Quantcast

ಕೆಸ್ರು ಗದ್ದೆಲಿ ಆದ ಅವಮಾನನೆ ದೊಡ್ದಾಯ್ತು-

ಸಂಬಂಧ

ಹಿಂಗೆ ನಮ್ಮ ಮನೇಲಿ ದೊಡ್ಡ ಅನ್ನೊ ಹೆಸರಿನ ಒಬ್ಬ ಇದ್ದ. ಕೋರ ಹುಡುಗ ಆಗಿದ್ದಾಗಲೇ ಅವನನ್ತಂದು ಅಜ್ಜಯ್ಯ ನಮ್ಮನಿಗ್ ಹಾಕ್ಕೊಂಡಿದ್ರು. ಆರಂಭ ಮಾಡಕೆ ಅಂತಲೇ ಇಂತೋರು… ಯಾರ ಸಿಕ್ಕುದ್ರು ಕರ್ಕಂಬರರು. ದಿಕ್ಕುದೆಸೆ ಇಲ್ದೋರು ಇಂಗಬಂದು, ಈ ಊರಲ್ಲೇ ಉಳ್ದು ಒಂದು ಕುಳ ಆಗಿ ನೆಲೆ ನಿಲ್ಲರು. ಅಂಗೆ ಇವ್ನೂ ಬೆಳಿತಬೆಳಿತ ದೊಡ್ಡನಾದ…. ಊರಿನ ಪಡ್ಡೆ ಹುಡುಗ್ರೆಲ್ಲರೂವೆ ಇವ್ನಿಗೆ ಜೊತೆ ಆದ್ರು.

ಸ್ನೇಹಿತ್ರ ಜತಿಗೋಗಿ ಹಳೆ ಮರಸಿನ ಕೇರೀಲಿ ಆಗಾಗ ರಾತ್ರಿ ತಂಗೋನು. ವಯಸ್ಸಿನ ಹುಡುಗ್ರು ನಗೆಚಾಟಿಕೆ ಮಾಡ್ಕೊಂಡು, ಗದ್ದೆಗರ್ಜಿ ಗೇಯ್ಕೊಂಡು, ಕೋಲಾಟ ಆಡ್ಕಂಡು, ಜಗಲಿ ಮೇಲೆ ಕುಷಾಲ ಮಾಡ್ಕಂಡು,ಇರರು. ಏನ್ ಮಾಡುದ್ರು ಹರೇದ ಹುಡುಗರ ಮೈ ಸೊಕ್ಕು ತಣಗಾಗದು ಕಷ್ಟವೇಯ ಅನ್ನಿ.

ಹರೇದ ಸೊಕ್ಕು ಇಳಿಸೋಕೆ ಹೆಣ್ಣು ಅನ್ನೊ ಜೀವ ಇಲ್ದಿದ್ರೆ…..ಕಷ್ಟವೇಯ. ಅಪ್ಪಾವ್ವ ಇರೋರು ಹೆಂಗೋ ತಮ್ಮ ಮಕ್ಳು ಕೈಯಿಗ್ ಬಂದೇಟ್ಗೆ,ಬೇರೆ ದಾರಿ ತುಳ್ದಾರು ಅಂತವ ಬಿರ್ರನೆ ಮಕ್ಳ ಮದ್ವೆ ಮಾಡುಬುಡ್ತಾರೆ. ತಬ್ಲಿ ಮಕ್ಳಿಗೆ ಸಲ್ಪ… ಹಿಂದು ಮುಂದು ಆಗೋಯ್ತದೆ? ಇಂಗೆಯ, ಈ ದೊಡ್ಡನ ಕಥೆನೂವೆ….

ದೊಡ್ಡ ಏನ್ ಮಾಡದ?ಬೆಳಿಗೆಯಿಂದ ಸಾಯಂಕಾಲದವರೆಗೂ ಕತ್ತೆ ಗೇದಂಗೆ ಗೇದೋನು ಕತ್ಲಾತಿದ್ದಂಗೆ, ಅವ್ರಿವ್ರ ಜೊತೆ ಸೇರ್ಕಂಡು ಹೆಂಡ ಕುಡ್ದ. ಬೀಡಿ ಸೇದ್ದ. ಉಕ್ಕಿದ ವಯಸ್ಸಿನ ಮದ ಕೆಳಗಿಳಿಯಾಕೆ ಬೇಕಾದ್ದೆಲ್ಲನೂ ಜೀವದ ಗೆಣೆಕಾರರು ಹೇಳಕೊಟ್ಟಂಗೆ ಮಾಡೆ ಮಾಡ್ದ. ನೋಡ್ತನೊಡ್ತಲೆ ಹುಡುಗ ಕೈತಪ್ಪಿ ಹೋಗ್ತವನೆ ಅಂತ ನಮ್ಮ ಅಜ್ಜಯ್ಯಂಗೆ ವಾಸನೆ ಹೊಡಿತು. ಸರಿ, ಮನೇಲಿ ಜೀತಕ್ಕಿದ್ದ ಕುಳ್ಳೀರನ್ನ ಕರ್ದಿದ್ದೆಯ,

“ನಿನ್ನ ಮಗ್ಳು ಸಣ್ಣಮ್ಮಿ ಕೊಟ್ಟು ಇವಣಿಗೆ ಮದ್ವೆ ಮಾಡ್ಲಾ ” ಅಂತು. ಆಗಿನ ಕಾಲಕ್ಕೆ ಮದ್ವೆ ಗಂಡಿಗೆ ರಟ್ಟೆ ಬಲ ಇದ್ರೆ ಸಾಕಾಗ್ತಿತ್ತು. ಕುಳ್ಳೀರನುವೆ ಆಯ್ತು ಅಂತ ಒಪ್ಪಿಗೆ ಕೊಟ್ಟೇಬಿಟ್ಟ. ಅವನ ಹೆಂಡ್ತಿ
“ಈಗಿನ್ನು ಹೆಣ್ಣಾಗಿ ಆರು ತಿಂಗ್ಳಾಗ್ನಿಲ್ಲ. ಮಾತ ಕೊಟ್ಟ್ ಬಂದಿದಿಯಲ್ಲ. ಆ ಹುಡ್ಗಿ ಉಸುರು ಹುಯ್ಕೊಳ್ಳೋದು ಬೇಡವಾ?” ಅಂದ್ಲು.ಇವ್ನು ತಿಳಿ ಹೇಳ್ದ.

“ನೋಡು, ನಮ್ಮನೆ ತಾವ್ಲೆ ಒಂದು ಗುಡ್ಲಾಕೊಡಾನ. ಇರದು ಒಂದೆ ಕುಡಿ. ಅದೂವೆ ಎಣ್ಮಗ. ಮಗಳು ಎಂಗೂ… ಕಣ್ಮುಂದೆ ಸಂಸಾರ ಮಾಡ್ತಳೆ. ನಿಧಾನಕ್ಕೆ ಎಲ್ಲನೂವೆ ಅವಳಿಗೆ ಕಲಸ್ಕಳೆ. ಎಲ್ಲದಕ್ಕಿಂತ ಎಚ್ಚಾಗಿ, ಕಾಸುಕರಿಮಣಿ ಇಲ್ಲದಂಗೆ ಹೂವೆತ್ತದಂಗೆ ಮದ್ವೆ ಆಗೋಯ್ತಿತೆ ನೋಡು. ಗೌಡ್ರಗೂ ಎಂಗೋ ಅವನೂವೆ ಮನೆ ಮಗನಂಗವನೆ. ದಿಕ್ಕು ದೆಸೆ ಇಲ್ದಿರೊ ಮುಕ್ಕ ಅಂತೇಳಿ ನಿಂತಕಂಡು ನಮಗೆ ಖರ್ಚಿಲ್ದಂಗೆ…. ಮದ್ವೆ ಮಾಡಕತಾರೆ. ಯೋಸ್ನೆ ಮಾಡ ನೋಡು. ಈಗಲೇಯ ನಿನ್ನ ಕಾಯ್ಲೆ ಕಸಾಲೆಗೆ, ಮಗಳ ಒಸಗೆಗೆ ಅಮ್ತ, ನಾವು ಮಾಡಿರೊ ಬಡ್ಡಿ
ಕರಿಯಣ್ಣನ ಸಾಲ ತೀರ್ಸಿದ್ರೆ ಸಾಕಾಗೀತೆ “. ಅಂತ ಮಾತು ಮುಗುಸ್ದ.

ಅವ್ಳು ನಾಕಾರು ದಿನ ಅಂಗೇ ಮನಸಿನ ಒಳಗಡೆಲೆ ವಿಸ್ಯಾನ ಅಗ್ದು ನುಂಗಿ, ಆಯ್ತು ಇನ್ನ….ಮಾಡ್ಕೊಟ್ಬಿಡನ ಅಂತೇಳಿ ಕಣ್ಣಿರ ಕಚ್ಕೊಂದು ಒಂದು ತೀರ್ಮಾನಕ್ಕೆ ಬಂದ್ಲು. ಆದ್ರೆ ಮಗಳು ಸಣ್ಣಮ್ಮಿಗೆ ಗೊತ್ತಾಗ್ತಿದ್ದಂಗೆಯ

“ಅವ್ವಾ, ನಾ ಆಗುಕುಲ್ಲ ಅವನ್ನ. ಥೂ! ಪೆರಪೆರಕ್ಲನಂಗವ್ನೆ” ಅಂತಿದ್ದಂಗೆಯ ಮಗಳ ಗದರುಕಂದ್ಲು.
“ಕುಳ್ಳಕವ್ನೆ ಅನ್ನೋದ ಬುಟ್ರೆ ಏನಾಗವ್ನೆ? ನಿಂಗಿಂತಲೂ ಬೆಳ್ಳಗೆ…. ಮೂಗು ಮೂತಿ ತಿದ್ದದಂಗವ್ನೆ. ಹಿಂದಿಲ್ಲ, ಮುಂದಿಲ್ಲ. ನಿನ್ನ ಚೆನಾಗಿ ನೊಡ್ಕತದೆ, ಸುಮ್ಕಿರು” ಅಂದ್ಲು.

ಹೆಣ್ಣ ಕೊಡ್ತಿನಿ ಅಂತವ, ಅಳಿಮಯ್ಯನ ಕಂಡ್ರೆ ಆಗಲೇ ಒಂದು ತೂಕ ಅವಳಿಗೆ ಮನಸು ತುಂಬೋ…ಗಿತ್ತು. ಸಣ್ಣಮ್ಮಿ, ನೀವು ಏನಾರ ಮಾಡ್ಕೊಳ್ಳಿ ಅಂತ ಗೆಣಕಾತಿ ಕೂಕಿಗೆ “ಓ” ಅಂತವ ಬಿದಿರಿನ ತಟ್ಟೆ ಹಿಡ್ಕಂಡು ಹಿತ್ಲಿಗೆ ಹೊಯ್ತು. ಕೊಣ್ಮಾವಿನ ಮರದ ಉದ್ದುಕ್ಲು ತಬ್ಬಕೊಂಡಿರೊ ಸೂಜ್ಮಲ್ಲಿಗೆ ಅಂಬಿನ ಒಂದೊಂದುಸ್ರುಗೂ… ಆಕಾಶ್ದಾಗಿರೊ ಬಿಳೆಚುಕ್ಕಿ ಅನ್ನೋವು ಬಂದು ಗಿಡದ
ಮೇಲೆ ಚೆಲ್ಲಾಡಿ ಹೋಗಿದ್ವು. ಮೈ ನೆರೆದ ಹೂವಿನ ಗಂಧ ಅನ್ನೋದು ಗಾಳೀಲಿ ಹಂಗೇಯ ಮೂಗು ಮೈನೆಲ್ಲಾ ಇಟ್ಟಾಡುಸ್ತಿತ್ತು.

ಇಕ್ಕಿದ ಲಂಗದಲ್ಲಿ ಹೂವ ನೋಯ್ಸದಂಗೆ ಗೆಣಕಾತೀರಿಬ್ರು ಹೂ ಕುಯ್ದು ತುಂಬ್ಕೋತಾಲೆ, ಮದ್ವೆ ಮಾಡ್ತಾರಂತೆ ಕಣೆ ಅಂತ ಗುಟ್ಟಲ್ಲಿ ಮಾತಾಡ್ಕಂಡು ಕಿಸಕಿಸಾಂತ ನೆಗಾಡ್ತಾ ಅರಳಿದ ಸೂಜಿ ಮಲ್ಲಿಗೆಗೆ ಸಾಟಿ ಹೊಡಿತಿದ್ರು. ಮರ ಇಳದು ಬಂದವರೆ ಸಗಣಿ ಹಾಕಿ ಸಾರ್ಸಿದ್ದ ಹಟ್ಟಿ ಬಾಗ್ಲಲ್ಲಿ ಕುಂತ್ಕಂಡು… ಹೂವಿನ ದಂಡೆ ಜತಿಗೆ ಕನಸಿನ ರಂಗನ್ನೂ ಪೋಣಸಿ ತಲೆಗೆ ಮುಡ್ಕಂಡ್ವು ಎರಡೂವೆ.

ಇದನ್ನು ನೋಡಿ ಅಂಗಳದಲ್ಲಿ ಹಾಕಿದ್ದ ಹೂವಿನ ರಂಗೋ….ಲಿ ಅನ್ನೋದು ನಾಳೆ ಸಣ್ಣಮ್ಮಿ, ಎರಡು ಬೆಟ್ಟು ಸಂದೀ….ಲಿ ಬಿಡೋ ಇನ್ನೊಂದು ಹೊಸ ಚಿತ್ತಾರದ ಕನಸ ನೇಯ್ತಲೇಯ….. ಅಂಬಾರಕ್ಕೆ ಕಣ್ಣ ನೆಟ್ಟು…. ಯೋಸ್ನೇಲಿ ಮುಳುಗೋ….ಯ್ತು.

 

ಹೊಸ ಕನಸ… ಕಣ್ಣೊಳಗೆ ಅರಳುಸ್ತಾ ಸಣ್ಣಮ್ಮಿ ಅನ್ನೋ ಅರೆ ಮೊಗ್ಗಾದ ಹುಡ್ಗಿ ಗಂಡನ ಹೆಸ್ರು ಕೇಳ್ದಾಗ, ತಲೆ ಬಗ್ಸಿ ನಾಚಿ ಉಸುರುಕಟ್ಟಿ “ದೊಡ್ಡಬಾವಕ್ಕು” ಅಂತ ಹೇಳಿದ್ದೆಯ ಮುಖ ಅರಳ್ಸೋಳು. ದೊಡ್ದ, ಮೀಸೆ ಮರೇಲೆ ಧೀರ ಗಂಡಸಿನ್ನಂಗೆ ನಗೋನು. ಬಾವಿಕಟ್ಟೆ ಪಕ್ಕದಲ್ಲಿ ಹೊಸದಾಗಿ ಹಾಕೊಟ್ಟ ಗುಡಿಸಲ ಹೊಸಲನ್ನ…. ದಾಟಿ ಬರೊವಾಗ ಮದುವೆ ಹೆಣ್ಣು ಬೆಳ್ಳಿ ಉಂಗ್ರ ತೊಟ್ಟು, ಗೆಜ್ಜೆ ಕಾಲ್ಸರ ಗಿಲಿಗುಡೋ.. ಹಂಗೆ ತುಂಬಿದ ಸೇರ ಒದ್ದು… ವಳಗೆ ಬಂದು ಒಲೆ ಹಚ್ಚಿದ್ಲು. ಇದುವರ್ಗೂ ಕಂಡೋರ ಮನೇಲಿ ಮಲಗಿ ಕಾಲ ಕಳಿತಿದ್ದ ಗಂಡು ಹೆಂಡ್ತಿ ಮಗ್ಗಲಿಗೆ ಬಂದ. ಅವಳ ಕಣ್ಣು ಅನ್ನೋವು ಹಚ್ಚಿಟ್ಟ ದೀಪ ಇದ್ದಂಗೆ ಇದ್ವು ಅವನ ಪಾಲಿಗೆ. ಇವ್ಳು ಮಾತ್ರ…. ಅವಳವ್ವನ್ನ ಮಗ್ಲಲ್ಲಿ ಮಲಗಾಕೆ ಈಗ್ಲೂ ಆಸೆ ಪಡೋಳು.

ಅಂತೂ ವರ್ಷ ತುಂಬೋದರೊಳಗೆ ಜೋಲಿಲಿ…. ಜೋಗಳೆ ಕೇಳಿದ ದಿನ ಅವನಿಗೆ ಸಂಜೆ ಮುಂದೆ ಬಾನಿನ ತುಂಬಲೂ ರೆಕ್ಕೆ ಬಡೀತಾ ಗೂಡ ನೆನಸ್ಕಂದು…. ಒಂದೇ ಉಸ್ರುಗೆ ಹಾರಿ ಹೋಗೋ ಹಕ್ಕಿಗಳ ದಿಕ್ಕಿನ ಆಸೆ ತಿಳಿದೋಯ್ತು. ಇಂಗೆ ಅಬ್ಬೇಪಾರಿ ಹುಡುಗನ್ಗು ಬದುಕು ಅನ್ನದು ಹೂಮಳೇಲಿ ಭೂಮಾಕಾಶದ ಉದ್ದಕ್ಕೂ ಚಾಚ್ಕೋಂದು ನಿಂತ ಮಳೆಬಿಲ್ಲಂಗೆ ಆತುಕೊಂಡು
ನಿಂತ್ಕಂತು.

ಇಬ್ರೂ ಭೂಮ್ತಾಯ ಒಡಲಲ್ಲಿ ಆಡೋ ಎಳೆಹುಲ್ಲೆ ಜೋಡಿಯಂಗೆ ಕಾಣೋರು. ಚಿಗರೆ ಮೇಯೊ ಹುಲ್ಲಂಗೆ ಬದುಕು ಅನ್ನೋದು ಪುಲಗರಿತಿತ್ತು. ಹಿಂಗಿರೊವಾಗ್ಲೆ! ಮಾಡ್ತಿನಿ ಇರು ನಿಂಗೆ… ಅಂತ ಕಾಯ್ಕಂದಿದ್ದ ಆಪತ್ತು, ಸ್ನೇಹಿತರ ರೂಪದಲ್ಲಿ ಒದ್ಕಂಡು ಬಂತು.

ಒಂದಿನ ಮಗಿಗೆ ಮುತ್ತ ಕೊಟ್ಟು ಅದರ ಅವ್ವನ ಸೊಂಟ ಚಿವುಟಿ ಕೆಲ್ಸಕ್ಕೆಂತ ದೊಡ್ಡ ಹೋದ. ಎಲ್ಲರೂವೆ ಆರೇಳು ಆರು ಕಟ್ಕಂಡು ಸಾಲ ಹಿಡ್ದು ಸಾಬಿ ಗದ್ದೆ ಅನ್ನೊ ನೀರ ಗದ್ದೆ ಉಳ್ತಿದ್ರು. ಮಾತಮಾತಿಗೆ ಎಲ್ರು ಮಾತಾಡ್ತ ಇರೊವಾಗ, ಒಬ್ಬಂದ
“ದೊಡ್ಡ. ಎಂಗೋ ಮಗ ಮನೆ ಎಲ್ಲನು ಮಾಡಕಂದ, ನೋಡು. ” ಅಂತ ರೇಗ್ಸದ.

ಅದ್ರಲ್ಲಿ ಎತ್ತರವಾಗಿದ್ದ ತಮ್ಮಣ್ಣಿ ಇನ್ನೊಸಿ ಮುಂದರ್ದು ನಾಲಿಗೆಯ ಹರೆ ಬಿಟ್ಟಬುಟ್ಟ.
“ಅವ್ನಿರೋದೆ ನಾಕಡಿ. ಅವ್ನ ಚಡ್ಡಿ ಒಳಗ್ಲದು ಎರಡಡಿ ಈತಂತೆ ಕಣಲಾ, ಅದಕ್ಕೆ…ಅವ್ನಿಗೆ ಇಬ್ರಾಳು ಬೇಕು. ಇತ್ಲಾಗಿನ್ ಕೇರಿಲಿ ಮೋತೆಯಂಗಿರೊ ಎಳೆ ಹುಡ್ಗಿ. ಅತ್ಲಾಗಿನ್ ಕೇರಿಲಿ ಗಿಳಿ ಕಚ್ಚಿರೊ ಮಾಗದ ಹಣ್ಣು. ದೆಸೆ ಅಂದ್ರೆ ಇದೆ ಕನಾ” ಅಂತಂದ.

ಕೇಳಿದ್ದೆಯ, ಇವನಿಗೆ ಮೈಮೂತೆಲ್ಲಾ ಉರದ್ಹೋಯ್ತು. ಇನ್ನೊಬ್ಬ ಕೇಳ್ದ.
“ನಿಜವೇನ್ಲಾ?” ಇವನಿಗೆ ಅತ್ತ ದರಿ, ಇತ್ತ ಪುಲಿ. ಮಾತಾಡ್ನಾರ! ಅರೆ ಹೊಡಿತನೇ ಇದ್ದ. ಆದ ಬೇಜಾರಿಗೆ ಎತ್ತಿಗೆ ಒಂದು ಬಾರುಸ್ದ. ಅದು ಮುಂದಕ್ಕೆ ಬಂದದ್ದ ನೋಡಿ, ಮುಂದಿನ ಆರ್ನನು ಗದರುಸ್ದ.

“ಯಾಕಲಾ? ಮೈ ತಾತಾ ಅಂತಯ್ತಾ? ನಿಂಗೆ ದೆಯ್ಯ ಹಿಡ್ದಯ್ತಾ? ನೆಟ್ಟಗ ಬಾ. ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ ಹಾಕ್ಬೇಡ ನೀನು. ನೀಲಿ ಮಗ್ಲಲ್ಲಿ ಮಲಗೆದ್ದು ಬಂದಂಗಲ್ಲ ಬೇಸಾಯ ಅಂದ್ರೆ” ಅಂದು ಅವ್ನು ಗದರಿದ್ದೇ ತಡ ಇವನ ಮೈ ಮೇಲೆ ನಿಜವಾಗ್ಲು ದೆಯ್ಯ ಬಂದಂಗಾಗೋಯ್ತು.

ಜೋರಾಗಿ, ದೊಡ್ಡ ಅನ್ನೋ ಹುಲ್ಲಾಳು ಕೂಗಾಡದ ಕಂಡು ಗದ್ದೆಲಿ ಮಳ್ಳಿ ಹಂಗೆ ಕುಂತು, ಹುಳ ಹುಪ್ಪಟ್ಟೆಯ ಪಟಕ್ಕನೆ ಬಾಯ್ಗೆ ಹಾಕತಿದ್ದ ಬೆಳ್ಳಕ್ಕಿದಂಡು ಅನ್ನೋವು, ಎದ್ದನೊ.. ಬಿದ್ದನೋ…. ಅನ್ನೋ ಹಂಗೆ ಪರಪರನೆ ಹಾ…ರೋದು. ಅಂಗೆ….. ಕೂಗಾಡ್ಬುಟ್ಟ.
“ನಾನು ಯಾರ ಮಗ್ಗಲಾಲಾರು ಮಲಿಕ್ಕೊಂಡು ಬತ್ತೀನಿ. ನನ್ನಿಷ್ಟ. ನೀವ್ ಯಾವೂರ ದೊಣ್ಣೆನಾಯಕರೊ ನನ್ನ ಕೇಳಕೆ” ಅಂದೇಟ್ಗೆ ಪಂಥ ಬಿದ್ದೋಯ್ತು. ಸ್ಣೇಹಿತ್ರು

 

“ನೀನು ಕಳ್ಳನಾಗನ ಹೆಂಡ್ತಿ ನೀಲಿ ಅನ್ನೋಳ ಪಕ್ಕಕ್ಕೋಗದೆ ಆದ್ರೆ, ತಗಂಬಾ ನೋಡನ ಏನಾದ್ರು ಗುರುತ.” ಅಂತ ಹೊಟ್ಟೆಯೊಳಗಿದ್ದ ಕಿಚ್ಚ ಹೊರಗೆ ಹಾಕುದ್ರು. ಸವಾಲ ಕೇಳುದ್ದೇಯ ಇವನು ಹಠಕ್ಕೆ ಬಿದ್ದ.
“ಇವ್ನ ಕೈಲಿ ಆಯ್ತದಾ? ಕೈಲಿ ಹರಿನಾರದನು” ಅನ್ನೋ ಮಾತು ಇವನ್ಗೆ ರಾತ್ರಿ ಹೊತ್ತು ನಿದ್ದೆ ಮಾಡಕ್ಕೆ ಬಿಡ್ಡನೆ ಹೋಯ್ತು.

ರಾತ್ರಿ ಅನ್ನೋದು ಮಾತ ಕಳಕಂದ ಹೊತ್ನಲ್ಲಿ, ಅವನ ಪಕ್ಕದಲ್ಲಿ ಮುಸುಗರಿತ ಮಲಗಿದ್ದ ಹಸು ಮಗಿಗಿಂತಲೂವೆ, ಅದರ ಬಾಯಿಗೆ ಮೊಲೆತೊಟ್ಟಿಟ್ಟು ಹಾಲಾಗಿ ಹರಿತಾ…ಇವನ ಮನಸು ಅನ್ನದ ತುಂಬಿ ಮೈಮರತು ಮಲಗಿರೋ ಹೆಂಡ್ತಿಗಿಂತಲೂವೆ, ಕೆಸ್ರು ಗದ್ದೆಲಿ ಆದ ಅವಮಾನನೆ ದೊಡ್ದಾಯ್ತು.

ದಿನಾ ಕಳ್ಳನಾಗನ ಮನೆಗೆ ಹೋಗಕೆ ಬರಾಕೆ ಮತ್ತೆ ಶುರು ಮಾಡ್ದ. ಹಳೆ ವಾಸನೆ ಅನ್ನೋದು ಮಳೆ ಬಿಟ್ಟರೂವೆ ಮರದ ಹನಿ ಬಿಡದೆ ಹೋದಂಗಾಯ್ತು….ನಾಗಿ ಒಂದಿನ, ಇವನ ಮಗ್ಗಲಲ್ಲಿ ನಶೇಲಿ ಮಲಗಿದ್ದಾಗ….ಬಿಲೇಡಲ್ಲಿ ಅವಳ ಕೂದ್ಲ ಕತ್ತರ್ಸ್ಕಂದು ತಂದ. ಸ್ನೇಹಿತರ ಎದುರು ನಾಗಿನ ನಾನು ಇಟ್ಕಂಡಿದಿನಿ ಅನ್ನದ ಸಾಬೀತು ಮಾಡೆಬುಟ್ಟ. ನಾಗೀಗೆ

“ಇದ್ಯಾಕಡ್ಗೀ ಕೂದ್ಲು ಏನಾತೆ” ಅಂತವ ಊರೋರು ಯಾರಾರೂ ಕೇಳುದ್ರು ಅಂದ್ರೆ,
“ಎಣ್ಣೆ ಘ್ಹಮನಕ್ಕೆ ಇಲಿ ಬಂದು ಕುರುಕ್ಬುಡ್ತು” ಅಂತ ಹೇಳಿ ಸೆರಗ ತಲೆ ಮೇಲೆ ಹಾಕ್ಕಳಳು.

ಇದ ಕೇಳಿ ಪೋಲಿ ಹುಡ್ಲೆಲ್ಲ ಬೊಬ್ಬೆ ಹಾಕ್ಕೊಂಡು, ಊರತುಂಬ ಈ ಮಾತ ಹೇಳ್ಕಂಡು ಬಿದ್ದೂ ಬಿದ್ದೂ… ನಗಾಡವು. ಇದು ಸಣ್ಣಮ್ಮಿ ಕಿವಿಗೂ ತಲುಪಿ ಬಾಣತಿ ಅಳ್ಬಾರ್ದು! ಅಂದ್ರೂವೆ, ಅಳ್ತಾ ನವೆಯಾಕೆ ಹತ್ಲಿದ್ಲು. ಒಂದು ತಿಳುದ್ರೆ ಇನ್ನೊಂದು ಅರಿದ ಈ ಸಣ್ಣ ಹುಡ್ಗಿ ಕಣ್ಣಿರಾಕುದ್ರೆ, ದೊಡ್ಡ ಸಿಟ್ಟಿಗೆ ಮೂಗ ಕುಯ್ಕಂದು ಈಗ ತಲೆ ಬಗ್ಗುಸ್ಕಂಡು ಕೂರನು. ಕುಳ್ಳೀರ

“ಏನ್ ಊರ ಮುಂದ್ಲ ಬೀಜದ ಹೋರಿ ಇವ್ನು, ಇರೋದು ಮೂರು ಗೇಣುದ್ದ ” ಅಂತ ಮನೆ ವಳ್ಗೆ ಬಂದು ಕೂಗಾಡ್ದ. ಅವನ ಹೆಂಡ್ತಿ”ಹೆಣ್ಣು ಕೊಟ್ಯೋ… ಕಣ್ ಕೊಟ್ಯೋ…ಅಂತಾರೆ. ನೀನು ಬಾಯ್ಮುಚ್ಕಂದು ಸುಮ್ನಿದ್ಬುಡು ಮತ್ತೆ. ಬಾಲೆ ಕಿವಿಗೆ ಬಿದ್ರೆ ಆ ಜೀವ ನೊಯ್ಯಕುಲ್ವಾ?” ಅಂತ ಕುಳ್ಳೀರನ ಉಸ್ರ, ಅಲ್ಲೇ ಅದುಮುದ್ಲು.

ಬಾಯ ಅದುಮ್ಕಂಡು ಅವನು ಸುಮ್ಮಗಾದ. ಅವಳು ಅಳ್ತಾ ಕೂತ್ಕಂಡ್ಲು. ದೊಡ್ಡನ ಒಂದು ಅಧ್ಯಾಯ ಇಲ್ಲಿಗೆ ಮುಗೀತು. ನಾಳೆ ಅನ್ನೋದು ತಲೆ ಮೇಲೆ ಮಾನಮರ್ವಾದೆ ಅನ್ನೋ ಕೈ ಹೊತ್ಕಂಡು ಕುಂತಿತ್ತು.

 

One Response

  1. Anonymous
    June 15, 2017

Add Comment

Leave a Reply