Quantcast

ಸುನಂದಾ ಕಡಮೆ ಎಂಬ ಪುಟ್ಟ ಪಾದದ ಗುರುತು

ಸುನಂದಾ ಪ್ರಕಾಶ ಕಡಮೆ
ಸಂದರ್ಶನ 

ಹೇಮಾ ಸದಾನಂದ ಅಮೀನ್

ಆಧುನಿಕ ಭಾರತದಲ್ಲಿ ಮಹಿಳಾಪರ ದನಿಗಳು ಸಾಕಷ್ಟು ಮೊಳಗುತ್ತಿರುವುದರಿಂದ ಮಹಿಳೆ ಈಗ ಹೆಚ್ಚೆಚ್ಚು ಹೊಸ ಜಗತ್ತಿಗೂ ಮತ್ತು ತನಗೆ ಸಾಧ್ಯವಿದ್ದ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾಳೆ. ಉಪ್ಪಿನಿಂದ ಉಕ್ಕಿನವರೆಗೆ ತನ್ನ ಸಹಜ ಸಾಮರ್ಥ್ಯವನ್ನು ತೋರಿಸುತ್ತಾ ಬರುತ್ತಿದ್ದಾಳೆ. ಅದಕ್ಕೆ ಸಾಕಷ್ಟು ನಿದರ್ಶನಗಳನ್ನು ನಾವು ನೀಡಬಹುದು.

ಗಗನಯಾತ್ರೆಯಿಂದ ಹಿಡಿದು ಪರ್ವತ ಯಾತ್ರೆಯವರೆಗೂ ತನ್ನ ಕ್ರಿಯಾಶೀಲತೆಯನ್ನು ಮೆರೆಯುತ್ತಿದ್ದಾಳೆ. ಅದರಲ್ಲೂ ಅರುಣಿಮಾ ಸಿನ್ಹಾ ಅಂತವಳು ಅಪಂಗತ್ವವನ್ನೂ ವಿೂರಿ ಬೆಳೆಯುತ್ತಿದ್ದಾಳೆ. ಇಂತಿದ್ದರೂ, ಪುರುಷ ಸಮಾಜ ಮಹಿಳೆಯರ ದೌರ್ಬಲ್ಯಗಳನ್ನು ಎತ್ತಿ ಹಿಡಿದು ಮಹಿಳೆಯರಿಗೆ ನ್ಯಾಯವಾಗಿ ಸಿಗಲೇಬೇಕಾದ ಸ್ಥಾನಮಾನಗಳನ್ನು ನೀಡುವುದರಲ್ಲಿ ತನ್ನ ಹೃದಯ ವೈಶಾಲ್ಯತೆಯನ್ನು ತೋರಿಸುವುದರಲ್ಲಿ ಹಿಂದೇಟು ಹಾಕುತ್ತಾ ಬರುತ್ತಿದೆ. ಆದರೆ, ಮಹಿಳೆ ಮಾತ್ರ ಸಮಾನ ಸ್ಥಾನಮಾನಗಳನ್ನು ತನ್ನಷ್ಟಕ್ಕೇ ತಾನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾಳೆ.

ಇದಕ್ಕೆ ಸಾಹಿತ್ಯ ಕ್ಷೇತ್ರವೂ ಹೊರತಾಗಿಲ್ಲ. ಹಿಂದೆ ಮಹಿಳಾಪರ ಅಥವಾ ಮಹಿಳಾ ಪ್ರಧಾನವಾದ ಸಾಹಿತ್ಯವು ಪುರುಷ ನಿರ್ಮಿತವಾಗಿದ್ದು ಇದೀಗ ಮಹಿಳೆ ತನ್ನ ಸಮಾಜದ ಅಂತಃಸತ್ವವನ್ನು ತಾನೇ ಅಭಿವ್ಯಕ್ತಗೊಳಿಸಿ ಸಮಾಜಕ್ಕೂ ಸ್ಫೂರ್ತಿ ನೀಡುತ್ತಿದ್ದಾಳೆ.

ಸೃಜನಶೀಲ ಹಾಗೂ ಸೃಜನೇತರದ ಎಲ್ಲಾ ಪ್ರಕಾರಗಳಲ್ಲೂ ಮಹಿಳೆ ತನ್ನದೇ ಆದ ವಿಶಿಷ್ಟ ಛಾಪನ್ನು ಒತ್ತುತ್ತಿದ್ದಾಳೆ. ಸ್ತ್ರೀ ಸಾಹಿತ್ಯವೆಂಬ ಅವಜ್ಞೆಯ ಮಾತುಗಳಿಂದ ಆಕೆ ಎಂದೂ ಎದೆಗುಂದಲಾರಳು. ಹೀಗೆ ನಿರಂತರವಾಗಿ ಬರೆಯುತ್ತಿರುವ ಬರಹಗಾರ್ತಿಯರಲ್ಲಿ ಸುನಂದಾ ಪ್ರಕಾಶ ಕಡಮೆ ಒಬ್ಬರು.

ಸುನಂದಾ ಪ್ರಕಾಶ ಕಡಮೆಯವರು ಜನಿಸಿದ್ದು 1967 ರಲ್ಲಿ. ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ. ಪದವಿಯ ನಂತರ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಮೂಲತಃ ಗೋಕರ್ಣ ಸನಿಹದ ಕಡಮೆಯವರಾದ ಪತಿ ಪ್ರಕಾಶ್ ಸಹಾ ಕವಿ. ಹಿರಿಯ ಮಗಳು ಕಾವ್ಯಾ ಯುವ ಬರಹಗಾರ್ತಿ. ಕಿರಿಯ ಮಗಳು ನವ್ಯಾ ಛಾಯಾಚಿತ್ರಗ್ರಾಹಕಿ.

1997ರಲ್ಲಿ ಬರವಣಿಗೆ ಆರಂಭಿಸಿದ ಸುನಂದಾ ಕಡಮೆಯವರದು ‘ನಮ್ಮ ಬದುಕಿನ ಗುಣವನ್ನು ಆಪ್ತವಾಗಿ ಹೆಚ್ಚಿಸುವ ಪ್ರಾಮಾಣಿಕ ಬರಹ’ ವೆಂದು ಪ್ರಸಿದ್ಧ ಕಥೆಗಾರ ಜಯಂತ್ ಕಾಯ್ಕಿಣಿಯವರು ಸುನಂದಾರ ಮೊದಲ ಸಂಕಲನದ ಮುನ್ನುಡಿಯಲ್ಲಿ ಹೇಳಿದ್ದಾರೆ. ಅವರ ಕತೆಗಳಲ್ಲಿ ಬರುವ ಸೂಕ್ಷ್ಮತೆಗಳು, ಮೌನ ಪ್ರತಿಭಟನೆಗಳು ಉದ್ದೇಶಪೂರ್ವಕವಾಗಿರದೇ ಅತ್ಯಂತ ಸಹಜವಾಗಿ ಮೂಡಿ ಬರುವುದನ್ನು ನಾವು ಕಾಣಬಹುದು.

ಪುಟ್ಟ ಪಾದದ ಗುರುತು, ಗಾಂಧೀ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಎಂಬ ನಾಲ್ಕು ಕಥಾ ಸಂಕಲನ, ಬರೀ ಎರಡು ರೆಕ್ಕೆ, ದೋಣಿ ನಡೆಸೋ ಹುಟ್ಟು ಮತ್ತು ಕಾಡೊಡಲ ಉರಿ ಎಂಬ ಮೂರು ಕಾದಂಬರಿ ಹಾಗೂ ಲೇಖನಗಳ ಸಂಗ್ರಹ, ಕವಿತೆ ಮತ್ತು ಮಕ್ಕಳ ಕಾದಂಬರಿ ಹೀಗೆ ಒಟ್ಟೂ ಹನ್ನೊಂದು ಕೃತಿಗಳನ್ನು ಇವರು ರಚಿಸಿದ್ದಾರೆ.

ಕಡಮೆ ಅವರ ಕಾದಂಬರಿ ‘ಬರೀ ಎರಡು ರೆಕ್ಕೆ’ ಮುಂಬಯಿ ವಿ.ವಿ. ಕನ್ನಡ ವಿಭಾಗದಲ್ಲಿ ನನಗೆ ಪಠ್ಯವಾಗಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿ.ವಿ ಗೆ ಇವರ ಕತೆಗಳು ಪಠ್ಯವಾಗಿವೆ..

ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಛಂದ ಪುಸ್ತಕ ಬಹುಮಾನ, ಕರ್ಕಿ ಕಾವ್ಯ ಪ್ರಶಸ್ತಿ, ವಸುದೇವ ಭೂಪಾಲಂ ಕಥಾ ಪ್ರಶಸ್ತಿ, ಎಂ.ಕೆ. ಇಂದಿರಾ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ, ಬಿ.ಎಂ.ಶ್ರೀ ಪ್ರಶಸ್ತಿ, ಮತ್ತು ಮುಂಬಯಿಯ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ ಸೇರಿದಂತೆ ಒಟ್ಟೂ ಹದಿನೆಂಟು ಪ್ರಶಸ್ತಿಗಳು ಇವರ ಸಾಧನೆಯನ್ನು ಅರಸಿಕೊಂಡು ಬಂದಿವೆ. ಇ

‘ಬರೀ ಎರಡು ರೆಕ್ಕೆ’ ಓದಿದ ಬಳಿಕ ನಮ್ಮ ವಿದ್ಯಾ ಗುರುಗಳು ಪ್ರೇರೇಪಿಸಿದಂತೆ ನಾನು ಮುಂಬೈನಿಂದ ಹುಬ್ಬಳ್ಳಿಗೆ ಬಂದು ಅವರನ್ನು ಭೇಟಿ ಮಾಡಿದೆ. ಆಗ ಅವರೊಂದಿಗೆ ನಡೆಸಿದ ಮಾತುಕತೆಯ ಕೆಲ ಅಂಶಗಳು ಇಲ್ಲಿವೆ.

‘ಬರೀ ಎರಡು ರೆಕ್ಕೆ’ ಹಿನ್ನೆಲೆಯಲ್ಲಿ ನಿಮ್ಮ ಬಾಲ್ಯದ ದಿನಗಳ ಬಗ್ಗೆ ಬೆಳಕು ಚೆಲ್ಲುವಿರಾ?

ನಾನು ಹುಟ್ಟಿ ಬೆಳೆದದ್ದು ಉತ್ತರಕನ್ನಡ ಜಿಲ್ಲೆಯ ಕರಾವಳಿ ತೀರದ ಅಲಗೇರಿ ಎನ್ನುವ ಗ್ರಾಮೀಣ ಭಾಗದಲ್ಲಿ, ಅಲ್ಲಿ ಹಾಲಕ್ಕಿ ಒಕ್ಕಲಿಗರ ಸಂಸ್ಕೃತಿ. ಶಾಲೆಯಲ್ಲೂ ಅರ್ಧದಷ್ಟು ಸಹಪಾಠಿಗಳು ಹಾಲಕ್ಕಿ ಜನಾಂಗದವರೇ. ಹಾಗೆಯೇ ಅವರ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಸಾಕಷ್ಟು ವಿಷಯ ತಿಳಿದಿತ್ತು. ಅವರನ್ನೊಳಗೊಂಡೇ ನಡೆಯುತ್ತಿದ್ದ ಸುಗ್ಗಿ ಹಬ್ಬ, ಕಾರ್ತಿಕೋತ್ಸವ, ಬಂಡಿ ಹಬ್ಬ, ಹಗರಣ, ಬಯಲಾಟ ಇತ್ಯಾದಿಗಳು ನಮಗೆ ಕುತೂಹಲಕರ ವಿಷಯವಾಗಿತ್ತು. ಆ ಕಾಲದಲ್ಲಿ ಹಳ್ಳಿಯಲ್ಲಿ ಟಿ.ವಿ ಸಂಸ್ಕೃತಿ ಇರಲಿಲ್ಲವಾದ್ದರಿಂದ ನಾನು ಮೇಲೆ ಹೇಳಿದ ಹಬ್ಬಗಳನ್ನು ಊರಿನ ಜನರೊಂದಿಗೆ ಬೆರೆತು ಆಚರಿಸುವುದು ಸಹಜವಾಗಿತ್ತು.

ಈಗಲೂ ಎಲ್ಲಿಯಾದರೂ ಹಾಲಕ್ಕಿಗಳ ಭಾಷೆ ಆಪ್ತವಾಗಿ ಕಿವಿಗೆ ಬಿದ್ದರೆ ತಟ್ಟನೆ ನನ್ನ ಬಾಲ್ಯ ನೆನಪಾಗುತ್ತದೆ. ನನ್ನ ಮೊದಲ ಕಾದಂಬರಿ ‘ಬರೀ ಎರಡು ರೆಕ್ಕೆ’ ಯಲ್ಲಿ ಹಾಲಕ್ಕಿಗಳ ಅಪ್ಪಟ ಹೋರಾಟದ ಜನಜೀವನದ ಕುರಿತು ಬೆಳಕು ಚೆಲ್ಲಿದ್ದೇನೆ.

ನೀವು ಬರವಣಿಗೆಯನ್ನು ಅಭಿವ್ಯಕ್ತಿ ಮಾಧ್ಯಮವೆಂದು ಸ್ವೀಕರಿಸಿದ್ದು ಯಾವಾಗ?

ನಾನು ಏಳನೇ ತರಗತಿ ಮುಗಿಸಿ ಎಂಟನೇ ತರಗತಿಗಾಗಿ ಹೈಸ್ಕೂಲಿಗೆ ಹೊರಡುವ ಮೊದಲ ದಿನ ನನ್ನ ತಂದೆ ನನ್ನನ್ನು ಕರೆದು ಹತ್ತಿರ ಕೂಡಿಸಿಕೊಂಡು ‘ನೀನೀಗ ಚಿಕ್ಕವಳಲ್ಲ, ಶಾಲೆಯಲ್ಲಿ ಯುವ ಮಾಸ್ತರ್ ಗಳಿರ್ತಾರೆ, ಅವರ ಜೊತೆ ಗಂಭೀರವಾಗಿ ವರ್ತಿಸಬೇಕು’ ಎಂಬ ಕಿವಿ ಮಾತನ್ನು ಸಹಜವೆಂಬಂತೆ ಹೇಳಿದ್ದರು. ಆದರೆ ಅದು ನನ್ನ ಮನಸ್ಸಿನಲ್ಲಿ ಒಂದು ರೀತಿಯ ದಿಗಿಲನ್ನು ಹುಟ್ಟುಹಾಕಿತ್ತು. ‘ಯಾಕೆ ಈ ರೀತಿ ಹೇಳಿದರು?’ ಎಂದು ಅರ್ಥವಾಗುವ ವಯಸ್ಸೂ ಅಲ್ಲ.

ಈಗ ಯೋಚಿಸಿದರೆ ನನ್ನ ಕುರಿತು ತಂದೆಗಿದ್ದ ಅಪಾರ ಕಾಳಜಿ ಅದು ಅನಿಸುತ್ತದೆ. ಎಂಥದೋ ನೋವು ಸಂಕಟ ಅವಮಾನಗಳು ಕಾಡಿದ ಹಾಗೆ. ಒಂದೆರಡು ದಿನ ತಂದೆಯವರ ಮುಖವನ್ನೂ ನೋಡದೇ ಮಾತು ಬಿಟ್ಟಿದ್ದೆ. ಮೂರನೇ ದಿನ ನನ್ನ ನೋಟುಬುಕ್ಕಿನ ಕೊನೆಯ ಪುಟದಲ್ಲಿ ಆ ಪ್ರಸಂಗವನ್ನು ಯಥಾವತ್ತು ಬರೆದೆ. ಹಾಗೆ ಅದು ಅಕ್ಷರ ರೂಪದಲ್ಲಿ ಹೊರಬಂದದ್ದೇ ನನ್ನೊಳಗಿದ್ದ ವೇದನೆ ತಾನೇ ತಾನಾಗಿ ಹೊರಟುಹೋಗಿತ್ತು. ನಂತರ ತಂದೆಯ ಮುಖ ನೋಡಿ ಮಾತಾಡಲು ಧೈರ್ಯ ಬಂತು. ಹಾಗೆ ಮನಸ್ಥೈರ್ಯ ರೂಪಿಸಿದ್ದು ಆ ಅಕ್ಷರಗಳು.

ಕೆಲವು ಹೆಣ್ಣುಮಕ್ಕಳು ತಮ್ಮೊಳಗಿನ ನೋವನ್ನು ಇನ್ನೊಬ್ಬರೊಡನೆ ಹೇಳಿಕೊಂಡು ಬಿಡುಗಡೆಗೊಳ್ಳುತ್ತಾರೆ. ಆದರೆ ನನ್ನ ಸ್ವಭಾವ ಹಾಗಿಲ್ಲ. ಹಾಗಾಗಿ ಬರವಣಿಗೆಯೇ ನನಗೆ ನೋವಿನಿಂದ ಬಿಡುಗಡೆಗೊಳ್ಳುವ ಏಕಮಾತ್ರ ಸಾಧನ. ಆಗಲೇ ದೊರೆತ ಅಕ್ಷರದ ರುಚಿ ಮನಸ್ಸಿಗೆ ಪ್ರಿಯವಾಗುತ್ತ ಹೋಯಿತು ಅನಿಸುತ್ತದೆ.

ಹಾಗಾದರೆ ನೀವು ನಿಮ್ಮ ಬರವಣಿಗೆಗೆ ಪ್ರೇರಣೆ ಯಾರಂತ ಭಾವಿಸುತ್ತೀರಿ?

ನನ್ನ ತಂದೆ ತಮ್ಮ ಹೊಲದ ಕೆಲಸ ಮುಗಿದ ಬಳಿಕ ಅಂಕೋಲೆ ಲೈಬ್ರರಿಯಿಂದ ಪುಸ್ತಕಗಳನ್ನು ತಂದು ಓದುತ್ತಿದ್ದರು. ನಮ್ಮ ನೆಲದ ಸಂಸ್ಕೃತಿ ಮತ್ತು ಜನಜೀವನವೇ ಪ್ರಧಾನವಾಗಿರುವ ಯಶವಂತ ಚಿತ್ತಾಲರ ಶಿಕಾರಿ, ಮೂರುದಾರಿ, ಪುರಷೋತ್ತಮ ಗಳನ್ನು ಅವರು ತುಂಬ ಇಷ್ಟಪಡುತ್ತಿದ್ದರು. ಓದುವುದಷ್ಟೇ ಅಲ್ಲದೇ ಆ ಕತೆಗಳನ್ನು ಅವರು ಅಡುಗೆ ಮನೆಯಲ್ಲಿ ಅಮ್ಮನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅದನ್ನು ಆಲಿಸುತ್ತ ಆಲಿಸುತ್ತ ನನಗೂ ಕಥನದ ಕುರಿತು ಆಸಕ್ತಿ ಬೆಳೆಯಿತು.

ಪರೀಕ್ಷೆಯ ವೇಳೆಯಲ್ಲಿ ಕೈಗೆ ಸಿಗದಂತೆ ನನ್ನ ತಂದೆ ಬಚ್ಚಿಟ್ಟ ಕತೆ ಕಾದಂಬರಿಗಳನ್ನು ನಾನು ಕದ್ದು ಓದುತ್ತಿದ್ದೆ. ಮದುವೆಯ ನಂತರ ಆ ಓದು ಮುಂದುವರೆಯಿತು, ಇದ್ದಕ್ಕಿದ್ದಂತೆ ನನ್ನ ಮೂವತ್ತನೇ ವರ್ಷದಲ್ಲಿ ನಾನು ಹಾಸ್ಯಬರಹಗಳನ್ನು ಬರೆಯಲಾರಂಭಿಸಿದೆ. ಅರುಣ ನಾರಾಯಣ ಎಂಬ ಸಂಪಾದಕರ ಇಷ್ಟದಂತೆ ಅವು ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡಾಗ, ಗೋಕರ್ಣದಿಂದ ಶಾಂತಾ ಕಾಯ್ಕಿಣಿಯವರು ನನ್ನ ಬರಹ ಓದಿ ಕಾರ್ಡು ಬರೆಯುತ್ತಿದ್ದರು.

ಆ ಪರಿಚಯದ ಮೇಲೆ ಅವರ ಮನೆಗೆ ಹೋಗಲಾರಂಭಿಸಿದೆ. ಒಮ್ಮೆ ಗೌರೀಶ ಕಾಯ್ಕಿಣಿಯವರು ಜಯಂತಣ್ಣನ ‘ಅಮೃತ ಬಳ್ಳಿ ಕಷಾಯ’ ಓದಲು ಕೊಟ್ಟು, ನೀನು ಕತೆಗಳನ್ಯಾಕೆ ಬರೆಯಬಾರದು ಅಂತ ಹುರಿದುಂಬಿಸಿದರು. ಹಾಗೆಯೇ ಅಂಕೋಲೆಯ ರಾಘವೇಂದ್ರ ಪ್ರಕಾಶನದ ವಿಷ್ಣು ನಾಯ್ಕರು ಹಲವು ಕವಿಗೋಷ್ಠಿಗಳಲ್ಲಿ ವೇದಿಕೆ ನೀಡಿ ಪ್ರೋತ್ಸಾಹಿಸಿದರು. ಇಂಥ ಹಿರಿಯರ ಸಹಕಾರ ಮತ್ತು ನನ್ನ ಓದಿನ ಹುಚ್ಚು ಇವೆರಡೂ ನನ್ನ ಬರವಣಿಗೆಗೆ ಪ್ರೇರಕ ಶಕ್ತಿಗಳು ಅಂತ ಭಾವಿಸಿದ್ದೇನೆ.

ಕನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಬರೀ ಎರಡು ರೆಕ್ಕೆ’ ಕಾದಂಬರಿ ಬಗ್ಗೆ ನಿಮ್ಮ ಅನಿಸಿಕೆ ಏನು?

ಮೇಲ್ವರ್ಗದ ಮನೆಯೊಂದರಲ್ಲಿ ಕೆಲಸ ಮಾಡುವ ಹಾಲಕ್ಕಿ ಜನಾಂಗದ ಸಣ್ಣಿ ಎಂಬ ಧೀರ ದಿಟ್ಟ ಹೆಣ್ಣಿನ ಕತೆ ಅದು. ಎಲ್ಲ ವರ್ಗದ ಸಮಾಜದಲ್ಲೂ ಹೆಣ್ಣಿನ ನೋವು ದುಃಖ ಸಂಕಟಗಳಿಗೆ ಕೊರತೆಯಿಲ್ಲ. ಸಣ್ಣಿ ಹಾಗೂ ಅರುಂಧತಿ ಎಂಬಿಬ್ಬರು ಶೋಷಿತ ಮಹಿಳೆಯರ ತಳಮಳ ಹಾಗೂ ವೇದನೆಗಳನ್ನು ಮತ್ತು ಅವರು ಅದರಿಂದ ಮೇಲೆದ್ದು ಬರುವಾಗಿನ ಹೋರಾಟದ ಬದುಕನ್ನು ಇಲ್ಲಿ ಚಿತ್ರಿಸಿದ್ದೇನೆ ಅಂದುಕೊಂಡಿರುವೆ.

ಇಲ್ಲಿ ಬರುವ ಸರೋಜಿನಿ ಎಂಬ ಆಧುನಿಕ ಮನೋಧರ್ಮದ ಪಾತ್ರವೊಂದು ತನ್ನನ್ನು ತಾನು ಕಟ್ಟಿಕೊಳ್ಳುತ್ತಲೇ, ನನ್ನೊಳಗಿನ ಹಲವು ಸ್ತ್ರೀಪರ ಕಾಳಜಿಗಳನುನಿನ್ನಷ್ಟು ಹರಿತಗೊಳಿಸಿದೆ. ಮೇಲ್ವರ್ಗದ ಅರುಂಧತಿ ತನ್ನ ಸಾಂಸಾರಿಕ ತುಮುಲಗಳನ್ನು ಅಖಂಡ ಮೌನದಿಂದಲೇ ಗೆದ್ದು ಬಂದರೆ, ಸಣ್ಣಿ ತನ್ನ ಸಮಾಜಮುಖೀ ಆಶಯದ ಹೋರಾಟದಿಂದ ಊರಿಗೂ ಸಮಾಜಕ್ಕೂ ಮಾದರಿಯಾಗುತ್ತಾಳೆ.

ಬಡತನ ಹಾಗೂ ಶೋಷಣೆಯ ಕಹಿ ಅನುಭವದ ಹಿನ್ನೆಲೆಯಲ್ಲೇ ಸಾರಾಯಿ ಆಂದೋಲನ ಆರಂಭಿಸಿದ ಸಣ್ಣಿ ಊರನ್ನು ಸಾರಾಯಿ ಮುಕ್ತ ಹಳ್ಳಿ ಎಂದು ಸರಕಾರ ಘೋಷಿಸುವವರೆಗೂ ಹೋರಾಟದ ನಾಯಕಿಯಾಗಿ ಕಷ್ಟ ನಷ್ಟ ಸಹಿಸುತ್ತಾಳೆ. ಈ ಪಾತ್ರದ ಹುಟ್ಟಿಗೆ ಇತ್ತೀಚೆಗೆ ಪದ್ಮಶ್ರೀ ಪಡೆದ ನಮ್ಮ ಸುಕ್ರಿ ಬೊಮ್ಮು ಗೌಡ ಅವರೇ ಸ್ಪೂರ್ತಿ.

ನಿಮ್ಮ ಕಾದಂಬರಿಯಲ್ಲಿ ಅರುಂಧತಿ ಎಂಬ ಇನ್ನೊಂದು ಪಾತ್ರ ಮೌನ ಪ್ರತಿಭಟನೆ ರೂಪದಲ್ಲಿದೆ. ಇದನ್ನು ಸ್ವಲ್ಪ ವಿಸ್ತಾರವಾಗಿ ತಿಳಿಸುವಿರಾ?

ಅರುಂಧತಿ ಗಂಡ ಮನೆ ಮಗು ಮಾಡಿಕೊಂಡಿರುವ ಒಬ್ಬ ಗೃಹಿಣಿ. ಉದ್ಯೋಗಸ್ಥಳಲ್ಲ. ಸಂಪ್ರದಾಯ, ನಂಬಿಕೆಗಳಿದ್ದ ಅತ್ತೆಯ ಮನೆಯಲ್ಲಿ ಆಜ್ಞಾಧಾರಕಿಯಾಗಿ, ಕ್ಷಣಕ್ಷಣಕ್ಕೂ ಅವಲಂಭಿತಳಾಗಿ ದೈನಿಕವನ್ನು ಕಳೆಯಬೇಕಾದ ಪರಿಸ್ಥಿತಿಯಲ್ಲಿ, ಅವಳು ಒಂದು ದಿನ ತನ್ನ ಮಾತೇ ನಿಂತು ಹೋದಂತೆ ಮತ್ತು ಕಿವಿಯೂ ಕೇಳುತ್ತಿಲ್ಲ ಎಂಬುದಾಗಿ ಸಂಜ್ಞೆಯಿಂದಲೇ ಪ್ರಕಟಿಸುತ್ತಾಳೆ. ಹಲವು ಸಂಕಷ್ಟಗಳಿಗೆ ಅರುಂಧತಿ ಮೂಕತ್ವವನ್ನು ಪ್ರತಿಭಟನೆಯ ಅಸ್ತ್ರವಾಗಿ ಬಳಸಿಕೊಂಡಳೇ ಎಂಬುದು ಓದುಗರ ಯೋಚನೆಗೆ ಬಿಟ್ಟದ್ದು.

ಇದೊಂದು ಮಾನಸಿಕ ಖಾಯಿಲೆ ಎಂಬುದಾಗಿ ಅವಳು ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಆದರೆ ಅದ್ಯಾವುದೂ ಫಲಕಾರಿಯಾಗದೇ ಕ್ರಮೇಣ ಮನೆಯಲ್ಲಿ ನಡೆವ ಸಣ್ಣಪುಟ್ಟ ಸಾಂಸಾರಿಕ ವಾಗ್ಯುದ್ಧಗಳು ಇದ್ದಲ್ಲೇ ಒಂದು ತಹಬಂಧಿಗೆ ಬರುತ್ತವೆ. ಆದರೆ ಅರುಂಧತಿ ಗಳಿಸಿದ ಈ ಅಖಂಡ ಮೌನದ ಹಿಂದಿನ ನೋವು ನಮ್ಮ ಸಂಸ್ಕೃತಿಯ ಚೌಕಟ್ಟಿನಿಂದ ಸುತ್ತಿಕೊಂಡ ಪಾಶವೇ ಆಗಿದೆ. ಅದು ಆ ಕ್ಷಣದ ಅವಳ ವೈಯಕ್ತಿಕ ನೆಮ್ಮದಿಗೆ ಮಾತ್ರ ಸಂಬಂಧಿಸಿದ್ದು.

ನಿಮ್ಮ ಕಾದಂಬರಿ ‘ಬರೀ ಎರಡು ರೆಕ್ಕೆ’ ಯಲ್ಲಿ ಪ್ರಾದೇಶಿಕ ಭಾಷೆಯೇ ಹೆಚ್ಚಿರಲು ಕಾರಣವೇನು?

ಭಾಷೆಯು ಆಯಾ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಯಾವುದೇ ಒಂದು ಪ್ರಾದೇಶಿಕ ಭಾಷೆಗೆ ಆ ನೆಲದ ಸೊಗಡು ಇರುತ್ತದೆ. ಯಾವುದೇ ಜನಾಂಗದ ಭಾಷೆಯನ್ನು ಮಾತನಾಡುವ ವ್ಯಕ್ತಿ ಕ್ರಮೇಣ ಶಿಕ್ಷಣ ಪಡೆದು ಶುದ್ಧ ಭಾಷೆಯನ್ನು ರೂಢಿಸಿಕೊಂಡಾಗ ಅವರ ಮೂಲ ಭಾಷೆ ಕೊನೆಗೊಳ್ಳುತ್ತದೆ. ಆದರೆ ಅಕ್ಷರ ಸಂಸ್ಕೃತಿಯಿಂದ ಒಂದು ಭಾಷೆಗೆ ಜೀವಂತಿಕೆ ಪ್ರಾಪ್ತವಾಗುತ್ತದೆ. ನಮ್ಮ ಅಳಿವಿನ ಬಳಿಕವೂ ಪುಸ್ತಕದ ಬಗ್ಗೆ ಎಲ್ಲೋ ಏನೋ ಚರ್ಚೆಗಳಾಗುತ್ತಾ ಇರುತ್ತದೆ. ಹಾಗೆ ಭಾಷೆಯ ಕುರಿತು ಕೂಡ ಚಿಂತನೆ ಮುಂದುವರೆಯುತ್ತದೆ.

ಮನೆ ಮತ್ತು ಬರಹ ಎರಡನ್ನೂ ಯಾವ ರೀತಿಯಲ್ಲಿ ನಿಭಾಯಿಸುತ್ತೀರಿ?

ಯಾವುದೇ ಒಂದು ಕೆಲಸಕ್ಕೆ ಶಿಸ್ತು ಹಾಗೂ ಚೌಕಟ್ಟು ನಿರ್ಮಿಸಿಕೊಳ್ಳುವುದು ಮುಖ್ಯ. ಮನೆಕೆಲಸವೇ ಆಗಲಿ, ಓದು ಹಾಗೂ ಬರವಣಿಗೆಯೇ ಆಗಲಿ, ಅದನ್ನು ಜಾಣ್ಮೆಯಿಂದ ರೂಪಿಸಿಕೊಳ್ಳಬೇಕು. ಬರಹಗಾರರಿಗೆ ಓದು ಬಹಳ ಮುಖ್ಯ. ಇಪ್ಪತ್ನಾಲ್ಕು ಗಂಟೆಯಲ್ಲಿ ಎರಡು ಗಂಟೆ ಓದಲಿಕ್ಕೆ ಮೀಸಲಿಡಲು ಸಾಧ್ಯವಿಲ್ಲವೇ? ಕಾಡು ಹರಟೆ ಮತ್ತು ಚಿಂತನೆಯನ್ನು ಬೆಳೆಸದ ಟೀವಿ ವೀಕ್ಷಣೆಗೆ ಕಡಿವಾಣ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಮಾಡಿದ ಕೆಲಸವ್ಯಾವುದೂ ಅಪ್ರಯೋಜಕ ಅನಿಸಬಾರದು. ನಾವು ಮಾಡಲೇಬೇಕಾಗಿರುವ ಕೆಲಸದ ಕುರಿತು ಸದಾ ಜಾಗ್ರತವಾಗಿರಲು ಕಂಪ್ಯೂಟರ್ ಟೇಬಲ್ಲಿನ ಮೇಲೊಂದು ಲಿಸ್ಟು. ದಿನಕ್ಕೆ ಆ ಲಿಸ್ಟಿನಲ್ಲಿ ಎಷ್ಟು ರೈಟ್ ಮಾರ್ಕ ಹೊಡೆದೆ, ಅಂದಿನ ದಿನ ಅಷ್ಟು ಸಾರ್ಥಕದಲ್ಲಿ ಕಳೆದ ಭಾವ.

ನಿಮ್ಮ ಬರವಣಿಗೆಯ ಹವ್ಯಾಸದಿಂದಾಗಿ ಅದೂ ಪ್ರಸಿದ್ಧಿ ಕಾಣುತ್ತಿರುವ ಈ ಸಮಯದಲ್ಲಿ ನಿಮಗೂ ಒತ್ತಡ ಹೆಚ್ಚಾಗುತ್ತಿರಬಹುದು. ಹಾಗಿರುವಾಗ ಸಾಹಿತ್ಯ ಕ್ಷೇತ್ರಕ್ಕೆ ಬರುವಂತಹ ನಿರ್ಧಾರದಲ್ಲಿ ತಪ್ಪು ಮಾಡಿದೆ ಅಂತ ನಿಮಗೆ ಅಥವಾ ನಿಮ್ಮವರಿಗೆ ಯಾವತ್ತಾದರೂ ಬೇಸರ ಉಂಟಾಗಿದೆಯೇ?

ಇಲ್ಲ. ಅಂತಹ ಸಂದರ್ಭ ಯಾವತ್ತೂ ನಾನು ತಂದುಕೊಂಡಿಲ್ಲ. ಅಡೆತಡೆಗಳನ್ನು ಯಾವಾಗಲೂ ಪಾಸಿಟಿವ್ ಆಗಿ ಸ್ವೀಕರಿಸುತ್ತೇನೆ. ಯಾಕೆಂದರೆ ನಾನು ನನ್ನ ಕುಟುಂಬಕ್ಕೆ ಪ್ರಾಧಾನ್ಯತೆ ಕೊಡುತ್ತೇನೆ. ಬೆಳಿಗ್ಗೆ ಎದ್ದು ಮನೆ, ಮನೆಯವರ ಕೆಲಸ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ ಬಳಿಕ ನನ್ನ ಬರವಣೆಗೆಯ ಕೆಲಸ ಮಾಡುತ್ತೇನೆ. ಮನೆಗಾಗಿ ಖರ್ಚುವೆಚ್ಚ ಹೊಂದಿಸುವುದು ಹೇಗೆ ನನ್ನ ಗಂಡನ ಜವಾಬ್ಧಾರಿಯೋ ಹಾಗೆ ನಾನು ವೃತ್ತಿಯಲ್ಲಿಲ್ಲದ ಕಾರಣ ಮನೆವಾರ್ತೆಯಲ್ಲಿ ನನ್ನ ಪತಿ ಹಾಗೂ ಮಕ್ಕಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅದನ್ನು ಮಾಡದಿದ್ದರೆ ನಮ್ಮಲ್ಲಿ ಉಂಟಾಗುವ ವೈಮನಸ್ಸು ಓದು-ಬರಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿರಸಗೊಂಡ ಮನಸ್ಸು ಸೃಜನಶೀಲತೆಯಲ್ಲಿ ತೊಡಗಿಕೊಳ್ಳಲು ಹಿಂದೇಟುಹಾಕುತ್ತದೆ. ಅದಲ್ಲದೇ ನನ್ನ ಗಂಡ ಪ್ರಕಾಶ್ ಕೂಡ ಕವಿಯಾದದ್ದರಿಂದ ಬರವಣಿಗೆಯ ಕುರಿತು ಅವನಿಗೆ ಗೌರವವಿದೆ.

ಒಬ್ಬ ಮಹಿಳಾ ಬರಹಗಾರ್ತಿಯಾಗಿ ನೀವು ಎದುರಿಸಬಹುದಾದ ಸಂತೋಷದ, ಸಂಕಟದ ಕ್ಷಣಗಳಾವುದಾದರೂ ಇದೆಯೇ?

ನಿಮ್ಮ ಈ ಪ್ರಶ್ನೆ ಸೂಕ್ಷ್ಮವಾಗಿದೆ. ನನ್ನ ಕಥೆಗಳಿಗೆ ಬರುವ ಸಹೃದಯರ ಮೆಚ್ಚಿಗೆಯೇ ಸಂತೋಷ ಕೊಡುವ ಸಂಗತಿ. ಕೊಂಚ ಸಂಕಟದ ವಿಷಯವೆಂದರೆ, ನಾವು ಪುರುಷ ಪ್ರಧಾನ ವ್ಯವಸ್ಥೆಯೊಂದು ಕಟ್ಟಿಕೊಟ್ಟ ಭಾಷೆಯಲ್ಲೇ ಬರೆಯುತ್ತಿದ್ದೆವೋ ಎಂಬ ಅನುಮಾನ ಆಗಾಗ ಕಾಡುತ್ತದೆ. ನಮ್ಮದೇ ಆದ ನುಡಿಗಟ್ಟುಗಳನ್ನು ನಾವು ನಿರ್ಮಾಣ ಮಾಡಿಕೊಳ್ಳಬೇಕಿದೆ. ಉದಾ: ಶೀಲ, ಮಾನಭಂಗ, ಕನ್ಯತ್ವ, ಪತಿವ್ರತೆ, ವಿಧವೆ, ಹಾದರ ಇಂಥ ಪದಗಳನ್ನೆಲ್ಲ ಪುರುಷರು ತಮ್ಮ ಸೌಕರ್ಯಕ್ಕಾಗಿ ಹುಟ್ಟುಹಾಕಿದ್ದು.

ತೇಜಸ್ವಿಯವರು ವ್ಯಭಿಚಾರ, ಹಾದರ ಎಂಬ ಪದಕ್ಕೆ ಲೈಂಗಿಕ ಅಶಿಸ್ತು ಎಂಬ ಪದ ಬಳಸುತ್ತಿದ್ದರು. ಪುರುಷ ಬರಹಗಾರರಂತೆ ನಾವು ಅಂದುಕೊಂಡ ಎಲ್ಲವನ್ನೂ ಬಿಡುಬೀಸಾಗಿ ಬರೆಯಲಾಗುವುದಿಲ್ಲ. ಸ್ತ್ರೀಯರಿಗೆ ಸಂಸ್ಕೃತಿಯ ಚೌಕಟ್ಟು ಇರುವುದರಿಂದ ಸಮಾಜ ನಮ್ಮನ್ನು ಆ ಹಿನ್ನೆಲೆಯಲ್ಲೇ ನೋಡುತ್ತದೆ, ಮುಂದಿನ 20-25 ವರುಷಗಳಲ್ಲಿ ಅದು ಸಡಿಲಗೊಂಡು ನಮ್ಮ ಸ್ತ್ರೀಯರು ಸಂಪ್ರದಾಯ ಮೀರಿನಿಂತು ಬರೆಯಲೂಬಹುದು. ಆ ತಿಳುವಳಿಕೆಯನ್ನು ನಾವು ಹೊಸ ಹೊಸ ಓದಿನಿಂದ ಪಡೆದುಕೊಳ್ಳಬೇಕು. ಅನುಭವದಿಂದ ನಮ್ಮ ಮನಸ್ಸನ್ನು ಹರಿತಮಾಡಿಕೊಂಡು ಆ ಸ್ವಾತಂತ್ರ್ಯವನ್ನು ಸ್ವತಃ ಗಳಿಸಿಕೊಳ್ಳಬೇಕೇ ಹೊರತು ಅವು ತಾವಾಗಿಯೇ ದಕ್ಕುವಂತದ್ದಲ್ಲ.

ನಿಮ್ಮ ಬರಹಕ್ಕೆ ಅಡ್ಡಿ-ಆತಂಕ ತಂದಂತಹ ಘಟನೆ ಏನಾದರೂ ಇದೆಯೇ?

ಈ ಪ್ರಶ್ನೆ ಕೇಳಿದ್ದೂ ಖುಷಿ ಆಯ್ತು ಹೇಮಾ. ನನ್ನ ಬರವಣಿಗೆಯ ಆರಂಭದ ದಿನಗಳಲ್ಲಿ ಗಂಡ ಬರೆದು ಕೊಡುತ್ತಾನೆಯೇ ಎಂದು ಕೆಲವರು ತಮಾಷೆಯಾಗಿ ಕೇಳಿದ್ದುಂಟು. ನಂತರ ಇದು ವಿಷ್ಣು ನಾಯ್ಕರ ಹೊಸ ಶೋಧ ಎಂದು ವ್ಯಂಗ್ಯವಾಡಿದವರೂ ಇದ್ದಾರೆ. ಆನಂತರ ಕೆಲ ವಿಮರ್ಶಕರು ಜಯಂತಣ್ಣನ ಕಥೆಗಳನ್ನು ಅನುಕರಣೆ ಮಾಡುತ್ತೀರಿ ಎಂದಿದ್ದೂ ಇದೆ. ತದನಂತರ ಇವಳಿಗೆ ಸ್ತ್ರೀವಾದ ಗೊತ್ತಿಲ್ಲ, ಪುರುಷರಿಗೆ ಇಷ್ಟವಾಗುವ ಹಾಗೆ ಬರೆಯುತ್ತಾಳೆ ಅಂದಿದ್ದೂ ಇದೆ. ಈ ಎಲ್ಲ ಮಾತಿನ ದ್ವಂದ್ವ ದುಗುಡ ಆತಂಕಗಳನ್ನೂ ಮೂರ್ತಿಯೊಂದು ರೂಪಗೊಳ್ಳಲು ಬಿದ್ದ ಚಾಣದ ಏಟುಗಳೇ ಅಂದುಕೊಂಡಿದ್ದೇನೆ.

ಸಮಕಾಲೀನ ವಿದ್ಯಮಾನದಲ್ಲಿ ನಮ್ಮ ಬರವಣಿಗೆ ಪಡೆಯಬೇಕಾದ ತಿರುವುಗಳೇನು?

ವೈಯಕ್ತಿಕವಾಗಿ ನನ್ನ ಪ್ರಥಮ ಬರವಣಿಗೆ ಸ್ವಂತ ಅಸ್ತಿತ್ವದ ಉಳಿವಿಗಾಗಿ, ವ್ಯಕ್ತಿತ್ವದ ಗಳಿಕೆಗಾಗಿಯೇ ಹುಟ್ಟಿಕೊಂಡಿತ್ತು, ಆದರೆ ಓದು ಹಾಗೂ ಅನುಭವ ಮತ್ತು ಓಡಾಟದ ಹಿನ್ನೆಲೆಯಲ್ಲಿ, ಮನಸ್ಸು ತೆರೆದು ಸಮುದಾಯದ ನೋವುಗಳನ್ನು ಒಳಗೊಂಡಾಗ ಗೊತ್ತಾದದ್ದು ಏನೆಂದರೆ, ಬರವಣಿಗೆ ಒಂದು ಸಾಮಾಜಿಕ ಜವಾಬ್ಧಾರಿ ಎಂಬುದು. ಮಾನವೀಯ ಸ್ಪಂದನೆಗಿಂತ ನಮ್ಮ ಯಾವ ಕಲೆಯೂ ದೊಡ್ಡದಲ್ಲ. ಬದುಕೇ ದೊಡ್ಡದು.

ಬರಹಗಾರರು ಮುಕ್ತ ಸಾಮಾಜಿಕ ಚಿಂತನೆಯುಳ್ಳವರಾಗಿದ್ದಷ್ಟೂ ಪ್ರಗತಿಪರ ಸಂವೇದನೆಯವರಾಗಿದ್ದಷ್ಟೂ ಅವರ ಬರಹಗಳೂ ಸಮಾಜಮುಖೀ ನಿಲುವಿನಲ್ಲಿ ಕಟ್ಟಿಕೊಳ್ಳುತ್ತದೆ. ಯಾವ ಬರಹಕ್ಕೆ ಬಡವರ ಕುರಿತು ಕಾಳಜಿ ಇರುತ್ತದೆಯೋ, ಹಸಿವಿನ ಕುರಿತು ಅರಿವು ಇರುತ್ತದೆಯೋ, ಸ್ತ್ರೀ ಸಮಾನತೆಯ ಕುರಿತು ತಿಳಿವಳಿಕೆಯಿರುತ್ತದೆಯೋ, ದಲಿತರ ಮತ್ತು ಅಲ್ಪ ಸಂಖ್ಯಾತರ ಕುರಿತು ಅಂತಃಕರಣವಿರುತ್ತದೆಯೋ ಅಂಥ ಬರಹಗಳು ಕಲಾತ್ಮಕವಾಗಿ ತುಸು ಸೊರಗಿದ್ದರೂ ಅವು ಗೌರವಿಸಲು ಯೋಗ್ಯವಾದುದೆಂದೇ ನಾನು ನಂಬಿದ್ದೇನೆ.

ಲಿಂಗ ಸಮಾನತೆಯನ್ನು ಸಾಹಿತ್ಯ ಹಾಗೂ ಬದುಕಿನಲ್ಲಿ ಅಳವಡಿಸುವುದು ಹೇಗೆ?

ನಾವು ಮೊದಲಿಗೆ ಕುಟುಂಬ ಪ್ರಜಾಪ್ರಭುತ್ವ ನಿಯಮವನ್ನು ಪಾಲಿಸಬೇಕು. ಅಂದ್ರೆ ಯಾವುದೇ ಕೆಲಸ ಇದು ಗಂಡಸರದು, ಇದು ಹೆಂಗಸರದು ಎಂಬ ದ್ವಿಬಾಜಕ ಇರಬಾರದು. ಲಿಂಗ ಸಮಾನತೆ ಮೊದಲು ಮನೆಯಿಂದಲೇ ಆರಂಭಗೊಳ್ಳಬೇಕು. ನಾವು ಸ್ತ್ರೀಯರು ಮನೆಮನೆಯ ಶೂದ್ರರು. ನಾವೂ ಮತ್ತು ದಲಿತರೂ ಶಿಕ್ಷಣಕ್ಕೆ ತೆರೆದುಕೊಂಡಿದ್ದೇ ಅಂಬೇಡ್ಕರ್ ಶಕೆ ಆರಂಭದ ನಂತರ.

ಬರಹಗಾರರು ಸಮಾಜದ ಬದಲಾವಣೆಯಲ್ಲಿ ಹತ್ತು ಹೆಜ್ಜೆ ಮುಂದಿರುತ್ತೇವೆ. ಪುಣೆಯ ದಲಿತ ನಾಟಕಕಾರದ ಮಕರಂದ ಸಾಠೆ ಅವರ ಪ್ರಕಾರ ಒಂದು ಸಂಗತಿ ಸಮಾಜದಲ್ಲಿ ಮೈದಾಳುವ ಎಷ್ಟೋ ಮುಂಚೆಯೇ ಒಬ್ಬ ಬರಹಗಾರ ಅದನ್ನು ಉಲ್ಲೇಖಿಸಿರುತ್ತಾನೆ. ಲೇಖಕ ಬುದ್ಧಿ ಮತ್ತು ಮನಸ್ಸನ್ನು ಮುಕ್ತವಾಗಿಟ್ಟುಕೊಂಡು ಬರೆಯುತ್ತಾನೆ. ಉದಾ: ವಿಚ್ಛೇದನೆ, ಲಿವ್‍ಇನ್ ರಿಲೇಷನ್‍ಶಿಪ್, ಈ ಕುರಿತು ಬರಹಗಾರರು ಯಾವತ್ತೋ ಬರೆದಿದ್ದಾರೆ. ಅದು ಈಗ ಸರ್ವೇ ಸಾಮಾನ್ಯವಾಗಿದೆ.

ಸಂಸ್ಕೃತಿ ಎಂಬ ಹೆಸರಿನಲ್ಲಿ ಇದಕ್ಕೆ ಪರ-ವಿರೋಧ ಭಾವನೆಗಳು ಮೂಡುತ್ತದೆ. ಸಮಾಜ ಪುನಃ ಸನಾತನದ ಗುಹೆಗೆ ಮರಳಲು ಸಾಧ್ಯವಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಈ ಮದುವೆ, ಕುಟುಂಬ ಎಂಬ ಪದ್ದತಿಯೇ ನಾಶವಾಗುತ್ತದೆ. ಇವೆರಡೂ ಪ್ರಕೃತಿಯ ವಿರುದ್ಧದ ಸವಾಲುಗಳು. ಸಂಸ್ಕೃತಿ ಹಾಗೂ ಪ್ರಕೃತಿಯ ಸಂಘರ್ಷದಲ್ಲಿ ಸದಾ ಗೆಲ್ಲುವುದು ಪ್ರಕೃತಿಯೇ. ಯಾಕೆಂದರೆ ಕುಟುಂಬ ಅಂದ ಕೂಡಲೇ ಮೂಲದಲ್ಲಿ ನಡೆಯುವದೇ ಹೆಣ್ಣಿನ ಶೋಷಣೆ. ಹೆಣ್ಣು ತನಗೆ ಗರ್ಭಾಶಯ ಮಾತ್ರವಿಲ್ಲ, ಮಿದುಳೂ ಇದೆ ಎಂದು ಸಾಬೀತು ಪಡೆಸುವ ಕಾಲ ಇದು. ಅಂತೆಯೇ ಮೆಲ್ಲಗೆ ಬೆಳಕಿಗೆ ಬರುತ್ತಿರುವ ಸಲಿಂಗ ಪ್ರೇಮಿಗಳು ಹಾಗೂ ತೃತೀಯ ಲಿಂಗಿಗಳನ್ನು ಕೂಡ ಸಮಾಜದ ಪ್ರಧಾನ ಧಾರೆಗೆ ತರುವ ಹೊಣೆ ಬರಹಗಾರರ ಮೇಲಿದೆ.

ಬರಹಗಾರರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಬಗೆ ಹೇಗೆ?

ಮೊದಲಿಗೆ ಕನ್ನಡ ಸಾಹಿತ್ಯದ ಅಖಂಡ ಓದು, ಅದರೊಟ್ಟಿಗೆ ಬೇರೆ ಭಾಷೆಯ ಅನುವಾದಿತ ಬರಹಗಳ ಓದು ನಮ್ಮ ಯೋಚನಾ ಕ್ಷಿತಿಜವನ್ನು ಹಿಗ್ಗಿಸುತ್ತದೆ. ಬರಹಕ್ಕೆ ತೊಡಗಿಕೊಂಡಾಗ ಸೃಜನಶೀಲತೆಗೆ ತೋರುವ ಆಲಸ್ಯವನ್ನು ಮೊದಲು ತೊರೆಯಬೇಕು. ಇನ್ನುಳಿದಂತೆ ಬಸ್ಸಿನಲ್ಲಿ ಹತ್ತಿದ ವೃದ್ಧ ಅಥವಾ ಫಿಸಿಕಲಿ ಚಾಲೆಂಜ್ ಎದುರಿಸುತ್ತಿರುವ ವ್ಯಕ್ತಿಗಳಿಗೆ ಸೀಟು ಬಿಟ್ಟುಕೊಡದವ, ಮನೆಯಲ್ಲಿ ಅನಗತ್ಯ ಉರಿಯುತ್ತಿದ್ದ ವಿದ್ಯುದ್ದೀಪವನ್ನು ನಂದಿಸದವ, ಅನವಶ್ಯಕ ಪೋಲಾಗುತ್ತಿರುವ ನೀರನ್ನು ನಿಲ್ಲಿಸದವ, ತನ್ನ ಅವಶ್ಯಕತೆಗಿಂತ ಹೆಚ್ಚಿನ ದುಡ್ಡು ಆಸ್ತಿ ಗುಡ್ಡೆಹಾಕಿಕೊಂಡವ, ಈ ಸಮಾಜಕ್ಕಾಗಿ ಊರಿಗಾಗಿ ದೇಶಕ್ಕಾಗಿ ಏನು ಸೇವೆ ನೀಡಲು ಸಾಧ್ಯ? ಮಾತು ನಡತೆ ಹೇಗೆ ಬೊಗಳೆಯಾಗಕೂಡದೋ ಬರಹ ಕೂಡ ವ್ಯರ್ಥವಾಗಬಾರದು. ಇನ್ನು ಕಾಲಕ್ಕೆ ತಕ್ಕಂತೆ ಸಮಾಜದಲ್ಲಾಗುವ ಸಹಜ ಬದಲಾವಣೆಗೆ ಬರಹಗಾರನೇ ಅಪ್‍ಡೇಟ್ ಆಗದಿದ್ದರೆ ಸಮೂಹದ ಪಾಡೇನು?

ಬದುಕುವ ಕಲೆಯನ್ನು ಉತ್ತಮವಾಗಿ ರೂಢಿಸಿಕೊಳ್ಳುವುದು ಹೇಗೆ?

ಭಯ, ಮೂಢನಂಬಿಕೆ, ದುಃಖ ಇವಕ್ಕೆಲ್ಲ ಕಾರಣ ಅಜ್ಞಾನ. ಓದು ಜ್ಞಾನದ ಬೆಳಕನ್ನು ನೀಡುತ್ತದೆ. ನಾವು ಏನಾದರೂ ಆಗಬೇಕೆಂದು ಓದುವುದಕ್ಕಿಂತ ಸಾಮಾನ್ಯ ಜ್ಞಾನಕ್ಕಾಗಿಯೂ ಓದು ಬೇಕು, ಅದು ಸ್ವತಂತ್ರವಾಗಿ ಯೋಚಿಸುವ ಮತ್ತು ಬದುಕುವ ಕಲೆಯನ್ನು ಕಲಿಸುತ್ತದೆ. ಸಾಹಿತ್ಯ ಸಂಗೀತ ನೃತ್ಯ ಚಿತ್ರಕಲೆ ನಟನೆ ಕ್ರೀಡೆ ನಿರ್ದೇಶನ ಛಾಯಾಚಿತ್ರ ಚಾರಣ ಇವೆಲ್ಲ ನಮ್ಮ ವ್ಯಕ್ತಿತ್ವವನ್ನು ಬೆಳೆಸುತ್ತದೆ. ಕಲೆಯನ್ನು ಆಸ್ವಾದಿಸುವ ಸಹೃದಯತೆ ಕೂಡ ಒಂದು ಕಲೆ. ನಾವು ಯಾವುದಾದರೊಂದು ಕಲೆಯ ಕೈಯನ್ನು ಹಿಡಿದು ನಡೆಯುತ್ತಿದ್ದರೆ, ನಮ್ಮ ಬದುಕಿನ ಆತ್ಯಂತಿಕ ವಿಷಾದದ ಗಳಿಗೆಯಲ್ಲಿ ಕಲೆಯೇ ನಮ್ಮನ್ನು ಮೇಲೆತ್ತುತ್ತದೆ. ಅಂತೆಯೇ ಆಡುವ ತುಸು ಮಾತಿನಿಂದ ಮಾನಸಿಕ ಆರೋಗ್ಯ ಹಾಗೂ ತಿನ್ನುವ ತುಸು ಆಹಾರದಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮಹತ್ವದ್ದು.

ನಿಮ್ಮ ದಾಂಪತ್ಯ ಜೀವನದ ಬಗ್ಗೆ ಹೇಳುವಿರಾ?

ನಮ್ಮದು ತೆರೆದ ಪುಸ್ತಕದಂಥ ಬದುಕು. ನಾವು ಪರಸ್ಪರ ಸ್ನೇಹಿತರಂತಿದ್ದೇವೆ. ಗಂಡ ಎಂಬ ಮಾತ್ರಕ್ಕೆ ನಾನೆಂದೂ ಅವನನ್ನು ಬಹುವಚನದಲ್ಲಿ ಸಂಬೋಧಿಸಿದ್ದಿಲ್ಲ. ಸಂಬಂಧದಲ್ಲಿ ಸದಾ ಒಂದು ಸ್ಪೇಸ್ ಕಾಯ್ದುಕೊಳ್ಳುತ್ತೇವೆ. ಹಲವು ಕೌಟುಂಬಿಕ ಜವಾಬ್ದಾರಿಯೊಳಗೂ ಯೋಚನೆಗಳು ಘರ್ಷಣೆಯಾಗದಂತೆ ಸ್ವಾತಂತ್ರ್ಯದ ಅರಿವನ್ನು ಕಾಯ್ದುಕೊಂಡಿದ್ದೇವೆ. ಹಾಗೆ ನೋಡಿದರೆ ನಾನೇ ತುಸು ನೇರ ನಿಷ್ಠುರ. ಈ ನಿಟ್ಟಿನಲ್ಲಿ ‘ದಾಂಪತ್ಯ ನಿಷ್ಠೆ- ಪರಿಕಲ್ಪನೆ ಬದಲಾಗುತ್ತಿದೆಯೇ?’ ಎಂಬ ಪುಸ್ತಕವನ್ನು ಇಬ್ಬರೂ ಸೇರಿ ಈಗಾಗಲೇ ಸಂಪಾದಿಸಿದ್ದೇವೆ. ಇಲ್ಲಿ 44 ಜನ ಲೇಖಕರು ದಾಂಪತ್ಯದ ಅನೇಕ ಮಜಲುಗಳ ಕುರಿತು ಬರೆದಿದ್ದಾರೆ. ಈ ಕೃತಿಯ ಪ್ರಸ್ತಾವನೆಯಲ್ಲಿ ದಾಂಪತ್ಯ ಬಗೆಗಿನ ಸೂಕ್ಷ್ಮತೆಗಳನ್ನು ಸುದೀರ್ಘವಾಗಿ ಬರೆದಿದ್ದೇನೆ.

6 Comments

 1. Saroja
  March 11, 2017
 2. M S Krishna murthy
  March 7, 2017
 3. ಅವಿಜ್ಞಾನಿ
  March 6, 2017
  • Anonymous
   March 7, 2017
 4. Anonymous
  March 6, 2017
  • Anonymous
   March 6, 2017

Add Comment

Leave a Reply