುತೆಲ್ಲಿ ಹುಡುಕಲಿ ಅಂತ ತಬ್ಬಿಬ್ಬಾದೆ. ಮಂಕಾಗಿ 5-10 ನಿಮಿಷ ನಿಂತಿರುವಾಗಲೇ ಎದಿರಿಗಿದ್ದ ಪಂಚಾಯತ್ ಆಫೀಸ್ ಕಂಡಿತು. ಅಲ್ಲೇನಾದರೂ ದಾಖಲೆ ಸಿಗಬಹುದಾ ಅಂತ ಅತ್ತ ಹೆಜ್ಜೆ ಹಾಕಿದರೆ ಬಾಗಿಲಿಗೆ ಜಡಿದಿದ್ದ ಬೀಗ ಕಂಡಿತು. ನಮ್ಮಂತೆ ಕಾಯುತ್ತಾ ನಿಂತವರೊಡನೆ ಮಾತಿಗಿಳಿದೆವು. ಅವರಿಗೂ ಏನೂ ತಿಳಿದಿರಲಿಲ್ಲ. ಮತ್ಯಾವುದೋ ಜೆರಾಕ್ಸ್ ಅಂಗಡಿಗೆ redirect ಮಾಡಿದರು. ಅಲ್ಲಿದ್ದವರೂ ತಾರಮ್ಮಯ್ಯ ಆಡಿಸಿದರು.
“ಹೋಗಲಿ ಪುರಾತನ ದೇಗುಲ ಅಥವಾ ಶಾಲೆ ಯಾವುದು ಹೇಳು ಪುಣ್ಯಾತ್ಮ” ಅಂತ ಸುಸ್ತಿನಲ್ಲೇ ಗೋಗರೆದೆವು. ಆತ ಮುಂದಿದ್ದ ಹಾದಿಯೊಂದನ್ನು ತೋರಿಸಿ ಅಲ್ಲಿ ವಿಚಾರಿಸಲು ಹೇಳಿ ಸಾಗಹಾಕಿದ…
ಆ ರಸ್ತೆಯಲ್ಲಿ ಹೋಗಿ ನೋಡಿದರೆ ಪುರಾತನ ಹಾಳಾಗಲಿ, ಮಧ್ಯಕಾಲದ ಸುಳಿವೂ ಇರದ ಹೊಚ್ಚಹೊಸ ದೇಗುಲವೊಂದು ನಿಂತಿತ್ತು. ನನಗದನ್ನು ನೋಡಿ ಅತೀವ ನಿರಾಸೆಯಾಯಿತು … ‘ನೀನು ಅದೇನು ಹುಡುಕಿ ಬರುತ್ತೀಯಾ ಭಾರತಿ? ನೂರು ವರ್ಷ! ನೂರು ವರ್ಷಗಳ ಹಿಂದಿನ ಹೆಜ್ಜೆ ಎಲ್ಲಿ ದೊರಕಬೇಕು’ ಅಂತ ಬಯ್ದುಕೊಂಡೆ.
ಅಷ್ಟರಲ್ಲಿ ನಮ್ಮ ತಡಕಾಟ ಕಂಡ ಯಾವುದೋ ಒಬ್ಬರು ವಿಚಾರಿಸುತ್ತ ಬಂದರು. ಹೀಗೀಗೆ, ಹೀಗೀಗೆ ಅನ್ನುವುದರಲ್ಲಿ ಮತ್ತೂ ನಾಲ್ಕು ಜನ ಸೇರಿದರು. ಅವರಲ್ಲೊಬ್ಬರು ಪಂಚಾಯತ್ ಅಧ್ಯಕ್ಷರು. ಅವರಿಗೂ ತಾತನ ಬಗ್ಗೆ ಏನೂ ಗೊತ್ತಿಲ್ಲವಾದರೂ, ಪುರಾತನ ದೇಗುಲವೊಂದಿದೆ, ಅಲ್ಲಿ ಏನಾದರೂ ಮಾಹಿತಿ ಸಿಗಬಹುದಾ ಅನ್ನುತ್ತ ಅಲ್ಲಿಗೆ ಕರೆದೊಯ್ದರು. ದೇಗುಲಕ್ಕೆ ಅಂಟಿದಂತಿದ್ದ ಮನೆಯಾತನನ್ನು ಕರೆದರು. ನಿರೀಕ್ಷಿಸಿದ ಹಾಗೆ ಅವರಿಗೂ ಏನೂ ಗೊತ್ತಿರಲಿಲ್ಲ. ಕೊನೆಗೆ ಮತ್ತೇನೂ ತೋಚದೆ, ನಿರಾಶರಾದ ನಮ್ಮನ್ನು ಸಮಾಧಾನಿಸುವಂತೆ 600 ವರ್ಷಗಳ ಹಿಂದಿನ ಚೂಡೇಶ್ವರ ದೇಗುಲದ ಮುಚ್ಚಿದ ಬಾಗಿಲನ್ನು ತೆರೆಸಿದರು.
ದೇಗುಲ renovate ಆಗಿತ್ತು. ವಿಗ್ರಹಗಳನ್ನು, ದ್ವಾರಪಾಲಕರನ್ನು ಮತ್ತು ಬಾಗಿಲ ಸಂದಿಯ ಕಲ್ಲುಗಳನ್ನು ಬಿಟ್ಟರೆ ಉಳಿದೆಲ್ಲವೂ ಸಿಲ್ವರ್ ಪೇಂಟ್ ನಿಂದ ಕಂಗೊಳಿಸುತ್ತಿತ್ತು! ಅಯ್ಯೋ ಅದನ್ನಂತೂ ನನ್ನಿಂದ ನೋಡಲಾಗಲೇ ಇಲ್ಲ. ಅಸಮಾಧಾನ ಹೊಟ್ಟೆಯಲ್ಲಿ ತಿರುಚುವಾಗಲೇ ನನ್ನ ತಾತ ಸಣ್ಣವರಿರುವಾಗ ಇಲ್ಲಿ ಆಡಿದ್ದಿರಬಹುದಾ ಅನ್ನುವ ಕಲ್ಪನೆ ಮನಸಿನಲ್ಲಿ ಬಂತು!
ಹಾಗೆ ಬಂದದ್ದೇ ತಡ, ಆ ಜಾಗದ ಬಗ್ಗೆ ಸಣ್ಣ ತಂತುವೊಂದು ಹೃದಯದಲ್ಲಿ ಹುಟ್ಟಿತು. ಅಲ್ಲಿನ ಪೂಜಾರಿ ಪಾಪ ಬಾಗಿಲು ತೆರೆಸಿದ ನಮ್ಮನ್ನು ಕಂಡು ಅತೀವ ದೈವಭಕ್ತರಿರಬೇಕು ಎಂದೆಣಿಸಿ ಪೂಜೆ ಮಾಡೇ ಮಾಡಿದರು. ಸ್ವಲ್ಪ ಹೊತ್ತು ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಎದುರಿಗಿದ್ದ ತಟ್ಟೆ ಹಿಡಿದು ನಿಂತವಳು ಆ ನಂತರ ಆ portfolio ಅಮ್ಮನಿಗೆ power of attorney ನೀಡಿ ಬಹಳ ವರ್ಷಗಳಾದ ನೆನಪು ಮೂಡಿ, ಫೋಟೋ ತೆಗೆದುಕೊಳ್ಳುವುದರಲ್ಲಿ ತೊಡಗಿಸಿಕೊಂಡೆ. ತಾತನ ಬಗ್ಗೆ ಯಾವ ವಿಷಯವೂ ಅಲ್ಲಿ ದೊರಕಲಿಲ್ಲ.‌ ದೊರಕುವುದು ಅಸಾಧ್ಯವಾಗಿತ್ತು ಕೂಡಾ … ನೂರು ವರ್ಷಗಳೆಂದರೆ ಮೂರು ಶತಕೋಟಿ ಮತ್ತಿಷ್ಟು ಚಿಲ್ಲರೆ ಕ್ಷಣಗಳು! ಉಹು, ಇದು ಅಸಾಧ್ಯದ ಟಾಸ್ಕ್ ಆಗಿತ್ತು.
ಪಾಪ ಆ ಪಂಚಾಯತ್ ಅಧ್ಯಕ್ಷರು ಪುರಾತನ ಗಂಡುಮಕ್ಕಳ ಶಾಲೆಯೊಂದಿದೆ ಎಂದು ನಮ್ಮ ಮುಂದಿನ destination ಕಡೆಗೆ ನಮ್ಮನ್ನು ಹೊರಡಿಸಿದರು. ಅಲ್ಲಿಯೂ ಏನೂ ಸಿಗುವುದಿಲ್ಲ ಎನ್ನುವುದು ಈಗಾಗಲೇ ಖಚಿತವಾಗಿತ್ತು. ಆದರೂ ಹೆಜ್ಜೆಗುರುತು ಕಾಣುವ ತವಕ!
ಸ್ಕೂಲಿನ ಆವರಣ ವಿಶಾಲವಾಗಿತ್ತು. ಆವರಣದ ತುಂಬ ನೂರಾರು ಮಕ್ಕಳು ಊಟ ಮಾಡುತ್ತಾ ಕುಳಿತಿದ್ದರು. ಮಧ್ಯಾಹ್ನದ ಬಿಸಿಯೂಟವಿರಬೇಕು, ಎಲ್ಲರ ತಟ್ಟೆಯಲ್ಲೂ ಅದೇ ಇತ್ತು. ಎಲ್ಲರ ಕುತೂಹಲದ ನೋಟ ನಮ್ಮೆಡೆಗೆ. ಕಾಂಪೋಂಡಿನ ಮೂಲೆಯಲ್ಲಿ ಬುಲ್ ಡೋಜ಼ರ್ ಒಂದು ಕಟ್ಟಡವೊಂದನ್ನು ನೆಲಸಮ ಮಾಡಿ ಸುಧಾರಿಸಿಕೊಳ್ಳುತ್ತಾ ನಿಂತಿತ್ತು. ಆ ಕಟ್ಟಡ ಬೆಳಿಗ್ಗೆ ಇದ್ದಿದ್ದು ಈಗ ಇರಲಿಲ್ಲ. ಮಧ್ಯದಲ್ಲಿ ಗಾಂಧಿ ತಾತ,  ರಾಧಾಕೃಷ್ಣನ್ ಅವರೆಲ್ಲರ ಪೇಂಟಿಂಗ್ ಇದ್ದ ಕಟ್ಟಡದ ಬಾಗಿಲು, ಕಿಟಕಿಗಳನ್ನೆಲ್ಲ ಕಳಚಿ ಒಂದೆಡೆ ಇಟ್ಟಿದ್ದರು. ಅದೂ ನೆಲಸಮವಾಗುವ ದಾರಿಯಲ್ಲಿತ್ತು. ಹತ್ತಿರ ಹೋಗಿ ಫಲಕ ನೋಡಿದರೆ 1957 ರ ಕಟ್ಟಡವದು! ಹಾಗಿದ್ದರೆ ಈಗಾಗಲೇ ನೆಲಸಮವಾದದ್ದು ಅದಕ್ಕಿಂತ ಹಿಂದಿನದ್ದೇ? ಯಾರು ಹೇಳಬೇಕು ಉತ್ತರ?
ಫೋಟೋ ತೆಗೆಯುತ್ತ ಓಡಾಡುತ್ತಿದ್ದ ನನ್ನ ಹಿಂದೆ ಊಟ ಮುಗಿಸಿ ಕೂತಿದ್ದ ಮಕ್ಕಳು ಓಡಾಡತೊಡಗಿದರು. ಕುತೂಹಲ, ನಾಚಿಕೆಯಿಂದ ಯಾವೂರಿನವಳು ಅಂತ ವಿಚಾರಿಸಿಕೊಂಡರು. ಹೇಳಿದಾಗ ‘ಬೆಂಗಳೂರಿನವರಂತೆ’ ಅನ್ನುತ್ತ ಪಿಸುಗುಟ್ಟಿಕೊಂಡವು! ಎದುರಿಗಿದ್ದ ಕಟ್ಟಡ ತೋರಿಸುತ್ತಾ ಅದನ್ನೂ ಒಡೆದು ಹೊಸತು ಕಟ್ಟುತ್ತಾರೆ ಅಂದವು ಮಕ್ಕಳು. ಆ ಕಟ್ಟಡದ ಹತ್ತಿರ ಹೋಗುವುದರಲ್ಲೇ ಹಿಂದೆ ಇನ್ನೊಂದು ಭಯಾನಕ ಹಾಳಾದ ಕಟ್ಟಡ ಕಂಡಿತು. ಅತ್ತ ಹೆಜ್ಜೆ ಹಾಕಿದೆ, ಅವರೂ ಹಿಂಬಾಲಿಸಿದರು. ಆ ಕಟ್ಟಡ ಅತ್ಯಂತ ದುಸ್ಥಿತಿಯಲ್ಲಿತ್ತು. ಒಳಗೆ ಇಣುಕಿದರೆ ಮೇಲೆ ಹೊದೆಸಿದ್ದ ಶೀಟ್ ಮುರಿದು ಬಿದ್ದಿತ್ತು. ಗೋಡೆಗಳ ಮೇಲೆಲ್ಲ ಹೃದಯಗಳೋ ಹೃದಯಗಳು! ಅದರ ಸ್ಥಿತಿ ಕಂಡು ಇದು ಬಹಳ ಪುರಾತನವಾದದ್ದು ಇರಬೇಕು ಎಂದುಕೊಳ್ಳುತ್ತಾ, ಯಾವಾಗ ಕಟ್ಟಿದ್ದಿರಬಹುದು ಅನ್ನುವ ಫಲಕದ ಹುಡುಕಾಟದಲ್ಲಿ ಬಿದ್ದೆ. ಅಲ್ಲೆಲ್ಲೂ ಕಾಣಿಸಲಿಲ್ಲ.
ಆ ಹುಡುಗರನ್ನೇ ಕೇಳಿದೆ ‘ಎಲ್ರೋ ಇಸವಿ ಬರೆದಿರೋ ಕಲ್ಲು ಇಲ್ವಾ?’ ಅಂತ. ಅವು ಅರ್ಥವಾಗದೇ ನಿಂತಿದ್ದವು.‌ಅಷ್ಟರಲ್ಲಿ ಒಬ್ಬ ಹುಡುಗ ‘ಇಲ್ಲಿದೆ ಬನ್ನಿ’ ಅಂತ ಕೂಗಿದ. ದನಿ ಬಂದತ್ತ ಹೆಜ್ಜೆ ಹಾಕಿದೆ. ಇಸವಿ ನೋಡಿದರೆ 1993-94 ಎಂದಿತ್ತು. ನಾನು ನಿರಾಶೆಯಿಂದ ‘ಹೋಗೋ ಇದು ಹೊಸದು’ ಅಂದೆ. ಆ ಹುಡುಗ ಆಶ್ಚರ್ಯದಿಂದ ‘ಆಆಆಆಆ! ಇದು ಹೊಸದಾ!!!! ಇದು ಸುನಾಮಿ ಬರಕ್ಕಿಂತ ಮುಂಚಿಂದು!!!’ ಅಂದ.‌ ಅವನ ಲೆಕ್ಕದಲ್ಲಿ ಸುನಾಮಿಯೇ ಪುರಾತನ ಕಾಲದ್ದು! ನಾನು ಅವನ ಮಾತು ಕೇಳಿ ತುಂಬ ಹೊತ್ತು ನಕ್ಕೆ.
ಇನಾಂದಾರರ ಯಯಾತಿ ಹೇಳುವುದು ಸತ್ಯ – ಬಾಲ್ಯದಲ್ಲಿನ ಒಂದೇ ಕಾಲವೆಂದರೆ ಅದು ವರ್ತಮಾನ ಮಾತ್ರ! ನಾನು ನೂರು ವರ್ಷದ ಹಿಂದಿನ ಹೆಜ್ಜೆ ಹುಡುಕಿ ಬಂದಿದ್ದೇನೆಂದರೆ ಅವರಿಗೆ ಹೇಗನ್ನಿಸಬಹುದು, ನಾನೊಬ್ಬಳು ಹುಚ್ಚಿಯಂತೆ ಕಾಣಿಸಬಹುದಾ ಅನ್ನಿಸತೊಡಗಿತು.
ಉಹುಂ, ಇನ್ನು ಎಷ್ಟು ನೋಡಿದರೂ ಅಷ್ಟೇ, ಅಲ್ಲಿಂದ ಹೊರಟು ಬಿಡುವುದು ಒಳಿತು ಅನ್ನಿಸಿತು. ಅಲ್ಲಿದ್ದ ಮಕ್ಕಳನ್ನು ‘ಫೋಟೋ ತೆಗೀತೀನಿ, ನಿಲ್ರೋ’ ಅಂದೆ. ಸವಿಸವಿ ನೆನಪು ಹಾಡಿನ ಸುದೀಪನಂತೆ ಎಲ್ಲವೂ ಪೋಸ್ ಕೊಟ್ಟವು. ನಾವು ಬೈ ಹೇಳಿದಾಗ ಆವರಣದ ತುಂಬ ಅದೆಷ್ಟು ಬೈ ಮರುತ್ತರ ಬಂದವು! ಹಳೆಯ ಕಟ್ಟಡಗಳಿಂದ ತೆಗೆದು ಜೋಡಿಸಿದ್ದ ಬಾಗಿಲು, ಕಿಟಕಿ, ಹೆಂಚುಗಳ ನಡುವಲ್ಲಿ ಹೆಜ್ಜೆ ಹಾಕುತ್ತಾ ಹೊರಟೆವು. ಕಾರಿನ ಒಳಗೆ ಕೂರಲು ಬಾಗಿಲು ತೆರೆದು ಎದುರು ನೋಡಿದರೆ ಅಷ್ಟುದ್ದ ಗೇಟಿನುದ್ದಕ್ಕೂ ಸಾಲಾಗಿ ನಿಂತಿದ್ದವು ಹುಡುಗರು
ಕೆಲವರು ಕೈ ಬೀಸಿದರು.
ನೂರು ವರ್ಷದ ಹಿಂದೆ ಹಾಗೆ ಯಾರಿಗೋ ಬೀಸಿದ ಕೈಗಳಲ್ಲಿ ನನ್ನಜ್ಜನದ್ದೂ ಇತ್ತೇನೋ
ನಾನು ಮತ್ತೆ ಹಿಂತಿರುಗಿ ನೋಡಲಿಲ್ಲ
ಬಹುಶಃ ಇನ್ನೆಂದೂ ನೋಡುವುದೂ ಇಲ್ಲ …

8 Comments

 1. s.p.vijayalakshmi
  March 2, 2017
  • ಭಾರತಿ
   March 2, 2017
 2. Anonymous
  March 1, 2017
  • ಭಾರತಿ
   March 1, 2017
 3. ಭಾರತಿ
  March 1, 2017
 4. Sarala
  March 1, 2017
  • ಭಾರತಿ ಬಿ ವಿ
   March 1, 2017
  • N.Viswanatha
   March 1, 2017

Add Comment

Leave a Reply