Quantcast

ವಿಜಯನಾಥ ಶೆಣೈ ಎಂಬ ‘ಸಿರಿವಂತ’

ಕಾರ್ಕಳದ ಎರ್ಲಪಾಡಿಯಲ್ಲಿ ಮೊನ್ನೆ ಡಿಸೆಂಬರಿನಲ್ಲಿ ತೀರಾ ಒಳನಾಡಿನ ನಿರ್ಜನ ಪ್ರದೇಶದಲ್ಲಿ ಗೆಳೆಯರೊಂದಿಗೆ ಸ್ವರ್ಣೆಯ ವೈಭವವನ್ನು ಸವಿಯುತ್ತಾ…

ಕಾರ್ಕಳದ ಎರ್ಲಪಾಡಿಯಲ್ಲಿ ಮೊನ್ನೆ ಡಿಸೆಂಬರಿನಲ್ಲಿ ತೀರಾ ಒಳನಾಡಿನ ನಿರ್ಜನ ಪ್ರದೇಶದಲ್ಲಿ ಗೆಳೆಯರೊಂದಿಗೆ ಸ್ವರ್ಣೆಯ ವೈಭವವನ್ನು ಸವಿಯುತ್ತಾ…

ಕರಾವಳಿಯ ಇಂಚಿಂಚೂ ತಿರುಗಾಡಿ, ಬಳಿಕ ಕೊನೆಯ ದಿನಗಳಲ್ಲಿ ಹೆರಿಟೇಜ್ ವಿಲೇಜಿನ ಕುಂಜೂರು ಚೌಕಿ ಮನೆಯ ಜಗಲಿಯಲ್ಲಿ ಕುಳಿತು, ಕರ್ನಾಟಕ ಕರಾವಳಿಯ ಸಾಂಸ್ಕ್ರತಿಕ ಲೋಕಕ್ಕೆ ದೇಶದೆಲ್ಲೆಡೆಯ ಸಾಂಸ್ಕ್ರತಿಕ ಜಗತ್ತಿನಿಂದ ಸೇತುವೆಗಳನ್ನು ನಿರ್ಮಿಸಿದ ‘ಹಸ್ತಶಿಲ್ಪಿ’ ವಿಜಯನಾಥ ಶೆಣೈ (03-06-1934 ರಿಂದ 09-03-2017) ಬೆಸೆದಿರುವ ಸೇತುವೆಗಳಾದರೂ ಎಂತಹವು!

1961ರಲ್ಲಿ ಆರಂಭಿಸಿದ ಸಂಗೀತ ಸಭಾ ಮೂಲಕ ದೇಶದ ಎಲ್ಲೆಡೆಯಿಂದ ಪ್ರಮುಖ ಸಂಗೀತಗಾರರು,ನ್ರತ್ಯ ಪಟುಗಳು, ಸಾಂಸ್ಕ್ರತಿಕ ರಂಗದ ಹಲವು ಮಂದಿಯನ್ನು ಉಡುಪಿ ಕಾಣುವಂತಾದುದು, ಆಸ್ವಾದಿಸುವಂತಾದುದು ಶೆಣೈ ಅವರ ಬಹುತೇಕ ಏಕಾಂಗಿ ಸಾಹಸ.

ಬ್ಯಾಂಕ್ ನೌಕರಿಯಲ್ಲಿದ್ದ ಅವರು ತಮ್ಮ ವಾಸಕ್ಕೆಂದು 1990ರಲ್ಲಿ ಕಟ್ಟಿಕೊಂಡ ಅವರ ಮನೆ ‘ಹಸ್ತಶಿಲ್ಪ’ ಅದರ ವಾಸ್ತುಶಿಲ್ಪ ವೈಶಿಷ್ಟ್ಯಗಳಿಗಾಗಿ ಜಗದಗಲಕ್ಕೂ ಹೆಸರು ಮಾಡಿತು. ಮುಂದೆ ಮಣ್ಣುಪಳ್ಳದ ತಟದಲ್ಲಿ ಮಣಿಪಾಲ ಉದ್ಯಮ ಬಳಗದ ಸಹಕಾರದೊಂದಿಗೆ ಟ್ರಸ್ಟ್ ರಚಿಸಿ ರೂಪಿಸಿದ ಅವರ ಕನಸಿನ ಹೆರಿಟೇಜ್ ವಿಲೇಜ್, ಈವತ್ತು ದೇಶದ ಅನನ್ಯ ಮ್ಯೂಸಿಯಂ ಅನ್ನಿಸಿಕೊಂಡಿದೆ.

ಇಲ್ಲಿರುವ ಮೂರು ಪುಸ್ತಕಗಳು “ಪತ್ರ ವಾತ್ಸಲ್ಯ”, “ಪತ್ರಾವಳಿ” ಮತ್ತು “ಪತ್ರ ಸಂವಾದ” – ಶೆಣೈ ಅವರು ದೇಶದ ಸಾಂಸ್ಕ್ರತಿಕ ರಂಗದ ದಿಗ್ಗಜರ ಜೊತೆ ವ್ಯವಹರಿಸಿದ ದಾಖಲೆಗಳ ಅಮೂಲ್ಯ ಸಂಗ್ರಹ; ಕರಾವಳಿಯ ಇತಿಹಾಸದ ದ್ರಷ್ಟಿಯಿಂದ ಅಮೂಲ್ಯ ಆಕರಗಳೂ ಹೌದು. ಅದರ ಆಯ್ದ ಕೆಲವೇ ಕೆಲವು ಹಸ್ತ ಲಿಖಿತ ಪತ್ರ ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ.

ವೈಯಕ್ತಿಕವಾಗಿ ನನಗವರ ಮೊದಲ ಸಂಪರ್ಕ 1987-88ರ ಸುಮಾರಿಗೆ ಅವರ ಹಸ್ತಶಿಲ್ಪ ನಿರ್ಮಾಣ ಆಗುತ್ತಿದ್ದಾಗ. ನಾನು ಕಲಿಯುತ್ತಿದ್ದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ದಿ| ಶೇಖರ ಇಡ್ಯರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಶೆಣೈ ಅವರ ನಿರ್ಮಾಣ ಹಂತದ ಮನೆ ನೋಡಲು ಹೋಗಿದ್ದೆವು. ಅದೂ ಶೇಖರ ಇಡ್ಯರ ‘ಪುಸ್ತಕ ಪ್ರಪಂಚ’ ಸಂಚಾರಿ ಪುಸ್ತಕ ಮಳಿಗೆಯಲ್ಲಿ ಅವರ ಸಹಾಯಕ್ಕೆಂದು ಉಡುಪಿಗೆ ಹೋಗಿದ್ದವರು ಮಣಿಪಾಲಕ್ಕೆ ಹೋಗಿ ಹಸ್ತಶಿಲ್ಪ ನೋಡಿ ಬಂದದ್ದು ನೆನಪು.

2003ರಲ್ಲಿ ತಮ್ಮ ಕಲಾವಿದ ಎಲ್ ಎನ್ ತಲ್ಲೂರುಗೆ ದಿಲ್ಲಿಯಲ್ಲಿ ಸಂಸ್ಕ್ರತಿ ಫೌಂಡೇಷನ್ನಿನ ‘ಸಂಸ್ಕ್ರತಿ ಅವಾರ್ಡ್’ ಬಂದಿತ್ತು. ಕರಾವಳಿಯಿಂದ ಹೊರಗೇ ಇದ್ದು, ಸ್ಥಳೀಯವಾಗಿ ಯಾರಿಗೂ ಗೊತ್ತಿರದಿದ್ದ ತಲ್ಲೂರು ಬಗ್ಗೆ ಸಂಸ್ಕ್ರತಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ, INTACH ಅಧ್ಯಕ್ಷರೂ ಆಗಿದ್ದ ಒ. ಪಿ. ಜೈನ್ ಅವರು ಒಮ್ಮೆ ಮಣಿಪಾಲಕ್ಕೆ ಬಂದಾಗ ಶೆಣೈ ಅವರ ಕಿವಿಗೆ ಹಾಕಿ ಹೋಗಿದ್ದರು. ಆ ಬಳಿಕ ಒಮ್ಮೆ ಕಲಾವಿದ ತಲ್ಲೂರು ಹೆರಿಟೇಜ್ ವಿಲೇಜ್ ನೋಡಲು ಹೋಗಿದ್ದಾಗ ಶೆಣೈ ಅವರ ಭೇಟಿ ಆಯಿತು. ಅಲ್ಲಿಂದ ಮುಂದೆ, ನನ್ನ ತಮ್ಮನ ಜೊತೆ ನಿಕಟ ಸಂಪರ್ಕದಲ್ಲಿದ್ದ ಶೆಣೈ ಅವರು ಹಲವು ಬಾರಿ ಕೋಟೇಶ್ವರದಲ್ಲಿರುವ ತಮ್ಮನ ಸ್ಟುಡಿಯೋಕ್ಕೂ ಭೇಟಿ ನೀಡಿದ್ದರು; ಆರು ವರ್ಷಗಳ ಹಿಂದೆ ಉಡುಪಿಯಲ್ಲಿ ನನ್ನ ಹೊಸ ಮನೆ ನಿರ್ಮಾಣದ ವೇಳೆ ಭೇಟಿಯೂ ನೀಡಿ ಸಲಹೆಗಳನ್ನು ಕೊಟ್ಟಿದ್ದರು.

ಕರಾವಳಿಯ ಕುರಿತಾದ ಸಾಂಸ್ಕ್ರತಿಕ ಒಳನೋಟಗಳನ್ನು ಸಕಾರಣ ನೀಡಬಲ್ಲ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಅವರು ಪ್ರಮುಖರು. ಶಣೈ ಅವರ ಯುಗಾಂತ್ಯದ ಜೊತೆಗೆ, ಅವರ ಸಂಪೂರ್ಣ ವ್ಯಕ್ತಿಗತ ಶ್ರಮ ಆಧರಿಸಿ ನಿರ್ಮಾಣಗೊಂಡಿರುವ ‘ಹೆರಿಟೇಜ್ ವಿಲೇಜ್’ ಮತ್ತದರ ಆಡಳಿತ ಟ್ರಸ್ಟ್ ಈಗ ಮಣಿಪಾಲ ವ್ಯವಹಾರ ಬಳಗದ ಸುಪರ್ಧಿಗೆ ಬರಲಿದೆ. ಶೆಣೈ ಅವರ ಶ್ರಮದ ಹಿಂದಿನ ಮೂಲ ಉದ್ದೇಶವು ಈಗ ಹಾದಿ ತಪ್ಪದೇ ಮೂಲ ಹಾದಿಯಲ್ಲೇ ಮುಂದುವರಿಯುವಂತಾದರೆ ಅದು ಕರಾವಳಿಯು ಶೆಣೈ ಅವರಿಗೆ ಸಲ್ಲಿಸುವ ಸಾರ್ಥಕ ಗೌರವ ಆಗಲಿದೆ.

ಮುಂಬಯಿಯ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂನ ಸಮಕಾಲೀನ ಕಲಾ ವಿಭಾಗದ ಮುಖ್ಯಸ್ಥರಾಗಿದ್ದ ದೇಶದ ಹಿರಿಯ ಕಲಾವಿದರಲ್ಲೊಬ್ಬರಾದ ದಿಲೀಪ್ ರಾನಡೆ ಅವರ ಜೊತೆ.

ಮುಂಬಯಿಯ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂನ ಸಮಕಾಲೀನ ಕಲಾ ವಿಭಾಗದ ಮುಖ್ಯಸ್ಥರಾಗಿದ್ದ ದೇಶದ ಹಿರಿಯ ಕಲಾವಿದರಲ್ಲೊಬ್ಬರಾದ ದಿಲೀಪ್ ರಾನಡೆ ಅವರ ಜೊತೆ.

 

ಕೋಟೇಶ್ವರದಲ್ಲಿ ತಲ್ಲೂರು ಎಲ್ ಎನ್ ಅವರ ಸ್ಟುಡಿಯೋಗೆ ಕಳೆದ (2016) ಜನವರಿಯಲ್ಲಿ ಭೇಟಿ ನೀಡಿದಾಗ, ಪಕ್ಷಿ ಛಾಯಾಗ್ರಾಹಕ ಸದಾನಂದ ತಲ್ಲೂರು ಜೊತೆ.

ಕೋಟೇಶ್ವರದಲ್ಲಿ ತಲ್ಲೂರು ಎಲ್ ಎನ್ ಅವರ ಸ್ಟುಡಿಯೋಗೆ ಕಳೆದ (2016) ಜನವರಿಯಲ್ಲಿ ಭೇಟಿ ನೀಡಿದಾಗ, ಪಕ್ಷಿ ಛಾಯಾಗ್ರಾಹಕ ಸದಾನಂದ ತಲ್ಲೂರು ಜೊತೆ.

ಕುಂಜೂರು ಚೌಕಿ ಮನೆಗೆ ಭೇಟಿ ನೀಡಿದ, ಆ ಮನೆಯ ಕುಟುಂಬಿಕರ ಜೊತೆ.

ಕುಂಜೂರು ಚೌಕಿ ಮನೆಗೆ ಭೇಟಿ ನೀಡಿದ, ಆ ಮನೆಯ ಕುಟುಂಬಿಕರ ಜೊತೆ.

2 Comments

  1. Kathyayini Kunjibettu
    March 10, 2017
  2. Kathyayini
    March 10, 2017

Add Comment

Leave a Reply