Quantcast

ಭಕ್ತರು v/s ವಿಭಕ್ತರು

ಪಾಪ್ಯುಲಿಸ್ಟ್ ಮತ್ತು ಸೂಡೊ (Pseudo) ಪಾಪ್ಯುಲಿಸ್ಟ್ ರಾಜಕಾರಣ ಎಂಬ ಬಂದಳಿಕೆಗಳು ಭಾರತದ ಡೆಮಾಕ್ರಾಟಿಕ್ ವ್ಯವಸ್ಥೆಯನ್ನು ಯಾವ ಪರಿ ಆವರಿಸಲಾರಂಭಿಸಿವೆ ಎಂಬುದನ್ನು ಪಂಚರಾಜ್ಯಗಳ ಚುನಾವಣೆ ಮತ್ತದು ಅಂತಿಮವಾಗಿ ಕೊಟ್ಟಿರುವ ಫಲಿತಾಂಶಗಳು ತೋರಿಸಿಕೊಟ್ಟಿವೆ.

ಪಾಪ್ಯುಲಿಸ್ಟ್ ರಾಜಕಾರಣ ಎಂಬುದು ಈವತ್ತಿಗೆ ಸ್ವಲ್ಪ ಲಿಬರಲ್ ಆದ, ಯೋಜನಾಬದ್ಧವಲ್ಲದ, ತಯಾರಿ ರಹಿತ, ಶ್ರಮ ಬೇಕಿಲ್ಲದ ಟಿಪಿಕಲ್ (ಇನ್ನೂ ಪರಿಣಾಮಕಾರಿಯಾಗಿ ತುಳುವಿನಲ್ಲಿ ಹೇಳಬೇಕೆಂದರೆ ‘ಪೀ ಬನ್ನಗ ಪಿತ್ತೆಲ್ ನಾಡುನ’ ಅರ್ಥಾತ್, ಹೇಲು ಬಂದ ಮೇಲೆ ಎಲ್ಲಿ ವಿಸರ್ಜಿಸಲೆಂದು ಹುಡುಕಾಟ ಆರಂಭಿಸುವ) ರಾಜಕಾರಣ ಆಗಿಬಿಟ್ಟಿದೆ.

ಅದೇ ವೇಳೆಗೆ, ಸೂಡೊ ಪಾಪ್ಯುಲಿಸ್ಟ್ ರಾಜಕಾರಣ ಎಂಬುದನ್ನು ವೈದ್ಯಕೀಯ ಭಾಷೆಯಲ್ಲಿ ನಿಖರವಾಗಿ ವಿವರಿಸಬೇಕಾದರೆ “ಕೌಂಟರ್ ಇರಿಟಂಟ್ ಅನಾಲ್ಜಿಸಿಯಾ” ಎಂದು ಕರೆಯಬಹುದು. ಅಂದರೆ, ನೋವು ಇರುವಾಗ, ಆ ನೋವಿಗೆ ಪ್ರತಿಯಾಗಿ ಇನ್ನೊಂದು  ಉರಿಯನ್ನು ಹುಟ್ಟಿಸಿಹಾಕುವ ಮೂಲಕ ನರಮಂಡಲಕ್ಕೆ ಗೊಂದಲ ಹುಟ್ಟಿಸಿ, ಮೂಲ ನೋವಿನ ತೀವ್ರತೆಯನ್ನು ಕಡಿಮೆ ಮಾಡುವುದು. ಇಲ್ಲಿ ಮೂಲ ನೋವು ಈ ಮದ್ದಿನಿಂದ ವಾಸಿ ಆಗಿರುವುದಿಲ್ಲ; ಆದರೆ ತಾತ್ಕಾಲಿಕವಾಗಿ ನೋವು ಕಡಿಮೆ ಆದಂತೆ ಅನ್ನಿಸುತ್ತದೆ.

ಸೂಡೊ ಪಾಪ್ಯುಲಿಸ್ಟ್ ರಾಜಕಾರಣದಲ್ಲಿ ಮೇಲುಪದರದ ಜನಪ್ರಿಯ, ಅವಕಾಶವಾದಿ ರಾಜಕಾರಣದ ಜೊತೆಜೊತೆಗೇ ಆಳದಲ್ಲಿ ತನ್ನ ಸಿದ್ಧಾಂತಗಳಿಗನುಗುಣವಾದ ನಿರ್ದಿಷ್ಟ ಕಾರ್ಯತಂತ್ರ, ನಿಖರ ತಯಾರಿ,  ಮತ್ತು ಸಮಯಬದ್ಧ ಯೋಜನೆಗಳಿರುತ್ತವೆ.

ಉತ್ತರಪ್ರದೇಶದ ಚುನಾವಣಾ ತಯಾರಿ, ಆ ಬಳಿಕ ಶನಿವಾರದ ಫಲಿತಾಂಶವನ್ನು ಈ ನೆಲೆಯಲ್ಲಿ ನೋಡಿದರೆ ನಾನು ಹೇಳುತ್ತಿರುವುದು ಸ್ಪಷ್ಟವಾಗುತ್ತದೆ.

ಪಾಪ್ಯುಲಿಸ್ಟ್ ರಾಜಕಾರಣವನ್ನು ಅವಲಂಬಿಸಿರುವ ಆಡಳಿತಾರೂಢ ಸಮಾಜವಾದಿ ಪಕ್ಷ (ಸಪ), ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷ (ಬಸಪ) ಗಳಲ್ಲಿ ಚುನಾವಣಾ ತಯಾರಿ ಹೇಗಿತ್ತು ಎಂದು ಗಮನಿಸಿದರೆ ಕಾಣಸಿಗುವುದು ಸಪದ ಪಾರಿವಾರಿಕ ಕಚ್ಚಾಟ, ಕಾಂಗ್ರೆಸ್ಸಿನ ಪ್ರಶಾಂತ್ ಕಿಶೋರ್ ಮತ್ತು ಬಸಪದ ಓಬೀರಾಯನ ಕಾಲದ ಸೋಷಿಯಲ್ ಇಂಜಿನಿಯರಿಂಗ್ ಪ್ಲಾನು!

ಸೂಡೊ ಪಾಪ್ಯುಲಿಸ್ಟ್ ರಾಜಕಾರಣವನ್ನು ಅವಲಂಬಿಸಿರುವ ಬಿಜೆಪಿಯ ಚುನಾವಣಾ ರನ್ನಪ್ಪನ್ನು ಗಮನಿಸಿ.

1. 2014ರಲ್ಲಿ ನರೇಂದ್ರ ಮೋದಿಯವರು ತನ್ನ ತಾಯ್ನೆಲ ಗುಜರಾತಿನ ಬರೋಡಾ ಮತ್ತು ಉತ್ತರಪ್ರದೇಶದ ವಾರಣಾಸಿಯನ್ನು ತನ್ನ ಚುನಾವಣಾ ಕ್ಷೇತ್ರವನ್ನಾಗಿ ಆರಿಸಿಕೊಂಡು,  ಅವೆರಡರಲ್ಲೂ ಗೆದ್ದುಬರುತ್ತಾರೆ. ಆದರೆ ಬರೋಡಾವನ್ನು ಕೈಬಿಟ್ಟು, ವಾರಣಾಸಿಯ ಸಂಸದರಾಗಿ ಉಳಿದುಕೊಳ್ಳುತ್ತಾರೆ.

2. 80ರ ದಶಕದಲ್ಲಿ ರಾಜೀವ್ ಗಾಂಧಿ ಅವರನ್ನು ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ವೀಕಾರಾರ್ಹಗೊಳಿಸಿದ ‘ಗಂಗಾ ಶುದ್ಧೀಕರಣ’ ಯೋಜನೆ ಮೋದಿಯವರು ಪಟ್ಟಾಭಿಷಿಕ್ತರಾದ ಬೆನ್ನಿಗೇ ಪುನರಾರಂಭಗೊಳ್ಳುತ್ತದೆ.

3.  ಕೇಂದ್ರ ಸರಕಾರದಿಂದ ಮಹಿಳೆಯರಿಗೆ LPG ಸೌಲಭ್ಯ ಒದಗಿಸುವ ಉಜ್ವಲಾ ಯೋಜನೆ, ಗ್ರಾಮೀಣ ಬಡವರಿಗೆ ವಸತಿ ಒದಗಿಸುವ ಪ್ರಧಾನಮಂತ್ರಿ ಗ್ರಾಮೀಣ ಆವಾಸ ಯೋಜನೆಗಳು ಸ್ಟ್ರಾಟಜಿಕ್ ಆಗಿ ಉತ್ತರಪ್ರದೇಶದಲ್ಲೇ ದೇಶಾರ್ಪಣೆಗೊಳ್ಳುತ್ತವೆ, ಜನಧನ ಯೋಜನೆ, ಗ್ರಾಮಜ್ಯೋತಿ ಯೋಜನೆಗಳು ಮತ್ತಿತರ ಕೇಂದ್ರ ಸರಕಾರದ ಯೋಜನೆಗಳು ಉತ್ತರಪ್ರದೇಶದಲ್ಲಿ ತಳಮಟ್ಟದ ತನಕ ತಲುಪಲು ವ್ಯವಸ್ಥೆಯಾಗುತ್ತದೆ.

4. 14ರ ಲೋಕಸಭಾ ಚುನಾವಣೆಯ ವೇಳೆಗೆ ಸಿದ್ಧಗೊಂಡಿದ್ದ “ಸ್ಟ್ರಾಟಜಿ ತಂಡ” ದ ಸುನಿಲ್ ಬನ್ಸಲ್, ಆರೆಸ್ಸೆಸ್ಸಿನ ಡಾ| ಕ್ರಷ್ಣ ಗೋಪಾಲ್, ಓಂ ಮಾಥುರ್, ಭುಪೇಂದ್ರ ಯಾದವ್ ಅವರು ಅಲ್ಲಿಂದಲೇ 2017ಕ್ಕೂ ತಯಾರಿ ಆರಂಭಿಸಿದ್ದರು. ಪ್ರತಿಪಕ್ಷಗಳ ಮುಸ್ಲಿಂ – ದಲಿತ ಮತಗಳನ್ನಾಧರಿಸಿದ ಸೋಷಿಯಲ್ ಇಂಜಿನಿಯರಿಂಗ್ ಗೆ ಪ್ರತಿಯಾಗಿ ಉಳಿದ ಕೆಳಜಾತಿಗಳ ಮತ್ತು ಮೇಲುಜಾತಿಗಳ ಹಿಂದೂ ಮತಬ್ಯಾಂಕ್ ರೂಪಿಸುವ ತಂತ್ರಗಾರಿಕೆ ನಡೆಯುತ್ತದೆ.  ಒಂದೆಡೆ ಮುಸ್ಲಿಂ-ದಲಿತ ಮತಗಳು ಸಪ, ಬಸಪ ನಡುವೆ ಹರಿದು ಹಂಚಿ ಹೋದರೆ, ಇನ್ನೊಂದೆಡೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಕೊನೆಕ್ಷಣದ ಪ್ರಯತ್ನಗಳ ಫಲವಾಗಿ ಜಾಟ ಸಮುದಾಯದವರನ್ನು ಪುನಃ ವಿಶ್ವಾಸಕ್ಕೆ ತೆಗೆದುಕೊಂಡ ಬಿಜೆಪಿಯ ಹಿಂದೂ ಮತ ಬ್ಯಾಂಕು ಸ್ವಂತ ಬಲದ ಮೇಲೆ ಗೆಲ್ಲಬಲ್ಲ ಗಾತ್ರವನ್ನು ಗಳಿಸಿಕೊಳ್ಳುತ್ತದೆ.

Satish Acharya

Satish Acharya

5. ಚುನಾವಣೆ ತೀರಾ ಹತ್ತಿರ ಇರುವಾಗಲೇ 8/11 ಸಂಭವಿಸುತ್ತದೆ (ನೋಟು ರದ್ಧತಿಯಿಂದ ಕಾಸು ಹಂಚಿ ಗೆಲ್ಲುವ ಸಾಂಪ್ರದಾಯಿಕ ಚುನಾವಣಾ ತಂತ್ರಕ್ಕೆ ಮಾರಕ ಏಟು ಬೀಳುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ನೋಟು ರದ್ಧತಿಯ ಬಳಿಕವೂ ಉತ್ತರಪ್ರದೇಶದಲ್ಲಿ ಕಾಸು ಹಂಚಿದ ಸುದ್ದಿಗಳು ಬಂದಿವೆ!)

6. ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಯಾರು ಮುಖ್ಯಮಂತ್ರಿಗಳಾಗುತ್ತಾರೆಂಬುದನ್ನು ಬಹಿರಂಗಪಡಿಸುವುದಿಲ್ಲ.

7. ಸ್ವತಃ ಪ್ರಧಾನಿ ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿ ನಿಂತು,ರಾಜ್ಯದ ಎಲ್ಲೆಡೆ ರಾಲಿಗಳನ್ನು ಉದ್ದೇಶಿಸಿ ಮಾತನಾಡಿ, ಚುನಾವಣೆಗೆ ಚರ್ಚಿಸಬೇಕಾದ ಸಂಗತಿಗಳನ್ನು ತಾವೇ ನಿರ್ಧರಿಸುತ್ತಾರೆ. ಆರಂಭದಲ್ಲಿ ಅಭಿವ್ರದ್ಧಿಯ ಬಗ್ಗೆ ನಡೆದ ಚರ್ಚೆ, ಎರಡು ಹಂತದ ಚುನಾವಣೆಗಳು ಮುಗಿದ ಬಳಿಕ (ಆ ಎರಡು ಹಂತಗಳು ಅಲ್ಪಸಂಖ್ಯಾತರ ಬಾಹುಳ್ಯದ ಕ್ಷೇತ್ರಗಳು ಎನ್ನಲಾಗುತ್ತಿದೆ) ಹಠಾತ್ತಾಗಿ “ ಖಬ್ರಸ್ಥಾನ್” ಕಡೆಗೆ ತಿರುಗುತ್ತದೆ; ಪರಸ್ಪರ ತೀವ್ರ ಕೆಸರೆರಚಾಟಗಳೂ ನಡೆಯುತ್ತವೆ.

ಕಲಿಯಬೇಕಾಗಿರುವ ಪಾಠ

ಉತ್ತರಪ್ರದೇಶ ಚುನಾವಣೆ ಅಂತಿಮವಾಗಿ ಬಿಜೆಪಿ ಸರಕಾರಕ್ಕೆ ಅಗತ್ಯವಿದ್ದ ಶಾಸನಾತ್ಮಕ ಬಲವನ್ನು ತಂದುಕೊಟ್ಟಿದೆ. ಅಂದರೆ ಇನ್ನು ಒಂದು ವರ್ಷದೊಳಗೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸ್ಪೀಕರ್, ಪ್ರಧಾನಿ, ಲೋಕಸಭೆ, ರಾಜ್ಯಸಭೆ ಎಲ್ಲವೂ ಬಿಜೆಪಿ ಕೈನಿಲುಕಿಗೆ ಬರಲಿವೆ. ಸ್ವತಃ ಮೋದಿಯವರು ಈಗ ಗಳಿಸಿಕೊಂಡಿರುವ ಬಲವನ್ನು ಮಾಧ್ಯಮಗಳು ನೆಹರೂ, ಇಂದಿರಾ ಜೊತೆ ಹೋಲಿಸಿ ನೋಡಿ, ಅದಕ್ಕಿಂತ ಮೀರಿದ್ದು ಎನ್ನಲಾರಂಭಿಸಿವೆ.

ಪ್ರಬಲ ಪ್ರತಿಪಕ್ಷವೊಂದು ಇಲ್ಲದ ಪ್ರಜಾತಂತ್ರ ಆರೋಗ್ಯಕರ ಅಲ್ಲವೇ ಅಲ್ಲ. ಆದರೆ, ಈವತ್ತು ಇರುವಂತಹ ಗುರಿ ಇಲ್ಲದ, ಒಗ್ಗಟ್ಟು ಇಲ್ಲದ, ಶ್ರಮ ಬಯಸದ, ತಳ ತಲುಪದ ಸಾಂಪ್ರದಾಯಿಕ ರಾಜಕಾರಣವನ್ನು ನೆಚ್ಚಿರುವ ಪ್ರತಿಪಕ್ಷಗಳು ಹಾಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಸಾಟಿ ಅಲ್ಲ.

ಲಿಬರಲ್ ರಾಜಕಾರಣವು ತನ್ನ ಪಾಪ್ಯುಲಿಸ್ಟ್ ನಿಲುವುಗಳನ್ನು ತೊರೆದು, ಶ್ರಮ ಸಹಿತವಾದ, ಜನರ ಜೊತೆ ಬೆರೆಯಬಲ್ಲ, ಪ್ರಜಾತಂತ್ರದ-ಸಂವಿಧಾನದ ಮೂಲ ಆಶಯಗಳನ್ನು ಬಲಪಡಿಸಬಲ್ಲ ಹೊಸ ಹಾದಿಯೊಂದನ್ನು ಹುಡುಕಿಕೊಳ್ಳುವುದು ಈಗ ಅನಿವಾರ್ಯ. ಇದು ಅವರಿಗೆ ಮಾಡು ಇಲ್ಲವೇ ಮಡಿ ಸ್ಥಿತಿ.

2 Comments

  1. Avinash
    March 15, 2017
    • Anonymous
      March 15, 2017

Add Comment

Leave a Reply